ಸಮಯ ಮತ್ತು ಬೇರೆ ದೇಶಗಳಿಗೆ ತಕ್ಕಂತೆ ಹಣದ ಮೌಲ್ಯ ಬದಲಾಗುವುದೇಕೆ?

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಸಮಯ ಮತ್ತು ಬೇರೆ ದೇಶಗಳಿಗೆ ತಕ್ಕಂತೆ ಹಣದ ಮೌಲ್ಯ ಬದಲಾಗುವುದೇಕೆ?
ಸಮಯ ಮತ್ತು ಬೇರೆ ದೇಶಗಳಿಗೆ ತಕ್ಕಂತೆ ಹಣದ ಮೌಲ್ಯ ಬದಲಾಗುವುದೇಕೆ?

ಹಣದ ಬಗ್ಗೆ ನಮ್ಮಲ್ಲಿ ಚಿತ್ರ ವಿಚಿತ್ರ ಕಲ್ಪನೆಗಳಿವೆ. ನಮ್ಮದೇ ಆದ ಸಿದ್ದಂತಾಗಳಿವೆ. ಸಾಮಾನ್ಯವಾಗಿ ಹೆಚ್ಚು ಹಣವನ್ನ ತನ್ನ ಜೀವಿತಾವಧಿಯಲ್ಲಿ ಕಾಣದ ಬಡ ಮಧ್ಯಮವರ್ಗದ ಜನರು 'ಹಣವೇ ಎಲ್ಲಾ ಅಲ್ಲ', 'ಹಣದಿಂದ ಎಲ್ಲವನ್ನೂ ಕೊಳ್ಳಲಾಗುವುದಿಲ್ಲ', ಬದುಕಿಗೆ ಎಷ್ಟು ಬೇಕು ಅಷ್ಟು ಮಾತ್ರ ಹಣ ಸಾಕು' ಎನ್ನುವುದರ ಜೊತೆಗೆ ಇನ್ನು ಹಲವಾರು ತತ್ವಜ್ಞಾನದ ಮಾತುಗಳನ್ನ ಆಡುತ್ತಾರೆ. ಸಾಮಾನ್ಯವಾಗಿ ಹಣದ ಬಗ್ಗೆ ಬೇಸರ, ಕೋಪ ಇಲ್ಲವೇ ತೀರಾ ಉಡಾಫೆ ಅಥವಾ ತತ್ವಜ್ಞಾನದ ಕಡೆಗೆ ನಮ್ಮ ಮಾತು ಸಾಗುತ್ತದೆ. ಹೀಗಾಗಲು ಕಾರಣ 'ಹಣ'ದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು. ನಮ್ಮ ಸಮಾಜದಲ್ಲಿ ಮುಕ್ಕಾಲು ಪಾಲು ಜನ ಹಣಕ್ಕೆ ಮೌಲ್ಯವಿದೆ ಎಂದು ತಿಳಿದಿದ್ದಾರೆ. ಆದರೆ ಸತ್ಯವೇನು ಎನ್ನುವುದನ್ನ ಮುಂದಿನ ಸಾಲುಗಳಲ್ಲಿ ತಿಳಿದುಕೊಳ್ಳೋಣ. ಆಟದ ರೀತಿ-ನೀತಿಗಳನ್ನ ಸರಿಯಾಗಿ ತಿಳಿದುಕೊಳ್ಳದೆ ಆಟದಲ್ಲಿ ಪಾಲ್ಗೊಂಡರೆ ಗೆಲ್ಲಲು ಹೇಗೆ ಸಾಧ್ಯ ಅಲ್ಲವೇ? ಇರಲಿ

ಇವತ್ತು ನಿಮಗೊಂದು ಕತೆ ಹೇಳುವೆ ಒಂದೂರಿನಲ್ಲಿ ಮೂವರು ಸಹೋದರರಿದ್ದರು ಒಟ್ಟಿಗೆ ಓದಿ ಬೆಳದ ಅವರು ತಮ್ಮ ಭವಿಷ್ಯ ಅರಸಿ ಬೇರೆ ದೇಶಗಳಿಗೆ ಹೋದರು. ಆದರೂ ವರ್ಷಕೊಮ್ಮೆ ತಮ್ಮ ಹುಟ್ಟೂರಲ್ಲಿ ಸೇರುತ್ತಿದ್ದರು. ಎಲ್ಲರಿಗಿಂತ ದೊಡ್ಡವನು ಹಣವನ್ನ ಪೌಂಡ್ ಎನ್ನುತ್ತಾರೆ ಅದು ಅತ್ಯಂತ ಬಲಶಾಲಿ ಎಂದ. ಎರಡನೆಯವನು ಅಮೇರಿಕಾ ಪಾಲಾಗಿದ್ದು ತನ್ನ ಅಣ್ಣನಿಗೆ ನೀನು ಹೇಳಿದ್ದು ತಪ್ಪು ಹಣದ ಹೆಸರು ಡಾಲರ್ ಅಂತ ಅದೇ ಅತ್ಯಂತ ಬಲಶಾಲಿ, ಇವರಿಬ್ಬರ ಕೇಳಿಸಿಕೊಂಡ ಕಿರಿಯ ತಮ್ಮ ನೀವಿಬ್ಬರು ಹೇಳುವುದು ತಪ್ಪು ಹಣದ ಹೆಸರು ದಿನಾರ್ ಅದೇ ಬಲಶಾಲಿ ಎಂದ. ಮತ್ತೆ ಹಿರಿಯಣ್ಣ ತಾವಿದ್ದ ಕೊಠಡಿಯನ್ನ 12 ಅಡಿ ಉದ್ದವಿದೆ ಎಂದ, ಎರಡನೆಯವನು 365 ಸೆಂಟಿಮೀಟರ್ ಇದೆ ಎಂದ ಕೊನೆಯವನು ಇಲ್ಲ ಇದು 144 ಇಂಚಿದೆ ಎಂದ. ಇದರ ಅರ್ಥವಿಷ್ಟೆ, ಹೆಸರು ಯಾವುದೇ ಇಟ್ಟರೂ ಅದೊಂದು ಅಳತೆಗೋಲು ಅಷ್ಟೇ ಉಳಿದಂತೆ ಅವುಗಳು ಮಾಡುವ ಕೆಲಸ ಮಾತ್ರ ಸೇಮ್. ಈಗ ನೀವೊಂದು ಪ್ರಶ್ನೆ ಕೇಳಬಹುದು ಹಾಗಾದರೆ ಜಗತ್ತಿನ ಎಲ್ಲಾ ಕರೆನ್ಸಿ ಮೌಲ್ಯ ಒಂದೇ ಏಕಿಲ್ಲ? ಸಮಯದ ಜೊತೆಗೆ ಹಣದ ಮೌಲ್ಯ ಹೆಚ್ಚು ಕಡಿಮೆ ಆಗುವುದೇಕೆ? ಹೀಗೆ ಹಣದ ಬಗೆಗಿನ ಒಂದಷ್ಟು ಅಂಶಗಳ ಕಡೆಗೆ ಗಮನ ಕೊಡೋಣ.

ಜಗತ್ತಿನ ಎಲ್ಲಾ ಕರೆನ್ಸಿ ಮೌಲ್ಯ ಒಂದೇ ಏಕಿಲ್ಲ?

ಇದಕ್ಕೆ ನಾವು ಶುರುವಿನಲ್ಲಿ ಹಣದ ಮೌಲ್ಯವನ್ನ ಹೇಗೆ ಅಳೆಯುತ್ತಿದ್ದರು ಎನ್ನುವುದನ್ನ ತಿಳಿದುಕೊಳ್ಳುವುದು ಉತ್ತಮ. ಒಂದು ಪೌಂಡ್ ಅಂದರೆ 450 ಗ್ರಾಂ ಬೆಳ್ಳಿಗೆ ಸಮ ಎಂದಿತ್ತು ಅದೇ ಒಂದು ರೂಪಾಯಿ ಎಂದರೆ 11.5 ಗ್ರಾಂ ಬೆಳ್ಳಿ. ಇದರರ್ಥ ರೂಪಾಯಿಗಿಂತ ಪೌಂಡ್ ಶಕ್ತಿಶಾಲಿ ಎಂದಲ್ಲ. 450 ಗ್ರಾಂ ಸರಿದೂಗಲು ಎಷ್ಟು ರೂಪಾಯಿ ನೀಡಬೇಕು ಅಷ್ಟು ನೀಡಿದರೆ ಸಾಕು. ಹೀಗಾಗಿ ಒಂದು ಪೌಂಡ್ ಒಂದು ರೂಪಾಯಿ ಎಂದೆದಿಗೂ ಸಮವಾಗುವುದು ಸಾಧ್ಯವಿಲ್ಲ. ನಮ್ಮ ಶುರುವಿನ ಗೆರೆ ಎಂದೂ ಒಂದೇ ಆಗಿರಲಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಸಮದ ಪ್ರಶ್ನೆ ಬಲಶಾಲಿ ಪ್ರಶ್ನೆ  ಬರಬಾರದು. ದೇಶದ ಮೌಲ್ಯ ಅಳೆಯಲು ಬೇರೆ ಮಾಪನಗಳಿವೆ.

ಟೈಮ್ ವ್ಯಾಲ್ಯೂ ಆಫ್ ಮನಿ ಅರ್ಥಾತ್ ವೇಳೆಯೊಂದಿಗಿನ ಹಣದ ಮೌಲ್ಯ ಎಂದರೇನು?

ಹಣದ ಮೌಲ್ಯ ಘಳಿಗೆಯಿಂದ ಘಳಿಗೆಗೆ ಬದಲಾಗುತ್ತಾ ಇರುತ್ತದೆ. ನಿಮ್ಮ ಕೈಲಿರುವ ನೋಟಿನ ಮುಖ ಬೆಲೆ ಮಾತ್ರ ಅದೇ ಇರುತ್ತದೆ ಆದರೆ ಅದರ ಮೌಲ್ಯ ಮಾತ್ರ ಕಡಿಮೆಯಾಗಿರುತ್ತದೆ. ಏಕೆ ಹೀಗೆ? ಇದಕ್ಕೆ ಉತ್ತರ ಬಹಳ ಸರಳ ವೇಳೆಯೊಂದಿಗೆ ಹಣ ಒಂದಷ್ಟು ಹಣವನ್ನ ದುಡಿಯುತ್ತದೆ ಜೊತೆಗೆ ವಸ್ತುಗಳ ಬೆಲೆ ಏರುತ್ತದೆ ಇವೆರಡರ ಸಂಗಮದಿಂದ ಇಂದಿನ ಒಂದು ರೂಪಾಯಿ ನಾಳಿನ ಒಂದು ರುಪಾಯಿಗೆ ಸಮವಾಗಿರುವುದಿಲ್ಲ. ಇಲ್ಲಿ ಬಡ್ಡಿ ಮತ್ತು ಹಣದುಬ್ಬರ ಎನ್ನುವ ಎರಡು ವಿಷಯಗಳು ಮಿಳಿತವಾಗಿವೆ.
ಒಂದು ಉದಾಹರಣೆ ಈ ವಿಷಯದ ಜಟಿಲತೆಯನ್ನ ಒಂದಷ್ಟು ಕಡಿಮೆ ಮಾಡಿ ಟೈಮ್ ವ್ಯಾಲ್ಯೂ ಆಫ್ ಮನಿಯನ್ನ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ

ಜನವರಿ ತಿಂಗಳಲ್ಲಿ ನಿಮ್ಮ ಬಳಿ ಒಂದು ಸಾವಿರ ರೂಪಾಯಿ ಇತ್ತೆಂದುಕೊಳ್ಳಿ. ನಿಮ್ಮ ಸ್ನೇಹಿತನೊಬ್ಬ ನಿಮ್ಮ ಬಳಿ ಅದನ್ನ ಎರವಲು ಪಡೆದು ಆರು ತಿಂಗಳ ನಂತರ ಕೊಡುತ್ತೇನೆ ಎನ್ನುತ್ತಾನೆ ಎಂದುಕೊಳ್ಳಿ, ಜನವರಿಯಲ್ಲಿ ಸಾವಿರ ರೂಪಾಯಿ ಕೊಟ್ಟಿರಿ ಜುಲೈನಲ್ಲಿ ಸಾವಿರ ವಾಪಸ್ಸು ಬಂತು ಲೆಕ್ಕ ಚುಕ್ತಾ ಆಯ್ತಾ? ಜನವರಿಯಲ್ಲಿ ಸಾವಿರ ಬಳಸಿ ನೀವೇನು ಕೊಳ್ಳಬಹುದಿತ್ತು ಇಂದು ಅದನ್ನ ಕೊಳ್ಳಲು ಇನ್ನು ಐವತ್ತು ರೂಪಾಯಿ ಸೇರಿಸಬೇಕು. ಹಣದುಬ್ಬರ ಅಥವಾ ಇನ್ಫ್ಲೇಶನ್ ನಿಂದ ಹೀಗಾಗಿದೆ. ಅಂದರೆ ಜನವರಿಯ ಸಾವಿರ ರೂಪಾಯಿಯ ಫ್ಯೂಚರ್ ವ್ಯಾಲ್ಯೂ ಸಾವಿರಕ್ಕಿಂತ ಕಡಿಮೆ. ಹಣದುಬ್ಬರವನ್ನ ಸರಿಗಟ್ಟಿ ಇಂದಿನ ಹಣದ ಮುಂದಿನ ಬೆಲೆ (ಫ್ಯೂಚರ್ ವ್ಯಾಲ್ಯೂ) ಸಮವಾಗಿ ಅಥವಾ ಒಂದಷ್ಟು ಪಟ್ಟು ಹೆಚ್ಚಾಗಿಸಲು ಸಾಧ್ಯವಾಗಿರುವುದು ಬಡ್ಡಿಯ ಉಗಮದಿಂದ. ಜನವರಿಯಲ್ಲಿ ನೀವು ಸ್ನೇಹಿತನಿಗೆ ಸಾವಿರ ರೂಪಾಯಿ ಮೇಲೆ ಹತ್ತು ಪ್ರತಿಶತ ಬಡ್ಡಿ ನೀಡಲು ಹೇಳಿದ್ದರೆ ಜುಲೈ ನಲ್ಲಿ ನೀವು ಪಡೆಯುವ ಮೊತ್ತ ಸಾವಿರದ ಐವತ್ತು ರೂಪಾಯಿ.

ಟೈಮ್ ವ್ಯಾಲ್ಯೂ ಆಫ್ ಮನಿ ಎನ್ನುವುದು ಬಡ್ಡಿಯ ಮೇಲೆ ಅವಲಂಬಿತ ಮೌಲ್ಯವಾಗಿದೆ. ಈ ವೇಳೆಯ ಜೊತೆಗಿನ ಹಣದ ಮೌಲ್ಯ ಮುಖ್ಯವಾಗಿ ಕಾರ್ಪೊರೇಟ್ ಫೈನಾನ್ಸ್, ಕನ್ಸೂಮರ್ ಫೈನಾನ್ಸ್ ಮತ್ತು ಗವರ್ನಮೆಂಟ್ ಫೈನಾನ್ಸ್ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ನೋಡಲು ಹೋದರೆ ಹಣವನ್ನ ಉಪಯೋಗಿಸುವ ಪ್ರತಿ ಪ್ರಜೆಯ ಮೇಲೂ ಇದು ಪರಿಣಾಮ ಬೀರುತ್ತದೆ.

ಟೈಮ್ ವ್ಯಾಲ್ಯೂ ಆಫ್ ಮನಿ ಅವಶ್ಯಕತೆ ಏನು?

ಇದು ಹೂಡಿಕೆದಾರರಿಗೆ ಅತ್ಯಂತ ಸಹಾಯವಾದ ಮಾಹಿತಿ. ನೀವು ಇಂದು ಯಾವುದೊ ಬಾಂಡ್ ಮೇಲೆ ಸಾವಿರ ರೂಪಾಯಿ ಹೂಡಿಕೆ ಮಾಡುತ್ತೀರಿ ಎಂದುಕೊಳ್ಳಿ ಎರಡು ವರ್ಷದ ನಂತರ ಇಷ್ಟು ಹಣ ವಾಪಸ್ಸು ಕೊಡುತ್ತೇವೆ ಎನ್ನುತ್ತಾರೆ. ಆಗ ಎರಡು ವರ್ಷದ ನಂತರ ಅಷ್ಟು ಹಣ ವಾಪಸ್ಸು ಪಡೆಯುವುದು ಲಾಭದಾಯಕವೇ? ಅಥವಾ ನಷ್ಟವೇ? ಇದರಲ್ಲಿ ಹೂಡಿಕೆ ಮಾಡಬಹುದೇ? ಅಥವಾ ಬೇಡವೇ? ಇಂತಹ ನಿರ್ಧಾರಗಳ ತಗೆದುಕೊಳ್ಳಲು ಇದು ಸಹಾಯಕವಾಗಿದೆ. ಹಾಗೆ ಕೆಲವೊಮ್ಮೆ ಬಾಂಡ್ ಗಳ ಮೇಲೆ ಇಷ್ಟೇ ಮೊತ್ತದ ಹಣ ವಾಪಸ್ಸು ನೀಡಲಾಗುತ್ತದೆ ಎಂದು ಸೂಚಿಸಿರುವುದಿಲ್ಲ ಆಗ ಹೂಡಿಕೆದಾರ ಅದನ್ನ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದರೆ ಎಷ್ಟು ಹಣ ಬರುತಿತ್ತು ಅದನ್ನ ಲೆಕ್ಕ ಹಾಕಿ ಬಾಂಡ್ ಮೇಲಿನ ಹೂಡಿಕೆ ಅದಕ್ಕಿಂತ ಹೆಚ್ಚು ಬರುತ್ತದೆಯೇ ಇಲ್ಲವೇ ಎಂದು ನಿರ್ಧರಿಸಲು ಕೂಡ ಸಹಾಯಕವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಟೈಮ್ ವ್ಯಾಲ್ಯೂ ಆಫ್ ಮನಿ ಹೂಡಿಕೆ ಮಾಡಲು ಮಾನದಂಡದಂತೆ ಕೆಲಸ ನಿರ್ವಹಿಸುತ್ತದೆ.

ಸರಿ ಹಾಗಾದರೆ ಅಪಮೌಲ್ಯ ಅಥವಾ ಡಿವ್ಯಾಲ್ಯೂವೆಶನ್  ಎಂದರೇನು ?

ಒಂದು ದೇಶದ ವಿನಿಮಯ ದರದೊಂದಿಗೆ ತನ್ನ ದೇಶದ ಕರೆನ್ಸಿ ಮೌಲ್ಯ ಕುಗ್ಗಿಸುವ ಪ್ರಕ್ರಿಯೆಗೆ ಡಿವ್ಯಾಲ್ಯೂವೆಶನ್ ಎನ್ನುತ್ತಾರೆ. ಅಂದರೆ ಒಂದು ಡಾಲರಿಗೆ 64 ರೂಪಾಯಿ ತೆತ್ತು ಕೊಳ್ಳುತ್ತಿದ್ದೆವು ಅದೇ ಡಾಲರ್ ಕೊಳ್ಳಲು ಮುಂದೆ 65 ರೂಪಾಯಿ ಕೊಟ್ಟರೆ ಭಾರತದ ರೂಪಾಯಿ ಡಾಲರ್ ಎದುರು ಒಂದು ರೂಪಾಯಿ ಅಪಮೌಲ್ಯ ಕಂಡಿತು ಎಂದರ್ಥ. ಇಲ್ಲಿ ಗಮಿಸಬೇಕಾದ ಇನ್ನೊಂದು ಅಂಶವಿದೆ, ಭಾರತ ತನ್ನ ಟ್ರೇಡ್ ಹೊಂದಾವಣಿಕೆಗೆ ತನ್ನ ಹಣವನ್ನ ತನಗೆ ಬೇಕಾದ ರೀತಿಯಲ್ಲಿ ಹೊಂದಿಸಿಕೊಂಡರೆ ಅದು ಅಪಮೌಲ್ಯ, ಭಾರತ ಏನೂ ಮಾಡದೆ ಡಾಲರ್ ಎದಿರು ಹಣದ ವಿನಿಮಯದಲ್ಲಿ ಕಡಿಮೆಯಾದರೆ ಅದು ಕುಸಿತ. ಅಪಮೌಲ್ಯ ನಾವೇ ಮಾಡಿಕೊಂಡದ್ದು ಕುಸಿತ ಬಾಹ್ಯ ಕಾರಣಗಳಿಂದ ನಮ್ಮ ಹಣದಲ್ಲಿ ಆದ ಬದಲಾವಣೆ.

ನಮ್ಮ ದೇಶದ ಹಣ ಅಂತರರಾಷ್ಟ್ರ್ರೀಯ ಮಟ್ಟದಲ್ಲಿ ಕುಸಿದಾಗ ಏನಾಗುತ್ತೆ?

ದೇಶದ ಹಣ ಅಂತರರಾಷ್ಟೀಯ ಮಟ್ಟದಲ್ಲಿ ಕುಸಿತ  ಹೊಂದಿದಾಗ, ದೇಶದಲ್ಲಿ ವಸ್ತುಗಳ ಬೆಲೆ ಹೆಚ್ಚುತ್ತದೆ, ಬೆಲೆಗಳ ಹೆಚ್ಚಳದ ಅಳತೆಗೋಲು ಇನ್ ಫ್ಲೆಶನ್, ಇನ್ಫ್ಲೆಶನ್ ಹೆಚ್ಚಿದರೆ, ಬ್ಯಾಂಕ್ ತನ್ನ ಬಡ್ಡಿ ದರ ಹೆಚ್ಚಿಸಬೇಕಾಗುತ್ತೆ, ಬಡ್ಡಿ ದರ ಹೆಚ್ಚಿದರೆ ಅದು ಉದ್ಯಮದ ಮೇಲೆ ಪರಿಣಾಮ ಬಿರುತ್ತೆ, ಉದ್ಯಮ ಕುಂಠಿತ ಆಗುತ್ತೆ, ದೇಶದ ಒಟ್ಟು ಅರ್ಥಿಕ ಪ್ರಗತಿ ಅಳೆಯುವ ಜಿಡಿಪಿ ಕುಸಿಯುತ್ತೆ, ಇದು ವಿಶ್ವದಲ್ಲಿ ನಮ್ಮ ಇತರ ದೇಶಗಳು ನೋಡುವ ರೀತಿ ಕೂಡ ಬದಲಿಸುತ್ತೆ.

ನಮ್ಮ ಹಣವನ್ನ ನಾವೇ ಅಪಮೌಲ್ಯ ಮಾಡಿಕೊಂಡರೆ ಏನಾಗುತ್ತೆ?

ವ್ಯಾಪಾರ ವಹಿವಾಟು ನಿಗದಿತ ಮಟ್ಟದಲ್ಲಿ ಆಗದೆ ಇದ್ದಾಗ ಮತ್ತು ವಿದೇಶಿ ವಿನಿಮಯ ಸಂಗ್ರಹವನ್ನ ನಿಗದಿತ ಮಟ್ಟದಲ್ಲಿ ಕಾಯ್ದುಕೊಳ್ಳುವ ಸಲುವಾಗಿ ಮತ್ತು ಇನ್ನೂ ಹಲವು ಹತ್ತು ಕಾರಣಗಳಿಂದ ನಮ್ಮ ಹಣವನ್ನ ನಾವೇ ಅಪಮೌಲ್ಯ ಗೊಳಿಸಿಕೊಳ್ಳುತ್ತೇವೆ. ಅದು ಒಳ್ಳೆಯದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಕರೆನ್ಸಿ ಅಡ್ಜಸ್ಟ್ಮೆಂಟ್ ಸಾಮಾನ್ಯವಾಗಿದೆ.

ಕೊನೆ ಮಾತು: ಹಣವೆನ್ನುವುದು ಜಗತ್ತಿನ ಕೊಡುಕೊಳ್ಳುವಿಕೆ ನಡೆಸಲು ಇರುವ ಒಂದು ಮಾಪಕ ಅಥವಾ ಮಾನದಂಡವಷ್ಟೇ. ಮೌಲ್ಯವಿರುವುದು ವಸ್ತುವಿಗೆ, ಹಣ ಮೌಲ್ಯವನ್ನ ಅಳೆಯಲು ಇರುವ ಒಂದು ಸಾಧನ. ವಸ್ತುವಿನ ಮೌಲ್ಯದಲ್ಲಿ ಆಗುವ ಬದಲಾವಣೆ ಹಣದ ರೂಪದಲ್ಲಿ ಕಾಣುತ್ತದೆ ಅಷ್ಟೇ. ಹೀಗೆ ವಸ್ತುವಿನ ಮೌಲ್ಯ ನಿರ್ಧರಿಸುವವರು ಯಾರು? ಆ ಮೌಲ್ಯವನ್ನ ಸರಿ ಇದೆ ಎಂದು ಹೇಳುವರು ಯಾರು? ನಮ್ಮ ಹಣಕಾಸು ಚರಿತ್ರೆಗೆ ದೊಡ್ಡ ಇತಿಹಾಸವಿಲ್ಲ. ಜಗತ್ತಿನ ಉಗಮದಿಂದ ಇದನ್ನ ಜಗತ್ತಿನ ಎಲ್ಲರಿಗೂ ಅನ್ವಯವಾಗುವಂತೆ ಒಂದು ನಿಯಮವನ್ನ ತರಲು ಸಾಧ್ಯವಾಗಿಲ್ಲ. ಹಣಕಾಸು ವ್ಯವಸ್ಥೆಯಲ್ಲಿನ ಲೋಪ ದೋಷಗಳು ಜಗತ್ತಿನ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com