ಏರಿದ್ದು ಇಳಿಯಬೇಕು ಹಾಗೆ ಇಳಿದದ್ದು ಕೂಡ ಏರಲೇಬೇಕು! ಅದು ಪ್ರಕೃತಿ ನಿಯಮ

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ಏರಿದ್ದು ಇಳಿಯಬೇಕು ಹಾಗೆ ಇಳಿದದ್ದು ಕೂಡ ಏರಲೇಬೇಕು!
ಏರಿದ್ದು ಇಳಿಯಬೇಕು ಹಾಗೆ ಇಳಿದದ್ದು ಕೂಡ ಏರಲೇಬೇಕು!

ಬದುಕು ಎಂದಿಗೂ ಜೀವನ್ಮುಖಿ. ಇದರ ಅರ್ಥ ಬಹಳ ಸರಳ. ಜೀವನ ಎಲ್ಲರಿಗೂ ಒಂದು ಮರು ಅವಕಾಶ ಕೊಡುತ್ತದೆ. ಕೋವಿಡ್ ಬಂದಿದೆ ಅಂದ ತಕ್ಷಣ ಜೀವನ ಮುಗಿದು ಹೋಯಿತು ಎನ್ನುವಂತಿಲ್ಲ. ಅದು ಪ್ರಾರಂಭ ಒಂದರ ತಾತ್ಕಾಲಿಕ ಅಂತ್ಯ. ಅಂತ್ಯವೂ ತಾತ್ಕಾಲಿಕ, ಅದು ಮರು ಹುಟ್ಟಿಗೆ ಮುನ್ನುಡಿ. 

ಬದುಕು ಅಥವಾ ಆರ್ಥಿಕತೆ ಎನ್ನುವುದು ಒಂದು ಸುದೀರ್ಘ ಪಯಣವಿದ್ದಂತೆ. ಅದೊಂದು ವಿಡಿಯೋ ಚಿತ್ರವೇ ಹೂರತು ಸ್ಟಿಲ್ ಫೋಟೋವಲ್ಲ. ಹೀಗೆ ಹೇಳಲು ಕಾರಣವೇನು ಗೊತ್ತೇ? ಒಂದು ಫೋಟೋದಲ್ಲಿ ನೀವು ಚೆನ್ನಾಗಿ ಕಾಣಬಹುದು ಅಥವಾ ಚನ್ನಾಗಿ ಕಾಣದೆ ಇರಬಹುದು , ಅಂದ ಮಾತ್ರಕ್ಕೆ ಅದು ಸತ್ಯವಲ್ಲ. ವಿಡಿಯೋದಲ್ಲಿ ಮಾತ್ರ ನಮ್ಮ ನಿಜವಾದ ಬಣ್ಣ ಗೊತ್ತಾಗುತ್ತೆ. ಇದರ ಅರ್ಥ ಕೂಡ ಸರಳ. ಚಲನಶೀಲವಾದ ಬದುಕಿನಲ್ಲಿ ನಿಜವಾಗಿ ಸಮರ್ಥವಿದ್ದ ಯಾವುದೇ ಬಿಸಿನೆಸ್ ಅಥವಾ ಐಡಿಯಾಗಳು ಎಂದೂ ಸೋಲುವುದಿಲ್ಲ. ಅವು ತಾತ್ಕಾಲಿಕ ಹಿನ್ನಡೆಗೆ ತುತ್ತಾಗಿರುತ್ತವೆ ಅಷ್ಟೇ. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಲಾಕ್ ಡೌನ್ ತೆರೆಯಯಲ್ಪಟ್ಟಿದೆ. ಬೆಂಗಳೂರು ಮಹಾನಗರಿಯಲ್ಲಿ ಹೆಚ್ಚು ಕಡಿಮೆ ಟ್ರಾಫಿಕ್ ಹಿಂದಿನ ಮಟ್ಟವನ್ನ ಮುಟ್ಟುತ್ತಿದೆ. ಇದೊಂದು ಬದುಕು ಮರಳಿ ಹಳಿಗೆ ಬರುತ್ತಿರುವ ಸೂಚನೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 80 ಡಾಲರ್ ತಲುಪಿದೆ. ಕೋವಿಡ್ ಕಾರಣ ಜಗತ್ತಿನಲ್ಲಿ ತೈಲದ ಬೇಡಿಕೆ ಕುಸಿದು ಅಮೆರಿಕಾದ ತೈಲ ಬೆಲೆ ಮೈನಸ್ ನಲವತ್ತು ಡಾಲರ್ ಗೆ ತಲುಪಿ ಅದು ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿತ್ತು. ಗಮನಿಸಿ ನೋಡಿ ಕೇವಲ ಏಳೆಂಟು ವಾರದ ಹಿಂದೆ ತೈಲ ಮಾರುಕಟ್ಟೆ ಮುಂದೆ ಚೇತರಿಸಿಕೊಳ್ಳುವುದಿಲ್ಲವೇನೂ ಎನ್ನುವ ಮಟ್ಟಕ್ಕೆ ಜನ, ಹೂಡಿಕೆದಾರರು ಪ್ಯಾನಿಕ್ ಗೆ ಒಳಗಾಗಿದ್ದರು. ಇಂದು ಅದೇ ತೈಲದ ಬೆಲೆ ಬ್ಯಾರಲ್ ಗೆ 8೦ ಡಾಲರ್!. ಬದಲಾವಣೆ ಜಗದ ನಿಯಮ. ನಮ್ಮ ಬಿಪಿ ಗ್ರಾಫ್ ಏರುಪೇರಿಲ್ಲದೆ ಸಮವಾಗಿಬಿಟ್ಟರೆ ಅದಕ್ಕೆ ವೈದ್ಯಕೀಯ ವಿಜ್ಞಾನದಲ್ಲಿ ಸಾವು ಎನ್ನುತ್ತಾರೆ ಅಲ್ಲವೇ? ಆರ್ಥಿಕತೆ ಇರಬಹುದು ಅಥವಾ ಬದುಕಿರಬಹುದು ಏಳು-ಬೀಳು ಸಾಮಾನ್ಯ. ಏರಿದ್ದು ಇಳಿಯಬೇಕು ಹಾಗೆ ಇಳಿದದ್ದು ಕೂಡ ಮೇಲೇರಲೇಬೇಕು ಅದು ಜಗದ ನಿಯಮ, ಪ್ರಕೃತಿ ನಿಯಮ.

ಹೆಚ್ಚಿರುವ ಕಚ್ಚಾ ತೈಲದ ಬೆಲೆ ಜಗತ್ತಿನಲ್ಲಿ ಮತ್ತೆ ತೈಲದ ಮೇಲಿನ ಬೇಡಿಕೆ ಹೆಚ್ಚಾಗಿದೆ ಎನ್ನುವ ಸಂದೇಶವನ್ನ ರವಾನಿಸುತ್ತಿದೆ. ತೈಲದ ಬೆಲೆ ಹೆಚ್ಚಾಗಿದೆ ಎನ್ನುವುದು ಸಮಾಜ ಮತ್ತೆ ಉತ್ಪಾದನೆಗೆ, ಓಡಾಡಕ್ಕೆ ಮರಳಿದೆ ಎಂದರ್ಥ. ಇದು ಶುಭ ಸೂಚನೆ.

ನಮ್ಮ ಭಾರತದಲ್ಲಿ ಕೂಡ ಹಲವಾರು ವಲಯಗಳು ಚೇತರಿಕೆ ಕಂಡು ಒಳ್ಳೆಯ ವ್ಯಾಪಾರ ವೃದ್ಧಿಯನ್ನ ದಾಖಲಿಸುತ್ತಿದೆ. ಅವುಗಳ ಬಗ್ಗೆ ಒಂದಷ್ಟು ತಿಳಿದುಕೊಂಡು ಸಂಕಷ್ಟದಲ್ಲಿರುವ ವಲಯಗಳ ಬಗ್ಗೆ ಕೂಡ ಒಂದಷ್ಟು ವಿವರಗಳನ್ನ ನೋಡೋಣ.

  1. ಆಟೋಮೊಬೈಲ್ ವಲಯ: ಬೆಂಗಳೂರು ನಗರದಲ್ಲಿ ಮತ್ತು ಭಾರತ ದೇಶದಲ್ಲಿ ಮೂರ್ನಾಲ್ಕು ತಿಂಗಳ ಕಾಲ ಈ ವಲಯದಲ್ಲಿ ಯಾವುದೇ ವಹಿವಾಟು ಇರಲಿಲ್ಲ. ಲಾಕ್ ಡೌನ್ ತೆಗೆದ ನಂತರ ದ್ವಿಚಕ್ರ ಮತ್ತು ಕಾರುಗಳ ಖರೀದಿ ಮತ್ತು ಅವುಗಳ ನೊಂದಾವಣಿ ಭರಾಟೆ ಜೋರಾಗಿದೆ. ಕೋವಿಡ್ ನಂತರ ಈ ಕ್ಷೇತ್ರ ಇಷ್ಟು ವೇಗವಾಗಿ ಚೇತರಿಕೆ ಕಾಣಬಹುದು ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆರೇಳು ವಾರಗಳ ಹಿಂದಿನ ಹಣಕ್ಲಾಸು ಅಂಕಣದಲ್ಲಿ ಕೂಡ ಯಾವ ಕ್ಷೇತ್ರ ವೇಗವಾಗಿ ಚೇತರಿಕೆ ಕಾಣುತ್ತದೆ ಎನ್ನುವುದರಲ್ಲಿ ಆರೊಮೊಬೈಲ್ ಕ್ಷೇತ್ರ ಇಷ್ಟು ಶೀಘ್ರವಾಗಿ ಚೇತರಿಕೆ ಕಾಣಲಾರದು ಎಂದೇ ಬರೆಯಲಾಗಿತ್ತು. ನಿರೀಕ್ಷೆ ತಪ್ಪಾಗಿದೆ. ಆದರೂ ಅದು ಒಳ್ಳೆಯದಕ್ಕೆ ಆಗಿರುವುದರಿಂದ ಸಂತೋಷವೂ ಇದೆ.
  2. ಚಿನ್ನ, ಆಭರಣ ಮಳಿಗೆಗಳು: ಈ ಕ್ಷೇತ್ರದಲ್ಲಿ ಹಿಂದಿನ ವ್ಯಾಪಾರಕ್ಕಿಂತ ಹೆಚ್ಚಿನ ವ್ಯಾಪಾರವಾಗುತ್ತದೆ ಎನ್ನುವುದನ್ನ ಹಣಕ್ಲಾಸು ಅಂಕಣದಲ್ಲಿ ಬರೆಯಲಾಗಿತ್ತು. ಅದು ನಿಜವಾಗಿದೆ. ಈ ವಲಯದಲ್ಲಿ ಬಂಗಾರ ಮತ್ತು ಆಭರಣದ ಮೇಲಿನ ಬೇಡಿಕೆ ಬಹಳ ಹೆಚ್ಚಾಗಿದೆ. ಜಗತ್ತಿನಲ್ಲಿ ಅಸ್ಥಿರತೆ ಹೆಚ್ಚಾದಾಗ ಚಿನ್ನದ ಮೇಲಿನ ಹೂಡಿಕೆ ಬಹಳ ಹೆಚ್ಚಾಗುತ್ತದೆ. ಊಹಿಸಿದಂತೆ ಈ ವಲಯದಲ್ಲಿ ಮತ್ತೆ ಭರ್ಜರಿ ವ್ಯಾಪಾರ ಶುರುವಾಗಿದೆ.
  3. ರಿಯಲ್ ಎಸ್ಟೇಟ್: ಬಹಳಷ್ಟು ಇಂಗ್ಲಿಷ್ ಪೇಪರ್ ಗಳು ಮತ್ತು ಅನಾಲಿಸ್ಟ್ ಗಳು ಈ ಕ್ಷೇತ್ರ ಚೇತರಿಕೆ ಕಾಣುವುದಿಲ್ಲ ಎನ್ನುವಂತೆ ಬರೆದಿದ್ದರೂ ಬಹಳಷ್ಟು ಜನರ ಪ್ರಿಡಿಕ್ಷನ್ ಗೆ ವಿರುದ್ಧವಾಗಿ ಈ ವಲಯದಲ್ಲಿ ಚೇತರಿಕೆ ಕಾಣುತ್ತದೆ ಎನ್ನುವ ಆಶಾಭಾವವನ್ನ ಹಣಕ್ಲಾಸು ಬರಹದಲ್ಲಿ ನೀಡಲಾಗಿತ್ತು. ಅದು ನಿಜವಾಗುವ ಲಕ್ಷಣಗಳನ್ನ ಸಮಾಜದಲ್ಲಿ ಗುರುತಿಸಬಹುದು. ನೋಂದಾವಣಿ ಕಛೇರಿಗಳಲ್ಲಿ ಎಂದಿನಂತೆ ಜನ ಗಿಜಿಗುಡಲು ಪ್ರಾರಂಭಿಸಿದ್ದಾರೆ.
  4. FMCG: ಅಂದರೆ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಅಡಿಯಲ್ಲಿ ಬರುವ ಎಲ್ಲಾ ಉತ್ಪನ್ನಗಳೂ ಕೂಡ ಕೋವಿಡ್ ಸಮಯದಲ್ಲೂ ಕೂಡ ಬಹಳಷ್ಟು ವ್ಯಾಪಾರವನ್ನ ವೃದ್ಧಿಸಿಕೊಂಡಿವೆ. ಇವುಗಳ ವ್ಯಾಪಾರ ಕುಸಿಯುವ ಸಾಧ್ಯತೆ ಬಹಳ ಕಡಿಮೆ.
  5. ಹೋಟೆಲ್, ರೆಸ್ಟೊರೆಂಟ್ ಇತರೆ ಹಾಸ್ಪಿಟಾಲಿಟಿ ವಲಯ: ಇದು ಅತ್ಯಂತ ಹೆಚ್ಚು ಪೆಟ್ಟು ತಿಂದ ವಲಯ. ಅಚ್ಚರಿ ಎನ್ನುವಂತೆ ಈ ವಲಯ ಚೇತರಿಕೆ ಕಾಣುತ್ತಿದೆ. ಜೂನ್ 8 ರಿಂದ ಹೋಟೆಲ್, ರೆಸ್ಟೊರೆಂಟ್ ಗಳನ್ನ ಪೂರ್ಣವಾಗಿ ಕೆಲಸ ಮಾಡಲು ಮುಕ್ತವನ್ನಾಗಿಸಿದ್ದಾರೆ. ಈ ಸಾಲುಗಳನ್ನ ಬರೆಯುವ ವೇಳೆಗೆ ಎರಡು ಪೂರ್ಣ ದಿನದ ವಹಿವಾಟಿನ ಅಲ್ಪಸ್ವಲ್ಪ ಡೇಟಾ ಶೇಖರಣೆ ಮಾಡಿದ್ದೇನೆ. ಆದರ ಪ್ರಕಾರ ಹಿಂದಿನ ವ್ಯಾಪಾರದ 25ರಿಂದ 40 ಪ್ರತಿಶತ ವ್ಯಾಪಾರ ಸದ್ಯಕ್ಕೆ ಆಗುತ್ತಿದೆ. ಇದೊಂದು ಉತ್ತಮ ಬೆಳವಣಿಗೆ. ಲಾಕ್ ಡೌನ್ ತೆರವಾಗಿ ಎರಡು ದಿನದಲ್ಲಿ ಇಷ್ಟರ ಮಟ್ಟಿನ ವ್ಯಾಪಾರವಾಗುತ್ತದೆ ಎನ್ನುವುದನ್ನ ಯಾರೂ ನಿರೀಕ್ಷಿಸಿರಲಿಲ್ಲ. ಇನ್ನು ರಸ್ತೆ ಬದಿಯ ತಿಂಡಿ ಅಂಗಡಿಗಳು ಮೊದಲಿನಂತೆ ಕಿಕ್ಕಿರಿದಿವೆ.

ಬದುಕೆಂದರೆ ಒಂದು ನಾಣ್ಯದಂತೆ. ಅದಕ್ಕೆ ಎರಡು ಮುಖ ಇದ್ದೇ ಇರುತ್ತದೆ. ಕೆಲವೊಮ್ಮೆ ಸನ್ನಿವೇಶಕ್ಕೆ ತಕ್ಕಂತೆ ಅದು ಹೆಚ್ಚಾಗಲೂಬಹುದು. ಹಲವಾರು ವಲಯಗಳು ತೀವ್ರವಾಗಿ ಸಮಸ್ಯೆಗಳನ್ನ ಎದುರಿಸುತ್ತಿವೆ.

  1. ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳು ತಲೆದೋರಿವೆ. ಕೆಲಸಗಾರರ ಕೊರತೆ ಒಂದೆಡೆ ಯಾದರೆ ನಾಳಿನ ಬೇಡಿಕೆ ಕುರಿತು ಉದ್ಯಮಿಗಳಲ್ಲಿ ಇರುವ ಸಂಶಯ ಇಲ್ಲಿನ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ. ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಹಳಷ್ಟು ಸಣ್ಣ ಪುಟ್ಟ ಕೈಗಾರಿಕೆಗಳು ನಿತ್ಯ ಮುಚ್ಚುತ್ತಿವೆ. ಸರಕಾರ ಇವರಿಗೆ ಹಣವನ್ನ, ಸಹಾಯವನ್ನ ನೀಡಿವುದರಲ್ಲಿ ಮಾಡುತ್ತಿರುವ ವಿಳಂಬ ಬಹಳಷ್ಟು ಉದ್ದಿಮೆ ಮುಳುಗಲು ಕಾರಣವಾಗಿದೆ.
  2. ಕುಸಿಯುತ್ತಿರುವ ಗಾರ್ಮೆಂಟ್ ಉದ್ಯಮ: ಗಾರ್ಮೆಂಟ್ ಗಳಲ್ಲಿ ಬಹಳಷ್ಟು ಜನರನ್ನ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎನ್ನುವ ಸುದ್ದಿಯನ್ನ ನೀವು ಓದಿರುತ್ತಿರಿ. ಅದಕ್ಕೆ ಮುಖ್ಯ ಕಾರಣ ಬೇಡಿಕೆಯ ಕುಸಿತ. ಭಾರತದ ಗಾರ್ಮೆಂಟ್ ಬಹಳಷ್ಟು ದೇಶಗಳಿಗೆ ರಫ್ತಾಗುತ್ತಿತ್ತು. ಈಗ ಕೋವಿಡ್ ಕಾರಣ ಆಮದು-ರಫ್ತು ಎರಡೂ ಕುಸಿತ ಕಂಡಿದೆ. ನಾವು ಹೇಗೆ ಆತ್ಮನಿರ್ಭರ ಭಾರತ ಎಂದೆವೋ ಹಾಗೆ ಪ್ರತಿಯೊಂದು ದೇಶವೂ ಸ್ವಾವಲಂಬಿಯಾಗಲು ಹವಣಿಸುತ್ತಿವೆ. ಇದರ ಜೊತೆಗೆ ಜನರು ಕೂಡ ಎರಡು ಕೊಳ್ಳುವ ಜಾಗದಲ್ಲಿ ಒಂದು ಕೊಳ್ಳುತ್ತಿದ್ದಾರೆ. ಹೀಗಾಗಿ ಸಾಮಾನ್ಯವಾಗೇ ಬೇಡಿಕೆಯ ಕುಸಿತವನ್ನ ಈ ವಲಯ ಕಾಣುತ್ತಿದೆ.
  3. ಕುಸಿಯುತ್ತಲೇ ಇರುವ ಟೂರಿಸಂ ಉದ್ಯಮ: ಇದೊಂದು ಕ್ಷೇತ್ರ ಬೆಳಕಿನ ಕಿರಣ ಕಾಣಲು ಬಹಳಷ್ಟು ಸಮಯ ಬೇಕು. ಕಾರಣವಿಲ್ಲದೆ ಜನರು ವಿದೇಶಿ ಪ್ರಯಾಣ ದೂರದ ಮಾತು ಪಕ್ಕದ ರಾಜ್ಯಕ್ಕೂ ಹೋಗುವುದಿಲ್ಲ. ಹೀಗಾಗಿ ಈ ವಲಯ ಕನಿಷ್ಟ ಇನ್ನೊಂದು ವರ್ಷ ಚೇತರಿಕೆ ಕಾಣುವುದು ಸಂಶಯ.
  4. ಐಷರಾಮಿ ವಸ್ತುಗಳ ಮೇಲಿನ ಬೇಡಿಕೆ ಕೂಡ ಚೇತರಿಕೆ ಕಾಣಲು ಸಮಯವಾಗುತ್ತದೆ. ಬೆಲೆಬಾಳುವ ವಾಚ್, ಪರ್ಫ್ಯೂಮ್, ಹೆಂಗಸರ ಅಲಂಕಾರಿಕ ಸಾಧನಗಳು ಇತ್ಯಾದಿ ಬೇಡಿಕೆ ಕುಸಿತವನ್ನ ದಾಖಲಿಸುತ್ತವೆ.
  5. ಕಾರ್ಪೊರೇಟ್ ಉದ್ಯಮಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಹೇಳಿರುವುದು ಮತ್ತು ಜನ ಸಾಮಾನ್ಯ ಅತಿ ಅವಶ್ಯಕವಲ್ಲದಿದ್ದರೆ ಮನೆಯಿಂದ ಹೊರಗೆ ಹೋಗದಿರುವುದು ಟ್ರಾನ್ಸ್ಪೋರ್ಟ್ ಬಿಸಿನೆಸ್ ಅಂದರೆ ಆಟೋ, ಓಲಾ, ಉಬರ್ ಇವುಗಳಿಗೆ ಕೂಡ ದೊಡ್ಡ ಹೊಡೆತವನ್ನ ನೀಡಿದೆ. ಈ ವಲಯ ಕೂಡ ಮರಳಿ ಚೇತರಿಕೆ ಕಾಣಲು ಸಮಯವನ್ನ ಬೇಡುತ್ತದೆ.

ಕೊನೆ ಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಬದುಕೆಂದರೆ ಇಷ್ಟೇ ಎನ್ನುವಂತಿಲ್ಲ. ಆರ್ಥಿಕತೆಯೂ ಕೂಡ ಇದಕ್ಕೆ ಹೊರತಲ್ಲ. ಹಲವಾರು ವಲಯಗಳು ಮತ್ತೆ ವ್ಯಾಪಾರ ವಹಿವಾಟು ಶುರು ಮಾಡಿಕೊಂಡಿವೆ. ಹಲವು ಮೇಲೇಳುತ್ತಿವೆ. ಹಲವು ಇನ್ನು ಮಕಾಡೆ ಮಲಗಿವೆ. ಹೇಗೆ ಒಬ್ಬ ಮನುಷ್ಯ ಸದಾ ಓಡುತ್ತಲೇ ಇರಲು ಸಾಧ್ಯವಿಲ್ಲವೂ ಹಾಗೆಯೇ ವ್ಯಾಪಾರ ಕೂಡ ಸದಾ ಹೆಚ್ಚಾಗುತ್ತಿರಲು ಸಾಧ್ಯವಿಲ್ಲ. ಬಹಳಷ್ಟು ಓಡಿದ ವ್ಯಕ್ತಿ ದಣಿವಾರಿಸಲು ಕುಳಿತುಕೊಳ್ಳಲೇ ಬೇಕು ಅಲ್ಲವೇ? ವ್ಯಾಪಾರವೂ ಹಾಗೆ, ಆರ್ಥಿಕತೆಯೂ ಹಾಗೆ ಸದಾ ಬುಲ್ ರನ್ ಸಾಧ್ಯವಿಲ್ಲದ ಮಾತು. ಸದ್ಯದ ಸಮಯವನ್ನ ದಣಿವಾರಿಸಿಕೊಳ್ಳಲು ಕುಳಿತ ಸಮಯ ಎಂದುಕೊಳ್ಳಬೇಕು. ಈ ಸಮಯದಲ್ಲಿ ಹೊಸ ಚೈತನ್ಯವನ್ನ ಕ್ರೋಡೀಕರಿಸಿಕೊಂಡು ಹೊಸ ಹುಮ್ಮಸ್ಸಿನಿಂದ ಮತ್ತೆ ತಮ್ಮ-ತಮ್ಮ ಕಾರ್ಯಕ್ಷೇತ್ರಕ್ಕೆ ಧುಮುಕಬೇಕಿದೆ. ನೆನಪಿರಲಿ ಬದುಕು ಎಂದಿಗೂ ಜೀವನ್ಮುಖಿ.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com