ಕೋವಿಡ್ ಆರ್ಥಿಕ ಮುಗ್ಗಟ್ಟು ಬಿಡಿಸಲಾಗದ ಒಗಟು?

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 22nd October 2020 03:11 AM  |   Last Updated: 22nd October 2020 03:11 AM   |  A+A-


file pic

ಸಂಗ್ರಹ ಚಿತ್ರ

Posted By : Srinivas Rao BV
Source : Online Desk


ಕೊರೋನ ಜಗತ್ತಿನಾದ್ಯಂತ ನಿರುದ್ಯೋಗವನ್ನ ಹೆಚ್ಚಿಸಿದೆ. ಯೂರೋಪಿನ ಬಹತೇಕ ದೇಶಗಳಲ್ಲಿ ನಿರುದ್ಯೋಗ ಭತ್ಯೆಯನ್ನ ನೀಡಲಾಗುತ್ತಿದೆ. ಈ ವೈರಸ್ ಜಗತ್ತನ್ನ ಆಕ್ರಮಿಸದಿದ್ದರೂ ತಂತ್ರಜ್ಞಾನ ಬಹಳಷ್ಟು ಕೆಲಸಗಳನ್ನ ಇಲ್ಲವಾಗಿಸುತ್ತಿತ್ತು ಎನ್ನುವುದು ನಮಗೆಲ್ಲಾ ತಿಳಿದ ವಿಷಯವಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎನ್ನುವ ತಂತ್ರಜ್ಞಾನ ಬಹಳ ಕೆಲಸವನ್ನ ಸುಲಭ ಮಾಡಿ ಬಿಡುತ್ತದೆ. ಕೊರೋನ ಎನ್ನುವ ವೈರಸ್ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಸನ್ನಿವೇಶವನ್ನ ಮತ್ತಷ್ಟು ಬಿಗಡಾಯಿಸಿದೆ.

ಇವೆಲ್ಲವುಗಳ ಮಧ್ಯೆ ವಿಷಯವನ್ನ ಎಷ್ಟು ಬೇಕು ಅಷ್ಟು ಮಾತ್ರ ಜನರಿಗೆ ತಲುಪಿಸುವ ಪರಿಪಾಠ ನಡೆಯುತ್ತಿದೆ. ಮೊದಲೇ ಕಂಗೆಟ್ಟಿರುವ ಮನಸ್ಸಿಗೆ ಇಂತಹ ಋಣಾತ್ಮಕ ಅಂಶಗಳು ಬಹುಬೇಗ ತಟ್ಟುತ್ತವೆ. ಇದೆ ತಿಂಗಳು ಅಂದರೆ 14/10/2020ರ ಬುಧವಾರ ವರ್ಲ್ಡ್ ಎಕನಾಮಿಕ್ ಫೋರಮ್ ಒಂದು ವರದಿಯನ್ನ ಬಿಡುಗಡೆ ಮಾಡಿದೆ.  2024/25ರ ವೇಳೆಗೆ ಎಂಟೂವರೆ ಕೋಟಿ ಕೆಲಸಗಳು ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಎನ್ನವಂತಾಗುತ್ತದೆ ಎನ್ನುವುದು ಆ ವರದಿಯ ಸಾರ. ಕೋವಿಡ್ ರಿಸೆಶನ್ ಇದಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶವಾದರೂ ಟೆಕ್ನಾಲಜಿ ಇಂತಹ ಹಲವಾರು ಕೆಲಸಗಳನ್ನ ಕೊನೆಗಾಣಿಸುವುದು ಕೂಡ ಸುಳ್ಳಲ್ಲ. ಕೋವಿಡ್ ಕಾರಣದಿಂದ ಈ ವರ್ಷ ಜಗತ್ತಿನಾದ್ಯಂತ ಹತ್ತಿರಹತ್ತಿರ ಹನ್ನೆರಡು ಕೋಟಿ ಜನರು ಕಡು ಬಡತನಕ್ಕೆ ಹೋಗಿದ್ದಾರೆ ಎನ್ನುವುದು ವರ್ಲ್ಡ್ ಬ್ಯಾಂಕ್ ಮಾಡಿರುವ ಅಂದಾಜು ಅಂಕಿ-ಅಂಶ. ಅಂಕಿ ಸಂಖ್ಯೆಯ ಆಟಗಳು ಏನೇ ಇರಲಿ ಈ ರೋಗ ಜನರ ನಡುವಿನ ಅಂತರವನ್ನ ಮಾತ್ರ ಹೆಚ್ಚಿಸಿದ್ದು ಯಾರೂ ಅಲ್ಲಗಳೆಯಲು ಬರುವುದಿಲ್ಲ. ಜಗತ್ತಿನಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಬಹಳ ಹೆಚ್ಚಾಗುತ್ತಲೇ ಬಂದಿದೆ. ತಂತ್ರಜ್ಞಾನ ಹೆಚ್ಚಿದಷ್ಟೂ ಅದನ್ನ ಬಳಸಿಕೊಂಡು ಕೇವಲ ಬೆರಳೆಣಿಕೆ ವ್ಯಕ್ತಿಗಳು ಜಗತ್ತಿನ ಸಂಪತ್ತಿನ ಮೇಲೆ ಒಡೆತನವನ್ನ ಸಾಧಿಸುತ್ತಿದ್ದಾರೆ. ಉಳಿದಂತೆ ಬಡವ ದಿನದಿಂದ ದಿನಕ್ಕೆ ಹೆಚ್ಚು ಬಡತನದ ಅಪ್ಪುಗೆಗೆ ಸಿಲುಕುತ್ತಲೆ ಹೋಗುತ್ತಿದ್ದಾನೆ. ಕೋವಿಡ್ ಈ ಅಂತರದ ವೇಗವನ್ನ ದುಪ್ಪಟ್ಟು ಮಾಡಿದೆ.

2024ರ ವೇಳೆಗೆ ಅಷ್ಟೊಂದು ಕೆಲಸಗಳು ಇಲ್ಲವಾದರೆ ಗತಿಯೇನು? ಎನ್ನುವ ಆತಂಕಕ್ಕೆ ಮೊದಲು ನಾವು ವರದಿಯನ್ನ ಪೂರ್ಣ ಓದಬೇಕು. ಮೊದಲೇ ಹೇಳಿದಂತೆ ಇಂದು ಬೇಕಾದ ವಿಷಯವನ್ನ ಹೇಳಿ, ಬೇಡ ಅನ್ನಿಸಿದ್ದು ಬಿಡುವ ಪರಿಪಾಠ ಹೆಚ್ಚಾಗುತ್ತಿದೆ. ಅಷ್ಟೇ ಸಂಖ್ಯೆಯ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಹೊಸ ಕೆಲಸಗಳು ಸೃಷ್ಟಿಯಾಗುತ್ತವೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಇವು ಹೊಸ ಕೆಲಸಗಳು! ಅಂದರೆ ಪೇ ರೂಲ್ ತಯಾರಿಸುತ್ತಿದ್ದ ವ್ಯಕ್ತಿಯ ಕೆಲಸ ಇರುವುದಿಲ್ಲ, ಅಕೌಂಟೆಂಟ್ ಕೆಲಸ ಬಹಳ ಕಡಿಮೆಯಾಗುತ್ತದೆ. ಡೇಟಾ ಎಂಟ್ರಿ ಆಪರೇಟರ್ ಅದರಲ್ಲೂ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಂತಹ ಕೆಲಸಗಾರರ ಕೆಲಸಗಳು ಇಲ್ಲವಾಗುತ್ತದೆ. ಇದರರ್ಥ ಕೆಲಸಗಳು ಪೂರ್ಣ ನಶಿಸಿ ಹೋಯಿತು ಎಂದಲ್ಲ. ಈ ಕೆಲಸ ಮಾಡುತ್ತಿದ್ದವರು ತಮ್ಮನ್ನ ಬದಲಾವಣೆಗೆ ಒಗ್ಗಿಸಿಕೊಳ್ಳಬೇಕು. ಕೌಶಲ್ಯ ಅಭಿವೃದ್ಧಿ ಮಾಡಿಕೊಂಡು ಹೊಸ ಕೆಲಸಕ್ಕೆ ಹೊಂದಿಕೊಳ್ಳಬೇಕು. ಇನ್ನೊಂದು ಉದಾಹರಣೆಯನ್ನ ನೋಡೋಣ, ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತಿದ್ದ ಸೇಲ್ಸ್ ಮ್ಯಾನ್ ಗಳ ಕೆಲಸ ಮುಂದಿನ ದಿನಗಳಲ್ಲಿ ಮಾಯವಾಗುತ್ತದೆ. ಕಾಫಿ ಪುಡಿ, ಡಿಟರ್ಜೆಂಟ್ ಪೌಡರ್ ಇತ್ಯಾದಿಗಳ ಮಾರಾಟ ಕುಳಿತಲ್ಲಿಂದ ಮುಗಿಸಿಬಿಡಬಹುದು. ಅಂದ ಮಾತ್ರಕ್ಕೆ ಸೇಲ್ಸ್ ಮ್ಯಾನ್ ಕೆಲಸ ಇಲ್ಲ ಎನ್ನುವಂತೆಯೂ ಇಲ್ಲ. ಉನ್ನತ ಮಟ್ಟದ ಇನ್ನೊಂದು ಪದಾರ್ಥವನ್ನ ಮಾರಲು ಅದನ್ನ ಗ್ರಾಹಕನಿಗೆ ತಿಳಿ ಹೇಳಲು ಆತ ಬೇಕಾಗುತ್ತಾನೆ. ಗಮನಿಸಿ ಆದರೆ ಅವನ ತಿಳಿವಳಿಕೆಯ ಮಟ್ಟ ಹೆಚ್ಚಾಗಿರಬೇಕಾಗುತ್ತದೆ.

ಇವೆಲ್ಲುವುಗಳ ಅರ್ಥ ಬಹಳ ಸರಳ. ಬದಲಾವಣೆ ಮತ್ತು ಅನಿಶ್ಚಿತತೆ ಇವೆರೆಡೂ ಬದುಕಿನ ಅವಿಭಾಜ್ಯ ಅಂಗವಾಗಲಿವೆ. ಬದಲಾವಣೆಗೆ ಹೊಂದಿಕೊಳ್ಳುತ್ತ, ಅನಿಶ್ಚಿತತೆಗೆ ಕೂಡ ನಾವು ತಯಾರಾಗಬೇಕಿದೆ. ಹಿಂದೆ ಒಂದು ಕೆಲಸಕ್ಕೆ ಸೇರಿದರೆ ಹತ್ತು, ಇಪ್ಪತ್ತು ಕೆಲವೊಮ್ಮೆ ನಿವೃತ್ತಿ ತನಕ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಇದರ ವ್ಯಾಖ್ಯೆ ಬದಲಾಗಲಿದೆ. ಹೊಸ ಕೆಲಸಕ್ಕೆ ಶೀಘ್ರ ಗತಿಯಲ್ಲಿ ಹೊಂದಿಕೊಳ್ಳುವ ಮತ್ತು ಕೌಶಲ್ಯ ವೃದ್ಧಿಕೊಳ್ಳುವವರು ಮಾತ್ರ ಕೆಲಸ ಉಳಿಸಿಕೊಳ್ಳಬಲ್ಲರು. ಉಳಿದವರ ಕಥೆಯೇನು? ಮುಂಬರುವ ದಿನಗಳಲ್ಲಿ ಕೆಲಸವಿಲ್ಲ ಎನ್ನುವುದಕ್ಕಿಂತ ಆರೋಗ್ಯಕರ ರೀತಿಯಲ್ಲಿ ಮನುಷ್ಯ ಹೇಗೆ ಯಾವುದಾದರೂ ಒಂದು ವಿಷಯದಲ್ಲಿ ತನ್ನನ್ನ ತೊಡಗಿಸಿಕೊಳ್ಳಬಹುದು ಎನ್ನುವುದು ಅತ್ಯಂತ ಮಹತ್ವದ ಪ್ರಶ್ನೆಯಾಗಲಿದೆ. ಜಗತ್ತು ಹೆಚ್ಚಿನ ತಂತ್ರಜ್ಞಾನಕ್ಕೆ ತೆರೆದುಕೊಂಡಂತೆಲ್ಲಾ ಹೆಚ್ಚು ಹೆಚ್ಚು ಜನ ಬದುಕಿನಾಟದಲ್ಲಿ ಲೆಕ್ಕಕಿಲ್ಲದ ಜೀವಂತ ಶವಗಳಾಗಿ ಬದಲಾಗುತ್ತಾರೆ. ಇವರು ದಂಗೆ ಏಳದಂತೆ ತಡೆಯಲು ಯೂನಿವರ್ಸಲ್ ಬೇಸಿಕ್ ಇನ್ಕಮ್ ನಂತಹ ಸ್ಕೀಮ್ ಗಳು ಜಾರಿಗೆ ಬಂದರೆ ಅದು ಆಶ್ಚರ್ಯ ಪಡುವ ವಿಷಯವಾಗೇನೂ ಉಳಿಯುವುದಿಲ್ಲ. ಗಮನಿಸಿ ನೋಡಿ ಭಾರತದಂತಹ ದೊಡ್ಡ ದೇಶದಲ್ಲಿ ಕಳೆದ ಆರು ತಿಂಗಳಿಂದ ವ್ಯಾಪಾರ-ವಹಿವಾಟು ಸ್ತಬ್ಧವಾಗಿದ್ದು ಕೂಡ ಸಾಮಾಜಿಕ ಹೋರಾಟ ಅಥವಾ ದಂಗೆಗಳು ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಜನಸಂಖ್ಯೆಯ ಮೆಜಾರಿಟಿ ಜನರಿಗೆ ಊಟಕ್ಕೆ ಕೊರತೆಯಾಗಿಲ್ಲ. ಹೇಗೂ ಏನೋ ಅವರಿಗೆ ಊಟ ಸಿಗುತ್ತಿದೆ. ಬದುಕಿಗೆ ಬೇಕಾದ ಮಿನಿಮಮ್ ಸೌಕರ್ಯಗಳು ಇಲ್ಲದ ಹೀನಾಯ ಸ್ಥಿತಿಯಲ್ಲಿದ್ದರೂ, ಹೊಟ್ಟೆಗೆ ತತ್ವಾರ ಮಾಡದಿದ್ದರೆ ಸಾಕು ಎನ್ನುವ ವಲಯಕ್ಕೆ ಕೋಟ್ಯಂತರ ಜನತೆ ತಲುಪಿಯಾಗಿದೆ. ಈ ಸಂಖ್ಯೆ ಹೆಚ್ಚಾಗುತ್ತದೆ.

ಇಷ್ಟೆಲ್ಲಾ ಓದಿದ ಮೇಲೆ ನಮ್ಮ ವಯೋಮಾನದವರು ಒಂದು ಪ್ರಶ್ನೆಯನ್ನ ಹಾಕಿಕೊಳ್ಳಬೇಕಿದೆ. ನಮ್ಮ ತಂದೆ ಅಥವಾ ತಾತ ಯಾವುದೇ ದೊಡ್ಡ ಸಂಸ್ಥೆಯ ಕೆಲಸಗಾರನಾಗಿರಲಿಲ್ಲ. ತಿಂಗಳ ಸಂಬಳ ಲಕ್ಷಗಳಲ್ಲಿ ಇರಲಿಲ್ಲ. ಹೀಗಿದ್ದೂ ಅವರು ನಮಗಿಂತ ಖುಷಿಯಾಗಿ ಬಾಳಿ ಹೋಗಲಿಲ್ಲವೇ? ಇಂದು ಇರುವ ಬದಲಾವಣೆ-ಅನಿಶ್ಚಿತತೆ ಜಾಗದಲ್ಲಿ ಅಂದು ಸುಖ-ನೆಮ್ಮದಿ ಇರಲಿಲ್ಲವೇ? ಉತ್ತರ ಬಹಳ ಜನರ ಮನದಲ್ಲಿ ಈ ವೇಳೆಗೆ ಮೂಡಿರುತ್ತದೆ.  ಹಾಗಾದರೆ ಕೇವಲ 3 ರಿಂದ 4 ದಶಕಗಳಲ್ಲಿ ನಾವು ಎಡವಿದ್ದೆಲ್ಲಿ? ನಾವು ಮರಳಿ ನಮ್ಮ ಹಿಂದಿನ ವ್ಯವಸ್ಥೆಗೆ ಹೋಗಲು ಸಾಧ್ಯವಿಲ್ಲವೇ? ಇದಕ್ಕೆ ಉತ್ತರ ನಮ್ಮ ಬಳಿಯಿದೆ. ನಾವು ಹೀಗೆ ಬದುಕಬೇಕು ಎಂದು ಮನಸ್ಸು ಮಾಡಿ ಹಾಗೆ ಬದುಕಲು ಶುರು ಮಾಡಿದರೆ ನಮ್ಮ ಜೀವನ ಕ್ರಮವನ್ನ ಬದಲಿಸಲು ಬೇರೆಯವರಿಂದ ಹೇಗೆ ಸಾಧ್ಯ? ಸಾಮಾಜಿಕ ಒತ್ತಡಗಳಿಂದ ದೂರವಾದರೆ ಇದು ಸಾಧ್ಯ. ಒಂದು ಸಣ್ಣ ಉದಾಹರಣೆಯನ್ನ ನೋಡೋಣ. ಕಳೆದ ಇಪ್ಪತ್ತು ವರ್ಷದಲ್ಲಿ ನನ್ನ ಮುಂದೆ ಒಂದಲ್ಲ ಹಲವಾರು ಆಮಿಷಗಳು ಬಂದಿವೆ. ನೂರಾರು ಸ್ಕೀಮ್ ಗಳನ್ನ ಹಿಡಿದುಕೊಂಡು ಹೀಗೆ ಮಾಡೋಣ ಎನ್ನುವ ಜನರು ಬಂದಿದ್ದಾರೆ, ಅವರ ಜೊತೆ ಸೇರುವುದಿರಲಿ, ಇಲ್ಲಿಯವರೆಗೆ ನನ್ನ ಬಳಿ ಕ್ರೆಡಿಟ್ ಕಾರ್ಡ್ ಇಲ್ಲ. ನನಗದರ ಅವಶ್ಯಕತೆ ಇಲ್ಲ. ಹಣವಿಲ್ಲದ ಮೇಲೆ ಅದನ್ನ ಹೇಗೆ ಬಳಸುವುದು? ಕಾಲಕ್ಕೆ ತಕ್ಕಂತೆ ಡೆಬಿಟ್ ಕಾರ್ಡ್ ಬಳಕೆ ಮಾಡುತ್ತಿದ್ದೇನೆ. ಅರ್ಥವಿಷ್ಟೆ ಇವತ್ತಿನ ಬಹುತೇಕ ಸಮಸ್ಯೆಗಳ ಮೂಲ ಕಾರಣ, ಇಲ್ಲದ ಹಣವನ್ನ ಅಥವಾ ಮುಂದೆ ಹತ್ತು ವರ್ಷ ದುಡಿಯಬಹುದಾದ ಸಂಭಾವ್ಯ ಹಣವನ್ನ ಇಂದು ಖರ್ಚು ಮಾಡುವುದು.

ವೆಲ್ತ್ ಕ್ರಿಯೇಷನ್ ಸಮಯಕ್ಕೆ ತಕ್ಕಂತೆ ಆದರೆ ಆಗ ತೊಂದರೆಯಾಗುವುದಿಲ್ಲ, ಅದನ್ನ ಸಾಲದ ಮೂಲಕ ಸೃಷ್ಟಿಸಿದರೆ ಅದೆಲ್ಲಿಯ ವೆಲ್ತ್? ಅದೆಲ್ಲಿಯ ಆಸ್ತಿ? ಉದಾಹರಣೆ ನೋಡೋಣ. ಸಾಲ ಮಾಡಿ ಕಟ್ಟಿದ ಮನೆ ಆಸ್ತಿ ಹೇಗಾದೀತು? ಸಾಲದ ಕೊನೆಯ ಕಂತು ಕಟ್ಟುವವರೆಗೆ ಅದು ನಮ್ಮ ಆಸ್ತಿಯಲ್ಲ. ಮುಂದಿನ ಹತ್ತಾರು ವರ್ಷ ಸಮಾಜದಲ್ಲಿ ಎಲ್ಲವೂ ಬದಲಾಗದೆ ಹಾಗೆ ಇರುತ್ತದೆ ಎನ್ನುವುದು ಊಹೆಯಷ್ಟೇ. ಇಂದು ಕೊರೋನ ಬಂದು ವ್ಯವಸ್ಥೆ ಹೀಗೆ ಬದಲಾಗುತ್ತದೆ ಎಂದು ಯಾರಿಗೆ ತಿಳಿದಿತ್ತು. ಅದೇ ಮನೆಯನ್ನ ನಿಮ್ಮ ಉಳಿಕೆಯ ಹಣದಲ್ಲಿ ಕಟ್ಟಿದ್ದರೆ? ಕೊರೋನ ಸಮಯದಲ್ಲೂ ಹೆಚ್ಚಿನ ಆತಂಕ ಕಾಡುತ್ತಿರಲಿಲ್ಲ.

ಬದುಕಿಗೆ ಬೇಕಾದ ನಿಜವಾದ ಮೂಲಭೂತ ಸರಳ ಸೂತ್ರಗಳನ್ನ ಹೇಳಿದರೆ ಅದು ಜನಕ್ಕೆ ರುಚಿಸುವುದಿಲ್ಲ. ನಿಮ್ಮ ಹಣ ನಿಮ್ಮ ಕೈಲಿರಲಿ, ಅದರ ನಿರ್ವಹಣೆ ನಿಮ್ಮದೇ ಆಗಿರಲಿ ಎಂದರೆ ಅದು ಕೂಡ ತಿಳಿಯುವುದಿಲ್ಲ. ಬಣ್ಣ ಬಣ್ಣದ ಆಪ್ ಗಳನ್ನ ಸೃಷ್ಟಿಸಿ ನಿಮ್ಮ ಹಣವನ್ನ ಇಲ್ಲಿ ಹೂಡಿಕೆ ಮಾಡಿ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದರೆ ನೋಡಿ ಜನ ಸಾಲುಗಟ್ಟಿ ನಿಲ್ಲುತ್ತಾರೆ. ಅರೆ ಇವರೇಕೆ ನಮ್ಮ ಹಣವನ್ನ ದುಪಟ್ಟು ಮಾಡಿ ನಮಗೆ ವಾಪಸ್ಸು ಕೊಡುತ್ತಾರೆ? ಅವರೇ ಅವರ ಹಣವನ್ನ ದುಪಟ್ಟು ಮಾಡಿಕೊಳ್ಳಬಹದುದಲ್ಲವೇ? ಎಂದು ಪ್ರಶ್ನಿಸುವ ಸಾಮಾನ್ಯ ಜ್ಞಾನ ಜನರಿಂದ ಅದೇಕೆ ಮಾಯವಾಗುತ್ತದೆ.

ಕೊರೋನೋತ್ತರ ಬದುಕು ಮೊದಲೇ ಹೇಳಿದಂತೆ ಮತ್ತಷ್ಟು ಅಂತರವನ್ನ ಸಮಾಜದಲ್ಲಿ ಸೃಷ್ಟಿ ಮಾಡಲಿದೆ. ಯಾವಾಗ ಇಂತಹ ಅಂತರ ಸೃಷ್ಟಿಯಾಗುತ್ತದೆ ಆಗ ಮೋಸ ಮಾಡುವರ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಹೀಗಾಗಿ ಇನ್ನಷ್ಟು ಹೆಚ್ಚಿನ ಜಾಗ್ರತೆಯಿಂದ ಜನ ಬದುಕನ್ನ ನಡೆಸಬೇಕಾಗಿದೆ. ಕೊರೋನೋತ್ತರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹಣಕಾಸು ಜೊತೆಗೆ ಬದುಕಿನ ಹೊಸ ನಿಯಮಗಳು ಹೀಗಿವೆ.

  1. ಸಾಲ ಮಾಡಬಾರದು: ಸಾಲ ವಾಹನ ತೆಗೆದುಕೊಳ್ಳಲು ಅಥವಾ ಮನೆ ಕಟ್ಟಿಸಲು ಎಂದಾದರೆ ಅದು ಓಕೆ ಎನ್ನುವ ಭಾವನೆಯಲ್ಲಿ ಜನ ಸಾಮಾನ್ಯರು ಇದ್ದಾರೆ. ಇದು ತಪ್ಪು. ಹಣವಿದ್ದರೆ ಮಾತ್ರ ಮನೆಯನ್ನ ಕಟ್ಟಬೇಕು. ವಾಹನ ಖರೀದಿ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿಕೊಳ್ಳಬೇಕು. ಬೆಂಗಳೂರಿನ ಮನೆಗಳ ಮುಂದೆ ಕವರ್ ಹೊದ್ದು ಕೂತ ಕಾರುಗಳು ಹೇಳುವ ಕತೆಯೇನು ಗೊತ್ತೇ? 70 ಪ್ರತಿಶತ ಕಾರುಗಳು ಸಾಮಾಜಿಕ ಒತ್ತಡಕ್ಕೆ ಕೊಂಡವಾಗಿವೆ. ಸಮಾಜದಲ್ಲಿ ಜನರ ಮಧ್ಯೆ ನಾವು ಕೂಡ ಒಂದು ಮಟ್ಟಕ್ಕೆ ಬದುಕುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಹುಚ್ಚಾಟದ ಕೂಸುಗಳವು. ಸಾಲ ಮಾಡಬಾರದು-ಸಾಲ ಯಾರಿಗೂ ಕೊಡಬಾರದು.
  2. ಕ್ರೆಡಿಟ್ ಕಾರ್ಡ್ ಬಳಕೆ ಮಾಡಬಾರದು: ಕ್ರೆಡಿಟ್ ಕಾರ್ಡ್ ಬಳಸಿ ಕೊಳ್ಳುವಾಗ ಅದರ ನೋವು ತಿಳಿಯುವುದಿಲ್ಲ. ಹೀಗಾಗಿ ಕ್ರೆಡಿಟ್ ಕಾರ್ಡ್ ಇದ್ದರೆ ಅದನ್ನ ರದ್ದು ಮಾಡಿಸುವುದು ಒಳ್ಳೆಯದು. ಇದ್ದುದರಲ್ಲಿ ಬದುಕುವುದು ಜಾಣತನ.
  3. ನನ್ನ ಲೈಫ್ ಸೆಟ್ಲ್ ಎನ್ನುವ ಮಿಥ್ಯೆಯಿಂದ ಹೊರಬನ್ನಿ: ನಾಳೆ ಕೊರೋನಗಿಂತ ದೊಡ್ಡ ಸಮಸ್ಯೆ ನಮ್ಮನ್ನ ಕಾಡುವುದಿಲ್ಲ ಎನ್ನುವುದಕ್ಕೆ ಯಾರೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲ. ನನಗೇನು ಚೆನ್ನಾಗಿದ್ದೇನೆ ಎನ್ನುವ ಸ್ಥಿತಿವಂತರೂ ಕೂಡ ಕೌಶಲ್ಯ ವೃದ್ಧಿ ಮಾಡಿಕೊಂಡು ಸನ್ನದ್ಧ ಸ್ಥಿತಿಯಲ್ಲಿರುವುದು ಉತ್ತಮ. ಇವತ್ತಿನ ದಿನದಲ್ಲಿ ಯಾವುದೂ ಸ್ಥಿರವಲ್ಲ. ಅಸ್ಥಿರತೆಯೊಂದೇ ಸ್ಥಿರವಾಗಿರುವುದು. ಹೀಗಾಗಿ ನಿಮ್ಮ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಏನೇ ಇರಲಿ ಒಂದಷ್ಟು ಸಿದ್ಧತೆ ಎಲ್ಲರೂ ಮಾಡಿ ಕೊಳ್ಳಬೇಕು.
  4. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಬೇಕಿದೆ: ಇಲ್ಲೊಂದು ಪ್ರಶ್ನೆ ಉಧ್ಭವಾಗುತ್ತದೆ. ಇದನ್ನ ಅವಶ್ಯಕೆತೆ ಅಥವಾ ಅಲ್ಲ ಎಂದು ನಿರ್ಧರಿಸುವರು ಯಾರು? ಇದಕ್ಕೆ ಉತ್ತರ ಆಯಾ ಕುಟುಂಬಗಳು ಇದನ್ನ ನಿರ್ಧರಿಸಬೇಕಾಗುತ್ತದೆ. ಕೊನೆಗೂ ಅದರ ನೋವು ಅಥವಾ ನಲಿವು ನಿಮ್ಮದೇ ಆಗಿರುತ್ತದೆ. ಹೆಚ್ಚಿನ ಕಮಿಟ್ಮೆಂಟ್ ಇಲ್ಲದ ಕುಟುಂಬಗಳು ಕೊರೋನ ತಂದಿಟ್ಟ ನೋವಿನಿಂದ ಪೂರ್ಣವಾಗಿ ತಪ್ಪಿಸಿಕೊಳ್ಳಲಾಗದಿದ್ದರೂ ನೋವಿನ ಮಟ್ಟ ತಡೆದುಕೊಳ್ಳುವ ಸ್ಥಿತಿಯಲ್ಲಿವೆ. ಹೀಗಾಗಿ ಇದೊಂದು ವೈಯಕ್ತಿಕ ನಿರ್ಧಾರ, ಅಥವಾ ಕುಟುಂಬದ ನಿರ್ಧಾರ.

ಕೊನೆಮಾತು: ಬದಲಾದ ಸನ್ನಿವೇಶದಲ್ಲಿ ಎಲ್ಲವೂ ಬದಲಾಗಿದೆ. ಕೊರೋನ ಗಿಂತ ಮುಂಚೆ ಸರಳವಾಗಿ ತೆಗೆದುಕೊಳ್ಳುತ್ತಿದ್ದ ಹಲವಾರು ನಿರ್ಧಾರಗಳನ್ನ ಇಂದು ಅಳೆದು ತೂಗಿ ತೆಗೆದುಕೊಳ್ಳಬೇಕಾಗಿದೆ. ಮುಂದಿನ ಎರಡರಿಂದ ಮೂರು ವರ್ಷವಾದರೂ ಮೇಲಿನ ಕೆಲವು ನಿಯಮಗಳನ್ನ ಕಟ್ಟುನಿಟ್ಟಿನಿಂದ ಎಲ್ಲರೂ ಪಾಲಿಸುವ ಅವಶ್ಯಕತೆಯಿದೆ. ಎಲ್ಲಕ್ಕೂ ಮಿಗಿಲಾಗಿ ಸಮಾಜ ನಮ್ಮ ಬಗ್ಗೆ ಏನೆಂದು ಕೊಂಡಿತು? ಎನ್ನುವ ಪ್ರಜ್ಞೆಯಿಂದ ಹೊರಬರಬೇಕಾಗಿದೆ. ಕಾರಿನ ಕಂತು ಕಟ್ಟಲಾಗದಿದ್ದರೆ ಒಂದಷ್ಟು ನಷ್ಟವಾದರೂ ಸರಿಯೇ ಅದನ್ನ ಮಾರಿ ನೆಮ್ಮದಿ ಕೊಂಡುಕೊಳ್ಳುವುದು ಮುಖ್ಯ. ಕಾರು ಉದಾಹರಣೆ ಮಾತ್ರ. ನೆನಪಿರಲಿ ನಿಮಗೆ ಯಾವುದು ನೋವು ಕೊಡುತ್ತದೆ ಅದು ಆಸ್ತಿಯಲ್ಲ, ಲಯಬಲಿಟಿ. ಪ್ರತಿಯೊಂದು ಪ್ರಶ್ನೆಗೂ ಉತ್ತರವಿದೆ. ಹೀಗಾಗಿ ಕೋವಿಡ್ ರಿಸೆಶನ್ ಕೂಡ ಬಿಡಿಸಲಾಗದ ಒಗಟೇನು ಅಲ್ಲ. ಸರಳತೆಯ ಮಹಾಮಂತ್ರದ ಮುಂದೆ ಎಲ್ಲವೂ ಮಂಡಿಯೂರುತ್ತದೆ. ಸಿದ್ಧತೆ ಒಂದಷ್ಟು ಬದ್ಧತೆ ನಮ್ಮದಾಗಿರಬೇಕು.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp