'ಯಸ್'ಬ್ಯಾಂಕ್ 'ನೋ'ಬ್ಯಾಂಕ್ ಆದ ವ್ಯಥೆಯ ಕಥೆ!

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ಯಸ್ ಬ್ಯಾಂಕ್
ಯಸ್ ಬ್ಯಾಂಕ್

ಯಸ್ ಬ್ಯಾಂಕ್ ಕುಸಿತಕ್ಕೆ ಕಾರಣಗಳೇನು? ಎನ್ನುವುದು ಇಂದು ಬಹುತೇಕರನ್ನು ಕಾಡುತ್ತಿರುವ ಪ್ರಶ್ನೆ. ಯಸ್ ಬ್ಯಾಂಕ್ ಒಂದೇ ಅಲ್ಲ, ಇಂದು ಭಾರತೀಯ ಬ್ಯಾಂಕುಗಳು ದಯನೀಯ ಸ್ಥಿತಿಯಲ್ಲಿ ಇರಲು ಕಾರಣವೇನು? ಎನ್ನುವುದು ಕೂಡ ಹಲವರನ್ನ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆಲ್ಲಾ ಕಾರಣ ಬಹಳ ಸ್ಪಷ್ಟ, ’ಕೊಟ್ಟ ಸಾಲವನ್ನ ವಸೂಲಿ ಮಾಡುವಲ್ಲಿ ಬ್ಯಾಂಕುಗಳು ವಿಫಲವಾಗಿದೆ ಎನ್ನುವುದು’. ಹಾಗಾದರೆ ಬಹುತೇಕ ಎಲ್ಲಾ ಬ್ಯಾಂಕುಗಳು ಸಾಲವನ್ನ ಬೇಕಾಬಿಟ್ಟಿ ಕೊಟ್ಟಿವೆಯೇ? ಎಲ್ಲಾ ಬ್ಯಾಂಕ್ ಅಧಿಕಾರಿಗಳು ಭ್ರಷ್ಟರೇ? ಎನ್ನುವ ಪ್ರಶ್ನೆ ಕೂಡ ಉಧ್ಭವವಾಗುತ್ತದೆ. ಗಮನಿಸಿ ಇಂದಿನ ಬ್ಯಾಂಕಿಂಗ್ ಕುಸಿತಕ್ಕೆ ಮುಖ್ಯ ಕಾರಣ ಶಾಡೋ ಬ್ಯಾಂಕಿಂಗ್! 

ಏನಿದು ಶಾಡೋ ಬ್ಯಾಂಕಿಂಗ್? 

ಮುಖ್ಯವಾಹಿನಿ ಹಣಕಾಸು ವ್ಯವಸ್ಥೆ ಬಿಟ್ಟು ಬೇರೆ ಮೂಲಗಳಿಂದ ಕೊಟ್ಟ ಸಾಲವನ್ನ ಶಾಡೋ ಬ್ಯಾಂಕಿಂಗ್ ಎಂದು ಕರೆಯಲಾಗುತ್ತದೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಬ್ಯಾಂಕ್ ಅಲ್ಲದ ಇತರ ಹಣಕಾಸು ಸಂಸ್ಥೆಗಳ ಒಕ್ಕೊಟ ಸಾಲವನ್ನ, ಹಣದ ಹರಿವನ್ನ ವ್ಯವಸ್ಥೆಯಲ್ಲಿ ಹೆಚ್ಚು ಮಾಡುತ್ತವೆ. ಗಮನಿಸಿ ಈ ರೀತಿಯ ಹಣವನ್ನ, ಸಾಲವನ್ನ ಅವು ನೀಡುವಾಗ ಮುಖ್ಯವಾಹಿನಿ ಬ್ಯಾಂಕುಗಳು ಒಳಪಡುವ ನಿಬಂಧನೆಗಳಿಗೆ ಇವುಗಳು ಒಳಪಡುವುದಿಲ್ಲ. 

ಉದಾಹರಣೆ ನೋಡೋಣ. ಶ್ರೀರಾಮ ಫೈನಾನ್ಸಿಂಗ್ ಅಂಡ್ ಲೀಸಿಂಗ್ ಕಂಪನಿ ಎನ್ನುವ ಸಂಸ್ಥೆ ಬ್ಯಾಂಕಿನಿಂದ ಸಾಲವನ್ನ ಪಡೆಯುತ್ತದೆ. ಇದು ಸಾಮನ್ಯವಾಗಿ ಶಾರ್ಟ್ ಟರ್ಮ್ ಲೋನ್. ಅದನ್ನ ಶ್ರೀರಾಮ ಸಂಸ್ಥೆ ರಿಟೇಲ್ ಫೈನಾನ್ಸಿಂಗ್ ನಲ್ಲಿ ತೊಡಗಿಸಿಕೊಳ್ಳುತ್ತದೆ. ಅಂದರೆ ಅದು ಮುಖ್ಯವಾಹಿನಿ ಬ್ಯಾಂಕುಗಳಲ್ಲಿ ಯಾರಿಗೆ ಸಾಲ ಸಿಗುವುದಿಲ್ಲ ಅವರಿಗೆ ಲಾಂಗ್ ಟರ್ಮ್ ಸಾಲವನ್ನ ನೀಡುತ್ತದೆ. ಅದು ಗೃಹ ಸಾಲ ಅಥವಾ ವಾಹನ ಸಾಲ ಅಥವಾ ಹೆಚ್ಚಿನ ಬಡ್ಡಿಗೆ ಕೆಲವು ಇಂಡಸ್ಟ್ರಿಗಳಿಗೆ ಕೂಡ ಸಾಲವನ್ನ ನೀಡುತ್ತದೆ. ಗಮನಿಸಿ ಮುಖ್ಯವಾಹಿನಿ ಬ್ಯಾಂಕ್ ನಿಂದ ಶಾರ್ಟ್ ಟರ್ಮ್ ಸಾಲ ಪಡೆದು ತನ್ನ ಗ್ರಾಹಕರಿಗೆ ಲಾಂಗ್ ಟರ್ಮ್ ಸಾಲ ಕೊಡುತ್ತಾರೆ. ಬ್ಯಾಂಕಿಗೆ ಹಣ ಮರಳಿಸಲು ಇನ್ನೊಂದು ಬ್ಯಾಂಕಿನಿಂದ ಸಾಲ ಪಡೆಯುತ್ತಾರೆ ಅಥವಾ ಗ್ರಾಹಕರಿಂದ ಬರುವ ಕಂತಿನ ಹಣವನ್ನ ಬಳಸಿಕೊಳ್ಳುತ್ತಾರೆ. ಅಂದರೆ ಇವೆಲ್ಲ ಸಮಯಾಧಾರಿತ. ಇದೊಂದು ಸರಪಳಿ ಇದ್ದಂತೆ. ಸರಪಳಿಯ ಒಂದು ತುಂಡು ತುಂಡಾದರೆ ಅಲ್ಲಿಗೆ ಪೂರ್ಣ ವ್ಯವಸ್ಥೆ ಕುಸಿತ ಕಾಣುತ್ತದೆ. ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಆಗಿರುವುದು ಇದೆ. ಯಸ್ ಬ್ಯಾಂಕ್ ಗೆ ಆರ್ ಬಿಐ ಎಚ್ಚರಿಕೆಯ ಪತ್ರ ಜನವರಿ 2019 ರಲ್ಲೇ ತಲುಪಿತ್ತು. 

ಅಲ್ಲದೆ ಭಾರತೀಯ ಬ್ಯಾಂಕುಗಳು 2018 ರಿಂದ ಕುಸಿತ ಕಾಣಲು ಪ್ರಾರಂಭಿಸಿದ್ದವು. ನೇರ ನೋಟದಲ್ಲಿ ಬ್ಯಾಂಕುಗಳು ಅಪಾಯಕಾರಿ ಸಂಸ್ಥೆ ಅಥವಾ ಜನರಿಗೆ ಸಾಲ ಕೊಟ್ಟಿಲ್ಲ ಎನ್ನಿಸುತ್ತದೆ. ಆದರೆ ಬ್ಯಾಂಕಿಂದ ಸಾಲ ಪಡೆದ ಇತರ ಹಣಕಾಸು ಸಂಸ್ಥೆಗಳು ಅದನ್ನ ಬೇಕಾಬಿಟ್ಟಿ ಕೊಟ್ಟು ವಸೂಲು ಮಾಡಲು ವಿಫಲವಾಗಿವೆ. ಅಲ್ಲದೆ ಇಂತಹ ಹಣ ಬಹುಮುಖ್ಯವಾಗಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆಯಾಗಿದೆ. ರಿಯಲ್ ಎಸ್ಟೇಟ್ ಕುಸಿತ ಕೂಡ ಅಪರೋಕ್ಷವಾಗಿ ಬ್ಯಾಂಕಿಂಗ್ ಕುಸಿತಕ್ಕೆ ಕಾರಣವಾಗಿದೆ. ಇರಲಿ 

ಯಸ್ ಬ್ಯಾಂಕ್ ಕುಸಿತಕ್ಕೆ ಮುಖ್ಯ ಕಾರಣಗಳು ಹೀಗಿವೆ:

  1. ಅನುತ್ಪಾದಕ ಆಸ್ತಿಯ ಮೊತ್ತ ಹೆಚ್ಚಾದಾಗ ಅದನ್ನ ಹೊರ ಜಗತ್ತಿಗೆ ಅಂದರೆ ತನ್ನ ವ್ಯವಹಾರ ಪತ್ರದಲ್ಲಿ ತಿಳಿಸಬೇಕು. ಕೆಲವೊಮ್ಮೆ ಮುಂದಿನ ವರ್ಷದವರೆಗೆ ಅದನ್ನ ಸರಿ ಮಾಡಿದರೆ ಆಯಿತು ಎಂದೂ ಅಥವಾ ಸುಮ್ಮನೆ ಸದಸ್ಯರು ಪ್ಯಾನಿಕ್ ಗೆ ಒಳಗಾಗುತ್ತಾರೆ ಎಂದೂ ಬ್ಯಾಂಕ್ ಆಡಳಿತ ಮಂಡಳಿ ತನ್ನ ಲೆಕ್ಕ ಪತ್ರವನ್ನ ತಿದ್ದಿ ತೋರಿಸುತ್ತವೆ. ಅಂದರೆ ನಿಜ ಪರಿಸ್ಥಿತಿಯನ್ನ ಮುಚ್ಚಿಡುವುದು ಕೂಡ ಸಮಸ್ಯೆಯ ಮೂಲ. ಯಸ್ ಬ್ಯಾಂಕ್ ಇಂತಹ ಪ್ರಮಾದವನ್ನು ಎಸಗಿದೆ.
  2. ಇನ್ನೊಂದು ಪ್ರಮುಖ ಕಾರಣ ಸರಿಯಾದ ದಾಖಲೆ ಇಲ್ಲದೆ ಪರಿಚಯದವರಿಗೆ ಅಥವಾ ಲಂಚದ ಆಸೆಗೆ ಹಣವನ್ನ ಸಾಲದ ರೂಪದಲ್ಲಿ ನೀಡುವುದು. ಇದನ್ನ ರಾಂಗ್ ಡುಯಿಂಗ್ ಅಥವಾ ಹಣದ ತಪ್ಪು ಬಳಕೆ ಎಂದು ಕರೆಯಲಾಗುತ್ತದೆ. ಅನುತ್ಪಾದಕ ಆಸ್ತಿ ತಯಾರಾಗಲು ಇದು ಕಾರಣ.
  3. ಹೊಸ ಬಂಡವಾಳ ತರುವಲ್ಲಿ ವಿಫಲ. ಬ್ಯಾಂಕುಗಳಲ್ಲಿ ಸಾಕಷ್ಟು ಹಣವಿದ್ದರೂ ಬಂಡವಾಳ ಇಲ್ಲದಿದ್ದರೆ ಹಣವನ್ನ ಸಾಲ ನೀಡಲು ಬರುವುದಿಲ್ಲ ಹೀಗಾಗಿ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. 
  4. ಕಳೆದ ಎರಡು ಮೂರು ವರ್ಷದಿಂದ ಬ್ಯಾಂಕಿನ ವಹಿವಾಟು, ಲಾಭದಲ್ಲಿ ಕುಸಿತ.
  5. ಬಂಡವಾಳ ತರುತ್ತೇವೆ ಮಾತುಕತೆ ನಡೆಯುತ್ತಿದೆ, ಬಂಡವಾಳ ಬಂದೇಬಿಡ್ತು ಎಂದು ಆರ್ ಬಿಐ ಗೆ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಲಾಗಿತ್ತು. ನಿಜವಾಗಿ ಯಾವ ಇನ್ವೆಸ್ಟರ್ ನೊಂದಿಗೆ ಯಾವುದೇ ರೀತಿಯ ನಿರ್ಣಯಕ್ಕೆ ಬಂದಿರಲಿಲ್ಲ.
  6. ಬ್ಯಾಂಕಿಗೆ ಮರುಜೀವ ನೀಡಲು ಆರ್ ಬಿಐ ನೀಡಿದ ಸಮಯ ಮತ್ತು ಅವಕಾಶವನ್ನ ಉಪಯೋಗಿಸಿಕೊಳ್ಳುವಲ್ಲಿ ಎಡವಿದ್ದು. ಜನವರಿ 2019 ರಲ್ಲಿ ತಪ್ಪುಗಳ ತಿದ್ದಿಕೊಳ್ಳುವಂತೆ ಸೂಚನೆ ನೀಡಿದ್ದರೂ ಅದನ್ನ ಕಾರ್ಯರೂಪಕ್ಕೆ ತರುವಲ್ಲಿ ಯಸ್ ಬ್ಯಾಂಕ್ ವಿಫಲವಾಯಿತು . 
  7. ಯಸ್ ಬ್ಯಾಂಕ್ ನ ಸಂಸ್ಥಾಪಕರಲ್ಲಿ ಒಬ್ಬರಾದ ರಾಣಾ ಕಪೂರ್ ಮಹತ್ವಾಕಾಂಕ್ಷಿ ವ್ಯಕ್ತಿ. ನಮ್ಮ ಬ್ಯಾಂಕ್ ಹೆಸರು ಯಸ್ ಬ್ಯಾಂಕ್, ಬೇರಾವುದೇ ಬ್ಯಾಂಕ್ ಸಾಲ ಕೊಡಲು ನೋ ಎಂದಾಗ ನಾವು ಕೊಡುತ್ತೇವೆ ಎನ್ನುವುದು ಈತನ ಧೋರಣೆಯಾಗಿತ್ತು. ಹೆಚ್ಚಿನ ಬಡ್ಡಿಯನ್ನ ವಿಧಿಸಿ ಎಷ್ಟೇ ರಿಸ್ಕಿ ಬಿಸಿನೆಸ್ ಅನ್ನಿಸಿದರೂ ಸಾಲ ಕೊಟ್ಟದ್ದೂ ಕೂಡ ಮುಳುವಾಯಿತು. 
  8. ಕ್ಯಾಪ್ಟನ್ ಆದವನು ದೋಣಿ ಮುಳುಗುವಾಗ ಓಡಿಹೋಗಬಾರದು, ಕೊನೆಯ ತನಕ ಜೊತೆಗಿರಬೇಕು. ರಾಣಾ ಕಪೂರ್ ತನ್ನೆಲ್ಲಾ ಷೇರುಗಳನ್ನ (ಕೇವಲ 9೦೦ ಶೇರನ್ನ ಮಾತ್ರ ಉಳಿಸಿಕೊಂಡಿದ್ದಾರೆ) ನವೆಂಬರ್ 2019 ರಲ್ಲಿ ಮಾರಿದ್ದಾರೆ. ಇದು ವಿತ್ತ ಜಗತ್ತನ್ನ ಗಮನಿಸುವ ಯಾರಿಗಾದರೂ ಸಂಶಯ ಬರಲು ಬಲವಾದ ಕಾರಣ. ಸ್ಥಾಪಕರಿಗೆ ಸಂಸ್ಥೆಯ ಮೇಲೆ ನಂಬಿಕೆ ಇಲ್ಲದ ಮೇಲೆ ಅದರ ಕುಸಿತ ತಡೆಯಲು ಹೇಗೆ ಸಾಧ್ಯ? 

ಯಾವುದೇ ವ್ಯವಸ್ಥೆ ಒಂದೇ ದಿನದಲ್ಲಿ ಕುಸಿತ ಕಾಣುವುದಿಲ್ಲ. ಯಸ್ ಬ್ಯಾಂಕ್ ವಿಷಯದಲ್ಲೂ ಇದು ಸತ್ಯ. ರೋಗವೆಂದು ನಿರ್ಧಾರವಾದಾಗ ಅದಕ್ಕೆ ಬೇಕಾದ ಔಷಧಿ ತೆಗೆದುಕೊಳ್ಳಬೇಕು. ಅದು ಬಿಟ್ಟು ಉಡಾಫೆ, ಭಂಡ ಧೈರ್ಯ, ಹೇಗೋ ಆಗುತ್ತೆ, ಎನ್ನುವುದರ ಜೊತೆಗೆ ರಾಣಾ ಕಪೂರ್ ತರಹ ಎಲ್ಲಾ ಮುಖ್ಯ ನಿರ್ಧಾರಗಳು ವ್ಯಕ್ತಿ ಕೇಂದ್ರೀಕೃತವಾದಾಗ ಇಂತಹ ಮಹಾನ್ ಕುಸಿತಗಳು ಸಂಭವಿಸುತ್ತವೆ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com