ವಿದೇಶಿ ಬಂಡವಾಳದಲ್ಲಿ ಏರುಗತಿ, ಭಾರತ ಕಾಣಲಿದೆಯೇ ಪ್ರಗತಿ? 

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 09th January 2020 01:19 AM  |   Last Updated: 09th January 2020 01:19 AM   |  A+A-


Hanaclasu: Does Foreign Investment Help India To Progress; Here is all you need to know

ವಿದೇಶಿ ಬಂಡವಾಳದಲ್ಲಿ ಏರುಗತಿ, ಭಾರತ ಕಾಣಲಿದೆಯೇ ಪ್ರಗತಿ?

Posted By : Srinivas Rao BV
Source : Online Desk

ಭಾರತ ಜಗತ್ತಿನ ಅತ್ಯಂತ ಹೆಚ್ಚು ಆಕರ್ಷಕ ಹೂಡಿಕೆಯ ಸ್ಥಳವಾಗಿದೆ ಎನ್ನುತ್ತವೆ ಅಂಕಿ-ಅಂಶಗಳು. ವಿದೇಶಿ ನೇರ ಬಂಡವಾಳವನ್ನ ಮೇಕ್ ಇನ್ ಇಂಡಿಯಾ ಜೊತೆ ಮಾಡಿದ ದಿನದಿಂದ ಹೂಡಿಕೆ ಎಣಿಕೆಗೆ ಮೀರಿ ಹರಿದು ಬರುತ್ತಿದೆ. 

2013/14ರಲ್ಲಿ 36 ಬಿಲಿಯನ್ ಡಾಲರ್ ಇದ್ದ ವಿದೇಶಿ ನೇರ ಬಂಡವಾಳ, ಮೋದಿ ಕೇಂದ್ರ ಸರಕಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಗಣನೀಯವಾಗಿ ಏರಿಕೆ ಕಾಣುತ್ತ ಬಂದಿದೆ. 2014/15ರಲ್ಲಿ 45 ಬಿಲಿಯನ್, 2015/16 ರಲ್ಲಿ 56ಬಿಲಿಯನ್ ಮತ್ತು 2016/2017ರಲ್ಲಿ 60 ಬಿಲಿಯನ್ ಡಾಲರ್ ನೇರ ವಿದೇಶಿ ಬಂಡವಾಳದ ಮೂಲಕ ಭಾರತಕ್ಕೆ ಬಂದಿದೆ.  ಅಮೇರಿಕಾದ  ಭಾರತದಲ್ಲಿನ ಹೂಡಿಕೆಯಲ್ಲಿ 5೦೦ ಪ್ರತಿಶತ ಏರಿಕೆ ಕಂಡಿದೆ. ನೇರ ಬಂಡವಾಳ ಭಾರತದ ಅರ್ಥವ್ಯವಸ್ಥೆಗೆ ಬಹಳಷ್ಟು ಚೇತರಿಕೆ ನೀಡಿದೆ, ನೀಡುತ್ತಿದೆ. ಭಾರತಕ್ಕೆ ತನ್ನ ಅಭಿವೃದ್ಧಿಯ ಸಂಖ್ಯೆಯನ್ನು ಉಳಿಸಿಕೊಳ್ಳಲು ಇದು ಅವಶ್ಯಕವಾಗಿದೆ. ಭಾರತದಲ್ಲಿನ ಯುವ ಜನತೆಗೆ ಕೆಲಸ ಸೃಷ್ಟಿಸುವುದು ಸರಕಾರದ ಮುಂದಿರುವ ಬಹುದೊಡ್ಡ ಸವಾಲು. ಹೀಗೆ ಹೊಸ ಕೆಲಸ ಸೃಷ್ಟಿಗೆ, ಭಾರತದ ಎಲ್ಲಾ ರೀತಿಯ ಬೆಳವಣಿಗೆಗೆ ಅನುಕೂಲವಾಗಲಿ ಎಂದು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ಇದರಿಂದ ಭಾರತ ಹೂಡಿಕೆದಾರರ ಸ್ವರ್ಗವಾಗಿದೆ. 

ಭಾರತವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯುವ ಭರದಲ್ಲಿ ನಮ್ಮ ದೇಶದ ವಿತ್ತವ್ಯವಸ್ಥೆಯ ಮೇಲೆ ಹಿಡಿತ ಕಳೆದುಕೊಂಡರೆ ಹೇಗೆ? ಇಂದು ವ್ಯಾಪಾರಕ್ಕೆ ಬಂದವರು ನಾಳೆ ನಮ್ಮ ಕಾಯ್ದೆ, ಕಾನೂನಿನ ಮೇಲೆ ಸವಾರಿ ಮಾಡುವುದಿಲ್ಲ ಎನ್ನುವ ನಂಬಿಕೆ ಏನು? ಒಂದು ಮಟ್ಟದ ಜೀವನ ಶೈಲಿಗೆ ಒಗ್ಗಿಕೊಂಡ ಮೇಲೆ ನಾವು ಅವರು ಹೇಳಿದ ಹಾಗೆ ಕೇಳದೆ ಬೇರೆ ದಾರಿ ಯಾವುದಿದೆ? ಹೀಗೆ ಹಲವು ಸಂಶಯಗಳು ಜನಸಾಮಾನ್ಯರಲ್ಲಿ ಮಾತ್ರವಲ್ಲ, ಹಲವು ಆರ್ಥಿಕ ತಜ್ಞರಲ್ಲೂ ಇದೆ. ಈ ವಿಷಯದಲ್ಲಿ ಆರ್ಥಿಕ ತಜ್ಞರ ನಡುವೆಯೇ ಒಮ್ಮತವಿಲ್ಲ. 

ಇದೆಲ್ಲಾ ಪಕ್ಕಕ್ಕೆ ಇರಲಿ, ಇಂದು ದೇಶಕ್ಕೆ ಬಂಡವಾಳ ಬೇಕು ಹಾಗೆಯೇ ನಮ್ಮ ಅಖಂಡತೆ, ಭದ್ರತೆಗೆ ಅದು ಅಡ್ಡಿ ಉಂಟುಮಾಡಬಾರದು, ಹಾಗಾಗಿ ಇದೊಂದು ಸೂಕ್ಷ್ಮ ವಿಷಯ.  

ಏನಿದು ಎಫ್.ಡಿ.ಐ? 

ಸ್ಥೂಲವಾಗಿ ಹೇಳುವುದಾದರೆ ಒಂದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಸಂಸ್ಥೆ, ಇನ್ನೊಂದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದು. ಹೂಡಿಕೆ, ಇನ್ವೆಸ್ಟ್ಮೆಂಟ್ ರೂಪದಲ್ಲಿ ಮಾತ್ರ ಅಲ್ಲದೆ ಬಂಡವಾಳ ಹೂಡಿಕೆ ಆಗಿರುತ್ತದೆ. ಅಂದರೆ ಒಂದು ಸಂಸ್ಥೆಯಲ್ಲಿನ 1೦ ಪರ್ಸೆಂಟ್ ಗೂ ಮೀರಿದ ವೋಟಿಂಗ್ ಶಕ್ತಿ ಹೂಡಿಕೆದಾರ ಸಂಸ್ಥೆಯ ಪಾಲಾಗುತ್ತದೆ. 

ಕೇವಲ ಹಣ ಹೂಡಿಕೆ ಒಂದೇ ಇಲ್ಲಿನ ಮೂಲ ಉದ್ದೇಶವಲ್ಲ, ದಿನ ನಿತ್ಯದ ಸಂಸ್ಥೆಯ ಆಗು-ಹೋಗುಗಳಲ್ಲಿ ಭಾಗವಹಿಸುವುದು, ಉದ್ದಿಮೆಯ ಸಹಭಾಗಿತ್ವ, ತಾಂತ್ರಿಕ ಪರಿಣತಿಯ ವಿನಿಮಯ ಅಷ್ಟೆ ಅಲ್ಲದೆ ನಿಖರ ವಿಷಯಗಳ ನಿಪುಣತೆ ಹಂಚಿಕೆ ಕೂಡ ಇಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ ಎಲ್ಲಾ ವಿಷಯಗಳಿಂದ ಇದು ಕೇವಲ ಹಣ ಹೂಡಿಕೆಗಿಂತ ವಿಭಿನ್ನ ಮತ್ತು ಹೆಚ್ಚು ಫಲದಾಯಕ. 

ಈ ಎಫ್.ಡಿಐ ನಲ್ಲಿ ಎರಡು ವಿಧಗಳಿವೆ, ಒಂದು ಹಣದ ಒಳಬರುವಿಕೆ, ಇದನ್ನ ಇನ್ವರ್ಡ್ ಇನ್ವೆಸ್ಟ್ಮೆಂಟ್ ಎಂದು ವ್ಯಾಖ್ಯಾನಿಸುತ್ತಾರೆ. ಮತ್ತೊಂದು ಹಣದ ಹೊರಹೋಗುವಿಕೆ ಇದನ್ನ ಔಟ್ವರ್ಡ್ ಇನ್ವೆಟ್ಮೆಂಟ್ ಎನ್ನಲಾಗುತ್ತದೆ. ಇವೆರಡರ ನಡುವಿನ ಹಣವನ್ನು ನೆಟ್ ಎಫ್.ಡಿ.ಐ ಎಂದು ಗುರುತಿಸಲಾಗುತ್ತದೆ.ಇದನ್ನ ಅರ್ಥಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ. 

ಭಾರತಕ್ಕೆ ವಿದೇಶದಿಂದ ಬಂದ ಹೂಡಿಕೆ 1,000 ರೂಪಾಯಿ ಎಂದುಕೊಳ್ಳಿ, ಇದನ್ನ ಇನ್ವರ್ಡ್ ಇನ್ವೆಸ್ಟ್ಮೆಂಟ್ ಎನ್ನಬಹುದು. ಭಾರತ ಬೇರೆ ದೇಶದಲ್ಲಿ ಮಾಡಿದ ಹೂಡಿಕೆ 2೦೦ ರೂಪಾಯಿ ಎಂದರೆ ಅದು ಔಟ್ವರ್ಡ್ ಇನ್ವೆಟ್ಮೆಂಟ್. ಇವುಗಳ ಅಂತರ 8೦೦ ರೂಪಾಯಿಯನ್ನು ನೆಟ್ ಎಫ್.ಡಿ.ಐ ಅಥವಾ ನಿವ್ವಳ ವಿದೇಶಿ ಹೂಡಿಕೆ ಎನ್ನಬಹುದು. ಭಾರತದಲ್ಲಿ ಬದಲಾದ ಬಂಡವಾಳ ನೀತಿ ಮತ್ತು ಮುಕ್ತ ಮಾರುಕಟ್ಟೆ ನೀತಿಯಿಂದ ನೇರ ವಿದೇಶಿ ಬಂಡವಾಳ ಐದು ಮಾರ್ಗದಲ್ಲಿ ಹರಿದು ಬರಬಹುದು, ಅವೆಂದರೆ... 

 1. ಸರಕಾರದ ಮೂಲಕ, Government (SIA/FIPB): ಸರಕಾರ ಸೆಕ್ರೆಟೆರಿಯೇಟ್ ಆಫ್ ಇಂಡಸ್ಟ್ರಿಯಲ್ ಅಸಿಸ್ಟೆನ್ಸ್ (SIA) ಮತ್ತು ಫಾರಿನ್ ಇನ್ವೆಸ್ಟ್ಮೆಂಟ್ ಪ್ರೊಮೋಷನ್ ಬೋರ್ಡ್ ಎನ್ನುವ ಸಂಸ್ಥೆಗಳನ್ನು ಸ್ಥಾಪಿಸಿದೆ, ಹೂಡಿಕೆ ಮಾಡಲು ಇಚ್ಛಿಸುವ ವಿದೇಶಿ ಸಂಸ್ಥೆಗಳು ಈ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಬಹುದು. ಇಲ್ಲಿ ಯಾವ ಉದ್ದಿಮೆಯಲ್ಲಿ ಎಷ್ಟು ಹೂಡಿಕೆ ಮಾಡಬಹುದು ಎನ್ನುವ ಒಂದು ಚಾರ್ಟ್ ಇದೆ ಅದರ ಅನುಸಾರ ಹೂಡಿಕೆಗೆ ಅವಕಾಶವಿದೆ. 
 2. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ನೇರ ಹೂಡಿಕೆ ಮಾಡಬಹುದು. 
 3. ಅನಿವಾಸಿ ಭಾರತೀಯರ ಹೂಡಿಕೆಯನ್ನು ಕೂಡ ವಿದೇಶಿ ಹೂಡಿಕೆ ಎಂದು ಪರಿಗಣಿಸಲಾಗುವುದು. 
 4. ವಿದೇಶಿ ಸಂಸ್ಥೆಗಳು ಇಲ್ಲಿನ ಸಂಸ್ಥೆಯ ಷೇರು ಕೊಳ್ಳುವ ಮೂಲಕ ಹೂಡಿಕೆ ಮಾಡಬಹುದು. 
 5. ನೊಂದಾಯಿತವಲ್ಲದ ಸಂಸ್ಥೆಗಳ ಈಕ್ವಿಟಿ ಷೇರು ಕೊಳ್ಳುವುದರ ಮೂಲಕ ಕೂಡ ವಿದೇಶಿ ಬಂಡವಾಳ ಹೂಡಿಕೆ ಮಾಡಬಹುದು. 

ಈ ರೀತಿಯ ಹೂಡಿಕೆಯಿಂದ ಬಹಳ ಉಪಯೋಗವಿದೆ, ಹೂಡಿಕೆದಾರ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಎರಡೂ ಸಂಸ್ಥೆಗಳಿಗೂ ಇದರಿಂದ ಲಾಭವೇ... ಹೇಗೆ ಎನ್ನುವುದನ್ನು ನೋಡೋಣ..., 

ಹೂಡಿಕೆದಾರ ಸಂಸ್ಥೆ ಅಥವಾ ವಿದೇಶಿ ಸಂಸ್ಥೆಗೆ ಇದರಿಂದ:-

 1. ಒಂದು ಹೊಸ ಮಾರುಕಟ್ಟೆ ಸಿಕ್ಕ ಹಾಗೆ ಆಯಿತು. ಅಂದರೆ ಗಮನಿಸಿ, ಮೂಲ ಯಾವ ದೇಶದಿಂದ ಈ ಹೂಡಿಕೆದಾರ ಸಂಸ್ಥೆ ಬಂದಿದೆ ಅಲ್ಲಿನ ಮಾರುಕಟ್ಟೆಯ ಕನಿಷ್ಠ ಹತ್ತು ಪಟ್ಟು ದೊಡ್ಡ ಮಾರುಕಟ್ಟೆ ಭಾರತದ್ದು. ಕೆಲವೊಮ್ಮೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲೂಬಹುದು. 
 2. ನಿಪುಣ ತಂತ್ರಜ್ಞರು ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದಾರೆ. ಭಾರತ ಅತ್ಯಂತ ದೊಡ್ಡ ಮತ್ತು ಜನಭರಿತ ದೇಶ. ಇಲ್ಲಿ ವಿದ್ಯಾವಂತ ನಾಗರಿಕರ ಸಂಖ್ಯೆಯೂ ಬಹಳ ಹೆಚ್ಚು. ಹೀಗಾಗಿ ವಿದೇಶಿ ಸಂಸ್ಥೆಗಳಿಗೆ ಇದೊಂದು ಉತ್ತಮ ಅವಕಾಶವಾಗಿ ಕಾಣುತ್ತದೆ. 
 3. ವಸ್ತುಗಳ ತಯಾರಿಸುವಿಕೆಯಲ್ಲಿ ಖರ್ಚು ಕಡಿಮೆ. ಅಂದರೆ ಯಾವುದೇ ಪದಾರ್ಥ ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿಸಿದಾಗ ಅದರ ತಯಾರಿಕೆಯ ಬೆಲೆ ಸಾಕಷ್ಟು ಕಡಿಮೆಯಾಗುತ್ತದೆ. ಇದನ್ನ ಎಕಾನಮಿ ಆಫ್ ಲಾರ್ಜ್ ಸ್ಕೇಲ್ ಪ್ರೊಡಕ್ಷನ್ ಎನ್ನುತೇವೆ. 
 4. ವೇಗ, ನಿಖರತೆಯಲ್ಲಿ ವೃದ್ಧಿಯಾಗುತ್ತದೆ. ಕೆಲಸದ ಪುನರಾವರ್ತನೆ ಮತ್ತು ನಿಪುಣ ಕೆಲಸಗಾರರ ಲಭ್ಯತೆ, ವೇಗ ಮತ್ತು ನಿಖರತೆ ಗಳಿಸಲು ಸಹಾಯ ಮಾಡುತ್ತದೆ. 

ಹಾಗೆಯೇ ಸ್ಥಳೀಯ ಸಂಸ್ಥೆಗೆ, ಅಥವಾ ಭಾರತ ದೇಶಕ್ಕೆ ಇದರಿಂದ :- 

 1. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತವೆ. 
 2. ಹೊಸ ತಂತ್ರಜ್ಞಾನದ ಸೌಲಭ್ಯ ಕೂಡ ಸಿಗುತ್ತದೆ. ಅಂದರೆ ವಿದೇಶಿ ಸಂಸ್ಥೆ ತನ್ನೊಂದಿಗೆ ಹೊಸ ತಂತ್ರಜ್ಞಾನವನ್ನ ಹೊತ್ತು ತರುತ್ತದೆ. ಅದರ ಫಲವನ್ನ ನಾವು ಪಡೆಯಬಹುದು. 
 3. ವಿದೇಶಿ ಹೂಡಿಕೆಯಿಂದ ಮೀಸಲು ನಿಧಿ ಹೆಚ್ಚಾಗುತ್ತದೆ. ದೇಶದಲ್ಲಿ ಆಗುವ ಬದಲಾವಣೆಗಳಿಗೆ ಎಂದು ಒಂದಷ್ಟು ಹಣವನ್ನ ರಿಸರ್ವ್ ಫಂಡ್ ಎಂದು ವಿದೇಶಿ ಹಣದಲ್ಲಿ ತೆಗೆದಿರಿಸಲಾಗುತ್ತದೆ. ಇದು ಹೆಚ್ಚಿದಷ್ಟೂ ದೇಶಕ್ಕೆ ಒಳ್ಳೆಯದು. ಇದರಲ್ಲಿ ಕೂಡ ಹೆಚ್ಚಳವಾಗುತ್ತದೆ. 
 4. ಗ್ರಾಹಕರಿಗೆ ಕೂಡ ಹೊಸ ಉತ್ಪನ್ನಗಳ ಸಿಗುವಿಕೆ ಮಾತ್ರವಲ್ಲದೆ ಅದು ಉತ್ತಮ ಬೆಲೆಗೆ ಕೂಡ ಸಿಗುತ್ತದೆ. 

ಯಾವುದೋ ಒಂದು ದೇಶ ಇನ್ನೊಂದು ದೇಶದಲ್ಲಿ ತನ್ನ ಉತ್ಪನ್ನ ಉತ್ಪಾದಿಸಲು ಬೇಕಾಗುವ ಕಟ್ಟಡ ನಿರ್ಮಾಣ ಮಾಡುವ ವಿಷಯ ಕೇಳಿದ್ದೀರಾ? ಹೌದು ಇದು ಇಂದು ಸಾಧ್ಯವಾಗುತ್ತಿರುವುದು ವಿದೇಶಿ ನೇರ ಬಂಡವಾಳ ಎನ್ನುವ ಈ ಹೊಸ ಹೂಡಿಕೆಯ ಪರಿಕಲ್ಪನೆಯಿಂದ. ಅಮೇರಿಕಾದ ಯಾವುದೋ ಒಂದು ಕಂಪನಿ ಕರ್ನಾಟಕದ ಯಾವುದೋ ಒಂದು ಹಳ್ಳಿಯಲ್ಲೋ, ಮಹಾರಾಷ್ಟ್ರದ ಹೆಸರೇ ಕೇಳಿರದ ಹಳ್ಳಿಯಲ್ಲಿ ತನ್ನ ಘಟಕ ಸ್ಥಾಪಿಸಲು ನೆಲ ಖರೀದಿಸುತ್ತೆ, ಕಟ್ಟಡ ನಿರ್ಮಾಣ ಮಾಡುತ್ತೆ, ಇದು ಕೇವಲ ನೇರ ವಿದೇಶಿ ಬಂಡವಾಳದಿಂದ ಮಾತ್ರ ಸಾಧ್ಯ. 

ವಿದೇಶಿಯರು ಎರಡು ರೀತಿಯಲ್ಲಿ ಹೂಡಿಕೆ ಮಾಡಬಹುದು 1. ವಿದೇಶಿ ನೇರ ಬಂಡವಾಳ ಹೂಡಿಕೆ (FDI)   2. ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್. 

ವಿದೇಶಿಯರು ನಮ್ಮ ಬ್ಯಾಂಕ್ ನಲ್ಲಿ ಹಣ ಹೂಡುವುದು, ಷೇರು ಖರೀದಿ ಕೇವಲ ಹೂಡಿಕೆಗಾಗಿ ಇವೆಲ್ಲಾ ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್ ಎನಿಸಿಕೊಳ್ಳುತ್ತವೆ. ಇಲ್ಲಿ ಹೂಡಿಕೆ ಕೇವಲ ವ್ಯಾವಹಾರಿಕವಾಗಿರುತ್ತದೆ.   ನೇರ ವಿದೇಶಿ ಬಂಡವಾಳ ಹೂಡಿಕೆ ಹಣದ ಹೂಡಿಕೆಯೊಂದಿಗೆ ಈ ನೆಲದಲ್ಲಿ ಇರುವಿಕೆಯನ್ನ (ಫಿಸಿಕಲ್ ಪ್ರೆಸೆನ್ಸ್) ಕೂಡ ಬಯಸುತ್ತದೆ.  

ಕೊನೆ ಮಾತು: 2014 ರಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ವಿದೇಶಿ ನೇರ ಬಂಡವಾಳದ ಹೂಡಿಕೆ ಹತ್ತಿರ ಹತ್ತಿರ 4೦ ಪ್ರತಿಶತ ವೃದ್ಧಿ ಕಂಡಿದೆ. ಕೇವಲ ಹಣದ ಒಳಬರುವಿಕೆಯಿಂದಷ್ಟೇ ನಾವು ಖುಷಿ ಪಡುವ ಅಗತ್ಯವಿಲ್ಲ. ಇಲ್ಲಿ ಖುಷಿ ಪಡಲು ಇನ್ನೊಂದು ಬಹು ಮುಖ್ಯ ಕಾರಣವಿದೆ. ಅದು ನಂಬಿಕೆ. ಜಗತ್ತಿನ ಇತರ ದೇಶಗಳ ಕಣ್ಣಲ್ಲಿ ಭಾರತ ಇಂದು ಒಂದು ಸಶಕ್ತ  ರಾಜಕೀಯ ಸ್ಥಿರತೆಯುಳ್ಳ ದೇಶವಾಗಿದೆ. ನಂಬಿಕೆ ಗಳಿಸುವುದು ಕಷ್ಟ..., ಅದನ್ನ ಮಾಡಿಯಾಗಿದೆ ಹಣ ನಂಬಿಕೆಯ ನೆರಳಷ್ಟೇ . 2019 ಈ ದಿಸೆಯಲ್ಲಿ ಉತ್ತಮ ವರ್ಷವಾಗಿತ್ತು. 2020 ರಲ್ಲಿ ಕೂಡ ಭಾರತ ಆರೋಗ್ಯಕರ ದರವನ್ನ ಕಾಯ್ದುಕೊಳ್ಳಲಿದೆ.  


100%

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Stay up to date on all the latest ಅಂಕಣಗಳು news with The Kannadaprabha App. Download now
facebook twitter whatsapp