ಇಂದಿನ ಅಸ್ಥಿರತೆಯಲ್ಲಿ ಯಾವ ಹೂಡಿಕೆ ಬೆಸ್ಟ್?

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ
ಇಂದಿನ ಅಸ್ಥಿರತೆಯಲ್ಲಿ ಯಾವ ಹೂಡಿಕೆ ಬೆಸ್ಟ್?
ಇಂದಿನ ಅಸ್ಥಿರತೆಯಲ್ಲಿ ಯಾವ ಹೂಡಿಕೆ ಬೆಸ್ಟ್?

ಇಂದು ಜಗತ್ತು ಹಿಂದೆಂದೂ ಕಂಡು ಕೇಳರಿಯದ ಮಟ್ಟಿನ ಅಸ್ಥಿರತೆಯನ್ನ ಕಾಣುತ್ತಿದೆ. ಆದರೇನು, ಬದುಕು ಅಲ್ಲಿಗೆ ನಿಲ್ಲುವಂತಿಲ್ಲ. ಚಲನಶೀಲ ಬದುಕು ಮಾತ್ರ ಆರೋಗ್ಯಪೂರ್ಣವಾಗಿರಲು ಸಾಧ್ಯ. ಈ ಮಾತೇಕೆ ಬಂದಿತು ಎಂದರೆ ಇಂದು ಎಲ್ಲಾ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನ ಬಹಳಷ್ಟು ಕಡಿಮೆ ಮಾಡಿದ್ದಾರೆ.

ನಮ್ಮ ಭಾರತದಲ್ಲಿ ಒಂದು ಅಂಕಿ ಅಂಶದ ಪ್ರಕಾರ 12 ಕೋಟಿಗೂ ಮೀರಿದ ಹಿರಿಯ ನಾಗರಿಕರು ಇದ್ದಾರೆ. ಇವರಲ್ಲಿ ಮುಕ್ಕಾಲು ಪಾಲು ಜನರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯವಿಲ್ಲ. ಅಂದರೆ ನಿವೃತ್ತಿಯ ನಂತರದ ಬದುಕಿಗೆ ಜೀವನ ಪೂರ್ತಿ ಉಳಿಸಿದ ಒಂದಷ್ಟು ಹಣವನ್ನ ಬ್ಯಾಂಕಿನಲ್ಲಿಟ್ಟು ಅದರಲ್ಲಿ ಬರುವ ಬಡ್ಡಿಯಿಂದ ಬದುಕಬೇಕು. ಈಗ ಇಂತಹ ಜನರ ಬದುಕು ಹೀನಾಯವಾಗಿದೆ. ಸರಕಾರವೇನೋ ಬಡ್ಡಿ ದರವನ್ನ ಇಳಿಸಿರುವುದಕ್ಕೆ ಕಾರಣವನ್ನ ನೀಡುತ್ತದೆ.

ಹಣದುಬ್ಬರ ಅತ್ಯಂತ ಕಡಿಮೆಯಾಗಿದೆ ಹೀಗಾಗಿ ಬಡ್ಡಿ ದರವನ್ನ ಇಳಿಸುವುದು ಒಳ್ಳೆಯದು ಎನ್ನುವುದು ಅದರ ವಾದ. ಕಡಿಮೆಯಾದ ಬಡ್ಡಿ ದರದಿಂದ ಬಹಳಷ್ಟು ವ್ಯಾಪಾರ, ಅಭಿವೃದ್ಧಿ ಕಾರ್ಯಗಳು ನಡೆಯುತ್ತದೆ ಇದರ ಜೊತೆಗೆ ಕೆಲಸಗಳು ಸೃಷ್ಟಿಯಾಗುತ್ತವೆ ಎನ್ನುವುದು ಕೂಡ ಸರಕಾರದ ನಿಲುವು. ಇದನ್ನ ಪೂರ್ಣವಾಗಿ ಒಳಹೊಕ್ಕು ನೋಡಿದರೆ ತಿಳಿಯುವುದು, ಹಣದುಬ್ಬರ ಇಂಚೂ ಕಡಿಮೆಯಾಗಿಲ್ಲ. ಹಣದುಬ್ಬರವನ್ನ ದೇಶದ ಮಟ್ಟಿನ, ಸಾಂಸ್ಥಿಕ ಮಟ್ಟದಲ್ಲಿ ಪರಿಶೀಲಿಸಿ ಇಷ್ಟು ಎಂದು ಹೇಳುತ್ತಾರೆ. ಆದರೆ ನಿಜವಾಗಿ ಹಣ್ಣು ತರಕಾರಿ, ಅಕ್ಕಿ, ಬೇಳೆ ಗ್ರಾಹಕನಿಗೆ ಯಾವ ಬೆಲೆಯಲ್ಲಿ ಸಿಗುತ್ತಿದೆ ಎನ್ನುವುದನ್ನ ಮಾತ್ರ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಇದರ ಅರ್ಥ ಬಹಳ ಸರಳ ಜನ ಸಾಮಾನ್ಯನಿಗೆ ಸಿಗುತ್ತಿದ್ದ ಠೇವಣಿ ಮೇಲಿನ ಬಡ್ಡಿ ಹಣದಲ್ಲಿ ಕಡಿಮೆ ಆಯ್ತು. ಆದರೆ ಆತ ದಿನ ನಿತ್ಯದ ಪದಾರ್ಥಗಳ ಮೇಲೆ ನೀಡುತ್ತಿದ್ದ ಬೆಲೆಯಲ್ಲಿ ಯಾವುದೇ ಕಡಿತವಾಗಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣವೆಲ್ಲಿ ಹೋಯ್ತು? ಬಡ್ಡಿ ದರ ಕಡಿಮೆಯಾದಷ್ಟೂ ದೊಡ್ಡ ಮತ್ತು ಅತಿ ದೊಡ್ಡ ಸಂಸ್ಥೆಗಳು ಹೆಚ್ಚಿನ ಮಟ್ಟದಲ್ಲಿ ಸಾಲವನ್ನ ಸುಲಭವಾಗಿ ಪಡೆಯುತ್ತವೆ. ಅವರ ಭಾಷೆಯಲ್ಲಿ ಇದು ಚೀಪ್ ಡೆಟ್! ಇದರ ಎಲ್ಲಾ ಲಾಭವನ್ನ ಪಡೆಯುವುದು ಇಂತಹ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು.

ಇಂತಹ ಸಮಯದಲ್ಲಿ ಅದೂ ಕೋವಿಡ್ ವಿಶ್ವವನ್ನ ದಹಿಸುತ್ತಿರುವ ಸಮಯದಲ್ಲಿ ನಿವೃತ್ತರಾದವರು, ಅಥವಾ ಒಂದಷ್ಟು ಹಣವನ್ನ ಹೊಂದಿರುವವರು ಭದ್ರವಾಗಿ ಎಲ್ಲಿ ಹೂಡಿಕೆ ಮಾಡಬಹುದು ಎನ್ನವುದನ್ನ ನೋಡೋಣ. ಬ್ಯಾಂಕುಗಳಲ್ಲಿ ಠೇವಣಿ ಮೇಲಿನ ಬಡ್ಡಿ ದರ 6 ಪ್ರತಿಶತಕ್ಕಿಂತ ಕುಸಿದಿರುವ ಈ ಸಮಯದಲ್ಲಿ ಇವುಗಳ ಮೇಲಿನ ಹೂಡಿಕೆ ಎಲ್ಲಾ ದೃಷ್ಟಿಯಿಂದ ಸೇಫ್.

1. ಆರ್.ಬಿ.ಐ ಬಾಂಡ್ ಅಥವಾ ಗವರ್ನಮೆಂಟ್ ಆಫ್ ಇಂಡಿಯಾ ಬಾಂಡ್ (GOI-ಬಾಂಡ್):

  • ಇದರ ಮೇಲೆ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಅಂದರೆ ಇದರ ಮೇಲೆ ಕನಿಷ್ಟ ಮತ್ತು ಗರಿಷ್ಟ ಹಣದ ಹೂಡಿಕೆಯ ಮಿತಿಯಿಲ್ಲ. ಹೀಗಾಗಿ ಬಹಳಷ್ಟು ಹಣ ಇದ್ದು ಭದ್ರತೆ ಬಯಸುವರು ಇಲ್ಲಿ ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ ಇಲ್ಲಿನ ಹೂಡಿಕೆ ಮೇಲೆ 7. 75 ಪ್ರತಿಶತ ಬಡ್ಡಿಯನ್ನ ನೀಡಲಾಗುತ್ತದೆ. ಈ ಬಡ್ಡಿಯನ್ನ ವಾರ್ಷಿಕ ಲೆಕ್ಕದಲ್ಲಿ ನಿರ್ಧಾರ ಮಾಡಲಾಗುತ್ತದೆ. ಆದರೆ ಇದನ್ನ ಆರು ತಿಂಗಳಿಗೊಮ್ಮೆ ನೀಡುತ್ತಾರೆ. ಇಂತಹ ಹಣದ ಹೂಡಿಕೆಯನ್ನ 7 ವರ್ಷಗಳ ಕಾಲ ಕಡ್ಡಾಯವಾಗಿ ಇರಿಸಬೇಕಾಗುತ್ತದೆ. ಅಂದರೆ 60 ವರ್ಷದ  ಒಳಗಿರುವರಿಗೆ ಈ ಹಣವನ್ನ 7 ವರ್ಷಗಳ ಕಾಲ ತೆಗೆಯಲು ಬರುವುದಿಲ್ಲ. 60-7೦ ವಯಸ್ಸಿನ ನಡುವಿನಲ್ಲಿರುವ ಹೂಡಿಕೆದಾರರು 5 ವರ್ಷದ ನಂತರ ಈ ಹಣವನ್ನ ತೆಗೆಯಬಹುದು. 70-80 ವರ್ಷದಲ್ಲಿರುವ ಹೂಡಿಕೆದಾರರು 4 ವರ್ಷದ ನಂತರ ಹೂಡಿಕೆಯನ್ನ ಹಿಂಪಡೆಯುವ ಅವಕಾಶವಿದೆ.
  • ಇದನ್ನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆಯಬಹುದು. ಜೊತೆಗೆ ಐಸಿಐಸಿಐ, ಹೆಚ್ ಡಿ ಎಫ್ ಸಿ, ಎಕ್ಸಿಸ್ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳಲ್ಲಿ ಕೂಡ ಖರೀದಿಸಬಹುದು.
  • ಪೆನ್ಷನ್ ಇಲ್ಲದ ನಿವೃತ್ತರಿಗೆ ಮತ್ತು ಹೆಚ್ಚು ಹಣವಿದ್ದು ರಿಸ್ಕ್ ಬೇಡ ಎನ್ನುವಂತಹವರಿಗೆ ಈ ಸಮಯದಲ್ಲಿ ಇದು ಹೇಳಿ ಮಾಡಿಸಿದಂತಹ ಹೂಡಿಕೆ. ಇದು ಭಾರತ ಸರಕಾರದ ಬಾಂಡ್ ಆಗಿರುವುದರಿಂದ ಇದರಲ್ಲಿ ರಿಸ್ಕ್  ಎಕ್ಷ್ಪೋಷರ್ ಬಹಳ ಕಡಿಮೆ. ಜೊತೆಗೆ ಎಷ್ಟು ದೊಡ್ಡ ಮೊತ್ತವನ್ನಾದರೂ ಇಲ್ಲಿ ತೊಡಗಿಸಬಹುದು ಇದು ಬಹಳ ಆಕರ್ಷಕವಾಗಿದೆ. ಇದರಲ್ಲಿ ಎರಡು ನೂನ್ಯತೆಗಳು ಇವೆ. ಮೊದಲನೆಯದು 7 ವರ್ಷಗಳ ಕಾಲ ಲಾಕ್ ಇನ್ ಇದೆ. ಎರಡನೆಯದು ಬಡ್ಡಿ ನೀಡುವಾಗ ತೆರಿಗೆಯನ್ನ ಕತ್ತರಿಸಿ ನೀಡುತ್ತಾರೆ. ಅಂದರೆ TDS ಮಾಡಿ ಕೊಡುತ್ತಾರೆ.
  • ಗಮನಿಸಿ ನೋಡಿದರೆ ಎರಡೂ ನ್ಯೂನ್ಯತೆಗಳು ಕೂಡ ದೊಡ್ಡವಲ್ಲ. ಹೀಗಾಗಿ ಇದು ರಿಸ್ಕ್ ಬಯಸದ ಫಿಕ್ಸೆಡ್ ವರಮಾನ ಬಯಸುವ ಮಧ್ಯಮವರ್ಗದ ಜನರಿಗೆ ಬಹಳ ಸೂಕ್ತ.

2. ಗೋಲ್ಡ್ ಬಾಂಡ್ಸ್

  • ಗೋಲ್ಡ್ ಡೆಪಾಸಿಟ್ ಬ್ಯಾಂಕಿನಲಿದ್ದರೆ ಆಗ ನಾವು ಅಮೆರಿಕಾಗಿಂತ ಬಲಿಷ್ಠರಾಗಲು ಸಾಧ್ಯ. ಆದರೆ ನಮ್ಮ ದೇಶದಲ್ಲಿ ಆಗಿರುವುದೇನು ಗೊತ್ತೇ? ನಮ್ಮ ಬ್ಯಾಂಕ್ಗಳಲ್ಲಿ ಇರುವ ಚಿನ್ನ 560ಟನ್. ಆದರೆ ಬಿಡಿಯಾಗಿ ದೇಶದ ಜನರ ಬಳಿ ಇರುವ ಚಿನ್ನ 24ಸಾವಿರ ಟನ್!!. ಆಕಸ್ಮಾತ್ ಇದು ಉಲ್ಟಾ ಆಗಿದ್ದರೆ!! ಅಂದರೆ ಬ್ಯಾಂಕ್ಗಳ ಬಳಿ 24 ಸಾವಿರ ಟನ್ ಚಿನ್ನದ ಡೆಪಾಸಿಟ್ ಇದಿದ್ದರೆ ನಮ್ಮ ಆರ್ಥಿಕ ಚಿತ್ರಣವೇ ಬೇರೆಯಾಗಿರುತ್ತಿತ್ತು. ಕೇವಲ ನಮ್ಮ ಮಾನಸಿಕ ಧೈರ್ಯಕ್ಕೆ ಚಿನ್ನ ಕೊಳ್ಳುವುದು ಬಿಡಬೇಕು. ಹೆಚ್ಚೆಚ್ಚು ಗೋಲ್ಡ್ ಬಾಂಡ್ ಖರೀದಿ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ.
  • ಮುಖ್ಯವಾಗಿ ಇದು ಷೇರು ಮಾರುಕಟ್ಟೆಯಲ್ಲಿ ‘ಟ್ರೇಡೆಬಲ್’ ಅಂದರೆ ನಿಮಗೆ ಬೇಡ ಅನಿಸಿದರೆ ಇದನ್ನ ಷೇರು ಮಾರಿದಂತೆ ಡಿಮ್ಯಾಟ್ ಖಾತೆಯ ಮೂಲಕ ಮಾರಿಬಿಡಬಹುದು. ನಿಮ್ಮ ಬಾಂಡ್ ವಿತರಣೆಯಾದ ದಿನಾಂಕದಿಂದ ಹದಿನೈದು ದಿನದ ನಂತರ ಇದನ್ನ ನೀವು ಷೇರು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಬಹುದು.
  • ಮಾರಲು ಇಚ್ಛಿಸದೆ ಇರುವ ಹೂಡಿಕೆದಾರ ಅಕಸ್ಮಾತ್ ಹಣದ ಅವಶ್ಯಕತೆ ಬಿದ್ದರೆ ಇದನ್ನ ಅಡವಿಟ್ಟು ಸಾಲ ಪಡೆಯುವ ಅವಕಾಶ ಕೂಡ ಇದೆ. 
  • ಇದು ಪೇಪರ್ ನಲ್ಲಿ ಇರುವ ಚಿನ್ನ ಹಾಗಾಗಿ ಸಾಂಪ್ರದಾಯಿಕವಾಗಿ ಚಿನ್ನದ ಖರೀದಿಯಲ್ಲಿ ಆಗುವ ಚಿನ್ನದ ಸುರಕ್ಷತೆಯ ಚಿಂತೆ ಇರುವುದಿಲ್ಲ.
  • ಹೂಡಿಕೆದಾರ ಹೂಡಿಕೆಯ ಪೂರ್ಣಾವಧಿ 8 ವರ್ಷ ಪೂರೈಸಿದರೆ ‘ಕ್ಯಾಪಿಟಲ್ ಗೈನ್‘ ಟ್ಯಾಕ್ಸ್ ನಿಂದ ವಿನಾಯತಿ ಪಡೆಯಬಹುದು. ಐದು ವರ್ಷದ ನಂತರ ಹೂಡಿಕೆಯನ್ನ ಹಿಂತೆಗೆಯುವ ಅವಕಾಶ ಕೂಡ ಇದೆ.
  • ಸಾಂಪ್ರದಾಯಿಕ ಚಿನ್ನದ ಮೇಲಿನ ಹೂಡಿಕೆ ಬಡ್ಡಿ ನೀಡುವುದಿಲ್ಲ ಮಾರುವ ಸಮಯದಲ್ಲಿ ಹೆಚ್ಚಿರುವ ಬೆಲೆ ಮಾತ್ರವೇ ಇಲ್ಲಿನ ಲಾಭ. ಗೋಲ್ಡ್ ಬಾಂಡ್ ಮೂಲ ಹೂಡಿಕೆಯ ಮೇಲೆ 2.5 ಪ್ರತಿಶತ ಬಡ್ಡಿ ಪ್ರತಿ ಆರು ತಿಂಗಳಿಗೆ ಒಮ್ಮೆ ನೀಡುತ್ತದೆ. 1 ಗ್ರಾಮ್ ನಿಂದ 4 ಕೇಜಿ ತನಕ ಒಬ್ಬ ವ್ಯಕ್ತಿ ಹೂಡಿಕೆ ಮಾಡಬಹುದು.
  • ಪೂರ್ಣ ಹೂಡಿಕೆ ಅವಧಿ ಪೂರೈಸಿದ್ದೆ ಆದರೆ ಹೂಡಿಕೆಯ ಮೇಲೆ 20 ರಿಂದ 25 ಪ್ರತಿಶತ ಲಾಭಾಂಶ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.
  • ಸಾಂಪ್ರದಾಯಿಕ ಫಿಸಿಕಲ್ ಚಿನ್ನಕ್ಕಿಂತ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಸುರಕ್ಷಿತ. ಸರಕಾರದ ಅಭಯ ಬೇರೆ ಇದೆ. ಹೀಗಾಗಿ ಭೌತಿಕ ಚಿನ್ನದ ಮೇಲಿನ ಹೂಡಿಕೆಗಿಂತ ಬಾಂಡ್ ಮೇಲಿನ ಹೂಡಿಕೆ ಎಲ್ಲಾ ತರದಲ್ಲೂ ಸೂಕ್ತ. ಶುಭ ಸಮಾರಂಭವಿದ್ದು ಆಭರಣ ಮಾಡಿಸಿಕೊಳ್ಳುವ ತುರ್ತು ಇಲ್ಲದಿದ್ದರೆ ಇದು ಖಂಡಿತ ಲಾಭದಾಯಕ. ಹಾಗೊಮ್ಮೆ ಹೆಚ್ಚಿನ ಲಾಭ ತರುವಲ್ಲಿ ವಿಫಲವಾದರೂ ಕನಿಷ್ಟ ಹಣದುಬ್ಬರದ ಜೊತೆ ಜೊತೆಯಾಗಿ ನಡೆಯಲು ಚಿನ್ನದ ಮೇಲಿನ ಹೂಡಿಕೆ ಎಲ್ಲಾ ತರಹದಲ್ಲೂ ಸೂಕ್ತ.

3.ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS)

  • 60 ವರ್ಷ ಮೇಲ್ಪಟ್ಟ ನಾಗರಿಕರು ಹೂಡಿಕೆಗೆ ಅರ್ಹರು.
  • ಸ್ವಯಂ ನಿವೃತ್ತಿ ತೆಗೆದುಕೊಂಡ 55-60 ವರ್ಷದ ಒಳಗಿನ ನಾಗರಿಕರೂ ಕೂಡ ಹೂಡಿಕೆ ಮಾಡಬಹುದು. ನಿವೃತ್ತಿ ಹಣ ಪಡೆದ ಒಂದು ತಿಂಗಳಲ್ಲಿ ಹೂಡಿಕೆ ಮಾಡಬೇಕು.
  • ಗರಿಷ್ಟ ಮಿತಿ 15 ಲಕ್ಷ ರೂಪಾಯಿ ಹಣ ಮಾತ್ರ.
  • ಬಡ್ಡಿ ದರ 7.4 ಪ್ರತಿಶತವಿದ್ದು. ಈ ಹೂಡಿಕೆ ಯಾವುದೇ ರೀತಿಯ ರಿಸ್ಕ್ ಹೊಂದಿಲ್ಲ. ಇದು ಭಾರತದ ಕೇಂದ್ರ ಸರಕಾರದ ಅಭಯವನ್ನ ಹೊಂದಿದೆ.
  • 5 ವರ್ಷಗಳ ಲಾಕ್ ಇನ್ ಇರುತ್ತದೆ. ಆಕಸ್ಮಾತ್ ಹೂಡಿಕೆದಾರನ ಮರಣವಾದರೆ ಯಾವುದೇ ರೀತಿಯ ಹಣವನ್ನ ಕಡಿತಗೊಳಿಸದೆ ನಾಮಿನಿಗೆ ಹಣವನ್ನ ನೀಡಲಾಗುವುದು.
  • ಇದನ್ನ ಕೂಡ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಖರೀದಿಸಬಹುದು.

ಮೇಲಿನ ಮೂರು ಹೂಡಿಕೆಗಳಲ್ಲಿ ಅಪಾಯ ಬಹಳ ಕಡಿಮೆ ಇದ್ದು, ಭದ್ರತೆ ಹೆಚ್ಚಾಗಿರುತ್ತದೆ. ನಿವೃತ್ತರಲ್ಲದೆ ಅಪಾಯವನ್ನ ಬಯಸದ ಮತ್ತು ಭದ್ರತೆಯಲ್ಲಿ ಹೆಚ್ಚಿನ ನಂಬಿಕೆ ಇಡುವರು ಕೂಡ ಇಲ್ಲಿ ಹೂಡಿಕೆ ಮಾಡಬಹುದು.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com