ಅವರಿಗೆ ಹಣ -ಅಧಿಕಾರದ ಆಟ! ನಮಗೆ ಬದುಕು ಸಂಕಷ್ಟ!!

ಹಣಕ್ಲಾಸು

- ರಂಗಸ್ವಾಮಿ ಮೂಕನಹಳ್ಳಿ

Published: 14th May 2020 02:00 AM  |   Last Updated: 14th May 2020 02:00 AM   |  A+A-


Hanclasu (Image for representational purpose

ಅವರಿಗೆ ಹಣ -ಅಧಿಕಾರದ ಆಟ! ನಮಗೆ ಬದುಕು ಸಂಕಷ್ಟ!!

Posted By : Srinivas Rao BV
Source : Online Desk

ನಾವು ಜಗತ್ತನ್ನ ಅರ್ಥ ಮಾಡಿಕೊಂಡಿರುವ ರೀತಿ ಸರಿಯಾಗಿಲ್ಲದಿದ್ದರೆ? ನಾವಂದು ಕೊಂಡಂತೆ, ಡೊನಾಲ್ಡ್ ಟ್ರಂಪ್, ಮೋದಿ, ಮರ್ಕೆಲ್, ಪುಟಿನ್ ಅಥವಾ ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ ಈ ಜಗತ್ತಿನಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಯಾವುದೇ ರೀತಿಯ ಕಂಟ್ರೋಲ್ ಹೊಂದಿರದಿದ್ದರೆ? ನಮ್ಮ ಊಟ, ನಮ್ಮ ಆಚಾರ-ವಿಚಾರದಿಂದ ಎಲ್ಲವನ್ನೂ ಬೇರಾರೋ ನಮಗೆ ತಿಳಿಯದ ವ್ಯಕ್ತಿಗಳು ಕುಳಿತು ನಿರ್ದೇಶಿಸುತ್ತಿದ್ದರೆ?

ಜಗತ್ತಿನಲ್ಲಿ ಅಸಮಾನತೆ ಸೃಷ್ಟಿಸುವುದು, ಅಸ್ಥಿರತೆ ಸೃಷ್ಟಿಸುವುದೇ ಅವರ ವ್ಯಾಪಾರವಾಗಿದ್ದರೆ? ಅಸಮಾನತೆ ಹೊಸ ಬಿಸಿನೆಸ್ ಆಪರ್ಚುನಿಟಿಯಾಗಿದ್ದರೆ? ಜಗತ್ತಿನ ಬಹುಪಾಲು ವ್ಯಾಪಾರ-ವಹಿವಾಟು ಇವರ ಅಂಕೆಯಲ್ಲಿವೆ. ಜಗತ್ತಿನ ಬಹುಪಾಲು ದೇಶಗಳಲ್ಲಿ ಅಧ್ಯಕ್ಷ ಅಥವಾ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನ ನಿರ್ಧರಿಸುವುದು ಇವರು. ಜಗತ್ತಿನಲ್ಲಿ ಯುದ್ಧ ಸೃಷ್ಟಿಸುವುದೂ ಇವರೇ, ಶಾಂತಿ ಮಂತ್ರ ಜಪಿಸುವುದೂ ಇವರೇ... ತೊಟ್ಟಿಲು ತೂಗುವುದು... ಮಗುವನ್ನೂ ಚಿವುಟುವುದು ಎರಡೂ ಇವರದ್ದೇ ಕೆಲಸ. ಯಾಂತ್ರಿಕ ಬದುಕ ಸೃಷ್ಟಿಸಿದವರು ಇವರು. ನಿಮಗೆ ಚಿಂತಿಸಲು ಆತ್ಮಾವಲೋಕನ ಮಾಡಿಕೊಳ್ಳಲು ಸಮಯ ನೀಡದವರು ಇವರು. ಹೆಚ್ಚು ಕಡಿಮೆ ಜಗತ್ತು ನಡೆಯುವುದು ಇವರ ಅಣತಿಯಂತೆ. ನೀವು ಬಿಗ್ ಬಾಸ್ ಅಥವಾ ಇನ್ನೊಂದು ರಿಯಾಲಿಟಿ ಶೋ ನೋಡಿ ಇದು ಸ್ಕ್ರಿಪ್ಟೆಡ್ ಎಂದು ಹಲವು ಬಾರಿ ಮನಸ್ಸಿನಲ್ಲಿ ಅಂದುಕೊಂಡಿರಬಹುದು. ನಿಜ ಜೀವನ ಹಾಗಲ್ಲ ಎನ್ನುವ ನಿಲುವು ನಿಮ್ಮದಾಗಿದ್ದರೆ ದಯವಿಟ್ಟು ಅದನ್ನ ಬದಲಿಸಿಕೊಳ್ಳಿ. ಎಲ್ಲಿ?ಯಾವಾಗ? ಏನು ಆಗಬೇಕೆನ್ನುವುದನ್ನ 'ಅವರು' ಬಹಳ ಮುಂಚೆಯೇ ನಿರ್ಧರಿಸಿರುತ್ತಾರೆ. ನಮ್ಮ-ನಿಮ್ಮ ಕಣ್ಣಿಗೆ ವಿಶ್ವನಾಯಕರಂತೆ ಕಾಣುವ ಟ್ರಂಪ್ ಇರಬಹುದು ಅಥವಾ ಏಂಜೆಲಾ ಮರ್ಕೆಲ್ ಇರಬಹುದು ಇವರೆಲ್ಲಾ ನಿಮಿತ್ತ ಮಾತ್ರ. 'ಅವರ' ಅಣತಿ ಪಾಲಿಸಲು ಇರುವ ಗುಲಾಮರಷ್ಟೇ! ಇವರ ಅಣತಿಯಂತೆ ನಡೆಯುವರಿಗೆ ಮಾತ್ರ ಅಧಿಕಾರ. ಇಲ್ಲವೆಂದು ಇವರ ವಿರುದ್ಧ ಸಿಡಿದೆದ್ದ ನಾಯಕರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ದಕ್ಷಿಣ ಅಮೇರಿಕಾ ದೇಶಗಳ ಬಹಳಷ್ಟು ನಾಯಕರು ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದವರು ದಿನವೊಪ್ಪತ್ತಿನಲ್ಲಿ ಇಲ್ಲವಾಗಿ ಹೋಗಿಬಿಟ್ಟರೆಂದರೆ? 'ಅವರ' ಶಕ್ತಿ ಎಷ್ಟಿರಬಹುದೆನ್ನುವ ಅರಿವು ನಿಮ್ಮದಾಯಿತು ಎಂದುಕೊಳ್ಳುತ್ತೇನೆ.

ಈ 'ಅವರು' ಯಾರು? ಅವರೇಕೆ ಹಣವನ್ನ (ನಗದು ಎಂದು ಓದಿಕೊಳ್ಳಿ) ಕೊಲ್ಲಲು ಬಯಸಿದ್ದಾರೆ? ಅವರೇಕೆ ಔಷಧವನ್ನ ಜೀವನ ಶೈಲಿ ಮಾಡಲು ಹೊರಟಿದ್ದಾರೆ? ಎಲ್ಲೆಡೆ ಅಸಮಾಧಾನ ಸೃಷ್ಟಿಸುವುದರಿಂದ ಅವರಿಗೇನು ಪ್ರಯೋಜನ? ನಮ್ಮ ಒಗ್ಗಟ್ಟು ಅವರಿಗೇಕೆ ತಿರುಗೇಟು?

ಈ 'ಅವರು' ಯಾರು?

ಜಗತ್ತನ್ನ ತಮ್ಮಿಚ್ಛೆಗೆ ಕುಣಿಸುವ ಬೆರಳೆಣಿಕೆ ಮನೆತನಗಳಲ್ಲಿ ರೋತ್ಸ್ ಚೈಲ್ಡ್. ಬ್ರೂಸ್, ಕ್ಯಾವೆಂಡಿಷ್, ಹ್ಯಾನೋವರ್, ಕ್ರುಪ್, ರೋಕೆ ಫಿಲ್ಲರ್, ವಾರ್ಬುರ್ಗ್, ಡೇ ಮೆಡಿಸಿ, ಸೌದಿ ರಾಜ ಮನೆತನ, ಬ್ರಿಟಿಷ ರಾಜ ಮನೆತನ, ಭಾರತದ ಅಂಬಾನಿ, ಪ್ರಮುಖವಾದವು.  ಇವರದು 'ಎಲೈಟ್ ಕ್ಲಬ್'! ಇಲ್ಲಿನ ಸದಸ್ಯರಾಗುವುದು ಸಾಧ್ಯವೇ ಇಲ್ಲ. ಜಗತ್ತಿನ ಬಹುಪಾಲು ವ್ಯಾಪಾರ-ವಹಿವಾಟು ಇವರ ಅಂಕೆಯಲ್ಲಿವೆ. ಇವರ ಜೊತೆಗೆ ಮೆಕ್ಸಿಕನ್ ಟೆಲಿಕಾಮ್ ದೈತ್ಯ ಕಾರ್ಲೋಸ್ ಸ್ಲಿಮ್, ಸ್ಪ್ಯಾನಿಷ್ ಬಟ್ಟೆ ವ್ಯಾಪಾರಿ ಅಮಾನಿಕೋ ಒರ್ತೆಗಾ, ಬಿಲ್ ಗೇಟ್ಸ್, ವಾರೆನ್ ಬಫ್ಫೆಟ್, ಮತ್ತು ಫೇಸ್ ಬುಕ್ ನ ಮಾರ್ಕ್ ಝುಕರ್ಬರ್ಗ್, ಒರಾಕಲ್ ನ ಲಾರಿ ಎಲ್ಲಿಸಾನ್ ಮತ್ತು ಮೈಕಲ್ ಬ್ಲೂಮ್ಬರ್ಗ್ ತಮ್ಮ ಬೆರಳ ತುದಿಯಲ್ಲಿ ಕುಣಿಸುತ್ತಿದ್ದಾರೆ. ಇವತ್ತು ವಿಶ್ವ ಕೋವಿಡ್ ಹೊಡೆತದಿಂದ ಬಳಲುತ್ತಿದ್ದರೆ, ಇವರುಗಳ ವ್ಯಾಪಾರ ಮಾತ್ರ ವೃದ್ಧಿಯಾಗುತ್ತಲೆ ಇದೆ. ಮೇಲಿನ ಸಾಲುಗಳಲ್ಲಿ ಹೇಳಿರುವ ವ್ಯಕ್ತಿಗಳ ಕೈಯಲ್ಲಿ ಜಗತ್ತಿನ 8೦ಕ್ಕೂ ಹೆಚ್ಚು ಸಂಪತ್ತು ಕೇಂದ್ರೀಕೃತವಾಗಿದೆ. ಅಂದರೆ ಗಮನಿಸಿ ಜಗತ್ತಿನಲ್ಲಿ ಇರುವ ಒಟ್ಟು ಸಂಪತ್ತು ನೂರು ರೂಪಾಯಿ ಎಂದುಕೊಂಡರೆ 8೦ ರೂಪಾಯಿಗೂ ಮೀರಿದ ಸಂಪತ್ತು ಮೇಲಿನ ಸಾಲುಗಳಲ್ಲಿರುವ ವ್ಯಕ್ತಿಗಳ ಬಳಿ ಶೇಖರಣೆಯಾಗಿದೆ. ಹೀಗಾಗಿ ತಮ್ಮ ವ್ಯಾಪಾರಕ್ಕೆ ಬೇಕಾದಂತ ಸನ್ನಿವೇಶ ಜಗತ್ತಿನೆಲ್ಲೆಡೆ ಸೃಷ್ಟಿಸಿಕೊಳ್ಳುವ ತಾಕತ್ತು ಇವರಿಗಿದೆ.

ಅವರೇಕೆ ಹಣವನ್ನ (ನಗದು ಎಂದು ಓದಿಕೊಳ್ಳಿ) ಕೊಲ್ಲಲು ಬಯಸಿದ್ದಾರೆ?

ಹಣದ ಮೂಲಕ ನಡೆದ ವಹಿವಾಟಿನಲ್ಲಿ ನಿಮ್ಮ ಬಗ್ಗೆ ಯಾವ ಮಾಹಿತಿ 'ಅವರಿಗೆ' ತಿಳಿಯುವುದಿಲ್ಲ. ನಿಮ್ಮ ಬಗ್ಗೆಯ ಮಾಹಿತಿ ತಿಳಿದುಕೊಂಡರೆ ಅವರು ನಿಮ್ಮನ್ನ ಕೂಡ ಹಣದಂತೆ ಬಳಸಿಕೊಳ್ಳಲು ಸಾಧ್ಯ. ಹಣದ ಮೂಲಕ ನಡೆದ ವ್ಯವಹಾರದಲ್ಲಿ  ಮೂರನೆಯವರು ಲಾಭ ಮಾಡಲು ಸಾಧ್ಯವಿಲ್ಲ. ಇಲ್ಲಿ ಕೂಡು-ಕೊಳ್ಳುವಿಕೆಯಲ್ಲಿ ಇರುವವರು ಇಬ್ಬರು. ಡಿಜಿಟಲ್ ವ್ಯವಹಾರವನ್ನ ಮೂರನೆಯವರ ಸಹಾಯವಿಲ್ಲದೆ ಮುಗಿಸಲು ಬಾರದು. ಹೀಗೆ ಅವರು ನೀಡುವ ಸೇವೆಗೆ ಒಂದಷ್ಟು ಹಣವನ್ನ ನಮ್ಮಿಂದ ಪೀಕುತ್ತಾರೆ. ಇಂದು ಜಗತ್ತಿನ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿದವರು ಮಾತ್ರ ರಾಜ್ಯಭಾರ ಮಾಡಬಲ್ಲರು. ಹಣದ ವಹಿವಾಟಿನಲ್ಲಿ ಅತಿ ಸಾಮಾನ್ಯ ಮನುಷ್ಯನಿಗೆ ನಿಯಂತ್ರಣವಿರುತ್ತದೆ. ಡಿಜಿಟಲ್ ವ್ಯವಹಾರದಲ್ಲಿ ಆತನೊಬ್ಬ ನಿರಕ್ಷರಕುಕ್ಷಿ. ಹೀಗಾಗಿ ಆತನ ನಿಯಂತ್ರಣ ಮತ್ತಷ್ಟು ಸುಲಭವಾಗುತ್ತದೆ. ಜಗತ್ತಿನ ಜನಸಂಖ್ಯೆಯ ಅತಿ ಹೆಚ್ಚು ಭಾಗವನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟರೆ ಉಳಿದ ಜನರ ಅನಿಸಿಕೆ 'ಅವರಿಗೆ' ಮುಖ್ಯವಾಗುವುದೇ ಇಲ್ಲ.

ಡಿಜಿಟಲ್ ಕರೆನ್ಸಿಯಲ್ಲೂ ಮುಂಬರುವ ದಿನಗಳಲ್ಲಿ ಬಿಟ್ ಕಾಯಿನ್ ತರಹದ ಹಣ ಪ್ರತಿ ದೇಶದಲ್ಲೂ ಬೇರೆ-ಬೇರೆ ಹೆಸರಲ್ಲಿ ಬರುವ ಸಾಧ್ಯತೆಯಿದೆ. ಇವುಗಳ ಸೃಷ್ಟಿ ಗಣಿತದ ಆಲ್ಗರಿದಮ್ ಸೂತ್ರವನ್ನ ಅನುಸರಿಸಿ ಕಂಪ್ಯೂಟರ್ ಕೋಡ್ ಗಳ ಮೂಲಕ ಸೃಷ್ಟಿಸಲಾಗುತ್ತದೆ. ಇದು ಯಾರು ಬೇಕಾದರೂ ನೋಡಬಹುದು ಅದರ ನಿಖರತೆಯನ್ನ ಪರೀಕ್ಷಿಸಬಹುದು ಎನ್ನುತ್ತಾರೆ ನಿಜ. ತನ್ನ ಬಳಿ ಇದ್ದ ನೋಟನ್ನ ಕೊಟ್ಟು, ಬೇಕಾದ್ದನ್ನು ಕೊಂಡು, ವ್ಯಾಪಾರ ಮುಗಿಸುತಿದ್ದ ಜನ ಸಾಮಾನ್ಯ ಕಂಪ್ಯೂಟರ್ ಕೋಡ್ ಪರೀಕ್ಷಿಸುವ ಮಟ್ಟಕ್ಕೆ ಹೇಗೆ ಬೆಳೆದಾನು? ಅರ್ಥ ಇಷ್ಟೇ ತನ್ನ ಅರಿವಿಗೆ ನಿಲಕದ ವಿಷಯದ ಬಗ್ಗೆ ಅವನಲ್ಲಿ ಅವ್ಯಕ್ತ ಭಯ ಉತ್ಪನ್ನವಾಗುತ್ತದೆ. ಭಯಗೊಂಡ ಜನರನ್ನ ನಿಯಂತ್ರದಲ್ಲಿಡುವುದು ಸುಲಭ.

ರಾಜಕೀಯ ನಿಯಂತ್ರಣ ಸಾಧಿಸಲು ಕೂಡ ಡಿಜಿಟಲ್ ವ್ಯವಹಾರ ಸಹಾಯ ಮಾಡಲಿದೆ. ನೀವು ಕೇಳಬಹುದು ಹಣ ನಿರ್ಮೂಲನೆಯಾದರೆ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ. ರಾಜಕೀಯ ಪಕ್ಷಗಳ ಹುಚ್ಚಾಟಕ್ಕೆ ಕಡಿವಾಣ ಬೀಳುತ್ತದೆ ಎಂದು. ಭ್ರಷ್ಟಾಚಾರ ಒಂದು ಮಾನಸಿಕ ಸ್ಥಿತಿ. ಕೇವಲ ಹಣವನ್ನ ನಿರ್ಮೂಲನೆ ಮಾಡುವುದರಿಂದ ಭ್ರಷ್ಟಾಚಾರ ಎಂದಿಗೂ ಕಡಿಮೆಯಾಗುವುದಿಲ್ಲ. ಜಗತ್ತಿನಲ್ಲಿ ಕೆಲವು ದೇಶಗಳಲನ್ನ ಟ್ಯಾಕ್ಸ್ ಹೆವನ್ ಮಾಡಲಾಗಿದೆ. ಎಲ್ಲಿಂದ ಬಂತು ಹೇಗೆ ಬಂತು ಎಂದು ಪ್ರಶ್ನಿಸದೆ ಖಾತೆಗೆ ಹಣ ಹಾಕಿಸಿಕೊಳ್ಳುವ ದೇಶಗಳಿವು. ಡಿಜಿಟಲ್ ಕರೆನ್ಸಿ ಮೂಲಕ ಅದರಲ್ಲೂ ಬಿಟ್ ಕಾಯಿನ್ ತರಹದ ಹಣದ ಮೂಲಕ ಕ್ಷಣಾರ್ಧದಲ್ಲಿ ಜಗತ್ತಿನ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಣದ ವರ್ಗಾವಣೆ ಮಾಡಬಹುದು.

ಜಗತ್ತಿನ ಜನರ ಮೇಲೆ ಹೆಚ್ಚು ನಿಯಂತ್ರಣ ಪಡೆಯುವುದು ಆ ಮೂಲಕ ಹಣ ಮತ್ತು ವ್ಯಾಪಾರ ಮತ್ತು ವಹಿವಾಟಿನ ಮೇಲೆ ಹಿಡಿತ ಸಾಧಿಸುವುದು ಇವರ ಪ್ರಮುಖ ಉದ್ದೇಶ. ನಿಮ್ಮ ಪ್ರತಿಯೊಂದು ವಹಿವಾಟನ್ನ ಕೂಡ ಅವರು ಟ್ರ್ಯಾಕ್ ಮಾಡಬಹುದು. ಇದೆಲ್ಲ ನಗದು ನಿರ್ಮೂಲನೆ ಮಾಡದೆ ಪೂರ್ಣ ಹಿಡಿತ ಸಾಧ್ಯವಿಲ್ಲ. ಹೀಗಾಗಿ ಇವರು ಹಣವನ್ನ ಕೊಲ್ಲಲು ಬಯಸಿದ್ದಾರೆ.

ಅವರೇಕೆ ಔಷಧವನ್ನ ಜೀವನ ಶೈಲಿ ಮಾಡಲು ಹೊರಟಿದ್ದಾರೆ?

ಹಿಂದೆ ಜನರನ್ನ ನಿಯಂತ್ರಣದಲ್ಲಿಡಲು ಹಲವಾರು ಸಾಧನಗಳಿದ್ದವು. ಆದರೆ ಇಂದು ಸಾಮಾನ್ಯ ಮನುಷ್ಯನಿಗೆ ಟೆಕ್ನಾಲಜಿ ಬಹಳ ಸುಲಭವಾಗಿ ಕೈಗೆ ಎಟುಕಿದೆ. ಹೀಗಾಗಿ ಅವನನ್ನ ಹೆಚ್ಚು ದಿನಗಳ ಕಾಲ ನಿಯಂತ್ರಿಸಲು ಸಾಧ್ಯವಿಲ್ಲ. ಜನ ಸಾಮಾನ್ಯ ಹೆಚ್ಚು ಹೆಚ್ಚು ವಿಷಯ ಜ್ಞಾನ ಪಡೆಯುತ್ತಾ ಹೋದಂತೆಲ್ಲ ಆತನನ್ನ ಧರ್ಮ ಮತ್ತು ಹಣದ ಮೂಲಕ ಅಥವಾ ಇನ್ನಿತರೇ ಭಾವನೆಗಳ ಮೂಲಕ ನಿಯಂತ್ರಿಸುವುದು ಕಷ್ಟಸಾಧ್ಯ. ಆದರೇನು ಮಾಡುವುದು ಇಂತಹ ಜನರ ಮೇಲೆ ಹಿಡಿತ ಸಾಧಿಸದೆ ’ಅವರು’ ಹೆಚ್ಚು ಬೆಳೆಯಲು ಆಸ್ಪದವಿಲ್ಲ. ಹೀಗಾಗಿ ಅವರು ಹೊಸ ಅಸ್ತ್ರದ ಹುಡಕಾಟದಲ್ಲಿ ಇದ್ದರು. ಇದೀಗ ಅವರ ಕಣ್ಣಿಗೆ ಬಿದ್ದಿರುವುದು ಔಷಧ. ಇದನ್ನ ಅವರು ಇನ್ನು ಮುಂದೆಯೂ ವ್ಯವಸ್ಥಿತವಾಗಿ ನಮ್ಮನ್ನ ನಿಯಂತ್ರಿಸಲು ಬಳಸುತ್ತಾರೆ. ಹೀಗಾಗಿ ಹೆಚೆ-ಹೆಚ್ಚು ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಉದ್ದೇಶವಾಗಿರಬೇಕು.

ಎಲ್ಲೆಡೆ ಅಸಮಾಧಾನ ಸೃಷ್ಟಿಸುವುದರಿಂದ ಅವರಿಗೇನು ಪ್ರಯೋಜನ ?

ಗಮನಿಸಿ ಶಾಂತಿ ಮತ್ತು ನೆಮ್ಮದಿ ಇದ್ದ ಕಡೆ ಜ್ಞಾನ ವೃದ್ಧಿಯಾಗುತ್ತದೆ. ಅಸ್ಥಿರತೆ ಮತ್ತು ಅಸಮಾಧಾನ ಇದ್ದ ಕಡೆ ಬದುಕಿದರೆ ಸಾಕು ಎನ್ನುವ ಮಟ್ಟಕ್ಕೆ ಮನುಷ್ಯ ತಲುಪುತ್ತಾನೆ. ಇನ್ನು ಜ್ಞಾನ ವೃದ್ಧಿಯ ಮಾತು ದೂರವೇ ಉಳಿಯಿತು. ಹೀಗೆ ವಿಷಯ ಜ್ಞಾನದಿಂದ ವಂಚಿತನಾದ ಮನುಷ್ಯ ಪ್ರಶ್ನಿಸುವುದನ್ನ ಮರೆಯುತ್ತಾನೆ. ಯಾವಾಗ ಮನುಷ್ಯ ಪ್ರಶ್ನಿಸುವುದು ಮರೆಯುತ್ತಾನೆ, ಆಗ ಅವರ ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಹೀಗಾಗಿ ವಾತಾವರಣದಲ್ಲಿ ಅಶಾಂತಿ ಮತ್ತು ಅಸ್ಥಿರತೆ ಎರಡೂ ಅವರಿಗೆ ಹೊಸ ಬಿಸಿನೆಸ್ ಆಪೆರ್ಚುನಿಟಿ ಇದ್ದಹಾಗೆ.

ನಮ್ಮ ಒಗ್ಗಟ್ಟು ಅವರಿಗೇಕೆ ತಿರುಗೇಟು?

ಈ ಸಮಸ್ಯೆಗಳಿಗೆ ಮದ್ದಿಲ್ಲವೇ? ಖಂಡಿತ ಇದೆ. ಅದು ಬಹಳ ಸರಳ ಮದ್ದು. ಆದರೆ ವಿಪರ್ಯಾಸವೆಂದರೆ ಇಂತಹ ಸರಳ ಮದ್ದನ್ನ ಜಾರಿಗೊಳಿಸುವುದು ಬಹಳ ಕಷ್ಟ. ನಮ್ಮ ಹಣೆಬರಹ ಅನ್ನಿ ಅಥವಾ ಅವರ ಅದೃಷ್ಟ ಅನ್ನಿ ನಾವು ಅಂದರೆ ಜನ ಸಾಮಾನ್ಯರು ಒಂದು ವಿಷಯಕ್ಕೆ ಒಗ್ಗಟ್ಟಾಗಿ ಹೋರಾಡಿದ ನಿದರ್ಶಗಳು ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ. ಅವರ ಉತ್ಪನ್ನಗಳನ್ನ, ಸೇವೆಗಳನ್ನ ಬಳಸುವುದು ನಿಲ್ಲಿಸಿ ನಮ್ಮದೇ ಆದ ಚಿಕ್ಕ ಪುಟ್ಟ ಸೋಶಿಯಲ್ ಗ್ರೂಪ್ ಗಳನ್ನ ನಿರ್ಮಿಸಿಕೊಂಡರೆ, ಖಂಡಿತ ಅವರ ಸಾಮ್ರಾಜ್ಯವನ್ನ ಕೆಡವಬಹುದು. ಆದರೆ ನಮಗೆ ಇದಾವುದೂ ತಿಳಿಯುವುದಿಲ್ಲ. ಭಾಷೆಯ ಹೆಸರಲ್ಲಿ, ಆಹಾರದ ಹೆಸರಲ್ಲಿ, ಧರ್ಮದ ಹೆಸರಲ್ಲಿ ನಾವು ವಿಭಜಿತರಾಗುತ್ತಲೇ ಹೋಗುತ್ತಿದ್ದೇವೆ. ನಾವು ಛಿದ್ರವಾದಷ್ಟೂ ಅವರ ಪಟ್ಟ ಭದ್ರ. ಅದು ಕೊನೆಯಿಲ್ಲದೆ ಆಗುತ್ತಿದೆ.

ಕೊನೆಮಾತು: ಇಂದಿಗೆ ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ ಜಗತ್ತಿನ ಯಾವ ವ್ಯಕ್ತಿಯೂ ಆಹಾರ ಮತ್ತು ಬಟ್ಟೆಗಾಗಿ ಅಂದರೆ ಮೂಲಭೂತ ವಿಷಯಕ್ಕೆ ದುಡಿಯುವುದು ಬೇಕಿಲ್ಲ ಎನ್ನುವ ಮಟ್ಟಿಗೆ. ಆದರೇನು ಜನರನ್ನ ತಂತ್ರಜ್ಞಾನದ  ಪೂರ್ಣ ಪ್ರಯೋಜನ ಪಡೆಯಲು ಬಿಟ್ಟರೆ ಅವರ ನಿಯಂತ್ರಣ ತಪ್ಪುವುದಿಲ್ಲವೇ? ಇಷ್ಟೆಲ್ಲಾ ಹೊಡೆದಾಟ ಜಗತ್ತಿನ ಮೇಲಿರುವ ತಮ್ಮ ನಿಯಂತ್ರಣ ಕಾಯ್ದುಕೊಳ್ಳುವುದು ಮತ್ತು ಇನ್ನಷ್ಟು ನಿಯಂತ್ರಣ ಸಾಧಿಸುವುದಕ್ಕೆ ಮಾತ್ರ ಎಂದರೆ ಅಚ್ಚರಿಯಾದೀತು. ಆದರೆ ಇದು ಸತ್ಯ. ಹಣ ಮತ್ತು ಅಧಿಕಾರದ ನಶೆ ಇದಕ್ಕೆಲ್ಲಾ ಕಾರಣ


- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Stay up to date on all the latest ಅಂಕಣಗಳು news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp