ಲಕ್ಷ್ಮಿ ವಿಲಾಸ್ ಬ್ಯಾಂಕಿನ ಕಥೆ-ವ್ಯಥೆ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಲಕ್ಷ್ಮಿ ವಿಲಾಸ್ ಬ್ಯಾಂಕ್
ಲಕ್ಷ್ಮಿ ವಿಲಾಸ್ ಬ್ಯಾಂಕ್

ಇತ್ತೀಚಿಗೆ ಹಲವಾರು ಬ್ಯಾಂಕುಗಳು ಒಂದರ ಹಿಂದೆ ಒಂದು ದಿವಾಳಿ ಏಳುತ್ತಿವೆ. ಇಂತಹ ವಿಷಯವನ್ನ ಕೇಳಿದ  ಮರು ಗಳಿಗೆಯಲ್ಲಿ ನಿಮ್ಮ ಬ್ಯಾಂಕಿನಲ್ಲಿರುವ ಠೇವಣಿ ಹಣವನ್ನ ಹೊರತೆಗೆಯಲು ಹವಣಿಸುತ್ತೀರಿ ಖಂಡಿತ.

ಬ್ಯಾಂಕಿಂಗ್ ವ್ಯವಸ್ಥೆ ನಿಂತಿರುವುದೇ ನಂಬಿಕೆಯ ಆಧಾರದ ಮೇಲೆ. ಈ ಪಟ್ಟಿಯಲ್ಲಿ ಹೊಸದಾಗಿ ಸದ್ದು ಮಾಡುತ್ತಿರುವುದು ಲಕ್ಷ್ಮಿ ವಿಲಾಸ್ ಬ್ಯಾಂಕ್. ಲಕ್ಷ್ಮಿ ವಿಲಾಸ್ ಬ್ಯಾಂಕ್ ನ್ನು ತನ್ನ ತಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ಇಂಡಿಯಾ ಬುಲ್ಸ್ ಅವರ ಆಫರ್ ಅನ್ನು ಆರ್ಬಿಐ ನಿರಾಕರಿಸಿತು. ಜೊತೆಗೆ ಕ್ಲಿಸ್ ಕ್ಯಾಪಿಟಲ್ ಅವರ ಆಫರ್ ವ್ಯಾಲ್ಯೂವೇಶನ್ ನಲ್ಲಿ ಸರಿ ಬರದೇ ಅದು ಕೂಡ ತಪ್ಪಿ ಹೋಯಿತು.

ಇದೀಗ ಸಿಂಗಪೂರ್ ಮೂಲದ ಡಿಬಿಎಸ್ ಬ್ಯಾಂಕ್ ನೊಂದಿಗೆ ವಿಲೀನವಾಗಿಸುವ ಮಾತುಕತೆ ನಡೆಯುತ್ತಿದೆ. ಆರ್ ಬಿ ಐ ಹೇಳಿರುವ ಎಲ್ಲಾ ಷರತ್ತುಗಳನ್ನ ಮೂವತ್ತು ದಿನದಲ್ಲಿ ಪೂರೈಸುವ ಹೊಣೆಗಾರಿಕೆ ಈಗ ಡಿಬಿಎಸ್ ಬ್ಯಾಂಕಿನ ಮೇಲಿದೆ. ಇದೇನಾದರೂ ಆದರೆ ವಿದೇಶಿ ಬ್ಯಾಂಕ್ ಭಾರತದಲ್ಲಿ ಈ ರೀತಿಯಲ್ಲಿ ತನ್ನ ಕಾಲನ್ನ ಊರಲು ಹೊಸ ರಹದಾರಿ ಸಿಕ್ಕಹಾಗೆ ಆಗುತ್ತದೆ.

94 ವರ್ಷ ಹಳೆಯ ಲಕ್ಷ್ಮಿ ವಿಲಾಸ್ ಬ್ಯಾಂಕ್ ಕುಸಿಯಲು ಕಾರಣವೇನು ?
ಗಮನಿಸಿ 93 ನೇ ವಾರ್ಷಿಕ ಸಭೆಯಲ್ಲಿ ಷೇರುದಾರರು ಸಂಸ್ಥೆಯ 11 ಜನ ಸದಸ್ಯರಲ್ಲಿ 7 ಜನರ ವಿರುದ್ಧ ಮತವನ್ನ ಹಾಕುತ್ತಾರೆ. ಷೇರುದಾರರು ಬ್ಯಾಂಕಿನಲ್ಲಿ ಹೆಚ್ಚಾಗುತ್ತಿದ್ದ ಕೆಟ್ಟ ಸಾಲದ ಬಗ್ಗೆ  ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೂ ಮುಂಚಿನ ಒಂದು ಘಟನೆಯನ್ನ ಹೇಳಬೇಕು. ಏಕೆಂದರೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ಕುಸಿತಕ್ಕೆ ಇದು ಪ್ರಮುಖ ಕಾರಣ ಎನ್ನಬಹುದು. 2016- 2017 ರಲ್ಲಿ  ಲಕ್ಷ್ಮಿ ವಿಲಾಸ್ ಬ್ಯಾಂಕ್  ಸಿಂಗ್ ಬ್ರದರ್ಸ್, ಮಲವಿಂದರ್ ಸಿಂಗ್ ಮತ್ತು ಶಿವಿಂದರ್ ಸಿಂಗ್ ಇವರು ಈ ಹಿಂದೆ ರಾನ್ಬಾಕ್ಸಿ ಮತ್ತು ಫೋರ್ಟಿಸ್ ಹೆಲ್ತ್ ಕೇರ್ ಎನ್ನುವ ಸಂಸ್ಥೆಗಳ ಪ್ರಮೋಟರ್ಸ್ ಆಗಿದ್ದವರಿಗೆ 720 ಕೋಟಿ ರೂಪಾಯಿ ಸಾಲವನ್ನ ನೀಡುತ್ತದೆ. ಇಷ್ಟೊಂದು ದೊಡ್ಡ ಮೊತ್ತದ ಸಾಲವನ್ನ ಯಾವುದೇ ರೀತಿಯ ಸೆಕ್ಯುರಿಟಿ ಇಲ್ಲದೆ ಕೊಟ್ಟಿತೆ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಇದು ಅಂದುಕೊಂಡಷ್ಟು ಸರಳವಾಗಿ ಕೂಡ ಇಲ್ಲ. ರೆಲಿಗೇರ್ ಫಿನ್ವೆಸ್ಟ್ ಎನ್ನುವ ಸಂಸ್ಥೆ ಲಕ್ಷ್ಮಿ ವಿಲಾಸ್ ಬ್ಯಾಂಕ್ನಲ್ಲಿ 8೦೦ ಕೋಟಿ ರೂಪಾಯಿ ಹಣವನ್ನ ಫಿಕ್ಸೆಡ್ ಡೆಪಾಸಿಟ್ ಇಡುತ್ತದೆ. ಸಿಂಗ್ ಬ್ರದರ್ ಗಳಿಗೆ ಸಾಲ ಬೇಕಿದ್ದರೆ ಕೊಡಿ, ಆದರೆ ಒಂದು ಪಕ್ಷದಲ್ಲಿ ಅವರು ಹಣ ಕೊಡದೆ ಹೋದರೆ ಅದಕ್ಕೂ ನನಗು ಸಂಬಂಧವಿಲ್ಲ. ಅದಕ್ಕೆ ಹೊಣೆಗಾರಿಕೆ ನಾನು ಹೊರುವುದಿಲ್ಲ ಎನ್ನುವ ಮಾತನ್ನ ಕೂಡ ಹೇಳುತ್ತದೆ.

ಲಕ್ಷ್ಮಿ ವಿಲಾಸ್ ಬ್ಯಾಂಕ್ ಸಿಂಗ್ ಬ್ರದರ್ಸ್ ಗೆ ಸಾಲ ನೀಡುತ್ತದೆ. ಅವರಿಗೆ ಆ ಸಾಲದ ಹಣವನ್ನ ಮರಳಿ ನೀಡಲು ಸಾಧ್ಯವಾಗುವುದಿಲ್ಲ. ಇದು ಕೆಟ್ಟ ಸಾಲವಾಗಿ ಪರಿವರ್ತನೆಯಾಗುತ್ತದೆ ಎಂದು ತಿಳಿದಾಗ ತಮ್ಮ ಬಳಿಯಿದ್ದ ಫಿಕ್ಸೆಡ್ ಡೆಪಾಸಿಟ್ ಹಣವನ್ನ ವಸೂಲಾಗದೆ ಇರುವ ಹಣಕ್ಕೆ ಒತ್ತೆ ಹಾಕಿಕೊಳ್ಳುತ್ತಾರೆ. 2018 ರಲ್ಲಿ ರೆಲಿಗೇರ್ ಫಿನ್ವೆಸ್ಟ್ ಇದರ ವಿರುದ್ಧ ಕೋರ್ಟಿನ ಬಾಗಿಲು ಬಡಿಯುತ್ತದೆ. ನನಗೂ ಈ ಸಾಲಕ್ಕೂ ಸಂಬಂಧವಿಲ್ಲ ನನ್ನ ಹಣ ನನಗೆ ವಾಪಸು ಕೊಡಿಸಿ ಎನ್ನುವ ಅಹವಾಲು ಮುಂದಿಡುತ್ತದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ಈ ಹಣದ ಭದ್ರತೆಯ ಆಧಾರದ ಮೇಲೆ ಸಾಲ ಕೊಟ್ಟಿದ್ದು ಹೀಗಾಗಿ ನಾವು ಒತ್ತೆ ಹಾಕಿಕೊಂಡದ್ದು ಸರಿ ಇದೆ ಎನ್ನುವ ವಾದವನ್ನ ಮಾಡಿದೆ.

ಈ ಎಲ್ಲಾ ಗದ್ದಲಗಳಿಂದ ಬೇಸತ್ತ ಆರ್ ಬಿ ಐ ಸೆಪ್ಟೆಂಬರ್ 2019ರಲ್ಲಿ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ ಅಡಿಯಲ್ಲಿ ಅಡ್ಮಿನಿಸ್ಟ್ರೇಟರ್ ಅನ್ನು ನೇಮಕ ಮಾಡುತ್ತದೆ. ಅಂದಿನಿಂದ ಈ ಬ್ಯಾಂಕು ಹೊಸ ಸಾಲ ನೀಡಲು ಸಾಧ್ಯವಾಗಿಲ್ಲ ಜೊತೆಗೆ ಹೊಸ ಬ್ರಾಂಚ್ ತೆಗೆಯಲು ಆಗಿಲ್ಲ. ಇವೆಲ್ಲವುಗಳ ನಡುವೆ ಕೊರೋನ ಉರಿಯುವ ಅಗ್ನಿಗೆ ತುಪ್ಪ ಹಾಕುವ ಕೆಲಸವನ್ನ ಚೆನ್ನಾಗಿ ನಿಭಾಯಿಸಿದೆ. ತನ್ನಲ್ಲಿರುವ ಹಣವನ್ನ ಬಳಸಲಾಗದೆ 94 ವರ್ಷದ ಇತಿಹಾಸವಿದ್ದ ತಮಿಳುನಾಡು ಮೂಲದ ಲಕ್ಷ್ಮಿ ವಿಲಾಸ್ ಬ್ಯಾಂಕ್ ತನ್ನ ಕೊನೆ ಕ್ಷಣಗಳನ್ನ ಎಣಿಸುವ ಹಂತಕ್ಕೆ ಬಂದು ನಿಂತಿದೆ.

ಒಂದು ಸಾಲ ಬಾರದೆ ಹೋದರೆ ಬ್ಯಾಂಕ್ಗೆ ಕುಸಿಯುತ್ತಾ ?
ನಮ್ಮ ಬ್ಯಾಂಕ್ಗಳ ಸ್ಥಿತಿ ಚಿಂತಾಜನಕವಾಗಿದೆ ಅದಕ್ಕೆ ಕಾರಣ ನಿಮಗೆಲ್ಲಾ ತಿಳಿದಿರುವಂತೆ ಅನುತ್ಪಾದಕ ಆಸ್ತಿಗಳು. ಬ್ಯಾಂಕ್ ನ ಕೆಲಸ ಗ್ರಾಹಕರಿಂದ ಠೇವಣಿ ಪಡೆಯುವುದು ಮತ್ತು ಅದನ್ನ ಯೋಗ್ಯರಿಗೆ ವ್ಯಾಪಾರಕ್ಕೆ ಸಾಲ ಕೊಡುವುದು ಮತ್ತು ಅದನ್ನ ಮರುವಸೂಲಿ ಮಾಡುವುದು. ಈಗ ಭಾರತದಲ್ಲಿ ಆಗಿರುವುದು ಸಾಲ ವಸೂಲಾತಿಯಲ್ಲಿ ತೊಂದರೆ. ಹೀಗೆ ವಸೂಲಿ ಆಗದೆ ಉಳಿದ ಹಣವನ್ನ ಅನುತ್ಪಾದಕ ಆಸ್ತಿ ಅಥವಾ ನಾನ್ ಪರ್ಫಾರ್ಮಿಂಗ್ ಅಸೆಟ್ ಎನ್ನುತ್ತೇವೆ. ಇದರ ಮೊತ್ತ ಹೆಚ್ಚಾದರೆ ಬ್ಯಾಂಕಿನ ಬಳಿ ಹಣವಿದ್ದರೂ ಅವರು ಸಾಲ ನೀಡಲು ಅನುಮತಿ ಇರುವುದಿಲ್ಲ. ಇದೊಂದು ಅತಂತ್ರ ಸ್ಥಿತಿ. ಹಣವಿದೆ ಆದರೆ ಹಳೆಯ ವಸೂಲಿ ಮಾಡದೆ ಹೊಸ ಸಾಲ ನೀಡಲು ಬರುವುದಿಲ್ಲ. ಈ ಸನ್ನಿವೇಶ ಬಹಳ ಸಮಯ ಮುಂದುವರಿದರೆ ಇಡೀ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುತ್ತದೆ.

ಒಂದು ಸಣ್ಣ ಉದಾಹರಣೆ ನೋಡೋಣ. ಒಂದು ಬ್ಯಾಂಕು ಸಾವಿರ ರೂಪಾಯಿ ಸಾಲ ನೀಡಬೇಕೆಂದರೆ ಅದರ ಹತ್ತು ಪ್ರತಿಶತ ಅಂದರೆ ನೂರು ರೂಪಾಯಿ ಬಂಡವಾಳ ಬ್ಯಾಂಕಿನ ಬಳಿ ಇರಬೇಕು. ಹೀಗೆ ಸಾಲ ಕೊಟ್ಟ ಸಾವಿರ ರೂಪಾಯಿಯಲ್ಲಿ ಕೇವಲ ಐದು ಪ್ರತಿಶತ ಹಣ ವಾಪಸ್ಸು ಬರದೆ ಹೋದರೆ ಅಂದರೆ ಐವತ್ತು ರೂಪಾಯಿ ಅದು ಬಂಡವಾಳದ ಅರ್ಧ ಹಣ ಮುಳುಗಿಸುತ್ತದೆ. ಅಂದರೆ ಬ್ಯಾಂಕಿನ ಮೂಲ ಬಂಡವಾಳ ನೂರರಿಂದ ಐವತ್ತಕ್ಕೆ ಇಳಿಕೆಯಾಯಿತು. ಗಮನಿಸಿ ನೂರು ರೂಪಾಯಿ ಇದ್ದಾಗ ಸಾವಿರ ರೂಪಾಯಿ ಸಾಲ ನೀಡಬಹುದಿತ್ತು ಇದೀಗ ಬಂಡವಾಳದ ಮೊತ್ತ ಐವತ್ತು  ಈಗ ಬ್ಯಾಂಕು ಕೇವಲ ಐನೂರು ಮಾತ್ರ ನಿಯಮದ ಪ್ರಕಾರ ಸಾಲ ಕೊಡಬಹುದು. ಬ್ಯಾಂಕಿನ ಬಂಡವಾಳದಲ್ಲಿ ಕುಸಿತವಾಗಿದೆ ನಿಜ ಆದರೆ ಗ್ರಾಹಕರು ಇಟ್ಟ ಠೇವಣಿಯಲ್ಲಿ ಕುಸಿತವೇನು ಆಗಿಲ್ಲ ಬ್ಯಾಂಕಿನ ಬಳಿ ಹೇರಳ ಹಣವಿದೆ ಆದರೇನು ನಿಯಮದ ಪ್ರಕಾರ ಅದು ಸಾಲ ನೀಡುವ ಆಗಿಲ್ಲ. ಸಾಲ ನೀಡದೆ ಹಣ ಸಂಪಾದಿಸದೆ ಗ್ರಾಹಕರಿಗೆ ಬಡ್ಡಿ ಕೊಡುವುದು ಹೇಗೆ? ಈ ಸ್ಥಿತಿ ಮುಂದುವರಿದರೆ ಬ್ಯಾಂಕು ಮತ್ತು ಇಡೀ ವ್ಯವಸ್ಥೆ ಕುಸಿಯುತ್ತದೆ.

ಹಾಗಾದರೆ ಇದಕ್ಕೆ ಪರಿಹಾರವೇನು?

ರಿ ಕ್ಯಾಪಿಟಲೈಸೇಶನ್ ಅಥವಾ ಬಂಡವಾಳ ಮರು ಹೂಡಿಕೆ ಇದಕ್ಕೆ ಪರಿಹಾರ. ಸರಕಾರ ಬ್ಯಾಂಕಿನಲ್ಲಿ ಬಂಡವಾಳ ಹೂಡುವುದರಿಂದ ವ್ಯವಸ್ಥೆಗೆ ಮರು ಜೀವ ನೀಡುವ ಪ್ರಕ್ರಿಯೆಗೆ ರಿ ಕ್ಯಾಪಿಟಲೈಸೇಶನ್ ಅಥವಾ ಬಂಡವಾಳ ಮರು ಹೂಡಿಕೆ ಎನ್ನುತ್ತೇವೆ. ಇಲ್ಲಿಯವರೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಹಣವನ್ನ ಸಂಗ್ರಹಿಸಲಾಗುತ್ತಿತ್ತು  ಮತ್ತು ಸರಕಾರ ಹೂಡಿಕೆ ಮಾಡುತಿತ್ತು. ಇದೀಗ ಲಕ್ಷ್ಮಿ ವಿಲಾಸ್ ಬ್ಯಾಂಕಿನ ವಿಷಯದಲ್ಲಿ ಸಿಂಗಪೂರ್ ಮೂಲದ ಡಿಬಿಎಸ್ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುವ ಯೋಚನೆ  ಆರ್ ಬಿ ಐ ಮುಂದಿದೆ.

ಬ್ಯಾಂಕ್ಗಳ ಬಳಿ ಹೇರಳವಾಗಿ ಹಣವಿದೆ ಆದರೆ ಅವುಗಳಿಗೇಕೆ ಮರು ಹೂಡಿಕೆ ಮಾಡಬೇಕು?
ಬ್ಯಾಂಕಿನ ಬಳಿ ಹಣವಿದೆ ಆದರೆ ಅದನ್ನ ಜನರಿಗೆ ಸಾಲ ಕೊಡಲು ಬಂಡವಾಳ ಅನುಪಾತ ಎನ್ನುವ ನಿಯಮ ಅನುಮತಿ ನೀಡುವುದಿಲ್ಲ ಆದರೆ ಬ್ಯಾಂಕು ಈ ಹಣವನ್ನ ಸರಕಾರಕ್ಕೆ ಸಾಲ ನೀಡಬಹುದು! ಸರಕಾರ ಬ್ಯಾಂಕಿನಿಂದ ಸಾಲ ಪಡೆದು ಅದನ್ನೇ ಮತ್ತೆ ಬ್ಯಾಂಕಿನಲ್ಲಿ ಹೂಡಿಕೆಯ ರೂಪದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗೆ ಹಾಕುತ್ತದೆ. ಈ ಪ್ರಕ್ರಿಯೆಯಿಂದ ಬಂಡವಾಳ ಅನುಪಾತ ಹೆಚ್ಚಾಗುತ್ತದೆ ಮತ್ತು ಬ್ಯಾಂಕ್ ಮತ್ತೆ ಜನರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಹೀಗೆ ಸರಕಾರ ಹಣ ಹೂಡಿಕೆ ಮಾಡಿದೆ. ಇನ್ನು ಕೆಲವು ಬ್ಯಾಂಕುಗಳನ್ನ ವಿಲೀನ ಮಾಡುವುದರ ಮೂಲಕ ಕೂಡ ಬಂಡವಾಳ ಹೆಚ್ಚುವಂತೆ ಆ ಮೂಲಕ ಮತ್ತೆ ಸಾಲವನ್ನ ನೀಡಲು ಸಾಧ್ಯವಾಗುವ ಅವಕಾಶವನ್ನ ಕಲ್ಪಿಸಿದೆ. ಇದೀಗ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನವಾದರೆ ತನ್ನ ಹಳೆಯ ಯಾವುದೇ ಕುರುಹನ್ನ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸರಿ ಪರಿಹಾರ ಇದೆಯಲ್ಲ ಹಾಗಾದರೆ ಎಲ್ಲಾ ಓಕೇನಾ?
ಲಕ್ಷ್ಮಿ ವಿಲಾಸ್ ಬ್ಯಾಂಕ್ ಎನ್ನುವ ಹೆಸರಿನಿಂದ ಹಿಡಿದು ಎಲ್ಲವೂ ಕಾಣೆಯಾಗುತ್ತದೆ. ಸಿಂಗಪೂರ್ ಮೂಲದ  ಡಿ ಬಿಎಸ್ ಬ್ಯಾಂಕ್ ಗೆ ಯಾವುದೇ ತಲೆನೋವು ಇಲ್ಲದೆ ಹೊಸ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ. ಅದು ಇನ್ನು ಹತ್ತಾರು ವರ್ಷ ಕಷ್ಟ ಪಟ್ಟರೂ ಸೃಷ್ಟಿಸಲು ಆಗದ ವ್ಯವಸ್ಥೆ ಅದಕ್ಕೆ ಸಿಗಲಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕಿನ ಗ್ರಾಹಕರು, ಅಲ್ಲಿನ ವ್ಯಾಪಾರ ಎಲ್ಲವೂ ಅದಕ್ಕೆ ಸಿಗಲಿದೆ. ಗ್ರಾಹಕರ ಹಿತ ದೃಷ್ಟಿಯಿಂದ, ಆರ್ ಬಿ ಐ ದೃಷ್ಟಿಯಿಂದ ಓಕೆ. ಆದರೆ ವಿದೇಶಿ ಬ್ಯಾಂಕಿಗೆ ಸುಲಭವಾಗಿ ನಮ್ಮ ಬ್ಯಾಂಕಿಂಗ್ ನಲ್ಲಿ ಜಾಗ ಕೊಟ್ಟಹಾಗೆ ಆಗುತ್ತದೆ. ತಮಿಳುನಾಡಿನಲ್ಲಿ ಸಣ್ಣ-ಪುಟ್ಟ ವರ್ತಕರಿಗೆ ಸಹಾಯವಾಗಲಿ ಎಂದು ಸ್ಥಾಪಿಸಿದ್ದ ಒಂದು ಸಣ್ಣ ಬ್ಯಾಂಕ್ ಬ್ಯಾಂಕ್ 94 ವರ್ಷಗಳ ಇತಿಹಾಸ, ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸಿ ಈ ರೀತಿಯ ಅಂತ್ಯ ಕಾಣುತ್ತಿರುವುದು ಮಾತ್ರ ದುರಂತ. ಈಗ ವಿದೇಶಿ ಬ್ಯಾಂಕುಗಳು ಇಲ್ಲವೆಂದಲ್ಲ, ಅವು ಕಷ್ಟ ಪಟ್ಟು ತಮ್ಮ ಜಾಗವನ್ನ ಸೃಷ್ಟಿಸಿಕೊಂಡಿವೆ.

ಕೊನೆಯ ಮಾತು:
ಸದ್ಯದ ಮಟ್ಟಿಗೆ ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ. ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎನ್ನುವ ಗಾದೆ ನಮ್ಮ ಹಿರಿಯರು ಸುಮ್ಮನೆ ಮಾಡಿರುವುದಿಲ್ಲ ಅದರ ಹಿಂದೆ ಅನುಭವ ಇದ್ದೆ ಇರುತ್ತೆ. ಇವತ್ತಿಗೆ ಸರಿ ನಾಳಿನ ವ್ಯವಸ್ಥೆಯ ಭದ್ರತೆಗೆ ಸುಲಲಿತ ಕಾರ್ಯ ನಿರ್ವಹಣೆಗೆ ಕೊಟ್ಟ ಸಾಲ ವಸೂಲಿ ಮಾಡಬೇಕಿದೆ. ಎಲ್ಲಿಯವರೆಗೆ ಕೊಟ್ಟ ಸಾಲವನ್ನ ಮರಳಿ ಪಡೆಯಲು ವಿಫಲರಾಗುತ್ತೇವೆ ಅಲ್ಲಿಯವರೆಗೆ ಇಂತಹ ಸಮಸ್ಯೆಗಳು ಆಗುತ್ತಲೇ ಇರುತ್ತವೆ. ನಾಳೆ ಡಿಬಿಎಸ್ ಬ್ಯಾಂಕ್ ಗೆ ತೊಂದರೆಯಾದರೆ? ಸರಕಾರ ನನಗೇನು? ಎಂದು ಕೈ ಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಕೊಟ್ಟ ಹಣವನ್ನ ಮರಳಿ ಪಡೆಯುವುದೊಂದೇ ಇದಕ್ಕೆ ಶಾಶ್ವತ ಪರಿಹಾರ.

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com