ಕೋವಿಡ್ ಆರ್ಥಿಕ ಅವಾಂತರಗಳಿಗೆ ಕೊನೆಯೆಂದು ?

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಕೋವಿಡ್ ಆರ್ಥಿಕ ಅವಾಂತರಗಳಿಗೆ ಕೊನೆಯೆಂದು?
ಕೋವಿಡ್ ಆರ್ಥಿಕ ಅವಾಂತರಗಳಿಗೆ ಕೊನೆಯೆಂದು?

ಆಕೆ ಲಂಡನ್ ನಿಂದ ಬೆಂಗಳೂರಿಗೆ 2018 ರ ಪ್ರಾರಂಭದಲ್ಲಿ ಕನಸುಗಳ ಹೊತ್ತು ಬಂದವರು. ತಂದೆಯನ್ನ ನೋಡಿಕೊಳ್ಳಬೇಕು ಎನ್ನುವುದು ಆಕೆಯ ಹೆಬ್ಬಯಕೆ. ಹೀಗಾಗಿ ಬೆಂಗಳೂರಿನಲ್ಲಿ ಮೊದಲೇ ಕೊಂಡಿದ್ದ ಸೈಟ್ನಲ್ಲಿ ಮನೆಯನ್ನ ಕೂಡ ಕಟ್ಟಿಸಲು ಪ್ರಾರಂಭಿಸುತ್ತಾರೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿರುತ್ತದೆ, 2019  ಮಾರ್ಚ್ ಕೋವಿಡ್ ನಮ್ಮ ಜಗತ್ತಿಗೆ ಅಪ್ಪಳಿಸುತ್ತದೆ. ಆಕೆ ವೃತ್ತಿಯಿಂದ ವೈದ್ಯೆ. ಮುಂದಿನ ದಿನಗಳಲ್ಲಿ ತಂದೆ ಕೋವಿಡ್ ಗೆ ಜೀವ ಅರ್ಪಿಸುತ್ತಾರೆ. ಕಣ್ಣ ಮುಂದೆ ಸಹೋದ್ಯೋಗಿಯೊಬ್ಬರು ಕೋವಿಡ್ ಗೆ ಬಲಿಯಾಗುತ್ತಾರೆ. ಬೆಂಗಳೂರಿನಲ್ಲಿ ಇರಬೇಕು ಎನ್ನುವ ಆಕೆಯ ಕನಸು ನುಚ್ಚುನೂರಾಗುತ್ತದೆ. ಕೋಟ್ಯಂತರ ರೂಪಾಯಿ ಸುರಿದು ಕಟ್ಟಿಸಲು ಪ್ರಾರಂಭಿಸಿದ ಮನೆ ಮುಗಿಯುವ ಹಂತಕ್ಕೆ ಬಂದಿದೆ. ಮನೆಯನ್ನ ನೋಡಲು ಬಂದವರು 'ಅಣ್ಣಾ ಆಗಸ್ಟ್ 17 ರಂದು ವಾಪಸ್ಸು ಲಂಡನ್ ಗೆ ಹೊರಟೆ 'ಎಂದರು. ನೀವು ವೈದ್ಯರಾಗಿರಿ, ಲಂಡನ್ ನಗರದಲ್ಲಿ ದುಡಿಯುತ್ತೀರಿ ಅಂದಿನ ದಿನದ ಜೀವನ ನಡೆಸಿ ಕೋಟ್ಯಂತರ ರೂಪಾಯಿ ಉಳಿಸುವುದು ಸುಲಭದ ಮಾತಲ್ಲ. ಹಾಗೊಮ್ಮೆ ಉಳಿಸಿದ್ದರೂ ಅದನ್ನ ತಪ್ಪು ನಿರ್ಧಾರದಲ್ಲಿ ತೊಡಗಿಸಿ ಬಿಟ್ಟರೆ? ಇಂತಹ ಒಂದು ತಪ್ಪು ನಿರ್ಧಾರದಲ್ಲಿ ಕೋಟ್ಯಂತರ ರೂಪಾಯಿ ಮನೆಯ ಮೇಲೆ ಹಾಕಿ ಮತ್ತೆ ಲಂಡನ್ ಗೆ ಹೋಗುವ ನಿರ್ಧಾರ ಹೇಳಿಕೊಂಡು ಆಕೆ ಅತ್ತರು. ಅವರ ಪುಟಾಣಿ ಹತ್ತು ತಿಂಗಳೂ ಸರಿಯಾಗಿ ಇಲ್ಲಿ ಶಾಲೆಗೆ ಹೋಗಲಿಲ್ಲ, ಅದಕ್ಕೆ ಮತ್ತೆ ಬದಲಾವಣೆ. ಕಣ್ಣಿಗೆ ಕಾಣದ ಕೋವಿಡ್ ' ಬದುಕು ಒಂದು ಹಂತಕ್ಕೆ ಸೆಟ್ಲ್ ಆಗಿದೆ' ಎಂದುಕೊಂಡ ವೃತ್ತಿನಿರತ ವ್ಯಕ್ತಿಯೊಬ್ಬರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿಬಿಟ್ಟಿದೆ. ಲಂಡನ್ ತಲುಪಿದ್ದೇನೆ ಎಂದು ಫೋನ್ ಮಾಡಿದವರ ಧ್ವನಿಯಲ್ಲಿ ಮಾತ್ರ ನಡುಕ, ನೋವು ಕಡಿಮೆಯಾಗಿರಲಿಲ್ಲ.

ಅವನು ನನ್ನ ಸ್ನೇಹಿತ ಬೆಂಗಳೂರಿನ ಪ್ರಸಿದ್ಧ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ. ಕೈ ತುಂಬಾ ಸಂಬಳ. ಸುಂದರ ಸ್ವತಃ ಮನೆಯ ಯಜಮಾನ. ಎಲ್ಲವೂ ಪರವಾಗಿಲ್ಲ ಎನ್ನುವ ಮಟ್ಟಿಗೆ ನಡೆದುಕೊಂಡು ಹೋಗುತ್ತಿತ್ತು. ಕೋವಿಡ್ ಮಾರ್ಚ್ ನ ತಿಂಗಳಲ್ಲಿ ಭಾರತಕ್ಕೆ ಅಫಿಷಿಯಲ್ ಆಗಿ ಎಂಟ್ರಿ ಕೊಡುತ್ತೆ. ಆದರೂ ಆಗಸ್ಟ್ ತಿಂಗಳ ವರೆಗೆ ಎಲ್ಲವೂ ಮಾಮೂಲಿಯಂತೆ ನಡೆದುಕೊಂಡು ಹೋಗುತ್ತಿರುತ್ತದೆ. ಇದಕ್ಕಿದ್ದ ಹಾಗೆ ತಾಯಿಗೆ ಕೆಮ್ಮು ನೆಗಡಿ, ಉಸಿರಾಟದ ತೊಂದರೆ ಎದುರಾಗುತ್ತದೆ. ಹೆಚ್ಚು ಸಮಯ ನರಳದೆ 'ಅಮ್ಮ' ಈ ಜಗತ್ತಿನ ಪಯಣಕ್ಕೆ ಇತಿಶ್ರೀ ಹೇಳುತ್ತಾರೆ. ನಂತರದ್ದು ಬೇಸರ ತರಿಸುವ ಕಥೆ. ಅಮ್ಮನಿಗೆ ಕೋವಿಡ್ ಅಂತ ಹಣೆಪಟ್ಟಿ ಕಟ್ಟಲಾಗುತ್ತದೆ. ಮನೆಯ ಉಳಿದವರನ್ನ ಕೂಡ ತಪಾಸಣೆಗೆ ಒಳಪಡಿಸಲಾಗುತ್ತದೆ. ಮನೆಯವರಿಗೆಲ್ಲಾ ಕೋವಿಡ್ ಪಾಸಿಟಿವ್ ಎನ್ನುವ ಸರ್ಟಿಫಿಕೇಟ್ ಕೈಲಿಡಲಾಗುತ್ತದೆ. ಒಂದೇ ಆಸ್ಪತ್ರೆಯಲ್ಲಿ ಜಾಗವಿಲ್ಲ ಎನ್ನುವ ಕಾರಣಕ್ಕೆ ಮನೆಯ ಒಬ್ಬಬ್ಬರನ್ನ ಒಂದೊಂದು ಕಡೆಗೆ ಅಡ್ಮಿಟ್ ಮಾಡಿಕೊಳ್ಳಲಾಗುತ್ತದೆ. ಲಕ್ಷಗಟ್ಟಲೆ ಬಿಲ್ ಮಾಡಲಾಗುತ್ತದೆ. ಪುಣ್ಯಕ್ಕೆ ಇನ್ಶೂರೆನ್ಸ್ ಇದ್ದುದರಿಂದ ಈತ ಬಚಾವ್ ಆಗಿದ್ದಾನೆ. ಈಗ ಎಲ್ಲರೂ ಮರಳಿ ಮನೆಯನ್ನ ಸೇರಿಕೊಂಡಿದ್ದಾರೆ. 'ಅಮ್ಮ' ಹೋದ ನೋವನ್ನ, ಆಕೆಯ ಕ್ರಿಯೆಗಳನ್ನ ಕೂಡ ಸರಿಯಾಗಿ ಮಾಡಲಾಗದ, ಆಕೆಯ ಕೊನೆಯ ದರ್ಶನವನ್ನ ಕೂಡ ಪಡೆಯಲಾಗದ ಹಾಗೆ ಮಾಡಿದ್ದು ಮಾತ್ರ ನಮ್ಮ ವ್ಯವಸ್ಥೆಯಲ್ಲಿನ ಲೋಪದೋಷ. ಕೊರೊನ ಅಂದರೆ ಸಾಕು ' ಅಯ್ಯೋ ಪಾಪ ' ಎನ್ನುವ ಮುಖ ಮಾಡುವ, ಇನ್ನೇನು ಆತನ/ಆಕೆಯ ಕಥೆ ಮುಗಿಯಿತು ಎನ್ನುವ ರೀತಿಯಲ್ಲಿ ನಡೆದುಕೊಳ್ಳುವ ಸಮಾಜ. ಆರ್ಥಿಕ ನರಳಾಟ ಒಂದು ಕಡೆಯಾದರೆ, ಸಾಮಾಜಿಕ ನೋವುಗಳನ್ನ ತಡೆದುಕೊಳ್ಳುವ ಬಗೆಯಾದರೂ ಹೇಗೆ?

ಮೇಲಿನ ಎರಡು ಘಟನೆಯನ್ನ ಉದಾಹರಣೆಯಾಗಿ ಬರೆದಿದ್ದೇನೆ. ಇವೆರೆಡೂ ಸತ್ಯ ಘಟನೆಗಳು. ಹಾಗೆ ನೋಡಿದರೆ ಇಲ್ಲಿನ ಎರಡೂ ಘಟನೆಯಲ್ಲಿ ನೋವು ತಿಂದಿದ್ದಾರೆ ಎನ್ನುವುದು ಬಿಟ್ಟರೆ ಆರ್ಥಿಕವಾಗಿ ಅಂತಹ ಪೆಟ್ಟು ತಿಂದಿಲ್ಲ. ಅಷ್ಟರ ಮಟ್ಟಿಗೆ ಇವರದು ಸುಭದ್ರ ಬದುಕು ಎನ್ನುಬಹುದು. ಇದನ್ನ ಮೀರಿದ ಹತ್ತಾರು ಘಟನೆಗಳು ನಿತ್ಯವೂ ನಾವು ನೋಡಿದ್ದೇವೆ, ಕೇಳಿದ್ದೇವೆ. ಕೋವಿಡ್ ಹಲವರಿಗೆ ಜೀವನ ಬದಲಾಯಿಸಿದ, ಕಟ್ಟಿಕೊಂಡ ಜೀವನವನ್ನ ಕದಡಿದ ವಿಷಯವಾದರೆ ಕೆಲವರಿಗೆ ಅದೊಂದು ಹಣ ಮಾಡುವ ದಂಧೆ! ಹೊತ್ತಿ ಉರಿಯುತ್ತಿರುವ ಮನೆಯಲ್ಲಿ ಬೀಡಿ ಹಚ್ಚಿಕೊಳ್ಳುವ ನೀಚ ಜನರಿರುವವರೆಗೆ ನಮ್ಮ ಸಮಾಜದಲ್ಲಿ ಬದಲಾವಣೆ ಅಸಾಧ್ಯ.

ಎಲ್ಲಕ್ಕೂ ಮೊದಲಿಗೆ ನನ್ನದು ಹಣಕಾಸು ಕ್ಷೇತ್ರ ಹೀಗಾಗಿ ಹೆಚ್ಚಾಗಿ ಕೋವಿಡ್ ಗೆ ಸಂಬಂಧಿಸಿದ ವೈದ್ಯಕೀಯ ಅಂಶಗಳ ಬಗ್ಗೆ ಹೆಚ್ಚು ಹೇಳಲು ಹೋಗುವುದಿಲ್ಲ. ಆದರೆ ನೆನಪಿರಲಿ ಕೋವಿಡ್ ರಾಪಿಡ್ ಟೆಸ್ಟ್ ಇರಬಹುದು ಅಥವಾ ಸಾಧಾರಣ ಕೋವಿಡ್ ಟೆಸ್ಟ್ ಇರಬಹುದು, ಇವೆರೆಡೂ ಕಿಟ್ ನಲ್ಲಿ ತಪಾಸಣೆ ಮಾಡಿದರೆ, ನಿಮ್ಮಲ್ಲಿ ಯಾವುದೇ 'ವೈರಸ್ ' ಇದ್ದರೂ ಅದು ಕೋವಿಡ್ ಪಾಸಿಟಿವ್ ಎಂದು ತೀರ್ಮಾನಿಸಿ ಫಲಿತಾಂಶ ನೀಡುತ್ತದೆ. ಅಂದರೆ ಕೋವಿಡ್ ಗೆ ಮುಂಚೆ ಬೇರೆ ವೈರಲ್ ಫೀವರ್ ನಮಗಿರಲಿಲ್ಲವೇ? ಖಂಡಿತ ಇತ್ತು. ಆದರೆ ಕೊರೊನ ಎನ್ನುವ ವೈರಸ್ ಅನ್ನು ನಾವು ಎಷ್ಟರ ಮಟ್ಟಿಗೆ ಪ್ರಸಿದ್ಧ ಮಾಡಿದ್ದೇವೆಂದರೆ ಅದೊಂದು ಅಜೇಯ ಮತ್ತು ಘಾತುಕ ವೈರಸ್ ಎನ್ನುವ ಮಟ್ಟಿಗೆ ಅದಕ್ಕೆ ಪ್ರಾಶಸ್ತ್ಯ ನೀಡಿದ್ದೇವೆ. ಹೀಗಾಗಿ ಜನ ಮಾನಸದಲ್ಲಿ ಇದರ ಬಗ್ಗೆ ಒಂದು 'ಅವ್ಯಕ್ತಭಯ' ಆವರಿಸಿಬಿಟ್ಟಿದೆ. ಜೀವವಿದ್ದರೆ ಹೇಗೂ ನಂತರ ದುಡಿದು, ಗಳಿಸಬಹುದು ಎನ್ನುವ ನಿರ್ಧಾರಕ್ಕೆ ಜನ ಬಂದಿದ್ದಾರೆ. ಜನರ ಭಯವನ್ನ ತಮ್ಮ ಬಂಡವಾಳ ಮಾಡಿಕೊಂಡು ಆಸ್ಪತ್ರೆ ಎನ್ನುವ ವ್ಯಾಪಾರದಲ್ಲಿ ಹೂಡಿಕೆ ಮಾಡಿದ್ದ ಬಂಡವಾಳಗಾರರು ಲೂಟಿಯಲ್ಲಿ ತೊಡಗಿದ್ದಾರೆ. ಸಮಾಜಕ್ಕೆ ಧೈರ್ಯ ನೀಡಬೇಕಾಗಿದ್ದ ವೈದ್ಯ ಸಮೂಹ ಬಂಡವಾಳಶಾಹಿಗಳ ಹಿಡಿತದಲ್ಲಿ ಅವರ ತಾಳಕ್ಕೆ ಕುಣಿಯುತ್ತಿದ್ದಾರೆ. ಕೆಲವೊಬ್ಬ ವೈದ್ಯರು ಕೂಡ ಬಂಡವಾಳಶಾಹಿಗಳಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವ ಕೆಲಸಕ್ಕೆ ಕೈ ಹಾಕಿದ ಮೇಲೆ ಕೇಳುವುದಿನ್ನೇನು? ಮೆಜಾರಿಟಿ ವೈದ್ಯರದ್ದು ಬ್ರಿಟಿಷರು ನೇಮಿಸಿಕೊಂಡಿದ್ದ ಹಿಂದೂ ಸೈನಿಕರ ಸ್ಥಿತಿ. ಎಲ್ಲವೂ ತಿಳಿದೂ ಸಂಬಳ ನೀಡುವ ಸಂಸ್ಥೆಗೆ ಬದ್ಧರಾಗಿರಬೇಕಾದ ಪರಿಸ್ಥಿತಿ.

ಇಂತಹ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯರು ಏಕೆ ಇಂತಹ ಸಂದರ್ಭದಲ್ಲಿ 'ಸೇವೆ' ಗೆ ಬದಲು ಲೂಟಿಗೆ ಇಳಿಯುತ್ತಾರೆ ? ಎನ್ನುವ ಪ್ರಶ್ನೆ ನಮ್ಮೆಲ್ಲರ ಎದುರು ಬಂದು ನಿಲ್ಲುತ್ತದೆ . ಇದಕ್ಕೆ ಕಾರಣ ನೋಡೋಣ .  

ಎಲ್ಲಕ್ಕೂ ಮೊದಲನೆಯದಾಗಿ ಬೆಂಗಳೂರಿನಲ್ಲಿ ಒಂದು ಪರವಾಗಿಲ್ಲ ಎನ್ನುವ ಆಸ್ಪತ್ರೆ ಕಟ್ಟಲು ಆರರಿಂದ ಹತ್ತು ಕೋಟಿ ರೂಪಾಯಿ ಬೇಕು. ಆಸ್ಪತ್ರೆಯಲ್ಲಿ ಎಂತಹ ಮಷಿನರಿಗಳು ಇವೆ ಎನ್ನುವುದರ ಮೇಲೆ ಇದರ ಬಾಬತ್ತು ಇನ್ನೂ ಹೆಚ್ಚಾಗುತ್ತದೆ. ಇದರ ಜೊತೆಗೆ ಎಂಬಿಬಿಎಸ್ ನಂತಹ ಕೇವಲ ಮೂಲಭೂತ ಪದವಿ ಪಡೆಯಲು ಆಗುವ ಖರ್ಚು ಎಷ್ಟು ಗೊತ್ತೇ? ನಾಲ್ಕು ವರ್ಷದ ಕೋರ್ಸ್ ಫೀಸ್ ಮತ್ತು ಒಂದು ವರ್ಷ ಹೌಸ್ ಸರ್ಜನ್ ಗೆ ಒಂದೂ ಕಾಲು ಕೋಟಿ ರೂಪಾಯಿ! ಎಲ್ಲರಿಗೂ ಸರಕಾರಿ ಕೋಟಾದಲ್ಲಿ ಸಿಗುವುದಿಲ್ಲ, ಹಾಗೊಮ್ಮೆ ಸಿಕ್ಕರೂ ಅಲ್ಲಿಯ ಖರ್ಚು ಕೂಡ ಕಡಿಮೆಯೇನಿಲ್ಲ . ಗಮನಿಸಿ ಇದು ಕೇವಲ ಎಂಬಿಬಿಎಸ್ ಗೆ ಆದ ಖರ್ಚು! ಇದರ ನಂತರ ತಜ್ಞ ಓದಿನ ಅಗತ್ಯ ವಿರುತ್ತದೆ. ಅವರ ವೇಳೆ , ಹಣ ಎಲ್ಲವನ್ನೂ ಲೆಕ್ಕಾಚಾರ ಮಾಡುತ್ತಾ ಹೋದಾಗ ಅವರು ಮಾಡಿದ ಖರ್ಚು ವಾಪಸ್ಸು ಪಡೆಯದೇ , ಅವರ ಜೀವನ ಕಟ್ಟಿಕೊಳ್ಳದೆ ಅವರು ಮಾತ್ರ 'ಸೇವೆ ' ಮಾಡುತ್ತಿರಲಿ ಎಂದು ಬಯಸುವುದಾದರೂ ಹೇಗೆ?  ಹಣ ಹೂಡಿಕೆಯಾದ ಮೇಲೆ ಅದರ ಮೇಲೆ ಲಾಭ ಅಪೇಕ್ಷಿಸುವುದು ಸಹಜತಾನೆ ? ಧರ್ಮ ಕರ್ಮಗಳನ್ನ ನೋಡುತ್ತಾ ಕುಳಿತರೆ ಅದು ಅವರ ಕುತ್ತಿಗೆಗೆ ಉರುಳಾಗುತ್ತದೆ . ತಾನು ಬದುಕಬೇಕೆಂದರೆ ಯಾರಾದರೂ ಹೇಗಾದರೂ ಸಾಯಲಿ ಎನ್ನುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಲಕ್ಷ ಬೆಲೆ ಬಾಳುವ ನೆಲವನ್ನ ಕೋಟಿ ರುಪಾಯಿಗೆ ಏರಿಸಿದ ದಳ್ಳಾಳಿಗಳನ್ನ ಬಯ್ಯೋಣವೇ? ತನ್ನ ಪಾಲಿಗೆ ಬಂದ ಸ್ಟ್ಯಾಂಪ್ ಡ್ಯೂಟಿ ಪಡೆದ ಸರಕಾರವನ್ನ ದೂಷಿಸೋಣವೇ ? ಸಾಲ ಮಾಡಿಯಾದರೂ ಸರಿಯೇ ಇಂತಹ ಗೋಲ್ಡನ್ ಅಪರ್ಚುನಿಟಿ ಬಿಡುವುದು ಹೇಗೆ? ಎಂದು ಮೂರ್ಖರಂತೆ ಪೈಪೋಟಿಗೆ ಬಿದ್ದು ತಿಪ್ಪೆಯ ಮೇಲಿನ ಜಾಗವನ್ನ ಕೋಟಿಗೆ ಕೊಟ್ಟು ಕೊಂಡ ನಮ್ಮನ್ನ ನಾವು ಹಳಿದುಕೊಳ್ಳೋಣವೇ?

ಇದಕ್ಕೇನು ಮದ್ದು?: ಶಿಕ್ಷಣ ಮತ್ತು ಆರೋಗ್ಯ ಇವೆರೆಡು ಮಾತ್ರ ಸರಕಾರದ ಅಧೀನದಲ್ಲಿರಬೇಕು. ಇವೆರೆಡೂ ಖಾಸಗೀಕರಣ ಆಗಿರುವುದು ಪರಿಸ್ಥಿತಿ ಈ ಮಟ್ಟಿಗೆ ಬಿಗಡಾಯಿಸಲು ಕಾರಣವಾಗಿದೆ. ನಮ್ಮ ಬುಡಕ್ಕೆ ಬಂದಾಗ ಅಥವಾ ಕೊರೊನ ಅಂತಹ ವಿಷಮ ಪರಿಸ್ಥಿತಿಯಲ್ಲಿ ವ್ಯವಸ್ಥೆಯನ್ನ ಹಳಿದುಕೊಂಡು ನಾಲ್ಕು ದಿನ ಓಡಾಡಿ ಮತ್ತೆ ಮರೆತು ಹೋಗುತ್ತೇವೆ. ಇದು ಇಷ್ಟು ಸುಲಭವಾಗಿ ಮರೆಯಬಾರದ ವಿಷಯ. ಹೇಗಾದರೂ ಸರಿಯೇ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯ ನಾವು ನಮ್ಮ ಸರಕಾರದಿಂದ ಪಡೆಯಬೇಕು. ಅದು ಪ್ರತಿಯೊಬ್ಬ ನಾಗರಿಕನ ಹಕ್ಕು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಅಮೆರಿಕಾದತ್ತ ಒಮ್ಮೆ ನೋಡಿ. ಅಲ್ಲಿ ಇನ್ಶೂರೆನ್ಸ್ ಇಲ್ಲದಿದ್ದರೆ ಕಥೆ ಮುಗಿದಂತೆ. ಭಾರತದಲ್ಲೂ ಇನ್ಶೂರೆನ್ಸ್ ಭೂತ ಆಗಲೇ ಸರ್ವವ್ಯಾಪಿ! ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸರಕಾರದ ಅಂಕೆಯಲ್ಲಿರಬೇಕು. ಅದನ್ನ ನಡೆಸುವ ರೀತಿ , ಚಲಾಯಿಸುವ ವಿಧಾನದಲ್ಲಿ ಖಾಸಗಿತನ ಬೇಕು. ಇದು ಹೇಳಿದಷ್ಟು ಅಥವಾ ಬರೆದಷ್ಟು ಸುಲಭವಲ್ಲ. ಆದರೆ ನಮ್ಮ ಮುಂದೆ ಬೇರೆ ಆಯ್ಕೆಯಿಲ್ಲ . ಇದಕ್ಕೆ ಸಮಾಜದ ಎಲ್ಲಾ ವರ್ಗದ ನಾಗರಿಕರೂ ಧ್ವನಿಗೂಡಿಸಬೇಕು. ಇಲ್ಲದಿದ್ದರೆ ಭಾರತವೂ ಎರಡನೇ ಅಮೇರಿಕಾ ಆಗುವುದರಲ್ಲಿ ಸಂಶಯವಿಲ್ಲ .

ಡಾ.ರಾಜು ಎನ್ನುವ ಆಶಾಕಿರಣ:

ಜಗತ್ತು ಪೂರ್ತಿ ಹಾಳಾಗಿದೆ, ಇಲ್ಲಿ ಎಲ್ಲಾ ವೈದ್ಯರೂ ಲೂಟಿಗೆ ಇಳಿದಿದ್ದಾರೆ ಎನ್ನುವ ಸಿನಿಕತೆ ಕೂಡ ಬೇಡ. ಏಕೆಂದರೆ ಇಂದಿಗೂ ಡಾ.ರಾಜು ಅಂತಹ ವೈದ್ಯರು ನಮ್ಮ ನಡುವೆ ಇದ್ದಾರೆ. ಮಾರ್ಚ್ ನಿಂದ ಇಲ್ಲಿಯವರೆಗೆ ಇವರು ಯಾವುದೇ PPE ಕಿಟ್ ತೊಡದೆ ತನ್ನ ರೋಗಿಗಳನ್ನ ತಪಾಸಣೆ ಮಾಡುತ್ತಿದ್ದಾರೆ . ಎರಡು ದಶಕದಲ್ಲಿ ನನ್ನ ಬರಿಕೈಲಿ ಮುಟ್ಟಿದ ಮೊದಲ ವೈದ್ಯರು ಡಾ. ರಾಜು !! . ಎಲ್ಲಕ್ಕೂ ಮುಖ್ಯವಾಗಿ ಕೋವಿಡ್ ಕುರಿತು ಇರುವ ಭಯವನ್ನ ರೋಗಿಯ ಮನದಿಂದ ದೂರ ಮಾಡುತ್ತಾರೆ . ಇವರು ಈ ಕಾರ್ಯಕ್ಕೆ ತೆಗೆದುಕೊಳ್ಳುವ ಶುಲ್ಕ ನಗಣ್ಯ .

ಬೇರೆಯವರ ಕಥೆ ಬೇಡ ನನ್ನದೇ ಕಥೆಯನ್ನ ಹೇಳುತ್ತೇನೆ. ಗಣಪತಿ ಪೂಜೆಯ ನಂತರ ಶುರುವಾದ ಸುಸ್ತು ದೇಹವನ್ನ ಪೂರ್ಣವಾಗಿ ಆವರಿಸಿಕೊಂಡಿತು. ಭಾನುವಾರ ರಾತ್ರಿಯ ವೇಳೆಗೆ ಉಸಿರಾಟದ ತೊಂದರೆ ಉಂಟಾಯ್ತು. ರಾಜು ಅವರ ಕ್ಲಿನಿಕ್ಕಿಗೆ ದೌಡಾಯಿಸಿದೆ . ಕೇವಲ ಒಂದು ವಾರದಲ್ಲಿ ಚೇತರಿಕೆಯ ಮಟ್ಟ ಮುಟ್ಟಿದ್ದೇನೆ.  ಗಮನಿಸಿ ನಾನು ಇವರನ್ನ ಮೂರು ಭಾರಿ ಭೇಟಿ ಮಾಡಿದೆ. ಇದಕ್ಕೆ ತಗುಲಿದ ಖರ್ಚು ಎಷ್ಟಿರಬಹದು? ನೀವು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ! ಒಂದೂವರೆ ಸಾವಿರ ರೂಪಾಯಿ ಮಾತ್ರ !!

ಅವರು ಮೊದಲು ಹೇಳಿದ್ದು ' ಯಾವ ಕೋವಿಡ್ ಟೆಸ್ಟ್ ಮಾಡಿಸುವುದು ಬೇಡ ' ಎಂದು . ಸಿಟಿ ಸ್ಕ್ಯಾನ್ ಬಿಡಿ , ಒಂದು ಸಣ್ಣ ಚೆಸ್ಟ್ ಎಕ್ಸ್ ರೇ ಕೂಡ ನನಗೆ ಮಾಡಿಸಲಿಲ್ಲ . ಭಾನುವಾರ ನಾನು  ಉಸಿರಾಟದ ತೊಂದರೆ ಹೊತ್ತು ಕಾರ್ಪೊರೇಟ್ ಆಸ್ಪತ್ರೆಯ ಬಾಗಿಲು ಬಡಿದಿದ್ದರೆ ಏನಾಗುತ್ತಿತ್ತು ? ಉತ್ತರ ನಿಮಗೆಲ್ಲಾ ಗೊತ್ತೇ ಇದೆ .


ಕೊನೆ ಮಾತು: ಕೋವಿಡ್ ನಿಂದ ಉಂಟಾಗಿರುವ ಆರ್ಥಿಕ ಅವಾಂತರಗಳ ಪಟ್ಟಿ ಬಹಳ ದೊಡ್ಡದಿದೆ. ಪ್ರತಿ ಕಥೆಯೂ ಒಂದಕ್ಕಿಂತ ಇನ್ನೊಂದು ಹೆಚ್ಚು ದುಃಖದಾಯಕ. ಇವೆಲ್ಲವುಗಳ ನಡುವೆ ನಮ್ಮ ನಡುವೆ ಡಾ.ರಾಜು ರಂತಹ ಜನರು ಇದ್ದಾರೆ ಎನ್ನುವುದು ಒಂದಷ್ಟು ಸಮಾಧಾನ ತರುವ ವಿಷಯ. ಆದರೆ ಆರೋಗ್ಯ ಕ್ಷೇತ್ರ ಪೂರ್ಣವಾಗಿ ಸರಕಾರಿ ಅಂಕೆಗೆ ಒಳಪಡಬೇಕು. ಅದನ್ನ ವ್ಯವಸ್ಥಿತವಾಗಿ ಚಲಾಯಿಸಲು ಡಾ. ದೇವಿಶೆಟ್ಟಿ, ಡಾ.ರಾಜು ರಂತಹ ನೂರಾರು ವೈದ್ಯರನ್ನ ಗುರುತಿಸಬೇಕು . ಆ ನಿಟ್ಟಿನಲ್ಲಿ ಸರಕಾರವನ್ನ ತಿವಿಯುವ ಕೆಲಸ ನಾವು ಮಾಡಬೇಕು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com