ಆರ್ಥಿಕ ಲೆಕ್ಕಾಚಾರ ತಲೆಕೆಳಗೆ ಮಾಡುವ ಜಾಗತಿಕ ಬದಲಾವಣೆಗಳು ಹಲವು!

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ಆರ್ಥಿಕ ಲೆಕ್ಕಾಚಾರ ತಲೆಕೆಳಗೆ ಮಾಡುವ ಜಾಗತಿಕ ಬದಲಾವಣೆಗಳು ಹಲವು!
ಆರ್ಥಿಕ ಲೆಕ್ಕಾಚಾರ ತಲೆಕೆಳಗೆ ಮಾಡುವ ಜಾಗತಿಕ ಬದಲಾವಣೆಗಳು ಹಲವು!

ಜಾಗತಿಕ ಮಟ್ಟದಲ್ಲಿ ಈ ವಾರ ಬಹಳಷ್ಟು ಬದಲಾವಣೆಗಳಾಗಿವೆ. ಅಮೇರಿಕಾ ದೊಡ್ಡಣ್ಣನ ಪಟ್ಟವನ್ನ ಅಧಿಕೃತವಾಗಿ ಕಳೆದುಕೊಳ್ಳಲು ದಿನಗಳ ಎಣಿಕೆ ಶುರುವಾದಂತಿದೆ. ಅದಕ್ಕೆ ಮುಖ್ಯ ಕಾರಣ ಕೊರೊನ ವೈರಸ್. ಹೌದು ಕಣ್ಣಿಗೆ ಕಾಣದ ಒಂದು ಸಣ್ಣ ವೈರಸ್ ಅಮೇರಿಕವನ್ನ ಛಿದ್ರ ಮಾಡಿಬಿಟ್ಟಿದೆ. ಜಗತ್ತಿಗೆ ದೊಡ್ಡಣ್ಣನ ಹುಳುಕುಗಳನ್ನ ತೆರೆದಿಟ್ಟಿದೆ. ದಶಕಗಳಿಂದ ಅಮೇರಿಕನ್ ವೈದ್ಯಕೀಯ ಕ್ಷೇತ್ರದ ಮೇಲಿದ್ದ ಜಗತ್ತಿನ ನಂಬಿಕೆ ಚೂರುಚೂರಾಗಿದೆ. ಇಲ್ಲಿಯವರೆಗೆ ಒಂದು ಲಕ್ಷ ಏಳು ಸಾವಿರ ಜನರನ್ನ ಚೀನಾವೈರಸ್ ಬಲಿ ತೆಗೆದುಕೊಂಡಿದೆ. ಇಷ್ಟಕ್ಕೆ ಇದರ ಆರ್ಭಟ ನಿಲ್ಲುವುದಿಲ್ಲ ಹತ್ತಿರತ್ತಿರ 30 ಮಿಲಿಯನ್ ಅಂದರೆ ಮೂರು ಕೋಟಿ ಜನ ಉದ್ಯೋಗವನ್ನ ಕಳೆದುಕೊಂಡಿದ್ದಾರೆ. ಇವೆಲ್ಲವುಗಳ ನಡುವೆ ಜನಾಂಗೀಯ ದ್ವೇಷ ಕೂಡ ಭುಗಿಲೆದ್ದಿದೆ. ಈ ಸಾವುಗಳು, ಈ ಕಲಹ ಇವೆಲ್ಲವೂ ಚುನಾವಣೆ ಭಾಗವಾಗಿರಬಹುದೇ? ಎನ್ನುವ ಸಂಶಯ ಬಹಳಷ್ಟು ಜನರನ್ನ ಕಾಡಿರಲಿಕ್ಕೂ ಸಾಧ್ಯ. ಅಮೇರಿಕಾ ಗ್ರೇಟ್ ಅನ್ನಿಸಿಕೊಂಡದ್ದು ಅದು ಕಟ್ಟಿದ ಕಾರ್ಪೊರೇಟ್ ಜಗತ್ತಿನಿಂದ, ವೆಲ್ತ್ ಕ್ರಿಯೇಷನ್ ನಿಂದ.., ಜನಕ್ಕೆ ವೆಲ್ತ್ ಮೇಲಿನ ನಂಬಿಕೆ ಹೋಗಿ ಅವರ ಚಿಂತನೆ ಹೆಲ್ತ್ ಕಡೆಗೆ ಸಾಗಿದೆ. ಪ್ರತಿಯೊಂದಕ್ಕೂ ಅದು ವಸ್ತು, ಉತ್ಪನ್ನ ಅಥವಾ ಏನೇ ಆಗಿರಲಿ ಒಂದು ಎಕ್ಸ್ಪೈರಿ ಡೇಟ್ ಇದ್ದೆ ಇರುತ್ತೆ. ಹಾಗೆ ನೋಡಲು ಹೋದರೆ ಅಮೇರಿಕನ್ ಡಾಲರ್ ವಿತ್ತ ಜಗತ್ತಿನಲ್ಲಿ ಇಷ್ಟು ದಿನ ಅಧಿಪತ್ಯ ಸಾಧಿಸಿದ್ದು ಹೆಚ್ಚು. ಅದಕ್ಕೆ ಮುಖ್ಯ ಕಾರಣ ಯೂರೋಪಿಯನ್ ಯೂನಿಯನ್ ನಲ್ಲಿ ಮೂಡದ ಒಗ್ಗಟ್ಟು, ರಷ್ಯಾ, ಭಾರತ ಮತ್ತು ಚೀನಾ ದೇಶಗಳೂ ಕೂಡ ಬೇರೆ ಬೇರೆ ಕಡೆ ಮುಖ ತಿರುಗಿಸಿ ನಿಂತದ್ದೇ ಆಗಿದೆ. ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕೆಲ ತಿಂಗಳಲ್ಲಿ ನಡೆಯಲಿದೆ. ಅದು ಅಮೇರಿಕಾದ ಹಣೆಬರಹವನ್ನ ಪೂರ್ಣ ಬದಲಾಯಿಸದದಿದ್ದರೂ ಸಾಗುವ ದಾರಿಯನ್ನ ತೋರಿಸುತ್ತದೆ. ಯಾವುದೇ ಕೋನದಲ್ಲೂ 2020 ಅಮೇರಿಕಾಕ್ಕೆ ಒಳ್ಳೆಯ ವರ್ಷವಲ್ಲ. ಆರ್ಥಿಕವಾಗಿ ಅಮೇರಿಕಾ ಹಿಂದಿನ ಅಮೇರಿಕಾ ಆಗಿರಲು ಸಾಧ್ಯವೇ ಇಲ್ಲ!. ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ.

ಹೊಸದಾಗಿ ಕೆಲಸ ಕಳೆದುಕೊಂಡ 3 ಕೋಟಿ ಜನರ ಜೀವನ ಪಡಿಪಾಟಲಾಗಲಿದೆ. ಕೆಲಸದ ಜೊತೆಗೆ ಅವರ ಇನ್ಶೂರೆನ್ಸ್ ಕೂಡ ಕಳೆದುಕೊಳ್ಳಲಿದ್ದಾರೆ. ಸಾಮಾನ್ಯ ದಿನದಲ್ಲಿ ಇದನ್ನ ಹೇಗೋ ನಿಭಾಯಿಸಬಹುದಿತ್ತು, ಈಗ ನಾವಿರುವ ಕೊರೊನ ಸಮಯದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ.

ಶತಮಾನಗಳಿಂದ ಕರಿಯರ ಮತ್ತು ಬಿಳಿಯರ ನಡುವಿನ ಹೊಡೆದಾಟ ಇಂಥಹ ಕ್ಲಿಷ್ಟ ಸಮಯದಲ್ಲಿ ಭುಗಿಲೆದ್ದಿದೆ. ಶಾಲೆಯಲ್ಲಿ, ಕೆಲಸದಲ್ಲಿ ಕೊನೆಗೆ ವಾಸ ಮಾಡುವ ಗೃಹ ಸಮುಚ್ಛಯಗಳಲ್ಲಿ ಮಡುಗಟ್ಟಿರುವ ವರ್ಣ ದ್ವೇಷ, ಜನಾಂಗೀಯ ದ್ವೇಷಕ್ಕೆ ಕೊನೆ ಹಾಕದಿದ್ದರೆ ಅದು ಕೊರೊನವನ್ನ ದಿಕ್ಕು ತಪ್ಪಿಸಿ ಇನ್ನೆಲ್ಲೋ ಕರೆದುಕೊಂಡು ಹೋಗುವ ಸಾಧ್ಯತೆಯಿದೆ. ಅಮೇರಿಕಾ ಜನಸಂಖ್ಯೆಯ 12 ಪ್ರತಿಶತವಿರುವ ಆಫ್ರೋ ಅಮೇರಿಕನ್ನರು ಆರ್ಥಿಕವಾಗಿ ದುರ್ಬಲರು. ಬಿಳಿ ಅಮೇರಿಕನ್ ಪ್ರಜೆಯ ಒಂದು ಡಾಲರ್ ಎದುರಿಗೆ ಆಫ್ರೋ ಅಮೇರಿಕನ್ ಬಳಿ ಇರುವುದು 10 ಸೆಂಟ್ ಮಾತ್ರ. ಶತಮಾನಗಳ ತುಳಿಯುವಿಕೆ ಮತ್ತು ಇವರನ್ನ ಕೀಳಾಗಿ ಕಾಣುವಿಕೆಗೆ ಅಮೇರಿಕಾ ಈ ಬಾರಿ ಬೆಲೆ ತೆರಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಸದಾ ದ್ವೇಷವನ್ನ ಪೋಷಿಸಿಕೊಂಡು ಬರುವುದರಲ್ಲಿ ಅಮೇರಿಕಾ ಪಾತ್ರ ಹಿರಿದು. ಇಂದು ಅದೇ ದ್ವೇಷದ ಜ್ವಾಲೆಯನ್ನ ಅದು ತನ್ನ ನೆಲದಲ್ಲಿ ಹೇಗೆ ಆರಿಸುತ್ತದೆ ಎನ್ನುವುದು ಕಾದು ನೋಡಬೇಕಾದ ವಿಷಯ. ಇನ್ನು ಅಮೇರಿಕನ್ ಹೆಲ್ತ್ ಸಿಸ್ಟಮ್ ಹಿಂದಿನಂತೆ ಇರಲು ಸಾಧ್ಯವಿಲ್ಲ. ಜಗತ್ತು ಅದರ ಮೇಲಿಟ್ಟಿದ್ದ ನಂಬಿಕೆಯನ್ನ ಕೊರೊನ ಹುಸಿ ಮಾಡಿದೆ. ಹತ್ತಾರು ಸಮಸ್ಯೆಗಳ ನಡುವೆ ಅಮೇರಿಕಾ ಮತ್ತೆ ಗ್ರೇಟ್ ಅನ್ನಿಸಿಕೊಳ್ಳುವುದು ಸುಲಭದ ಮಾತಲ್ಲ.

ಆಸ್ಟೇಲಿಯನ್ ಪ್ರೈಮ್ ಮಿನಿಸ್ಟರ್ ಸಮೋಸ ಮಾಡುತ್ತಾರೆ. ಆಸ್ಟ್ರೇಲಿಯಾ ಜಾಗತಿಕ ಮಟ್ಟದಲ್ಲಿ ಚೀನಾದ ವಿರುದ್ಧ ಹೋರಾಡುವುದರಲ್ಲಿ ಮುಂದಿನ ಸಾಲಿನಲ್ಲಿದೆ. ಮುಕ್ಕಾಲು ಪಾಲು ಆಸ್ಟ್ರೇಲಿಯಾದ ಆರ್ಥಿಕತೆ ಇಂದು ಚೀನಾವನ್ನ ಅವಲಂಬಿಸಿದೆ. ವಸ್ತುಸ್ಥಿತಿ ಹೀಗಿದ್ದೂ ಆಸ್ಟ್ರೇಲಿಯಾದ ಧೈರ್ಯವನ್ನ ಮೆಚ್ಚಲೇಬೇಕು. ಆಸ್ಟ್ರೇಲಿಯಾ ಹೀಗೆ ಚೀನಾದ ವಿರುದ್ಧ ಅಂತರಾಷ್ಟ್ರಿಯ ಮಟ್ಟದಲ್ಲಿ ಗುಡುಗುತ್ತಿದ್ದರೆ, ಚೀನಾ, "ಹೌದ? ಅದೇನು ಮಾಡುತ್ತೀಯಾ ನಾನು ನೋಡುತ್ತೇನೆ ಎನ್ನುವ ರೀತಿಯಲ್ಲಿ ಆಸ್ಟ್ರೇಲಿಯನ್ ಬಾರ್ಲಿಯ ಮೇಲಿನ ಸುಂಕವನ್ನ 80 ಪ್ರತಿಶತ ಏರಿಸುತ್ತದೆ. ಗಮನಿಸಿ ಬಾರ್ಲಿ ಆಸ್ಟ್ರೇಲಿಯಾದಿಂದ ಚೀನಾಕ್ಕೆ ರಫ್ತಾಗುವ ಪ್ರಥಮ ಮೂರು ವಸ್ತುಗಳಲ್ಲಿ ಮೂರನೆಯ ಸ್ಥಾನವನ್ನ ಪಡೆದಿದೆ. ಚೀನಾದ ಈ ನಿರ್ಧಾರದಿಂದ ಆಸ್ಟ್ರೇಲಿಯನ್ ರೈತರು ಕಂಗೆಟ್ಟಿದ್ದಾರೆ. ಇಂತಹ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ಆಸ್ಟ್ರೇಲಿಯ ಭಾರತದ ಬೆಂಬಲವನ್ನ ಬಯಸುತ್ತಿದೆ.

ಇತ್ತ ಚೀನಾ ನೇರವಾಗಿ ಅಮೇರಿಕಾದ ಪರವಾಗಿ ನಿಲ್ಲಬೇಡಿ ಎಂದು ಭಾರತವನ್ನ ಕೇಳಿಕೊಳ್ಳುತ್ತದೆ. ಕೋವಿಡ್ ಜಗತ್ತನ್ನ ಕಾಡುತ್ತಿರುವ ಈ ಸಮಯದಲ್ಲಿ ಜಾಗತಿಕ ಅರ್ಥ ವ್ಯವಸ್ಥೆ ಮತ್ತು ಭೌಗೋಳಿಕ ರಾಜಕೀಯ ನಿತ್ಯ ಹೊಸ ರೂಪ ಪಡೆಯುತ್ತಿದೆ. ಭಾರತವನ್ನ ಸುಲಭವಾಗಿ ತನ್ನಿಚ್ಛೆಗೆ ಕುಣಿಸುವುದು ಸಾಧ್ಯವಿಲ್ಲ ಎನ್ನುವುದು ಚೀನಾ ಮನಗಂಡಿದೆ. ಭಾರತ 1962ರ ಭಾರತವಲ್ಲ, ಅದೊಂದು ಶಕ್ತಿಶಾಲಿ ರಾಷ್ಟ್ರವಾಗಿ ಬದಲಾಗಿದೆ ಎನ್ನುವ ಅರಿವು ಅದಕ್ಕಿದೆ. ಆದರೂ ಮನದಾಳದಲ್ಲಿ ಭಾರತ, ಅಮೇರಿಕಾ ಮತ್ತು ಆಸ್ಟ್ರೇಲಿಯಾದ ಬೆಂಬಲಕ್ಕೆ ಜಾಗತಿಕ ಮಟ್ಟದಲ್ಲಿ ನಿಲ್ಲಬಹುದು ಎನ್ನುವ ಆತಂಕ ಕೂಡ ಚೀನಾದ ಮನದಲ್ಲಿದೆ. ಹೀಗಾಗಿ ಗಡಿಯಲ್ಲಿ ಸೈನ್ಯವನ್ನ ಜಮಾಯಿಸುತ್ತಿದೆ. ಸಾಮ ಮತ್ತು ದಾನ ದಿಂದ ಬಗ್ಗದಿದ್ದರೆ ಭಾರತವನ್ನ ದಂಡ ದಿಂದ ಬಗ್ಗಿಸುವೆ ಎನ್ನುವ ಹುಮ್ಮಸ್ಸು ಚೀನಾದ್ದು. ಭಾರತ ಅದಕ್ಕೆ ಒಂದಷ್ಟೂ ಹೆದರದೆ ತಾನು ಕೂಡ ಗಡಿಭಾಗದಲ್ಲಿ ಸೈನ್ಯದ ಜಮಾವಣೆಯಲ್ಲಿ ತೊಡಗಿದೆ. ಗಡಿ ಕ್ಯಾತೆ ಎನ್ನುವ ಹೆಸರು ಇದಕ್ಕೆ ನೀಡಿದ್ದಾರೆ. ಗಡಿ ವಿವಾದ ಇಂದು ನಿನ್ನೆಯದೇನಲ್ಲ, ಆದರೆ ಇದನ್ನ ಮುಂದೆ ಮಾಡಿಕೊಂಡು ಚೀನಾ ಈಗ ಕಾಲು ಕೆರೆದು ಜಗಳಕ್ಕೆ ಬಂದಿದೆ. ಜಾಗತಿಕ ಮಟ್ಟದಲ್ಲಿ ನನ್ನ ಬೆಂಬಲಿಸದಿದ್ದರೂ ಬೇಡ ಆದರೆ ತಟಸ್ಥವಾಗಿದ್ದರೆ ಸಾಕು, ನಾನು ಗಡಿ ತಂಟೆಗೆ ಬರುವುದಿಲ್ಲ ಎನ್ನುವ ಆಮಿಷ ಒಡ್ಡುವುದು ಆ ಮೂಲಕ ಭಾರತವನ್ನ ತಟಸ್ಥವಾಗಿಸುವುದು ಚೀನಾದ ಹುನ್ನಾರ. ಭಾರತ ಈ ಹುನ್ನಾರಕ್ಕೆ ಬಗ್ಗುವ ಹಾಗೆ ಕಾಣುತ್ತಿಲ್ಲ.

ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದು ಅಲ್ಲಿನ ಅಧಿಕಾರಿ ವರ್ಗ ಇದನ್ನ ತಹಬದಿಗೆ ತರಲು ಹರಸಾಹಸ ಪಡುತ್ತಿದೆ. ಯೂರೋಪು ಅಲ್ಪಮಟ್ಟದ ಚೇತರಿಕೆ ಕಂಡರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರ್ಥಿಕತೆಗೆ ಜೀವ ತುಂಬುವ ಕೆಲಸ ಬಾಕಿಯಿದೆ. ಹೀಗೆ ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಸಮಸ್ಯೆಗಳಿಂದ ಬಳಲುತ್ತಿದೆ. ಭಾರತದ ಮುಂದೆ ಅತ್ಯಂತ ತ್ವರಿತಗತಿಯಲ್ಲಿ ಪರಿಹರಿಸಬೇಕಾದ ಮುಖ್ಯ ಸಮಸ್ಯೆಗಳು ಹೀಗಿವೆ.

  1. ಮಾರುಕಟ್ಟೆಯನ್ನ ಪೂರ್ಣವಾಗಿ ಜನತೆಗೆ ತೆರೆಯಲು ನಿರ್ಧರಿಸಲಾಗಿದೆ. ಜೂನ್ 8 ರಿಂದ ಭಾಗಾಂಶ ಎಲ್ಲವೂ ಸೇವೆಗೆ ತೆರೆದುಕೊಳ್ಳಲಿವೆ. ಈ ಸಂಧರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬೇಕಾದ ಹಣಕಾಸು ನೆರವು ನೀಡುವುದು ಅತ್ಯಂತ ತ್ವರಿತಗತಿಯಲ್ಲಿ ಆಗಬೇಕಿದೆ. ಸರಕಾರವೇನೂ ಇಷ್ಟು ಕೋಟಿ ನೀಡಿದ್ದೇನೆ ಅಂದಿದೆ. ಅದು ಸರಿ ಕೂಡ. ಆದರೆ ಬಹಳಷ್ಟು ಬ್ಯಾಂಕುಗಳು ಇನ್ನು ನಮಗೆ ಸಂದೇಶ ಬಂದಿಲ್ಲ ಏನು ಕೈ ಆಡಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಬಹಳಷ್ಟು ಖಾಸಗಿ ಬ್ಯಾಂಕುಗಳು ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಗೆ ಸದಸ್ಯರಾಗದೆ ಇರುವುದು. ಅಥವಾ ಅಲ್ಲಿಂದ ಯಾವುದೇ ರೀತಿಯ ಸೂಚನೆ ಬಂದಿಲ್ಲದೆ ಇರುವುದು ಆಗಿದೆ. ಇದನ್ನ ಶೀಘ್ರವಾಗಿ ಪರಿಹರಿಸಬೇಕಾಗಿದೆ.
  2. ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಈ ವೈರಸ್ ನೊಂದಿಗೆ ನಾವು ವರ್ಷಾನುಗಟ್ಟಲೆ ಬದುಕಬೇಕಾಗಿದೆ ಎನ್ನುವ ಹೇಳಿಕೆಯನ್ನ ನೀಡಿದ್ದಾರೆ. ಅಂದಮೇಲೆ ಜನತೆಗೆ ವೈರಸ್ ನೊಂದಿಗೆ ಬದುಕಲು ಮಾಡಬೇಕಾದ ಪ್ರಾಥಮಿಕ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು. ಮಾಧ್ಯಮದಲ್ಲಿ ನಿತ್ಯವೂ ಕೋವಿಡ್ ಪಾಸಿಟಿವ್ ಬಂದ ಸ್ಥಳಗಳನ್ನ ವೈಭವೀಕರಿಸಿ ತೋರಿಸುತ್ತಾರೆ. ಮನೆಯಿಂದ ಹೊರಬಂದರೆ ಎಲ್ಲಿ ಈ ವೈರಸ್ ನಮ್ಮ ಹೆಗೆಲೇರುತ್ತೋ ಎನ್ನುವ ಭಯ ಜನರನ್ನ ಆವರಿಸಿದೆ. ಕೇಂದ್ರ ಸರಕಾರ ಇದರ ಬಗ್ಗೆ ಒಂದು ಅಧಿಕೃತ ಸೂಚನೆಯನ್ನ ಹೊರಡಿಸಬೇಕಿದೆ.
  3. ಎಲ್ಲಾ ಜೀವವೂ ಒಂದೇ! ಆದರೆ ಮಕ್ಕಳ ಜೀವದ ಪ್ರಶ್ನೆ ಬಂದಾಗ ಅದರಲ್ಲಿ ಭಾವನೆ ಹೆಚ್ಚಾಗುತ್ತದೆ. ನಗರ ಪ್ರದೇಶದಲ್ಲಿ ಮುಕ್ಕಾಲು ಪಾಲು ಜನ ಒಂದು ಮಗುವನ್ನ ಹೊಂದಿರುತ್ತಾರೆ. ಹೀಗಾಗಿ ನಗರ ಪ್ರದೇಶದಲ್ಲಿ ಪೋಷಕರು ಮಕ್ಕಳನ್ನ ಶಾಲೆಗೆ ಕಳಿಸಲು ಹಿಂಜರಿಯುತ್ತಿದ್ದಾರೆ. ಸರಕಾರ ಅದು ರಾಜ್ಯ ಅಥವಾ ಕೇಂದ್ರ ಸರಕಾರ ಯಾವುದೇ ಆಗಿರಲಿ, ಶಿಕ್ಷಣ ಕ್ಷೇತ್ರ ಕುರಿತು ದೃಢ ಧೋರಣೆ ತಳೆಯುವ ಅಗತ್ಯವಿದೆ. ಇಂದು ಭಾರತದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಮಾರ್ಪಾಟಾಗಿದೆ. ಪ್ರತಿ ರಾಜ್ಯ, ಪ್ರೈವೆಟ್ ಶಾಲೆ ಒಂದೊಂದು ನೀತಿಯನ್ನ ಅನುಸರಿಸುತ್ತಿವೆ. ಇದು ಬದಲಾಗಬೇಕು. ಇಂದಿನ ಸನ್ನಿವೇಶದಲ್ಲಿ ಇದರ ಬಗ್ಗೆ ಕೇಂದ್ರ ಸರಕಾರ ಒಂದು ನಿರ್ಧಾರ ತೆಗೆದುಕೊಂಡು ಅದನ್ನ ಪಾಲಿಸುವಂತೆ ಸೂಚಿಸಬೇಕಿದೆ.
  4. 2೦ ಲಕ್ಷ ಕೋಟಿಗೂ ಮೀರಿದ ಪ್ಯಾಕೇಜ್ ನಲ್ಲಿ ತತ್ಕಾಲಕ್ಕೆ ಫಲ ನೀಡುವ ಒಂದಷ್ಟು ಯೋಜನೆಗಳನ್ನ ಕೂಡ ಅಳವಡಿಸುವ ಅವಶ್ಯಕತೆ ಹೆಚ್ಚಾಗಿದೆ. ಅಲ್ಲದೆ ಇಷ್ಟು ದೊಡ್ಡ ಮೊತ್ತದ ಪ್ಯಾಕೇಜ್ ಬಜೆಟ್ ಹೊರತಾಗಿ ನೀಡಿರುವುದೇ ಅಥವಾ ಇದರಲ್ಲಿ ಮೊದಲೇ ಬಜೆಟ್ ಮಾಡಿದ ಹಣವೂ ಸೇರಿದೆಯೇ? ಎನ್ನುವುದನ್ನ ಕೂಡ ಸರಕಾರ ನಿಖರವಾಗಿ ಜನತೆಗೆ ಹೇಳುವುದು ಬಾಕಿಯಿದೆ.
  5. ಅವಶ್ಯಕ ವಸ್ತುಗಳನ್ನ ಅಂದರೆ ಆಹಾರ, ಬಟ್ಟೆ ಬಿಟ್ಟು ಇತರ ಅವಶ್ಯಕ ವಸ್ತುಗಳನ್ನ ಪಟ್ಟಿ ಮಾಡಿ ಅವಕ್ಕೆ ಬೆಂಬಲ ಬೆಲೆಯನ್ನ ಘೋಷಿಸುವುದು ಅಥವಾ ಸರಕಾರ ಖರೀದಿಸುವುದು ಮಾಡಬೇಕು. ಜನರನ್ನ ಮತ್ತೆ ಮಾರುಕಟ್ಟೆಗೆ ಬರುವಂತೆ ಮಾಡಬೇಕು. ಯಾರು ಎಷ್ಟೇ ಪ್ರಯತ್ನ ಪಡಲಿ ಜನಸಾಮಾನ್ಯ ಎಂದಿನಂತೆ ಖರ್ಚು ಮಾಡಲು ಶುರು ಮಾಡದ ಹೊರತು ಸಮಾಜ ಆರ್ಥಿಕವಾಗಿ ಉದ್ಧಾರವಾಗಲು ಸಾಧ್ಯವೇ ಇಲ್ಲ. ಜನ ಸಾಮಾನ್ಯನನ್ನ ಮತ್ತೆ ಸಾಮಾನ್ಯ ಸ್ಥಿತಿಗೆ ತರುವ, ಅವನ ಮನೋಬಲವನ್ನ ಹೆಚ್ಚಿಸುವ ಕೆಲಸ ಮಾಡದಿದ್ದರೆ. ಭಾರತದ ಆರ್ಥಿಕತೆ 2021ರಲ್ಲೂ ಚೇತರಿಕೆ ಕಾಣುವುದಿಲ್ಲ. ಕೇಂದ್ರ ಸರಕಾರ ಈ ಬಗ್ಗೆ ಒಂದಷ್ಟು ಯೋಜನೆಗಳನ್ನ ಹಾಕಿಕೊಳ್ಳಬೇಕು.

ಕೊನೆಮಾತು: ಇಂದು ಭಾರತವಷ್ಟೇ ಅಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿವೆ. ಸಮಸ್ಯೆಗಳಿಂದ ಮುಕ್ತರಾಗುವುದು ಸದ್ಯದ ಸನ್ನಿವೇಶದಲ್ಲಿ ಸಾಧ್ಯವಿಲ್ಲದ ಮಾತು. ಆದರೆ ಸಮಸ್ಯೆಗಳ ಜೊತೆಯಲ್ಲಿ ಬದುಕುವುದು ಯಾರು ಬೇಗ ಕಲಿಯುತ್ತಾರೆ ಅವರು ನಾಯಕರಾಗುತ್ತಾರೆ. ಜೊತೆಗೆ ಸಮಸ್ಯೆಯಿಂದ ವೇಗವಾಗಿ ಮುಕ್ತಿ ಕೂಡ ಪಡೆಯುತ್ತಾರೆ. ಭಾರತ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಡಬೇಕಾದ ಅವಶ್ಯಕತೆಯಿದೆ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com