ಚೀನಾದ ಮೇಲೆ ಭಾರತದ ಡಿಜಿಟಲ್ ಸ್ಟ್ರೈಕ್!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಚೀನಾದ ಮೇಲೆ ಭಾರತದ ಡಿಜಿಟಲ್ ಏರ್ ಸ್ಟ್ರೈಕ್!
ಚೀನಾದ ಮೇಲೆ ಭಾರತದ ಡಿಜಿಟಲ್ ಏರ್ ಸ್ಟ್ರೈಕ್!

ಕೇಂದ್ರ ಸರಕಾರ ಆತ್ಮನಿರ್ಭರ ಭಾರತ ಎನ್ನುವುದನ್ನ ಕಾರ್ಯರೂಪಕ್ಕೆ ತರಲು ನಾಲ್ಕು ಬಹಳ ಮುಖ್ಯ ನಿರ್ಧಾರವನ್ನ ತೆಗೆದುಕೊಂಡಿದೆ. ದೈತ್ಯ ಚೀನಾ, "ನಾನು ನಡೆದಿದ್ದೇ ಹಾದಿ..." ಎನ್ನುವಂತೆ ಸಾಗುತ್ತಿತ್ತು. ಜಗತ್ತಿನೆಲ್ಲೆಡೆ ಚೀನಾದ ಹಾದಿಗೆ ಅಡ್ಡವಾಗಿ ನಿಲ್ಲುವ ಒಂದು ದೇಶವೂ ಕಾಣುತ್ತಿರಲಿಲ್ಲ. ಭಾರತ ಕೂಡ ಕಾಲುಕೆರೆದು ಚೀನಾದ ಅಧಿಪತ್ಯವನ್ನ ಪ್ರಶ್ನಿಸುವ ಗೋಜಿಗೆ ಹೋಗುತ್ತಿರಲಿಲ್ಲ ಎನ್ನವುದು ಪರಮ ಸತ್ಯ.  ಚೀನಾ ದೇಶ ಭಾರತವನ್ನ ಕೆಣಕುವ ಮಟ್ಟಕ್ಕೆ ಹೋಗಬಾರದಿತ್ತು. ಗಡಿಯಲ್ಲಿ ಸೇನೆ ಜಮಾವಣೆ ಮಾಡಿ ಭಾರತವನ್ನ ಪ್ರಚೋದಿಸುವ ಕೆಲಸಕ್ಕೆ ಇಳಿದದ್ದು ಚೀನಾಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಸಿವಿಸಿ ಉಂಟುಮಾಡಿದೆ. ಹೀಗಾಗಲು ಪ್ರಮುಖ ಕಾರಣ ಭಾರತ, ಚೀನಾದ ಇಂತಹ ಯಾವುದೇ ತಂತ್ರಗಳಿಗೆ ಬಗ್ಗದೆ ದಿಟ್ಟ ಉತ್ತರ ನೀಡಿದ್ದು ಸಾಲದೇ ಚೀನಾ ದೇಶವನ್ನ ಅದಕ್ಕೆ ತಿಳಿಯುವ ಭಾಷೆಯಲ್ಲಿ ಕಟ್ಟಿ ಹಾಕಲು ಪ್ರತಿತಂತ್ರ ಹೆಣೆದಿದೆ.

ಒಬ್ಬ ಮನುಷ್ಯನ ತೂಕ ಎಷ್ಟಿರಬಹುದು? 100 ಕೆ.ಜಿ? 120? ಸದೃಢ ಮನುಷ್ಯ 120ಕೂಡ ತೂಗಬಲ್ಲ. ಅದೇ ಒಂದು ವೃಷಭ 350 ರಿಂದ 550 ಕೆ.ಜಿ ತೂಗಬಲ್ಲದು. ಭಾರತವನ್ನ ಮನುಷ್ಯನಿಗೆ ಹೋಲಿಸಿದರೆ, ಚೀನಾ ದೈತ್ಯ ವೃಷಭವಿದ್ದಂತೆ!! ಎಲ್ಲದರಲ್ಲೂ ಭಾರತಕ್ಕಿಂತ ಭಾರಿ. ಗಮನಿಸಿ ಅದೆಷ್ಟೇ ದೈತ್ಯ ವೃಷಭವನ್ನ ಕೂಡ ಮೂಗುದಾರ ಹಿಡಿದು ಎಳೆಯುವುದರಿಂದ ಅದರ ಆರ್ಭಟ ಕಡಿಮೆಯಾಗುತ್ತದೆ. ಇಂದಿನ ಸ್ಥಿತಯಲ್ಲಿ ಒಂದು ಸಮಾಜವನ್ನ ಅಥವಾ ಒಂದು ದೇಶವನ್ನ ಹೀಗೆ ನಿಯಂತ್ರಣಕ್ಕೆ ತರವುದು ಆರ್ಥಿಕ ಕಡಿವಾಣ. ಆರ್ಥಿಕವಾಗಿ ನಾವು ಅವರನ್ನ ಬಹಿಷ್ಕಾರ ಹಾಕಿದರೆ ಅಲ್ಲಿಗೆ ಅವರ ಆರ್ಭಟ ಅರ್ಧ ಕಡಿಮೆಯಾಗುತ್ತದೆ.

ಭಾರತ ಸದ್ದಿಲ್ಲದೇ ಚೀನಾದ ಮೇಲೆ ನಡೆಸಿದ ಡಿಜಿಟಲ್ ಸ್ಟ್ರೈಕ್ ಇವತ್ತಿಗೆ ಸದ್ದು ಮಾಡುತ್ತಿದೆ. ಹೀಗೆ ಭಾರತ ಕೂಡ ನಾಲ್ಕು ಪ್ರಮುಖ  ನಿರ್ಧಾರ ಕೈಗೊಂಡಿದೆ ಅದು ಚೀನವನ್ನ ಕಟ್ಟಿ ಹಾಡುವುದರಲ್ಲಿ ಪೂರ್ಣ ಸಫಲವಾಗದಿದ್ದರೂ ಅದಕ್ಕೊಂದು ಎಚ್ಚರಿಕೆ ಏಟು ನೀಡಿದಂತಾಗುತ್ತದೆ.

1. ಚೀನಾ ಆಪ್ ಗಳನ್ನ ಭಾರತ ಸರಕಾರ ಬ್ಯಾನ್ ಮಾಡಿದೆ.

ಟಿಕ್ ಟಾಕ್ ಸೇರಿ 59 ಚೀನಿ ಆಪ್ ಗಳನ್ನ ಭಾರತ ನಿಷೇಧ  ಮಾಡಿದೆ. ಅಂಕಿ-ಅಂಶದ ಪ್ರಕಾರ ಚೀನಾ ತನ್ನ ಆಪ್ ಗಳ ಒಟ್ಟು ಆದಾಯದ 30 ರಿಂದ 40 ಪ್ರತಿಶತ ಭಾರತದಿಂದ ದುಡಿಯುತಿತ್ತು. ಟಿಕ್ ಟಾಕ್ ಒಂದರಲ್ಲೇ ನೂರಾರು ಕೋಟಿ ಆದಾಯ ದೋಚುತ್ತಿತ್ತು. ಅಂದರೆ ಗಮನಿಸಿ ಚೀನಾದಲ್ಲಿ ಇರುವ ಒಟ್ಟು ಆಪ್ ಗಳಲ್ಲಿ ಜಗತ್ತಿನ ಎಲ್ಲಾ ದೇಶದಿಂದ ಅದು ನೂರು ರೂಪಾಯಿ ಆದಾಯ ಗಳಿಸುತ್ತಿತ್ತು ಎಂದುಕೊಂಡರೆ ಅದರಲ್ಲಿನ 30ರಿಂದ 40 ರೂಪಾಯಿ ಭಾರತ ಒಂದರಿಂದಲೇ ಗಳಿಸುತ್ತಿತ್ತು ಎನ್ನುವುದನ್ನ ಅಂಕಿ-ಅಂಶ ಬಹಿರಂಗ ಪಡಿಸಿದೆ. ಗಮನಿಸಿ ಭಾರತ ಚೀನಾದ ಮಟ್ಟಿಗೆ ಅದೆಷ್ಟು ದೊಡ್ಡ ಮಾರುಕಟ್ಟೆ ಎನ್ನುವುದರ ಅರಿವು ಇದರಿಂದ ನಮ್ಮದಾಗುತ್ತದೆ. ಈಗ ಚೀನಿ ಆಪ್ ಗಳನ್ನ ಬ್ಯಾನ್ ಮಾಡಿರುವುದರಿಂದ ಇಂತಹ ಆದಾಯದಿಂದ ಅಲ್ಲಿನ ಉದ್ಯಮಿಗಳು ವಂಚಿತರಾಗುತ್ತಾರೆ. ಇದು ಸಾಮಾನ್ಯನ ಕಣ್ಣಿಗೆ ಸ್ಪಷ್ಟವಾಗಿ ಕಾಣದ ಆದರೆ ಚೀನಾಗೆ ಸರಿಯಾದ ಪೆಟ್ಟು ಕೊಟ್ಟ ವಿಷಯವಾಗಿದೆ.

2. ಚೀನಾಗೆ ದಕ್ಕಿದ ನಾನ್ ಮಾರ್ಕೆಟ್ ಎಕಾನಮಿ ಪಟ್ಟಕ್ಕೆ ಬಿದ್ದಿದೆ ಕತ್ತರಿ. 

 ವರ್ಲ್ಡ್ ಟ್ರೇಡ್ ಆರ್ಗನೈಸಷನ್ ನ ಎಲ್ಲಾ ಸದಸ್ಯ ದೇಶಗಳನ್ನೂ ಮಾರ್ಕೆಟ್ ಎಕಾನಮಿ ಎಂದು ಪರಿಗಣಿಸಲಾಗುತ್ತದೆ. ಚೀನಾ ದೇಶ  ವರ್ಲ್ಡ್ ಟ್ರೇಡ್ ಆರ್ಗನೈಸಷನ್ ನ ಸದಸ್ಯ ದೇಶವಾಗುವ ಸಮಯದಲ್ಲಿ ನನಗೆ ನಾನ್ ಮಾರ್ಕೆಟ್ ಎಕಾನಮಿ ಪಟ್ಟವನ್ನ ಕೊಡುವಂತೆ ಕೇಳಿಕೊಂಡಿತು. ಇಲ್ಲದಿದ್ದರೆ ಸದಸ್ಯನಾಗುವುದಿಲ್ಲ ಎನ್ನುವ ಧಮಕಿ ಕೂಡ ಹಾಕಿತ್ತು. ಹೀಗಾಗಿ ಅದಕ್ಕೆ ಆ ಪಟ್ಟ ದೊರೆತ್ತಿತ್ತು. ಗಮನಿಸಿ ಯಾವುದೇ ದೇಶ ತನ್ನ ದೇಶದಲ್ಲಿ ಮಾರುವ ಬೆಲೆಗಿಂತ ಕಡಿಮೆ ಬೆಲೆಗೆ ಬೇರೆ ದೇಶಕ್ಕೆ ತನ್ನ ಉತ್ಪನ್ನವನ್ನ ಮಾರಿದರೆ ಅಂತಹ ದೇಶದ ಮೇಲೆ ಆಂಟಿ ಡಂಪಿಂಗ್ ಚಾರ್ಜಸ್ ಹಾಕಬಹುದು, ಇದನ್ನ ಮಾರ್ಕೆಟ್ ಎಕಾನಮಿ ಎನ್ನುತ್ತಾರೆ. ಆದರೆ ಚೀನಾ ನಾನ್ ಮಾರ್ಕೆಟ್ ಎಕಾನಮಿ ಎನ್ನುವ ದರ್ಜೆಯನ್ನ ಪಡೆದಿತ್ತು ಹೀಗಾಗಿ ಚೀನಾ ಕಡಿಮೆ ಬೆಲೆಗೆ ತನ್ನ ಉತ್ಪನ್ನವನ್ನ ಮಾರಿದರೂ ಕೂಡ ಅಂಟಿ ಡಂಪಿಂಗ್ ಚಾರ್ಜಸ್ ವಿಧಿಸಲು ಬರುತ್ತಿರಲಿಲ್ಲ. 2016 ರಿಂದ ಅಮೇರಿಕಾ ಮತ್ತು ಯೂರೋಪ್ ಚೀನವನ್ನ ನಾನ್ ಮಾರ್ಕೆಟ್ ಎಕಾನಮಿ ಪಟ್ಟದಿಂದ ಇಳಿಸಿವೆ. ಅಂದರೆ 2016 ರಿಂದ ಈಚೆಗೆ ಅವುಗಳು ಚೀನಾದ ಉತ್ಪನ್ನಗಳ ಮೇಲೆ ಆಂಟಿ ಡಂಪಿಂಗ್ ಚಾರ್ಜಸ್ ಗಳನ್ನ ವಿಧಿಸುತ್ತಾ ಬಂದಿದೆ.  ಭಾರತ ಕೂಡ ಈಗ ಇತ್ತೀಚಿಗೆ ಅಂದರೆ ಕೇವಲ ಮೂರು ದಿನಗಳ ಕೆಳೆಗೆ ಅಂದರೆ 27/06/2020ರಿಂದ ಆ ಸಾಲು ಸೇರಿದೆ. ಇದರಿಂದ ಪ್ರಮುಖವಾಗಿ ಆಗಿರುವ ಬದಲಾವಣೆಗಳು ಹೀಗಿವೆ.

  • ಚೀನಿ ಪದಾರ್ಥಗಳ ಮೇಲೆ ಆಂಟಿ ಡಂಪಿಂಗ್ ಚಾರ್ಜಸ್ ಹಾಕಬಹುದು. ಗಮನಿಸಿ ಎಲ್ಲಾ ಪದಾರ್ಥಗಳ ಮೇಲೆ ಅಲ್ಲ. ಬೆಲೆಯನ್ನ ಕಡಿಮೆಮಾಡಿ ಬೇರೆ ದೇಶದ ಮಾರುಕಟ್ಟೆಯನ್ನ ಕಸಿಯುವ ಚೀನಿ ಪದಾರ್ಥಗಳ ಮೇಲೆ ಹಾಕಬಹುದು.
  • ಪದಾರ್ಥ ಯಾವುದೇ ಇರಲಿ ಅವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು.
  • ಸಣ್ಣ ಸಣ್ಣ ಪದಾರ್ಥಗಳನ್ನ ಭಾರತಕ್ಕೆ ಮಾರಲು ಕೂಡ ಚೀನಾ ಭಾರತದ ಅನುಮತಿಯನ್ನ ಪಡೆಯಬೇಕಾಗುತ್ತದೆ. ಗಮನಿಸಿ ಈ ಹಿಂದೆ ಒಮ್ಮೆ ಒಪ್ಪಂದವಾಗಿದ್ದರಿಂದ ಪ್ರತಿ ಬಾರಿ ಅನುಮತಿ ಪಡೆಯುವ ಅವಶ್ಯಕತೆ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿ ಬಾರಿ ಚೀನಿ ಉತ್ಪನ್ನ ಭಾರತದ ನೆಲವನ್ನ ಸೇರುವ ಮುಂಚೆ ಭಾರತ ಸರಕಾರದ ಅನುಮತಿ ಅಗತ್ಯವಿದೆ.

3.ಭಾರತ ತನ್ನ ಟೆಲೆಕಾಂ ಸಂಸ್ಥೆಗಳಿಗೆ ಚೀನಿ ಉತ್ಪನ್ನವನ್ನ ಬಳಸದಂತೆ ತಾಕೀತು ಮಾಡಿದೆ.

MSNL ಮತ್ತು BSNL ಗಳಿಗೆ ಚೀನಾ ಉತ್ಪನ್ನಗಳನ್ನ ಬಳಸದಂತೆ ಆದೇಶ ನೀಡಲಾಗಿದೆ. 4ಜಿ  ಗೆ ಕರೆದಿದ್ದ ಎಲ್ಲಾ ಟೆಂಡರ್ ಗಳನ್ನ ರದ್ದು ಮಾಡಲಾಗಿದೆ. ಹೊಸ ಟೆಂಡರ್ ನಲ್ಲಿ ಚೀನಿ ಸಂಸ್ಥೆಗಳಿಗೆ ಸಿಗದ ಹಾಗೆ ಆದೇಶ ನೀಡಲಾಗಿದೆ. ಗಮನಿಸಿ 4ಜಿ ಯಲ್ಲಿ ಚೀನಾ ದೇಶ ಭಾರತದಿಂದ ಬಹಳಷ್ಟು ಲಾಭವನ್ನ ಪಡೆದಿತ್ತು ಅಲ್ಲದೆ 5ಜಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕೆನ್ನುವ ಚೀನಾದ ಕನಸಿಗೆ ಅತಿ ದೊಡ್ಡ ಏಟು ಬಿದ್ದಿದೆ. ಗಮನಿಸಿ ಭಾರತ ಚೀನಾಗೆ ಈ ವಲಯದಲ್ಲಿ ಅತ್ಯಂತ ದೊಡ್ಡ ಗ್ರಾಹಕ. ಭಾರತ ನೀಡಿರುವ ಈ ಏಟಿನಿಂದ ಚೀನಾದ 5ಜಿ ನೆಟ್ವರ್ಕ್ ಕಟ್ಟಬೇಕು, ಬೆಳೆಸಬೇಕು ಎನ್ನುವ ಮಹತ್ವಾಕಾಂಕ್ಷೆಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ.

4. ಚೀನಾದಿಂದ ಬರುತ್ತಿದ್ದ ಎಲ್ಲಾ ರಬ್ಬರ್ ಟೈರ್ ಗಳನ್ನ ನಿಲ್ಲಿಸಲಾಗಿದೆ.

ಚೀನಾದ ಆಮದು ಮಾಡಿಕೊಳ್ಳುತಿದ್ದ ರಬ್ಬರ್ ಟೈರುಗಳನ್ನ ಭಾರತ ಸರಕಾರ ನಿಷೇದ ಮಾಡಿದೆ. ಇದು ಕೂಡ ಎರಡು ದಿನದ ಹಿಂದಿನಿಂದ ಜಾರಿಗೆ ಬಂದಿದೆ. ಇದರಿಂದ ದೇಶೀ ಉತ್ಪಾದಕರಿಗೆ ಬೇಡಿಕೆ ಹೆಚ್ಚಾಗಲಿದೆ. ಚೀನಾದ ಉತ್ಪಾದಕರಿಗೆ ಇದರಿಂದ ಬಹಳ ದೊಡ್ಡ ನಷ್ಟ ಎದುರಾಗಲಿದೆ.

ಇದರಿಂದ ಭಾರತಕ್ಕೆ ತೊಂದರೆಯಾಗುವುದಿಲ್ಲವೇ ? 

ಇಂತಹ ಕಠಿಣ ನಿರ್ಧಾರ ತಳೆಯುವುದರಿಂದ ಭಾರತಕ್ಕೆ ಕೂಡ ಬಹಳಷ್ಟು ತೊಂದರೆಯಾಗುತ್ತದೆ ಅದರಲ್ಲಿ ಪ್ರಮುಖವಾಗಿ

  1. ಪರ್ಯಾಯ ಪದಾರ್ಥಗಳು ಇಲ್ಲದೆ ಇಲ್ಲಿನ ಮಾರುಕಟ್ಟೆಯಲ್ಲಿ ಕೊರತೆಯನ್ನ ನಾವು ಎದುರಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯ ಉತ್ಪನ್ನಗಳನ್ನ ತಯಾರಿಸುವವರೆಗೆ ತೊಂದರೆ ತಪ್ಪಿದ್ದಲ್ಲ.
  2. ಭಾರತ ಸರಕಾರದ ಈ ನಿಲುವುಗಳಿಂದ ಭಾರತಕ್ಕೆ ಚೀನಾ ದೇಶದಿಂದ ಸಿಗುತ್ತಿದ್ದ ಕಸ್ಟಮ್ ಡ್ಯೂಟಿ ನಿಂತು ಹೋಗುತ್ತದೆ. ಇದರಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ನಷ್ಟ  ವಾಗುತ್ತದೆ.

ಕೊನೆ ಮಾತು: ಚೀನಾದ ಆಪ್ ಗಳನ್ನ, ಚೀನಾದ ಪದಾರ್ಥಗಳನ್ನ ಬಹಿಷ್ಕರಿಸುವದರಿಂದ ಕೇವಲ ಭಾರತಕ್ಕೆ ಮಾತ್ರ ತೊಂದರೆಯಾಗುವುದಿಲ್ಲ. ಚೀನಾಗೆ ಕೂಡ ಸಾಕಷ್ಟು ತೊಂದರೆಯಾಗುತ್ತದೆ. ಉದಾಹರೆಣೆಗೆ ನೋಡುವುದಾದರೆ ಭಾರತಕ್ಕೆ ಔಷಧ ಉತ್ಪಾದನೆಗೆ ಬೇಕಾದ ಕೆಲವು ಕಚ್ಚಾ ಪದಾರ್ಥಗಳು ಚೀನಾದಿಂದ ಬರುತ್ತದೆ, ಆದರೆ ಇಲ್ಲಿಂದ ಅದನ್ನ ಪರಿವರ್ತಿಸಿ ಔಷಧ ರೂಪ ನೀಡಲಾಗುತ್ತದೆ. ಭಾರತ ತನ್ನಲ್ಲಿರುವ ಇಂತಹ ಔಷಧವನ್ನ ಚೀನಾಗೆ ನೀಡದಿದ್ದರೆ ಅಲ್ಲಿನ ರೋಗಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಾರೆ. ಇದರರ್ಥ ಇಂದು ಒಂದು ದೇಶದ ಮೇಲೆ ಇನ್ನೊಂದು ದೇಶದ ಅವಲಂಬನೆ ಬಹಳಷ್ಟು ಹೆಚ್ಚಾಗಿದೆ. ವಸ್ತುಸ್ಥಿತಿ ಹೀಗಿರುವಾಗ ಹೊಡೆದಾಡಿ ಪ್ರಯೋಜನವಿಲ್ಲ. ಈ ಅಂಶ ಚೀನಾಗೆ ಮಾನವರಿಕೆಯಾಗಲಿದೆ. ಸದ್ಯದ ಮಟ್ಟಿಗೆ ಚೀನಾದ ಘರ್ಜನೆಗೆ ಬೆದರದೆ ನಿಂತದ್ದು ಭಾರತದ ಜಯ. ಅಂತರರಾಷ್ತ್ರೀಯಮಟ್ಟದಲ್ಲಿ ಚೀನಾಗೆ ಆದ ಮುಖಭಂಗ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com