ಸರಿಯಾಗಿ ಬಳಕೆಯಾಗಬೇಕಿದೆ ಡಿಜಿಟಲ್ ಇಂಡಿಯ ಎನ್ನುವ ವೇದಿಕೆ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಡಿಜಿಟಲ್ ಇಂಡಿಯಾ
ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ ಎನ್ನುವುದು ಕೇಂದ್ರ ಸರಕಾರದ ಬಹು ದೊಡ್ಡ ಕನಸುಗಳಲ್ಲಿ ಒಂದು. ಸರಕಾರದ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳು ಮಧ್ಯವರ್ತಿಗಳ ಕೈ ಚಳಕವಿಲ್ಲದೆ ನೇರವಾಗಿ ನಾಗರಿಕರಿಗೆ ತಲುಪಬೇಕು ಎನ್ನುವುದು ಡಿಜಿಟಲ್ ಇಂಡಿಯಾ ಯೋಜನೆಯ ಉದ್ದೇಶ. ಇಂಟರ್ನೆಟ್ ಬಳಕೆಯ ಮೂಲಕ ಸರಕಾರದ ಅನೇಕ ಯೋಜನೆಗಳನ್ನ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗಳು ಪಡೆಯಬಹುದು. ಗಮನಿಸಿ ಇಲ್ಲಿ ಸರಕಾರಿ ಕರ್ಮಚಾರಿ ಇರಬಹುದು ಅಥವಾ ಇನ್ನ್ಯಾವುದೇ ಮಧ್ಯವರ್ತಿಯ ಅಡಚಣೆಯಿಲ್ಲ. ನೇರವಾಗಿ ಆಯಾ ಯೋಜನೆಗೆ ಸಂಬಂಧಪಟ್ಟ ಅರ್ಜಿಗಳನ್ನ ಭರ್ತಿ ಮಾಡಿ ಅದನ್ನ ಆನ್ಲೈನ್ ಮೂಲಕ ಸಂಬಂಧಪಟ್ಟ ಕಚೇರಿಗೆ ತಲಿಪಿಸಿದರೆ ಮುಗಿಯಿತು. ಯೋಜನೆಯ ಫಲಾನುಭವಿಯಾಗಲು ವಿಧಿಸಿರುವ ಷರತ್ತುಗಳನ್ನ ಪೂರ್ಣಗೊಳಿಸಿದರೆ ಅದು ಆಯಾ ವ್ಯಕ್ತಿಯ ಖಾತೆಗೆ ಜಮಾ ಆಗಿರುತ್ತದೆ. ಇದಷ್ಟೇ ಅಲ್ಲದೆ ಮಾಹಿತಿಯನ್ನ ವೇಗವಾಗಿ ನಾಗರಿಕರಿಗೆ ತಲುಪಿಸುವುದು ಮತ್ತು ಸರಕಾರಿ ಕೆಲಸಕ್ಕೆ ಅವರು ಕಚೇರಿಗೆ ಅಲೆಯುವ ಬದಲು ಅವರಿಗೆ ಬೇಕಾದ ಕೆಲಸವನ್ನ ಅವರ ಮನೆಯ ಬಾಗಿಲಲ್ಲೇ ಕೂತು ಪೊರೈಸಿಕೊಳ್ಳುವಂತೆ ಮಾಡುವುದು ಕೂಡ ಡಿಜಿಟಲ್ ಇಂಡಿಯಾ ಯೋಜನೆಯ ಉದ್ದೇಶಗಳಲ್ಲೊಂದು. 
ಕೊರೋನ ವೈರಸ್ ದಾಳಿಯಾದ ಹಿನ್ನೆಲೆಯಲ್ಲಿ ಭಾರತ ಲಾಕ್ ಡೌನ್ ಅಪ್ಪಿಕೊಂಡಾಗ ಜನಧನ್ ಖಾತೆಯ ಮೂಲಕ ಮಾಸಿಕ ಐನೂರು ರೂಪಾಯಿ ಮಧ್ಯವರ್ತಿಗಳ ಸಹಾಯವಿಲ್ಲದೆ ತಲುಪಿದ್ದು ಇಂತಹ ಕನಸಿನ ಕಾರ್ಯ ಯೋಜನೆಯಿಂದ.

ಜುಲೈ1, 2015 ರಂದು ಇದನ್ನ ಚಾಲನೆಗೆ ತರಲಾಯಿತು. ಭಾರತ ಹಳ್ಳಿಗಳ ದೇಶ. ಈ ಹಳ್ಳಿಗಳನ್ನ ಮುಖ್ಯವಾಹಿನಿಯೊಂದಿಗೆ ಬೆರೆಯುವಂತೆ ಮಾಡುವುದು ಮತ್ತು ಸಮಾಜದಲ್ಲಿ ಹೆಚ್ಚಾಗಿ ಚಲಾವಣೆಯಲ್ಲಿರುವ ಹಣದ ವಹಿವಾಟನ್ನ ಆದಷ್ಟೂ ಕಡಿಮೆ ಮಾಡುವುದು ಆ ಮೂಲಕ ಕಪ್ಪು ಹಣವನ್ನ ನಿಯಂತ್ರಣಕ್ಕೆ ತರುವುದು ಕೂಡ ಡಿಜಿಟಲ್ ಇಂಡಿಯದ ಯೋಜನೆ. ಇದರಿಂದ ಸರಕಾರಿ ವಹಿವಾಟುಗಳು ಅತ್ಯಂತ ಪಾರದರ್ಶಕವಾಗುತ್ತದೆ. ನಾಗರಿಕರಿಗೆ ಸರಕಾರದ ಕಾರ್ಯಗಳ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಆದರೆ ಇಲ್ಲಿ ಅತ್ಯಂತ ಮುಖ್ಯವಾದ ಒಂದು ತೊಂದರೆಯಿದೆ. ಬ್ಯಾಂಕುಗಳು ಡಿಜಿಟಲ್ ವಹಿವಾಟುಗಳ ಮೇಲೆ ತಮ್ಮ ಶುಲ್ಕಗಳನ್ನ ಹಾಕುತ್ತದೆ. ವ್ಯಾಪಾರಿಗಳು ಕಾರ್ಡ್ ಮೂಲಕ ಹಣ ಪಾವತಿಸುತ್ತೇವೆ ಎಂದರೆ ಸಾಕು 2 ಅಥವಾ 3 ಪ್ರತಿಶತ ಹಣವನ್ನ ಪೀಕುತ್ತಿದ್ದಾರೆ. ಡಿಜಿಟಲ್ ಇಂಡಿಯಾ ಎನ್ನುವ ಕನಸು ಪೂರ್ಣವಾಗಿ ನನಸಾಗಲು ಇಂತಹ ತೊಂದರೆಗಳನ್ನ ನಿವಾರಿಸಿಕೊಳ್ಳಬೇಕಿದೆ.

ಡಿಜಿಟಲ್ ಇಂಡಿಯಾ ಯೋಜನೆಯನ್ನ ಸಾಕಾರಗೊಳಿಸಲು ಕೇಂದ್ರ ಸರಕಾರ ಈ ಯೋಜನೆಯನ್ನ ಹನ್ನೆರಡು ಸಣ್ಣ ಯೋಜನೆಗಳನ್ನಾಗಿ ವಿಭಜಿಸಿದೆ. ಅಂದರೆ ಡಿಜಿಟಲ್ ಇಂಡಿಯಾ ಎನ್ನುವ ಮಹತ್ವದ ಯೋಜನೆಯನ್ನ ಪೂರ್ಣಗೊಳಿಸಲು ಇದನ್ನ ವಿಭಜಿಸಿ ಅವುಗಳನ್ನ ಕಾರ್ಯಸಾಧುವನ್ನಾಗಿಸಿದೆ. ಏನಿವು? ಎನ್ನುವುದು ಪ್ರತಿಯೊಬ್ಬ ನಾಗರಿಕನೂ ತಿಳಿದುಕೊಂಡಿರಬೇಕಾದ ವಿಷಯವಾಗಿದೆ. ಡಿಜಿಟಲ್ ಇಂಡಿಯಾ ಗೆಲುವಿಗೆ, ನಾಗರೀಕರಿಗೆ ಸರಕಾರ ನೀಡಿರುವ ಆ ಹನ್ನೆರಡು ಯೋಜನೆಗಳೇನು ತಿಳಿದುಕೊಳ್ಳೋಣ.

  1. ಡಿಜಿ ಲಾಕರ್: ಭಾರತೀಯ ನಾಗರೀಕ ಈ ಸೌಲಭ್ಯವನ್ನ ಬಳಸಿಕೊಳ್ಳಬಹುದು. ಇದೊಂದು ಕ್ಲೌಡ್ ಆಧಾರಿತ ಸೇವೆಯಾಗಿದೆ. ಇಲ್ಲಿ ಆಧಾರ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ಸರ್ಟಿಫಿಕೇಟ್ ಗಳನ್ನ ಶೇಖರಿಸಿ ಇಡಬಹುದು. ಇದರಿಂದ ಈ ಡಾಕ್ಯುಮೆಂಟ್ ಗಳನ್ನ ಪದೇ ಪದೇ ಪರಿಶೀಲಿಸುವ ಅಗತ್ಯ ಬರುವುದಿಲ್ಲ. ಇದನ್ನ ಇಲೆಕ್ಟ್ರಾನಿಕ್ ವೆರಿಫಿಕೇಷನ್ ನಂತೆ ಬಳಸಿಕೊಳ್ಳಬಹುದು.
  2. ಮೈ ಗೊವ್ ಡಾಟ್ ಇನ್: ಇದು ಸರಕಾರಿ ಸೇವೆ ನೀಡುವ ವೆಬ್ ಪೋರ್ಟಲ್. ಇದರಲ್ಲಿ ನಾಗರಿಕರು ನೇರವಾಗಿ ಭಾಗಿಯಾಗಬಹುದು. ಇಲ್ಲಿ “Discuss”, “Do” and “Disseminate” ಎನ್ನುವ ವಿಭಾಗಗಲ್ಲಿ ನಾಗರೀಕರು ಪಾಲ್ಗೊಳ್ಳಬಹುದು ತಮಗೆ ಅನ್ನಿಸಿದ್ದ ಹೇಳಿಕೊಳ್ಳಬಹುದು.
  3. ಇ-ಸೈನ್ ಫ್ರೇಮ್ವರ್ಕ್: ಇದೊಂದು ಡಿಜಿಟಲ್ ಸಿಗ್ನೇಚರ್ ಮಾಡುವ ವ್ಯವಸ್ಥೆ ಕಲ್ಪಿಸುವ ಯೋಜನೆ. ಇದರಲ್ಲಿ ಆಧಾರ್ ಬಳಸಿ ಯಾವುದೇ ಡಾಕ್ಯುಮೆಂಟ್ ಅನ್ನು ಇಲೆಕ್ಟ್ರಾನಿಕ್ ಸಹಿ ಮಾಡಬಹುದು. ಇದರಿಂದ ವ್ಯಕ್ತಿ ನಿಗದಿತ ಸ್ಥಳದಲ್ಲಿ ಇರದಿದ್ದರೂ ಕೆಲಸವನ್ನ ಮುಗಿಸಿಕೊಳ್ಳಬಹುದು. ಇದು ಹಣ ಮತ್ತು ವೇಳೆಯ ಉಳಿತಾಯ ಮಾಡುತ್ತದೆ.
  4. ಸ್ವಚ್ಛ ಭಾರತ್ ಮಿಷನ್ ಆಪ್: ನಮ್ಮ ನೆರೆ ಹೊರೆಯನ್ನ, ನಮ್ಮ ರಾಜ್ಯವನ್ನ, ನಮ್ಮ ದೇಶವನ್ನ ಸ್ವಚ್ಛವಾಗಿಡಬೇಕು ಎನ್ನುವುದು ಕೇಂದ್ರ ಸರಕಾರದ ಸಂಕಲ್ಪ. ಇದರ ಕಾರ್ಯ ಸಾಧನೆಗೆ ಎಂದು ಈ ಆಪ್ ಅನ್ನು ಸೃಷ್ಟಿಸಲಾಗಿದೆ. ಇದರ ಮೂಲಕ ಕೆಲಸ ಆದುದರ ಬಗ್ಗೆ ಮತ್ತು ಮಾಡಲು ಉಳಿದ ಕೆಲಸದ ಬಗ್ಗೆ ಮಾಹಿತಿ ಸಿಗುತ್ತದೆ. ಇದು ಅಂದುಕೊಂಡ ಕಾರ್ಯ ಸಾಧನೆಗೆ ಸಹಾಯ ಮಾಡುತ್ತದೆ.
  5. ಇ-ಹಾಸ್ಪಿಟಲ್: ಇದರ ಮೂಲಕ ನಾಗರೀಕ ನೊಂದಾವಣಿ ಮಾಡಿಕೊಳ್ಳಬಹುದು ತನ್ಮೂಲಕ ಆರೋಗ್ಯಕ್ಕೆ ಸಂಬಂಧ ಪಟ್ಟ ಎಲ್ಲಾ ರಿಪೋರ್ಟ್ ಗಳನ್ನ ಕೂಡ ಆನ್ಲೈನ್ ನಲ್ಲಿ ಪಡೆಯಬಹುದು. ಪ್ರಧಾನ್ ಮಂತ್ರಿ ಆರೋಗ್ಯ ವಿಮೆಯ ಅಡಿಯಲ್ಲಿ ಆಸ್ಪತ್ರೆಗೆ ಸಂದಾಯಾವಾಗಬೇಕಾದ ಹಣ, ಒಪ್ಪಿಗೆ ಇತ್ಯಾದಿಗಳು ಕೂಡ ಈ ವೆಬ್ ಮೂಲಕ ಮುಗಿದುಹೋಗುತ್ತದೆ. ನಾಗರೀಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಣಕ್ಕಾಗಿ ಅಥವಾ ಒಪ್ಪಿಗೆಗಾಗಿ ಅಲೆದಾಡುವ ಪ್ರಮೇಯವಿಲ್ಲವಾಗಿದೆ.
  6. ಡಿಜಿಟಲೈಜ್ ಇಂಡಿಯಾ ಪ್ಲಾಟ್ಫಾರ್ಮ್: ಜನರ, ದೇಶದ ಎಲ್ಲಾ ಡೇಟವನ್ನ ಗಣಕೀಕೃತ ಮಾಡುವುದು ಇಲ್ಲಿನ ಉದ್ದೇಶ. ಇದರಿಂದ ಬೇಕಾದಾಗ ಮಾಹಿತಿ ಬೆರಳ ತುದಿಯಲ್ಲಿ ಸಿಗುವಂತಾಗುತ್ತದೆ.
  7. ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್: ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಸಹಾಯಕ ಏಕೆಂದರೆ ಸ್ಕಾಲರ್ ಶಿಪ್ ಗೆ ಅರ್ಜಿ ಹಾಕುವುದರಿಂದ ಅದರ ತಪಾಸಣೆ, ಅಂಗೀಕಾರ ಮತ್ತು ಹಣದ ವಿತರಣೆವರೆಗೆ ಎಲ್ಲಾ ಕಾರ್ಯವನ್ನ ಈ ಪೋರ್ಟಲ್ ಮಾಡುತ್ತದೆ. ಇಲ್ಲಿನ ಪಾರದರ್ಶಕತೆ ಯುವ ಜನತೆಯಲ್ಲಿ, ವಿದ್ಯಾರ್ಥಿಗಳಲ್ಲಿ ಸರಕಾರದ ಬಗ್ಗೆ ನಂಬಿಕೆ ಹೆಚ್ಚುವಂತೆ ಮಾಡಿದೆ.
  8. ಭಾರತ್ ನೆಟ್: ಆಪ್ಟಿಕಲ್ ಫೈಬರ್ ಬಳಸಿ ಇಂಟೆರ್ ನೆಟ್ ಮೂಲಕ ದೇಶದ 250,000 ಗ್ರಾಮ ಪಂಚಾಯಿತಿಯನ್ನ ಒಂದಕ್ಕೊಂದು ಬೆಸೆಯುವ ಕ್ರಿಯೆಗೆ ಭಾರತ್ ನೆಟ್ ಎನ್ನಲಾಗಿದೆ. ಇದರಿಂದ ಒಂದು ಗ್ರಾಮ ಇನ್ನೊಂದು ಗ್ರಾಮದ ಬೇಕು ಬೇಡಗಳಿಗೆ ವೇಗವಾಗಿ ಸ್ಪಂದಿಸಬಹುದು.
  9. ವೈ-ಫೈ ಹಾಟ್ ಸ್ಪಾಟ್ಸ್: ದೇಶದಾದ್ಯಂತ ಅಲ್ಲಲ್ಲಿ ವೈರ್ ರಹಿತ ಇಂಟರ್ನೆಟ್ ಸೇವೆಯನ್ನ ಒದಗಿಸಿವುದು ಕೂಡ ಕೇಂದ್ರ ಸರಕಾರದ ಉದ್ದೇಶವಾಗಿದೆ.
  10. ನೆಕ್ಸ್ಟ್ ಜೆನರೇಷನ್ ನೆಟ್ ವರ್ಕ್: ವಾಯ್ಸ್, ಡೇಟಾ, ಮಲ್ಟಿ ಮೀಡಿಯಾ ಸೇರಿದಂತೆ ಎಲ್ಲಾ ರೀತಿಯ ಕಮ್ಯುನಿಕೇಷನ್ ಸೇವೆಗಳನ್ನ ನೀಡಲು ಬಿಎಸ್ ಎನ್ ಎಲ್ ಸಂಸ್ಥೆಗೆ ಕಾಯಕಲ್ಪವನ್ನ ಮಾಡಲಾಗುತ್ತಿದೆ.
  11. ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಫಂಡ್: ಇಲ್ಲಿ ನಿಗದಿತ ಹಣವನ್ನ ಇಲೆಕ್ಟ್ರಾನಿಕ್ ಉಪಕರಣಗಳ ಅಭಿವೃದ್ಧಿಗೆ ಅಥವಾ ಹೊಸ ಅನ್ವೇಷಣೆಗೆ ಎಂದು ಮೀಸಲಿಡಲಾಗುವುದು. ಕೌಶಲ್ಯವಿರುವ ಯಾವುದೇ ನಾಗರೀಕನೂ ಇದನ್ನ ಉಪಯೋಗಿಸಿಕೊಳ್ಳಬಹುದು.
  12. ಸೆಂಟರ್ ಆಫ್ ಎಕ್ಸೆಲೆನ್ಸ್ ಆನ್ ಇಂಟರ್ನೆಟ್ ಆಫ್ ಥಿಂಗ್ಸ್: ಬೆಂಗಳೂರು ನಗರದಲ್ಲಿ ನಾಸ್ಕಾಂ ನ ಸಹಯೋಗೋದೊಂದಿಗೆ ಇಂತಹ ಒಂದು ಸಂಸ್ಥೆಯನ್ನ ತೆರೆಯಲಾಗಿದೆ. ಇಲ್ಲಿ ನಾಗರಿಕರಿಗೆ ಸಾರಿಗೆ, ಪಾರ್ಕಿಂಗ್, ಎಲೆಕ್ಟ್ರಿಸಿಟಿ, ವೇಸ್ಟ್ ಮ್ಯಾನೇಜ್ಮೆಂಟ್ ಸೇರಿದಂತೆ ಹಲವು ಹತ್ತು ಕಾರ್ಯಕ್ಷೇತ್ರದಲ್ಲಿ ಸಹಾಯವನ್ನ ಮತ್ತು ಹೆಚ್ಚಿನ ಮಾಹಿತಿಯನ್ನ ಒದಗಿಸುತ್ತದೆ.

ಕೊನೆ ಮಾತು: ಡಿಜಿಟಲ್ ಇಂಡಿಯಾ ಎನ್ನುವ ಈ ಪರಿಕಲ್ಪನೆಯಿಂದ ಸಮಾಜದಲ್ಲಿ ಕಪ್ಪು ಹಣದ ಓಟ ನಿಧಾನವಾಗುತ್ತದೆ. ಹಲವು ಹತ್ತು ಕ್ಷೇತ್ರದಲ್ಲಿ ನಡೆಯುವ ಕೆಲಸಗಳು ವೇಗವನ್ನ ಪಡೆದುಕೊಳ್ಳುತ್ತದೆ. ಒಟ್ಟಾರೆಯಾಗಿ ಸಮಾಜದ ಜನರ ಜೀವನ ಮಟ್ಟವನ್ನಸುಧಾರಿಸುತ್ತದೆ. ಗ್ಯಾಸ್ ಸಬ್ಸಿಡಿ ಇರಬಹುದು, ಪಿಂಚಣಿಯಿರಬಹುದು, ಆರೋಗ್ಯ ವಿಮೆಯ ಸೌಲಭ್ಯವಿರಬಹುದು ಇವುಗಳಲ್ಲಿ ಆಗುತ್ತಿದ್ದ ವಿಳಂಬ ಮತ್ತು ಹಣಕಾಸು ಏರುಪೇರುಗಳು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. 

ಡಿಜಿಟಲ್ ಇಂಡಿಯಾ ಎನ್ನುವ ಈ ಯೋಜನೆಯ ಮೂಲೋದ್ದೇಶಕ್ಕೆ ಚ್ಯುತಿ ಬರದಂತೆ ನಡೆಸಿಕೊಂಡು ಹೋದರೆ ಮುಂಬರುವ ದಿನಗಳಲ್ಲಿ ಜಗತ್ತಿನ ಇತರ ದೇಶಗಳಿಗೆ ಭಾರತ ಮಾದರಿ ದೇಶವಾಗಿ ನಿಲ್ಲಬಹುದು. ಕೋವಿಡ್ ಸಮಯದಲ್ಲಿ ಇದರ ಸದ್ಬಳಕೆಯಾಗಿದೆ. ಆದರೆ ವಿಶೇಷ ಎಕನಾಮಿಕ್ ಪ್ಯಾಕೇಜ್ ನಲ್ಲಿ ಹೇಳಿರುವ ಎಲ್ಲಾ ಕಾರ್ಯವನ್ನೂ ಕೂಡ ಹೀಗೆ ಡಿಜಿಟಲ್ ಇಂಡಿಯಾ ವೇದಿಕೆಯನ್ನ ಬಳಸಿಕೊಂಡು ಅತ್ಯಂತ ಶೀಘ್ರಗತಿಯಲ್ಲಿ ಹಾಳೆಯಲ್ಲಿರುವ ವಿಷಯವನ್ನ ಕಾರ್ಯಗತಗೊಳಿಸಬೇಕಿದ. ಅಷ್ಟಾದರೆ ಆರ್ಥಿಕವಾಗಿ ಮಂದಗತಿಯಲ್ಲಿರುವ ಸಮಾಜವೂ ಕೂಡ ವೇಗವಾಗಿ ಚೇತರಿಕೆ ಕಾಣುತ್ತದೆ. ಈ ವೇದಿಕೆಯನ್ನ ನಾಗರೀಕರು ಚನ್ನಾಗಿ ಬಳಸಿಕೊಳ್ಳಬೇಕಿದೆ. ಸರಕಾರವೂ ಲೋಪದೋಷಗಳ ತಿದ್ದುವ ಕೆಲಸ ಮಾಡಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com