ಉದ್ದಿಮೆಗಳ ಯಶಸ್ಸಿಗೆ ಸಿದ್ಧ ಸೂತ್ರಗಳಿವೆಯೇ?

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಉದ್ದಿಮೆಗಳ ಯಶಸ್ಸಿಗೆ ಸಿದ್ಧ ಸೂತ್ರಗಳಿವೆಯೇ?
ಉದ್ದಿಮೆಗಳ ಯಶಸ್ಸಿಗೆ ಸಿದ್ಧ ಸೂತ್ರಗಳಿವೆಯೇ?

ಕೋವಿಡ್ ಹತ್ತಾರು ವರ್ಷದಿಂದ ಕಟ್ಟಿದ್ದ ಸಂಸ್ಥೆಗಳನ್ನ ನೆಲ ಕಚ್ಚಿಸಿದೆ. ಈ ಸಮಸ್ಯೆ ಎಲ್ಲಿಯವರೆಗೆ ಮುಂದುವರಿಯಬಹುದು ಎನ್ನುವ ನಿಖರತೆ ಕೂಡ ಯಾರಿಗೂ ಇಲ್ಲ. ಒಂದು ಅಂದಾಜಿನ ಪ್ರಕಾರ ಮಾರ್ಚ್ ಅಥವಾ ಏಪ್ರಿಲ್ 2021ರ ವೇಳೆಗೆ ಕೋವಿಡ್ ಲಸಿಕೆ ಬರತ್ತದೆ. ಇದನ್ನ ಜಗತ್ತಿನ ಕೊನೆಯ ಪ್ರಜೆಯವರಿಗೆ ತಲುಪಿಸಲು ಇನ್ನೊಂದು ವರ್ಷ ಖಂಡಿತ ಬೇಕಾಗುತ್ತದೆ.

ಅಲ್ಲಿಯವರೆಗೆ ವ್ಯಾಪಾರಸ್ಥರು ಏನು ಮಾಡಬೇಕು? ಹತ್ತಾರು ವರ್ಷ ಕಟ್ಟಿ ಬೆಳಸಿದ ಸಂಸ್ಥೆ ಕಣ್ಣೆದುರಿಗೆ ನಶಿಸಿ ಹೋಗುವುದನ್ನ ಯಾರು ತಾನೇ ಸಹಿಸಿಕೊಳ್ಳಲು ಸಾಧ್ಯ? ಯಶಸ್ವಿ ಉದ್ಯಮಿ ಎನ್ನಿಸಿಕೊಳ್ಳಲು ಹತ್ತಾರು ಮೂಲಭೂತ ತತ್ವಗಳನ್ನ ಪಾಲಿಸಬೇಕಾಗುತ್ತದೆ. ಇವತ್ತಿನ ಲೇಖನದಲ್ಲಿ ಅಂತಹ ಒಂದಷ್ಟು ಮೂಲಭೂತ ತತ್ವಗಳ ಬಗ್ಗೆ ತಿಳಿದುಕೊಳ್ಳೋಣ. ಈ ತತ್ವಗಳನ್ನ ಯಾರು ಪಾಲಿಸಕೊಂಡು ಬಂದಿರುತ್ತಾರೆ, ಅಂತಹವರಿಗೆ ಇವತ್ತಿನ ವಿಷಮ ಪರಿಸ್ಥಿತಿಯಲ್ಲಿ ಕೂಡ ಹೆಚ್ಚಿನ ಹೊಡೆತ ಬೀಳುವುದಿಲ್ಲ. ಯಾರು ಈ ತತ್ವವನ್ನ ಈ ಹಿಂದೆ ಅಳವಡಿಸಿಕೊಳ್ಳಲು ವಿಫಲರಾದರೂ ಅವರಿಗೆ ಈಗ ಇದನ್ನ ಅಳವಡಿಸಿಕೊಳ್ಳಲು ಸಿಕ್ಕ ಅವಕಾಶ ಎಂದು ಧನಾತ್ಮಕವಾಗಿ ತಿಳಿದು ಇದನ್ನ ಅಳವಡಿಸಿಕೊಳ್ಳುವುದು ಉತ್ತಮ.

ಸರಳ ವ್ಯಾಪಾರಕ್ಕೆ ಬೇಕು ಸರಳ ಸೂತ್ರಗಳು:

  1. ಮೂಲಭೂತ ತತ್ವಕ್ಕೆ ಬದ್ಧವಾಗಿರಿ: ಗಮನಿಸಿ ಹಿಂದೆಲ್ಲಾ ವ್ಯಾಪಾರ ಎಂದರೆ, ಒಂದು ಪ್ರದೇಶದಲ್ಲಿ ಹೇರಳವಾಗಿ ಸಿಗುವ ವಸ್ತುವನ್ನ ಸಿಗದ ಕಡೆಗೆ ತಂದು ಮಾರುವುದು ತನ್ಮೂಲಕ ಒಂದಷ್ಟು ಹಣವನ್ನ ಲಾಭದ ರೂಪದಲ್ಲಿ ಗಳಿಸುವುದು ಎಂದಾಗಿತ್ತು. ಇವತ್ತು ಇದರ ಜೊತೆಗೆ ಸಂಸ್ಥೆ ಮುಂದೆ ಹತ್ತು ಅಥವಾ ಇಪ್ಪತ್ತು ವರ್ಷದಲ್ಲಿ ಕಾಣಬಹುದಾದ ಸಂಭಾವ್ಯ ಲಾಭದ ಮೇಲೆ ಲೆಕ್ಕಾಚಾರ ಮಾಡಿ ಇಂದು ಸಂಸ್ಥೆಯ ಮೌಲ್ಯ ಇಷ್ಟು ಎಂದು ಹೇಳುವ ಪರಿಪಾಟು ಬೆಳದಿದೆ. ಇಂದು ನಮ್ಮ ಸಮಾಜ ಹೆಚ್ಚು ಹೆಚ್ಚು ಅಸ್ಥಿರವಾಗುತ್ತ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ' ವ್ಯಾಲ್ಯೂವೇಶನ್ ಗೇಮ್' ಹಿಂಬದಿಯ ಸ್ಥಾನವನ್ನ ಪಡೆಯುತ್ತದೆ. ಹೀಗಾಗಿ ಕೊರೋನೋತ್ತರ ಬದಲಾವಣೆ ಅವಶ್ಯಕ. ವ್ಯಾಪಾರದ ಮೂಲಭೂತ ತತ್ವಕ್ಕೆ ಬದ್ಧರಾಗಿದ್ದಾರೆ ಅದು ತಾನಾಗೇ ತನ್ನ ನೈಜ್ಯ ಮೌಲ್ಯವನ್ನ ದಕ್ಕಿಸಕೊಳ್ಳುತ್ತದೆ.
  2. ಸಂಸ್ಥೆಯ ಕೆಲಸಗಾರರು ಸಂಸ್ಥೆಯ ಆಸ್ತಿ: ಒಂದು ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಸಂಸ್ಥೆಯ ಮುಖ್ಯಸ್ಥನ ವಿಷನ್ ಎಷ್ಟು ಮುಖ್ಯವೂ ಅದನ್ನ ಸಾಕಾರ ಮಾಡಲು ಪ್ರಯತ್ನಿಸುವ ನೌಕರರು ಕೂಡ ಅಷ್ಟೇ ಅಥವಾ ಅದಕ್ಕಿಂತ ಮುಖ್ಯ. ಹೀಗಾಗಿ ಯಾರು ತನ್ನ ಕೆಲಸಗಾರರನ್ನ ತನ್ನ ಸಂಸ್ಥೆಯ ಆಸ್ತಿ ಎಂದು ಪರಿಗಣಿಸಿ ಅವರನ್ನ ಚನ್ನಾಗಿ ನಡೆಸಿಕೊಂಡಿರುತ್ತಾರೆ ಅವರು ಇಂತಹ ಸಂದರ್ಭದಲ್ಲಿ ಹೆಚ್ಚಿನ ನೋವು ಅನುಭವಿಸುವುದಿಲ್ಲ. ನಂಬಿಕಸ್ಥ ಕೆಲಸಗಾರ ಸಣ್ಣ ಪುಟ್ಟ ವಿಷಯಗಳಿಗೆ ಸಂಸ್ಥೆಯನ್ನ ಬಿಟ್ಟು ಹೋಗುವುದಿಲ್ಲ. ಹೀಗಾಗಿ ಸಂಸ್ಥೆಯ ನೌಕರರನ್ನ ನಡೆಸಿಕೊಳ್ಳುವ ರೀತಿ ಕೂಡ ಬಹಳ ಮುಖ್ಯ.
  3. ಸಂಸ್ಥೆಯ ಇತರೆ ಪಾಲುದಾರರನ್ನ, ಆಡಳಿತ ಮಂಡಳಿಯನ್ನ, ಇತರೆ ಉನ್ನತ ಅಧಿಕಾರಿಗಳನ್ನ ಉತ್ತೇಜಿಸುವ ಕೆಲಸ ಮಾಡಬೇಕು: ಒಂದು ಸಂಸ್ಥೆಯ ನಾಯಕನಾದವನ ಕೆಲಸ ತನ್ನೊಂದಿಗೆ ಇತರರನ್ನ ಉತ್ತೇಜಿಸಿ ಕರೆದು ಕೊಂಡು ಹೋಗುವುದು. ಕೆಲವೊಮ್ಮೆ ಅದರಲ್ಲೂ ಸಂಸ್ಥೆ ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ಬಹುಬೇಗ ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅಂತಹ ಸಮಯದಲ್ಲಿ ನಾಯಕನಾದವನು ಮುಂದೆ ನಿಂತು ನಾಳೆ ನಮ್ಮದೇ ಎನ್ನುವ ಭಾವನೆಯನ್ನ ತುಂಬಬೇಕು. ಎಲ್ಲರನ್ನೂ ಪ್ರೇರೇಪಿಸಬೇಕು.
  4. ಹಣ, ಅಥವಾ ಲಾಭ ಬಹಳ ಮುಖ್ಯ ಆದರೆ ಅದೇ ಪ್ರಮುಖವಾಗಬಾರದು: ಯಾವುದೇ ಸಂಸ್ಥೆಯಿರಲಿ ಅದು ಲಾಭದಾಯಕವಲ್ಲದಿದ್ದರೆ ಬಹಳ ದಿನ ಅದನ್ನ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ವ್ಯಾಪಾರದಲ್ಲಿ ಲಾಭ ಎನ್ನುವುದು ಆಕ್ಸಿಜನ್ ಇದ್ದಹಾಗೆ. ಹಣಗಳಿಸುವುದು ಎರಡನೇ ಸ್ಥಾನದಲ್ಲಿರಬೇಕು. ಉತ್ತಮ ಸೇವೆಯನ್ನ ನೀಡುತ್ತಾ ಲಾಭವನ್ನ ಕೂಡ ಮಾಡಬೇಕು. ಇದು ಎರಡು ಅಲಗಿನ ಕತ್ತಿ, ಕೆಲವರು ಲಾಭದ ಹಿಂದೆ ಬಿದ್ದು ಸೇವೆಯಲ್ಲಿ ವ್ಯತ್ಯಾಸ ಮಾಡುತ್ತಾರೆ. ಕೆಲವರು ಸೇವೆಯ ಹೆಸರಲ್ಲಿ ಲಾಭಕ್ಕೆ ತಿಲಾಂಜಲಿ ಇಡುತ್ತಾರೆ. ಎರಡೂ ತಪ್ಪು. ಇವೆರೆಡರ ಮಧ್ಯದ ಒಂದು ಬಿಂದುವನ್ನ ಕಂಡುಕೊಳ್ಳುವ ಕಾರ್ಯ ನಾಯಕನ ಹೆಗಲೇರುತ್ತದೆ.
  5. ಖರ್ಚು ಕಡಿಮೆ ಮಾಡಬೇಕು: ಇದೊಂದು ಎಲ್ಲರೂ ಹೇಳುವ ಸಾಮಾನ್ಯ ಬುದ್ಧಿ ಮಾತು. ಅದು ವೈಯಕ್ತಿಕ ನೆಲೆಗಟ್ಟಿನಲ್ಲಿರಬಹುದು ಅಥವಾ ಸಂಸ್ಥೆಯ ವಿಷಯವಿರಬಹುದು. ಆದರೆ ಎಷ್ಟು ಕಡಿಮೆ ಮಾಡಬೇಕು? ಅಥವಾ ಇದಕ್ಕೇನಾದರೂ ಸಿದ್ಧ ಸೂತ್ರವಿದೆಯೇ? ಹೌದು ಇದಕ್ಕೊಂದು ಸರಳ ಸೂತ್ರವಿದೆ. ನಿಮ್ಮ ವ್ಯಾಪಾರದಲ್ಲಿ ತೊಡಗಿರುವ ಎದುರಾಳಿ ಎಷ್ಟು ಖರ್ಚು ಮಾಡುತ್ತಾನೆ ಅದಕ್ಕಿಂತ ಒಂದೈದು ಪ್ರತಿಶತ ಕಡಿಮೆಮಾಡಿದರೆ ಸಾಕು! ಈ ಸರಳ ಸೂತ್ರ ಪಾಲಿಸಲು ಇರುವ ಕೆಲಸ ಬೆಟ್ಟದಷ್ಟು.
  6. ಎಂದೆದಿಗೂ ಗ್ರಾಹಕ ರಾಜ: ಇದೊಂದು ಶತಮಾನಗಳಿಂದ ಬದಲಾಗದ ಸೂತ್ರ. ದುಡ್ಡು ಕೊಟ್ಟು ಸೇವೆ ಅಥವಾ ಸರುಕು ಕೊಳ್ಳುವ ಗ್ರಾಹಕ ಬಾಸ್, ದೇವರು, ಎಲ್ಲವೂ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕನ ಬಳಿ ಒಂದಲ್ಲ ಹತ್ತಾರು ಆಯ್ಕೆಗಳಿವೆ, ಹೀಗಾಗಿ ಗ್ರಾಹಕ ತನಗೆ ಎಲ್ಲಿ ಹಣಕ್ಕೆ ತಕ್ಕ ಮೌಲ್ಯ ದೊರೆಯುತ್ತದೆ, ಎಲ್ಲಿ ಅವನನ್ನ ಗೌರವದಿಂದ ನಡೆಸಿಕೊಳ್ಳುತ್ತಾರೆ ಅಲ್ಲಿಗೆ ಹೊರಟು ಬಿಡುತ್ತಾನೆ. ಒಮ್ಮೆ ಅವನ ಮನಸ್ಸು ಗೆದ್ದು ಬಿಟ್ಟರೆ ಕೊರೋನ ಬಂದರೂ ಅವನು ಹುಡುಕಿಕೊಂಡು ವಾಪಸ್ಸು ಬರುತ್ತಾನೆ.
  7. ಹೊಸ ತಂತ್ರಜ್ಞಾನವನ್ನ ಅಪ್ಪಿಕೊಳ್ಳಬೇಕು: ಕೆಲವೊಮ್ಮೆ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಹೀಗಾಗಿ ಖರ್ಚು ಕೂಡ ಸಹಜವಾಗೇ ಕಡಿಮೆಯಾಗುತ್ತದೆ. ಹೊಸದು ತಂತ್ರಜ್ಞಾನವೇ ಆಗಿರಬೇಕು ಎಂದಿಲ್ಲ, ವ್ಯಾಪಾರಕ್ಕೆ ಅನುಕೂಲ ಮಾಡುವ, ವಹಿವಾಟು ವೃದ್ಧಿಸಲು ಸಹಾಯ ಮಾಡುವ ಯಾವುದೇ ವಿಷಯವಿರಲಿ ಅದಕ್ಕೆ ಬಹಳ ಬೇಗ ಹೊಂದಿಕೊಳ್ಳಬೇಕು. ಅಡಾಪ್ಟಬಿಲಿಟಿ ವ್ಯಾಪಾರದಲ್ಲಿ ಬಹಳ ಮುಖ್ಯ.
  8. ವ್ಯಾಪಾರ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಅರಿವಿರಬೇಕು, ಬದಲಾವಣೆಗೆ ತೆರೆದುಕೊಳ್ಳಬೇಕು: ಫ್ಲೆಕ್ಸಿಬಿಲಿಟಿ ಎನ್ನುವುದು ಕೇವಲ ದೇಹಕ್ಕೆ ಸೀಮಿತವಾದ ಪದವಲ್ಲ. ಅದು ಬಿಸಿನೆಸ್ ವಿಷಯದಲ್ಲಿ ಸಹಾಯ ಹೆಚ್ಚಿನ ಮಹತ್ವವನ್ನ ಪಡೆದಿದೆ. ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನ ಗಮನಿಸುತ್ತಾ ಬಂದವರು ತಪ್ಪು ನಿರ್ಧಾರಗಳನ್ನ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ ದೂರದ ಚೀನಾದ ವುಹಾನ್ ನಲ್ಲಿ ಆಗುತ್ತಿರುವ ವಿಷಯದ ಅಲ್ಪಸ್ವಲ್ಪ ಜ್ಞಾನವಿದ್ದ ವ್ಯಾಪಾರಸ್ಥ ಕೋಟ್ಯಂತರ ಬಂಡವಾಳ ಹೂಡಿ ಹೊಸ ಉದ್ದಿಮೆಯನ್ನ ಪ್ರಾರಂಭಿಸುತ್ತಿರಲಿಲ್ಲ. ಹೀಗಾಗಿ ಅಂತರರಾಷ್ಟ್ರೀಯ ಬೆಳವಣಿಗೆಗಳ ಕಡೆಗೆ ಗಮನವಿರಬೇಕು. ಬದಲಾದ ಸಂದರ್ಭಕ್ಕೆ ತಕ್ಕಂತೆ ವೇಗವಾಗಿ ಹೊಂದಿಕೊಳ್ಳುವ ಮನಸ್ಥಿತಿ ಬೆಳಸಿಕೊಳ್ಳಬೇಕು.
  9. ಒಂದೇ ಕೆಲಸ ಮಾಡಲು ಹತ್ತು ದಾರಿಯಿರುತ್ತದೆ. ಹೊಸದಾರಿ ಹುಡಕುವುದು ಮುಖ್ಯ: ಹತ್ತು ದಾರಿಗಳಿದ್ದರೂ ಅವೆಲ್ಲವುಗಳ ಮೂಲ ಒಂದೇ ಆಗಿರುತ್ತದೆ. ನಾವು ತಲುಪಬೇಕಾದ ಗುರಿಯೂ ಒಂದೇ ಆಗಿರುತ್ತದೆ. ಹೀಗಾಗಿ ಸಾಮಾನ್ಯವಾಗಿ ಎಲ್ಲರೂ ಮಾಡಿದ ರೀತಿಯಲ್ಲಿ ಮಾಡುವಕ್ಕಿಂತ ಅಲ್ಪಸ್ವಲ್ಪ ಭಿನ್ನವಾಗಿ ಮಾಡಿದರೆ ಗ್ರಾಹಕ ಬಹಳ ಇಷ್ಟ ಪಡುತ್ತಾನೆ. ಸಣ್ಣ ಉದಾಹರಣೆಯನ್ನ ನೋಡೋಣ ರಸ್ತೆ ಬದಿಯಲ್ಲಿ ಪಾನಿಪುರಿ ಮಾರುವವರು ಹತ್ತಾರು ಜನರಿದ್ದಾರೆ ಅಲ್ಲವೇ? ಅದೇ ಕೆಲಸವನ್ನ ಕೈಗೆ ಗ್ಲೋವ್ಸ್ ಹಾಕಿಕೊಂಡು, ಮಿನರಲ್ ವಾಟರ್ ಬಳಸಿ ಮಾಡಿದರೆ? ನೀವು ಹತ್ತು ಜನರಿಗಿಂತ ಬಿನ್ನರಾದಿರಿ, ಗ್ರಾಹಕ ಇಷ್ಟಪಡುತ್ತಾನೆ. ಇದೆ ತತ್ವ ವ್ಯಾಪಾರದ ಎಲ್ಲಾ ರಂಗಗಳಿಗೂ ಅನ್ವಯ. ಇದ್ದುದರಲ್ಲೇ ನಾವು ಹೇಗೆ ಬೇರೆಯವರಿಗಿಂತ ಉತ್ತಮವಾಗಿ 'ಪ್ರೆಸೆಂಟ್' ಮಾಡಿ ಕೊಲ್ಲಬಲ್ಲೆವು ಎನ್ನುವುದು ಬಹಳ ಮುಖ್ಯ.

ಮೇಲಿನ ಸೂತ್ರಗಳನ್ನ ಪಾಲಿಸುವುದರ ಜೊತೆಗೆ ವ್ಯಾಪಾರಸ್ಥರು ಮಾಡುವ ಸಾಮಾನ್ಯ ತಪ್ಪುಗಳನ್ನ ಕಡಿಮೆ ಮಾಡಿದರೆ ಕೂಡ ಗೆಲುವುದು ಸಿಗುತ್ತದೆ. ಸಾಮಾನ್ಯವಾಗಿ ಮಾಡುವ ತಪ್ಪುಗಳ ಪಟ್ಟಿ ಹೀಗಿದೆ

  1. ಹಣವನ್ನ ಬೆರೆಸುವುದು: ಇದು ಅತಿ ಸಾಮಾನ್ಯ ತಪ್ಪು. ಸಂಸ್ಥೆಯ ಹಣ ಮತ್ತು ನಿಮ್ಮ ಹಣ ಎಂದೂ ಬೆರಕೆಯಾಗಬಾರದು. ಆದರೆ ಮುಕ್ಕಾಲು ಪಾಲು ಜನ ನಾನು ಬೇರೆಯಲ್ಲ ಸಂಸ್ಥೆ ಬೇರೆಯಲ್ಲ ಎನ್ನುವ ಮನೋಭಾವದಿಂದ ಎಲ್ಲವನ್ನೂ ಬೆರೆಸುತ್ತಾರೆ. ನಿಮ್ಮ ಖರ್ಚು ವೆಚ್ಚ, ಸಂಸ್ಥೆಯ ಖರ್ಚು ವೆಚ್ಚದ ಜೊತೆಗೆ ಸೇರಿಸಬಾರದು.
  2. ವ್ಯಾಪಾರಕ್ಕೆ ಅಥವಾ ಸಂಸ್ಥೆಗೆ ಪಡೆದ ಸಾಲವನ್ನ ವೈಯಕ್ತಿಕ ಬಳಕೆಗಾಗಿ ಉಪಯೋಗಿಸುವುದು.
  3. ನಿಖರವಾದ ಲೆಕ್ಕ ಪತ್ರಗಳನ್ನ ಇಡದೆ ಹೋಗುವುದು.
  4. ಸಂಸ್ಥೆಯ ವಾರ್ಷಿಕ ಬಜೆಟಿಂಗ್ ತಯಾರು ಮಾಡದೆ ಇರುವುದು.
  5. ಸರಿಯಾದ ಲಾಭ ನಷ್ಟದ ಅರಿವಿಲ್ಲದೆ ಇರುವುದು.

ಕೊನೆ ಮಾತು: ಮೇಲಿನ ಸೂತ್ರಗಳನ್ನ ಪಾಲಿಸಿದ ಮಾತ್ರಕ್ಕೆ ಯಶಸ್ಸು ಪಕ್ಕಾ ಎಂದು ತಿಳಿದರೆ ಅದು ತಪ್ಪು. ಇವುಗಳನ್ನ ಪಾಲಿಸದಿದ್ದರೆ ಸೋಲು ಮಾತ್ರ ಗ್ಯಾರಂಟಿ. ಹೀಗಾಗಿ ಈ ಸರಳ ಸೂತ್ರಗಳನ್ನ ಪಾಲಿಸುತ್ತಿರಬೇಕು. ಜೊತೆಗೆ ಸದಾ ಎಚ್ಚರಿಕೆಯ ಸ್ಥಿತಿಯಲ್ಲಿದ್ದು ಸಮಾಜದ ಆಗು ಹೋಗುಗಳ ಮೇಲೆ ಹದ್ದಿನ ಕಣ್ಣಿಟ್ಟಿರಬೇಕು. ಬದಲಾದ ಸನ್ನಿವೇಶಕ್ಕೆ ತಕ್ಷಣ ಹೊಂದಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು. ಅಯ್ಯೋ ಇದು ನಮ್ಮಪ್ಪ ಪ್ರಾರಂಭಿಸಿದ ವ್ಯಾಪಾರ ಎನ್ನುವ ಸೆಂಟಿಮೆಂಟಿನ ಜೊತೆಗೆ ಹೊಸ ಆವಿಷ್ಕಾರ, ತಂತ್ರಜ್ಞಾನದ ಸಾಥ್ ಕೂಡ ಬೇಕೇ ಬೇಕು. ವ್ಯಾಪಾರ ನಿಲ್ಲುವುದಕ್ಕೆ ಒಂದೇ ಒಂದು ಸಿಂಗಲ್ ರೆಸಿಪಿ ಇಲ್ಲ. ಮೇಲಿನ ಸೂತ್ರಗಳ ಬಳಸಿ ಹೊಸ ಹೊಸ ಕಷಾಯ ರೆಡಿ ಮಾಡುತ್ತಿರಬೇಕು.

ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com