ಹಣಕಾಸಿನ ಹೊಸ ಪರಿಭಾಷೆ ಬರೆಯಲು ಸಿದ್ದವಾಗಿದೆ ಚೀನಾ!

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ಹಣಕಾಸಿನ ಹೊಸ ಪರಿಭಾಷೆ ಬರೆಯಲು ಸಿದ್ದವಾಗಿದೆ ಚೀನಾ!
ಹಣಕಾಸಿನ ಹೊಸ ಪರಿಭಾಷೆ ಬರೆಯಲು ಸಿದ್ದವಾಗಿದೆ ಚೀನಾ!

ಕಳೆದ ಒಂದು ತಿಂಗಳಿಂದ ಚೀನಾದ ನಡವಳಿಕೆ ಕುರಿತು ಅನೇಕ ಲೇಖನಗಳನ್ನ ಬರೆದಿದ್ದೇನೆ. ಅವುಗಳಲ್ಲಿ ಒಂದೆರೆಡರಲ್ಲಿ ಚೀನಾ ಸ್ಪಷ್ಟ ಮುನ್ನಡೆ ಸಾಧಿಸಿದೆ, ಅಮೇರಿಕಾ ಬಳಿ ಈಗ ಗ್ಲೋಬಲ್ ಕರೆನ್ಸಿ ಯಾಗಿರುವ ಡಾಲರ್ ಮತ್ತು ಬಲಾಢ್ಯ ಮಿಲಿಟರಿ ಬಿಟ್ಟು ಬೇರೇನೂ ಉಳಿದಿಲ್ಲ ಎಂದು ಬರೆದಿದ್ದೆ. ಬಲಾಢ್ಯ ಮಿಲಿಟರಿಯನ್ನ ಚೀನಾ ಸುಮ್ಮನಾಗಿಸಿ ಬಿಟ್ಟಿದೆ. ಬೀಜಿಂಗ್ ನಿಂದ ವಾಷಿಂಗ್ಟನ್ ಗೆ ಕೇವಲ ಅರ್ಧ ಗಂಟೆಯಲ್ಲಿ ತಲುಪಬಲ್ಲ ಮಿಸೈಲ್ಗಳನ್ನ ಚೀನಾ ಕೇವಲ ಎರಡು ದಿನಗಳ ಹಿಂದೆ ಪ್ರದರ್ಶನಕ್ಕೆ ಇಟ್ಟಿದೆ. ಸಮಯ ಬಂದರೆ ಅಣು ಬಾಂಬ್ ಸಿಡಿಸಲು ಕೂಡ ಸಿದ್ಧ ಎನ್ನುವ ಸಂದೇಶ ಚೀನಾ ರವಾನೆ ಮಾಡಿದೆ. ಅಲ್ಲಿಗೆ ಅಮೇರಿಕಾ ಬಳಿ ಉಳಿದದ್ದು ವಿಶ್ವದ ಹಣವಾಗಿ ಉಳಿದಿರುವ ಡಾಲರ್ ಮಾತ್ರ!! ಈ ಬರಹದಲ್ಲಿ ಚೀನಾ ಅಮೆರಿಕಾದ ಈ ಪ್ರಾಬಲ್ಯವನ್ನ ಮುರಿಯಲು ಹೇಗೆ ಸಿದ್ಧವಾಗಿದೆ ಎನ್ನುವುದನ್ನ ನೋಡೋಣ.

ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಎನ್ನುವ ಒಂದು ಸಂಸ್ಥೆಯಿದೆ. ಇಲ್ಲಿ ಹತ್ತಾರು ದೇಶದ ಹಣವನ್ನ ರಿಸರ್ವ್ ಕರೆನ್ಸಿ ಎಂದು ನೋಂದಾವಣಿ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಅಮೆರಿಕನ್ ಡಾಲರ್, ಜಪಾನೀಸ್ ಯೆನ್, ಯುರೋ, ಪೌಂಡ್, ಚೈನೀಸ್ ರೇನ್ ಮಿನ್ ಬಿ ಅಥವಾ ಆರ್ ಎಂ ಬಿ, ಆಸ್ಟ್ರೇಲಿಯನ್ ಡಾಲರ್, ಕೆನಡಿಯನ್ ಡಾಲರ್ ಮತ್ತು ಸ್ವಿಸ್ ಫ್ರಾಂಕ್ ಗಳು ಇವೆ. ಇದರಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ವ್ಯಾಪಾರ ವಹಿವಾಟಿನ 62 ಪ್ರತಿಶತ ಡಾಲರ್ ನಲ್ಲಿ ನಡೆಯುತ್ತಿದೆ. ಒಂದು ಕಾಲದಲ್ಲಿ ಇದು 80 ಪ್ರತಿಶತಕ್ಕೂ ಹೆಚ್ಚಿತ್ತು. ಯುರೋ ಉಗಮದ ನಂತರ 2೦ ಪ್ರತಿಶತ ವಹಿವಾಟು ಯೂರೋದಲ್ಲಿ ನಡೆಯುತ್ತಿದೆ. ಜಪಾನೀಸ್ ಯೆನ್ ಹತ್ತಿರತ್ತಿರ 6 ಪ್ರತಿಶತ ಮತ್ತು ಚೀನಿ ಹಣ 2 ಪ್ರತಿಶತ ಟ್ರೇಡ್ ಆಗುತ್ತಿದೆ.

ಗಮನಿಸಿ ನೋಡಿ ಚೀನಾ ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಳ್ಳಲು ಏನೇನು ಬೇಕು ಅವೆಲ್ಲಾ ಸಾಧಿಸಿಯಾಗಿದೆ. ಆದರೆ ಚೀನಿ ಹಣವನ್ನ ವರ್ಲ್ಡ್ ಕರೆನ್ಸಿ ಎಂದು ಯಾರೂ ಒಪ್ಪಿಕೊಂಡಿಲ್ಲ. ಚೀನಾ ಜಗತ್ತಿನ ಒಪ್ಪಿಗೆ ಕೇಳುತ್ತ ಕೂರುವ ದೇಶವಲ್ಲ. ಅದು ತನ್ನ ದೇಶದಲ್ಲಿನ ಹಣಕಾಸು ವ್ಯವಸ್ಥೆಯನ್ನ ಅಮೂಲಾಗ್ರವಾಗಿ ಬದಲಾಯಿಸಲು ಹೊರಟಿದೆ. ಇಲ್ಲಿಯವರೆಗೆ ಲಭ್ಯವಿದ್ದ RMB ಯನ್ನ ಇನ್ನು ಮುಂದೆ e-RMB ಯನ್ನಾಗಿ ಪರಿವತಿಸಲಾಗುತ್ತದೆ. ಕಳೆದ ಮೂರು ದಿನಗಳಿಂದ ತನ್ನ ಪ್ರಮುಖ ನಾಲ್ಕು ನಗರದಲ್ಲಿ ಇದನ್ನ ಪ್ರಾಯೋಗಿಕವಾಗಿ ಆಗಲೇ ಚಲಾವಣೆಗೆ ತರಲಾಗಿದೆ. ಈ ನಗರಗಳಲ್ಲಿ ಕೆಲಸ ಮಾಡುವ ಸರಕಾರಿ ನೌಕರರ ಸಂಬಳವನ್ನ ಕೂಡ e-RMB ಮೂಲಕ ನೀಡಲಾಗಿದೆ. ಮೇ 2021 ಕ್ಕೆ ಪೂರ್ಣ ಪ್ರಮಾಣವಾಗಿ ಚೀನಾ ಪೂರ್ತಿ e-RMB ಮಾತ್ರ ಕೆಲಸ ನಿರ್ವಹಿಸಲು ಶುರು ಮಾಡುತ್ತದೆ.

ಏನಿದು e-RMB?

ಇದು ಡಿಜಿಟಲ್ ಮನಿ, ಬ್ಲಾಕ್ ಚೈನ್ ಬಳಸಿ ಇದನ್ನ ನಿರ್ವಹಿಸಲಾಗುತ್ತದೆ. ಚೀನಾದಲ್ಲಿ ಆಗಲೇ ಬ್ಲಾಕ್ ಚೈನ್ ತಂತ್ರಜ್ಞಾನ ಬಹಳಷ್ಟು ಮುಂದಿದೆ.  ತನ್ನ BSN ಅಂದರೆ ಬ್ಲಾಕ್ ಚೈನ್ ಸರ್ವಿಸ್ ನೆಟ್ವರ್ಕ್ ಬಳಸಿ ಚೀನಾ ಈ ರೀತಿಯ ವಾಲೆಟ್ ಮನಿ ಗೆ ಶಿಫ್ಟ್ ಆಗುವುದು ಕಷ್ಟವೇನಲ್ಲ. ಇದು ನಮ್ಮ ಪೆಟಿಎಂ, ಭೀಮ್ ತರಹ ಕೆಲಸ ನಿರ್ವಹಿಸುತ್ತದೆ. ಆದರೆ ಇದರಲ್ಲಿ ಟೆಕ್ನಾಲಜಿ ಇನ್ನಷ್ಟು ಉತ್ತಮವಾಗಿದ್ದು. ಇಲ್ಲಿನ ವಹಿವಾಟು ಲೆಡ್ಜರ್ ರೂಪದಲ್ಲಿ ನಮಗೆ ಸಿಗುತ್ತದೆ. ಅಂದ ಮಾತ್ರಕ್ಕೆ ಇದು ಬಿಟ್ ಕಾಯಿನ್ ನಷ್ಟು ಸಂಕೀರ್ಣ ಕೂಡ ಅಲ್ಲ. ಇದು ಪೆಟಿಎಂ ಮತ್ತು ಬಿಟ್ ಕಾಯಿನ್ ನಡುವಿನ ಹೈಬ್ರಿಡ್ ತಂತ್ರಜ್ಞಾನ ಎನ್ನಬಹುದು.

e-RMB ಏಕೆ?

  1. ಪ್ರೈವೇಟ್ ಹಣದ ಹಾವಳಿ ತಡೆಯಲು:- ನಮ್ಮಲ್ಲಿ ಬಹಳ ಜನಕ್ಕೆ ಗೊತ್ತಿಲ್ಲ, ಫೇಸ್ಬುಕ್ ಜನಕ ಮಾರ್ಕ್ ಬಹಳ ಮಹತ್ವಾಕಾಂಕ್ಷಿ ಆತ ಡಿಜಿಟಲ್ ಮನಿಯನ್ನ ವಿಶ್ವದ ಹಣವನ್ನಾಗಿ ಮಾಡಲು ಹವಣಿಸಿ ಕಳೆದ ಮೂರು ವರ್ಷದಿಂದ ದುಡ್ಡಿಯುತ್ತಿದ್ದಾನೆ. ಇದಕ್ಕೆ ಫೇಸ್ಬುಕ್ ಲಿಬ್ರಾ ಎನ್ನುವ ಹೆಸರು ಕೂಡ ಇಡಲಾಗಿದೆ. ಅಂದರೆ ಗಮನಿಸಿ ಇವತ್ತಲ್ಲ ನಾಳೆ ಬ್ಯಾಂಕುಗಳ, ದೇಶಗಳ ಅವುಗಳ ಸರಕಾರದ ಅನುಮತಿ ಇಲ್ಲದೆ, ಈ ರೀತಿ ಟೆಕ್ನಾಲಜಿ ಸಂಸ್ಥೆಗಳು ವರ್ಲ್ಡ್ ಕರೆನ್ಸಿಯನ್ನ ಬದಲಿಸಿ ಬಿಡುವ ಸಾಮರ್ಥ್ಯ ಹೊಂದಿವೆ. ಫೇಸ್ಬುಕ್ ಕಳೆದ ಮೂರು ವರ್ಷದಿಂದ ಆ ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡುತ್ತಿದೆ. ಇದೀಗ ಭಾರತಕ್ಕೆ ರಿಲಯನ್ಸ್ ಮೂಲಕ ಇದೆ ಹವಣಿಕೆಯಲ್ಲಿ ಕಾಲಿಟ್ಟಿದೆ.
  2. ತನ್ನ ಹಣವನ್ನ ವಿಶ್ವ ಹಣವನ್ನಾಗಿ ಮಾಡುವ ಹುನ್ನಾರ. ಡಾಲರ್ ಅನ್ನು ನೆಲಕಚ್ಚಿಸುವುದು ಪರಮ ಉದ್ದೇಶ.
  3. ನಗದನ್ನ ಪೂರ್ಣವಾಗಿ ಕೊಳ್ಳುವುದು ತನ್ಮೂಲಕ ತನ್ನ ದೇಶದ ಜನರ ಮೇಲಿನ ಸಂಪೂರ್ಣ ಹಿಡಿತ ಅದಕ್ಕೆ ಸಿಗುತ್ತದೆ. ಒಂದಷ್ಟು ವರ್ಷದಲ್ಲಿ ಪೂರ್ಣ ಜಗತ್ತಿನ ಹಿಡಿತ. ಯಾವ ಕ್ಷಣದಲ್ಲಿ ಯಾರು ಏನು ಕೊಂಡರು ಎನ್ನುವುದರಿಂದ ಎಲ್ಲಾ ಮಾಹಿತಿಗಳೂ ಸರಕಾರದ ಬಳಿ ಇರುತ್ತದೆ.
  4. ಸ್ವಿಸ್, ಫ್ರಾನ್ಸ್, ಇಂಗ್ಲೆಂಡ್ ಫೇಸ್ಬುಕ್ ಸಹಾಯದೊಂದಿಗೆ ಇಂತಹ ಒಂದು ಹೊಸ ವಿತ್ತ ವ್ಯವಸ್ಥೆ ತರುವ ಹುನ್ನಾರದಲ್ಲಿರುವುದು ಚೀನಾಕ್ಕೆ ತಿಳಿದಿದೆ. ಹೀಗಾಗಿ ಅವರಿಗಿಂತ ಮುಂಚೆ ಬರಲು ಇದು ಹೊಂಚು ಹಾಕುತ್ತಿದೆ.

ಒಮ್ಮೆ ಇಂತಹ ಹಣದ ವ್ಯವಸ್ಥೆ ಬಂದರೆ ನಂತರ ನಿಧಾನವಾಗಿ ಬ್ಯಾಂಕ್ಗಳು ಕೂಡ ಬೇಕಾಗುವುದಿಲ್ಲ. ಅತ್ಯಂತ ನುರಿತ ಟೆಕ್ನಾಲಜಿ ಈ ಎಲ್ಲಾ ಕಾರ್ಯಗಳನ್ನ ಮಾಡಿಬಿಡುತ್ತದೆ. ಗಮನಿಸಿ ಇದರ ಕುರಿತು ನಾಲ್ಕು ವರ್ಷದ ಹಿಂದೆಯೇ ಬ್ಯಾಂಕಿಂಗ್ ಬೇಕು ಬ್ಯಾಂಕು ಬೇಕೇ? ಎನ್ನುವ ಲೇಖನ ಬರೆದಿದ್ದೆ. ಹೌದು ಬ್ಯಾಂಕಿಂಗ್ ಕಾರ್ಯವನ್ನ ಟೆಕ್ನಾಲಜಿ ಕಂಪನಿಗಳು ಮಾಡುತ್ತವೆ. ಬ್ಯಾಂಕು ಏಕೆ ಬೇಕು? ಮುಂಬರುವ ದಿನಗಳಲ್ಲಿ ಬ್ಯಾಂಕ್ ನೆನಪಾಗುತ್ತದೆ ಅಷ್ಟೇ.

e-RMB ವಿಶ್ವ ಹಣವಾಗುತ್ತದೆಯೇ?

ಚೀನಿ ಡಿಜಿಟಲ್ ಕರೆನ್ಸಿ ತನ್ನ ದೇಶದಲ್ಲಿ ವ್ಯಾಪಾರ ಮಾಡುತ್ತಿರುವ ಎಲ್ಲಾ ಮಲ್ಟಿ ನ್ಯಾಷನಲ್ ಕಂಪೆನಿಗಳನ್ನ ಈ ಹಣವನ್ನ ಅಡಾಪ್ಟ್ ಮಾಡಿಕೊಳ್ಳಲು ಹೇಳುತ್ತದೆ. ಹೀಗಾಗಿ ಬೇರೆ ದಾರಿಯಿಲ್ಲದೆ ಎಲ್ಲಾ ಸಂಸ್ಥೆಗಳು ಈ ಡಿಜಿಟಲ್ ಮನಿಯನ್ನ ಉಪಯೋಗಿಸಲು ಶುರು ಮಾಡುತ್ತವೆ. ಅಂದರೆ ಗಮನಿಸಿ ಚೀನಾ ದೇಶದಲ್ಲಿ ನಡೆದ ವ್ಯವಹಾರ ಮಾತ್ರವಲ್ಲದೆ ಬೇರೆ ದೇಶಗಳಿಗೆ ಕಳಿಸುವ ಹಣ ಕೂಡ ಚೀನಿ ಡಿಜಿಟಲ್ ಹಣವನ್ನ ಬಳಸಿ ಕಳಿಸಬೇಕಾಗುತ್ತದೆ. ಅಲ್ಲಿಗೆ ಡಾಲರ್ ಮೇಲಿನ ಅವಲಂಬನೆ ತಗ್ಗುತ್ತದೆ.

ಚೀನಾ ದೇಶ ತನ್ನ ಡಿಜಿಟಲ್ ಕರೆನ್ಸಿಯನ್ನ ಎಲ್ಲರಿಗೂ ಮೊದಲು ತಂದರೆ ಮತ್ತು ಅದನ್ನ ತನ್ನ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶಗಳಲ್ಲಿ ಕೂಡ ಬಳಸುವಂತೆ ಒತ್ತಡ ಹೇರಿದರೆ, ಆಗಲೂ ಕೂಡ ಡಾಲರ್ ಕುಸಿತ ಕಾಣುತ್ತದೆ.

ಚೀನಾ ಹೇಗೆ e-RMB ಯನ್ನ ಡಿಜಿಟಲ್ ಕರೆನ್ಸಿಯನ್ನಾಗಿ ತಂದಿದೆ, ಅದರಂತೆ ಭಾರತ, ಅಮೇರಿಕಾ ಮತ್ತು ಯೂರೋಪು ಕೂಡ ಅತಿ ಶೀಘ್ರದಲ್ಲಿ ಇದನ್ನ ಹೋಲುವ ಡಿಜಿಟಲ್ ಕರೆನ್ಸಿಯನ್ನ ಮಾರುಕಟ್ಟೆಗೆ ತರುತ್ತಾರೆ. ಗಮನಿಸಿ ಈ ಸಂಧರ್ಭದಲ್ಲಿ ಕೂಡ ಡಾಲರ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

ಇವತ್ತಿಗೆ ಡಾಲರ್ ವಿಶ್ವದ ವಿದೇಶಿ ಹಣದ ವಹಿವಾಟಿನಲ್ಲಿ  62 ಪ್ರತಿಶತವಿದೆ. ಯುರೋ 2೦ ಪ್ರತಿಶತದಲ್ಲಿದೆ. ಚೀನಾದ ಯಾನ್ 2 ಪ್ರತಿಶತ ವಹಿವಾಟು ನಡೆಸುತ್ತಿದೆ. ಭಾರತದ ರೂಪಾಯಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಕೂಡ ಪಡೆದಿಲ್ಲ. ಅಂದರೆ ನಮ್ಮ ಭಾರತೀಯ ರೂಪಾಯಿಯನ್ನ ವಿನಿಮಯ ದರವನ್ನಾಗಿ ಬಳಸಿ ಬೇರೆ ಯಾವ ದೇಶವೂ ಹಣವನ್ನ ಪಾವತಿ ಮಾಡುವ ಅಥವಾ ಪಡೆಯುವ ಕೆಲಸವನ್ನ ಮಾಡಿಲ್ಲ. ಈಗ ಹೊಸ ಡಿಜಿಟಲ್ ಕರೆನ್ಸಿ ಬರುವುದರಿಂದ ಅಮೆರಿಕನ್ ಡಾಲರ್ ಒಂದೇ ದಿನದಲ್ಲಿ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ 2 ಪ್ರತಿಶತ ವಹಿವಾಟು ನಡೆಸುತ್ತಿರುವ ಚೀನಾ 2೦ ರಿಂದ 3೦ ಪ್ರತಿಶತಕ್ಕೆ ಒಂದೇ ದಿನದಲ್ಲಿ ಏರಿಕೆ ಕಾಣುತ್ತದೆ. ಯುರೋ ಡಿಜಿಟಲ್ ಕರೆನ್ಸಿ ತನ್ನ ಮಾರ್ಕೆಟ್ ಶೇರ್ ಉಳಿಸಿಕೊಳ್ಳುತ್ತದೆ ಅಥವಾ ಒಂದಷ್ಟು ಉತ್ತಮವಾಗಿಸಿಕೊಳ್ಳುತ್ತದೆ. ಅಮೇರಿಕಾ 6೦ ರಿಂದ ಕುಸಿದು 2೦ ಅಥವಾ 3೦ಕ್ಕೆ ಇಳಿಯುತ್ತದೆ. ಆಟದಲ್ಲೇ ಇಲ್ಲದ ಭಾರತದ ಸರಿಯಾಗಿ ದಾಳ ಉರಿಳಿಸಿದರೆ 3 ರಿಂದ 5 ಪ್ರತಿಶತ ಪಾಲುದಾರಿಕೆ ಇಲ್ಲಿ ಪಡೆಯಬಹುದು.

e-RMB ಒಂದೇ ದಿನದಲ್ಲಿ ಡಾಲರ್ ಜಾಗದಲ್ಲಿ ಕೂರಲು ಖಂಡಿತ ಸಾಧ್ಯವಿಲ್ಲ ಆದರೆ ಡಾಲರ್ ಅನ್ನು ಗ್ಲೋಬಲ್ ಕರೆನ್ಸಿ ಜಾಗದಿಂದ ಪದಚ್ಯುತ ಗೊಳಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತದೆ. ಮುಂದಿನ ಐದು ವರ್ಷದಲ್ಲಿ 60 ಪ್ರತಿಶತ ವಹಿವಾಟು ತನ್ನ ಲೆಕ್ಕಕ್ಕೆ ಬರೆದುಕೊಳ್ಳುವ ಅದರ ಲೆಕ್ಕಾಚಾರವನ್ನ ತಪ್ಪಿಸಬೇಕು ಅಂದರೆ ಅತ್ಯಂತ ಶೀಘ್ರವಾಗಿ ಅಮೇರಿಕಾ ಮತ್ತು ಯೂರೋಪು  e-RMB  ಹೋಲುವ ಡಿಜಿಟಲ್ ವಾಲೆಟ್ ಅನ್ನು ಅತ್ಯಂತ ಶೀಘ್ರವಾಗಿ ಮಾರುಕಟ್ಟೆಗೆ ಬಿಡಬೇಕು. ಇಲ್ಲದಿದ್ದರೆ ಡಾಲರ್, ಯುರೋ ತಮ್ಮ ಮಾರುಕಟ್ಟೆ ಕಳೆದುಕೊಳ್ಳುವುದು ಗ್ಯಾರಂಟಿ ಜೊತೆಗೆ ಡಿಜಿಟಲ್ ಮಾರುಕಟ್ಟೆಯಲ್ಲಿ ಕೂಡ ಚೀನಾದ ಪಾರುಪತ್ಯವನ್ನ ಎದುರಿಸಲು ಸಾಧ್ಯವಾಗುವುದಿಲ್ಲ.

ಭಾರತವೇನು ಮಾಡಬೇಕು?

ನಮ್ಮದೇ ಡಿಜಿಟಲ್ ಮನಿ ಅತ್ಯಂತ ವೇಗವಾಗಿ ತರಬೇಕು. ನಮ್ಮದೇ ಆದ ಭಾರತ್ ಮನಿಯನ್ನ ಜನತೆಗೆ ಪರಿಚಯಿಸಬೇಕು. ಚೈನೀಸ್ ಹಣ ಬಂದು ನಮ್ಮಲ್ಲಿ ಬೇರೂರುವ ಮೊದಲು ನಾವು ಪರ್ಯಾಯ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಗಮನಿಸಿ ಯಾವುದೇ ವಿಷಯ ಮೊದಲು ಮಾರುಕಟ್ಟೆಯನ್ನ ಪ್ರವೇಶಿಸಿ ತನ್ನ ಗ್ರಾಹಕರನ್ನ ಪಡೆದುಕೊಂಡರೆ ಆ ನಂತರ ಮತ್ತೆ ಅವರನ್ನ ಮರಳಿ ಪಡೆಯುವುದು ಬಹಳ ಕಷ್ಟ. ಇದಕ್ಕೆ ಉತ್ತಮ ಉದಾಹರಣೆ ಪೆಟಿಎಂ. ಪೆಟಿಎಂ ನಲ್ಲಿ ಹಣ ತೊಡಗಿಸಿರುವುದು ಚೀನಾದ ಅಲಿಬಾಬ. ಆದರೆ ನಾವು ಪೆಟಿಎಂ ಅನ್ನು ಉಪಯೋಗಿಸುತ್ತಿದ್ದೇವೆ. ಪೆಟಿಎಂ ಇಂದು ಭಾರತದಲ್ಲಿ ಆ ವರ್ಗದಲ್ಲಿ ಮಾರ್ಕೆಟ್ ಲೀಡರ್!

ಹೀಗೆ ಏಕಾಏಕಿ ಡಿಜಿಟಲ್ ಹಣವನ್ನ ತರುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಂ ೦, ಎಂ 1, ಎಂ 2, ಎಂ 3, ಎಂ 4 ಹೀಗೆ ಹಣದ ಹರಿವನ್ನ ಅಳೆಯುವ ಮಾಪನಗಳಿವೆ.ಆಗ ಇವೆಲ್ಲಾ ಏನಾಗುತ್ತವೆ? ಎನ್ನುವುದು ಚಿಂತಿಸಬೇಕಾದ ವಿಷಯ. ಬೇಸಿಕ್ ಹಣಕಾಸು ಜ್ಞಾನವಿಲ್ಲದ ಭಾರತೀಯ ಜನತೆಗೆ ಇದನ್ನ ಕಲಿಸುವುದು ಹೇಗೆ? ಅದೂ ಅತ್ಯಂತ ವೇಗವಾಗಿ? ಅದು ಪಕ್ಕಕ್ಕಿರಲಿ ಇಂತಹ ಕಾರ್ಯಗಳನ್ನ ಮೊದಲಿಗೆ ಮಾಡಬೇಕಿರುವುದು ಬ್ಯಾಂಕ್. ಅಲ್ಲಿನ ಸಿಬ್ಬಂದಿ ಇದಕ್ಕೆ ಸಿದ್ಧರಿದ್ದಾರೆಯೇ? ಪಾಸ್ ಬುಕ್ ಪ್ರಿಂಟ್ ಹಾಕಿಕೊಡಲು ನಾಲ್ಕು ದಿನ ಅಲೆಸುವ ನಮ್ಮ ಜನರಿಂದ ಇದು ಸಾಧ್ಯವೆ? ಹೀಗೆ ನಮ್ಮ ಮುಂದೆ ಪ್ರಶ್ನೆಗಳ ಸರಿಮಾಲೆ ದೊಡ್ಡದಿದೆ. ಅವೆಲ್ಲವನ್ನ ಮೆಟ್ಟಿ ನಿಂತರೆ ಡಿಜಿಟಲ್ ಕರೆನ್ಸಿ ಎನ್ನುವ ಹೊಸ ಆಟದಲ್ಲಿ ನಾವು ಪಾಲ್ಗೊಳ್ಳಬಹುದು. ಒಂದಷ್ಟು ಮಾರ್ಕೆಟ್ ಪಾಲುದಾರಿಕೆ ಕೂಡ ಪಡೆಯಬಹುದು. ನಾವು ಬದಲಾಗದೆ, ನಾವು ವೇಗವಾಗಿ ಹೊಸದಕ್ಕೆ ಹೊಂದಿಕೊಳ್ಳದಿದ್ದರೆ, ಹೊಸ ದಾಸ್ಯ ಪದ್ದತಿಯಿಂದ ನಮ್ಮನ್ನ ಚೀನಾಗೆ ನಾವೇ ಎರವಲು ಕೊಟ್ಟ ಬುದ್ಧನೂ ಕಾಪಾಡಲಾರ!!

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com