ಬ್ಯುರೋ ಮೂವತ್ತೊಂಭತ್ತು; ನಾರ್ತ್ ಕೊರಿಯಾಗೆ ಹರಿಸುತ್ತಿದೆ ಹಣದ ಶರಬತ್ತು!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಬ್ಯುರೋ ಮೂವತ್ತೊಂಭತ್ತು ; ನಾರ್ತ್ ಕೊರಿಯಾಗೆ ಹರಿಸುತ್ತಿದೆ ಹಣದ ಶರಬತ್ತು!
ಬ್ಯುರೋ ಮೂವತ್ತೊಂಭತ್ತು ; ನಾರ್ತ್ ಕೊರಿಯಾಗೆ ಹರಿಸುತ್ತಿದೆ ಹಣದ ಶರಬತ್ತು!

ಅದು 1953ರ ಸಮಯ ಅಮೆರಿಕಾ, ನಾರ್ತ್ ಕೊರಿಯಾದ ಮೇಲೆ ಅಣುದಾಳಿ ಮಾಡುವ ಬೆದರಿಕೆ ಒಡ್ಡುತ್ತದೆ. ಹೀಗೆ ಅಮೆರಿಕಾ ಬೆದರಿಕೆ ಹಾಕಿದಾಗ ಉತ್ತರ ಕೊರಿಯಾ ನಡುಗಿ ಹೋಗುತ್ತದೆ. ಅದಕ್ಕೆ ಕಾರಣ ಬಿಡಿಸಿ ಹೇಳಬೇಕಾಗ ಅವಶ್ಯಕೆತೆ ಇಲ್ಲ ಎಂದುಕೊಳ್ಳುವೆ. 

1945 ರಲ್ಲೇ ಜಪಾನ್ ಮೇಲೆ ಅಣುದಾಳಿ ಮಾಡಿದ್ದ ಅಮೆರಿಕಾ ನಮ್ಮ ಮೇಲೆ ಕೂಡ ಈ ರೀತಿಯ ದಾಳಿ ಮಾಡಬಹುದು ಎನ್ನುವ ಒಂದಂಶ ನಾರ್ತ್ ಕೊರಿಯಾದ ಅಧ್ಯಕ್ಷರಾದ ಕಿಮ್ ಸಂಗ್ 2 ( Kim Il-sung) ಅವರ ಮನಸ್ಸಿನಲ್ಲಿ ಹಾದುಹೋಗುತ್ತದೆ. ಅಂದು ಅವರು ತಮ್ಮ ವರ್ಕಿಂಗ್ ಪಾರ್ಟಿ ಆಫ್ ಕೊರಿಯಾ (WPK ) ಮೀಟಿಂಗ್ ನಲ್ಲಿ ನಾರ್ತ್ ಕೊರಿಯವನ್ನ ಅಣು ಶಕ್ತಿ ರಾಷ್ಟ್ರವನ್ನಾಗಿ ಮಾಡುವ ಪ್ರಸ್ತಾಪವನ್ನ ಮುಂದಿಡುತ್ತಾರೆ. ಅಮೆರಿಕಾ ತನ್ನ ಜೀವಿತಾವಧಿಯಲ್ಲಿ ನಾರ್ತ್ ಕೊರಿಯಾ ಕಡೆಗೆ ಕಣ್ಣೆತ್ತಿ ನೋಡಬಾರದು ಎಂದು ಅವರು ಪಾರ್ಟಿ ಮೀಟಿಂಗ್ ನಲ್ಲಿ ಹೇಳಿದ್ದರಂತೆ. ಇಂದು ಅಮೆರಿಕಾದ ಪ್ರಮುಖ ನಗರಗಳ ಮೇಲೆ ಅಣು ತಲೆ ಸಿಡಿಯನ್ನ ಹೊತ್ತು ಹಾರಬಲ್ಲ ಕ್ಷಿಪಣಿಗಳು ನಾರ್ತ್ ಕೊರಿಯಾ ಬಳಿ ಇದೆ. ನಾರ್ತ್ ಕೊರಿಯಾ ಬೆಳೆದ ರೀತಿ ಇದೆಯಲ್ಲಾ ಅದು ಎಂಥಹವರನ್ನೂ ಅಚ್ಚರಿಗೆ  ದೂಡುತ್ತದೆ. ಇಡೀ ಜಗತ್ತಿನಿಂದ ಬಹಿಷ್ಕಾರ ಹಾಕಿಸಿಕೊಂಡ ಪುಟ್ಟ ರಾಷ್ಟ್ರ ಇಂದು ಅಣು ಶಕ್ತಿ ರಾಷ್ಟ್ರವಾಗಿದೆ.

ಬದಲಾವಣೆಯತ್ತ ನಾರ್ತ್ ಕೊರಿಯಾ?

ಉತ್ತರ ಕೊರಿಯಾ ಎಂದರೆ ನಮಗೆ ಆ ದೇಶದ ಬಗ್ಗೆ ಚಿತ್ರಣ ತಕ್ಷಣ ಮೂಡುವುದಿಲ್ಲ ಆದರೆ ನಾರ್ತ್ ಕೊರಿಯಾ ಎಂದ ತಕ್ಷಣ ನಮಗೆ ಅಲ್ಲಿನ ಅಧ್ಯಕ್ಷ, ಆತನ ದುರಾಡಳಿತ, ಅಲ್ಲಿನ ಜನರ ಬವಣೆಗಳು ತಕ್ಷಣ ನೆನಪಾಗುತ್ತದೆ. ಹಾಗೆ ನೋಡಲು ಹೋದರೆ ನಾರ್ತ್ ಕೊರಿಯಾದ ವಿಷಯಗಳು ಕೂಡ ಹೊರ ಜಗತ್ತಿಗೆ ತಿಳಿಯುವುದು ಅಷ್ಟಕಷ್ಟೇ. 
  
ಚೀನಾ ದೇಶದಂತೆ ಈ ದೇಶದಲ್ಲೂ ಪ್ರಜೆಗಳಿಗೆ ತಮಗನಿಸಿದ ಎಲ್ಲಾ ಕೆಲಸಗಳನ್ನು ಮಾಡುವ ಹಕ್ಕಿಲ್ಲ. ಇದೊಂದು ಕಡೆಯಾದರೆ ಇನ್ನೊಂದೆಡೆ ಜಗತ್ತಿನ ದೊಡ್ಡಣ್ಣ ಅಮೇರಿಕಾ ಈ ಪುಟ್ಟ ದೇಶದ ಮೇಲೆ ಅನಾದಿ ಕಾಲದಿಂದಲೂ ಬಹಿಷ್ಕಾರ ಅಥವಾ ಇಂಗ್ಲಿಷ್ನಲ್ಲಿ ಹೇಳುವಂತೆ ಸ್ಯಾಂಕ್ಷನ್ ಹಾಕುತ್ತಲೇ ಬಂದಿದೆ. ಹೀಗಾಗಿ ಈ ದೇಶ ಆರ್ಥಿಕವಾಗಿ ಸಬಲವಾಗುವುದು ಹೇಗೆ? ಅಲ್ಲಿನ ಜನರ ಜೀವನ ಮಟ್ಟ ಉತ್ತಮವಾಗುವುದು ಹೇಗೆ?

ಉದಾಹರಣೆ ನೋಡಿ ಇಡಿ ಜಗತ್ತನ್ನ ಒಂದು ಪುಟ್ಟ ಹಳ್ಳಿ ಎಂದುಕೊಳ್ಳಿ ನಾರ್ತ್ ಕೊರಿಯಾ ಆ ಹಳ್ಳಿಯಲ್ಲಿ ವಾಸಿಸುವ ಒಂದು ಕುಟುಂಬ ಎಂದುಕೊಳ್ಳಿ. ಅಮೇರಿಕಾ ಆ ಹಳ್ಳಿಯ ಪಂಚಾಯತಿ ಅಧ್ಯಕ್ಷ. ಆತ ಹೇಳುತ್ತಾನೆ ಯಾರೂ ನಾರ್ತ್ ಕೊರಿಯಾ ಎನ್ನುವ ಕುಟುಂಬಕ್ಕೆ ಸಹಾಯ ಮಾಡಬಾರದು ಅವರೊಂದಿಗೆ ಯಾವುದೇ ವಹಿವಾಟು ಇಟ್ಟುಕೊಳ್ಳಬಾರದು ಎಂದು. ಈ ಕುಟುಂಬ ಬದುಕುವುದು ಹೇಗೆ? ನಾರ್ತ್ ಕೊರಿಯಾದ ಕಥೆ ವಿಶ್ವದ ಮಟ್ಟದಲ್ಲಿ ಆಗಿರುವುದು ಹೀಗೆ. ಆದರೆ ನಿಮಗೊಂದು ಅಚ್ಚರಿಯ ವಿಷಯ ತಿಳಿಸಬೇಕಿದೆ... ಅದೇನು ಗೊತ್ತೇ? 2016 ರ ಅಂಕಿ-ಅಂಶದ ಪ್ರಕಾರ ನಾರ್ತ್ ಕೊರಿಯಾ ಎಕಾನಮಿ ಕಳೆದ 17 ವರ್ಷಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಂಡಿದೆ. ಅಲ್ಲಿನ ಜಿಡಿಪಿ ಹೆಚ್ಚಿದೆ. ಜನರ ಖರೀದಿ ಶಕ್ತಿ ಹೆಚ್ಚಿದೆ. ಹೌದ? ಎನ್ನುವ ಪ್ರಶ್ನೆ ಈಗ ನಿಮ್ಮದು. ಅಮೇರಿಕಾ ಬಹಿಷ್ಕಾರ ಸಡಿಲಿಸಿತಾ? ಎನ್ನುವ ಇನ್ನೊಂದು ಪ್ರಶ್ನೆಯೂ ನಿಮ್ಮಿಂದ ಬರಬಹುದು. ನಾರ್ತ್ ಕೊರಿಯಾ ಎಕಾನಮಿ ಅಭಿವೃದ್ಧಿ ಕಾಣುತ್ತಿರುವುದು ಸತ್ಯ ಅಮೇರಿಕಾ ಸ್ಯಾಂಕ್ಷನ್ ಸಡಿಲಿಸದೆ ಇರುವುದು ಕೂಡ ಸತ್ಯ!!!.

ಹಾಗಾದರೆ ಅಲ್ಲಿನ ಜನರ ಬವಣೆಗಳು ಕಡಿಮೆಯಾದವೇ? ನಾರ್ತ್ ಕೊರಿಯಾ ಹಣವನ್ನ ಹೇಗೆ ಸಂಪಾದಿಸುತ್ತದೆ?

ಜಗತ್ತಿನಿಂದ ಬಹಿಷ್ಕಾರ ಹಾಕಿಸಿಕೊಂಡ ಪುಟ್ಟ ದೇಶ ಏನು ಮಾಡಬಹುದು? ಅದನ್ನ ನಾರ್ತ್ ಕೊರಿಯಾ ಮಾಡುತ್ತಿದೆ. ಅದನ್ನ ಆಳುತ್ತಿರುವವರಿಗೆ ಸರಿ ತಪ್ಪುಗಳ ಗೆರೆಯನ್ನ ಹಾಕುವ ಚಿಂತೆಯಿಲ್ಲ. ಅವರದೇನಿದ್ದರೂ ದೇಶ ನಡೆಸಲು ದುಡ್ಡು ಸಂಪಾದಿಸುವುದು. ಇದಷ್ಟೇ ಅಲ್ಲದೆ ನಾರ್ತ್ ಕೊರಿಯವನ್ನ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಕಿಮ್ ಮನೆತನ ದೇಶಕ್ಕೆ ಪರ್ಯಾಯವಾಗಿ ತಮ್ಮದೇ ಆದ ಆದಾಯದ ಮೂಲವನ್ನ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನ ದೇಶದ ಹಣಕಾಸು ಮಂತ್ರಿ ಕೂಡ ಪ್ರಶ್ನಿಸುವ ಹಕ್ಕನ್ನ ಹೊಂದಿಲ್ಲ.

ಗಣಿಗಾರಿಕೆ ಮತ್ತು ಕಲ್ಲಿದ್ದಲು:

ನಾರ್ತ್ ಕೊರಿಯಾ ದೇಶ ಕಲ್ಲಿದ್ದಲ್ಲನ್ನ ಮಾರಿ ಹಣ ಸಂಪಾದಿಸುತ್ತದೆ. ಚೀನಾ ನಾರ್ತ್ ಕೊರಿಯಾ ದೇಶದ ಅತ್ಯಂತ ದೊಡ್ಡ ಟ್ರೇಡ್ ಪಾರ್ಟ್ನರ್. ಹಲವು ಖರೀದಿಗಳು ಪುಸ್ತಕದಲ್ಲಿ ದಾಖಲಾಗುವುದಿಲ್ಲ. ಆದರೇನು ನಾರ್ತ್ ಕೊರಿಯಾ ದೇಶದ ಬಂಡಿ ಸಾಗಲು ಬೇಕಾಗುವ ಹಣವನ್ನ ಚೀನಾ ಸುರಿಯುತ್ತದೆ. ಚೀನಾ ದೇಶದಲ್ಲಿ ಕೂಡ ಹೆಚ್ಚು ಕಡಿಮೆ ನಾರ್ತ್ ಕೊರಿಯಾ ರೀತಿಯಲ್ಲೇ ಆಡಳಿತ ನಡೆಯುವುದರಿಂದ, ಅಮೆರಿಕಾ ಎಷ್ಟೇ ಬಹಿಷ್ಕಾರ ಎಂದರೂ ಚೀನಾ ಅಲ್ಲಿ ತಲೆಯಾಡಿಸಿ, ಇತ್ತ ತನ್ನಿಚ್ಛೆಗೆ ಬಂದದ್ದು ಮಾಡುತ್ತಾ ಹೋಗುತ್ತದೆ.

ನಕಲಿ ಹಣವನ್ನ ಮುದ್ರಿಸುತ್ತದೆ:

ನಾರ್ತ್ ಕೊರಿಯಾ ದೇಶದಲ್ಲಿ ಕಪ್ಪು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವುದು ಅಮೆರಿಕಾದ ಡಾಲರ್! ನಂಬಲು ಅಸಾಧ್ಯ ಎನಿಸುತ್ತದೆ ಆದರೆ ಇದು ಸತ್ಯ. ಇಲ್ಲಿನ ಸಾಮಾನ್ಯ ಪ್ರಜೆ ತನ್ನ ದೈನಂದಿನ ವ್ಯವಹಾರಕ್ಕೆ ಡಾಲರ್ ಅನ್ನು ಬಳಸುತ್ತಾನೆ. ಅಮೇರಿಕನ್ ನಕಲಿ ಡಾಲರ್ ಮುದ್ರಿಸಿ ಅಮೇರಿಕಾ ದೇಶದಲ್ಲಿ ಚಲಾವಣೆಗೆ ಬಿಡುವ ಒಂದು ಸಂಘಟಿತ ಕಛೇರಿಯನ್ನ ನಾರ್ತ್ ಕೊರಿಯಾ ಹೊಂದಿದೆ. ಇಷ್ಟೇಕೆ ತನ್ನ ದೊಡ್ಡ ಟ್ರೇಡ್ ಪಾರ್ಟ್ನರ್ ಚೀನಾ ದೇಶದ ಕರೆನ್ಸಿಯನ್ನ ಕೂಡ ನಕಲು ಮಾಡುವುದರಲ್ಲಿ ನಾರ್ತ್ ಕೊರಿಯಾ ಸಿದ್ಧ ಹಸ್ತ!

ಸೈಬರ್ ಕ್ರೈಂ:  

ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್ನಿಂದ 81 ಮಿಲಿಯನ್ ಅಮೆರಿಕನ್ ಡಾಲರ್ ಹಣ ನಾಪತ್ತೆಯಾಗಿದ್ದು ಇಂದಿಗೆ ಇತಿಹಾಸ. ಇದನ್ನ ಮಾಡಿದವರು ನಾರ್ತ್ ಕೊರಿಯಾ ಹ್ಯಾಕರ್ಸ್ ಎನ್ನುವುದು ಇಂದಿಗೆ ಎಲ್ಲರಿಗೂ ತಿಳಿದಿರುವ ಸತ್ಯ. ಹೀಗೆ ಸೋನಿ ಕಂಪನಿಯ ಮೇಲೂ ದಾಳಿ ನಡೆಸಿತ್ತು. ನಾರ್ತ್ ಕೊರಿಯಾದ ಹ್ಯಾಕರ್ಸ್ ಸದಾ ವ್ಯವಸ್ಥೆಯಲ್ಲಿನ ಲೋಪದೋಷಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಮುಂದಿನ ಬೇಟೆಗೆ ಅವರು ಸದಾ ಸಿದ್ಧವಾಗಿರುತ್ತಾರೆ. ಇತ್ತೀಚಿಗೆ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಮೇಲೆ ಇವರ ಕಣ್ಣು ಬಿದ್ದಿದೆ ಎನ್ನುವುದು ಸುದ್ದಿ ಕೂಡ ವಿತ್ತ ಜಗತ್ತಿನಲ್ಲಿ ಹರಿದಾಡುತ್ತಿದೆ.

ಮಿತ್ರ ರಾಷ್ಟ್ರಗಳಿಗೆ ತನ್ನ ಜನರ ವಿಲೇವಾರಿ ಮಾಡುವ ವ್ಯವಹಾರ:

ನಿಮಗೆ ಆಶ್ಚರ್ಯ ಹುಟ್ಟಿಸುವ ವಿಷಯಗಳಿವೆ. ಆಫ್ರಿಕಾ ಖಂಡದ ಹಲವು ದೇಶಗಳ ಮಿಲಟರಿಗೆ ಮತ್ತು ಪ್ರೆಸಿಡೆಂಟ್ ಗಳ ಅಂಗರಕ್ಷಕರಿಗೆ ಮಾರ್ಷಲ್ ಆರ್ಟ್ ಕಲಿಸುವುದು ಇದೆ ನಾರ್ತ್ ಕೊರಿಯಾ. ಇವುಗಳಲ್ಲಿ ಅಂಗೋಲ ಪ್ರಮುಖವಾದುದು. ಅಂತೆಯೇ ಚೀನಾ ದೇಶದಲ್ಲಿ ಕೆಲಸ ಮಾಡುತ್ತಿರುವ ನಾರ್ತ್ ಕೊರಿಯಾ ಕೆಲಸಗಾರರ ಸಂಖ್ಯೆಯೂ ಬಹಳವಿದೆ. ನಾರ್ತ್ ಕೊರಿಯಾ ಸರಕಾರ ತನ್ನ ಪ್ರಜೆಗಳನ್ನ ಗುಲಾಮರಂತೆ ಕೆಲಸ ಮಾಡಲು ಇಷ್ಟು ವರ್ಷಕ್ಕೆ ಅಂತ ಗುತ್ತಿಗೆ ನೀಡುತ್ತದೆ. ಚೀನಾ ಮಾತ್ರವಲ್ಲದೆ ರಿಪಬ್ಲಿಕ್ ಆಫ್ ಕಾಂಗೊ ಎನ್ನುವ ದೇಶದಲ್ಲೂ ನಾರ್ತ್ ಕೊರಿಯಾ ಪ್ರಜೆಗಳು ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಕುವೈತ್ ದೇಶದ ಕಟ್ಟಡ ಕಾಮಗಾರಿ ಕೆಲಸಕ್ಕೆ ಬೇಕಾಗುವ ಕೆಲಸಗಾರರ ವ್ಯವಸ್ಥೆ ಕೂಡ ನಾರ್ತ್ ಕೊರಿಯಾ ಮಾಡಿದೆ. ಓಮನ್, ಕತಾರ್ ದೇಶಗಳು ಕೂಡ ನಾರ್ತ್ ಕೊರಿಯಾಯಿಂದ ಜನರನ್ನ ಕೆಲಸಕ್ಕೆ ಆಮದು ಮಾಡಿಕೊಂಡಿವೆ. ಬದಲಿಗೆ ನಾರ್ತ್ ಕೊರಿಯಾ ದೇಶಕ್ಕೆ ದೊಡ್ಡ ಗಂಟು ಸಂದಾಯವಾಗುತ್ತದೆ.

ನಾರ್ತ್ ಕೊರಿಯಾದಿಂದ ಕೆಲಸಕ್ಕೆ ಎಂದು ಅಲ್ಲಿನ ಪ್ರಜೆಗಳನ್ನ ಗುತ್ತಿಗೆ ಆಧಾರದ ಮೇಲೆ ಕೊಂಡ ದೇಶಗಳ ಪಟ್ಟಿ ಮಾಡುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯಾಗುತ್ತದೆ. ಹಣವೆಂಬುದು ಇಂದಿನ ಜೀವನಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾದದ್ದು ಅದು ಸರಿಯಾದ ಮಾರ್ಗದಲ್ಲಿ ಬಂದರೆ ಸರಿ ಇಲ್ಲದಿದ್ದರೆ ಹೇಗಾದರೂ ಸರಿ ಅದನ್ನ ಪಡೆದೇ ತಿರುತ್ತೇವೆ ಎನ್ನುವ ಮನೋಭಾವ ಸರಕಾರಕ್ಕೆ ಬಂದರೆ ಗತಿಯೇನು? ಇಂದು ನಾರ್ತ್ ಕೊರಿಯಾ ದೇಶದಲ್ಲಿ ಇದು ಕಾನೂನು ಬಾಹಿರ ಎನ್ನುವ ಯಾವ ಉದ್ದಿಮೆಯೂ ಇಲ್ಲ. ಸರಕಾರ ಬೊಕ್ಕಸಕ್ಕೆ ಹಣ ಬರುವ ಯಾವುದೇ ಕೆಲಸವಿರಲಿ ಅದಕ್ಕೆ ತಕ್ಷಣ ಸರಕಾರದ ಅಧಿಕೃತ ಮುದ್ರೆ ಬೀಳುತ್ತದೆ. ನಮಗೆಲ್ಲಾ ಅಲ್ಲಿ ಪ್ರಜೆಗಳಿಗೆ ತನ್ನ ಸರಕಾರ ವಿರುದ್ಧ ಮಾತನಾಡುವ ಹಕ್ಕಿಲ್ಲ ಮತ್ತು ಆ ದೇಶ ಸರ್ವಾಧಿಕಾರಿಯ ಹಿಡಿತದಲ್ಲಿದೆ ಎನ್ನುವುದು ಮಾತ್ರ ಗೊತ್ತು. ಆದರೆ ಅಲ್ಲಿನ ವಸ್ತುಸ್ಥಿತಿ ನಾವಂದುಕೊಂಡಿರುವುದಕ್ಕಿಂತ ಬಹಳ ಕೆಟ್ಟದಾಗಿದೆ. ಮನಷ್ಯರ ಮಾರಾಟ ದೇಶದ ಒಳಗೆ ಮತ್ತು ಹೊರಗೆ ಎಗ್ಗಿಲ್ಲದೆ ನಡೆಯುತ್ತಿದೆ. ಹೆಸರಿಗೆ ಮಾತ್ರ ನಿಬಂಧನೆ, ಸ್ಯಾಂಕ್ಷನ್... ಎಲ್ಲರ ಕಣ್ಣಿಗೂ ಕಾಣುವಂತೆ ನಡೆಯುತ್ತಿರುವ ಈ ಕರಾಳ ದಂಧೆಗೆ ಮಾತ್ರ ಯಾರೂ ಚಕಾರ ಎತ್ತುವುದಿಲ್ಲ. ಏಕೆಂದೆರೆ ಬೃಹತ್ ರಾಷ್ಟ್ರಗಳಾದ ರಷ್ಯಾ, ಚೀನಾ ಜೊತೆಗೆ ಯುನೈಟೆಡ್ ಅರಬ್ ಒಕ್ಕೊಟ, ಆಫ್ರಿಕನ್ ದೇಶಗಳು ಎಲ್ಲರೂ ಕಡಿಮೆ ಬೆಲೆಗೆ ಸಿಕ್ಕ ನಾರ್ತ್ ಕೊರಿಯನ್ ಕಾರ್ಮಿಕರ ರಕ್ತ ಹೀರುವುದರಲ್ಲಿ ನಿರತರು. ಅವರದು ಕೂಡ ಹಣದ ಲೆಕ್ಕಾಚಾರ ಅಷ್ಟೇ. ನಮಗೆ ಲಾಭ ನಾವು ಮಾಡುತ್ತೇವೆ ಎನ್ನುವ ಮನೋಭಾವ.

ಗಮನಿಸಿ ನಾರ್ತ್ ಕೊರಿಯಾ ತನ್ನ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಜನರನ್ನ ಬೇರೆ ದೇಶಗಳಿಗೆ ಕೆಲಸಕ್ಕೆ ಎಂದು ಗುತ್ತಿಗೆ ಆಧಾರದ ಮೇಲೆ ಕಳಿಸುತ್ತದೆ. ಅವರು ಮಾತನಾಡುವುದು, ಪ್ರವಾಸ ಹೋಗುವುದು ಎಲ್ಲವೂ ಬಹಳವಾಗಿ ನಿಯಂತ್ರಣದಲ್ಲಿರುತ್ತದೆ. ಹೀಗೆ ಹೊರ ದೇಶದಲ್ಲಿ ಕೆಲಸ ಮಾಡುವವರ ಹಣ ಸಂಗ್ರಹಣೆ ಕೆಲಸವನ್ನ WPK ಯ ಆಫೀಸ್ 39 ಮಾಡುತ್ತದೆ. ಹೀಗೆ ಹೊರದೇಶಗಳಿಗೆ ಕೆಲಸಕ್ಕೆ ಕಳಿಸಿದ ತನ್ನ ಎಲ್ಲಾ ತರಹದ ಜನರಿಂದ ಅದು ಗಳಿಸುವ ಆದಾಯ ವಾರ್ಷಿಕ ಒಂದು ಬಿಲಿಯನ್ ಡಾಲರ್ ಎನ್ನುತ್ತದೆ ಒಂದು ಅಂಕಿ-ಅಂಶ. ಹೀಗೆ ಹೊರ ದೇಶದಲ್ಲಿರುವ ತನ್ನ ನಿಪುಣ ಕೆಲಸಗಾರರಿಗೆ ಆಫೀಸ್ 39 ಒಂದಷ್ಟು ಕರುಣೆ ತೋರುತ್ತದೆ. ಅಲ್ಲಿಲ್ಲಿ ತಿರುಗಾಡಲು ಅನುಮತಿ ಕೊಡುತ್ತದೆ. ಆದರೆ ಅವರು ಜಗತ್ತಿನ ಯಾವುದೇ ಭಾಗದಲ್ಲಿರಲಿ ದೇಶದ ನಾಯಕತ್ವದ ವಿರುದ್ಧ ಮಾತನಾಡುವಂತಿಲ್ಲ.

ಶಸ್ತ್ರಾಸ್ತ ಮಾರಾಟ:

ಹಲವು ಆಫ್ರಿಕನ್ ದೇಶಗಳು ನಾರ್ತ್ ಕೊರಿಯಾದಿಂದ ಮದ್ದು ಗುಂಡುಗಳನ್ನ ಖರೀದಿ ಮಾಡುತ್ತಿವೆ. ಹೊರ ಜಗತ್ತಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಈ ದೇಶಗಳು ನಾರ್ತ್ ಕೊರಿಯಾ ಬಳಿ ಕೊಳ್ಳುತ್ತಿವೆ. ಜೊತೆಗೆ ಆಂತರಿಕ ಕಲಹದಲ್ಲಿ ಆಗುವ ಸಾವು ನೋವುಗಳನ್ನ ಆರೈಕೆ ಮಾಡುವುದಕ್ಕೆ ಎಂದು ನಾರ್ತ್ ಕೊರಿಯಾ ತನ್ನ ವೈದ್ಯರನ್ನ ಪ್ಯಾಕೇಜ್ ಡೀಲ್ ಮೂಲಕ ಇಷ್ಟು ವರ್ಷಕ್ಕೆ ಎಂದು ಆಫ್ರಿಕನ್ ದೇಶಗಳಿಗೆ ಗುತ್ತಿಗೆ ನೀಡುತ್ತಿದೆ.

ಮಾದಕ ವಸ್ತುಗಳ ಮಾರಾಟ:

ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಲಾಭ ತಂದುಕೊಡುತ್ತಿರುವ ಕೆಲವೇ ಕೆಲವು ಉದ್ದಿಮೆಗಳಲ್ಲಿ ಮಾದಕ ವಸ್ತುಗಳ ಮಾರಾಟ ಕೂಡ ಒಂದು. ನಾರ್ತ್ ಕೊರಿಯಾ ತನ್ನ ದೇಶದಲ್ಲಿ ಇಂತಹ ಮಾದಕ ವಸ್ತುಗಳ ಬೆಳೆಯನ್ನ ಬೆಳೆಯುತ್ತಿದೆ. ಸರಕಾರದ ಅನುಮತಿ ಇದ್ದ ಮೇಲೆ ಯಾವುದರ ಭಯ?

ಇಂತಹ ಹಣದ ವಹಿವಾಟು ನಿಯಂತ್ರಿಸುವುದು ಆಫೀಸ್ 39:
ವರ್ಕಿಂಗ್ ಪಾರ್ಟಿ ಆಫ್ ಕೊರಿಯಾ (WPK ) ದಲ್ಲಿ ಇಂತಹ ಹಣದ ವಹಿವಾಟನ್ನು ನಿರ್ವಹಿಸಲು ಇರುವ ವ್ಯವಸ್ಥೆಗೆ ಆಫೀಸ್ 39 ಅಥವಾ ಬ್ಯುರೋ 39 ಅಥವಾ ಡಿವಿಷನ್ 39 ಎನ್ನುವ ಹೆಸರಿದೆ. ಪಾರ್ಟಿಯ ಕಾರ್ಯಕರ್ತರು ಮತ್ತು ನಾರ್ತ್ ಕೊರಿಯಾದ ಜನರ ನಡುವೆ ಇದು ಆಫೀಸ್ 39 ಎಂದೇ ಪ್ರಸಿದ್ಧಿ ಪಡೆದಿದೆ. ಹೀಗೆ ವಿದೇಶಗಳಲ್ಲಿ ಮಾಡುವ ಒಪ್ಪಿತವಲ್ಲದ ಹಣವನ್ನ ತನ್ನ ದೇಶಕ್ಕೆ ತರಿಸಿಕೊಳ್ಳುವ ಕೆಲಸ ಮತ್ತು ಅದನ್ನ ಕಿಮ್ ಮನೆತನಕ್ಕೆ ಸರಿಯಾಗಿ ವಿಲೇವಾರಿ ಮಾಡುವ ಕೆಲಸವನ್ನ ಈ ಆಫೀಸ್ 39 ಮಾಡುತ್ತದೆ. ವಿದೇಶಗಳಲ್ಲಿ ತನ್ನ ಹೋಟೆಲ್ ತೆರೆಯುವುದು ಮತ್ತಿತ್ತರ ಉದ್ದಿಮೆಗಳನ್ನ ತೆರೆಯುವುದು ಆ ಮೂಲಕ ಹಣವನ್ನ ವ್ಯವಸ್ಥಿತವಾಗಿ ನಾರ್ತ್ ಕೊರಿಯಾಕ್ಕೆ ಕಳಿಸುವುದು ಇದು ಮಾಡುತ್ತದೆ. ಪಿಯಂಗ್ ಯೊಂಗ್ ಎನ್ನುವ ಸರಪಳಿ ಹೋಟೆಲ್ ಉದ್ದಿಮೆಯನ್ನ ಆಫೀಸ್ 39 ನಿಯಂತ್ರಿಸುತ್ತಿದೆ. ಈ ಹೋಟೆಲ್ ಜಗತ್ತಿನ ಹಲವಾರು ದೇಶದಲ್ಲಿ ಸ್ಥಾಪಿತವಾಗಿದೆ. ಇವುಗಳ ಮೂಲಕ ಅಂತರರಾಷ್ಟ್ರೀಯ ವಿಮೆಯನ್ನ ಕೊಳ್ಳುವುದು, ಇಂತಹ ವಿಮೆಯಲ್ಲಿ ಅವ್ಯವಹಾರ ನಡೆಸುವುದು ಅಲ್ಲೂ ಹಣವನ್ನ ದೋಚುವುದರಲ್ಲಿ ಕೂಡ ಈ ಆಫೀಸ್ ಸಿದ್ಧಹಸ್ತ.

ನಾರ್ತ್ ಕೊರಿಯಾ ಕಳೆದ 17 ವರ್ಷಕ್ಕಿಂತ ವೇಗವಾಗಿ ಬೆಳೆಯುತ್ತಿದೆಯಂತೆ ಹಾಗಂತ ಅಂಕಿ-ಅಂಶ ಹೇಳುತ್ತೆ. ನಾನು ಪ್ರಾರಂಭದಲ್ಲಿ ಮತ್ತು ಈಗಲೂ ಅಂಕಿ ಸಂಖ್ಯೆಯನ್ನ ನಮೂದಿಸುವದಿಲ್ಲ ಲಕ್ಷಾಂತರ ಜನರ ಬೆವರು ಮತ್ತು ರಕ್ತದಿಂದ ತಯಾರಾದ ಆ ಅಂಕಿ-ಅಂಶ ಕೇವಲ ಸಂಖ್ಯೆಯಷ್ಟೇ.  ಹೀಗೆ ಸಂಗ್ರಹವಾದ ಹಣ ಕಂಪ್ಯೂಟರ್ ಪರದೆ ಮೇಲಿನ ಸಂಖ್ಯೆಯಾಗಿ ಉಳಿಯುತ್ತದೆ. ಅದನ್ನ ನೀವು ಒಮ್ಮೆಲೇ ಬಳಸುವಿರೇನು? ಹೀಗೆ ತಯಾರಾದ ಬ್ಲಡ್ ಮನಿ ಮಾತ್ರ ಯಾರ ಕಣ್ಣಿಗೂ ಕೆಟ್ಟದಾಗಿ ಕಾಣುವುದಿಲ್ಲ. ಅಮೆರಿಕಾದ ದಿಗ್ಬಂಧನದ ನಡುವೆಯೂ ಗುಡುಗುವ ನಾರ್ತ್ ಕೊರಿಯಾ ಹಲವರ ಕಣ್ಣಿಗೆ ಹೀರೋ ಆಗಿ ಕಂಡರೂ ಆಶ್ಚರ್ಯವಿಲ್ಲ.

ಹೀಗೆ ನಾರ್ತ್ ಕೊರಿಯಾ ದೇಶದ ಹಣದ ವಹಿವಾಟು ನಿಯಂತ್ರಿಸುವುದು ಆಫೀಸ್ 39. ಈ ದೇಶದ ಫೈನಾನ್ಸ್ ಮಿನಿಸ್ಟರ್ ಇರಬಹುದು ಅಥವಾ ಫೈನಾನ್ಸ್ ಡಿಪಾರ್ಟ್ಮೆಂಟ್ ಅವುಗಳ ಇಲ್ಲಿನ ಹಣದ ವ್ಯವಹಾರದ ಬಗ್ಗೆ ಉಸಿರೆತ್ತುವುದಿಲ್ಲ. ಹಣಕಾಸು ಮಂತ್ರಾಲಯದಲ್ಲಿ ನೇರವಾಗಿ ಬರುವ ಹಣದ ಮೇಲಷ್ಟೇ ಅದಕ್ಕೆ ಅಧಿಕಾರ. ಉಳಿದ ಎಲ್ಲಾ ಹಣವು ಸರ್ವಾಧಿಕಾರಿ ಕಿಮ್ ಮನೆಯನ್ನ ಸೇರುತ್ತದೆ. ಹೀಗೆ ತನ್ನ ಖಜಾನೆಗೆ ಸೇರಿದ ಹಣದ 20 ಅಥವಾ 30 ಭಾಗ ಮಾತ್ರ ಜನರ ಆಹಾರ ಮತ್ತಿತರ ಮೂಲಭೂತ ಬೇಡಿಕೆಗಳನ್ನ ಈಡೇರಿಸಲು ನೀಡಲಾಗುತ್ತದೆ. ಅಣು ಬಾಂಬ್ ಖರೀದಿ ಅದರ ಪರೀಕ್ಷೆ ಅಥವಾ ಯುದ್ಧ ಇನ್ನಿತರ ಖರ್ಚಿಗೂ ಫೈನಾನ್ಸ್ ಮಿನಿಸ್ಟ್ರಿಗೂ ಯಾವುದೇ ಸಂಬಂಧವಿಲ್ಲ. ಅದೇನಿದ್ದರೂ ಕಿಮ್ ತನ್ನ ಜೇಬಿನಿಂದ ತೆಗೆದು ಮಾಡುವ ಖರ್ಚು. ನಿರ್ಧಾರಗಳೂ ಅವನದ್ದೇ ಅಂತಿಮ. ಪಾರ್ಟಿಯಲ್ಲೂ ಅಷ್ಟೇ ಅವನಿಗೆ ಜಿ ಹುಜೂರ್ ಎಂದವರಿಗಷ್ಟೇ ಜಾಗ. ಇಲ್ಲದಿದ್ದರೆ ಚಿಕ್ಕಪ್ಪನಾದರೂ ಸರಿಯೇ ಅವರಿಗೆ ಮರಣದಂಡನೆ ಕಟ್ಟಿಟ್ಟ ಬುತ್ತಿ. ಹಣಕಾಸು ನಿಯಂತ್ರಿಸುವ ಆಫೀಸ್ 39ಬಹಳ ಪ್ರಸಿದ್ಧ. ಗೂಢಚಾರಿಕೆಗೆ ಕೂಡ ಇಷ್ಟೇ ಪ್ರಸಿದ್ದವಾದ ಆಫೀಸ್ 35 ಇಲ್ಲಿದೆ. ಹೀಗೆ ತಾವು ಮಾಡುವ ಪ್ರತಿ ಕೆಲಸಕ್ಕೂ ಆಫೀಸ್ ಗಳನ್ನ ತೆಗೆಯಲಾಗಿದೆ. ಇವುಗಳ ಬೇರೆ ಬೇರೆ ಕಾರ್ಯಾಂಗಗಳು. ತಮಗೆ ಒಪ್ಪಿಸಿದ ಕೆಲಸವನ್ನ ನಿಷ್ಠೆಯಿಂದ ಮಾಡುತ್ತವೆ.

ಕೊನೆ ಮಾತು: ನಾರ್ತ್ ಕೊರಿಯಾ ಖಂಡಿತ 1950ರ ದಶಕದ ನಾರ್ತ್ ಕೊರಿಯವಲ್ಲ. ಅದು ಆರ್ಥಿಕವಾಗಿ ಮತ್ತು ಭದ್ರತೆಯ ವಿಷಯದಲ್ಲಿ ಸಾಕಷ್ಟು ಸದೃಢವಾಗಿದೆ. ಆದರೆ ಅಲ್ಲಿನ ಜನರ ಸಾಮಾಜಿಕ ಮತ್ತು ಆಂತರಿಕ ಜೀವನದಲ್ಲಿ ಅಂತಹ ಬದಲಾವಣೆ ಕಂಡುಬಂದಿಲ್ಲ. ಸಮಯದ ಜೊತೆಗೆ ಒಂದಷ್ಟು ಬದಲಾವಣೆ ಆಗಿದೆ ಎನ್ನುವುದು ಬಿಟ್ಟರೆ ಹೆಚ್ಚಿನ ಸೌಲಭ್ಯ ಜನರಿಗೆ ಸಿಕ್ಕಿಲ್ಲ. ಅವರದೇನಿದ್ದರೂ ದುಡಿತ. ಸರಕಾರದ ಆಜ್ಞೆಯನ್ನ ಪಾಲಿಸುವ ರೋಬಾಟ್ ಜೀವನ. ಹೊರ ದೇಶದಲ್ಲಿರುವ ತನ್ನ ಪ್ರಜೆಗಳು ತನ್ನ ವಿರುದ್ಧ ಹೋದರೆ? ಎನ್ನುವ ಮುಂಜಾಗ್ರತೆ ಕ್ರಮವಾಗಿ ಅವರ ಕುಟುಂಬದ ಸದಸ್ಯರಲ್ಲಿ ಕೆಲವರನ್ನ ನಾರ್ತ್ ಕೊರಿಯಾದಲ್ಲಿ ಉಳಿಸಿಕೊಳ್ಳುತ್ತದೆ. ಇದು ಒತ್ತೆಯಲ್ಲದೆ ಬೇರೇನೂ ಅಲ್ಲ. ಹೊರದೇಶದಿಂದ ಅವರು ಕಳಿಸುವ ಒಂದಷ್ಟು ಹಣ, ಅಂದರೆ ಜೀವನ ನಿರ್ವಹಣೆಗೆ ಎಷ್ಟು ಬೇಕು ಅಷ್ಟು ಮಾತ್ರ ಕುಟುಂಬದ ಸದಸ್ಯರಿಗೆ ಕೊಡಲಾಗುತ್ತದೆ. ಉಳಿದದ್ದು ಕಿಮ್ ಜಾನ್ ಉನ್ ನ ಖಜಾನೆ ಸೇರುತ್ತದೆ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಎನ್ನುವುದು ಇದೆಯೇ? ಎನ್ನುವ ಪ್ರಶ್ನೆಗೆ ಉತ್ತರ ಹೇಳುವರಾರು?

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com