ಉಯ್ಘಿರ್ ಮುಸ್ಲಿಂ ಆಯ್ತು, ಈಗ ಕ್ರೈಸ್ತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕೈಯಿಟ್ಟ ಚೀನಾ!

ದಮ್ಮವನ್ನು ಬೋಧಿಸಿದ ಬೌದ್ಧಮತ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದ ನಾಡೆಂದು ಹೆಸರುವಾಸಿಯಾಗಿದ್ದ ಚೀನಾದ ಕಮ್ಯುನಿಸಮ್ ಈಗ ಅದೇ "ದಮ್ಮ"ದ ಧಮ್ಮು ಕಟ್ಟಿಸುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾ ವ್ರಣದ ನಡುವೆ, ಧಾರ್ಮಿಕ ನಂಬಿಕೆಗಳನ್ನು ಹೊಂದಿರುವವರ ಮೇಲೆ ಚೀನಾದ ದೌರ್ಜನ್ಯ ಅದರ ಮತ್ತೊಂದು ಮುಖ ಜಗತ್ತಿಗೆ ಸ್ಪಷ್ಟವಾಗಿ ಅನಾವರಣವಾಗುವಂತೆ ಮಾಡಿದೆ. ತನ್ನ ನೆಲದಲ್ಲಿಎಲ್ಲಾ ಧಾರ್ಮಿಕ ನಂಬಿಕೆಗಳು ಆಳುವ ಕಮ್ಯುನಿಸ್ಟ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ, ಅದರ ಅಡಿಯಲ್ಲಿರಬೇಕು ಎನ್ನುವುದು ಸರ್ಕಾರ ಧಾರ್ಮಿಕ ಅನುಯಾಯಿಗಳ ಸ್ವಾತಂತ್ರ್ಯ ಹರಣ ಮಾಡುತ್ತಿರುವುದರ ಹಿಂದಿನ ಉದ್ದೇಶ.

ಈ ವರೆಗೂ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಹೆಚ್ಚಾಗಿರುವ ಉಯ್ಘರ್ ಮುಸ್ಲಿಮರನ್ನು ನಿಯಂತ್ರಿಸಲು ನಡೆಸುತ್ತಿದ್ದ ಧಾರ್ಮಿಕ ಸ್ವಾತಂತ್ರ್ಯದ ಹರಣಗಳ ಹಗರಣಗಳಷ್ಟೇ ಅಲ್ಲಲ್ಲಿ ಸುದ್ದಿಯಲ್ಲಿರುತ್ತಿತ್ತು. ಈಗ ಕ್ರೈಸ್ತ ಮತಾನುಯಾಯಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. 

ನೀವು ಯಾವುದೇ ಮತ, ಧರ್ಮವನ್ನು ಅನುಸರಿಸುತ್ತಿರಿ, ಆದರೆ ಚೀನಾದಲ್ಲಿದ್ದೀರೆಂದರೆ, ಮುಲಾಜಿಲ್ಲದೇ ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಸ್ವತಃ ಸರ್ಕಾರವೇ ಮುಂದೆ ನಿಂತು ಬಗ್ಗುಬಡಿಯುತ್ತದೆ. ಬೌದ್ಧರು, ಕ್ರೈಸ್ತರು, ಮುಸ್ಲಿಮರೆಂಬ ತಾರತಮ್ಯವಿಲ್ಲದೇ ಎಲ್ಲಾ ಧಾರ್ಮಿಕ ನಂಬಿಕೆ, ಆಚರಣೆಗಳೆಲ್ಲವನ್ನೂ ಸಮಾನವಾಗಿ ಹತ್ತಿಕ್ಕುವ ಕೆಲಸ ಮಾಡುತ್ತದೆ. 

ಅದರಲ್ಲೂ ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿರುವ ಮುಸ್ಲಿಮರನ್ನಂತೂ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳೆಂದೇ ಪರಿಗಣಿಸಿ ಅಲ್ಲಿನವರ ಮಾನವ ಹಕ್ಕು, ಧಾರ್ಮಿಕ ಹಕ್ಕುಗಳನ್ನು ಕಸಿದುಕೊಂಡು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ.

ದಮ್ಮವನ್ನು ಬೋಧಿಸಿದ ಬೌದ್ಧಮತ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದ ನಾಡೆಂದು ಹೆಸರುವಾಸಿಯಾಗಿದ್ದ ಚೀನಾದ ಕಮ್ಯುನಿಸಮ್ ಈಗ ಅದೇ "ದಮ್ಮ"ದ ಧಮ್ಮು ಕಟ್ಟಿಸುತ್ತಿದೆ. ಕ್ಸಿನ್ ಜಿಯಾಂಗ್ ನ ಪ್ರಾಂತ್ಯದಲ್ಲಿ ಚೀನಾದ ಅಮಾನುಷ ವರ್ತನೆಗಳು ಕಣ್ಣಿಗೆ ರಾಚುತ್ತಿದ್ದರೂ ಜಗತ್ತಿನಲ್ಲಿ ಯಾವೊಬ್ಬ ಕಮ್ಯುನಿಸ್ಟ್ ಕಾಮ್ರೇಡ್ ಕೂಡ ತುಟಿ ಬಿಚ್ಚದೇ, ಕ್ರಾಂತಿಯ ಕಿಡಿ ಹೊತ್ತಿಸದೇ ಮೌನಕ್ಕೆ ಶರಣಾಗಿರುವುದು ಇರುವುದು ಅಚ್ಚರಿಯ ಸಂಗತಿ!  

ಏನೇ ಆದರೂ ಕಮ್ಯುನಿಷ್ಟರ ತತ್ವಗಳು, ವಿಶ್ವಮಾನವತೆಯ ಕಲ್ಪನೆ ಉಪದೇಶಗಳಿಗಷ್ಟೇ ಸೀಮಿತ. ತತ್ವ ಸಿದ್ಧಾಂತಗಳನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಸಿ ತಮ್ಮ ಬುಡಕ್ಕೆ ಬಂದಾಗ ಕಮ್ಯುನಿಷ್ಟರ ಹೆಡ್ ಕ್ವಾರ್ಟ್ರಸ್ ಚೀನಾದಲ್ಲಿ ಇದ್ಯಾವುದಕ್ಕೂ ನೋ ಎಂಟ್ರಿ ಅಷ್ಟೇ!

ಆ ದೇಶವೇ ಹಾಗೆ. ತನ್ನ ನೆಲದ ಹೊರಗಿನ ಇಸ್ಲಾಮಿಕ್ ಭಯೋತ್ಪಾದನೆ ಖಂಡಿಸಲು ಮೀನಾ-ಮೇಷ ಎಣಿಸಿ ಅಡ್ಡಗಾಲು ಹಾಕುತ್ತದೆ. ಆದರೆ ನೆರೆ ರಾಷ್ಟ್ರದ ಪ್ರತ್ಯೇಕತಾವಾದದ ಬೆಂಕಿಯ ಕಿಡಿಯಲ್ಲಿ ಚಳಿ ಕಾಯಿಸಿಕೊಳ್ಳುವ ಚಾಳಿ ಹೊಂದಿರುವ ಚೀನಾ ಸ್ವತಃ ಲಾಗಾಯ್ತಿನಿಂದಲೂ ಪ್ರತ್ಯೇಕತಾವಾದವನ್ನು ತನ್ನೊಡಲಲ್ಲಿಟ್ಟುಕೊಂಡೇ ಜೀವಿಸಿದೆ. ಕಾರಣ ಪ್ಯಾನ್ ಇಸ್ಲಾಮ್ ನ ಭಯ ಎಂದು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಚೀನಾದವರು ಭಯಪಡುತ್ತಿರುವ ಆ ಪ್ರತ್ಯೇಕತಾವಾದದ ಪ್ರದೇಶಕ್ಕೆ ಕ್ಸಿನ್ ಜಿಯಾಂಗ್ ಎಂದು ಹೆಸರು. ಇದನ್ನು ಈಸ್ಟ್‌ ತುರ್ಕಿಸ್ತಾನ್‌ ಎಂದೂ ಕರೆಯುತ್ತಾರೆ.

ಕ್ಸಿನ್ ಜಿಯಾಂಗ್ ಪ್ರದೇಶ ಹ್ಯಾನ್ ಚೀನಿಯರು, ಟರ್ಕಿಕ್, ಮಂಗೋಲಿಯನ್ನರು, ಟಿಬೇಟ್ ನ ಸಾಮ್ರಾಜ್ಯದವರು, ಉಯ್ಘರ್  ಖಗನೇಟ್ ಸೇರಿದಂತೆ ಅನೇಕ ಸಾಮ್ರಾಜ್ಯದ ರಾಜರು ಆಳ್ವಿಕೆ ನಡೆಸಿರುವ ಇತಿಹಾಸ ಹೊಂದಿದೆ. 1759 ರಲ್ಲಿ ಕ್ವಿಂಗ್ ಸಾಮ್ರಾಜ್ಯ ಈ ಪ್ರದೇಶವನ್ನು ವಶಪಡಿಸಿಕೊಂಡ ನಂತರ ಕ್ಸಿನ್ ಜಿಯಾಂಗ್ ಎಂಬ ಹೆಸರು ಬಂದಿತ್ತು. ಕ್ವಿಂಗ್ ಸಾಮ್ರಾಜ್ಯದ ಅವಧಿಯಲ್ಲಿಯೂ ಟಿಯಾನ್ಸಾನ್ ಪರ್ವತಗಳ ಉತ್ತರದಲ್ಲಿದ್ದ ಬೌದ್ಧ ಮಂಗೋಲ್ ಕ್ಸಿನ್ ಜಿಯಾಂಗ್ ಹಾಗೂ ಟಿಯಾನ್ಸಾನ್ ಪರ್ವತಗಳ ದಕ್ಷಿಣದಲ್ಲಿ ಟರ್ಕಿಕ್ ಮಾತನಾಡುವ ಮುಸ್ಲಿಮರ ನಡುವೆ ಭಿನ್ನತೆ ಇದ್ದಿದ್ದರಿಂದ ಪ್ರತ್ಯೇಕವಾದ ಆಡಳಿತವನ್ನು ನಡೆಸಲಾಗುತ್ತಿತ್ತು.

1884 ರಲ್ಲಿ ಕ್ವಿಂಗ್ ಸಾಮ್ರಾಜ್ಯ ಈ ಪ್ರದೇಶವನ್ನು ಒಗ್ಗೂಡಿಸಿ ಕ್ಸಿನ್ ಜಿಯಾಂಗ್ ಎಂಬ ಹೆಸರು ನೀಡಿತ್ತು. ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿದ್ದ ಟರ್ಕಿಕ್ ಮಾತನಾಡುವ ಮುಸ್ಲಿಮರು ಬಹುಸಂಖ್ಯಾತರಾಗಿದ್ದರು. ಆದರೆ ಟಿಬೇಟ್, ತೈವಾನ್ ನಂತಹ ಸಣ್ಣ ಸಣ್ಣ ರಾಷ್ಟ್ರಗಳನ್ನು ಕಬಳಿಸಿ, ದಕ್ಷಿಣ ಚೀನಾ ಸಮುದ್ರವನ್ನೂ ತನ್ನ ಕಬಂಧಬಾಹುಗಳಿಂದ ಆಕ್ರಮಿಸಿ, ಏಕಚಕ್ರಾಧಿಪತ್ಯ ಸ್ಥಾಪಿಸಲು ಹೆಣಗುತ್ತಿರುವ ಚೀನಾ ಕ್ಸಿನ್ ಜಿಯಾಂಗ್ ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಅಲ್ಲಲ್ಲ, ಬಹುಸಂಖ್ಯಾತರಾಗಿದ್ದವರನ್ನು ಅಲ್ಪಸಂಖ್ಯಾತರನ್ನಾಗಿಸಿ, ಈಗ ಅವರ ಸಂಖ್ಯೆಯೇ ಇಲ್ಲದಂತೆ ಮಾಡಲು ಯತ್ನಿಸುತ್ತಿದೆ. ಈಗ ಸುದ್ದಿಯಲ್ಲಿರುವ ಧಾರ್ಮಿಕ ಹಕ್ಕುಗಳನ್ನು ಕಸಿಯುತ್ತಿರುವ ಬೆಳವಣಿಗೆಗೆ ಅತ್ಯುತ್ತಮ ಉದಾಹರಣೆ.

ಈ ಹಿಂದೆಯೂ ಸಹ ಚೀನಾ ಕ್ಸಿನ್ ಜಿಯಾಂಗ್ ನಲ್ಲಿರುವ ಇಸ್ಲಾಮ್ ಧರ್ಮೀಯರ ಆಚರಣೆ ಹಾಗೂ ಸಂಪ್ರದಾಯಗಳ ವಿರುದ್ಧ ಅನೇಕ ಬಾರಿ ಕಠಿಣ ನಿಲುವು ತೆಗೆದುಕೊಂಡಿತ್ತು. ಈಗ ಅದು ಕ್ರೈಸ್ತ ಅಥವಾ ಇನ್ಯಾವುದೇ ಧಾರ್ಮಿಕ ಮತಗಳೆಡೆಗೆ ಮತ್ತಷ್ಟು ಕಠಿಣವಾಗುತ್ತಿವುದಕ್ಕೆ ಮತ್ತೆ ಸುದ್ದಿಯಲ್ಲಿದೆಯಷ್ಟೇ. ಮಂಗೋಲಿಯಾ, ಕಝಕಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಭಾರತದ ಜಮ್ಮು-ಕಾಶ್ಮೀರದೊಂದಿಗೆ ಗಡಿ ಹಂಚಿಕೊಂಡಿರುವ (ತಾಗಿದಂತೆ ಇರುವ) ಕ್ಸಿನ್ ಜಿಯಾಂಗ್ ಆಯಕಟ್ಟಿನ ದೃಷ್ಟಿ, ಆರ್ಥಿಕತೆ, ನೈಸರ್ಗಿಕ ಸಂಪನ್ಮೂಲಗಳು ಸೇರಿದಂತೆ ಹಲವು ಪ್ರಮುಖ ಅಂಶಗಳ ಕಾರಣದಿಂದ ಅತ್ಯಂತ ಮಹತ್ವ ಪಡೆದಿದೆ. ಚೀನಾಗಂತೂ ಈ ಪ್ರದೇಶ ಒಂದು ರೀತಿಯ ಜೀವ ಸೆಲೆ ಇದ್ದಂತೆ ಎಂದರೂ ತಪ್ಪಾಗಲಾರದು. ನೈಸರ್ಗಿಕ ಸಂಪನ್ಮೂಲಗಳ ದೃಷ್ಟಿಯಿಂದಲೂ ಅಥವಾ ಪ್ರತ್ಯೇಕತಾವಾದದ ಸಮಸ್ಯೆಯ ದೃಷ್ಟಿಯಿಂದಲೂ ಚೀನಾದ ಪರಮಾಪ್ತನ ಸಮಕ್ಕೆ ಹೋಲಿಸುವುದಾದರೆ ಹೆಚ್ಚು ಕಡಿಮೆ ಪಾಕಿಸ್ತಾನಕ್ಕೆ ಬಲೂಚಿಸ್ಥಾನ ಹೇಗೋ ಚೀನಾಗೆ ಕ್ಸಿನ್ ಜಿಯಾಂಗ್ ಹಾಗೆ ಎನ್ನಬಹುದು.

ಹೇಗೆ ಪಾಕಿಸ್ತಾನಕ್ಕೆ ಬಲೂಚಿಸ್ಥಾನದಿಂದ ಹೆಚ್ಚು ಪ್ರಮಾಣದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಇದೆಯೋ ಹಾಗೆಯೇ ಚೀನಾದಲ್ಲಿ ಆ ದೇಶದ ಮೂರನೇ ಒಂದರಷ್ಟು ನೈಸರ್ಗಿಕ ಅನಿಲ ಹಾಗೂ ತೈಲ ನಿಕ್ಷೇಪಗಳನ್ನು, ಅತಿ ಹೆಚ್ಚು ಪ್ರಮಾಣದ ಚಿನ್ನ, ಯುರೇನಿಯಂ ಹಾಗೂ ಇನ್ನಿತರ ಖನಿಗಳ ನಿಕ್ಷೇಪ ಇರುವುದೂ ಕ್ಸಿನ್ ಜಿಯಾಂಗ್ ನಲ್ಲೇ. ನವೀಕರಿಸಬಹುದಾದ ಇಂಧನದ ಸಾಮರ್ಥ್ಯದಲ್ಲೂ ಕ್ಸಿನ್ ಜಿಯಾಂಗ್ ಏನು ಕಡಿಮೆ ಇಲ್ಲ. ಸೋಲಾರ್, ವಿದ್ಯುತ್, ಪವನಶಕ್ತಿ ವಿದ್ಯುತ್, ಪರಮಾಣು ಶಕ್ತಿಯನ್ನು ಉತ್ಪಾದಿಸುವುದರಲ್ಲಿಯೂ ಕ್ಸಿನ್ ಜಿಯಾಂಗ್ ಅತಿಮುಖ್ಯವಾದ ಪ್ರದೇಶ. ಚೀನಾದ ಅಗತ್ಯತೆಗಳು ಹಾಗೂ ಅಭಿವೃದ್ಧಿಯಲ್ಲಿ ಕ್ಸಿನ್ ಜಿಯಾಂಗ್ ನ ಸಿಂಹಪಾಲಿನ ಪಟ್ಟಿ ಇಷ್ಟಕ್ಕೆ ನಿಲ್ಲುವುದಿಲ್ಲ. 

ಐತಿಹಾಸಿಕ ಸಿಲ್ಕ್ ರೋಡ್ ಉದ್ದಕ್ಕೂ ಕ್ಸಿನ್ ಜಿಯಾಂಗ್ ಪ್ರದೇಶ ಹರಡಿಕೊಂಡಿರುವುದು ಚೀನಾ ಕಮ್ಯುನಿಷ್ಟರ ಬೆಲ್ಟ್ ಆಂಡ್ ರೋಡ್(ಒಬಿಒಆರ್) ಯೋಜನೆಗೆ ಸ್ವಾಭಾವಿಕವಾಗಿ ದೊರೆತ ವರದಾನದಂತಾಗಿದೆ. "ಹುಲ್ಲು ಕಡ್ಡಿಯೂ ಬೆಳೆಯದ" ಭಾರತ-ಚೀನಾ ಗಡಿಯ ಲದ್ದಾಕ್-ಅರುಣಾಚಲಪ್ರದೇಶದ ಜಾಗವನ್ನು ಅತಿಕ್ರಮಣ ಮಾಡಿ ಕಣ್ಣುಹಾಕಿದ್ದ ಚೀನಾ, ಒಟ್ಟು ಕಲ್ಲಿದ್ದಲಿನ ಪೈಕಿ ಶೇ.40ರಷ್ಟು ಭಾಗ, ತೈಲ ನಿಕ್ಷೇಪಗಳ ಪೈಕಿ ಶೇ.20 ರಷ್ಟನ್ನು ಹೊಂದಿರುವ ನೈಸರ್ಗಿಕ ಖಜಾನೆ,  ಆಯಕಟ್ಟಿನ ಜಾಗದಂತಿರುವ ಕ್ಸಿನ್ ಜಿಯಾಂಗ್ ನಲ್ಲಿ ತನ್ನವರಲ್ಲದೇ ಅನ್ಯ ಧರ್ಮೀಯರು ಇದ್ದರೆ ಹೇಗೆ ತಾನೆ ಸಹಿಸುತ್ತೆ? ಅಲ್ಲಿ ತನ್ನ ಆಧಿಪತ್ಯ ನಡೆಸದೇ ಹೇಗೆ ತಾನೆ ಇರಲು ಸಾಧ್ಯ?

ತಾನು ಕಣ್ಣಿಟ್ಟ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಚೀನಾ ಪ್ರತಿಯೊಂದನ್ನೂ ವ್ಯವಸ್ಥಿತವಾಗಿಯೇ ಮಾಡುತ್ತೆ. ಮತ್ತೊಂದು ಪ್ರದೇಶದಲ್ಲಿ ತನಗೆ ವಿರುದ್ಧವಾಗಿರುವುದಕ್ಕಿಂತ ಪ್ರಾಬಲ್ಯ ಮೆರೆಯಲು population transfer policy ಚೀನಾ ಲಗಾಯ್ತಿನಿಂದ ಪ್ರಯೋಗಿಸಿರುವ ಅಸ್ತ್ರ. ಅದೇ ಅಸ್ತ್ರವನ್ನು ಪ್ರಯೋಗಿಸಿಯೇ ಚೀನಾ ಟಿಬೆಟ್ ನಲ್ಲಿ ದಬ್ಬಾಳಿಕೆ ನಡೆಸಲು ಸಹಕಾರಿಯಾಗಿದ್ದೂ ಸಹ ತನ್ನ ಜನಸಂಖ್ಯೆಯನ್ನು ಹೆಚ್ಚಿಸಿಕೊಂಳ್ಳುವ ಈ  population transfer policyಯೇ. population transfer policy ಮಾಡುವಾಗ ಬೇರೆ ಪ್ರದೇಶಗಳಿಗೆ ಕಳಿಸುವವರನ್ನು ಕೃಷಿಕರಿಂದ ಕಲಿಯುವುದಕ್ಕಾಗಿ ಎಂಬ ನೆಪವೊಡ್ಡಿ ಕಳಿಸಲಾಗುತ್ತದೆ. ನಂತರ ಹೋದವರಿಗೆ ವಾಪಸ್ ಬರಲು ಅನುಮತಿ ನಿರಾಕರಿಸಲಾಗುತ್ತದೆ.

ಇದೇ ಮಾದರಿಯಲ್ಲಿ ಚೀನಾ ಮುಸ್ಲಿಂ ಬಾಹುಳ್ಯವಿದ್ದ ಕ್ಸಿನ್ ಜಿಯಾಂಗ್ ನಲ್ಲಿ ಹ್ಯಾನ್ ಜನಾಂಗೀಯ ಗುಂಪನ್ನು ವ್ಯವಸ್ಥಿತವಾಗಿ ಕ್ಸಿನ್ ಜಿಯಾಂಗ್ ನಲ್ಲಿ ಸೇರಿಸಿ, ಮುಸ್ಲಿಮರಿಗಿಂತ ಹ್ಯಾನ್ ಜನಾಂಗದವರು ಬಹುಸಂಖ್ಯಾತರಾಗುವಂತೆ ಮಾಡಿದೆ. ಅನ್ಯಮತೀಯರು ಅಥವಾ ತಾನು ಕಣ್ಣುಹಾಕಿದ ಪ್ರದೇಶದಲ್ಲಿ ವಿದೇಶಿಯರು (ಟಿಬೆಟ್) ಹೆಚ್ಚಿರುವ ಪ್ರದೇಶದಲ್ಲಿ ತನ್ನವರನ್ನು ಬಹುಸಂಖ್ಯಾತರನ್ನಾಗಿಸುವುದರಲ್ಲಿ population transfer policyಯೇ ಚೀನಾದ ಮೊದಲ ಆಯ್ಕೆಯಾಗಿರುತ್ತದೆ, ಏಕೆಂದರೆ ಚೀನಾದ ಬಹುಸಂಖ್ಯಾತರಾಗಿರುವ ಹ್ಯಾನ್ ಜನಾಂಗದವರು ಕ್ಸಿನ್ ಜಿಯಾಂಗ್ ನಲ್ಲಿ ಬಹುಸಂಖ್ಯಾತರಾದರೆ ಆ ಪ್ರದೇಶವನ್ನು ತನ್ನಿಷ್ಟಕ್ಕೆ ತಕ್ಕಂತೆ ಆಳುವುದು ಸುಲಭ.

ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಂಡು ಕೈಗಾರೀಕರಣವನ್ನು ಮುಂದುವರೆಸುವುದು ಚೀನಾದ ಆಸಕ್ತಿಗಳಲ್ಲಿ ಮುಖ್ಯವಾಗಿದ್ದು, ವಿದೇಶಿ ಸಾಮ್ರಾಜ್ಯಶಾಹಿ ಪ್ರಾಬಲ್ಯ ಹಾಗೂ  1839-1949 ರ ಸೆಂಚುರಿ ಆಫ್ ಹ್ಯುಮಿಲಿಯೇಷನ್ ನ ಅವಧಿಯ ಕುತಂತ್ರಗಳು ಚೀನಾ ಕಮ್ಯುನಿಷ್ಟ್ ಪಕ್ಷ(ಸಿಸಿಪಿ) ಕ್ಕೆ ಇರುವ ಪ್ರಾದೇಷಿಕ ಸಮಗ್ರತೆ ಹಾಗೂ ವಿಸ್ತರಣಾವಾದದ ಗೀಳಿನ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಶೇ.49 ರಷ್ಟಿದ್ದ ಹ್ಯಾನ್ ಜನಾಂಗೇತರ ಉಯ್ಘರ್  ಸಮುದಾಯದ ಮುಸ್ಲಿಮರು ಬಹುಸಂಖ್ಯಾತರಾಗಿದ್ದಷ್ಟೂ ದಿನ ಪ್ಯಾನ್ ಇಸ್ಲಾಂ ಅಡಿಯಲ್ಲಿ ಇಸ್ಲಾಂ ಧರ್ಮದವರೆಲ್ಲಾ ಒಂದಾಗಿ ಪ್ರತ್ಯೇಕತಾವಾದವನ್ನು ತೀವ್ರಗೊಳಿಸಿದರೆ, ಚೀನಾಗೆ ತನ್ನ ಹಿಡಿತದಲ್ಲಿರುವ ಸಂಪತ್ಭರಿತವಾದ ಪ್ರದೇಶವನ್ನು ಕಳೆದುಕೊಳ್ಳುವ ಭೀತಿ ಇದೆ.

ಚೀನಾ ಈಗಾಗಲೇ ಸಿಪಿಇಸಿ ಯೋಜನೆಗಾಗಿ 45 ಬಿಲಿಯನ್ ಡಾಲರ್ ನಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದು, ಒನ್ ಬೆಲ್ಟ್, ರೋಡ್ ಯೋಜನೆಗೆ 900 ಬಿಲಿಯನ್ ಡಾಲರ್ ನಷ್ಟು ಹಣವನ್ನು ಹೂಡಿಕೆ ಮಾಡಲು ಸಿದ್ಧತೆ ನಡೆಸಿದೆ. ಈ ಹಂತದಲ್ಲಿ ಚೀನಾ ಭಾಷೆಯನ್ನೇ ಮಾತನಾಡದ ಟರ್ಕಿಕ್ ಮಾತೃಭಾಷೆ, ಅರೇಬಿಕ್ ಲಿಪಿಯನ್ನು ಬಳಕೆ ಮಾಡುತ್ತಿರುವ ಉಯ್ಘರ್ ಸಮುದಾಯದ ಪ್ರತ್ಯೇಕತಾವಾದ ಚೀನಾವನ್ನು ಅದೆಷ್ಟು ಭೀತಗೊಳಿಸಿರಬೇಡ?

ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಕೇವಲ ಉಯ್ಘರ್  ಮುಸ್ಲಿಮರು ಬಹುಸಂಖ್ಯಾತರಷ್ಟೇ ಅಂದರೆ ಶೇ.45.84 ರಷ್ಟು, ಉಯ್ಘರ್ ನೊಂದಿಗೆ ಹುಯಿ ಮುಸ್ಲಿಂ ಸಮುದಾಯದವರು ಶೇ.4.51 ರಷ್ಟಿದ್ದು, ಹಾಗೂ ಕಝಕ್ ಗಳು ಶೇ.6.50 ರಷ್ಟಿದ್ದರೆ, ಹ್ಯಾನ್ ಸಮುದಾಯದವರು ಶೇ.40.48 ರಷ್ಟು, ಇತರರು ಶೇ.2.67 ರಷ್ಟಿದ್ದಾರೆ. ನೋಡಲು ತಮ್ಮಂತೆ ಒಂದೇ ರೀತಿ ಇದ್ದರೂ ಆಚರಣೆ ಮಾಡುವ ಧರ್ಮದಲ್ಲಿ ಬೇರೆ, ಬಳಕೆ ಮಾಡುವ ಭಾಷೆಯಲ್ಲಿ ಬೇರೆಯಾಗಿರುವ ಬಹುಸಂಖ್ಯಾತ ಉಯ್ಘರ್  ಸಮುದಾಯ ಎಂದಾದರೂ ತಮಗೆ ಮಗ್ಗುಲ ಮುಳ್ಳು ಎಂದೇ ಭಾವಿಸಿದ್ದ ಚೀನಾ ಚಾಣಾಕ್ಷತನದಿಂದಲೇ ತನ್ನ ಅಡ್ಡಿಯನ್ನು ನಿವಾರಿಸಿಕೊಳ್ಳಲು ಯತ್ನಿಸುತ್ತಿದೆ.

ಏಕೆಂದರೆ ನೇರಾ ನೇರಾವಾಗಿ ಇಡಿಯ ಮುಸ್ಲಿಂ ಸಮುದಾಯದ ವಿರೋಧ ಕಟ್ಟಿಕೊಳ್ಳದೇ ಉಯ್ಘರ್ ಸಮುದಾಯವನ್ನು ಮಾತ್ರ ಪ್ರಮುಖವಾಗಿ ಟಾರ್ಗೆಟ್ ಮಾಡಿದೆ. ಉಯ್ಘರ್ ಸಮುದಾಯವನ್ನು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಹೇಳಿದ್ದು, ಕ್ಸಿನ್ ಜಿಯಾಂಗ್ ನಲ್ಲಿ 2 ನೇ ದೊಡ್ಡ ಮುಸ್ಲಿಂ ಸಮುದಾಯವಾಗಿರುವ ಹುಯಿ-ಉಯ್ಘರ್  ಪ್ರತ್ಯೇಕತಾವಾದಕ್ಕೆ ಒಗೂಡದಂತೆ ಎಚ್ಚರವಹಿಸಿದೆ. ಎಷ್ಟರ ಮಟ್ಟಿಗೆ ಅಂದರೆ ಅಲ್ಲಿನ ಉಯ್ಘರ್ ಮುಸ್ಲಿಮರು ತಮ್ಮ ಭಾಷೆಯ ಸಾಹಿತ್ಯವನ್ನು ಅಭ್ಯಾಸ ಮಾಡುವಂತಿಲ್ಲ, ಮಾತನಾಡುವಂತಿಲ್ಲ, ಕೊನೆಗೆ ತಮ್ಮ ಮಕ್ಕಳಿಗೆ ಇಸ್ಲಾಮ್ ನ್ನು ಧ್ವನಿಸುವ ಹೆಸರುಗಳನ್ನೂ ಇಡುವಂತಿಲ್ಲ!

ಅಂದರೆ, ಹಿಂದಿನ ಸೋವಿಯತ್ ಯೂನಿಯನ್ ನಲ್ಲಿ ಟರ್ಕಿಯ ಅಲ್ಪಸಂಖ್ಯಾತರು, ಆಧುನಿಕ ರಷ್ಯಾದಲ್ಲಿ ಚೆಚೆನ್ ಗಳು ಇಸ್ರ‍ೆಲ್/ ಪ್ಯಾಲೆಸ್ಟೇನ್ ನಲ್ಲಿ ಪ್ಯಾಲೆಸ್ಟೇನ್ ಗಳು ಇಸ್ಲಾಂ ನ್ನು ಒಗ್ಗೂಡುವಿಕೆಯ ಮಂತ್ರವಾಗಿಸಿಕೊಂಡದ್ದು ಕ್ಸಿನ್ ಜಿಯಾಂಗ್ ನ ನೆಲದಲ್ಲೂ ಆಗಬಾರದೆಂಬುದು ಚೀನಾದ ಉದ್ದೇಶವಾಗಿರಬಹುದು. ಅಷ್ಟೇ ಅಲ್ಲದೇ ಚೀನಾ ಇಸ್ಲಾಂ ಧರ್ಮದ ಪಂಗಡಗಳು ಒಗ್ಗೂಡದಂತೆ ಎಚ್ಚರಿಕೆ ವಹಿಸಿದ್ದು, ಕ್ಸಿನ್ ಜಿಯಾಂಗ್ ಮೇಲೆ ಉಯ್ಘರ್  ಪ್ರಾಬಲ್ಯವನ್ನು ದುರ್ಬಲಗೊಳಿಸಲು, ಆ ಪ್ರಾಂತ್ಯದಲ್ಲಿ ಚೀನಾ ಚೀನಾದ ಕಮ್ಯುನಿಷ್ಟ್ ಪಕ್ಷ  13 ಸ್ವಾಯತ್ತ ಅಲ್ಪಸಂಖ್ಯಾತರನ್ನು ಗುರುತಿಸಿದೆ. ಹ್ಯಾನ್ ಗಿಂತ ಭಿನ್ನವಾದ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಸಮುದಾಯ ಎಂದು ಸಿಸಿಪಿಗೆ ಮನವರಿಕೆಯಾದಾಗ ಆ ಸಮುದಾಯಕ್ಕೆ ತನ್ನದೇ ಸರ್ಕಾರವನ್ನು ನಿಯುಕ್ತಿಗೊಳಿಸುವ ಸ್ವಾಯತ್ತತೆಯನ್ನು ನೀಡಲಾಗುತ್ತದೆ.

ಸಧ್ಯಕ್ಕೆ ಉಯ್ಘರ್ ಈ ರೀತಿಯ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವರ್ಗವಾಗಿದ್ದು, "ಕ್ಸಿನ್ ಜಿಯಾಂಗ್ ಗೆ  ಕ್ಸಿನ್ ಜಿಯಾಂಗ್ ಸ್ವಾಯತ್ತ ಪ್ರದೇಶವೆಂಬ ಅಧಿಕೃತ ಹೆಸರಿದೆ, ಆದರೆ ಉಯ್ಘರ್  ಸಮುದಾಯದವರು ಮಾತ್ರ ರಾಜಕೀಯವಾಗಿ ಪ್ರಬಲರಾಗಿಲ್ಲ. ಚೀನಾದ ಈ ಯೋಜನೆ ಕೇವಲ ಹೆಸರಿಗಷ್ಟೇ ಸ್ವಾಯತ್ತವಾಗಿದ್ದು, ಪ್ರತಿ ಹಂತದಲ್ಲಿಯೂ ಸ್ವಾಯತ್ತತೆಯ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಸ್ವಾಯತ್ತ ಅಲ್ಪಸಂಖ್ಯಾತ ಸಮುದಾಯದವರು ಹಾಗೂ ಅದಕ್ಕೆ ಸಂಬಂಧಿಸಿದ ನಾಯಕರು ಉಳಿಯಬೇಕೆಂದರೆ ಸಿಸಿಪಿಯ ಬೆಂಬಲವನ್ನು ಪಡೆಯುವುದು ಅತ್ಯಗತ್ಯ. ಒಂದು ವೇಳೆ ಸ್ವಾಯತ್ತ ಪ್ರಾಂತ್ಯದ ಮೇಲೆ ಚೀನಾ ಕಮ್ಯುನಿಷ್ಟ್ ಪಕ್ಷದ ನಿಯಂತ್ರಣವನ್ನು ನಿರಾಕರಿಸಿದರೆ ಮಾತ್ರ ಉಯ್ಘರ್  ಗಳಿಗೆ ರಾಜಕೀಯವಾಗಿ, ಆರ್ಥಿಕವಾಗಿ ಪ್ರಾಬಲ್ಯ ಮೆರೆಯುವ ಅವಕಾಶ ಇರುತ್ತದೆ. ಆದರೆ ಅಲ್ಪಸಂಖ್ಯಾತರ ವಿರುದ್ಧ ಅಲ್ಪಸಂಖ್ಯಾತರನ್ನೇ ಎತ್ತಿಕಟ್ಟಿ ಚೀನಾ ಮಾತ್ರ ಕ್ಸಿನ್ ಜಿಯಾಂಗ್ ಮೇಲೆ ಯಾರ ಹಿಡಿತ ಇರಬಾರದು ಎಂದುಕೊಂಡಿತ್ತೋ ಅದನ್ನು ಸಾಧಿಸಿಕೊಳ್ಳುತ್ತಲೇ ಇದೆ.

ಕ್ಸಿನ್ ಜಿಯಾಂಗ್ ನಲ್ಲಿರುವ ಮುಸ್ಲಿಮರನ್ನು ಭಾಷೆ, ಸಾಹಿತ್ಯ, ಧರ್ಮದ ಆಧಾರದಲ್ಲಿ ಎಷ್ಟು ಇಸ್ಲಾಂ ನಿಂದ ಬೇರ್ಪಡಿಸಲು ಸಾಧ್ಯವೋ ಅವೆಲ್ಲವನ್ನೂ ಚೀನಾ ಹೊರ ಜಗತ್ತಿಗೆ ಹೆಚ್ಚು ಗೊತ್ತಾಗದಂತೆ ಅವ್ಯಾಹತವಾಗಿ ಮಾಡುತ್ತಲೇ ಇದೆ. ಅದರ ಮುಂದುವರಿದ ಭಾಗವಾಗಿಯೇ ಈಗ ಚೀನಾ ಪವಿತ್ರ ಗ್ರಂಥಗಳಿಗೂ ತಿದ್ದುಪಡಿ ತಂದು ಅದರಲ್ಲಿ ಸರ್ಕಾರದ ತತ್ವ-ಸಿದ್ಧಾಂತಗಳು ಧ್ವನಿಸುವಂತೆ ಮಾಡಲು ಆದೇಶಿಸಿದೆ! ಧಾರ್ಮಿಕ ಪ್ರತಿಮೆಗಳನ್ನು ಉರುಳಿಸುವ ದುಸ್ಸಾಹಸಕ್ಕೆ ಕೈಹಾಕಿದೆ.

ಚೀನಾವನ್ನು ಅಗ್ರಮಾನ್ಯವಾಗಿ ಪರಿಗಣಿಸುವ ಭಾರತದ ಕಮ್ಯುನಿಸ್ಟರು ಚೀನಾದಲ್ಲಿ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯ ಹರಣದ ಬಗ್ಗೆ ಮರೆತು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಭದ್ರತೆ ಬಗ್ಗೆ ಕರುಣಾಜಕವಾಗಿ ಮಾತನಾಡುತ್ತಾರೆ. 

ಕಾರಣವೇ ಇಲ್ಲದೇ ಕರುಣಾಜನಕವಾಗಿ ಮಾತನಾಡುವ ಕಾಮ್ರೆಡ್ ಗಳು ಇನ್ನಾದರು ತಮ್ಮ ಹೆಡ್ ಕ್ವಾರ್ಟ್ರಸ್ ನಲ್ಲಿ ನಡೆಯುತ್ತಿರುವ ಧಾರ್ಮಿಕ ಶೋಷಣೆ ಬಗ್ಗೆ ಧ್ವನಿ ಎತ್ತಬೇಕಿದೆ. ಅವರಷ್ಟೇ ಅಲ್ಲ ವಿಶ್ವಸಮುದಾಯವೂ ಈ ಬಗ್ಗೆ ಚೀನಾವನ್ನು ಪ್ರಶ್ನಿಸಬೇಕಿದೆ. 

ಈ ವರೆಗೂ, ಮೇಲೆ ಹೇಳಿದ ಉಯ್ಘರ್ ಮುಸ್ಲಿಮರ ಮೇಲೆ ನಡೆದ ದಬ್ಬಾಳಿಕೆ, ದೌರ್ಜನ್ಯಗಳೆಲ್ಲವೂ ಇನ್ನು ಮುಂದೆ ಚೀನಾದಲ್ಲಿ ಬೇರೆಯಾವುದೇ ಮತಾನುಯಾಯಿಗಳ ಮೇಲೆ ನಡೆಯುವುದಿಲ್ಲ ಎಂಬುದಕ್ಕೆ ಖಾತ್ರಿಯೇನು ಇಲ್ಲ. ಹಾಗೇನಾದರೂ ಆದಲ್ಲಿ ಪಕ್ಕದ ಬರ್ಮಾ, ಬಾಂಗ್ಲಾದಿಂದ ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಎದುರಿಸಿದಂತೆ ಮುಂದೊಂದು ದಿನ ಕ್ಸಿನ್ ಜಿಯಾಂಗ್ ಸೇರಿದಂತೆ ಚೀನಾದ ಧಾರ್ಮಿಕ ನಿರಾಶ್ರಿತರ ಸಮಸ್ಯೆ ಎದುರಿಸಬೇಕಾಗಬಹುದೇನೋ, ಅದಕ್ಕೆ ನೆರೆ ರಾಷ್ಟ್ರವಾಗಿರುವ ಭಾರತವೂ ತಲೆ ಬಿಸಿ ಎದುರಿಸಬೇಕಾಗಬಹುದೇನೋ...! 

-ಶ್ರೀನಿವಾಸ್ ರಾವ್                                                                                                                                              srinivasrao@kannadaprabha.com, srinivas.v4274@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com