ಹೊಸ ವಿಶ್ವವ್ಯವಸ್ಥೆಯ ಭಾಷ್ಯ ಬರೆಯಲಿವೆ ಫಿನ್-ಟೆಕ್ ಸಂಸ್ಥೆಗಳು!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 29th October 2020 12:00 AM  |   Last Updated: 29th October 2020 10:02 AM   |  A+A-


ಹೊಸ ವಿಶ್ವವ್ಯವಸ್ಥೆಯ ಭಾಷ್ಯ ಬರೆಯಲಿವೆ ಫಿನ್-ಟೆಕ್ ಸಂಸ್ಥೆಗಳು!

    Related Article
Posted By : Srinivas Rao BV
Source : Online Desk

ಸೆಪ್ಟೆಂಬರ್ ತಿಂಗಳಲ್ಲಿ ಮೂರನೇ ತ್ರೈಮಾಸಿಕದ ಫಲಿತಾಂಶಗಳು ಹೊರಬಿದ್ದಿವೆ. ಆನ್ಲೈನ್ ಮತ್ತು ಟೆಕ್ನಾಲಜಿ ಸಂಬಂಧಪಟ್ಟ ಬಹುತೇಕ ಸಂಸ್ಥೆಗಳು ಉತ್ತಮ ಲಾಭವನ್ನ ದಾಖಲಿಸುತ್ತಿವೆ. ಮೈಕ್ರೋಸಾಫ್ಟ್ ಸಂಸ್ಥೆ ಈ ತ್ರೈಮಾಸಿಕದಲ್ಲಿ 37.2 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 2 ಲಕ್ಷ 60 ಸಾವಿರ ಕೋಟಿ ರೂಪಾಯಿ ಆದಾಯವನ್ನ ದಾಖಲಿಸಿದೆ. ವಾಲ್ ಸ್ಟ್ರೀಟ್ ನಲ್ಲಿರುವ ತಜ್ಞರು ಊಹಿಸಿದಕ್ಕಿಂತ ಎರಡು ಪ್ರತಿಶತ ಇದು ಏರಿಕೆಯಾಗಿದೆ. ಇಂತಹ ಒಂದು ಏರಿಕೆಯಾಗಲು ಪ್ರಮುಖ ಕಾರಣ ಗೇಮಿಂಗ್ ಬ್ಯುಸಿನೆಸ್ನಲ್ಲಿ ಹೆಚ್ಚಳವಾಗಿರುವುದು ಮತ್ತು ಕ್ಲೌಡ್ ಸ್ಥಳಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿರುವುದು.

ಮೈಕ್ರೋಸಾಫ್ಟ್ ಸಂಸ್ಥೆಯ ಸಿಇಓ ಸತ್ಯ ನಾದೆಳ್ಲ "ಜಗತ್ತು ವೇಗವಾಗಿ ಡಿಜಿಟಲೈಸೇಷನ್ ನ್ನು ಅಪ್ಪಿಕೊಂಡಿರುವುದು ಸಂಸ್ಥೆ ಈ ಮಟ್ಟದ ವಹಿವಾಟು ನಡೆಸಲು ಸಾಧ್ಯವಾಗಿದೆ' ಎಂದು ಹೇಳಿದ್ದಾರೆ. ಜೊತೆಗೆ ಮುಂದಿನ ಒಂದು ದಶಕದಲ್ಲಿ ಯಾವುದೇ ಸಂಸ್ಥೆಯಿರಲಿ ಅವುಗಳ ಅಳಿವು-ಉಳಿವು ಮತ್ತು ಅವುಗಳ ಯಶಸ್ಸಿನ ಪ್ರಮಾಣವನ್ನ ಆ ಸಂಸ್ಥೆ ಎಷ್ಟರಮಟ್ಟಿಗೆ ಡಿಜಿಟಲೈಸೇಷನ್ ಗೆ ಒಗ್ಗಿಕೊಂಡಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ ಎನ್ನುವ ಸತ್ಯವನ್ನ ಕೂಡ ಹೊರಹಾಕಿದ್ದಾರೆ. ಈ ಮಾತು ಸಹಜತೆಗೆ ಬಹಳ ಹತ್ತಿರವಾಗಿದೆ. ಜಗತ್ತಿನಲ್ಲಿ ಇಂದು ಆಗಿರುವಷ್ಟು ಡಿಜಿಟಲೈಸೇಷನ್ ಜಾರಿಗೆ ತರಲು ಕನಿಷ್ಟ ಐದರಿಂದ ಆರು ವರ್ಷ ಬೇಕಾಗುತ್ತಿತ್ತು. ಅಷ್ಟು ದೊಡ್ಡ ಮಟ್ಟದ ಡಿಜಿಟಲೈಸೇಷನ್ ಕೇವಲ ಐದರಿಂದ ಆರು ತಿಂಗಳಲ್ಲಿ ಆಗಿದೆ ಎಂದರೆ ಅದು ಉತ್ಪ್ರಕ್ಷೆಯಲ್ಲ.

ಮೈಕ್ರೋಸಾಫ್ಟ್ ಸಂಸ್ಥೆಯ ಅನಾಲಿಸ್ಟ್ ಗಳು ಹೇಳುವ ಪ್ರಕಾರ ಅವರ ಕ್ಲೌಡ್ ಕಂಪ್ಯೂಟಿಂಗ್ ಬಿಸಿನೆಸ್ ಇನ್ನು ಶೈಶಾವಸ್ಥೆಯಲ್ಲಿದೆ. ಈ ಬಿಸಿನೆಸ್ ಇನ್ನು ಬಹಳಷ್ಟು ಅಭಿವೃದ್ಧಿ ಕಾಣುತ್ತದೆ ಎನ್ನುವುದು ಅವರ ಅಭಿಪ್ರಾಯ. ಗೇಮಿಂಗ್ ಬಿಸಿನೆಸ್ ಎನ್ನುವುದು ಕೇವಲ ಮೈಕ್ರೋಸಾಫ್ಟ್ ಗೆ ಮಾತ್ರವಲ್ಲ ಈ ವಲಯದಲ್ಲಿರುವ ಎಲ್ಲಾ ಸಂಸ್ಥೆಗಳಿಗೂ ಗೇಮಿಂಗ್ ಬಿಸಿನೆಸ್ ಅತ್ಯಂತ ಹೆಚ್ಚಿನ ಆದಾಯವನ್ನ ತಂದು ಕೊಡುವ ವ್ಯಾಪಾರವಾಗಿದೆ. ಇಂದು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಯಾವುದಾದರೂ ಒಂದು ಉದ್ಯಮ ಬೆಳೆಯುತ್ತಿದ್ದರೆ ಅದು ಖಂಡಿತ ಗೇಮಿಂಗ್ ಇಂಡಸ್ಟ್ರಿ. ಕೊರೋನ ಎನ್ನುವ ಪ್ಯಾಂಡಮಿಕ್ ಜಗತ್ತನ್ನ ಆವರಿಸಿರುವುದರಿಂದ ಫಾರ್ಮಸಿಗಳು ವೇಗವಾಗಿ ಹಣ ಸಂಪಾದಿಸುತ್ತಿರುತ್ತವೆ ಎಂದು ನೀವು ಅಂದುಕೊಂಡರೆ ಅದು ತಪ್ಪು ಲೆಕ್ಕಾಚಾರ.

ಈ ಅನಾಲಿಸ್ಟ್ ಗಳು ಮುಂದುವರಿದು 'ಈ ಗೇಮಿಂಗ್ ಬಿಸಿನೆಸ್ ಬಹಳಷ್ಟು ಹಣವನ್ನ ನೀಡುತ್ತಿದೆ ನಿಜ, ಆದರೆ ಇದ್ಕಕೆ ಇನ್ನಷ್ಟು ಹಣ ನೀಡುವ ತಾಕತ್ತು ಇದೆ. 2021ರ ಕೊನೆಯ ವೇಳೆಗೆ ಈ ವಲಯದಿಂದ ಇನ್ನು 200 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚಿನ ವಹಿವಾಟು ನಿರೀಕ್ಷಿಸಬಹುದು ಎನ್ನುವ ಹೇಳಿಕೆಯನ್ನ ನೀಡುತ್ತಾರೆ. ಅವರ ನಿರೀಕ್ಷೆಯನ್ನ ಮೀರಿ ಕೂಡ ಈ ವಲಯ ಬೆಳೆಯುವ ಎಲ್ಲಾ ಲಕ್ಷಣಗಳಿವೆ. ಮೈಕ್ರೋಸಾಫ್ಟ್ ಮತ್ತು ಸೋನಿ ಸಂಸ್ಥೆಗಳು ಜಿದ್ದಿಗೆ ಬಿದ್ದವರಂತೆ ತಮ್ಮ ಹೊಸ ವಿನ್ಯಾಸದ ಆಟಗಳನ್ನ ಬಿಡುಗಡೆ ಮಾಡುತ್ತಿದ್ದಾರೆ. ಮೊದಲೇ ಗೇಮಿಂಗ್ ಎನ್ನುವ ಗೀಳಿಗೆ ಬಿದ್ದಿರುವ ಸಮಾಜ ಹೊರ  ಜಗತ್ತಿನ ಸಹವಾಸ ಬೇಡವೆಂದು ಗೇಮಿಂಗ್ ಗೆ ಇನ್ನಷ್ಟು ದಾಸರಾಗುವತ್ತ ಹೊರಟ್ಟಿದ್ದಾರೆ. ಅಲ್ಲಿಗೆ ಸಮಾಜವನ್ನ, ಜನರನ್ನ ಹಿಡಿತದಲ್ಲಿಟ್ಟುಕೊಳ್ಳುವ ಹೊಸ ದಾಸ್ಯ ಪದ್ಧತಿಗೆ ಜಯ ಸಿಕ್ಕಂತಾಯ್ತು.

ಜಗತ್ತು ಪ್ಯಾಂಡೆಮಿಕ್ ನ ಹಿಡಿತಕ್ಕೆ ಇನ್ನೂ ನಲುಗುತ್ತಿದೆ. ಯೂರೋಪಿನ ಬಹಳಷ್ಟು ದೇಶಗಳು ಮತ್ತೆ ಏಪ್ರಿಲ್-ಮೇ ತಿಂಗಳಲ್ಲಿ ದಾಖಲಾಗುತ್ತಿದ್ದ ಸೋಂಕಿತರ ಸಂಖೆಯ್ಯನ್ನ ಮತ್ತೆ ದಾಖಲಿಸುತ್ತಿವೆ. ಮತ್ತೊಮ್ಮೆ ಲೊಕ್ಡೌನ್ ನಂತಹ ಕಠಿಣ ನಿರ್ಧಾರಗಳಿಗೆ ಅವು ಮೊರೆ ಹೋಗುತ್ತಿವೆ. ಇಂತಹ ಸಮಯದಲ್ಲಿ ಅಲಿಬಾಬಾ ಖ್ಯಾತಿಯ ಜಾಕ್ ಮಾ ಹಾಂಗಕಾಂಗ್ ಮತ್ತು ಶಾಂಗೈ ನಗರಗಲ್ಲಿ ತಮ್ಮ ANT ಗ್ರೂಪ್ ನ ಷೇರುಗಳ ಐಪಿಒ ಮೂಲಕ 34 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಎತ್ತಲಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಈ ವಲಯದಲ್ಲಿ ಚರಿತ್ರೆಯನ್ನ ಸೃಷ್ಟಿಸಲಿದೆ. ಇದರಿಂದ ಜಾಕ್ ಮಾ ಸಂಪತ್ತು ಇನ್ನಷ್ಟು ಹೆಚ್ಚಾಗಲಿದೆ. ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಹಲವಾರು ಶ್ರೀಮಂತರನ್ನ ಅಂದರೆ ಒರಾಕಲ್, ವಾಲ್ ಮಾರ್ಟ್ ನಂತಹ ಘಟಾನುಘಟಿಗಳನ್ನ ಕೂಡ ಹಿಂದಕ್ಕೆ ದೂಡಿ ಜಾಕ್ ಮಾ ಅಲ್ಲಿ ತಮ್ಮ ಹೆಸರನ್ನ ಸ್ಥಾಪಿಸಿಕೊಳ್ಳಲಿದ್ದಾರೆ. ಚರಿತ್ರೆಯಲ್ಲಿ ಅತ್ಯಂತ ಬಲಿಷ್ಠ ಟೆಕ್ ಸಂಸ್ಥೆಯನ್ನ ಕಟ್ಟಿದವನು ಎಂದು ತಮ್ಮ ಹೆಸರನ್ನ ದಾಖಲಿಸಲು ಅವರು ತಯಾರಾಗಿದ್ದಾರೆ. ಜಾಕ್ ಮಾ ಸ್ಥಾಪಿಸಿದ ಸಂಸ್ಥೆಗಳು ಎಷ್ಟಿವೆ ಅಂದರೆ ಯಾವುದೇ ಚೀನಿ ಪ್ರಜೆ ಒಂದಲ್ಲ ಒಂದು ಸಮಯದಲ್ಲಿ ಆ ಸಂಸ್ಥೆಯ ಸೇವೆಯನ್ನ ಖಂಡಿತ ಪಡೆದಿರುತ್ತಾನೆ. ಏಕೆಂದರೆ ಬೇರೆ ಆಯ್ಕೆಗಳಿಲ್ಲ. ಜಾಕ್ ಮಾ ಎಷ್ಟೋ ಬಾರಿ ಗಂಟೆಗೆ ಒಂದರಂತೆ ದಿನದಲ್ಲಿ ಹತ್ತಾರು ಸಂಸ್ಥೆಗಳನ್ನ ತೆರೆದ ಭೂಪ.

ಚೀನಾದಲ್ಲಿ ಜಾಕ್ ಮಾ-ಭಾರತದಲ್ಲಿ ಮುಖೇಶ್ ಅಂಬಾನಿ.

ರಿಲಯನ್ಸ್ ರಿಟೈಲ್ ಗಾಗಿ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ದೊಡ್ಡ ಮಟ್ಟದಲ್ಲಿ ಹಣ ಎತ್ತಿದ್ದಾರೆ. ಇದೆ ತಿಂಗಳ ಮೊದಲ ವಾರದಲ್ಲಿ ತಮಗೆ ಬೇಕಾದ ಹಣವನ್ನ ಅವರು ಪಡೆದುಕೊಂಡಿದ್ದಾರೆ. ಹೀಗೆ 3.4 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಕೇವಲ ಒಂದು ತಿಂಗಳಲ್ಲಿ ಹೂಡಿಕೆದಾರರಿಂದ ಪಡೆದುಕೊಂಡಿದ್ದಾರೆ. ಅಂದರೆ ಹತ್ತಿರಹತ್ತಿರ 24 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಹತ್ತಿರಹತ್ತಿರ 6 ಸಾವಿರ ಕೋಟಿ ರೂಪಾಯಿಯನ್ನ ಹೂಡಿಕೆ ಮಾಡಿರುವವರು ಯಾರು ಗೊತ್ತೇ? ಅಬುಧಾಭಿಯ ಮುಬದಲಾ ಇನ್ವೆಸ್ಟ್ಮೆಂಟ್ ಸಂಸ್ಥೆ. ಈ ಸಂಸ್ಥೆಯ ಸಿಇಓ ಮತ್ತು ಎಂಡಿ ಖಾಲ್ಡೂನ್ ಅಲ್ ಮುಬಾರಕ್. ಆರು ಸಾವಿರ ಭಾರತೀಯ ಕೋಟಿ ರೂಪಾಯಿ ಹೂಡಿಕೆಗೆ ಈತನಿಗೆ ಸಿಕ್ಕಿರುವುದು  ರಿಲಯನ್ಸ್ ರಿಟೇಲ್ ನ 1.4 ಪ್ರತಿಶತ ಮಾಲೀಕತ್ವ ಮಾತ್ರ!

ನೆನಪಿರಲಿ ಈ ವರ್ಷದ ಪ್ರಾರಂಭದಲ್ಲಿ ಅಂಬಾನಿ ಜಿಯೋ ಗಾಗಿ 20 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 1,40, ೦೦೦ ಕೋಟಿ ರೂಪಾಯಿಯನ್ನ ಹೂಡಿಕೆದಾರರಿಂದ ಎತ್ತಿದ್ದರು. ಜಗತ್ತಿನಲ್ಲಿ ರಿಲಯನ್ಸ್ ಅಗ್ರಗಣ್ಯ ಸಂಸ್ಥೆಯಾಗಬೇಕು ಎನ್ನುವ ಮಹತ್ವಾಕಾಂಕ್ಷೆ ಮುಖೇಶ್ ಅವರದು. ಚೀನಾದಲ್ಲಿ ಜಾಕ್ ಮಾ ಸ್ಥಾಪಿಸಿದ ಸಂಸ್ಥೆಯಿಂದ ಹೇಗೆ ಚೀನಿ ಪ್ರಜೆ ದೂರವಿರಲಾರ ಹಾಗೆ ಭಾರತದಲ್ಲಿ ರಿಲಯನ್ಸ್. ಇಂದು ರಿಲಯನ್ಸ್ ಸಂಸ್ಥೆ ಎಲ್ಲಾ ವಲಯದಲ್ಲೂ ತನ್ನ ಬಾಹುಗಳನ್ನ ವಿಸ್ತರಿಸಿದೆ.

ಜಗತ್ತು ಇಂದು ಕೊರೋನ ವೈರಸ್ ನಿಂದ ಬಳಲುತ್ತಿದೆ. ಆದರೆ ಫಿನ್-ಟೆಕ್ ಕಂಪನಿಗಳು ಮಾತ್ರ ನ್ಯೂ ವರ್ಲ್ಡ್ ಆರ್ಡರ್ ಅಂದರೆ ಹೊಸ ವಿಶ್ವ ವ್ಯವಸ್ಥೆಯನ್ನ ಕಟ್ಟುವುದರಲ್ಲಿ ಮಗ್ನವಾಗಿವೆ. ಹೊಸ ಸಂಸ್ಥೆಗಳನ್ನ ಹುಟ್ಟುಹಾಕುವುದು, ಕೆಲವನ್ನ ಒಗ್ಗೂಡಿಸುವುದು ಹೀಗೆ ಹಲವಾರು ಹೊಸ ಪ್ರಯತ್ನಗಳು ಅಲ್ಲಾಗುತ್ತಿವೆ.

ಇವೆಲ್ಲವುಗಳ ನಡುವೆ ಆಫ್ರಿಕಾ ಖಂಡದ ಐದರಿಂದ ಆರು ಕೋಟಿ ಜನರು ಬಡತನದ ರೇಖೆಗಿಂತ ಕಡಿಮೆಗೆ ಸದ್ದಿಲ್ಲದೇ ಸರಿದು ಹೋಗಿದ್ದಾರೆ. ಜಗತ್ತಿನ ಎಲ್ಲಾ ದೇಶಗಳು ಕೂಡ ಇಂತಹ ಜನರಿಗೆ ಇಂತಹ ಸಮಯದಲ್ಲಿ ಸಹಾಯಹಸ್ತವನ್ನ ಚಾಚಬೇಕು ಎಂದು ಕೂಗುತ್ತಿರುವವರು ಯಾರು ಗೊತ್ತೇ? ಮಿಲಿಂದಾ ಮತ್ತು ಗೇಟ್ಸ್ ಫೌಂಡೇಶನ್ ನ ಬಿಲ್ ಗೇಟ್ಸ್! ಮೈಕ್ರೋಸಾಫ್ಟ್ ಸಂಸ್ಥೆಯ ಸ್ಥಾಪಕ! ವಿಪರ್ಯಾಸ ಎಂದರೆ ಇದೆ ಗೇಟ್ಸ್ 2009 ಮತ್ತು ಅದಕ್ಕೂ ಮುಂಚಿನ ತಮ್ಮ ಹಲವಾರು ಪ್ರವಚನಗಳಲ್ಲಿ ಇಂತಹ ಒಂದು ಕಾಣದ ವೈರಸ್ ನಮ್ಮ ಜಗತ್ತಿಗೆ ಅಪ್ಪಳಿಸಲಿದೆ ಎನ್ನುವ ಮಾತನ್ನ ಒಂದಲ್ಲ ಹಲವಾರು ಬಾರಿ ಆಡಿದ್ದರು. ಬೆಂಕಿಯಿಲ್ಲದ ಹೊಗೆ ಎಲ್ಲಿಂದ ಬಂದೀತು?

ಆಫ್ರಿಕಾ ಒಂದೇ ಅಲ್ಲ ಜಗತ್ತಿನ ಬಹುತೇಕ ದೇಶಗಳಲ್ಲಿ ಲಕ್ಷಾಂತರ ಜನರ ಬದುಕು ಛಿದ್ರವಾಗಿದೆ. ಜಗತ್ತಿನ ಮುಕ್ಕಾಲು ಪಾಲು ದೇಶಗಳ ಕಥೆ ಸೇಮ್, ಅಲ್ಲಿನ ಪ್ರಜೆಗಳ ಕಥೆ ಸೇಮ್, ಅವರಾರಿಗೂ ಸರಕಾರದ ಸಹಾಯ ಸಿಕ್ಕುವುದಿಲ್ಲ. ಅವೆಲ್ಲಾ ಮೀಡಿಯಾ ಮುಂದೆ ಕಣ್ಣೊರೆಸಲು ಮಾಡುವ ಡ್ರಾಮಾಗಳು. ಉಳಿದಂತೆ ಹತ್ತಾರು ವರ್ಷದಿಂದ ಕಟ್ಟಿಕೊಂಡ ಅವರ ಬದುಕು ಕ್ಷಣದಲ್ಲಿ ಬದಲಾಗಿದೆ, ಅದನ್ನ ಮತ್ತೆ ಕಟ್ಟಿಕೊಳ್ಳಬೇಕಾದ ಹೊಣೆಗಾರಿಕೆ ಅವರ ಮೇಲಿದೆ.

ಅಮೆರಿಕಾ ದೇಶದಲ್ಲಿ 2007 ರಲ್ಲಿ ಶುರುವಾದ ಆರ್ಥಿಕ ಹಿಂಜರಿತ ಒಂದು ದಶಕವಾದರೂ ಮೊದಲಿನ ಸ್ಥಿತಿಗೆ ಮರಳಲು ಆಗಿರಲಿಲ್ಲ. ಇದು ಗೊತ್ತಿರುವ ಸತ್ಯ. ಇದೆ ಕಥೆ ಯೂರೋಪ್ ದೇಶಗಳಿಗೂ ಅನ್ವಯ. ಹೀಗೆ 22/25/30 ರ ವಯೋಮಾನದ ಅಂದಿನ ಒಂದು ಜನತೆ ಕಾಸಿಲ್ಲದೆ, ಕೆಲಸವಿಲ್ಲದೇ ಕಳೆದು ಹೋಯಿತು. ತಮ್ಮ ಹೆತ್ತವರು ನಡೆಸಿದ ಜೀವನ ಮಟ್ಟವನ್ನ ಕಾಯ್ದುಕೊಳ್ಳಲಾಗದ ಹೀನಾಯ ಪರಿಸ್ಥಿತಿಯನ್ನ ಅವರು ಎದುರಿಸಿದರು. ಹೀಗೆ ಅವಕಾಶ ವಂಚಿತ ಒಂದು ತಲೆಮಾರಿನ ಜನತೆಯನ್ನ ದಿ ಲಾಸ್ಟ್ ಜನರೇಷನ್ ಎಂದು ಕರೆಯಲಾಗುತ್ತದೆ. ಈ ಹಿಂದೆ ಇದರ ಬಗ್ಗೆ ಹಣಕಾಸಿನಾಟದಲ್ಲಿ ಕಳೆದು ಹೋದ ಒಂದು ಪೀಳಿಗೆ- 'ದಿ ಲಾಸ್ಟ್ ಜೆನರೇಷನ್'!! ಎಂಬ ವಿಸೃತ ಲೇಖನವನ್ನ ಹಣಕ್ಲಾಸುವಿನಲ್ಲಿ ಬರೆಯಲಾಗಿತ್ತು. ಅಂತಹ ಜನತೆಯ ಹಣೆಯ ಬರಹ ಇನ್ನೆಷ್ಟು ಕೆಟ್ಟದಿರಬಹದು? ಆ ನೋವಿನಿಂದ ಎಚ್ಚೆತ್ತುಕೊಳ್ಳುವ ಮುಂಚೆಯೇ ಕೊರೊನಾಘಾತವಾಗಿದೆ. ಆ ಸಮಯದ ಯುವಕರು ಇಂದಿಗೆ ನಲವತ್ತರ ಆಜುಬಾಜಿನಲ್ಲಿರುತ್ತಾರೆ. ಅವರ ಭವಿಷ್ಯದ ಕಥೆಯೇನು? ಅವರನ್ನ ಒಂದಷ್ಟು ವೇಳೆ ಪಕ್ಕಕ್ಕಿಟ್ಟು ಬಿಡೋಣ. ಈ ವರ್ಷ ಅಥವಾ ಕಳೆದ ವರ್ಷ ಕಾಲೇಜು ಮುಗಿಸಿ ಬಂದ ಒಂದು ದೊಡ್ಡ ಯುವ ಸಮೂಹದ ಭವಿಷ್ಯದ ಕಥೆಯೇನು? ಇವರಷ್ಟೇ ಅಲ್ಲ, ಎಂಟು ವರ್ಷದ ಕೆಳಗಿರುವ ಮಕ್ಕಳಿಗೆ ಇದನ್ನ ಮುಟ್ಟಬೇಡ, ಅದನ್ನ ಮಾಡಬೇಡ, ಹೀಗೆ ದಿನದ 24 ಗಂಟೆಯೂ ಕಳೆದ 7/8 ತಿಂಗಳಿಂದ ಮನೆ ಬಿಟ್ಟು ಹೊರಹೋಗದ ಮಕ್ಕಳಿಗೆ 'ಬೇಡ, ಬೇಡ' ಎನ್ನುವ ಋಣಾತ್ಮಕ ಪದವನ್ನ ದಿನದಲ್ಲಿ ಹತ್ತಾರು ಬಾರಿ ಹೇಳುತ್ತಿದ್ದರೆ ಅವರ ಮೇಲೆ ಯಾವ ಪರಿಣಾಮವಾಗಬಹುದು? ಋಣಾತ್ಮಕ ಭಾವನೆಯನ್ನ ಅಂದರೆ ಬೇಡ ಎನ್ನುವುದನ್ನೇ ಕೇಳುತ್ತಾ ಬಂದ ಮಕ್ಕಳ ಮಾನಸಿಕ ಸಂತುಲನ ಹೇಗೆ ತಾನೇ ಸರಿಯಾಗಿದ್ದೀತು? ಕೊರೋನ ನಾವೆಂದುಕೊಂಡಷ್ಟು ಸಣ್ಣ ಪ್ಯಾಂಡೆಮಿಕ್ ಅಲ್ಲ. ವೈರಸ್ ಮಾಯವಾದರೂ ಅದು ಸೃಷ್ಟಿಸಿರುವ ಗಾಯ ಮಾಯವಾಗಲು ಬಳಷ್ಟು ಸಮಯ ಬೇಕಾಗುತ್ತದೆ.

ಹಾಗಾದರೆ ನಮ್ಮ ಯುವ ಜನತೆಗೆ ಭವಿಷ್ಯವಿಲ್ಲವೇ? ಜಗತ್ತು ಕೇವಲ ಉಳ್ಳವರದ್ದಾಗಿ ಬಿಡುತ್ತದೆಯೇ?

ಇಂತಹ ಒಂದು ಪ್ರಶ್ನೆ ಉದ್ಭವಾಗುವುದು ಸಹಜ. ನಾವು ಅಷ್ಟೊಂದು ನಿರಾಶಾವಾದಕ್ಕೆ ಹೋಗುವ ಅವಶ್ಯಕತೆಯಿಲ್ಲ. ಹೌದು ಜಗತ್ತಿನಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಬಹಳಷ್ಟು ಹೆಚ್ಚಾಗಲಿದೆ. ಆದರೆ ಬುದ್ಧಿವಂತ ಯುವ ಜನತೆಗೆ ಯಾವಾಗಲೂ ಒಂದಲ್ಲ ಒಂದು ಮಾರ್ಗ ತೆರೆದುಕೊಳ್ಳುತ್ತದೆ. ಮುಂದಿನ ದಶಕ ಫೈನಾನ್ಸ್ ಮತ್ತು ಟೆಕ್ನಾಲಜಿ ಆಳಲಿವೆ. ಹೀಗಾಗಿ ಯುವಜನತೆ ತಮ್ಮ ಕೌಶಲ್ಯವನ್ನ ಈ ಕ್ಷೇತ್ರದಲ್ಲಿ ಹೆಚ್ಚು ವೃದ್ಧಿಕೊಳ್ಳುವತ್ತ ಗಮನ ಹರಿಸಬೇಕು.

ಕೊನೆಮಾತು: ಜಗತ್ತು ಬಹಳ ವೇಗವಾಗಿ ಬದಲಾಗಿದೆ ಹೋಗಿದೆ. ಇದು ಇನ್ನಷ್ಟು ಬದಲಾವಣೆಗೆ ಕೂಡ ತೆರೆದುಕೊಳ್ಳಲಿದೆ. ಫಿನ್-ಟೆಕ್ ಮುಂದಿನ ಕನಿಷ್ಟ ಒಂದೆರೆಡು ದಶಕವನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲಿದೆ. ಡಿಜಿಟಲೀಕರಣ ಅತ್ಯಂತ ಸಾಮಾನ್ಯ ವಿಷಯವಾಗಿ ಹೋಗಲಿದೆ. ಘಳಿಗೆ ಘಳಿಗೆಗೂ ಬದಲಾಗುವ ವಿತ್ತ ಜಗತ್ತಿನ ನಿಯಮಗಳನ್ನ ಅರಿತವನಿಗಷ್ಟೇ ಬದುಕು ಸುಲಭವಾಗಲಿದೆ. ಉಳಿದವರಿಗೆ ಈ ಜಗತ್ತು ಕೆಲಸ ಮಾಡಿಸಿಕೊಂಡು ಒಂದು ಕೈಗೆ ದುಡ್ಡು ಕೊಟ್ಟು ಇನ್ನೊಂದು ಕೈಲಿಂದ ವಾಪಸ್ಸು ಪಡೆದು ಬಿಡುತ್ತದೆ. ವರ್ಷ ಪೂರ್ತಿ ಓಡಿ ನಂತರ ನೋಡಿದರೆ, ಇಂಚೂ ಮುಂದೆ ಹೋಗದ, ನಿಂತಲ್ಲೇ ನಿಂತ ಅನುಭವವನ್ನ ಜಗತ್ತಿನ ಕೋಟ್ಯಂತರ ಜನರು ಪಡೆಯಲಿದ್ದಾರೆ. ಹಣಕಾಸು ಸಾಕ್ಷರತೆಯೊಂದೇ ಇದಕ್ಕೆ ಮದ್ದು.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp