ಹೊಸ ಜಾಗತಿಕ ಹಣದ ಸೃಷ್ಟಿಗೆ ಇದು ಸುಸಮಯ!

ಹಣಕ್ಲಾಸು

- ರಂಗಸ್ವಾಮಿ ಮೂಕನಹಳ್ಳಿ

Published: 28th May 2020 12:00 AM  |   Last Updated: 27th May 2020 10:07 PM   |  A+A-


Hanaclasu: Its right time to create new global currency

ಹೊಸ ಜಾಗತಿಕ ಹಣದ ಸೃಷ್ಟಿಗೆ ಇದು ಸುಸಮಯ!

Posted By : Srinivas Rao BV
Source : Online Desk

ಒಬ್ಬ ಕನ್ನಡಿಗ ಮತ್ತು ಒಬ್ಬ ಮಲೆಯಾಳಿ ಮಾತಿಗೆ ಕೂತರೆ ಕನ್ನಡಬಾರದ ಮಲೆಯಾಳಿ, ಮಲೆಯಾಳಂ ಬಾರದ ಕನ್ನಡಿಗ ಸಂವಹನಕ್ಕೆ ಏನು ಮಾಡಬೇಕು? ಇಂಗ್ಲಿಷ್ ಭಾಷೆಯನ್ನ ಸಾಮಾನ್ಯ ಸಂವಹನ ಮಾಧ್ಯಮವಾಗಿ ಬಳಸಬೇಕು ಅಲ್ಲವೇ? ಹಾಗೆಯೇ ಭಾರತದ ರೂಪಾಯಿಯ ಮೌಲ್ಯ ಜಗತ್ತಿನ ಇತರ ದೇಶಗಳ ಕರೆನ್ಸಿ ಮೌಲ್ಯವನ್ನ ನಿಖರವಾಗಿ ಅಳೆಯಲು ನಂಬಿಕೆಯ ಕೊರತೆ ಹೆಚ್ಚಾಗಿದೆ. ಹೀಗಾಗಿ ಅಮೆರಿಕನ್ ಡಾಲರ್ ನ್ನು ಸಾಮಾನ್ಯ ವಿನಿಮಯ ಕರೆನ್ಸಿಯಾಗಿ ಜಗತ್ತು ಬಳಸುತ್ತಿದೆ. ಹಾಗೆ ನೋಡಲು ಹೋದರೆ ಅಮೆರಿಕನ್ ಡಾಲರ್ ಗೆ ಮೌಲ್ಯವೇ ಇಲ್ಲ! 

ಎರಡನೇ ಮಹಾಯುದ್ಧದ ನಂತರ ಚಿನ್ನವನ್ನ ಮೂಲವಾಗಿರಿಸಿ ಹಣವನ್ನ ಮುದ್ರಿಸುವ ನೀತಿಗೆ ತಿಲಾಂಜಲಿ ಇಡಲಾಯಿತು. ಅಂದಿನಿಂದ ಅಮೆರಿಕನ್ ಡಾಲರ್ ಕೇವಲ ಪೇಪರ್ ಅಷ್ಟೇ. ವಸ್ತು ಸ್ಥಿತಿ ಹೀಗಿದ್ದೂ ಅಮೆರಿಕನ್ ಡಾಲರಿಗೇಕೆ ಇಷ್ಟೊಂದು ಬೆಲೆ? ಇದನ್ನ ನಾವೇಕೆ ಸಾಮಾನ್ಯ ವಿನಿಮಯ ಮಾಧ್ಯಮವಾಗಿ ಬಳಸುತ್ತೇವೆ? ಇದಕ್ಕೆ ಉತ್ತರ ಬಹಳ ಸುಲಭ. ನಾನು ನಂಬಿದೆ ಅಥವಾ ಡಾಲರ್ ಬಳಸುತ್ತೇನೆ ಎಂದು ಪಕ್ಕದವನು, ಪಕ್ಕದವನು ನಂಬಿದ ಎಂದು ಎದುರು ಮನೆಯವನು, ಎದುರು ಮನೆಯವನು ನಂಬಿದ ಎಂದು ಹಿಂದಿನ ಮನೆಯವನು ಹೀಗೆ ಜಗತ್ತಿನ ದೇಶಗಳ ಸಾಮೂಹಿಕ ನಂಬಿಕೆಯಷ್ಟೇ ಡಾಲರ್ ನ ಬಂಡವಾಳ! ಈ ನಂಬಿಕೆ ಕಳಚಿದ ಮರುಗಳಿಗೆ ಡಾಲರ್ ಕೇವಲ ಕಾಗದದ ತುಂಡಷ್ಟೇ. ಇವತ್ತೇನಾಗಿದೆ? ಚೀನಾ ತನ್ನ ಹಣವನ್ನ ವಿಶ್ವದ ಹಣವನ್ನಾಗಿ ಮಾಡಲು ಹವಣಿಸುತ್ತಿದೆ. ಇದೆ ಕಾರಣಕ್ಕೆ e-RMB ಯನ್ನ ಸೃಷ್ಟಿಸಿದೆ. ಮುಂದಿನ ಒಂದು ವರ್ಷದಲ್ಲಿ ಇದು ಜಾಗತಿಕ ಮಟ್ಟದಲ್ಲಿ ಕೂಡ ಬಳಕೆಯಾಗಲು ಶುರುವಾಗಬಹುದು.

ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ತನ್ನ ಬಳಿ ಯಾವುದೇ ದೇಶದ ಕರೆನ್ಸಿ ನೋಟು, ಟ್ರೆಷರಿ ಬಿಲ್, ಬ್ಯಾಂಕ್ ಡೆಪೋಸಿಟ್ಸ್, ಬಾಂಡ್ಸ್ ಮತ್ತು ಗೌರ್ನಮೆಂಟ್ ಸೆಕ್ಯುರಿಟೀಸ್ ಹೊಂದಿದ್ದು ಇವುಗಳ ಒಟ್ಟು ಮೌಲ್ಯವನ್ನ ತನ್ನ ವಿದೇಶಿ ವಿನಿಮಯ ಎಂದು ಕರೆದುಕೊಳ್ಳುತ್ತದೆ. ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣ ಮತ್ತು ಚಿನ್ನದ ರೂಪದಲ್ಲಿ ಇರುವ ಹೂಡಿಕೆಯನ್ನ ಕೂಡ ವಿದೇಶಿ ವಿನಿಮಯ ಮೀಸಲು ಎಂದು ಪರಿಗಣಿಸಲಾಗುತ್ತದೆ. ಇದನ್ನ ಇನ್ನಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ.

ಭಾರತೀಯ ರಿಸರ್ವ್ ಬ್ಯಾಂಕ್ ಅಮೇರಿಕಾ ಡಾಲರ್ 100 ಹೊಂದಿದ್ದು, 1೦೦ ಯುರೋ ಕರೆನ್ಸಿ, 5೦ ಕೆನಡಾ ದೇಶದ ಟ್ರಶರಿ ಬಿಲ್, 5೦ ಚಿನ್ನದ ರೂಪದಲ್ಲಿ ಮತ್ತು ಉಳಿದ ಮೊತ್ತ ಹಲವಾರು ದೇಶದ ಕರೆನ್ಸಿ ಹೊಂದಿದ್ದರೆ ಇವುಗಳೆಲ್ಲವ ಒಟ್ಟು ಮೊತ್ತವನ್ನ ಫಾರಿನ್ ಎಕ್ಸ್ಚೇಂಜ್ ರಿಸರ್ವ್ ಎಂದು ಕರೆಯಲಾಗುತ್ತದೆ.

ಜಗತ್ತಿನ ಅರ್ಧಕ್ಕೂ ಹೆಚ್ಚು ಫಾರಿನ್ ಎಕ್ಸ್ಚೇಂಜ್ ಇರುವುದು ಅಮೆರಿಕನ್ ಡಾಲರ್ ನಲ್ಲಿ. ಉಳಿದ ಅರ್ಧ ಯುರೋ, ಬ್ರಿಟಿಷ್ ಪೌಂಡ್, ಚೈನೀಸ್ ಹಣ, ಜಪಾನೀಸ್ ಯೆನ್ ಗಳಲ್ಲಿ ವಿಭಜನೆಯಾಗಿದೆ.

ಫಾರಿನ್ ಎಕ್ಸ್ಚೇಂಜ್ ರಿಸರ್ವ್ ನ ಅವಶ್ಯಕತೆ ಏನು? ಇದು ಏಕೆ ಬೇಕು?

ಜಗತ್ತಿನ ವಹಿವಾಟು ನಡೆಯುತ್ತಿರುವುದು ನಂಬಿಕೆಯ ಆಧಾರದ ಮೇಲೆ ಆ ನಂಬಿಕೆಯನ್ನ ಹೆಚ್ಚಿಸಲು ಇದು ಬೇಕು. ವಿದೇಶಿ ವಿನಿಮಯ ಹೊಂದಲು ಬಹುಮುಖ್ಯ ಕಾರಣ ಅಕಸ್ಮಾತ್ ಯಾವುದೇ ದೇಶದ ಕರೆನ್ಸಿ ಅಪಮೌಲ್ಯಗೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಆ ಹಣ ಬೇಡಿಕೆ ಕಳೆದುಕೊಂಡೋ ಅಥವಾ ಚಾಲನೆಯನ್ನ ಕಳೆದುಕೊಂಡರೆ, ಇಲ್ಲಿ ನೋಡಿ ಹೆದರುವುದು ಬೇಡ ನನ್ನ ಬಳಿ ಬೇರೆ ಹಣವೂ ಉಂಟು ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಇದು ಬೇಕು. ಜಗತ್ತಿನ ಇತರ ದೇಶಗಳ ಜೊತೆಗೆ ನಾವು ಮಾಡುವ ಎಲ್ಲಾ ವ್ಯವಹಾರಗಳು ನಡೆಯುವುದು ಮುಕ್ಕಾಲು ಪಾಲು ಅಮೇರಿಕನ್ ಡಾಲರ್ ನಲ್ಲಿ. ಬೇರೆ ದೇಶಗಳು ನಮ್ಮ ಬಳಿ ಅಮೇರಿಕನ್ ಡಾಲರ್ ರಿಸರ್ವ್ ನಲ್ಲಿದೆ ಎಂದರೆ ವ್ಯಾಪಾರ ಸುಲುಭವಾಗುತ್ತದೆ. ಭಾರತೀಯ ರೂಪಾಯಿ ಅದೆಷ್ಟೇ ಸಾವಿರ ಕೋಟಿ ಇದೆ ಎಂದರೂ ಬಾರದ ನಂಬಿಕೆ ಈ ವಿದೇಶಿ ವಿನಿಮಯ ನೀಡುತ್ತದೆ.

ಉದಾಹರಣೆ ನೋಡಿ ನಾವು ಸೌದಿಯಿಂದ ಪೆಟ್ರೋಲ್ ಕೊಂಡರೆ ಅವರಿಗೆ ಹಣ ನೀಡುವುದು ಡಾಲರ್ ನಲ್ಲಿ. ಹೀಗೆ ಜಗತ್ತಿನ ಯಾವುದೋ ಒಂದು ದೇಶದಿಂದ ಇನ್ನೇನೋ ಕೊಂಡರೆ ಅವರಿಗೆ ಬದಲಿಗೆ ಹಣ ಸಂದಾಯವಾಗುವುದು ಡಾಲರ್ ನಲ್ಲಿ ಹೀಗಾಗಿ ವಿದೇಶಿ ವಿನಿಮಯ ಹಣ ಹೊಂದಿರುವುದು ಅತ್ಯವಶ್ಯಕ.

ಜಗತ್ತಿನ ಎಲ್ಲಾ ದೇಶಗಳು ಇಂದು ವಿದೇಶಿ ವಿನಿಮಯ ಹೊಂದಿರಲೇಬೇಕು. ಇದು ಅಲಿಖಿತ ನಿಯಮ. ಅದು ಸರಿ ಆದರೆ ಎಷ್ಟು ಹಣವನ್ನ ಫಾರಿನ್ ಎಕ್ಸ್ಚೇಂಜ್ ನಲ್ಲಿ ಹೊಂದಿರಬೇಕು? ಎನ್ನುವ ಪ್ರಶ್ನೆಗೆ ಈ ವಿಷಯದಲ್ಲಿ ತಜ್ಞರು ಎನಿಸಿಕೊಂಡವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ನಿಖರವಾಗಿ ಫಾರ್ಮುಲಾ ಹಾಕಿ ಇಷ್ಟು ಹಣ ಫಾರಿನ್ ಎಕ್ಸ್ಚೇಂಜ್ ನಲ್ಲಿರಲಿ ಎಂದು ಯಾರೂ ಹೇಳಲು ಬರುವುದಿಲ್ಲ. ಆಯಾ ದೇಶದ ಅವಶ್ಯಕತೆಗೆ ಅನುಗುಣವಾಗಿ ಇದನ್ನ ನಿರ್ಧರಿಸಬೇಕು.

ಆದರೆ ವಿದೇಶಿ ವಿನಿಮಯ ಹಣ ಹೆಚ್ಚಿದಷ್ಟು ಮಾರುಕಟ್ಟೆಯ ಮೇಲೆ ಹಿಡಿತ ಹೆಚ್ಚಾಗುತ್ತೆ. ಯಾವ ದೇಶದ ಹಣವನ್ನ ನೀವು ರಿಸರ್ವ್ ಎಂದು ಕೊಂಡಿರುತ್ತೀರೋ ಆ ದೇಶದ ಹಣವನ್ನ ನೀವೇ ಕಂಟ್ರೋಲ್ ಮಾಡುವ ಸ್ಥಿತಿಗೆ ತಲುಪಬಹುದು. ಉದಾಹರಣೆ ನೋಡಿ ಚೀನಾ ದೇಶ ಜಗತ್ತಿನಲ್ಲಿ ಅತ್ಯಂತ ಹೆಚ್ಚು ವಿದೇಶಿ ವಿನಿಮಯ ಹೊಂದಿದ ದೇಶಗಳಲ್ಲಿ ಅಬಾಧಿತವಾಗಿ ಮೊದಲ ಸ್ಥಾನದಲ್ಲಿದೆ. ಒಟ್ಟು ಅಮೇರಿಕನ್ ಡಾಲರ್ ಚಲಾವಣೆಯಲ್ಲಿರುವುದು ನೂರು ಎಂದುಕೊಳ್ಳಿ ಚೀನಾ ಇಪ್ಪತ್ತೋ ಅಥವಾ ಮೂವತ್ತೋ ತನ್ನ ಕೈಯಲ್ಲಿ ವಿನಿಮಯದ ಹೆಸರಲ್ಲಿ ಕೊಂಡರೆ ಅಷ್ಟರ ಮಟ್ಟಿಗೆ ಅಮೇರಿಕಾದ ಹಣಕಾಸು ನಿರ್ಧಾರವನ್ನೂ ಕಂಟ್ರೋಲ್ ಮಾಡಬಹುದು. ಹಾಗೆಂದು ಚೀನಾ ಬೀಗುವ ಹಾಗೂ ಇಲ್ಲ ಏಕೆಂದರೆ ಅಮೇರಿಕಾ ತನ್ನ ಹಣವನ್ನ ಅಪಮೌಲ್ಯಗೊಳಿಸಿದರೆ ಚೀನಾ ಅಷ್ಟು ಹಣವನ್ನ ಸುಮ್ಮನೆ ಕಳೆದುಕೊಳ್ಳುತ್ತದೆ. ಅದಕ್ಕೆ ತಜ್ಞರು ಹೇಳುವುದು ಅವಶ್ಯಕತೆ ಮೀರಿ ಸಂಗ್ರಹಿಸಿದ ರಿಸರ್ವ್ ಹಣ ಕೂಡ ಒಳ್ಳೆಯದಲ್ಲ ಎಂದು.

ಇಂತಹ ಡಾಲರ್ ನ ಕಟ್ಟಿಹಾಕಲು ಯುರೋ ಹಣವನ್ನ ಸೃಷ್ಟಿಸಲಾಯಿತು. 2001 ರಿಂದ ಚಲಾವಣೆಯಲ್ಲಿರುವ ಯುರೋ ಡಾಲರ್ ನ ಸ್ಥಾನವನ್ನ ಆಕ್ರಮಿಸಲು ಮಾತ್ರ ಆಗಲಿಲ್ಲ. ಕಾಲದಿಂದ ಕಾಲಕ್ಕೆ ಚೀನಾ ದೇಶ ತನ್ನ ಕರೆನ್ಸಿಯನ್ನ ಜಗತ್ತಿನ ಕರೆನ್ಸಿಯಾಗಿ ಮಾಡಬೇಕು ಎನ್ನುವ ಮಹದಾಸೆ ಹೊಂದಿ ಅದಕ್ಕೆ ತಕ್ಕಂತೆ ಹಲವು ಕಸರತ್ತು ಮಾಡುತ್ತಲೇ ಇರುತ್ತದೆ. ಇಂತಹ ತನ್ನ ಕಸರತ್ತಿನಲ್ಲಿ ಇದೀಗ ಚೀನಾ ಮೇಲುಗೈ ಸಾಧಿಸುವ ಲಕ್ಷಣಗಳು ಗೋಚರಿಸುತ್ತಿದೆ. ತನ್ನ ಮಟ್ಟಿಗೆ ಅದೇನು ಮಾಡಬೇಕು ಅದನ್ನ ಮಾಡುತ್ತಿದೆ. ಆದರೆ ನೆನಪಿರಲಿ ವಿಶ್ವ ಹಣವಾಗಲು ಬೇಕಾಗಿರುವುದು ನಂಬಿಕೆ. ಚೀನಾದ ಮೇಲೆ ವಿಶ್ವದ ಇತರ ರಾಷ್ಟ್ರಗಳು ನಂಬಿಕೆಯನ್ನ ಕಳೆದುಕೊಂಡಿರುವ ಈ ಸಮಯದಲ್ಲಿ ಚೀನಾದ ಈ ಮಹತ್ವಾಕಾಂಕ್ಷೆ ಎಷ್ಟರ ಮಟ್ಟಿಗೆ ಫಲಕಾರಿಯಾಗಬಲ್ಲದು? ಎನ್ನುವುದು ಸದ್ಯದ ಪ್ರಶ್ನೆ.

ಯಾವುದೇ ಒಂದು ಹಣ ವಿಶ್ವದ ಹಣವಾದರೆ ಅದು ಒಳ್ಳೆಯದಲ್ಲ.

ಗಮನಿಸಿ ಅದು ಡಾಲರ್ ಇರಬಹುದು, ಯುರೋ ಅಥವಾ e-RMB ಕರೆನ್ಸಿ ಯಾವುದೇ ಇರಲಿ ಅದು ಯಾವುದೇ ಒಂದು ಹಣದ ಪಾರುಪತ್ಯ ಒಳ್ಳೆಯದಲ್ಲ. ಏಕೆಂದರೆ ಆಯಾ ದೇಶದವರು ತಮ್ಮ ಅಧಿಕಾರವನ್ನ ಬಳಸಿಕೊಂಡು ಇತರ ದೇಶಗಳ ಮೇಲಿನ ವ್ಯಾಪಾರ-ವಹಿವಾಟುಗಳ ಮೇಲೆ ಅಧಿಪತ್ಯವನ್ನ ಸಾಧಿಸಲು ಬಳಸಿಕೊಳ್ಳುತ್ತಾರೆ. ಹೀಗಾಗಿ ಯಾವುದೇ ಒಂದು ದೇಶದ ಹಣವನ್ನ ವಿಶ್ವ ಹಣವನ್ನಾಗಿ ಬಳಸಿಕೊಳ್ಳುವುದು ಅಥವಾ ಒಪ್ಪಿಕೊಳ್ಳುವುದು ತಪ್ಪು.

ಈ ಸಮಯ ವಿಶ್ವ ಹಣವನ್ನ ಸೃಷ್ಟಿಸಿಕೊಳ್ಳಲು ಇರುವ ಒಳ್ಳೆಯ ಅವಕಾಶ.

ಗಮನಿಸಿ, ಹಿಂದೆ ಜಗತ್ತಿನಲ್ಲಿ ಯಾವುದು ಸಾಧ್ಯವಿಲ್ಲ ಎಂದು ಕೊಳ್ಳುತ್ತಿದ್ದೆವು ಅದೇಲ್ಲಾ ಈಗ ಸುಲಭ ಸಾಧ್ಯ. ಈಗಿರುವ ಪರಿಸ್ಥಿತಿಯನ್ನ ಬಳಸಿಕೊಂಡು ಒಂದು ಹೊಸ ವಿಶ್ವ ಹಣವನ್ನ ಸೃಷ್ಟಿಸಿಕೊಳ್ಳುವ ಅವಕಾಶ ನಮ್ಮ ಮುಂದಿದೆ. ಜಗತ್ತಿನ ಹತ್ತಾರು ದೇಶಗಳು ಒಕ್ಕೂಟ ರಚಿಸಿ ಇಂತಹ ಒಂದು ಹಣವನ್ನ ಸೃಷ್ಟಿಸಿ, ಜಗತ್ತಿನ ಇತರ ದೇಶದ ಹಣದ ಜೊತೆಗೆ ವಿನಿಮಯ ದರವನ್ನ ನಿಗದಿ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಯಾವುದೇ ಒಂದು ದೇಶದ ಅಧೀನದಲ್ಲಿ ವಿಶ್ವ ಹಣ ಇರುವುದಿಲ್ಲ. ಇದರಿಂದ ಪ್ರಾಥಮಿಕವಾಗಿ ಜಗತ್ತಿಗೆ ಎರಡು ಅನುಕೂಲವಾಗಲಿದೆ. ಮೊದಲನೆಯದಾಗಿ ಚೀನಾದ ಹಣವನ್ನ ನಾವು ಒಪ್ಪಿಕೊಳ್ಳುವ ಪ್ರಮೇಯ ಬರುವುದಿಲ್ಲ. ಎರಡನೆಯದಾಗಿ ಅಮೇರಿಕಾ ಡಾಲರ್ ಇಷ್ಟೆಲ್ಲಾ ಸಂಕಷ್ಟದ ನಡುವೆ ತನ್ನ ಮೌಲ್ಯವನ್ನ ಹಾಗೆ ಉಳಿಸಿಕೊಳ್ಳುತ್ತಿದೆ. ಇದಾಗುತ್ತಿರುವುದು ಅದಕ್ಕಿರುವ ಮಾರುಕಟ್ಟೆ ಹಿಡಿತದಿಂದ, ಇಂತಹ ಮಾರುಕಟ್ಟೆಯ ಮೇಲಿನ ಏಕಸ್ವಾಮ್ಯತೆ ಕೂಡ ಇದರಿಂದ ತಪ್ಪುತ್ತದೆ.

ಕೊನೆ ಮಾತು: ಇಂತಹ ಒಂದು ಸಾಹಸವನ್ನ ಈಗ ಮಾಡಿದರೆ ಮಾತ್ರ ಅದನ್ನ ಕಾರ್ಯರೂಪಕ್ಕೆ ತರಲು ಸಾಧ್ಯ. ಇಲ್ಲದಿದ್ದರೆ ಇಂದು ಡಾಲರ್ ಇರುವ ಜಾಗದಲ್ಲಿ ಮತ್ತೊಂದು ಹಣ ಜಾಗತಿಕ ಹಣವಾಗುತ್ತದೆ. ಅದರೊಂದಿಗೆ ಇರುವ ಎಲ್ಲಾ ಅನಾನುಕೂಲಗಳು ಕೂಡ ಮುಂದುವರೆಯುತ್ತದೆ. ಮತ್ತೆ ಬದಲಾವಣೆಗೆ ಅವಕಾಶ ಸಿಗುವುದು ಮತ್ತೊಮ್ಮೆ ಕೋವಿಡ್ ನಂತಹ ಮಹಾಮಾರಿ ಬಂದರೆ ಮಾತ್ರ. ಇಂತಹ ಸ್ಥಿತಿಯನ್ನ ಯಾರೂ ಬಯಸುವುದಿಲ್ಲ. ಹೀಗಾಗಿ ಇಂದಿನ ಸ್ಥಿತಿಯನ್ನ ನಮ್ಮ ವಿತ್ತ ಪ್ರಪಂಚ ಸರಿಯಾಗಿ ಬಳಸಿಕೊಳ್ಳಬೇಕಿದೆ.


- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Stay up to date on all the latest ಅಂಕಣಗಳು news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp