ಎ.ಐ ರಕ್ಕಸ ಕೋಡ್ ಗಳಿಗೆ ಬಲಿಯಾಗದಿರಲಿ ಮನುಕುಲ! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಎ.ಐ ರಕ್ಕಸ ಕೋಡ್ ಗಳಿಗೆ ಬಲಿಯಾಗದಿರಲಿ ಮನುಕುಲ!
ಎ.ಐ ರಕ್ಕಸ ಕೋಡ್ ಗಳಿಗೆ ಬಲಿಯಾಗದಿರಲಿ ಮನುಕುಲ!

ಮನುಷ್ಯನ ಉಗಮದ ದಿನದಿಂದ ಚಕ್ರದ ಅನ್ವೇಷಣೆ ಅಂದರೆ ಇನ್ವೆನ್ಷನ್ ಆಫ್ ವೀಲ್ಹ್ ತನಕ ಒಂದು ತೆರನಾಗಿತ್ತು. ವೀಲ್ಹ್ ಅಥವಾ ಚಕ್ರ ಕಂಡು ಹಿಡಿದ ನಂತರ ಜಗತ್ತು ಬದುಕುವ ರೀತಿಯೇ ಬದಲಾಗಿ ಹೋಯ್ತು. ಮನು ಕುಲದ ಮಹತ್ತರ ಅನ್ವೇಷಣೆಯಲ್ಲಿ ಚಕ್ರದ ಅನ್ವೇಷಣೆ, ಪರಿಕಲ್ಪನೆ ಅತ್ಯಂತ ಮಹತ್ವದ್ದು. ಅದಾದ ನಂತರ ಜಗತ್ತು ಬಹಳಷ್ಟು ತಿರುವು ಪಡೆದಿದೆ. ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್ ಅವುಗಳಲ್ಲಿ ಪ್ರಮುಖವಾದವು. ಇದೆಲ್ಲಾ ಇಂದಿಗೆ ಚರಿತ್ರೆ!

ಮುಂದೈದು ವರ್ಷದಲ್ಲಿ ಜಗತ್ತು ಮತ್ತೊಂದು ಮಗ್ಗಲು ಬದಲಾಯಿಸಲು ಆಗಲೇ ಸಿದ್ಧವಾಗುತ್ತಿದೆ. ಎ.ಐ ಅಥವಾ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಇಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ನುಗ್ಗುತ್ತಿದೆ. ಸಿಂಗಲ್ ಆಬ್ಜೆಕ್ಟಿವ್ ಪರ್ಫಾರ್ಮೆನ್ಸ್, ಮ್ಯಾಕ್ಸಿಮೈಸ್ ಕೊಡ್ಸ್ ಅನ್ನುವುದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಒಂದು ಭಾಗ. ಇದೊಂತರಹ ಡೇಂಜರಸ್, ಡೆಡ್ಲಿ ಎಲ್ಲಕ್ಕೂ ಮುಖ್ಯವಾಗಿ ಗ್ರೀಡಿ (ಆಸೆಬುರುಕ) ಕೋಡ್! ಉದಾಹರಣೆ ನೋಡಿ 'ಏನೇ ಆಗಲಿ ಐಡೆಂಟಿಫೈಡ್ ಕಾರ್ಯ ಸಾಧಿಸಲೇಬೇಕು' ಎನ್ನುವ ಕೋಡ್ ಬರೆದು ಅದರಿಂದ ರೋಬಾಟ್ ಸಿದ್ಧವಾಯಿತೆಂದರೆ ಸಾವಿರ ಜನರನ್ನ ಕೊಂದಾದರೂ ಸರಿಯೇ ಅದು ತನ್ನ ಕಾರ್ಯ ಸಾಧಿಸುತ್ತದೆ. ಭಯ ಬೇಡ..., ಅಂತಹ ರೋಬಾಟ್ ಅನ್ನು ತಯಾರು ಮಾಡುವುದಿಲ್ಲ. ಆದರೆ ಇಂತಹ ಕೋಡ್ ಗಳು ನಾವು ಬಳಸುವ ಹತ್ತಾರು ಆಪ್, ವೆಬ್ ಸೈಟ್ ಎಲ್ಲಾ ಕಡೆ ಹರಿಯ ಬಿಡುತ್ತಾರೆ. ಫಲಿತಾಂಶ ನಿಮಗೇನು ಬೇಕು ಎನ್ನುವುದು ನೀವು ಹೇಳದೆಯೇ ವೆಬ್ ಸೈಟ್ ಅಥವಾ ಆಪ್ ಮಾಲಿಕರಿಗೆ ತಿಳಿಯುತ್ತೆ. ನೀವು ಸಿಂಗಪೂರ್ ಗೆ ಟಿಕೆಟ್ ಹುಡುಕುತ್ತಾ ಇದ್ದರೆ ನಿಮ್ಮ ದಿನಾಂಕ ಎಲ್ಲಾ ಅವು ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ. ನೀವು ಏನೇ ಮಾಡಿ, ಫ್ಲೈಟ್ ಖಾಲಿ ಹೋದರೂ ಸರಿ ಅವು ನಿಮಗೆ ಕಡಿಮೆ ದರದಲ್ಲಿ ನಿಮಗೆ ಟಿಕೆಟ್ ಮಾರುವುದಿಲ್ಲ. ವೆಲ್ಕಮ್ ಟು ಸಿಂಗಲ್ ಅಬ್ಜೆಕ್ಟಿವ್ ಪೆರ್ಫಾರ್ಮನ್ಸ್ ಮ್ಯಾಕ್ಸಿಮೈಸ್ ಕೊಡ್ಸ್. ಇವೆಲ್ಲಾ ಹೇಗೆ ಎಂದರೆ ಏನಾದರೂ ಸರಿಯೇ ಈ ಕೋಡ್ ಗಳನ್ನ ಬಳಸುವವರಿಗೆ ಅತ್ಯಂತ ಹೆಚ್ಚು ಲಾಭ ತರಿಸುವುದಷ್ಟೇ ಇವುಗಳ ಮೂಲ ಉದ್ದೇಶ. ನಾನು ಬರೆದೆ ಎಂದು ನೀವು ನಂಬುವ ಅವಶ್ಯಕತೆ ಖಂಡಿತಾ ಇಲ್ಲ ನೀವೇ ಒಂದು ಸಣ್ಣ ಪ್ರಯೋಗ ಮಾಡಿ ನೋಡಿ.

ನಿಮ್ಮ ಮೊಬೈಲ್ ನಲ್ಲಿ ಓಲಾ ಆಪ್ ಇದ್ದರೆ ಅದರಿಂದ ಓಲಾ ಕ್ಯಾಬ್ ಅನ್ನು ನಿಗದಿತ ಡ್ರಾಪ್ ಪಾಯಿಂಟ್ಗೆ ಬುಕ್ ಮಾಡಿ, ಕನ್ಫರ್ಮ್ ಮಾಡಬೇಡಿ. ಆಪ್ ನಿಂದ ಹೊರಬಂದು ಮತ್ತೆ ಅದೇ ನಿಗದಿತ ಸ್ಥಳಕ್ಕೆ ಮಾಡಿ ನೋಡಿ. ಈ ಬಾರಿ ಮೊದಲು ಹೇಳಿದ ಹಣಕ್ಕಿಂತ 50 ರೂಪಾಯಿ ಹೆಚ್ಚಾಗಿರುತ್ತದೆ. ಪೀಕ್ ಅವರ್ ನಲ್ಲಿ ಕೂಡ ಇದೆ ಕೆಲಸ ಮಾಡುತ್ತದೆ. ಇದರಿಂದ ಚಾಲಕನಿಗೆ ನಯಾ ಪೈಸೆ ಲಾಭವಿಲ್ಲ, ಗ್ರಾಹಕನ ಜೇಬಿಗೆ ಹೆಚ್ಚಿನ ಒತ್ತಡ. ಮಧ್ಯದಲ್ಲಿ ಇಂತಹ ಸೇವೆ ಒದಗಿಸುವ ಕಂಪನಿಗಳು ದುಂಡಾಗುತ್ತವೆ.

ಇನ್ವೆನ್ಷನ್ ಆಫ್ ವೀಲ್ ನಂತರ ಜಗತ್ತು ಕದಡಿ ಹೋಯಿತು. ಎಲ್ಲಾ ದೇಶದವರೂ ಎಲ್ಲಾ ಕಡೆ ಇರುವಂತಾಯ್ತು. ಒಳ್ಳೆಯದೋ ಕೆಟ್ಟದ್ದೋ ಅವರವರ ಭಾವನೆಗೆ ಬಿಟ್ಟದ್ದು. ಈಗ ಎ.ಐ !! ಹೊಸ ಗುಲಾಮ ಬದುಕಿಗೆ ಸ್ವಾಗತ. 

ಎಲ್ಲವೂ ನಗದು ಮೂಲಕ ನಡೆದರೆ ಯಾವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೆಲಸ ಮಾಡೀತು ಅಲ್ಲವೇ? ಡಿಜಿಟಲ್ ಕರೆನ್ಸಿ ಅಬ್ಬರ ಎಷ್ಟಿದೆ ಎನ್ನುವುದನ್ನ ನಾನಿಲ್ಲಿ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ ಎಂದುಕೊಳ್ಳುತ್ತೇನೆ. ನಿಮ್ಮ ಬಳಿ ನೂರು ರೂಪಾಯಿ ನೋಟಿದೆ ಎಂದುಕೊಳ್ಳಿ ಅದನ್ನ ಕೊಟ್ಟು ನಿಮಗೆ ಬೇಕಾದ ವಸ್ತು ಅಥವಾ ಸೇವೆಯನ್ನ ಪಡೆಯುತ್ತೀರಿ. ಇಲ್ಲಿ ವ್ಯವಹಾರ ಕೊಳ್ಳುವವರ ಮತ್ತು ಮಾರುವವರ ಮಧ್ಯೆ ನಡೆಯಿತು. ಬೆಲೆ ಎಷ್ಟು, ಡಿಸ್ಕೌಂಟ್ ಎಷ್ಟು, ನೀವು ಯಾವ ವಸ್ತು ಕೊಂಡಿರಿ? ಕೊಂಡ ಉದ್ದೇಶ? ನಿಮ್ಮ ಫೋನ್ ನಂಬರ್, ನಿಮ್ಮ ಕಾರ್ಡ್ ನಂಬರ್.., ನೀವು ವ್ಯವಹರಿಸುವ ಬ್ಯಾಂಕ್ ಯಾವುದು/ ಹೀಗೆ ಇನ್ನು ಹಲವು ಹತ್ತು 'ನಿಮ್ಮ ಸ್ವಂತದ್ದು ' ಮೂರನೆಯವರಿಗೆ ತಿಳಿಯುವುದೇ ಇಲ್ಲ. ಈಗ ಅದೇ ವ್ಯವಹಾರವನ್ನ ಡಿಜಿಟಲ್ ಮೂಲಕ ಮಾಡಿ.... ನೀವು ಕೊಂಡದ್ದು ಕಡಲೆಬೀಜ ಅಥವಾ ಕರ್ಚಿಫು.. ಅದು 'ಮೂರನೆಯವರಿಗೆ' ತಿಳಿಯುತ್ತೆ. ಅದು ದಾಖಲಾಗುತ್ತೆ. ಈ ಜಗತ್ತಿನಲ್ಲಿ ನಿಮ್ಮದು ಅನ್ನುವ ಸ್ವಂತದ್ದು ಏನೂ ಇಲ್ಲ! ಎಲ್ಲಾ ಮಾಹಿತಿ ಇವತ್ತು ರಾಜಾರೋಷವಾಗಿ ಮೂರನೆಯವರ ಕೈ ಸೇರಿದೆ. ನಿಮಗೆ ಗೊತ್ತಿಲ್ಲದೆ ನಿಮ್ಮನ್ನ ಉಪಯೋಗಿಸಿಕೊಳ್ಳುತ್ತಿದ್ದಾರೆ!! ಇದು ಭಾರತದಲ್ಲಿ ಮಾತ್ರ ಎಂದೋ ಅಥವಾ ಮೋದಿ ಸರಕಾರ ಬಂದ ಮೇಲೆ ಹೀಗಾಯಿತು ಹೀಯಾಳಿಸುವ ಮುನ್ನ ಇದೊಂದು ಜಾಗತಿಕ ಸಮಸ್ಯೆ ಎನ್ನುವುದನ್ನ ಹೇಳಲು ಬಯಸುತ್ತೇನೆ. 

ಮೊದಲೇ ಹೇಳಿದಂತೆ ಹಣದ ಮೂಲಕ ನಡೆದ ವಹಿವಾಟಿನಲ್ಲಿ ಮೂರನೆಯವರು ಸಂಪಾದನೆ ಮಾಡಲು ಸಾಧ್ಯವಿರಲಿಲ್ಲ. ಡಿಜಿಟಲ್ ಪೇಮೆಂಟ್ ಮೂಲಕ ಮೂರನೆಯವರು ಹಣ ಮಾಡಲು ಸಾಧ್ಯ. ಹಣ ಅವರಿಗೆ ನಿಜವಾದ ಹಣವಲ್ಲ ವಹಿವಾಟು ನಡೆಸುವ ನೀವು ಅವರ ಪಾಲಿನ ನಿಜವಾದ ಹಣ. ಫೇಸ್ಬುಕ್, ಅಮೆಜಾನ್ ಗೂಗಲ್ ನಂತಹ ದೈತ್ಯ ಕಂಪನಿಗಳು ನಿಮ್ಮ ಆನ್ಲೈನ್ ಚಟುವಟಿಕೆ ಮೇಲೆ ತೀವ್ರ ನಿಗಾ ಇಟ್ಟಿವೆ. ನೀವೊಂದು ಹೊಸ ಫೋನ್ ಕೊಂಡರೆ ಸಾಕು ಆ ಫೋನ್ ಗೆ ಸಂಬಂಧಪಟ್ಟ ಇತರ ಉತ್ಪನ್ನಗಳ ಬಗ್ಗೆ ಜಾಹಿರಾತು ಕಾಣಿಸಿಕೊಳ್ಳಲು ಶುರುವಾಗುತ್ತದೆ. ನೀವು ಹೊಸ ಫೋನ್ ಮೂಲಕ ಫೇಸ್ಬುಕ್ ಅಥವಾ ಅಮೆಜಾನ್ ಆಪ್ ಗೆ ಭೇಟಿ ಇತ್ತರೆ ಸಾಕು! ಉಳಿದದ್ದು ಅವು ಮಾಡುತ್ತವೆ. ಇದು ಸರಿ ನಾವು ಹೇಗೆ ಅವರಿಗೆ ಹೊಸ ಹಣ ಎಂದಿರಾ? ಇಲ್ಲೇ ಇರುವುದು ಮಜಾ. ಜಗತ್ತಿನ ಎಲ್ಲಾ ಇಂಟರ್ನೆಟ್ ಬಳಸುವ ಜನರ ಚಟುವಟಿಕೆಯನ್ನ ಅವರ ಇಷ್ಟ ಅನಿಷ್ಟಗಳನ್ನ ಇಂತಹ ಕಂಪನಿಗಳು ಸಂಗ್ರಹಿಸುತ್ತಾ ಹೋಗುತ್ತಾರೆ. ಇಂತಹ ಕೆಲಸಕ್ಕೆ ಅವರಿಟ್ಟ ಹೆಸರು ಬಿಗ್ ಡೇಟಾ. ಹೀಗೆ ಸಂಗ್ರಹಿಸಿದ ಡೇಟವನ್ನ ಯಾರು ಹಣ ನೀಡುತ್ತಾರೋ ಅವರಿಗೆ ಮಾರಿ ಬಿಡುತ್ತಾರೆ. ಹೀಗೆ ನಮ್ಮಿಂದ ಅವರು ಕೋಟ್ಯಧಿಪತಿಗಳಾಗುತ್ತಾರೆ. ಅವರ ಕಣ್ಣಿಗೆ ನಾವೇ ಹಣ. ಇಂತಹ ಕಂಪನಿಗಳು ಡೇಟವನ್ನ ಮಾರುತ್ತವೆ ಕೊಂಡವರು ಅದನ್ನ ವಿಂಗಡಿಸಿ ಮತ್ತೆ ಅದನ್ನ ಉಪಯೋಗಿಸಿಕೊಂಡು ಹೇಗೆ ಹಣ ಮಾಡುವುದು ಎನ್ನುದಕ್ಕೆ ಹೊಂಚುಹಾಕುತ್ತವೆ. ಇದರ ಕಥೆ ಇಲ್ಲಿಗೆ ನಿಲ್ಲುವುದಿಲ್ಲ. ಇಂದು ಎಲ್ಲವೂ ಆನ್ ಲೈನ್ ಮೂಲಕ ನಡೆಯುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ನಮಗೆ ವಸ್ತುವಿನ ನಿಖರ ಬೆಲೆಯನ್ನ ತಿಳಿಯಲು ಕೂಡ ಸಾಧ್ಯವಾಗುವುದಿಲ್ಲ. ಹೋಲಿಸಿ ನೋಡಲು ಬೇರೆ ವ್ಯಾಪಾರಸ್ಥರು ಎಲ್ಲಿದ್ದಾರು? ಅವರು ಕೂಡ ಇದೆ ಆಟಕ್ಕೆ ಒಗ್ಗಿಕೊಂಡಿರುತ್ತಾರೆ.  ಎ.ಐ ಮೂಲಕ ನಿಮಗೆ ಯಾವ ವಸ್ತು ಅತ್ಯವಶ್ಯಕ, ಕೊಂಡೇಕೊಳ್ಳುತ್ತೀರಿ ಎನ್ನುವುದು ಅವರಿಗೆ ಗೊತ್ತಿರುತ್ತೆ. ಅವರು ಹೇಳಿದ ಬೆಲೆ ಕೊಟ್ಟು ಕೊಳ್ಳದೆ ಬೇರೆ ಯಾವ ದಾರಿ ನಮಗಿದ್ದೀತು? 

ಮನುಷ್ಯನ ಇತಿಹಾಸದಲ್ಲಿ ಚಕ್ರದ ಅನ್ವೇಷಣೆ ಅದೆಷ್ಟು ಮುಖ್ಯ ಪಾತ್ರ ವಹಿಸಿದೆಯೋ ಅಷ್ಟೇ ಮುಖ್ಯ ಪಾತ್ರ ಎ.ಐ ವಹಿಸಲಿದೆ. ನಾವು ಬದುಕುವ ರೀತಿ ಆಮೂಲಾಗ್ರವಾಗಿ ಬದಲಾವಣೆ ಕಾಣಲಿದೆ. ನಮ್ಮ ಬದುಕಿನ ಮೇಲೆ ಟೆಕ್ನಾಲಜಿ ಹಿಡಿತ ಹೆಚ್ಚುತ್ತಾ ಹೋದಂತೆಲ್ಲ ನಮ್ಮದು ಕೂಡ ರೊಬಾಟಿಕ್ ಬದುಕಾಗುತ್ತದೆ. ಮನು ಕುಲದ ಮೇಲೆ ಕೆಲವೇ ಕೆಲವರ ಹಿಡಿತ ಇನ್ನಷ್ಟು ಹೆಚ್ಚಾಗುತ್ತದೆ. ಅವರು ಹಾಕುವ ರಾಗಕ್ಕೆ ಕುಣಿಯುವ ಲೈವ್ ಸ್ಟಾಕ್ ಅಂದರೆ ಜೀವಂತ ದಾಸ್ತಾನುಗಳಾಗಿ ಬದುಕುವುದು ಬಿಟ್ಟು ಬೇರೇನೋ ಮಾಡಲಾಗದ ಸ್ಥಿತಿಗೆ ಹೋಗುವ ಮುನ್ನ ಸ್ಮಾರ್ಟ್ ಫೋನ್ ಗಳಿಗೆ ಬೈ ಹೇಳೋಣ. ಆದಷ್ಟೂ ಆನ್ ಲೈನ್ ಗಿಂತ ನಮ್ಮ ಆಸುಪಾಸಿನ ಅಂಗಡಿಯವರಿಂದ ಕೊಳ್ಳೋಣ. ಎಲ್ಲವನ್ನೂ ಆಪೋಷನ ತೆಗೆದುಕೊಳ್ಳಲು ಸಿದ್ಧವಾಗಿರುವ ಎ.ಐ ರಾಕ್ಷಸಿ ಕೋಡ್ ಗಳಿಗೆ ಶಾಂತಿಯಿಂದ ಉತ್ತರ ಕೊಡೋಣವೇ? 


- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com