ಜಿಡಿಪಿ ಕುಸಿದಿದೆ ಎನ್ನುವ ಗೊಣಗಾಟ; ಪಬ್ ಜಿ ಬ್ಯಾನ್ ನೊಂದಿಗೆ ಮುಂದುವರಿದಿದೆ ಚೀನಾದ ಜೊತೆಗೆ ಸೆಣಸಾಟ!

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಜಿಡಿಪಿ ಕುಸಿದಿದೆ ಎನ್ನುವ ಗೊಣಗಾಟ; ಪಬ್ ಜಿ ಬ್ಯಾನ್ ನೊಂದಿಗೆ ಮುಂದುವರಿದಿದೆ ಚೀನಾದ ಜೊತೆಗೆ ಸೆಣಸಾಟ!
ಜಿಡಿಪಿ ಕುಸಿದಿದೆ ಎನ್ನುವ ಗೊಣಗಾಟ; ಪಬ್ ಜಿ ಬ್ಯಾನ್ ನೊಂದಿಗೆ ಮುಂದುವರಿದಿದೆ ಚೀನಾದ ಜೊತೆಗೆ ಸೆಣಸಾಟ!

ಚೀನಾ ಎನ್ನುವ ದೇಶ ತಾನು ಇಡುವ ಸಣ್ಣ ಹೆಜ್ಜೆಯ ಹಿಂದೆಯೂ ದೊಡ್ಡ ಹುನ್ನಾರವನ್ನ ಇಟ್ಟುಕೊಂಡಿರುತ್ತದೆ. ಮಾವೋ ಕಾಲದಲ್ಲಿ ಸಾಂಸ್ಕೃತಿಕ ಬದಲಾವಣೆ ಅಥವಾ ಕಲ್ಚರಲ್ ರೆವಲ್ಯೂಷನ್ ಅನ್ನು ಜಾರಿಗೆ ತಂದರು. ಚೀನಾ ಇಂದು ಈ ಮಟ್ಟಿಗೆ ಬದಲಾಗಿ ನಿಲ್ಲಲು ಪ್ರಮುಖ ಕಾರಣ ಈ ಸಾಂಸ್ಕೃತಿಕ ಬದಲಾವಣೆ. ಚೀನಾ ದೇಶದಲ್ಲಿ ಇದ್ದ ಸಂಸ್ಕಾರವನ್ನ ವ್ಯವಸ್ಥಿತವಾಗಿ ನಾಶ ಮಾಡಿಬಿಟ್ಟಿತು. ಅಲ್ಲಿ ಇಂದೇನಿದ್ದರೂ ಚೀನಾ ರಾಷ್ಟ್ರೀಯತೆಯನ್ನ ಬೆಂಬಲಿಸುವ ಕಮ್ಯುನಿಸಂ ಬಿಟ್ಟು ಬೇರೇನೂ ಇಲ್ಲ.

ಅಲ್ಲಿ ದೇವರು-ನಂಬಿಕೆ-ಹಿಂದಿನ ಪದ್ದತಿಗಳು ಹೀಗೆ ಯಾವುದಕ್ಕೂ ಬೆಲೆಯಿಲ್ಲ. ಅಲ್ಲಿ ಬೆಲೆಯಿರುವುದು ಕೇವಲ ಹಣಕ್ಕೆ ಮಾತ್ರ. ಅಭಿವೃದ್ಧಿಯ ಹೆಸರಿನಲ್ಲಿ ಜನರ ಬಳಿ ಹೇರಳವಾಗಿ ಸಂಪತ್ತನ್ನ ಶೇಖರಿಸುವ ಅವಕಾಶವೇನೋ ಅಲ್ಲಿದೆ. ಆದರೆ ಬದುಕಿಗೆ ಬೇಕಾದ ತತ್ವಗಳು ರೀತಿ ನೀತಿಗಳು ಯಾವುದೂ ಅಲ್ಲಿಲ್ಲ. ತನ್ನ ಜನತೆಯನ್ನ ಸಂಪೂರ್ಣವಾಗಿ ಚೀನಾ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. 70 ರ ದಶಕದಲ್ಲಿ ಇಂತಹ ಬದಲಾವಣೆಗೆ ಚೀನಾ ಸಮಾಜದಲ್ಲಿ ಒಂದಷ್ಟು ಪ್ರತಿರೋಧವಿತ್ತು. ಆದರೆ ಇಂದು ಚೀನಾದ ಆಡಳಿತವನ್ನ ವಿರೋಧಿಸುವ, ಅವರ ರೀತಿ ನೀತಿಗಳನ್ನ ಪ್ರಶ್ನಿಸುವರಾರು ಅಲ್ಲಿಲ್ಲ. ಚೀನಾ 70 ರ ದಶಕದಲ್ಲಿ ತನ್ನ ಜನತೆಗೆ ಏನು ಮಾಡಿತು ಅದನ್ನ ಈಗ ಜಗತ್ತಿಗೆ ಸದ್ದಿಲ್ಲದೇ ಮಾಡುತ್ತಿದೆ.

ನೀವೆಲ್ಲಾ ಪಬ್ ಜಿ ಎನ್ನುವ ವಿಡಿಯೋ ಗೇಮ್ ಆಟದ ಬಗ್ಗೆ ಕೇಳಿರುತ್ತೀರಿ. ಈ ಆಟವೇನಿದೆ ಇದು ಚೀನಾದಲ್ಲಿ ಆಡುವರಿಗಾಗಿ ಮತ್ತು ಜಗತ್ತಿನ ಇತರ ದೇಶದ ಜನರು ಆಡುವುದಕ್ಕೆ ಎಂದು ಎರಡು ರೀತಿಯ ಆಟವನ್ನ ಬಿಡುಗಡೆ ಮಾಡಲಾಗಿದೆ. ಚೀನಾದಲ್ಲಿ ಆಡುವ ಆಟದಲ್ಲಿ ಇಷ್ಟೊಂದು ಹಿಂಸೆ, ರಕ್ತಪಾತ ಇರುವುದಿಲ್ಲ. ಮತ್ತು ಅಲ್ಲಿನ ಆಟಗಳು ದೇಶದ ಸುರಕ್ಷತೆಗೆ, ಅಲ್ಲಿನ ಸೈನಿಕರಿಗೆ ಸಹಾಯ ಮಾಡಲು ಆಡುವಂತೆ ನಿರ್ಮಿಸಲಾಗಿದೆ ಜಗತ್ತಿನ ಇತರ ದೇಶಗಳಲ್ಲಿ ಆಡುವ ಆಟದಲ್ಲಿ ಹಿಂಸೆ ಎನ್ನುವುದು ಬಹಳವಿದೆ. ಅಲ್ಲದೆ ಇದು ದೇಶದ ರಕ್ಷಣೆ ಇತ್ಯಾದಿ ಭಾವನೆಗಳಿಗೆ ಬೆಲೆ ನೀಡುವುದಿಲ್ಲ. ಇಲ್ಲೇನಿದ್ದರೂ ಆಟ ಗೆಲ್ಲವುದು ಮುಖ್ಯ. ಇದನ್ನ ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯುವ ಅಂಶ, ಚೀನಾ ಇಂತಹ ಆಟಗಳಿಂದ ಮುಂದಿನ ಒಂದು ತಲೆಮಾರನ್ನ ಹೆಚ್ಚು ಯೋಚಿಸಲು ಯೋಗ್ಯರಲ್ಲದ ಒಂದು ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವ ಮಟ್ಟಿಗೆ ಬೆಳೆಸಲು ಹೊಂಚು ಹಾಕಿದೆ. ವಿಡಿಯೋ ಗೇಮ್ ಗಳು ಮಕ್ಕಳ ಮೆದುಳಿನ ಮೇಲೆ ಬೀರುವ ಪರಿಣಾಮದ ಅರಿವು ಪೋಷಕರಿಗಿಲ್ಲದೆ ಹೋಗಿರುವುದು ಮಾತ್ರ ಕಟು ವಾಸ್ತವ.

ಇಂತಹ ಪಬ್ ಜಿ ಎನ್ನುವ ಆಟವನ್ನ ಭಾರತ ಸರಕಾರ ಬ್ಯಾನ್ ಮಾಡಿದೆ. ಇದರ ಜೊತೆಗೆ ಅರೆನ ಆಫ್ ವಾಲೋರ್, ಲೂಡೋ ವರ್ಲ್ಡ್ ಅಂಡ್ ಚೆಸ್ ರನ್ ಗಳಂತಹ ಆಟಗಳನ್ನ ಕೂಡ ನಿರ್ಬಂಧಿಸಲಾಗಿದೆ. ಈ ಆಟಗಳು ಕೇವಲ ಅಡಿಕ್ಷನ್ ಒಂದೇ ಅಲ್ಲದೆ ಸಮಾಜ, ದೇಶದ ಬಗ್ಗೆ ಯಾವುದೇ ರೀತಿಯ ಪ್ರೀತಿ ಇಲ್ಲದಂತೆ, ಕಾರ್ಯಸಾಧನೆಗೆ ಯಾವ ದಾರಿಯಾದರೂ ಸರಿ ಎನ್ನುವ ಮನೋಭಾವವನ್ನ ಮಕ್ಕಳಲ್ಲಿ ಬಿತ್ತುತ್ತಿವೆ. ಇದು ಸಾಂಸ್ಕೃತಿಕ ಬದಲಾವಣೆಗೆ ಚೀನಾ ಹೂಡಿರುವ ಪರೋಕ್ಷ ಯುದ್ಧ.

ಈ ಬ್ಯಾನ್ ಆದ ಎರಡು ದಿನದಲ್ಲಿ ಈ ಆಟಗಳ ಉತ್ಪಾದಕ ಸಂಸ್ಥೆ ಟೆನ್ ಸೆಂಟ್ ಬರೋಬ್ಬರಿ 34 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಕಳೆದುಕೊಳ್ಳುತ್ತದೆ. ಇಂದಿನ ದಿನದಲ್ಲಿ ಯಾವುದೇ ವಸ್ತು ಅಥವಾ ವಿಷಯದ ಮೇಲೆ ಹಿಡಿತ ಸಾಧಿಸಲು ಇರುವ ಅತ್ಯಂತ ಪ್ರಮುಖ ಅಸ್ತ್ರ ಅದನ್ನ ಹಣಕಾಸಿನ ವ್ಯವಹಾರದ ಮೂಲಕ ಕಟ್ಟಿ ಹಾಕುವುದು. ಕೇಂದ್ರ ಸರಕಾರಕ್ಕೆ ಇಂತಹ ಹಣಕಾಸು ಆಘಾತ ನೀಡುವುದು ಚನ್ನಾಗಿ ಗೊತ್ತಿದೆ. ಹೀಗಾಗಿ ಚೀನಿಯರಿಗೆ ಎಲ್ಲಿ ಹೆಚ್ಚು ಪೆಟ್ಟಾಗುತ್ತದೆ ಅಲ್ಲಿಗೆ ಹೆಚ್ಚಿನ ಪೆಟ್ಟು ಕೊಡುವ ಕೇಂದ್ರದ ನಿಲುವು ಸರಿಯಾಗಿದೆ. ಜೂನ್ ತಿಂಗಳಲ್ಲಿ ಟಿಕ್ ಟಾಕ್ ಬ್ಯಾನ್ ಮಾಡಿದುದರ ಫಲವಾಗಿ 6 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಚೀನಾ ಕಳೆದು ಕೊಂಡಿತ್ತು. ಆ ನಂತರದ ಅತಿ ದೊಡ್ಡ ಹೊಡೆತವನ್ನ ಭಾರತ ಈಗ ಪಬ್ ಜಿ ಬ್ಯಾನ್ ಮಾಡುವುದರ ಮೂಲಕ ನೀಡಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಮೇಲಿನ ಬೆಲೆಯನ್ನ ಕುರಿತು ಕೂಡ ಬಹಳಷ್ಟು ಅಸ್ಥಿರತೆ ಕಾಡುತ್ತಿದೆ. ಭಾರತ ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಜೊತೆಗೆ ಮತ್ತಿತರ ತೈಲ ಉತ್ಪಾದಿಸುವ ದೇಶಗಳ ಜೊತೆಗೆ ತನ್ನದೇ ಆದ ರೀತಿಯಲ್ಲಿ ಸೆಣಸಾಟವನ್ನ ಮಾಡುತ್ತಿದೆ. ಈ ಮಧ್ಯೆ ಭಾರತದಲ್ಲಿ ಜಿಡಿಪಿ ಕುಸಿದಿದೆ ಎನ್ನುವ ವಿಷಯ ಬಹಳ ಸದ್ದು  ಮಾಡುತ್ತಿದೆ.

ಜೂನ್ ಅಂತ್ಯಕ್ಕೆ ಭಾರತದ ಜಿಡಿಪಿ -23.9 ಪ್ರತಿಶತ ಎನ್ನುತ್ತದೆ ಅಂಕಿಅಂಶ. ಹೂಡಿಕೆ 47 ಪ್ರತಿಶತ ಕುಸಿದಿದೆ, ಜೊತೆಗೆ ಬೇಡಿಕೆ 27 ಪ್ರತಿಶತ ಕುಸಿದಿದೆ ಎನ್ನುವ ಲೆಕ್ಕಾಚಾರವನ್ನ ಎಲ್ಲಾ ಪತ್ರಿಕೆಯವರು ಹೇಳುತ್ತಿದ್ದಾರೆ. ಎಲ್ಲೋ ಕೆಲವೊಂದು ಪತ್ರಿಕೆಗಳು ಸರಕಾರದ ಖರ್ಚು ಅಂದರೆ ಅಭಿವೃದ್ಧಿಗೆ ಮಾಡುವ ಖರ್ಚು 18 ಪ್ರತಿಶತ ಹೆಚ್ಚಾಗಿದೆ ಆದರೆ ಅದು ರಾವಣನ ಹೊಟ್ಟೆಗೆ ಆರುಕಾಸಿನ ಮಜ್ಜಿಗೆ ಇದ್ದಹಾಗೆ ಎನ್ನುವ ಮಾತುಗಳನ್ನ ಸೇರಿಸಿ ಬರೆಯುತ್ತಿವೆ. ಹೌದು ಅಂಕಿಅಂಶಗಳು ಸುಳ್ಳು ಹೇಳುತ್ತಿಲ್ಲ. ಅವರು ನೀಡಿರುವ ಎಲ್ಲಾ ಅಂಕಿಅಂಶಗಳು  ಸರಿಯಾಗಿವೆ. ಆದರೆ ನಾವು ಅದನ್ನ ಒಪ್ಪಿಕೊಳ್ಳುವ ಮುನ್ನ ಒಂದಷ್ಟು ಪ್ರಶ್ನೆಯನ್ನ ಕೇಳಬೇಕಾಗಿದೆ. ನಮ್ಮ ಜಿಡಿಪಿ 23 ಪ್ರತಿಶತ ಕುಸಿದಿದೆ ಅಲ್ಲವೇ? ಸರಿ ಯಾವುದರ ಹೋಲಿಕೆಯಲ್ಲಿ ಇದು ಕುಸಿದಿದೆ? ಎನ್ನುವ ಪ್ರಶ್ನೆ ಹಾಕಿದರೆ ಉತ್ತರ ಜೂನ್ 2019ರ ಡೇಟಾ ವನ್ನ ಜೂನ್ 2020ರ ಡೇಟಾಗೆ ಹೋಲಿಕೆ ಮಾಡಿರುವುದರಿಂದ ಸಿಕ್ಕಿರುವ ಅಂಕಿಅಂಶಗಳು ಇವು. ಜೂನ್ 2019ರಲ್ಲಿ ಜಗತ್ತಿಗೆ ಕೋವಿಡ್ ಎನ್ನುವ ಕಾಮೆಟ್ ಅಪ್ಪಳಿಸಿರಲಿಲ್ಲ ಎನ್ನುವ ಸಣ್ಣ ವಿವೇಚನೆ ಬೇಡವೇ? ನೀವು ಒಂದು ಸೇಬು ಹಣ್ಣನ್ನ ಮತ್ತೊಂದು ಅದೇ ಜಾತಿಯ ಸೇಬು ಹಣ್ಣಿನ ಜೊತೆಗೆ ತುಲನೆ ಮಾಡಿ ನೋಡಬೇಕು. ನೀವು ಒಂದು ಸೇಬು ಹಣ್ಣನ್ನ ಕಿತ್ತಳೆ ಅಥವಾ ಮತ್ತ್ಯಾವುದೋ ಹಣ್ಣಿನ ಜೊತೆಗೆ ತುಲನೆ ಮಾಡಿದರೆ ನಿಖರವಾದ ಫಲಿತಾಂಶ ಸಿಕ್ಕಳು ಹೇಗೆ ಸಾಧ್ಯ?

ಗಮನಿಸಿ ಇದು ಜಗತ್ತಿನಲ್ಲಿ ಪ್ರಥಮ ಬಾರಿಗೆ ಆಗಿರುವ ಘಟನೆ. ಜಗತ್ತಿನ ಪ್ರತಿಯೊಂದು ರಾಷ್ಟ್ರವನ್ನೂ ನಿಲ್ಲಿಸಿದ ಇಂತಹ ಘಟನೆ ಇತಿಹಾಸದಲ್ಲಿ ನಡೆದ ಉದಾಹರಣೆ ಇಲ್ಲ. ಇದರ ಅರ್ಥ ಇದು ಸಾಮಾನ್ಯ ಸನ್ನಿವೇಶವಲ್ಲ. ಇದೊಂದು ಅತ್ಯಂತ ವಿಶೇಷ ಸನ್ನಿವೇಶ ಎಂದು ಒಪ್ಪಿಕೊಳ್ಳಬೇಕಾಗಿರುವ ಅಂಶ. ಹೀಗೆ ಜಗತ್ತು ಹಿಂದೆಂದೂ ಕಂಡು ಕೇಳರಿಯದ ಸನ್ನಿವೇಶವನ್ನ ಸಾಮಾನ್ಯ ಸನ್ನಿವೇಶದೊಂದಿಗೆ ತುಲನೆ ಮಾಡಿ ಭಾರತದಲ್ಲಿ ಜಿಡಿಪಿ ಕುಸಿದಿದೆ ಎನ್ನುವುದು ಹಾಸ್ಯಾಸ್ಪದ.

ಗಮನಿಸಿ ನಮ್ಮ ದೇಶದಲ್ಲಿನ ಜಿಡಿಪಿ ಮತ್ತು ಗ್ರೋಥ್ ರೇಟ್ ಅಂಶಗಳು ಅವು ಸಕಾರಾತ್ಮಕವಾಗಿರಲಿ ಅಥವಾ ನಕಾರಾತ್ಮಕವಾಗಿರಲಿ ಅವುಗಳನ್ನ ಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಏಕೆಂದರೆ ಭಾರತದಲ್ಲಿ ಎಷ್ಟು ಆರ್ಗನೈಸ್ಡ್ ಸೆಕ್ಟರ್ ಗಳಿವೆ ಅಷ್ಟೇ ಆನ್ ಆರ್ಗನೈಸ್ಡ್ ಸೆಕ್ಟರ್ ಗಳಿವೆ. ಇಲ್ಲಿಯ ಅಂಕಿ-ಅಂಶವನ್ನ ಹೊರತೆಗೆಯುವುದು ಹೇಗೆ? ಸಮಾಜದ ಎಲ್ಲಾ ಸೆಕ್ಟರ್ ಗಳು ಕೆಟ್ಟದಾಗಿಲ್ಲ. ಆದರೆ ಹಲವು ಸೆಕ್ಟರ್ ಗಳಲ್ಲಿ ಕುಸಿದಿರುವ ಬೇಡಿಕೆ ಜಿಡಿಪಿ ಕುಸಿತಕ್ಕೆ ಕಾರಣವಾಗಿವೆ.

ಗಮನಿಸಿ ನೋಡಿ ಭಾರತದಲ್ಲಿ ಎಲ್ಲವೂ ಸರಿಯಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆ ಭಾರತದ ಮಾರುಕಟ್ಟೆಯನ್ನ ಕುಸಿಯುವಂತೆ ಮಾಡುತ್ತದೆ. ಇಂದು ಜಗತ್ತು ಹಿಂದೆಂದಿಗಿಂತ ಹೆಚ್ಚು ಅವಲಂಬಿತವಾಗಿವೆ. ಬ್ರಿಟನ್ ಯೂರೋಪಿಯನ್ ಯೂನಿಯನ್ ಬಿಡುವುದಿರಬಹುದು, ಚೀನಾ ಅಮೇರಿಕಾ ಟ್ರೇಡ್ ವಾರ್ ಇರಬಹುದು ಇವೆಲ್ಲ ಅವರ ನಡುವಿನ ಸಮಸ್ಯೆಗಳು ಎನ್ನುವ ಹಾಗಿಲ್ಲ. ಇವು ಇಂದಿಗೆ ಗ್ಲೋಬಲ್ ಸಮಸ್ಯೆಗಳು. ಇವು ಭಾರತದ ಆಟೋಮೊಬೈಲ್ ಮತ್ತು ಟೆಕ್ಸ್ ಟೈಲ್ ಉದ್ದಿಮೆಗಳ ಮೇಲೆ ಭಾರಿ ಹೊಡೆತ ನೀಡಿವೆ. ಇವೆಲ್ಲವೂ ಕರೋನ ಎನ್ನುವ ಬಾಂಬ್ ಜಗತ್ತಿನ ಮೇಲೆ ಬೀಳುವ ಮುಂಚಿನ ಅಂಶಗಳು . ಈಗಂತೂ ಹೇಳುವುದಕ್ಕೆ ಬಾಕಿ ಇನ್ನೇನಿದೆ . ಇಂತಹ ಸನ್ನಿವೇಶಕ್ಕೂ ಮೊದಲೇ ಆಟೋಮೊಬೈಲ್ ಮತ್ತು ಟೆಕ್ಸ್ಟ್ ಟೈಲ್ ಕ್ಷೇತ್ರಗಳು ಭಾರತದಲ್ಲಿ ಕುಸಿತ ಕಂಡಿದ್ದವು . ಈಗ ಅದು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿದೆ . ಹೀಗಾಗಿ ಉತ್ಪಾದನಾ ವಲಯದಲ್ಲಿ ಕುಸಿತ ಕಂಡು ಬಂದಿದೆ. ಇದು ಜಿಡಿಪಿ ಕುಸಿಯಲು ಕಾರಣವಾಗಿದೆ. ಸಹಜವಾಗೇ ಬೇಡಿಕೆ ಕುಸಿದಾಗ ಜಿಡಿಪಿ, ಗ್ರೋಥ್ ರೇಟ್ ಎಲ್ಲವೂ ಕುಸಿತ ಕಾಣುತ್ತದೆ. ಆದರೆ ಇದು ಇಷ್ಟು ಎಂದು ಒಳ್ಳೆಯ ಸಮಯದ ಅಂಕಿಅಂಶದೊಂದಿಗೆ ಹೋಲಿಕೆ ಮಾಡುವುದು ಮಾತ್ರ ಸರಿಯಲ್ಲ.

ಹಣಕಾಸು ಸಂಸ್ಥೆಗಳಲ್ಲಿ ಇರುವ ಅನುತ್ಪಾದಕ ಆಸ್ತಿ ಮತ್ತು Infrastructure Leasing & Financial Services (ಐಎಲ್ಅಂಡ್ಎಫ್) ಕುಸಿತ ಕೂಡ ಜಿಡಿಪಿ ಕುಸಿತಕ್ಕೆ ದೇಣಿಗೆ ನೀಡಿದೆ. ಇದರ ಜೊತೆಗೆ ಹೂಡಿಕೆದಾರ ಅತ್ಯಂತ ಸೂಕ್ಷ್ಮ ಮನಸ್ಸಿನವನು. ತನ್ನ ಹಣ ಮುಳುಗುವ ಒಂದು ಸಣ್ಣ ಸಂಶಯ ಬಂದರೆ ಸಾಕು ಆತ ಅಲ್ಲಿಂದ ಪರಾರಿಯಾಗುತ್ತಾನೆ. ವಿಷಯ ಸುಳ್ಳೆ ಆಗಿದ್ದರೂ ಆತ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಾನೆ. ಹೀಗಾಗಿ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಹಣದ ಹರಿವು ಇಲ್ಲವೆಂದರೆ, ಬೇಡಿಕೆ ಇಲ್ಲವೆಂದು ಅರ್ಥ. ಕುಸಿದ ಬೇಡಿಕೆ, ಕಡಿಮೆ ಹಣ ನಮ್ಮ ಅಭಿವೃದ್ಧಿಯನ್ನ ಕಡಿಮೆ ಮಾಡಿರುವುದು ಸುಳ್ಳಲ್ಲ.

ಇದೆ ಮಾತು ನಮ್ಮ ಜಿಡಿಪಿ ಬಹಳ ಚೆನ್ನಾಗಿದ್ದಾಗ ಕೂಡ ಅನ್ವಯವಾಗುತ್ತದೆ. ಅಂದರೆ ಜಿಡಿಪಿ ಎನ್ನುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ಅಭಿವೃದ್ದಿಯನ್ನ ಅಳೆಯುವ ಅಳತೆಗೋಲು ಅಷ್ಟೇ, ಅದು ಭಾರತದ ಆಂತರಿಕ ಶಕ್ತಿಯ ಅಳತೆಗೋಲಲ್ಲ. ಇಂದಿನ ಸ್ಥಿತಯಲ್ಲಿ ಆಂತರಿಕ ಕೊಳ್ಳುವಿಕೆ, ಬೇಡಿಕೆ ಎಲ್ಲವೂ ಕುಸಿದಿದೆ. ಅದರ ಬಗ್ಗೆಯೂ ಯಾವುದೇ ಸಂಶಯಗಳಿಲ್ಲ. ಆದರೆ ಇಂತಹ ಅಂಕಿಅಂಶಗಳನ್ನ ಆರೋಗ್ಯಕರ ಅಂಕಿಅಂಶಗಳೊಂದಿಗೆ ತುಲನೆ ಮಾಡುವುದು ಮಾತ್ರ ಸರಿಯಾದ ಪರಿಪಾಠವಲ್ಲ.

ಕೊನೆ ಮಾತು: ನೆನಪಿಡಿ  ಜಿಡಿಪಿ, ಗ್ರೋಥ್ ರೇಟ್ ಇವೆಲ್ಲ ಫೋಟೋ ಇದ್ದಹಾಗೆ. ಅಂದರೆ ಗಮನಿಸಿ ಒಂದು ಫೋಟೋದಲ್ಲಿ ನೀವು ಕಣ್ಣು ಮುಚ್ಚಿರಬಹುದು ಅಥವಾ ಬಾಯಿ ದೊಡ್ಡದಾಗಿ ತೆಗೆದಿರಬಹುದು. ಕೆಲವೊಂದು ಫೋಟೋದಲ್ಲಿ ನೀವು ಅತ್ಯಂತ ಕೆಟ್ಟದಾಗಿ ಕಾಣಬಹುದು ಅಥವಾ ಸುಂದರವಾಗಿ ಕಾಣಬಹುದು. ಅವೆಲ್ಲ ಆ ಕ್ಷಣದ ಚಿತ್ರಗಳು. ಚಿತ್ರ ತೆಗೆದ ಮರುಗಳಿಗೆ ನೀವು ಕಣ್ಣು ಸಾಮಾನ್ಯವಾಗೇ ಬಿಟ್ಟಿರುತ್ತೀರಿ. ಅಲ್ಲವೇ? ಬದುಕಿನಲ್ಲಿ ಹೇಗೆ ಏರಿಳಿತ ಸಾಮಾನ್ಯವೂ ಅಷ್ಟೇ ಸಾಮಾನ್ಯವಾಗಿ ಇಂತಹ ಏರಿಳಿತಗಳು ಕೂಡ. ಅಂದಹಾಗೆ ನಮ್ಮ ಕುಸಿದ ಜಿಡಿಪಿ ಸಂಖ್ಯೆಯ ಅರ್ಧ ಕೂಡ ಜಗತ್ತಿನ 90 ಪ್ರತಿಶತ ದೇಶಗಳು ಸಾಧಿಸುತ್ತಿಲ್ಲ. ಖದೀಮ ಚೀನಾ ದೇಶವನ್ನ ಹೊರತು ಪಡಿಸಿ ಜಗತ್ತಿನ ಮುಕ್ಕಾಲು ಪಾಲು ದೇಶಗಳ ಕಥೆ ಇಂದಿಗೆ ಸೇಮ್! ನಮ್ಮ ಸರಕಾರ ಇದನ್ನ ಬಯಸಿ ತಂದುಕೊಂಡದ್ದಲ್ಲ ಅಲ್ಲದೆ ಇಂತಹ ಸನ್ನಿವೇಶದಿಂದ ದೇಶವನ್ನ ಚಿಟಿಕೆ ಹೊಡೆದು ಹೊರತರಲು ಕೂಡ ಸಾಧ್ಯವಿಲ್ಲ. ಇಂತಹ ಸ್ಥಿತಿಯಿಂದ ಹೊರಬರಲು ಬೇಕಾಗುವುದು ಪ್ರಮುಖವಾಗಿ 'ಸಮಯ' ಮತ್ತು ಉತ್ತಮ ಆರ್ಥಿಕ ನೀತಿಗಳು. ಅಲ್ಲಿಯವರೆಗೆ ಸಮಾಜದಲ್ಲಿ ಆಗುವ ಎಲ್ಲಾ ಬದಲಾವಣೆಗಳಿಗೂ ತಿಳುವಳಿಕೆ ಇಲ್ಲದಿದ್ದರೂ ಏನಾದರೂ ಹೇಳುವ ಬದಲು ಸಂಯಮದಿಂದ ಕಾಯುವುದು ಮತ್ತು ಸರಕಾರದ ಕಾರ್ಯದ ಮೇಲೆ ನಂಬಿಕೆ ಇಡುವುದು ಈಗ ನಾವು ಮಾಡಬೇಕಾಗಿರುವ ಕೆಲಸ.  

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com