ಹಣದುಬ್ಬರವಿರದಿದ್ದರೂ ಚಿನ್ನದ ಬೆಲೆಯೇಕೆ ಏರುತ್ತಿದೆ?

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಮಹತ್ವ ಇಂದಿನದ್ದಲ್ಲ. ಕ್ರಿಸ್ತ ಪೂರ್ವ 5 ನೇ ಶತಮಾನದಲ್ಲಿ ಇಂದಿನ ಟರ್ಕಿ ದೇಶಕ್ಕೆ ಸೇರಿದ ಲಿಡಿಯಾದಲ್ಲಿ ಕೊಡು-ಕೊಳ್ಳುವಿಕೆಯ ಮಾಧ್ಯಮವಾಗಿ ಉಪಯೋಗಿಸುತ್ತಿದ್ದರು. ನಾಣ್ಯ ಎಷ್ಟು ತೂಕ ಹೊಂದಿದೆ ಎನ್ನುವುದರ ಮೇಲೆ ಅದರ ಮೌಲ್ಯ ನಿರ್ಧಾರ ಆಗುತ್ತಾ ಇತ್ತು.

19ನೇ ಶತಮಾನದಲ್ಲಿ ಜಗತ್ತಿನ ಬಹುಪಾಲು ದೇಶಗಳು ತಮ್ಮ ಕರೆನ್ಸಿ ಮೌಲ್ಯವನ್ನು ಚಿನ್ನದೊಂದಿಗೆ ಹೋಲಿಕೆ ಮಾಡುತ್ತಿದ್ದವು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಣಿಕೆ ಕಷ್ಟವಾಯ್ತು. ವ್ಯಾಪಾರ, ವಹಿವಾಟಿಗೆ ಹೊರಡುವ ನಾವಿಕರು ನೂರಾರು ಕೆ.ಜಿ ಚಿನ್ನವ ಸಾಗಿಸುವುದು ಸುಲಭದ ಕೆಲಸವಾಗಿರಲಿಲ್ಲ, ಜೊತೆಗೆ ಕಳ್ಳ-  ಕಾಕರರ ಭಯ ಬೇರೆ, ಹೀಗಾಗಿ ಪೇಪರ್ ಮೇಲೆ ಮೌಲ್ಯ ಮುದ್ರಿಸತೊಡಗಿದರು. ಇಂತಹ ಪೇಪರ್ ಕೊಟ್ಟು ಅಷ್ಟೇ ಮೌಲ್ಯದ ಚಿನ್ನ ಪಡೆಯುವ ಅವಕಾಶ ಕಲ್ಪಿಸಲಾಯಿತು.  ಚಿನ್ನವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದು ಇದರಿಂದ ತಪ್ಪಿತು.  ಯಾವ ದೇಶ ಅತಿ ಹೆಚ್ಚು ಬಂಗಾರ ಹೊಂದಿದೆಯೋ ಆ ದೇಶ ಹೆಚ್ಚು ಶ್ರೀಮಂತ ದೇಶ ಎಂದು ಪರಿಗಣಿಸಲಾಗುತ್ತಿತ್ತು. 1870 ರಿಂದ 1914ರ ವರೆಗೆ ಚಿನ್ನ ವಹಿವಾಟಿನ ಮೂಲವಾಗಿತ್ತು. ಮೊದಲನೇ ಮಹಾಯುದ್ಧದ ನಂತರ ಸಾಂಬಾರ ಪದಾರ್ಥ, ಬೆಳ್ಳಿ, ತಾಮ್ರಗಳು ಕೂಡ ನಾಣ್ಯದ ಮೌಲ್ಯ ಅಳೆಯುವ ಸಾಧನಗಳಾಗಿ ಉಪಯೋಗಿಸಲ್ಪಟವು. ಇಂಗ್ಲೆಂಡ್ ಹಾಗು ಅದರ ಸಾಮಂತ ದೇಶಗಳು ಮಾತ್ರ ಬಂಗಾರವನ್ನು ಮೌಲ್ಯ ಅಳೆಯುವ  ಸಾಧನವನ್ನಾಗಿ ಬಳಸುತ್ತಿದ್ದವು. 1854ರಲ್ಲಿ ಪೋರ್ಚುಗಲ್, 1871ರಲ್ಲಿ ಜರ್ಮನಿ ಹೀಗೆ ಎಲ್ಲರೂ ಬಂಗಾರದ ಹಿಂದೆ ಬಿದ್ದರು. ಒಂದು ಗ್ರಾಂ ಚಿನ್ನಕೆ ಇಷ್ಟು ಬೆಲೆ ಎಂದು ನಿಗದಿಪಡಿಸಿದರು. ಅಮೇರಿಕಾ ಆ ದಿನಗಳಲ್ಲಿ ಅತಿ ಹೆಚ್ಚು ಬಂಗಾರ ಹೊಂದಿದ ದೇಶವಾಗಿತ್ತು. ಹೀಗಾಗಿ ಎರಡನೇ ಮಹಾಯುದ್ಧದ ನಂತರ ಜಗತ್ತಿನ ಎಲ್ಲಾ ದೇಶಗಳು ತಮ್ಮ ಕರೆನ್ಸಿ ಮೌಲ್ಯವನ್ನು ಅಮೆರಿಕಾದ ಡಾಲರ್ ಮೌಲ್ಯದೊಂದಿಗೆ ತುಲನೆ ಮಾಡಿ ನಿಗದಿ ಮಾಡಲು ಶುರು ಮಾಡಿದರು.

ಕ್ರಿಪ್ಟೊ ಕರೆನ್ಸಿ ಯುಗಕ್ಕೆ ನಾವು ಅಂಬೆಗಾಲಿಡಲು ಶುರು ಮಾಡಿದ್ದೇವೆ. ಜಗತ್ತು ಪೂರ್ತಿ ಈ 'ಹೊಸಹಣ'ಕ್ಕೆ ಹೊಂದಿಕೊಳ್ಳುವವರೆಗೆ ಚಿನ್ನದ ಮೋಹ ಮಾಸುವುದಿಲ್ಲ. ಆಟದ ನಿಯಮ ಬರೆಯುವವರ ಮನಸ್ಸಿನಲ್ಲಿ ಏನಿದೆ? ಎನ್ನುವುದರ ಮೇಲೆ ಚಿನ್ನ ತನ್ನ ಹೊಳಪು ಕಳೆದುಕೊಳ್ಳುತ್ತದೆಯೋ ಇಲ್ಲ ಮಾರುಕಟ್ಟೆಯನ್ನು ಎಂದಿನಂತೆ ಆಳುತ್ತದೆಯೂ ಎನ್ನುವುದು ನಿರ್ಧಾರವಾಗಲಿದೆ. ಇದೇನೇ ಇರಲಿ ಮನುಷ್ಯ ತಂತ್ರಜ್ಞಾನ ಬಳಸಿಕೊಂಡು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆಯಲಿ, ಕಂಪ್ಯೂಟರ್ ಪರದೆಯ ಮೇಲೆ ಸಾವಿರಾರು ಕೋಟಿ ಮೌಲ್ಯ ಸೃಷ್ಟಿಸಲಿ, ಆತನ ಒಳ ಮನಸ್ಸು ಯಾವುದಕ್ಕೆ ನಿಜವಾದ ಮೌಲ್ಯವಿದೆ ಎನ್ನುವುದನ್ನ ಗ್ರಹಿಸುತ್ತದೆ. ಹೀಗಾಗಿ ಇನ್ನೊಂದು ದಶಕ ಚಿನ್ನವನ್ನ ಹೂಡಿಕೆದಾರರು ಬಿಡುವ ಸಾಧ್ಯತೆ ಕಡಿಮೆ. ಆಮೇಲಿನ ಕಥೆಯೇನು? ಬದುಕು ಹಿಂದಿನ ರೀತಿಯಿಲ್ಲ. ಹತ್ತು ವರ್ಷದಲ್ಲಿ ಏನಾಗಬಹುದು ಎಂದು ಊಹಿಸುವುದು ಕಷ್ಟವಾಗಿದೆ. ಈಗೇನಿದ್ದರೂ ಎರಡು ಜಾಸ್ತಿ ಎಂದರೆ ಮೂರು ವರ್ಷಗಳ ಅವಧಿಗೆ ಮಾತ್ರ ಪ್ಲಾನ್ ಮಾಡುತ್ತಾ ಹೋಗಬೇಕು. ಬದಲಾದ ಸನ್ನಿವೇಶದಲ್ಲಿ ಮೂರು ವರ್ಷ ಕೂಡ ಲಾಂಗ್ ಟರ್ಮ್ ಎನ್ನಿಸಿಕೊಳ್ಳಲಿದೆ.

ಚಿನ್ನದ ಮೋಹ ಇಂದಿನದಲ್ಲ ಎನ್ನುವುದು ತಿಳಿಯಿತು, ಅಂತೆಯೇ ಮನುಷ್ಯನ ಮೂಲಗುಣ ಕಣ್ಣಿಗೆ ಕಾಣುವ ವಸ್ತುವಿನ ಮೇಲೆ ಹೆಚ್ಚು ನಂಬಿಕೆ ಎನ್ನುವುದು ಕೂಡ ವೇದ್ಯವಾಗುತ್ತಿದೆ. ಇಂತಹ ಬಂಗಾರದ ಮೇಲಿನ ಬೆಲೆ ಏರಿಕೆ ಏಕಾಗುತ್ತದೆ ಎನ್ನುವುದನ್ನ ಕೂಡ ನೋಡೋಣ.

ಬೆಲೆಯೇರಿಕೆಗೆ ಕಾರಣಗಳೇನು

  1. ಚಿನ್ನವನ್ನ ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತೇವೆ ಹೀಗಾಗಿ ಇದರ ಮೌಲ್ಯವನ್ನ ಡಾಲರ್ನಲ್ಲಿ ನಿಗದಿ ಪಡಿಸಲಾಗುತ್ತದೆ. ಡಾಲರ್ ಬೆಲೆ ರೂಪಾಯಿ ವಿರುದ್ಧ 7 ರಿಂದ 9 ಪ್ರತಿಶತ ವೃದ್ಧಿ ಕಂಡಿದೆ. ಅಂದರೆ ಭಾರತೀಯ ರೂಪಾಯಿ ಅಷ್ಟರಮಟ್ಟಿಗೆ ಕುಸಿತಗೊಂಡಿದೆ. ಉದಾಹರಣೆ ನೋಡಿ ಮೊದಲು ಒಂದು ರುಪಾಯಿಗೆ ಸಿಗುತ್ತಿದ್ದ ಪದಾರ್ಥಕ್ಕೆ ಇಂದು ನಾವು ಒಂದು ರೂಪಾಯಿ 9 ಪೈಸೆ ಕೊಡಬೇಕು. ಅವರೇನು ವಸ್ತುವಿನ ಬೆಲೆ ಹೆಚ್ಚಿಸಲಿಲ್ಲ. ಆದರೆ ನಮ್ಮ ವಿನಿಮಯದ ದರ ಡಾಲರ್ ಎದಿರು ಕುಸಿತಗೊಂಡಿದೆ ಹೀಗಾಗಿ ಚಿನ್ನದ ಬೆಲೆ ಹೆಚ್ಚಿದೆ.
  2. ಅಸ್ಥಿರ ಮಾರುಕಟ್ಟೆಯಲ್ಲಿ ಹೂಡಿಕೆದಾರ ಸ್ಥಿರವಾದ ಹೂಡಿಕೆಯನ್ನ ಹುಡುಕುತ್ತಾನೆ. 2008 ರ ಲೇಮನ್ ಬ್ರದರ್ (lehman brothers)  ಕುಸಿತದ ನಂತರ ಇಲ್ಲಿಯವರೆಗೆ 45 ಪ್ರತಿಶತ ಚಿನ್ನದ ಬೆಲೆ ಏರಿಕೆ ಕಂಡಿದೆ. ಆದರೆ ಗಮನಿಸಿ ಕಂಪ್ಯೂಟರ್ ಪರದೆಯ ಮೇಲೆ ಎಲ್ಲಿಯ ತನಕ ತನಗೆ ಲಾಭವಾಗುತ್ತಿತ್ತು ಅಲ್ಲಿಯವರೆಗೆ ಹೂಡಿಕೆದಾರ ಅಲ್ಲಿರುತ್ತಾನೆ. ಯಾವಾಗ ಅಲ್ಲಿನ ಹಣಕ್ಕೆ ಭದ್ರತೆ ಇಲ್ಲ ಅನ್ನಿಸುತ್ತದೆ ಆಗೆಲ್ಲಾ ಅವನು ಬಹಳ ಹಿಂದಿನಿಂದ ನಂಬಿಕೊಂಡಿದ್ದ ತನ್ನ ಹಳೆಯ ಹೂಡಿಕೆಯ ಮೊರೆ ಹೋಗುತ್ತಾನೆ. ಅಂಕಿ ಸಂಖ್ಯೆಗಳನ್ನ ಗಮನಿಸಿದರೆ ಸಾಕು ಅವು ಹೇಳುವ ಕಥೆ ಕೂಡ ಸೇಮ್. ಯಾವಾಗೆಲ್ಲಾ ಆರ್ಥಿಕ ಕುಸಿತ ಉಂಟಾಗುತ್ತದೆ ಆಗೆಲ್ಲಾ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಇಂದಿನ ಕೊರೊನ ಅತಂತ್ರ ಸ್ಥಿತಿಯಲ್ಲಿ ಸಹಜವಾಗೇ ಚಿನ್ನದ ಮೇಲಿನ ಬೆಲೆ ಹೆಚ್ಚಾಗಿದೆ.
  3. ಚೀನಾ ಮತ್ತು ರಷ್ಯಾ ದೇಶಗಳು ಚಿನ್ನದ ಬೆಲೆ ಏರಿಕೆ ಮಟ್ಟವನ್ನ ಕುಸಿಯಲು ಬಿಡುತ್ತಿಲ್ಲ. ಚೀನಾ ಜಗತ್ತಿನ ಅತಿ ಹೆಚ್ಚು ಚಿನ್ನ ಕೊಳ್ಳುತ್ತಿದ್ದ ದೇಶವಾಗಿತ್ತು. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಚೀನಾ ಮತ್ತು ರಷ್ಯಾ ಎರಡೂ ಸಾಕಷ್ಟು ಬಂಗಾರವನ್ನ ರಿಸರ್ವ್ ರೂಪದಲ್ಲಿ ಇಟ್ಟುಕೊಂಡಿವೆ. ಸಹಜವಾಗೇ ಬಂಗಾರದ ಬೆಲೆಯನ್ನ ಈ ದೇಶಗಳು ಕುಸಿಯಲು ಬಿಡುವುದಿಲ್ಲ. ಬಂಗಾರದ ಬೆಲೆಯಲ್ಲಿ ಕುಸಿತವಾದರೆ ಈ ದೇಶಗಳು ಬಹಳಷ್ಟು ಹಣವನ್ನ ಕಳೆದುಕೊಳ್ಳುತ್ತವೆ. ಅವುಗಳ ಬಳಿ ಇರುವ ಬಂಗಾರದ ತೂಕ ಕಡಿಮೆಯಾಗದಿದ್ದರೂ ಮೌಲ್ಯದಲ್ಲಿ ವ್ಯತ್ಯಾಸವಾದರೆ ಬಹಳಷ್ಟು ನಷ್ಟವಾಗುತ್ತದೆ. ಹೀಗಾಗಿ ಈ ದೇಶಗಳು ಬಂಗಾರದ ಬೆಲೆ ಹೆಚ್ಚು ಕುಸಿತ ಕಾಣದಂತೆ ಅಥವಾ ತಮ್ಮ ಅನುಕೂಲಕ್ಕೆ ತಕ್ಕಂತೆ ಇದರ ದರವನ್ನ ಬಳಸಿಕೊಳ್ಳಲು ಲಾಬಿ ಮಾಡುತ್ತವೆ.
  4. ಹಣದುಬ್ಬರದ ವಿರುದ್ಧ ಇದು ಅತ್ಯುತ್ತಮ ಹೂಡಿಕೆ. ಗಮನಿಸಿ ನೋಡಿ ನಾವು ಯಾವುದೇ ಹೂಡಿಕೆಯನ್ನ ಏಕೆ ಮಾಡುತ್ತೇವೆ? ಏಕೆಂದರೆ ಹಣದ ಮೌಲ್ಯ ವೇಳೆಯ ಜೊತೆಯಲ್ಲಿ ಕುಸಿತ ಕಾಣುತ್ತದೆ. ಅಂದರೆ ಇಂದು ನಲವತ್ತು ರುಪಾಯಿಗೆ ಈ ಕೇಜಿ ಅಕ್ಕಿ ಸಿಕ್ಕರೆ ಮುಂದಿನ ವರ್ಷ ಅದೇ ಅಕ್ಕಿಗೆ 45 ರೂಪಾಯಿ ಕೊಡಬೇಕಾಗುತ್ತದೆ. ಇದಕ್ಕೆ ಹಣದುಬ್ಬರ ಎನ್ನುತ್ತಾರೆ. ಹೀಗೆ ಹಣವನ್ನ ಎಲ್ಲಿಯೂ ಹೂಡಿಕೆ ಮಾಡದೆ ಇಟ್ಟು ಕೊಂಡರೆ ಅದರ ಮೇಲಿನ ಮುದ್ರಿತ ಮೌಲ್ಯ ಕಡಿಮೆಯಾಗದಿದ್ದರೂ ಅದರ ಖರೀದಿ ಶಕ್ತಿ ಕುಸಿಯುತ್ತದೆ. ಹೀಗೆ ಖರೀದಿ ಶಕ್ತಿಯನ್ನ ಸಮವಾಗಿಡಲು ಅಥವಾ ಹೆಚ್ಚಿಸಿಕೊಳ್ಳಲು ಬಂಗಾರದ ಮೇಲಿನ ಹೂಡಿಕೆ ಸಹಕಾರಿ.
  5. ಅತ್ಯಂತ ಲಿಕ್ವಿಡ್ ಇನ್ವೆಸ್ಟ್ಮೆಂಟ್ ಅಂದರೆ ಅದು ಚಿನ್ನ. ನೆಲ, ಕಟ್ಟಡ, ಷೇರು ಇವುಗಳನ್ನ ಮಾರುವುದು ಮತ್ತು ಹಣದ ರೂಪಕ್ಕೆ ಕನ್ವರ್ಟ್ ಮಾಡುವುದು ಕಷ್ಟ. ಅಂದರೆ ಗಮನಿಸಿ ಬೇರೆ ಹೂಡಿಕೆಗಳು ಕೂಡ ಹಣದುಬ್ಬರದ ವಿರುದ್ಧ ಮೌಲ್ಯ ಕುಸಿಯದಂತೆ ಕಾಪಾಡುತ್ತವೆ. ಆದರೆ ಅವುಗಳು ಬಂಗಾರದಷ್ಟು ಲಿಕ್ವಿಡ್ ಅಲ್ಲ. ಅಂದರೆ ನಿಮಗೆ ತಕ್ಷಣ ಹಣದ ಅವಶ್ಯಕತೆ ಬಂದರೆ ನೀವು ನೆಲವನ್ನ ಅಥವಾ ಷೇರುಗಳನ್ನ ಅಥವಾ ಬೇರೆ ಹೂಡಿಕೆಯನ್ನ ಹಣದ ರೂಪಕ್ಕೆ ಪರಿವರ್ತಿಸಲು ಸಮಯ ಬೇಕಾಗುತ್ತದೆ. ಬಂಗಾರವೆಂದರೆ ಅದು ಕೈಯಲ್ಲಿ ಹಣವಿದ್ದಂತೆ ಲೆಕ್ಕ. ಮೋಸ್ಟ್ ಲಿಕ್ವಿಡ್. ಬೇಕೆಂದಾಗ ಹಣದ ರೂಪಕ್ಕೆ ಇದನ್ನ ಪರಿವರ್ತಿಸಿಕೊಳ್ಳಬಹುದು. ಈ ಕಾರಣಕ್ಕೆ ಬಂಗಾರದ ಬೆಲೆ ಏರುತ್ತಲೇ ಇರುತ್ತದೆ.
  6. ಈ ವರ್ಷ 2020 ಗ್ರೋಥ್ ರೇಟ್ ಮೈನಸ್ ನಲ್ಲಿದೆ ಹೀಗಾಗಿ ರಿಸ್ಕ್ ಅಸೆಟ್ ನಲ್ಲಿ ಹೂಡಿಕೆ ಮಾಡಲು ಯಾರೂ ಸಿದ್ದರಿಲ್ಲ. ಹೀಗಾಗಿ ಎಲ್ಲರೂ ಹಳೆಯ ಪ್ರಮಾಣಿತ ಹೂಡಿಕೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಇದು ಕೂಡ ಚಿನ್ನದ ಬೆಲೆ ಏರಿಕೆಗೆ ತಾತ್ಕಾಲಿಕ ಕಾರಣವಾಗಿದೆ.
  7. ಮೇಲಿನ ಎಲ್ಲಾ ಕಾರಣದಿಂದ ಡಿಮ್ಯಾಂಡ್ ಹೆಚ್ಚಾಗುತ್ತದೆ, ಸಪ್ಲೈ ಕೂಡ ಕಡಿಮೆಯಾಗದಿದ್ದರೂ ಬೇಡಿಕೆ ಹೆಚ್ಚಾದಂತೆಲ್ಲ ಮಧ್ಯವರ್ತಿಗಳು ಬೆಲೆಯನ್ನ ಏರಿಸುತ್ತಾರೆ. ಬೇರೆ ಸರಕಾರಗಳು ಬೆಲೆಯನ್ನ ನಿಯಂತ್ರಿಸಿ ತಮ್ಮ ಲಾಭಕ್ಕೆ ಪರಿವರ್ತಿಸಿಕೊಳ್ಳುತ್ತವೆ. ಹೀಗಾಗಿ ಬೆಲೆ ಏರಿಕೆ ಆಗುತ್ತದೆ.

ಕೊನೆ ಮಾತು: ಗಮನಿಸಿ 2021, 22 ರ ವರೆಗೂ ಇದು ಏರುಗತಿಯಲ್ಲಿ ಇರುತ್ತದೆ. 2023 ಅಥವಾ 2024 ರಲ್ಲಿ ಇದು ಕುಸಿತ ಕಾಣುತ್ತದೆ. ಇದನ್ನ ಸದ್ಯದ ಸ್ಥಿತಿಯಿಂದ ಬಚಾವಾಗಲು, ಅಥವಾ ಬೇರೆ ಹೂಡಿಕೆಯ ಮೇಲೆ ನಂಬಿಕೆ ಇರದ ಕಾರಣ ಕೊಳ್ಳುವುದಿದ್ದರೆ ಸ್ವಲ್ಪ ನಿಧಾನಿಸುವುದು ಒಳ್ಳೆಯದು. ಗ್ರಾಂ ಚಿನ್ನದ ಬೆಲೆ ಐದು ಸಾವಿರ ತಲುಪಿದೆ. ಇದು 2021 ರಲ್ಲಿ 8 ರಿಂದ 10 ಸಾವಿರ ತಲುಪುತ್ತದೆ ಎನ್ನುವ ಊಹಾಪೋಹಗಳು ಕೂಡ ಮಾರುಕಟ್ಟೆಯಲ್ಲಿ ಬಹಳವಿದೆ. 2022ರ ನಂತರ ಇದರ ಮೇಲಿನ ಬೆಲೆ ಸಮಸ್ಥಿತಿಗೆ ಬರಲಿದೆ. ಒಂದಷ್ಟು ವರ್ಷದ ನಂತರ ಮತ್ತೆ ಏರಿಕೆಯಾಗುತ್ತದೆ. ಹೀಗಾಗಿ ಚಿನ್ನವನ್ನ ಬಹಳ ವರ್ಷಗಳ ಹೂಡಿಕೆ ಎಂದು ಪರಿಗಣಿಸಿದರೆ ಇದರ ಮೇಲಿನ ಹೂಡಿಕೆ ನಿಮಗೆಂದೂ ನಷ್ಟ ಮಾಡುವುದಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com