ನಿಮಗೆ ತಿಳಿದಿರಬೇಕಾದ ಬ್ಯಾಂಕಿಂಗ್ ಕಥೆ! 

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ನಿಮಗೆ ತಿಳಿದಿರಬೇಕಾದ ಬ್ಯಾಂಕಿಂಗ್ ಕಥೆ!
ನಿಮಗೆ ತಿಳಿದಿರಬೇಕಾದ ಬ್ಯಾಂಕಿಂಗ್ ಕಥೆ!

ಬ್ಯಾಂಕುಗಳಿಗೆ ಬಂಡವಾಳ ಹೂಡುವುದು ಇಂದು ಹೊಸತಾಗಿ ಆಗುತ್ತಿರುವ ವಿಷಯವಲ್ಲ. ಇದಕ್ಕೆ ಇತಿಹಾಸವಿದೆ. ಯಸ್ ಬ್ಯಾಂಕಿಗೆ ಇತರ ದೊಡ್ಡ ಬ್ಯಾಂಕುಗಳು ಸೇರಿ ಹೂಡಿಕೆ ಮಾಡಿವೆ. ಇವುಗಳು ಹಾಗೆ ಮಾಡದಿದ್ದರೆ ಸರಕಾರ ಆ ಕೆಲಸ ಮಾಡುತ್ತಿತ್ತು. ಸರಿ, ಸರಕಾರವೇಕೆ ಬ್ಯಾಂಕ್ ಗೆ  ಬಂಡವಾಳ ಹೂಡುತ್ತದೆ ಎನ್ನುವುದು ಸಹಜವಾಗೇ ನಿಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ. 

ನೋಡಿ, ಬ್ಯಾಂಕ್ ನ ಕೆಲಸ ಗ್ರಾಹಕರಿಂದ ಡಿಪಾಸಿಟ್ ಇರಿಸಿಕೊಳ್ಳುವುದು ಮತ್ತು ಸೂಕ್ತ ಗ್ರಾಹಕರಿಗೆ ಸಾಲ ಕೊಡುವುದು. ಕೊಟ್ಟ ಸಾಲವನ್ನು ಬಡ್ಡಿ ಸಮೇತ ವಸೂಲಿ ಮಾಡುವುದು, ತನ್ನಲ್ಲಿ ಹಣವಿಟ್ಟ ಗ್ರಾಹಕನಿಗೆ ನಿಗದಿತ ಬಡ್ಡಿ ನೀಡುವುದು. ಆದರೆ ಕೆಲವೊಮ್ಮೆ ಕೊಟ್ಟ ಸಾಲ ವಸೂಲಾತಿ ಆಗದೆ ಉಳಿದು ಬಿಡುತ್ತದೆ. 12 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲ ಮರುಪಾವತಿ ಆಗದಿದ್ದರೆ ಅದನ್ನು ಸಬ್ ಸ್ಟ್ಯಾಂಡರ್ಡ್ ಅಸೆಟ್ ಎಂದು ವರ್ಗೀಕರಿಸಲಾಗುತ್ತದೆ. ಬಾಕಿ ಉಳಿದ ಮೊತ್ತದ 15 ರಿಂದ 25 ಭಾಗ ಪ್ರಾವಿಷನ್ ಒದಗಿಸಿ ತನ್ನ ನಿವ್ವಳ ಲಾಭ ತೋರಿಸುತ್ತದೆ. 12 ತಿಂಗಳು ಮೀರಿದ ಸಾಲಗಳನ್ನು ಡೌಟ್ಫುಲ್ (ಅನುಮಾನ) ಎಂದು ವರ್ಗೀಕರಿಸಲಾಗುತ್ತದೆ. ಇಲ್ಲಿ 25 ರಿಂದ 100 ಪ್ರತಿಶತ ಪ್ರಾವಿಷನ್ ಮಾಡಬೇಕಾಗುತ್ತದೆ.

ಹೀಗೆ ವಸೂಲಾಗದೆ ಉಳಿದ ಸಾಲದ ಮೊತ್ತ ಹೆಚ್ಚಿದಷ್ಟು ಗ್ರಾಹಕನಿಗೆ, ಬ್ಯಾಂಕ್ ಷೇರು ಖರೀದಿ ಮಾಡುವ ಹೂಡಿಕೆದಾರನಿಗೆ ಎಲ್ಲರಿಗೂ ಬ್ಯಾಂಕ್ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ. ನಾನು ಇಟ್ಟ ಹಣ ನನ್ನ ಸಮಯಕ್ಕೆ ಮರಳಿ ದೊರಕುವುದೇ? ಎನ್ನುವ ಪ್ರಶ್ನೆ ಹುಟ್ಟಿದರೆ ಮುಗಿಯಿತು. ನೆನಪಿಡಿ, ವಿತ್ತ ವಲಯ ಕಾರ್ಯ ನಿರ್ವಹಿಸುತ್ತಿರುವುದು ನಂಬಿಕೆಯ ಆಧಾರದ ಮೇಲೆ. ಗ್ರಾಹಕನ ನಂಬಿಕೆಗೆ ಪೆಟ್ಟು ಬಿದ್ದರೆ ಏನಾಗಬಹುದು ಎನ್ನುವುದಕ್ಕೆ ಉದಾಹರಣೆ ಅರ್ಜೆಂಟಿನ, ಐಸ್ಲ್ಯಾಂಡ್, ಸೈಪ್ರಸ್, ಗ್ರೀಸ್, ಸ್ಪೇನ್ ದೇಶಗಳು ನಮ್ಮ ಕಣ್ಣ ಮುಂದಿವೆ. ಈ ದೇಶಗಳಲ್ಲಿ ಠೇವಣಿ ಇಟ್ಟ ವ್ಯಕ್ತಿ ತನ್ನ ಹಣ ವಾಪಸ್ಸು ಕೇಳಿದರೆ ಬ್ಯಾಂಕ್ ತನ್ನ ಬಳಿ ನೀನಿಟ್ಟ ಹಣ ಇಲ್ಲ ಎಂದಿವೆ. 100 ರುಪಾಯಿ ನಿಡುವ ಕಡೆ 30-40 ರುಪಾಯಿ ಕೊಟ್ಟು ಉಳಿದದ್ದು ಕೊಡುತ್ತೇವೆ ಎಂದಿವೆ. ಯಾವಾಗ...? ಎನ್ನುವುದು ಯಕ್ಷ ಪ್ರಶ್ನೆ. ಇಂತಹ ಹಲವಾರು ಘಟನೆಗಳನ್ನ ಪ್ರತ್ಯಕ್ಷ ಕಂಡ ಅನುಭವ ನನ್ನದು. ಭಾರತದಲ್ಲಿ ಒಂದು ದಶಕದ ಹಂತದಲ್ಲಿ ಇಂತಹ ಘಟನೆ ಘಟಿಸಬಹುದು ಎನ್ನುವುದನ್ನ ನಾನು ಊಹಿಸಿರಲಿಲ್ಲ. ಮಾರ್ಚ್ 18, 2020 ರಿಂದ ಯಸ್ ಬ್ಯಾಂಕ್ ನ ಗ್ರಾಹಕರು ತಮ್ಮ ಹಣವನ್ನ ಬಳಸಲು ಸ್ವಂತಂತ್ರರು. ಆದರೆ ಗ್ರಾಹಕರೇ ಗಮನಿಸಿ ಇದೀಗ ನಿಮ್ಮ ಯಸ್ ಬ್ಯಾಂಕ್ ಸುರಕ್ಷಿತ, ಹೀಗಾಗಿ ಅಲ್ಲಿ ಇಟ್ಟಿರುವ ಹಣವನ್ನ ಹೊರ ತೆಗೆಯಲು ಒಮ್ಮೆಲೆ ಧಾವಿಸಬೇಡಿ. ಬ್ಯಾಂಕಿಂಗ್ ಕ್ಷೇತ್ರ ನಿಂತರುವುದು ನಂಬಿಕೆಯ ಆಧಾರದ ಮೇಲೆ, ಹೀಗಾಗಿ ಒಳ್ಳೆಯ ನಾಗರಿಕರಾಗಿ ಇಂತಹ ಸಮಯದಲ್ಲಿ ಸಂಯಮ ಕಾಯ್ದುಕೊಳ್ಳುವುದು ಎಲ್ಲರ ಕರ್ತವ್ಯ. 

ಹೀಗೆ ಬ್ಯಾಂಕ್ ಗಳೇ ದಿವಾಳಿ ಏಳುವ ಸ್ಥಿತಿ ತಪ್ಪಿಸಲು, ಜನರ ಮನದಲ್ಲಿ, ಹೂಡಿಕೆದಾರರ ಮನಸ್ಸಿನಲ್ಲಿ ನಂಬಿಕೆ ಸೃಷ್ಟಿಸಲು ಸರಕಾರ ಆಗಾಗ್ಗೆ ಸಾಕಷ್ಟು ಹಣವನ್ನು ಬ್ಯಾಂಕ್ ಗಳಿಗೆ ಬಂಡವಾಳದ ರೂಪದಲ್ಲಿ ಹೂಡುತ್ತದೆ. ಯುರೋಪಿನಲ್ಲಿ ಹಲವು ಬ್ಯಾಂಕ್ ಗಳಿಗೆ ಅಲ್ಲಿನ ಸರಕಾರ ಬಂಡವಾಳ ಹೂಡುವ ಸ್ಥಿತಿ ಮೀರಿ, ಬೈಲ್ ಔಟ್ ಮಾಡುವ ಹಂತಕ್ಕೆ ತಲುಪಿದ್ದು ಇದರ ಕಾರಣದಿಂದ ಇಡಿ ದೇಶವೇ ದಿವಾಳಿ ಎದ್ದದ್ದು ವಿತ್ತ ಪ್ರಪಂಚದ ಆಗು-ಹೋಗು ಗಮನಿಸುವ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಭಾರತೀಯ ಬ್ಯಾಂಕ್ ಗಳ ಆರ್ಥಿಕ ಆರೋಗ್ಯ ಅಷ್ಟರಮಟ್ಟಿಗೆ ಹದಗೆಟ್ಟಿದೆಯೇ? ಎಂದು ನೀವು ಪ್ರಶ್ನಿಸಿದರೆ, ಸಮಾಧಾನಿಸಿ… ಉತ್ತರ ‘ಇಲ್ಲ’. ಅರ್ಥ ನಮ್ಮ ಬ್ಯಾಂಕ್ ಗಳ ಪರಿಸ್ಥಿತಿ ಹದಗೆಟ್ಟಿಲ್ಲ, ಆದರೆ ಉತ್ತಮ ಎಂದು ಹೇಳುವಂತೆಯೂ ಇಲ್ಲ. ಇದೆಲ್ಲಾ ದಶಕಗಳಿಂದ ನಡೆಯುತ್ತಾ ಬಂದಿದೆ ಮತ್ತೆ ಈಗೇಕೆ ದಿಢೀರನೆ ‘ಜಡ ಮೊತ್ತ’ ದ ಬಗ್ಗೆ ಇಷ್ಟೊಂದು ಕಾಳಜಿ? ಎನ್ನುವುದಕ್ಕೆ ಉತ್ತರ  ‘ರಾಜನ್’! ಹೌದು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ‘ಸ್ವಚ್ಛ ಬ್ಯಾಲೆನ್ಸ್ ಶೀಟ್’ ಅಭಿಯಾನವನ್ನು ಡಂಗುರ ಹೊಡೆಯದೇ ಶುರು ಮಾಡಿದ್ದರು. ಮೋದಿ ಅಂತ್ಯಂತ ಜನಪ್ರಿಯ ವ್ಯಕ್ತಿ. ಅವರ ಸ್ವಚ್ಛ ಭಾರತ ಎಲ್ಲರಿಗೂ ಅರ್ಥವಾಗುವ ಕೆಲಸ. ಆದರೆ ವಿತ್ತ ಪ್ರಪಂಚದ ರಾಜನ್ ತೆಗೆದುಕೊಂಡ ನಿರ್ಧಾರ, ‘ಎಲ್ಲಾ ಬ್ಯಾಂಕ್ ಗಳು ತಮ್ಮ ಜಡ ಮೊತ್ತವನ್ನು ಘೋಷಿಸಿ, ತಮ್ಮ ನಿವ್ವಳ ಲಾಭದಲ್ಲಿ ಕಡಿತ ಮಾಡಲು ಹೇಳಿದ್ದು ತತ್ಕಾಲಕ್ಕೆ ಬ್ಯಾಂಕಿಂಗ್ ವಲಯಕ್ಕೆ ಕಹಿ. ಗ್ರಾಹಕ, ಹೂಡಿಕೆದಾರ ತಾತ್ಕಾಲಿಕವಾಗಿ ಬ್ಯಾಂಕ್ ನ ಮೇಲಿನ ಹೂಡಿಕೆಯಿಂದ ಹಿಮ್ಮುಖನಾಗಬಹುದು. ಆದರೆ ಮುಂದಿನ ದಿನಗಳಲಿ ದೇಶದ, ಜನರ ಹಿತದೃಷ್ಟಿಯಿಂದ ರಾಜನ್ ತೆಗೆದುಕೊಂಡ ನಿರ್ಧಾರ ಅಂತ್ಯಂತ ಮಹತ್ವದ್ದು.

ಒಂದು ಸಣ್ಣ ಬೆಂಕಿಯ ಕಿಡಿ ನಿರ್ಲಕ್ಷ್ಯಿಸಿದರೆ ಒಂದು ಮನೆಯನ್ನೇ ಸುಡಬಲ್ಲದು. ಹಾಗೆಯೇ ಇಂದಿಗೆ ಅಷ್ಟೇನೂ ದೊಡ್ಡದಲ್ಲದ (ಭಾರತದಂತಹ ದೇಶದ ವಹಿವಾಟಿನ ಮುಂದೆ ಹೋಲಿಸಿದರೆ ಮಾತ್ರ. ಹಾಗೆ ಸುಮ್ಮನೆ ನೋಡಿದರೆ ಎಂಥವರ ಹೃದಯವೂ ಒಂದು ಸೆಕೆಂಡು ಕಾರ್ಯ ನಿಲ್ಲಿಸುವುದು) ಜಡ ಸಾಲದ ಮೊತ್ತವನ್ನು ಆದಷ್ಟೂ ವಸೂಲು ಮಾಡುವುದು… ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಬಂದರೆ ತನ್ನ ನಿವ್ವಳ ಲಾಭದಲ್ಲಿ ಕಡಿತ ಮಾಡುವುದು, ಭವಿಷ್ಯದ ಅರ್ಥಿಕ ಭದ್ರತೆಗೆ ಹಾಕಿರುವ ಅಡಿಪಾಯ.

ಒಬ್ಬ ದೊಡ್ಡ ಉದ್ಯಮಿ ಸಾವಿರಾರು ಕೋಟಿ ಸಾಲ ಕೇಳಿಕೊಂಡು ಬರುತ್ತಾನೆ. ನೂರಾರು ಕಟ್ಟಳೆಗಳನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ಕೊಡುವ ಮುನ್ನ ಅಳೆದು ತೂಗಿ ಸಾಲ ಕೊಡುತ್ತವೆ. ಹೀಗಿದ್ದೂ ಇಷ್ಟೊಂದು ಅವ್ಯವಹಾರ, ಅಕಸ್ಮಾತ್ ಆ ದೊಡ್ಡ ಉದ್ಯಮಿ ತನ್ನದೇ ಬ್ಯಾಂಕ್ ತೆಗೆಯಲು ಅವಕಾಶ ಸಿಕ್ಕರೆ? ತೋಳಕ್ಕೆ ಕುರಿ ಕಾಯಲು ಬಿಟ್ಟಂತೆ ಆಗುವುದು ಸುಳ್ಳಲ್ಲ. ಏಪ್ರಿಲ್ 2014 ರಿಂದ ಇಲ್ಲಿನ ವರೆಗೆ 23 ಹೊಸ ಬ್ಯಾಂಕಿಂಗ್ ಲೈಸನ್ಸ್ ಕೊಟ್ಟಿದ್ದಾರೆ. ಅವುಗಳಲ್ಲಿ ಎರಡು ಯೂನಿವರ್ಸಲ್ ಬ್ಯಾಂಕ್ ಲೈಸನ್ಸ್, ಉಳಿದಂತೆ 11 ಪೇಮೆಂಟ್ ಬ್ಯಾಂಕ್ ಗಳು. ಇನ್ನುಳಿದ 10 ಸ್ಮಾಲ್ ಬ್ಯಾಂಕ್ ಅಡಿಯಲ್ಲಿ ಬಂದಿವೆ. ಆದಿತ್ಯ ಬಿರ್ಲಾ, ರಿಲಯನ್ಸ್, ಟೆಕ್ ಮಹಿಂದ್ರ ಇಂಥಹ ಪ್ರಮುಖರಿಗೆಲ್ಲ ಅವಕಾಶ ಸಿಕ್ಕಿದೆ.

11 ವಿದೇಶಿ ಬ್ಯಾಂಕ್ ಗಳು ಕೂಡ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಬ್ಯಾಂಕ್ ಗಳು RBI ಹೇಳಿರುವ ರೂಪುರೇಷೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಹಣವನ್ನು ದುರ್ಬಳಕೆ ಮಾಡಿ ದಿವಾಳಿ ಏಳುವ ಸ್ಥಿತಿ ಬಂದರೆ ಅಲ್ಲಿ ಹಣ ತೊಡಗಿಸಿದ್ದ ಗ್ರಾಹಕನ, ಹೂಡಿಕೆದಾರನ ಗತಿ ಏನು?

ನಿಮಗೆ ತಿಳಿದಿರಲಿ, ಭಾರತದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಬ್ಯಾಂಕ್ ಇರಲಿ, ಅದು ಪ್ರೈವೇಟ್ ಇರಬಹುದು; ವಿದೇಶಿ ಬ್ಯಾಂಕ್ ಇರಬಹುದು ಅಥವಾ ರಾಷ್ಟ್ರೀಕೃತ ಬ್ಯಾಂಕ್ ಇರಬಹುದು… 5 ಲಕ್ಷದವರೆಗೆ ನಿಮಗೆ ಹಣ ಸಂದಾಯವಾಗುವ ವಿಮೆ ಅಥವಾ ಗ್ಯಾರಂಟಿ ಇದೆ. ಈ 5  ಲಕ್ಷ ಡಿಪೋಸಿಟ್ ಮತ್ತು ಬಡ್ಡಿ ಎರಡನ್ನು ಸೇರಿಸಿದ ಒಟ್ಟು ಮೊತ್ತ. ಉದಾಹರಣೆ ನೋಡಿ, ಕೃಷ್ಣ ಎನ್ನುವ ವ್ಯಕ್ತಿ ಪ್ರೈವೇಟ್ ಬ್ಯಾಂಕ್ ಒಂದರಲ್ಲಿ 10 ಲಕ್ಷ ಹಣ ಡಿಪಾಸಿಟ್ ಇಟ್ಟಿದ್ದರು ಎನ್ನಿ. ಅದರ ಮೇಲಿನ ಬಡ್ಡಿ ಎರಡು ಲಕ್ಷ. ಒಟ್ಟು 12 ಲಕ್ಷ ಬ್ಯಾಂಕ್ ನಿಂದ ಹಣ ಬರಬೇಕಿತ್ತು. ಅಕಸ್ಮಾತ್ ಬ್ಯಾಂಕ್ ದಿವಾಳಿ ಎದ್ದರೆ ಕೃಷ್ಣನಿಗೆ ಸಿಗುವುದು 5 ಲಕ್ಷ ಮಾತ್ರ! ಕಷ್ಟಪಟ್ಟು ದುಡಿದು ಉಳಿಸಿದ ಹಣ ಆವಿಯಂತೆ ಕರಗಿ ಹೋದರೆ ಮಾಡುವುದೇನು? ಜಗತ್ತಿನಾದ್ಯಂತ ಹಣಕಾಸಿನ ಅವ್ಯವಹಾರಗಳಿಗೆ ಕಠಿಣ ಶಿಕ್ಷೆ ಇಲ್ಲದಿರುವುದು ನಿಜಕ್ಕೂ ಖೇದಕರ. ಇದು ಕೂಡ ಇತ್ತೀಚಿಗೆ ಏರಿಸಿದ ಮೌಲ್ಯವಾಗಿದೆ  ಈ ಹಿಂದೆ 5 ಲಕ್ಷದ ಜಾಗದಲ್ಲಿ ಇದ್ದ ಮೊತ್ತ 1 ಲಕ್ಷ ಮಾತ್ರ! 

ನಿಮಗೆ ಗೊತ್ತೇ? ಇಲ್ಲಿಯ ಅಂದರೆ 2016ರ ತನಕ ಭಾರತದಲ್ಲಿ ದಿವಾಳಿ (Insolvency and Bankruptcy) ಬಗ್ಗೆ ವ್ಯವಹರಿಸುವ ಒಂದು ಕಾನೂನೂ ಇರಲಿಲ್ಲ! ಕಂಪನಿಗಳ Insolvency and Bankruptcy ಕೋರ್ಟ್ ನಲ್ಲೂ, ವ್ಯಕ್ತಿಗತ Insolvency and Bankruptcyಯನ್ನು the Presidency Towns Insolvency Act, 1909 ಮತ್ತು Provincial Insolvency Act, 1920. ಅಡಿಯಲ್ಲಿ ನಿರ್ವಹಿಸಲಾಗುತ್ತಿತ್ತು. ಇವೆಲ್ಲ ಬ್ರಿಟಿಷರು ಮಾಡಿದ ಕಾನೂನು ಅವರು ಇದನ್ನ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದರು. ಹೀಗಾಗಿ ಭಾರತ ಬಿಟ್ಟು ಹೋಗುವಾಗ ಇದರ ನೆರವಿನಿಂದ ಬಹಳಷ್ಟು ಹಣ ಲೂಟಿ ಮಾಡಿಕೊಂಡು ಓಡಿ ಹೋಗಲು ಸಾಧ್ಯವಾಯಿತು!!. ಇಂತಹ ಕಾನೂನು ಸ್ವಂತಂತ್ರ ಬಂದ ನಂತರವೂ ಬದಲು ಮಾಡದೆ, ಭಾರತೀಯ ನಾಗರೀಕರನ್ನ ದೊಡ್ಡ ಉದ್ಯಮಿಗಳು, ರಾಜಕಾರಿಣಿಗಳು ಲೂಟಿ ಹೊಡೆದರು. 

ಇದೀಗ ಮೋದಿ ಸರಕಾರ 2016ರಲ್ಲಿ ದಿವಾಳಿ ನಿಯಮ (Insolvency and Bankruptcy Code) ಜಾರಿಗೆ ತಂದಿದೆ. ಈ ಹೊಸ ಕಾನೂನಿನ ಪ್ರಕಾರ ‘Insolvency and Bankruptcy Board of India’ ಎನ್ನುವ ಒಂದು ಪ್ರಾಧಿಕಾರವನ್ನು ತೆಗೆಯಲಾಗಿದೆ ಮತ್ತು ಒಂದು ನಿಧಿಯನ್ನು ಸ್ಥಾಪಿಸಲಾಗಿದೆ.  ಅದನ್ನು Insolvency and Bankruptcy Fund of India…” ಎಂದು ಕರೆಯಲಾಗುವುದು. ಮಲ್ಯರಂತೆ ಸುಲಭವಾಗಿ ಹಣ ಮರಳಿ ಕೊಡದೆ ಓಡಿ ಹೋಗುವುದು ಕಷ್ಟವಾಗಲಿದೆ.

ಯಸ್ ಬ್ಯಾಂಕ್ ಇರಬಹುದು ಅಥವಾ ಇನ್ನು ಯಾವುದೇ ಬ್ಯಾಂಕ್ ಇರಬಹುದು ಅದನ್ನ ಕುಸಿಯಲು ಬಿಡುವುದಿಲ್ಲ. ವಿಮೆಯ ಮೊತ್ತ ಕಡಿಮೆಯಿರಬಹುದು ಹಾಗೆಂದು ಜನ ಸಾಮಾನ್ಯ ಪ್ಯಾನಿಕ್ ಗೆ ಗುರಿಯಾಗಬೇಕಾಗಿಲ್ಲ. ಕೇಂದ್ರ ಸರಕಾರ ಯಾವುದೇ ಬ್ಯಾಂಕ್ ನ್ನು ಕುಸಿಯಲು ಬಿಡುವುದಿಲ್ಲ. ಅಲ್ಲಿನ ಗ್ರಾಹಕರ ಹಣ ಸುರಕ್ಷಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮಗೆ ಅನ್ನಿಸಿದ್ದನ್ನ ಬರೆದು ಅಥವಾ ವಿಡಿಯೋ ಮಾಡಿ ಸಮಾಜದ ಒಂದಷ್ಟು ವಲಯದ ಜನರಲ್ಲಿ ಭಯ ಮತ್ತು ಅಪನಂಬಿಕೆ ಹುಟ್ಟಿಸುವ ಕಾರ್ಯ ಮಾಡುತ್ತಾ ಇದ್ದಾರೆ. ಅದು ತಪ್ಪು. ಕರ್ನಾಟಕ ಬ್ಯಾಂಕ್, ಫೆಡರಲ್ ಬ್ಯಾಂಕ್ ಹೀಗೆ ಹಲವಾರು ಬ್ಯಾಂಕ್ಗಳು ಸುರಕ್ಷಿತವಲ್ಲ ಎನ್ನುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಇವೆಲ್ಲ ಶುದ್ಧ ಸುಳ್ಳು. ಮೊದಲೇ ಹೇಳಿದಂತೆ ಜಗತ್ತು ನಿಂತಿರುವುದು ನಂಬಿಕೆಯ ಮೇಲೆ ಅದರಲ್ಲೂ ಬ್ಯಾಂಕಿಂಗ್ ಅಥವಾ ವಿತ್ತ ಜಗತ್ತು ನಡೆಯುತ್ತಿರುವುದೇ ನಂಬಿಕೆಯ ಆಧಾರದ ಮೇಲೆ, ಹೀಗಾಗಿ ನಂಬಿಕೆ ಗಟ್ಟಿಯಾಗಿರಲಿ. ಯಸ್ ಬ್ಯಾಂಕ್ ವಿಷಯದಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರಗಳು ಎಷ್ಟು ವೇಗವಾಗಿ ಮತ್ತು ನಿಖರಾಗಿತ್ತು ಎನ್ನುವುದು ನಿಮ್ಮ ಕಣ್ಣ ಮುಂದಿದೆ. ಹೀಗಾಗಿ ಹಾಗೊಮ್ಮೆ ಬೇರೆ ಯಾವುದೇ ಬ್ಯಾಂಕ್ ವಿತ್ತೀಯ ಕೊರತೆ ಎದುರಿಸಬೇಕಾದ ಪರಿಸ್ಥಿತಿ ಬಂದರೆ ಸಾಮಾನ್ಯ ಗ್ರಾಹಕ ಅದರಿಂದ ಹೆದರುವ ಪ್ರಮೇಯವಿಲ್ಲ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com