ವಿತ್ತ ಜಗತ್ತಿನಲ್ಲಿ ಹಲವು ಬದಲಾವಣೆ! ಎಲ್ಲಕ್ಕೂ ಕೊರೋನ ಕಾರಣವೆ? 

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ವಿತ್ತ ಜಗತ್ತಿನಲ್ಲಿ ಹಲವು ಬದಲಾವಣೆ! ಎಲ್ಲಕ್ಕೂ ಕೊರೋನ ಕಾರಣವೆ?
ವಿತ್ತ ಜಗತ್ತಿನಲ್ಲಿ ಹಲವು ಬದಲಾವಣೆ! ಎಲ್ಲಕ್ಕೂ ಕೊರೋನ ಕಾರಣವೆ?

24 ನೇ ಮಾರ್ಚ್ 2020 ರಂದು ಮಧ್ಯಾಹ್ನ 2 ಗಂಟೆಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಾತನಾಡಿ ಜಿಎಸ್ಟಿ ಮಾರ್ಚ್, ಏಪ್ರಿಲ್, ಮೇ ಮತ್ತು ಕಂಪೆನ್ಸಷನ್ ಫೈಲಿಂಗ್ ಜೂನ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ. 5 ಕೋಟಿಗೂ ಕಡಿಮೆ ವಹಿವಾಟು ಇರುವ ಸಂಸ್ಥೆಗಳಿಗೆ ಫೈಲಿಂಗ್ ನಲ್ಲಿ ತಡವಾದರೆ  ಯಾವುದೇ ದಂಡ ಅಥವಾ ಶುಲ್ಕ ಇಲ್ಲ. ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಕೂಡ 30 ಜೂನ್ ರ ವರೆಗೆ ಮುಂದೂಡಲಾಗಿದೆ. ಐಟಿ ರಿಟರ್ನ್ಸ್ ಕೂಡ ೩೦ ಜೂನ್ ತನಕ ವಿಸ್ತರಿಸಲಾಗಿದೆ  ಎನ್ನುವ ಮಾಹಿತಿಯನ್ನ ನೀಡಿದ್ದಾರೆ. ಹಾಗೆಯೇ 2018-19 ರ ಆದಾಯ ತೆರಿಗೆ ತಡವಾಗಿ ಕಟ್ಟಿದ್ದರೆ ಅದರ ಮೇಲಿನ ಬಡ್ಡಿ ದರವನ್ನ 12 ರಿಂದ 9 ಕ್ಕೆ ಇಳಿಸಲಾಗಿದೆ. 

ಇನ್ಸಾಲ್ವೇನ್ಸಿ ಆಕ್ಟ್- ಏಪ್ರಿಲ್ ಕೊನೆಯವರೆಗೆ ಇದೆ ರೀತಿ ಕೊರೋನ ಮುಂದುವರೆದರೆ ಇನ್ಸಾಲ್ವೆನ್ಸಿ-ಬ್ಯಾಂಕ್ರಪ್ಟ್ ಕೋಡ್ ನ ಸೆಕ್ಷನ್ 7, 9, 10 ಅನ್ನು ಮುಂದಿನ ಆರು ಅಥವಾ ಹತ್ತು ತಿಂಗಳ ಕಾಲ ತೆಗೆದು ಹಾಕಲಾಗುತ್ತದೆ. ಇನ್ಸಾಲ್ವೆನ್ಸಿ ಮೊತ್ತವನ್ನ 1 ಲಕ್ಷದಿಂದ ಒಂದು ಕೋಟಿಗೆ ಏರಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗಲಿದೆ.

ಮುಂದಿನ 3 ತಿಂಗಳು ಡೆಬಿಟ್ ಕಾರ್ಡ್ ಬಳಸಿ ಯಾವುದೇ ಬ್ಯಾಂಕಿನಿಂದ ಹಣ ತೆಗೆದರೆ ಅದಕ್ಕೆ ಯಾವುದೇ ಶುಲ್ಕವಿಲ್ಲ. ಮಿನಿಮಮ್ ಬ್ಯಾಲೆನ್ಸ್ ಸದ್ಯಕ್ಕೆ ಅವಶ್ಯಕತೆಯಿಲ್ಲ.

ಹಾಗೆಯೇ ಕಾರ್ಪೊರೇಟ್ ವಲಯಕ್ಕೂ ಹಲವಾರು ರೀತಿಯ ಒಂದಷ್ಟು ಸಡಿಲತೆ ನೀಡಿದ್ದಾರೆ. ಇಲ್ಲಿನ ಓದುಗರಿಗೆ ಅದು ಅಷ್ಟೊಂದು ಮಹತ್ವದ್ದಲ್ಲ ಹೀಗಾಗಿ ಅದನ್ನ ಇಲ್ಲಿ ಹೇಳಲು ಹೋಗಿಲ್ಲ. 

ಇವೆಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಒಂದಷ್ಟು ತಿಂಗಳುಗಳು ಆರ್ಬಿಐ, ಫೈನಾನ್ಸ್ ಮಿನಿಸ್ಟ್ರಿ ಮತ್ತು ಸೆಬಿ ಮೂರು ಸೇರಿ ಷೇರು ಮಾರುಕಟ್ಟೆಯ ಏರಿಳಿತವನ್ನ ನಿಯಂತ್ರಿಸಲಿವೆ. ಸೆಬಿ ಕಡಿಮೆ ಅವಧಿಯಲ್ಲಿ ಆಗುವ ಏರುಪೇರುಗಳನ್ನ ತಡೆ ಹಿಡಿಯುವ ಮಾರ್ಗಸೂಚಿಯನ್ನ ತರಬೇಕಾಗಿದೆ. ಈ ಮೂರು ನಿಯಂತ್ರಕ ಸಂಸ್ಥೆಗಳು ದಿನದಲ್ಲಿ ಮೂರು ಬಾರಿ ಷೇರು ಮಾರುಕಟ್ಟೆಯನ್ನ ಅವಲೋಕಿಸಲಿವೆ. 

ಸಮಾಜದಲ್ಲಿ ಆಗುತ್ತಿರುವ ಸಣ್ಣ ಬದಲಾವಣೆಗಳನ್ನ ಕೂಡ ಪ್ರಧಾನ ಮಂತ್ರಿಯವರು ನೋಡುತ್ತಾ ಇದ್ದಾರೆ. ಒಂದಷ್ಟು ಜನ ಸಂಸದರು, ಉದ್ಯಮ ತಜ್ಞರುಗಳ ಜೊತೆಗೆ ಮಾತುಕತೆ ನಡೆಯುತ್ತಿದೆ. ನಮ್ಮ ಆರ್ಥಿಕತೆಗೆ ಬೇಕಾದ ಪ್ಯಾಕೇಜ್ ತಯಾರಿಸುತ್ತಿದ್ದಾರೆ. ಇದನ್ನ ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ನಿರ್ಮಲ ಸೀತಾರಾಮನ್ ಅವರು ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಜನತೆಯ ನಿರೀಕ್ಷೆ ಸಹಜವಾಗೇ ಹೆಚ್ಚಾಗಿದೆ. ಇಷ್ಟೆಲ್ಲಾ ಬದಲಾವಣೆಗೆ ಕಾರಣ ಕಾಣದ ಸಣ್ಣ ವೈರಸ್! 

ಚೀನಾ ಚೆಸ್ ಆಟದ ಕಥೆ: ಎಷ್ಟು ನಿಜ? ಎಷ್ಟು ಸುಳ್ಳು? 

ಇವೆಲ್ಲ ಇಂದು ಮಧ್ಯಾಹ್ನದಲ್ಲಿ ಸೃಷ್ಟಿಯಾದ ವಿಷಯಗಳು. ಇವುಗಳ ಮಧ್ಯೆ ಚೀನಾದ ವೈರಸ್ ಕರೋನ ಸೃಷ್ಟಿಸಿರುವ ಆತಂಕ ಇಂದು ಜಗದ್ವ್ಯಾಪಿ. ಇದನ್ನ ಕುರಿತು ಪ್ರತಿ ನಿತ್ಯ ತರಹೆವಾರಿ ಕಾನ್ಸ್ಪಿರೆಸಿ ಥಿಯರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಇವೆಲ್ಲಾ ನಿಜವಾ? ಎಂದು ಬಹಳಷ್ಟು ಓದುಗರು ಪ್ರಶ್ನೆಯನ್ನ ಕೇಳಿದ್ದೀರಿ. ಅದೇನು ಎನ್ನುವುದನ್ನ ಕೂಡ ನೋಡೋಣ. ಅದಕ್ಕೂ ಮೊದಲು 2017 ರಲ್ಲಿ ಚೀನಾ ವಿಶ್ವದ ದೊಡ್ಡಣ್ಣನಾಗಲು ಮಾಡಿದ ಒಂದು ಸಣ್ಣ ಕಸರತ್ತು ಇಲ್ಲಿದೆ ಓದಿ. 

ವಿದೇಶಿ ತಂತ್ರಜ್ಞಾನ ಕಂಪನಿಗಳನ್ನು ತನ್ನ ದೇಶದಿಂದ ದೂರವಿಡಲು ಚೀನಾ ಅಂದಿನ ದಿನಗಳಲ್ಲಿ ಕಾನೂನಿನ ಅಸ್ತ್ರ ಬಳಸಿತ್ತು. ಚೀನಾದ ಇಂಟರ್ ನೆಟ್ ಸಂಪರ್ಕ ನಿರ್ವಹಣೆ ಮಾಡುತ್ತಿರುವ ಸೈಬರ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ ಹೊಸ ಕಾನೂನು ಜಾರಿಗೊಳಿಸಿದ್ದು, ಈ ಕಾನೂನಿನಲ್ಲಿ ವಿದೇಶಿ ತಂತ್ರಜ್ಞಾನ ಕಂಪನಿಗಳು ಇದೇ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಮಾರ್ಗಸೂಚಿಯನ್ನು ಹಾಕಿದೆ. ಆ ಮೂಲಕ ವಿದೇಶಿ ಕಂಪನಿಗಳ ಮೇಲೆ ತೀವ್ರ ಒತ್ತಡ ಹೇರಿತ್ತು. 

ಈಗ ಜಾರಿಗೊಳಿಸಿರುವ ಸೈಬರ್ ಭದ್ರತಾ ಕಾನೂನಿನ ದಾಖಲೆಗಳಲ್ಲಿ, ಇಷ್ಟು ದಿನ ವಿದೇಶಿ ಕಂಪನಿಗಳು ಅನುಸರಿಸುತ್ತಿದ್ದ ಮಾದರಿಯನ್ನೇ ಹೊಂದಿದ್ದರೂ, ಹೊಸದಾಗಿ ಸೇರಿಸಲಾಗಿರುವ ಕಾನೂನು ಚೌಕಟ್ಟುಗಳು ಈ ಕಂಪನಿಗಳಿಗೆ ಗೊಂದಲ ಸೃಷ್ಟಿಸಿವೆ. ಅದು ಯಾವ ಮಟ್ಟಿಗೆ ಎಂದರೆ, ಚೀನಾದಲ್ಲಿ ತಮ್ಮ ವ್ಯವಹಾರ ಮುಂದುವರಿಸಬೇಕೆ ಎಂದು ಯೋಚಿಸುವಷ್ಟು... ಆದರೆ ಬೇರೆ ದಾರಿಯಿಲ್ಲದ ಕಾರಣ ಅವರೆಲ್ಲಾ ಚೀನಾದಲ್ಲಿ ಮುಂದುವರಿದರು ಮತ್ತು ಇಂದು ಕೊರೋನ ಕೆಂಗಣ್ಣಿಗೆ ಬಲಿಯಾದರು ಎನ್ನುವುದು ಬೇರೆಯ ಕಥೆ. ಇರಲಿ, 

ಇದಕ್ಕೆ ಒಂದು ಉದಾಹರಣೆಯನ್ನು ನೋಡುವುದಾದರೆ, ಈ ಕಾನೂನಿನ ಪರಿಚ್ಛೇದ 35ರ ಪ್ರಕಾರ ‘ಚೀನಾದ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಪಡೆದಿದ್ದೇ ಆದರೆ, ಆ ಮಾಹಿತಿಯನ್ನು ಚೀನಾದ ಗಡಿಯೊಳಗೇ ಶೇಖರಿಸಿಡಬೇಕು. ವ್ಯಾವಹಾರಿಕ ಸಂಬಂಧಿ ಪ್ರಮುಖ ದತ್ತಾಂಶಗಳು ಸಹ ಚೀನಾದ ಗಡಿ ದಾಟಿ ಆಚೆಗೆ ಹೋಗುವಂತಿಲ್ಲ.’

ಈ ಒಂದು ನಿಯಮದ ಪ್ರಕಾರ ವಿದೇಶಿ ತಂತ್ರಜ್ಞಾನ ಕಂಪನಿಗಳು ಚೀನಾ ಗ್ರಾಹಕರಿಗಾಗಿ ಅವರ ಮಾಹಿತಿಗಳನ್ನು ಕಲೆಹಾಕಲು ಚೀನಾದ ಗಡಿ ಪ್ರದೇಶದ ಒಳಗೇ ಪ್ರತ್ಯೇಕ ಸರ್ವರ್ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ. ಈ ನಿಯಮಕ್ಕೆ  ವಿದೇಶಿ ಇಂಟರ್ ನೆಟ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು ಕೂಡ. ಈ ನಿಯಮದ ಕುರಿತಾಗಿ ಗೊಂದಲವಿದೆ. ಚೀನಾದ ಒಳಗೆ ಹೆಚ್ಚಿನ ಮಾಹಿತಿಗಳನ್ನು ಶೇಖರಿಸುತ್ತಿದ್ದರೆ, ಕಂಪನಿಗಳಿಗೆ ಹೆಚ್ಚು ವೆಚ್ಚ ತಗುಲುತ್ತದೆ. ಅಷ್ಟೇ ಅಲ್ಲದೆ ಚೀನಾ ಸರ್ಕಾರ ಯಾವಾಗ ಬೇಕಾದರೂ ಈ ಮಾಹಿತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ. ಹೀಗೆ ಹಲವಾರು ಕಾನೂನುಗಳು ಗೊಂದಲಮಯವಾಗಿದ್ದು, ವಿದೇಶಿ ಕಂಪನಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು . 

ಈಗ ಪ್ರಸ್ತುತ ಗಿರಕಿ ಹೊಡೆಯುತ್ತಿರುವ ವಿಷಯಕ್ಕೆ ಬರೋಣ. ಚೀನಾ ಕೊರೋನ ವೈರಸ್ ಸೃಷ್ಟಿಸಿ ಬಿಡುತ್ತದೆ. ತನ್ನ ಮಾರುಕಟ್ಟೆ ಕುಸಿಯುತ್ತೆ, ತಯಾರಿಕೆ ಬಂದ್ ಮಾಡುತ್ತದೆ. ಇದರಿಂದ ಚೀನಾದ ಹಣ ತೀವ್ರವಾಗಿ ಅಪಮೌಲ್ಯ ಕಾಣುತ್ತದೆ. ಚೀನಾ ಬ್ಯಾಂಕ್ ಅಥವಾ ಚೀನಾ ಸರಕಾರ ಇದನ್ನ ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಷೇರು ಮಾರುಕಟ್ಟೆ ತೀವ್ರವಾಗಿ ಕುಸಿಯುತ್ತದೆ. ಇದರಿಂದ ಪ್ಯಾನಿಕ್ಗೆ ಒಳಗಾಗಿ ವಿದೇಶಿ ಹೂಡಿಕೆದಾರರು ತಮ್ಮ ಷೇರನ್ನ ಮಾರುತ್ತಾರೆ. ಇದನ್ನ ಚೀನಾ ಕೊಳ್ಳುತ್ತದೆ. ಇದರಿಂದ ವಿದೇಶಿ ತಂತ್ರಜ್ಞಾನ ಕಂಪನಿಗಳ ಮೇಲೆ ಚೀನಾ ಹಿಡಿತ ಸಾಧಿಸಿದೆ ಎನ್ನುವುದು ಇದರ ಸಾರಾಂಶ. 2017 ರಿಂದ ಚೀನಾ ಇಂತಹ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತ್ತು ಎನ್ನುವುದು ಅಂತರರಾಷ್ಟ್ರೀಯ ಹೂಡಿಕೆಯಲ್ಲಿ ಆಸಕ್ತಿ ವಹಿಸಿದವರಿಗೆ ನೆನಪಿರುತ್ತದೆ. ಚೀನಾ ಹೀಗೆ ತನ್ನ ಪ್ರಾಬಲ್ಯ ಸಾಧಿಸಲು ಕೊರೋನ ವೈರಸ್ ಅನ್ನು ಸೃಷ್ಟಿಸಿ ಬಿಟ್ಟಿತೇ? ಎನ್ನುವುದು ಚರ್ಚೆಗೆ ಬಿಟ್ಟದ್ದು. ಆದರೆ ಚೀನಾ 2017 ರ ತನ್ನ ಗುರಿಯನ್ನ 2020 ರಲ್ಲಿ ಸಾಧಿಸಿದೆ. 

ತನ್ನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಮೆರಿಕದ ಸೂತ್ರವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಅಮೆರಿಕದಲ್ಲಿ ತನ್ನ ದೇಶದಲ್ಲಿ ಉತ್ಪಾದನೆಯಾದ ವಸ್ತುವನ್ನೇ ಕೊಳ್ಳಲು ಮೊದಲು ಆದ್ಯತೆ ನೀಡಲಾಗುತ್ತದೆ. ಅದೇ ಮಾದರಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಸರ್ಕಾರಿ ಸಂಸ್ಥೆಗಳು, ಕಂಪನಿಗಳು ಹಾಗೂ ಸರ್ಕಾರದ ವ್ಯಾಪ್ತಿಯಲ್ಲಿ ಒಳಪಡುವ ಸ್ವಾಯತ್ತ ಸಂಸ್ಥೆಗಳು ನಮ್ಮ ದೇಶದಲ್ಲೇ ತಯಾರಾದ ಉತ್ಪನ್ನಗಳ ಖರೀದಿಗೆ ಮೊದಲ ಆದ್ಯತೆ ನೀಡಲಾಗುವುದು. ಇದರಿಂದ ವರ್ಷಕ್ಕೆ 2 ಲಕ್ಷ ಕೋಟಿಯಷ್ಟು ವ್ಯವಹಾರವನ್ನು ನಮ್ಮಲ್ಲಿ ಉತ್ಪಾದಕರ ಜತೆಗೆ ನಡೆಸುವ ಗುರಿ ಇದೆ. ಸರ್ಕಾರಿ ಸ್ವಾಮ್ಯದ ಎಲ್ಲ ಕ್ಷೇತ್ರಗಳಲ್ಲಿ 5 ಲಕ್ಷಕ್ಕೂ ಮೇಲ್ಪಟ್ಟ ಪ್ರತಿ ಖರೀದಿಗೂ ಈ ನೀತಿ ಕಡ್ಡಾಯವಾಗಿದೆ. 5 ಲಕ್ಷಕ್ಕಿಂತ ಕಡಿಮೆ ಮೊತ್ತದ ಖರೀದಿಗೆ ಕೇಂದ್ರ ಈ ನೀತಿಯಿಂದ ವಿನಾಯಿತಿ ನೀಡಿದೆ.

ಇದರಿಂದ ಸ್ಥಳೀಯ ಉತ್ಪನ್ನ ಹಾಗೂ ಸೇವಾ ವಲಯಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದ್ದು, ಉದ್ಯೋಗ ಸೃಷ್ಟಿಗೂ ಸಾಕಷ್ಟು ನೆರವಾಗಲಿದೆ. ಜಗತ್ತಿಗೆ ಜಗತ್ತೇ ಇಂದು ಚೀನಾಗೆ ಪರ್ಯಾಯ ಉತ್ಪಾದನಾ ವಲಯವನ್ನ ಹುಡುಕುತ್ತಿದೆ. ಅದು ಭಾರತ. ಇದನ್ನ ನಾವು ಸರಿಯಾಗಿ ಉಪಯೋಗಿಸಿಕೊಳ್ಳಬೇಕಿದೆ. ಈಗಲ್ಲದಿದ್ದರೆ ಮತ್ತೆಂದೂ ಇಂತಹ ಅವಕಾಶ ನಮ್ಮ ಬಾಗಿಲಿಗೆ ಬರುವುದಿಲ್ಲ. The ball is in our court, ಚೆಂಡು ನಮ್ಮ ಅಂಗಳದಲ್ಲಿದೆ!!! ಇದೇನೇ ಇರಲಿ ಜಗತ್ತು ಮಾತ್ರ ಒಂದೆರಡು ದಶಕ ಹಿಂದಕ್ಕೆ ಹೋಗುವುದು ಮಾತ್ರ ತಪ್ಪಿಸಲಾಗುವುದಿಲ್ಲ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com