ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ!

ಜಗತ್ತಿನಲ್ಲಿ ಒಟ್ಟು 100 ರೂಪಾಯಿ ಆಸ್ತಿಯಿದ್ದರೆ ಅದನ್ನ ಕೊಳ್ಳಲು ಅಥವಾ ಸೃಷ್ಟಿಸಲು ಹತ್ತಿರಹತ್ತಿರ 250 ರೂಪಾಯಿ ಸಾಲವಿದೆ!. ಅಂದರೆ ಗಮನಿಸಿ ನಮ್ಮ ಒಟ್ಟು ಆಸ್ತಿಯನ್ನ ಯಾರಾದರೂ ಅನ್ಯಗ್ರಹ ಜೀವಿಗಳು ಬಂದು ಕೊಂಡರೂ ನಾವು ನಮ್ಮ ಸಾಲ ತೀರಿಸಲು ಸಾಧ್ಯವಿಲ್ಲ.
ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ!
ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ!

ಸಾಲ ಎನ್ನುವುದು ಇವತ್ತು ಬಹಳ ಸಹಜವಾಗಿ ಹೋಗಿದೆ . ಸಾಲ ಮಾಡದವರು ವಿರಳರಲ್ಲಿ ವಿರಳ ಎನ್ನುವ ಮಟ್ಟಕ್ಕೆ ಸಮಾಜ ಬಂದು ನಿಂತಿದೆ. ಜಗತ್ತಿನಲ್ಲಿ ಒಟ್ಟು 100 ರೂಪಾಯಿ ಆಸ್ತಿಯಿದ್ದರೆ ಅದನ್ನ ಕೊಳ್ಳಲು ಅಥವಾ ಸೃಷ್ಟಿಸಲು ಹತ್ತಿರಹತ್ತಿರ 250 ರೂಪಾಯಿ ಸಾಲವಿದೆ!. ಅಂದರೆ ಗಮನಿಸಿ ನಮ್ಮ ಒಟ್ಟು ಆಸ್ತಿಯನ್ನ ಯಾರಾದರೂ ಅನ್ಯಗ್ರಹ ಜೀವಿಗಳು ಬಂದು ಕೊಂಡರೂ ನಾವು ನಮ್ಮ ಸಾಲ ತೀರಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಒಟ್ಟು 196 ದೇಶಗಳಿವೆ ಅವುಗಳಲ್ಲಿ ಕೇವಲ ಐದು ದೇಶಗಳು ಮಾತ್ರ ತಮ್ಮ ಖರ್ಚಿಗೆ ಮೀರಿದ ಆದಾಯವನ್ನ ಹೊಂದಿದೆ . ಉಳಿದೆಲ್ಲಾ ದೇಶಗಳು ಖರ್ಚು ಹೆಚ್ಚು ಆದಾಯ ಕಡಿಮೆ ಫಾರ್ಮುಲಾದಲ್ಲಿ ಬಂಡಿ ಸಾಗುಸುತ್ತಿವೆ . ಇದೆಲ್ಲಾ ಶುರುವಾಗಿದ್ದು ಇಲ್ಲದ ಹಣವನ್ನ ಖರ್ಚು ಮಾಡಲು ಶುರು ಮಾಡಿದ್ದು ಕಾರಣ . 

ಯುನೈಟೆಡ್ ಕಿಂಗ್ಡಮ್ ೧೯ ನೇ ಶತಮಾನದ ಪ್ರಾರಂಭದಲ್ಲಿ ಇನ್ಸ್ಟಾಲ್ಮೆಂಟ್ ಸಿಸ್ಟಮ್ ಆಫ್ ಪೆರ್ಚಸ್ ಅಥವಾ ಹೈರ್ ಪೆರ್ಚಸ್ ಎನ್ನುವ ಒಂದು ಹೊಸ ಖರೀದಿ ರೀತಿಯನ್ನ ಹುಟ್ಟುಹಾಕುತ್ತದೆ . ಅಂದರೆ ಒಂದು ವಸ್ತುವಿನ ಬೆಲೆ ನೂರು ರೂಪಾಯಿ ಇದ್ದು , ಗ್ರಾಹಕನ ಬಳಿ ಆ ಕ್ಷಣದಲ್ಲಿ ನೂರು ರೂಪಾಯಿ ಇಲ್ಲದಿದ್ದರೆ , ಆತ ವಸ್ತುವಿನ ಮೂಲ ಬೆಲೆಯ ೨೦ ಅಥವಾ ೩೦ ಅಥವಾ ೪೦ ಪ್ರತಿಶತ ಹಣವನ್ನ ಕೊಟ್ಟು ಕೊಳ್ಳಬಹುದು . ಉಳಿದ ಹಣವನ್ನ ೧೨/೨೪/೩೬/೪೮ ಕಂತುಗಳಲ್ಲಿ ಮರಳಿ ಕೊಡಬಹುದು . ಹೀಗೆ ಕೊಡುವಾಗ ಒಂದಷ್ಟು ಬಡ್ಡಿಯನ್ನ ಸಹ ಸೇರಿಸಲಾಗುತ್ತದೆ . ಇದರಿಂದ ಉತ್ಪಾದಕ ಮತ್ತು ಮಾರಾಟಗಾರನಿಗೆ ತನ್ನ ಸರಕನ್ನ ಬೇಗ ಮಾರಾಟ ಮಾಡಿದ ತೃಪ್ತಿ , ಗ್ರಾಹಕನಿಗೆ ವಸ್ತುವಿಗಾಗಿ ಐದಾರು ವರ್ಷ ಕಾಯುವ ಬದಲು ಅದನ್ನ ತಕ್ಷಣ ಕೊಂಡು ಬಳಸಿದ ಖುಷಿ . ಹೀಗಾಗಿ ಇದೊಂತರ ವಿನ್ -ವಿನ್ ಸನ್ನಿವೇಶ . ಈ ತರಹದ ಖರೀದಿಸುವಿಕೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಶುರುವಾಯ್ತು ಆದರೇನು ಇದನ್ನ ಜಗತ್ತಿನಾದ್ಯಂತ ಜನ ಸಾಮಾನ್ಯರು  ಬಹಳ ಬೇಗ ತನ್ನದಾಗಿಸಿ ಕೊಂಡರು . ಅಮೆರಿಕಾ ಇದನ್ನ ಇನ್ನೊಂದು ದರ್ಜೆಗೆ ಏರಿಸಿ ಬಿಟ್ಟಿತು . ಇವತ್ತು ಅಮೆರಿಕಾದಲ್ಲಿ ದುಡ್ಡಿದ್ದರು ಕೂಡ ಮುಂದೆ ಉಪಯೋಗಕ್ಕೆ ಬರುತ್ತದೆ ಎನ್ನುವ ದೃಷ್ಟಿಯಲ್ಲಿ ಕ್ರೆಡಿಟ್ ಹಿಸ್ಟ್ರಿ ಸೃಷ್ಟಿಸುವ ಉದ್ದೇಶದಿಂದ ಜನ ಸಾಲದಲ್ಲಿ ವಸ್ತುವನ್ನ ಕೊಳ್ಳುತ್ತಾರೆ . ಜನ ಸಾಲ ಅಥವಾ ಕಂತಿನ ಮೂಲಕ ಖರೀದಿಸುವುದು ಬಿಟ್ಟರೆ ವಾರದೊಳಗೆ ಪೂರ್ಣ ಅಮೆರಿಕಾ ಆರ್ಥಿಕತೆ ಕುಸಿದು ಬಿಡುತ್ತದೆ . ಇದು ಕೇವಲ ಅಮೆರಿಕಾದ ಕಥೆಯಾಗಿ ಉಳಿಯದೆ ವಿಶ್ವದ ಕಥೆಯಾಗಿ ಮಾರ್ಪಾಟಾಗಿರುವುದು ದುರಂತ ಎನ್ನಬಹುದು . 

ಹಣದ ಬಗ್ಗೆ ಅದನ್ನ ಬಳಸುವ ಬಗ್ಗೆ ನಮ್ಮ ಹಿರಿಯರಿಗೆ ಬಹಳಷ್ಟು ತಿಳಿದಿತ್ತು . ಈಗಿನಂತೆ ಜಿಡಿಪಿ ಬೆನ್ನಹಿಂದೆ ನಮ್ಮ ಸಮಾಜ ಬಿದ್ದಿರಲಿಲ್ಲ . ನಮ್ಮ ತಾತ ಅಥವಾ ಮುತ್ತಾತ ಎಂದಿಗೂ ಯಾರ ಬಳಿ ದುಡಿಯಲಿಲ್ಲ ! ಹೀಗಾಗಿ ಆತನಿಗೆ ಯಾರೂ ಮಾಸಿಕ ವೇತನ ನೀಡಲಿಲ್ಲ !! ಸಂಬಳವಿಲ್ಲದೆ ಮೇಲೆ ಜಿಡಿಪಿಯಲ್ಲಿ ಅದನ್ನ ಲೆಕ್ಕ ಮಾಡುವುದಾದರೂ ಹೇಗೆ ?? ವಿಪರ್ಯಾಸ ನೋಡಿ ಹೆಚ್ಚಿನ ಹಣದ ಹರಿವಿರದ, ಜಿಡಿಪಿ ಲೆಕ್ಕವಿರದ ಸಮಾಜದಲ್ಲಿ ಬಹಳಷ್ಟು ಸಾಮರಸ್ಯ , ನೆಮ್ಮದಿ , ಖುಷಿ ಎಲ್ಲವೂ ಇದ್ದವು ! ಇಂದು ಬೇಕಾದ ಹಾಗೆ ಹಣವನ್ನ ಸೃಷ್ಟಿ ಮಾಡುವ , ಸಂಪತ್ತು ಸೃಷ್ಟಿಸುವ ಕಲೆಯನ್ನ ಮನುಷ್ಯ ಕಲಿತ್ತಿದ್ದಾನೆ . ಆದರೆ ಬದುಕುವದನ್ನ ಮರೆತಿದ್ದಾನೆ . ನಮ್ಮ ಹಿರಿಯರಿಗೆ ಸಂಪತ್ತು ಸೃಷ್ಟಿಸುವ ಕಲೆ ಗೊತ್ತಿರಲಿಲ್ಲವೇ ? ಅವರಿಗೆ ಅದು ಚನ್ನಾಗಿ ಗೊತ್ತಿತ್ತು . ಹೀಗೆ ಹುಚ್ಚಾಟದ ಸಂಪತ್ತಿನ ಸೃಷ್ಟಿಯಿಂದ ಸಮಾಜ ವಿನಾಶದತ್ತ ಸಾಗುತ್ತದೆ ಎನ್ನುವ ಅರಿವು ಕೂಡ ಇತ್ತು ಎನ್ನುವುದಕ್ಕೆ ಆಡು ಮಾತುಗಳು ಅಥವಾ ಗಾದೆ ಮಾತುಗಳು ಸಾಕ್ಷಿಯಾಗಿವೆ . ಇವತ್ತು ಅಂತಹ ಒಂದಷ್ಟು ಹಣಕ್ಕೆ ಸಂಬಂಧ ಪಟ್ಟ ಗಾದೆ ಅಥವಾ ಆಡು ಮಾತುಗಳನ್ನ ಗಮನಿಸೋಣ . 

ಹಾಸಿಗೆ ಇದ್ದಷ್ಟು ಕಾಲು ಚಾಚು: ಇದನ್ನ ಬಿಡಿಸಿ ಹೇಳುವ ಅಗತ್ಯವಿಲ್ಲ ಅಲ್ಲವೇ ? ನಿನ್ನಲಿರುವ ಸಂಪತ್ತಿಗೆ ತಕ್ಕದಾಗಿ ಬದುಕು , ಇಲ್ಲದಕ್ಕೆ ಆಸೆ ಪಟ್ಟರೆ ಕಷ್ಟ ಅನುಭವಿಸ ಬೇಕಾಗುತ್ತದೆ ಎನ್ನುವ ಸರಳ ಅರ್ಥವನ್ನ ಈ ಮಾತು ಹೇಳುತ್ತದೆ . 

  1. ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ: ಗಾದೆ ಮಾತು ಹೇಳುವಂತೆ ಹಣ ಯಾರಿಗೆ ಬೇಡ ? ದೇಹದಲ್ಲಿ ಜೀವವಿಲ್ಲ ಇಹಲೋಕದ ವ್ಯಾಪಾರ ಮುಗಿಯಿತು ಎಂದು ಕೊಂಡ ಹೆಣವೂ ಬಾಯಿ ಬಾಯಿ ಬಿಡುತ್ತದೆ ಎನ್ನುವುದು ಉತ್ಪ್ರೇಕ್ಷೆಯ ಮಾತು ಅಂದರೆ ಹಣಕ್ಕೆ ಆಸೆ ಪದವರು ಈ ಜಗತ್ತಿನಲ್ಲಿ ಯಾರೂ ಇಲ್ಲ ಎನ್ನುವುದನ್ನ ತಿಳಿಸಿ ಹೇಳಲು ಇಂತಹ ಉಪಮೆಯನ್ನ ಬಳಸಿದ್ದಾರೆ . ಹೀಗಾಗಿ ಹಣದ ವಿಷಯದಲ್ಲಿ ಹೆಚ್ಚಿನ ಗಮನವಿರಲಿ ಎನ್ನುವುದು ಸಂದೇಶ . 
  2. ಗಳಿಸುವುದು ಕಷ್ಟ , ಖರ್ಚು ಮಾಡುವುದು ಸುಲಭ: ಇದು ನಮ್ಮೆಲ್ಲರ ಗಮನಕ್ಕೆ ಬಂದ ವಿಷಯ ಅಲ್ಲವೇ ? ತಿಂಗಳು ಪೂರ್ತಿ ದುಡಿದು ಗಳಿಸಿದ ಹಣ ಒಂದೆರೆಡು ದಿನದಲ್ಲಿ ಹೇಗೆ ಕಂತುಗಳಿಗೆ ಹೋಗಿ ಮಾಯವಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು . ಹೀಗಾಗಿ ಖರ್ಚಿನ ಮೇಲೆ ಹಿಡಿತವಿರಲಿ ಎನ್ನುವುದನ್ನ ಈ ಗಾದೆ ಮಾತು ಧ್ವನಿಸುತ್ತದೆ . 
  3. ಕೂತು ತಿಂದರೆ ಕುಡಿಕೆ ಹೊನ್ನು ಸಾಲದು: ಎಷ್ಟೇ ಸಂಪತ್ತು ಕೂಡಿಟ್ಟರೂ ಸದಾ ಏನಾದರೂ ಒಂದು ಕೆಲಸದಲ್ಲಿ ತೊಡಗಿಕೊಂಡಿರಬೇಕು , ದುಡಿದು ಗಳಿಸದೆ ಇದ್ದರೆ , ಸಂಗ್ರಹಿಸಿದ ಗಂಟು ಕರಗಿ ಹೋಗುತ್ತದೆ ಎನ್ನುವುದು ಸಾರಾಂಶ . 
  4. ತಾಮ್ರದ ಕಾಸು ತಾಯಿ -ಮಕ್ಕಳ ಅಗಲಿಸಿತು: ಹಣ ಕಾಸಿನ ವಿಷಯದಲ್ಲಿ , ವ್ಯವಹಾರದ ವಿಷಯದಲ್ಲಿ ಎಷ್ಟು ಕಟ್ಟುನಿಟ್ಟಾಗಿದ್ದರೂ ಅದು ಕಡಿಮೆ ಎನ್ನುವ ಭಾವವನ್ನ ಇದು ಹೇಳುತ್ತದೆ . ತಾಯಿ ಮಕ್ಕಳ ಸಂಬಂಧ ವಿಶಿಷ್ಟವಾದದ್ದು ಆದರೆ ಹಣದ ವಿಷಯದಲ್ಲಿ ಅದೂ ಕೂಡ ಕೆಡಬಹುದು ! ಎಚ್ಚರಿಕೆ ಎನ್ನುವ ಸಂದೇಶವನ್ನ ಇದು ರವಾನಿಸುತ್ತದೆ . 
  5. ದುಡ್ಡೇ ದೊಡ್ಡಪ್ಪ , ಹಣವಿಲ್ಲದವನು ಹೆಣಕ್ಕಿಂತ ಕಡೆ: ಎನ್ನುವ ಮಾತುಗಳು ಹಣ ಹಿಂದಿನಿಂದಲೂ ಬಹಳ ಮುಖ್ಯವಾಗಿತ್ತು ಎನ್ನುವುದನ್ನ ನಮಗೆ ತಿಳಿಸಿ ಹೇಳುತ್ತಿದೆ . ಆದರೆ ನಮ್ಮ ಹಿರಿಯರು ಇಲ್ಲದ ಹಣವನ್ನ ಸೃಷ್ಟಿಸುವ ಗೋಜಿಗೆ ಹೋಗಿರಲಿಲ್ಲ . 
  6. ಹಣವಿದ್ದವನಿಗೆ ಊರಲ್ಲಾ ನೆಂಟರು ಎನ್ನುವ ಗಾದೆ ಮಾತಿನಲ್ಲಿ ಹಣವಿದ್ದೆಡೆ  ಜನ ಸಂಬಂಧ ಬೆಸೆದು ಬರುತ್ತಾರೆ ಎನ್ನುವುದನ್ನ ತಿಳಿಸುತ್ತದೆ . ಜೊತೆಗೆ ಹಣವಂತನಿಗೆ ಒಂದು ಎಚ್ಚರಿಕೆಯನ್ನ ಕೂಡ ರವಾನಿಸುತ್ತದೆ . ಹಣವಿರುವುದರಿಂದ ನಿನ್ನ ಬಳಿ ಜನ ಬರುತ್ತಿದ್ದಾರೆ ಹುಷಾರು ಎನ್ನುವ ಎಚ್ಚರಿಕೆ ಮೇಲ್ನೋಟಕ್ಕೆ ಕಾಣುವುದಿಲ್ಲ . 
  7. ಸಾಲ ಕೊಟ್ಟವನಿಗೆ ನೆನಪಿನ ಶಕ್ತಿ ಜಾಸ್ತಿ , ಎರವಲು ಕೊರಳಿಗೆ ಉರುಳು ಎನ್ನುವ ಮಾತುಗಳು ಸಾಲ ಮಾಡುವುದು ಸುಲಭ ಆದರೆ ಅದನ್ನ ಹಿಂತಿರುಗಿಸುವಾಗ ಆಗುವ ನೋವು ಎಷ್ಟು ಎನ್ನುವುದನ್ನ ಹೇಳುತ್ತದೆ . ಏಕೆಂದರೆ ಸಾಲ ಕೊಟ್ಟವರು ಅದನ್ನ ವಸೂಲಿ ಮಾಡದೆ ಬಿಡುವುದಿಲ್ಲ . ಅವರು ಕೊಟ್ಟದನ್ನ ಮರೆಯುವುದಿಲ್ಲ ಅಲ್ಲವೇ ? ಹಾಗೆಯೇ ಸಾಲ ಮರಳಿ ಕೊಡಲಾಗದಿದ್ದರೆ ಕೊನೆಗೆ ಸಾವೇ ಗತಿ ಎನ್ನುವುದನ್ನ ಎರವಲು ಆದೀತು ಕೊರಳಿಗೆ ಉರಳು ಎನ್ನುವ ಮಾತು ತಿಳಿಸುತ್ತಿದೆ . 
  8. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ , ಕಾಸಿದ್ರೆ ಕೈಲಾಸ , ಕಿಲುಬು ಕಾಸು ಕೈಲಾಸ ತೋರಿಸುತ್ತೆ ಹೀಗೆ ಹಲವಾರು ಮಾತುಗಳು ಹಣದ ಮಹತ್ವವನ್ನ ತಿಳಿಸಿ ಹೇಳುತ್ತವೆ . 

ಬೆನ್ ಫ್ರೆಕ್ಲಿನ್ ಎನ್ನುವ ದಾರ್ಶನಿಕ ಉಪವಾಸವಿದ್ದರೂ ಪರವಾಗಿಲ್ಲ ಸಾಲ ಮಾತ್ರ ಮಾಡಬೇಡ ಎಂದಿದ್ದಾರೆ . ನಮ್ಮ ಸರ್ವಜ್ಞ ತನ್ನ ವಚನದಲ್ಲಿ ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ, ಎಂದಿದ್ದಾರೆ. ಅಂದರೆ ಸಾಲ ಮಾಡಿಯಾದರೂ ಗಡಿಗೆ ತುಪ್ಪ ಕುಡಿಯಬೇಕು ಎನ್ನುವ ನಿಲುವು ಸಲ್ಲದು ಎನ್ನುವುದು ಈ ಹಿರಿಯರ ಮಾತುಗಳಲ್ಲಿ ಧ್ವನಿತವಾಗಿದೆ . ಇವತ್ತು ಸಮಾಜ ಇಂತಹ ಮಾತುಗಳನ್ನ ಗಣನೆಗೆ ತೆಗೆದುಕೊಳ್ಳದೆ ಇರುವುದರ ಕಾರಣ ಇಂತಹ ತಲ್ಲಣಗಳಿಗೆ ಗುರಿಯಾಗಿದೆ . 

ನಮ್ಮ ಸಮಾಜ ಮಾತ್ರವಲ್ಲದೆ ಪಾಶ್ಚಾತ್ಯ ಸಮಾಜ ಕೂಡ ಇಂತಹ ಒಂದು ಅಡಿಪಾಯದ ಮೇಲೆ ತಮ್ಮ ಸಮಾಜವನ್ನ ಕಟ್ಟಿ ಕೊಂಡಿತ್ತು ಎನ್ನುವುದಕ್ಕೆ ಕೂಡ ಬಹಳಷ್ಟು ಉದಾಹರಣೆ ಸಿಗುತ್ತದೆ .  Save for a rainy day. ನಾಳೆಗಾಗಿ ಒಂದಷ್ಟು ಉಳಿಸಿ ಎನ್ನುವುದು , A penny saved is a penny earned. ಗಳಿಕೆಯಷ್ಟೇ ಉಳಿಕೆಯು ಮುಖ್ಯ ಎನ್ನುವುದು , If you buy what you don’t need, you steal from yourself. ಬೇಡದ್ದ ಕೊಳ್ಳುವುದು ಅಪರಾಧ ಎನ್ನುವ ಹೇಳಿಕೆ , Creditors have better memories than debtors , ಸಾಲಗಾರರ ನೆನಪು ಬಹಳ ತೀಕ್ಷ್ಣ ಎನ್ನುವುದು , Never spend money before you have it. ಇಲ್ಲದ ಹಣ ವ್ಯಯಿಸಬೇಡ , Interest on debt grows without rain. ಅಂದರೆ ಸಾಲದ ಮೇಲಿನ ಬಡ್ಡಿ ಬೆಳೆಯುತ್ತಲೇ ಇರುತ್ತದೆ ಎಚ್ಚರ ಎನ್ನುವ ಮಾತು , Lend your money and lose your friend, ನಮ್ಮಲ್ಲಿ ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎನ್ನುವ ಮಾತಿಗೆ ಸಮನಾದ ಮಾತು . ಹೀಗೆ ಒಂದಲ್ಲ ಹತ್ತಾರು ಮಾತುಗಳು ನಮ್ಮ ಹಿರಿಯರು ಹಣದ ಬಗ್ಗೆ ಇತ್ತು ಕೊಂಡಿದ್ದ ಭಾವನೆಗಳನ್ನ ಬಿಂಬಿಸುತ್ತವೆ . 

ನಮ್ಮ ಪೂರ್ವಿಕರಿಗೆ ಹಣ ಬದುಕಿಗೆ ಬಹಳ ಮುಖ್ಯವೆಂದು ತಿಳಿದಿತ್ತು . ಅದರ ಭರಾಟೆ ಹೆಚ್ಚಾದರೆ ಬದುಕು ಮೂರಾಬಟ್ಟೆಯಾಗುತ್ತದೆ ಎನ್ನುವ ಅರಿವೂ ಇತ್ತು . ಹೀಗಾಗಿಯೇ ಅವರು ಅದಕ್ಕೆ ಎಷ್ಟು ಬೆಲೆ ಕೊಡಬೇಕು ಅಷ್ಟು ಕೊಟ್ಟಿದ್ದರು . ಉಳಿದಂತೆ ಅವರಲ್ಲಿ ಅದರ ಬಗ್ಗೆ ಒಂದು ತರಹದ ನಿರ್ಲಿಪ್ತತೆ ಇತ್ತು . ಇಂದು ಎಲ್ಲವೂ ಬದಲಾಗಿದೆ . ಇಲ್ಲದ ಹಣವನ್ನ ನಾವು ಬಳಸುತ್ತಿದ್ದೇವೆ . ಹೀಗೆ ಸಾಲ ಮಾಡುವಾಗ , ಸಾಲ ಮಾಡುವರಲ್ಲಿ ಅದನ್ನ ಮರಳಿ ಪಾವತಿಸುವ ಬಗ್ಗೆ ಒಂದಷ್ಟು ನಿಖರತೆ ಇರುತ್ತದೆ . ಆದರೆ ಹೊರಗಿನ ಸಮಯ ಮತ್ತು ಸನ್ನಿವೇಶ ನಮ್ಮ ಹಿಡಿತದಲ್ಲಿ ಇರುವುದಿಲ್ಲ , ಹೀಗಾಗಿ ಸನ್ನಿವೇಶ ಬದಲಾದರೆ ಮರುಪಾವತಿ ಕಷ್ಟವಾಗುತ್ತದೆ . ಅಂದರೆ ಸಾಲ ಕೊಡುವಾಗ ಅಥವಾ ಸಾಲ ಮಾಡುವಾಗ ಒಂದಷ್ಟು ಅಂಶಗಳನ್ನ ನಾವು ಊಹಿಸಿಕೊಳ್ಳುತ್ತೇವೆ . ಹೀಗಾಗ ಬಹುದು ಎನ್ನುವ ಒಂದು ಪ್ಲಾನ್ . ಸನ್ನಿವೇಶಗಳು ಕೂಡ ಇವತ್ತಿನಂತೆಯೇ ಇರುತ್ತವೆ ಎನ್ನುವುದು ಇನ್ನೊಂದು ದೊಡ್ಡ ಊಹೆ ! ಉದಾಹರೆಣೆಗೆ  ಸಾಲ ಮಾಡುವಾಗ , ಸಾಲ ಮಾಡಿದ ವ್ಯಕ್ತಿಗೆ ಕೆಲಸವಿರುತ್ತದೆ , ಸಂಬಳವೂ ಬರುತ್ತಿರುತ್ತದೆ , ಸಾಲದ ಸಮಯ ಐದು ವರ್ಷ ಎಂದುಕೊಳ್ಳಿ , ಎರಡು ವರ್ಷದ ನಂತರ ಕೆಲಸವಿಲ್ಲದಿದ್ದರೆ ? ಎಲ್ಲವೂ ಬದಲಾಗುತ್ತದೆ . ಹೀಗಾಗಿ ಸಮಾಜದಲ್ಲಿ ರೂಪಾಯಿ ಆಸ್ತಿ ಸೃಷ್ಟಿಗೆ ಎರಡೂವರೆ ರೂಪಾಯಿ ಸಾಲ ಸೃಷ್ಟಿಯಾಗಿದೆ . 

ಕೊನೆಮಾತು: ತುತ್ತು ತಲೆಸುತ್ತಾ ಮೂರು ಸುತ್ತು ಹೊಡೆದರೂ ಅದನ್ನ ಬಾಯಿಗೆ ಇಡಬೇಕು ಬೇರೆ ದಾರಿಯಿಲ್ಲ ಎನ್ನುತ್ತದೆ ಒಂದು ಗಾದೆ ಮಾತು .  ನಾವೆಷ್ಟೇ ಸಂಪತ್ತಿನ ಸೃಷ್ಟಿಯ ಹಿಂದೆ ಓಡಲಿ ಅದು ಜೊತೆ ಜೊತೆಗೆ ನೋವನ್ನ ತಂದೆ ತರುತ್ತದೆ , ಹೀಗಾಗಿ ಸರಳ ಜೀವನವೇ ಇದಕ್ಕೆ ಮದ್ದು ಎನ್ನುವುದು ಇದು ಹೇಳುತ್ತದೆ . ಇದನ್ನ ಗ್ರಹಿಸುವ ವೇಳೆ -ವ್ಯವಧಾನ -ಮನಸ್ಸು ನಮಗಿದೆಯೇ?

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com