ಈ ವರ್ಷದ ಪ್ರಥಮ ತ್ರೈಮಾಸಿಕ ಲೆಕ್ಕಪತ್ರ ಬಿಚ್ಚಿಟ್ಟಿದೆ ಹಲವು ಸತ್ಯ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಈ ವರ್ಷದ ಪ್ರಥಮ ತ್ರೈಮಾಸಿಕ ಲೆಕ್ಕಪತ್ರ ಬಿಚ್ಚಿಟ್ಟಿದೆ ಹಲವು ಸತ್ಯ!
ಈ ವರ್ಷದ ಪ್ರಥಮ ತ್ರೈಮಾಸಿಕ ಲೆಕ್ಕಪತ್ರ ಬಿಚ್ಚಿಟ್ಟಿದೆ ಹಲವು ಸತ್ಯ!

ಕೊರೋನಾ ವೈರಸ್ ಇಂದು ಜಗತ್ತಿಗೆಲ್ಲ ಗೊತ್ತಿರುವ ಹೆಸರು. ಈ ಶತಮಾನದಲ್ಲಿ ಜಗತ್ತಿನ ಎಲ್ಲಾ ದೇಶಗಳನ್ನ ಹೀಗೆ ಲಾಕ್ ಡೌನ್ ಅಂದರೆ ಪೂರ್ಣ ವ್ಯಾಪಾರ ವಹಿವಾಟು ನಿಲ್ಲಿಸಿ ಮನುಷ್ಯರ ಓಡಾಟಕ್ಕೂ ನಿರ್ಬಂಧ ಹೇರಿದ ಉದಾಹರಣೆ ನಮ್ಮ ಮುಂದಿಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳು ಹೀಗೆ ತನ್ನ ಪ್ರಜೆಗಳನ್ನ ಗೃಹ ಬಂಧನದಲ್ಲಿರಲು ಸೂಚಿಸಿದೆ. ಲಾಕ್ ಡೌನ್ ನ್ನು ಸರಿಯಾಗಿ ಪಾಲಿಸದ ಅಮೆರಿಕಾ ಮತ್ತು ಯೂರೋಪಿನ ಹಲವಾರು ರಾಷ್ಟ್ರಗಳು ಇಂದು ಅತ್ಯಂತ ಹೆಚ್ಚು ನೋವುಗಳನ್ನ ದಾಖಲಿಸುತ್ತಿವೆ. 

ಜಗತ್ತಿನಾದ್ಯಂತ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಇದೆಲ್ಲ ಗೊತ್ತಿರುವ ವಿಷಯ. ಹಾಗಾದರೆ ಮನುಷ್ಯನ ಬದುಕಿಗೆ ಭರವಸೆ ಇಲ್ಲವೇ? ಬದುಕಿಗೆ ನಂಬಿಕೆಗಳು ಇರಲಾರವೇ? ಎನ್ನುವ ಪ್ರಶ್ನೆ ಕೂಡ ಉದ್ಭವವಾಗುತ್ತದೆ. ಗಮನಿಸಿ ಈ ಹಿಂದೆ ಅಂದರೆ 1918ರಲ್ಲಿ ಸ್ಪ್ಯಾನಿಷ್ ಫ್ಲೂ ಎನ್ನುವ ಹೆಸರಿನ ರೋಗ ಕೋಟ್ಯಂತರ ಜನರ ಸಾವಿಗೆ ಕಾರಣವಾಗಿತ್ತು. ಮನುಕುಲ ಅದನ್ನ ಮರೆತು ಬಹಳ ದೂರ ಬಂದಿದೆ. ಅಂದಿನ ದಿನಗಳಲ್ಲಿ ಊಹಿಸಿಕೊಳ್ಳಲು ಆಗದ ತಂತ್ರಜ್ಞಾನ ಇಂದು ನಮ್ಮ ಮುಂದಿದೆ. ಇಷ್ಟೆಲ್ಲಾ ಆದದ್ದು ನಾಳೆ ನಮ್ಮದು ಎನ್ನುವ ಆಶಾಭಾವದಿಂದ.! ಅಂತಹುದೇ ಆಶಾಭಾವ ಚಿಗುರಿಸುವ ಹಲವಾರು ವಿಷಯಗಳು ಈಗ ನಮ್ಮ ಮುಂದಿವೆ. 

ಕೊರೋನದಂತಹ ಭೀಕರ ಸಮಸ್ಯೆಯ ನಡುವೆಯೂ ಬಹಳಷ್ಟು ಕಾರ್ಯಕ್ಷೇತ್ರಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ವ್ಯಾಪಾರ-ವಹಿವಾಟು ದಾಖಲಿಸುತ್ತ ಹೆಚ್ಚಿನ ಲಾಭವನ್ನ ಕೂಡ ಮಾಡುತ್ತಿವೆ. ಇಂತಹ ಕಾರ್ಯ ಕ್ಷೇತ್ರದ ಬಗ್ಗೆ ಮತ್ತು ಇಂತಹ ಸಾಧ್ಯತೆಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಇಲ್ಲಿ ಯಾವ ಸಂಸ್ಥೆಗಳು ಕ್ಲೌಡ್ ಬಿಸಿನೆಸ್ ನಲ್ಲಿ ಇದ್ದಾವೆ ಅವುಗಳು ಬಹಳ ಉನ್ನತಿಯನ್ನ ಕಾಣುತ್ತವೆ ಉದಾಹರಣೆಗೆ ಅಮೇಜಾನ್ ಇಂತಹ ಒಂದು ವಲಯದಲ್ಲಿ ಕೆಲಸ ಮಾಡುತ್ತಿದೆ. ಜಗತ್ತಿನ ಬಹುಪಾಲು ಸಂಸ್ಥೆಗಳು ಉದ್ಯೋಗ ಕಡಿತ ಎನ್ನುವ ಮಾತನ್ನ ಆಡುತ್ತಿದ್ದರೆ, ಅಮೇಜಾನ್ ಅಮೇರಿಕಾದಲ್ಲಿ 75 ಸಾವಿರದಿಂದ 1 ಲಕ್ಷ ಜನರನ್ನ ಹೊಸದಾಗಿ ನೇಮಕ ಮಾಡಿಕೊಳ್ಳುವುದಾಗಿ ಹೇಳಿಕೆಯನ್ನ ನೀಡಿದೆ. ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆ 1 ಲಕ್ಷ ದಾಟುತ್ತದೆ ಎನ್ನುತ್ತದೆ ಅಂಕಿ-ಅಂಶ. ಹೀಗಾಗಿ ಅಮೇಜಾನ್ ಒಂದೇ ಅಂತಲ್ಲ ಯಾವುದೇ ಟೆಕ್ನಾಲಜಿ ಕಂಪನಿ ಅದರಲ್ಲೂ ಕ್ಲೌಡ್ ಗೆ ಸಂಬಂಧಿಸಿದ ಟೆಕ್ನಾಲಜಿ ಕಂಪನಿಗಳು ಖಂಡಿತ ಹೆಚ್ಚು-ಹೆಚ್ಚು ಉನ್ನತಿಯತ್ತ ಸಾಗುತ್ತಿವೆ.

ಮೈಕ್ರೋಸಾಫ್ಟ್, ಗೂಗಲ್ ಮತ್ತು ಅಮೆಜಾನ್ ಸಂಸ್ಥೆಗಳು ಹೊಸ ಜಾಗವನ್ನ ಬಾಡಿಗೆಗೆ ಪಡೆದು ಹೊಸ ಕಂಪ್ಯೂಟರ್ ಹೊಸ ಸರ್ವರ್ ಗಳನ್ನ ಸ್ಥಾಪಿಸುತ್ತಿವೆ. ಹೆಚ್ಚಾಗುತ್ತಿರುವ ಆನ್ಲೈನ್ ವಹಿವಾಟುಗಳ ಡೇಟಾ ಸಂಗ್ರಹಿಸಬೇಕಲ್ಲ!  ಅಮೇಜಾನ್ ಮಿಕ್ಕೆಲ್ಲಾ ಸಂಸ್ಥೆಗಳಿಗಿಂತ ವೇಗವಾಗಿ ಓಡುತ್ತಿದೆ. ತನ್ನ ಹೊಸ ವ್ಯಾಪಾರಕ್ಕೆ ಬೇಕಾಗುವ ಬಂಡವಾಳವನ್ನ ಡೆಟ್ ಬಾಂಡ್ ವಿತರಿಸುವುದರ ಮೂಲಕ 10 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಮಾರುಕಟ್ಟೆಯಿಂದ ಇಂತಹ ಸಮಯದಲ್ಲಿ ಅದೂ 1980ಕ್ಕೂ ಮುಂಚೆ ಇದ್ದ ಅತ್ಯಂತ ಕಡಿಮೆ ಬಡ್ಡಿಗೆ ಪಡೆದುಕೊಂಡಿದೆ.

ಹಾಗೆಂದು ಎಲ್ಲರೂ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಮಾತ್ರ ಇಚ್ಛೆಯುಳ್ಳವರಾಗಿದ್ದಾರೆ ಎಂದರೆ ಅದು ಕೂಡ ಪೂರ್ಣವಲ್ಲ. ಗಮನಿಸಿ ಮನೆಯಲ್ಲಿ ಕುಳಿತೇ ಕೆಲಸ ಮಾಡಬೇಕು ಎನ್ನುವ ಒಂದು ಸನ್ನಿವೇಶ. ವಿಡಿಯೋ ಕಾನ್ಫರೆನ್ಸಿಂಗ್, ವಿಡಿಯೋ ಗೇಮಿಂಗ್ ಮತ್ತು ಎಂಟರ್ಟೈನ್ಮೆಂಟ್ ಜೊತೆಗೆ ರಿಮೋಟ್ ಲರ್ನಿಂಗ್ ನಂತಹ ಹಲವಾರು ಕ್ಷೇತ್ರಗಳು ಉತ್ತಮ ಬೇಡಿಕೆಯನ್ನ ವೃದ್ಧಿಸಿಕೊಂಡಿವೆ. ಕೊರೋನ ಸೃಷ್ಟಿಯಾಗುವುದಕ್ಕೆ ಮುಂಚೆಯೇ ಅಸ್ತಿತ್ವದಲ್ಲಿದ್ದ ವಿಡಿಯೋ ಕಾನ್ಫರೆನ್ಸಿಂಗ್, ವಿಡಿಯೋ ಗೇಮಿಂಗ್ ನಂತಹ ಉದ್ದಿಮೆಗಳು ಈ ಸಮಯದಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಕೋವಿಡ್ ನಂತರ ಮೈಕ್ರೋಸಾಫ್ಟ್ ಬಳಕೆ 40 ಪ್ರತಿಶತ ಹೆಚ್ಚಾಗಿದೆ. ವಿಡಿಯೋ ಕಾಲ್ ಮಾಡುವುದಕ್ಕೆ ಫೇಸ್ಬುಕ್ ಮೆಸೆಂಜೆರ್ ಅಥವಾ ವಾಟ್ಸಪ್ ಬಳಸುವುದು ದುಪ್ಪಟ್ಟಾಗಿದೆ ಎನ್ನುತ್ತದೆ ಅಂಕಿ-ಅಂಶ. ಆಪಲ್ ಸಂಸ್ಥೆ ಕೂಡ ಈ ಓಟದಲ್ಲಿ ಹಿಂದೆ ಬಿದ್ದಿಲ್ಲ. ಜನತೆಗೆ ಸಂಕಷ್ಟದ ಸಮಯದಲ್ಲಿ ಬೇಕಾಗುವ ಟ್ಯಾಬ್ ಗಳ ತಯಾರಿಕೆಯಲ್ಲಿ ಅದು ಮಗ್ನವಾಗಿದೆ.

ಇನ್ನು ಮನರಂಜನಾ ಕ್ಷೇತ್ರದಲ್ಲಿ ಕೂಡ ಕ್ರಾಂತಿ ಆಗುವ ಲಕ್ಷಣಗಳು ಕಾಣುತ್ತಿವೆ. ಈ ವೈರಸ್ ಬಂದು ಬದಲಾಯಿಸಿತು ಎನ್ನುವುದಕ್ಕಿಂತ, ಆಗಲೇ ಮಗ್ಗುಲು ಬದಲಾಯಿಸಲು ತಯಾರಿ ನಡೆಸಿದ್ದ ಈ ಕ್ಷೇತ್ರಕ್ಕೆ ಕೋವಿಡ್ ಪರಿಸ್ಥಿತಿ ಹೆಚ್ಚಿನ ವೇಗವನ್ನ ಒದಗಿಸಿತು ಎನ್ನಬಹುದು. ಸಿನಿಮಾ ಎನ್ನುವುದು ಸೀಮಿತ ಕ್ಯಾನ್ವಾಸ್ ಎನ್ನುವುದನ್ನ ಮನಗಂಡು ಅನೇಕರು ಆಗಲೇ ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದರು. ಕೊರೋನ ಇಂತಹ ಬದಲಾವಣೆಗೆ ವೇಗ ಮತ್ತು ಸರಿಯಾದ ದಿಕ್ಕನ್ನ ಕೊಟ್ಟಿದೆ. ವೆಬ್ ಸಿರೀಸ್ ಗಳಿಗೆ ಈಗ ನಲವತ್ತು, ಐವತ್ತು ಕೋಟಿ ಬಂಡವಾಳ ಸುರಿಯುತ್ತಾರೆ ಎಂದರೆ ಬದಲಾವಣೆ ಯಾವ ಮಟ್ಟಿಗೆ ಆಗಿರಬಹುದು ಎನ್ನುವ ಅಂದಾಜು ಸಿಕ್ಕೀತು. ಇದರ ಜೊತೆಗೆ ಸಿನಿಮಾವನ್ನ ಕೂಡ ಈಗ ಮಾಲ್ ನ ಮಲ್ಟಿಪ್ಲೆಕ್ಸ್ ನಲ್ಲಿ ಅಥವಾ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡದೆ ನೇರವಾಗಿ ಒಟಿಟಿ ಮೂಲಕ ಪರದೆಯ ಮೇಲೆ ಬಿಡುಗಡೆ ಮಾಡುತ್ತಿದ್ದಾರೆ. ಟಿವಿ ಮಾಧ್ಯಮ ವಿಶಾಲವಾಗಿ ಇನ್ನಷ್ಟು ಬೆಳೆಯಲಿದೆ.

ಅಮೇರಿಕಾದಿಂದ ಬಂದ ಹೊರಗುತ್ತಿಗೆಯ ಕೆಲಸವನ್ನ ಮಾತ್ರ ಮಾಡಿಕೊಂಡು ಹೊಸ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರದ ಟೆಕ್ನಾಲಜಿ ಕಂಪನಿಗಳು ಕುಸಿತ ಕಾಣುತ್ತವೆ. ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಅವರು ಯಾವ ರೀತಿಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನ ಅವಲಂಬಿಸಿ ಉದ್ಯೋಗ ಭದ್ರತೆ ವಿಷಯ ಪಾತ್ರ ವಹಿಸುತ್ತದೆ. ಮುಂದಿನ ಒಂದೆರೆಡು ವರ್ಷ ಅನಿಶ್ಚಿತತೆಯಂತೂ ಇವರ ಜೊತೆ ಜೊತೆಗೆ ನೆರಳಿನಂತೆ ಹಿಂಬಾಲಿಸಲಿದೆ ಎನ್ನುವುದು ಮಾತ್ರ ಎಲ್ಲರಿಗೂ ತಿಳಿದಿರುವ ಸತ್ಯ. ಇದರ ಜೊತೆಗೆ ಸಂಸ್ಥೆಗಳು ತನ್ನ ಖರ್ಚನ್ನ ಕಡಿಮೆ ಮಾಡಿಕೊಳ್ಳಲು ಬಯಸುವುದರಿಂದ ಹೆಚ್ಚು ಹೆಚ್ಚು ತನ್ನ ನೌಕರರನ್ನ ಮನೆಯಿಂದ ಕೆಲಸ ಮಾಡಲು ಸೂಚಿಸುತ್ತದೆ. ಇದರಿಂದ ಕಾರ್ಪೊರೇಟ್ ಕೇಟರಿಂಗ್ ನಂಬಿಕೊಂಡಿದ್ದ ಚಿಕ್ಕ ಪುಟ್ಟ ಉದ್ಯಮಿಗಳ ಹೊಟ್ಟೆಯ ಮೇಲೂ ಹೊಡೆತ ಬೀಳಲಿದೆ.

ಕೇವಲ ದೈತ್ಯ ಟೆಕ್ನಾಲಜಿ ಸಂಸ್ಥೆಗಳು ಮಾತ್ರ ಹೆಚ್ಚಿನ ವ್ಯಾಪಾರ ನಡೆಸುತ್ತಿವೆ ಎಂದುಕೊಂಡರೆ ಅದು ಸತ್ಯವಲ್ಲ. ಚಿನ್ನ, ಆಭರಣಗಳ ಮೇಲಿನ ಹೂಡಿಕೆ ಹೆಚ್ಚಾಗಿದೆ. ಜಗತ್ತಿನಲ್ಲಿ ಅಸ್ಥಿರತೆ ಹೆಚ್ಚಾದಂತೆ ಯಾವುದೇ ದೇಶದ ಕರೆನ್ಸಿಯ ಮೌಲ್ಯ ಕೂಡ ಬದಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಹೂಡಿಕೆದಾರರು ಮತ್ತು ಜನ ಸಾಮಾನ್ಯರು ಕೂಡ ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಹೀಗಾಗಿ ಈ ಕ್ಷೇತ್ರ ಹೆಚ್ಚು ವ್ಯಾಪಾರವನ್ನ ದಾಖಲಿಸುತ್ತಿದೆ. ಭಾರತದಂತಹ ದೇಶದಲ್ಲಿ ಶುಭಕಾರ್ಯಗಳಿಗೆ ವ್ಯಯಿಸುತ್ತಿದ್ದ ಹಣವನ್ನ ಕೂಡ ಈಗ ಇಲ್ಲಿಗೆ ಹೂಡಿಕೆ ಮಾಡುತ್ತಿದ್ದಾರೆ.  

ಫಾರ್ಮ ಕಂಪನಿಗಳ ಮೇಲಿನ ಹೂಡಿಕೆ ಇಂದು ಅಂತಲ್ಲ ಎಂದೆಂದಿಗೂ ಒಳ್ಳೆಯ ಆದಾಯವನ್ನ ತಂದು ಕೊಡುತ್ತದೆ. ಇಂದಿನ ಸನ್ನಿವೇಶದಲ್ಲಿ ಫಾರ್ಮ ಸಂಸ್ಥೆಗಳ ಜೊತೆಗೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಉತ್ಪನ್ನಗಳ ತಯಾರಿಕೆ ಕೂಡ ಲಾಭದಾಯಕ ಉದ್ದಿಮೆಗಳಾಗಿ ಮಾರ್ಪಾಟಾಗಿದೆ.

ಇನ್ನು ಜಗತ್ತಿನಾದ್ಯಂತ ಆನ್ಲೈನ್ ಶಿಕ್ಷಣ ಸಂಸ್ಥೆಗಳು ಅಥವಾ ರಿಮೋಟ್ ಲರ್ನಿಂಗ್ ವಲಯದಲ್ಲಿ ತೊಡಗಿಸಿಕೊಂಡಿದ್ದ ಸಂಸ್ಥೆಗಳು ಸಹ ಇಂದಿನ ಸಮಯದಲ್ಲಿ ಲಾಭವನ್ನ ತಮ್ಮ ಲೆಕ್ಕಕ್ಕೆ ಬರೆದುಕೊಳ್ಳುತ್ತಿವೆ.

ಜಾಗತಿಕ ಮಟ್ಟದಲ್ಲಿ ಹೀಗೆ ಶಿಕ್ಷಣದಿಂದ ಹಿಡಿದು ಕ್ಯಾಸಿನೊವರೆಗೆ ಇಂದು ಎಲ್ಲವೂ ಆನ್ಲೈನ್ ಎನ್ನುವ ಮಟ್ಟಕ್ಕೆ ಬಂದಿದೆ. ತಂತ್ರಜ್ಞಾನದ ಬಳಕೆ, ಇಂಟರ್ನೆಟ್ ಸೇವೆ ಮತ್ತು ಟೆಲಿಕಾಂ ವಲಯಗಳು ಇದಕ್ಕೆ ಆನೆ ಬಲವನ್ನ ನೀಡಿವೆ. ಸಹಜವಾಗಿ ಇದರ ಸುತ್ತಮುತ್ತವಿರುವ ವಲಯಗಳಿಗೆ ಕೋವಿಡ್ ಕಾರ್ಮೋಡ ಕವಿದಿಲ್ಲ. 2020ರ ಮೊದಲ ತ್ರೈಮಾಸಿಕ ಹಣಕಾಸು ಪತ್ರ ಇಂತಹ ಅನೇಕ ವಲಯಗಳಲ್ಲಿ ಕುಸಿತ ಕಂಡಿಲ್ಲ. ಕೆಲವು ಮೊದಲಿನ ಓಘವನ್ನ ಕಾಯ್ದುಕೊಂಡರೆ ಕೆಲವೊಂದು ಸಂಸ್ಥೆಗಳು ಲಾಭಂಶದಲ್ಲಿ ಹೆಚ್ಚಳವನ್ನ ದಾಖಲುಮಾಡುತ್ತಿವೆ. ಸಮಯ ಮತ್ತು ಸನ್ನಿವೇಶಕ್ಕೆ ಯಾರು ಬೇಗ ಹೊಂದಿಕೊಳ್ಳುತ್ತಾರೆ ಅವರು ಮಾರುಕಟ್ಟೆ ಅಧಿಪತ್ಯ ಸಾಧಿಸುತ್ತಾರೆ ಎನ್ನುವ ಹೊಸ ಆಟದ ನಿಯಮವನ್ನ ಸಾರುತ್ತಿದೆ.

ಪ್ಯಾಂಡೆಮಿಕ್ ಅಥವಾ ಪ್ಲ್ಯಾನ್-ಡೆಮಿಕ್ (Pandemic or Plandemic)?

ಗಮನಿಸಿ ನೋಡಿ ಜಗತ್ತಿನ ಅತ್ಯಂತ ಹಳೆಯ ವ್ಯಾಪಾರಗಳಲ್ಲಿ ಒಂದಾದ 'ವೇಶ್ಯಾವಾಟಿಕೆ 'ಕೂಡ ಕೋವಿಡ್ ನಿಂದ ಮಕಾಡೆ ಮಲಗಿದೆ. ಮನುಷ್ಯನ ಬದುಕಿಗೆ ಅತ್ಯವಶ್ಯಕವಾಗಿ ಬೇಕಾದ ಹಣ್ಣು ತರಕಾರಿ ಮತ್ತಿತರ ಆಹಾರ ಸಾಮಗ್ರಿ ಬಿಟ್ಟರೆ ಲಾಭದಾಯಕ ಎನ್ನಿಸಿಕೊಂಡಿರುವುದು ಇತ್ತೀಚಿಗೆ ಟೆಕ್ನಾಲಜಿ ಮೇಲೆ ನಿರ್ಮಿಸಿದ ಹೊಸ ವ್ಯಾಪಾರಗಳು. ಜಗತ್ತಿನ ಜನರನ್ನ ಪೂರ್ಣವಾಗಿ ಆನ್ಲೈನ್ ಗೆ ತರಿಸುವುದು ಅದೂ ಇಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು. ಜಗತ್ತಿನ ಜನರ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯ. ಜನರನ್ನ ಭಾಷೆ-ಧರ್ಮದ ಹೆಸರಿನಲ್ಲಿ ಬಹಳಷ್ಟು ದಿನ ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುವುದರ ಅರಿವಿರುವ ಈ ಜನ ಕಳೆದ ಒಂದೂವರೆ ದಶಕದಿಂದ ಇಂತಹ ಒಂದು ಹುನ್ನಾರ ನಡೆಸುತ್ತಿದ್ದರೆ? ಎನ್ನುವ ಅನುಮಾನ ಬರುತ್ತದೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಬಿಲ್ ಗೇಟ್ಸ್ ಕಳೆದ ಒಂದೂವರೆ ದಶಕದಿಂದ ಹೀಗಾಗಬಹುದು ಎನ್ನುವ ಒಂದು ಸಂದೇಶವನ್ನ ತಮ್ಮ ಮಾತುಗಳಲ್ಲಿ ನೀಡುತ್ತಲೆ ಬಂದಿದ್ದಾರೆ. ತಮ್ಮ ಮೂಲ ಕ್ಷೇತ್ರವಾದ ಟೆಕ್ನಾಲಜಿಯಿಂದ ಅವರು ಫಾರ್ಮ ಇಂಡಸ್ಟ್ರಿ ಕಡೆಗೆ ತಿರುಗಿದ್ದಾರೆ. ಬಿಲ್ ಗೇಟ್ಸ್ ಮತ್ತು ಮಿಲಿಂದಾ ಫೌಂಡೇಶನ್ ಕೊರೋನ ವೈರಸ್ಸಿಗೆ ಲಸಿಕೆ ಕಂಡು ಹಿಡಿಯುವುದರಲ್ಲಿ ಕೂಡ ಮಗ್ನವಾಗಿದೆ. ಇವರು ಫಾರ್ಮ ಕಂಪನಿಯ ಲ್ಯಾಬ್ ಗಳಿಗೆ ಸಾವಿರಾರು ಕೋಟಿ ಹಣವನ್ನ ಹೂಡಿಕೆ ಮಾಡಿದ್ದಾರೆ. ಇದು ಕೇವಲ ಇವರೊಬ್ಬರೇ ಅಥವಾ ಇವತ್ತಿನ ಲಾಭಕ್ಕಾಗಿ ಮಾಡಿದಂತೆ ಕಾಣುತ್ತಿಲ್ಲ. ಇದರ ಹಿಂದೆ ಹತ್ತಾರು ಕಾರಣಗಳಿವೆ. ಜನರ ಮೇಲಿನ ಹಿಡಿತ ಅವುಗಳಲ್ಲಿ ಪ್ರಮುಖವಾಗಿದೆ.

ಕೊನೆಮಾತು: ಬದಲಾವಣೆಗೆ ಹೊಂದಿಕೊಂಡು ಜೀವಿಸಲು ಶುರುಮಾಡಬೇಕು. 2020 ಇತರ ಕಾರ್ಯಕ್ಷೇತ್ರಳಲ್ಲಿ ಹೆಚ್ಚಿನ ಪ್ರಗತಿಯನ್ನ ಕಾಣುವುದು ಸಾಧ್ಯವಿಲ್ಲ. ಈ ವರ್ಷ ಮಾರುಕಟ್ಟೆಯಲ್ಲಿ ಉಳಿದುಕೊಂಡರೆ ಮುಂದಿನ ವರ್ಷ ವೃದ್ಧಿಯ ಬಗ್ಗೆ, ಲಾಭದ ಬಗ್ಗೆ ಮಾತನಾಡಬಹುದು. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com