ಜಗತ್ತು ಸದ್ದಿಲ್ಲದೇ 'ವಾರ್ ಎಕಾನಾಮಿ'ಯತ್ತ ಸರಿಯುತ್ತಿದೆಯೇ?

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಜಗತ್ತು ಸದ್ದಿಲ್ಲದೇ 'ವಾರ್ ಎಕಾನಾಮಿ'ಯತ್ತ  ಸರಿಯುತ್ತಿದೆಯೇ?
ಜಗತ್ತು ಸದ್ದಿಲ್ಲದೇ 'ವಾರ್ ಎಕಾನಾಮಿ'ಯತ್ತ  ಸರಿಯುತ್ತಿದೆಯೇ?

ಕೊರೋನಾ ನಮ್ಮ ಆರ್ಥಿಕ ಸ್ಥಿತಿಯನ್ನ ಛಿದ್ರ ಮಾಡಿರುವ ವಿಷಯ ಹೊಸತೇನಲ್ಲ. ಅದು ವೈಯಕ್ತಿಕ ನೆಲೆಗಟ್ಟಿನಿಂದ ಹಿಡಿದು ದೇಶಗಳನ್ನ ಮುಳುಗಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಕೊರೋನ ನಮ್ಮ ಜಗತ್ತನ್ನ ಆವರಿಸಿ ಆರು ತಿಂಗಳಾಗುತ್ತ ಬಂದಿದೆ. ಆದರೆ ಇಂತಹ ಸ್ಥಿತಿಯಲ್ಲಿ ನಾವು ಬಹಳ ವರ್ಷಗಳಿಂದ ಬದುಕುತ್ತಿದ್ದೇವೇನೋ ಎನ್ನುವ ಭಾವನೆ ನಮ್ಮನ್ನ ಆವರಿಸಿದೆ. ಹೀಗಾಗಲು ಪ್ರಮುಖ ಕಾರಣ ಹಣಕಾಸಿನ ಹರಿದಾಟ ಇಲ್ಲದೆ ಇರುವುದು.

ಮನುಷ್ಯ ಎಷ್ಟೇ ಹಣವನ್ನ ಸಂಗ್ರಹಿಸಿ ಇಟ್ಟಿರಲಿ ಅದು ಲೆಕ್ಕಕ್ಕೆ ಬರುವುದಿಲ್ಲ. ನಿತ್ಯ ಏನಾದರೊಂದು ಕಾರ್ಯದಲ್ಲಿ ತೊಡಗಿಕೊಂಡಿರಬೇಕು, ಹಣ ಎನ್ನುವುದು ಒಂದು ಕೈಯಿಂದ ಇನ್ನೊಂದು ಕೈಗೆ ವರ್ಗಾವಣೆ ಆಗುತ್ತಿರಬೇಕು. ಅಂದರೆ ಸರಳವಾಗಿ ಹೇಳುವುದಾದರೆ ಸಮಾಜ ಚಲನೆಯಲ್ಲಿರಬೇಕು. ಚಲನೆಯಿಲ್ಲದ ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆ ಕಾಣಿಸಿಕೊಳ್ಳಲು ಬಹಳ ಸಮಯ ಹಿಡಿಯುವುದಿಲ್ಲ. ಮ್ಯಾಕ್ ಕಿನ್ಸೆ ಎನ್ನುವ ಸಂಸ್ಥೆ ಮಾಡಿರುವ ಸಮೀಕ್ಷೆ ಪ್ರಕಾರ ಮಾರ್ಚ್ ತಿಂಗಳಲ್ಲಿ ಶುರುವಾದ ಲಾಕ್ ಡೌನ್ ಪ್ರಹಸನದಿಂದ ವಿತ್ತ ಜಗತ್ತು ಪೂರ್ಣವಾಗಿ ನಿಂತು ಹೋಗಿತ್ತು. ಜೂನ್ ತಿಂಗಳ ನಂತರ ನಿಧಾನವಾಗಿ ತೆರೆದುಕೊಂಡ ಮಾರುಕಟ್ಟೆ ಆರ್ಥಿಕ ವಹಿವಾಟುಗಳನ್ನ ದಾಖಲಿಸಲು ಶುರುಮಾಡಿತು. ಇದರ ಪ್ರಕಾರ ಇವತ್ತು ಜಗತ್ತು ತನ್ನ ಹಿಂದಿನ ಸ್ಥಿತಿಯ 70ನೇ ಭಾಗದಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇದು ಎಲ್ಲಾ ವಲಯಗಳಿಗೂ ಅನ್ವಯವಲ್ಲ. ಅಲ್ಲದೆ ಇದು ಒಂದಷ್ಟು ಸಾವಿರ ಜನಗಳನ್ನ 35ದೇಶಗಳಲ್ಲಿ ಸಂದರ್ಶಿಸಿ ಮಾಡಿರುವ ಸಮೀಕ್ಷೆ. ಒಂದು ಭಾರತದಲ್ಲಿ ಹತ್ತು ಭಾರತವಿದೆ. ಹೀಗಾಗಿ ಒಂದೇ ದೇಶದಲ್ಲಿ ಇದು ಸರಿ ಎಂದು ಹೇಳಲು ಬರುವುದಿಲ್ಲ. ಇನ್ನು ಬೇರೆ ದೇಶಗಳ ಕಥೆಯೇನು? ಇವತ್ತಿನ ಲೇಖನದಲ್ಲಿ ಹೀಗೆ ಹಲವಾರು ದೇಶಗಳ ಆರ್ಥಿಕತೆ ಹೇಗಿದೆ ಎನ್ನುವುದನ್ನ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಮೆರಿಕಾ ಆರ್ಥಿಕತೆ ಹೇಗಿದೆ?

ಮೂಡಿ ಎನ್ನುವ ಸಂಸ್ಥೆ ಮಾಡುವ ಸಮೀಕ್ಷೆ ಪ್ರಕಾರ ಅಮೇರಿಕಾ ಪ್ಯಾಂಡೆಮಿಕ್ ಬರುವುದಕ್ಕೆ ಮುಂಚಿನ ವಹಿವಾಟಿಗೆ ಹೋಲಿಸಿದರೆ ಇಂದು 59 ಪ್ರತಿಶತ ವಹಿವಾಟು ನಡೆಸುತ್ತಿದೆ. ಆದರೆ ಗಮನಿಸಿ ಇದು ಒಟ್ಟಾಗಿ ಹೇಳಿದ ಒಂದು ಸಂಖ್ಯೆಯಾಗಿದೆ. ಹೋಟೆಲ್, ಟೂರಿಸಂ ಇಂಡಸ್ಟ್ರಿ ಇವುಗಳು ತಮ್ಮ ಹಿಂದಿನ ಲಯವನ್ನ ಕಂಡುಕೊಳ್ಳಲು ಇನ್ನೊಂದೆರೆಡು ವರ್ಷ ಖಂಡಿತ ಬೇಕಾಗುತ್ತದೆ. ಹೊಸದಾಗಿ ಲಾಕ್ ಡೌನ್ ಮಾಡಬಹುದು ಎನ್ನುವ ಕೂಗು ಹೂಡಿಕೆದಾರರನ್ನ ಮತ್ತೆ ತನ್ನ ಮನೆಯಲ್ಲಿ ಅವಿತು ಕೂರುವಂತೆ ಮಾಡಿದೆ. ಇದರ ನೇರ ಪರಿಣಾಮ ಅಮೇರಿಕಾದ ಎಲ್ಲಾ ಪ್ರಮುಖ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ಅಮೇರಿಕಾ ದೇಶದ ಟ್ರಷರಿ ಬಾಂಡ್ ಗಳು ಇಲ್ಲಿಯವರೆಗೆ ಬಹು ಬೇಡಿಕೆಯನ್ನ ಉಳಿಸಿಕೊಂಡು ಬಂದ ಒಂದು ಉತ್ತಮ ಹೂಡಿಕೆ ಎಂದು ಪರಿಗಣಿಸಲ್ಪಟ್ಟಿತ್ತು. ಅದು ಕೂಡ ಈ ವಾರ ಬೇಡಿಕೆಯನ್ನ ಕಳೆದುಕೊಂಡು ತನ್ನ ಮೌಲ್ಯದಲ್ಲಿ ಒಂದಷ್ಟು ಕುಸಿತವನ್ನ ದಾಖಲಿಸಿದೆ.

ಕೆಲಸವಿಲ್ಲದವರ ಭತ್ಯೆಗಾಗಿ ನೊಂದಾಯಿಸಿಕೊಳ್ಳುವವರ ಸಂಖ್ಯೆ ಸಾಮಾನ್ಯ ಸ್ಥಿತಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 1967ರ ನಂತರ ಇಂತಹ ಒಂದು ಸ್ಥಿತಿಯನ್ನ ಈ ದೇಶ ಕಂಡದ್ದು ಇದೆ ಮೊದಲು. ಸಿನಿಮಾ ಮಂದಿರಗಳು 90 ಪ್ರತಿಶತ ಖಾಲಿ ಹೊಡೆಯುತ್ತಿವೆ. ಹೋಟೆಲ್ 30 ಪ್ರತಿಶತ ಖಾಲಿ, ಟೂರಿಸಂ 70 ಪ್ರತಿಶತ ಕುಸಿತ ಕಂಡಿದೆ. ಒಟ್ಟಾರೆ ಮಾರ್ಚ್ ನಿಂದ ಇಲ್ಲಿಯವರೆಗೆ ಒಂದು ಕೋಟಿ ಕೆಲಸವನ್ನ ಅಮೇರಿಕಾ ಕಳೆದುಕೊಂಡಿದೆ. ಹಾಗಾದರೆ ಮತ್ತೆ ಅಮೇರಿಕಾ ತನ್ನ ಮೊದಲಿನ ವೇಗವನ್ನ ಕಂಡುಕೊಳ್ಳುವುದು ಯಾವಾಗ? ಎನ್ನುವ ಪ್ರಶ್ನೆಗೆ 2023ರ ಕೊನೆಯ ವೇಳೆಗೆ ಎನ್ನುವುದು ಉತ್ತರವಾಗಿದೆ. ಇದನ್ನ ಸುಮ್ಮನೆ ಊಹೆ ಮಾಡಿ ಹೇಳಿದ್ದಲ್ಲ. ಹತ್ತಾರು ವರ್ಷದ ಅನುಭವವಿರುವ ಹಣಕಾಸು ಸಂಸ್ಥೆಗಳಲ್ಲಿ ದುಡಿಯುತ್ತಿರುವ ಆರ್ಥಿಕ ತಜ್ಞರು ಅಳೆದು ತೂಗಿ ಹೇಳಿದ ಸಮಯವಿದು. ಹೀಗಾಗಿ ಕೊರೋನ ಮುಗಿಯಿತು ಅನ್ನುವಂತಿಲ್ಲ. ಅದರ ನೋವು ಇನ್ನು ಎರಡು ಮೂರು ವರ್ಷದ ವರೆಗೆ ಇರಲಿದೆ. ಸದ್ಯಕ್ಕೆ ಅಮೆರಿಕನ್ ಸಮಾಜ ಸರಕಾರ ಇನ್ನೊಂದು ಉತ್ತೇಜಕ ಪ್ಯಾಕೇಜ್ ಘೋಷಿಸಲಿ ಎಂದು ಕಾಯುತ್ತಿದೆ.

ಇಂಗ್ಲೆಂಡ್ ಯೂರೋಪಿಯನ್ ಯೂನಿಯನ್ ನಿಂದ ಕೂಡ ಹೊರಗೆ ಹೋಗುತ್ತಿದೆ, ಈ ದೇಶದ ಕಥೆಯೇನು?

ಯೂರೋಪಿಯನ್ ಯೂನಿಯನ್ ದೇಶಗಳಲ್ಲಿ ತೊಂದರೆಯಾದರೆ ಒಕ್ಕೂಟದಿಂದ ಸಹಾಯ ಪಡೆಯುವ ಆಶಾಭಾವವಿರುತ್ತದೆ. ಇಂಗ್ಲೆಂಡ್ ಆ ಅರ್ಥದಲ್ಲಿ ಈಗ ಒಬ್ಬಂಟಿ. ಅದರ ಬೆನ್ನಿಗೆ ಈಗ ಯಾರ ಬಲವೂ ಇಲ್ಲ. ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ ಲಾಕ್ ಡೌನ್ ಆಗಬಹುದು ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ. ಈ ಹಿನ್ನಲೆಯಲ್ಲಿ ಹೋಟೆಲ್ ಮತ್ತು ರೆಸ್ಟುರಾಂಟ್ ಗಳಿಗೆ ಇನ್ನಷ್ಟು ನಿಬಂಧನೆಗಳನ್ನ ಹೇರಲಾಗಿದೆ. ಮಂಗಳವಾರ ಅಂದರೆ 22/09/2020 ರಂದು ಪ್ರೀಮಿಯರ್ ಇನ್ ಹೋಟೆಲ್ ಮತ್ತು ಬೀಫ್ ಈಟರ್ ಎನ್ನುವ ರೆಸ್ಟುರಾಂಟ್ ಮಾಲೀಕರು, "ಪರಿಸ್ಥಿತಿ ಹೀಗೆ ಮುಂದುವರಿದರೆ ತಮ್ಮ ಬಹಳಷ್ಟು ಹೋಟೆಲ್ ಗಳನ್ನ ಮುಚ್ಚಬೇಕಾಗುತ್ತದೆ. 6 ಸಾವಿರ ಜನರನ್ನ ಕೆಲಸದಿಂದ ತೆಗೆಯಬೇಕಾಗುತ್ತದೆ". ಎನ್ನುವ ಹೇಳಿಕೆಯನ್ನ ನೀಡಿದ್ದಾರೆ. ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಇಂಗ್ಲೆಂಡ್ ಅತ್ಯಂತ ಹೀನಾಯವಾಗಿ ಕುಸಿತ ಕಂಡಿರುವ ದೇಶ ಎನ್ನುವ ಪಟ್ಟವನ್ನ ಪಡೆದುಕೊಂಡಿದೆ. ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವಂತೆ ಅವರು ಈಗ ಯೂರೋಪಿಯನ್ ಒಕ್ಕೂಟದಿಂದ ಕೂಡ ದೂರಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ಅಲ್ಲಿ ಕೂಡ ವ್ಯಾಪಾರ ಮಾಡುವುದು ಸುಲಭವಲ್ಲ. ಕಾಮನ್ ವೆಲ್ತ್ ದೇಶಗಳ ಜೊತೆಗೆ ಹೆಚ್ಚಿನ ವ್ಯಾಪಾರ ವಹಿವಾಟು ವೃದ್ಧಿಸಿಕೊಂಡರೂ ಮರಳಿ ತನ್ನ ವೈಭವನ್ನ ಪಡೆಯಲು 5 ವರ್ಷ ಕಾಯಬೇಕಾಗುತ್ತದೆ.

ಸ್ಪೇನ್ ದೇಶ ಆಗ್ರೋ ಬೇಸ್ಡ್ ಮತ್ತು ಟೂರಿಸಂ ಎಕಾನಮಿ ಆಗಿದೆ.

ಜೂನ್ ತಿಂಗಳಿಂದ ಶುರುವಾಗುವ ಟೂರಿಸಂ ಸೆಪ್ಟೆಂಬರ್ ವರೆಗೂ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಕ್ಟೋಬರ್ ತಿಂಗಳು ಕೂಡ ಪರವಾಗಿಲ್ಲ ಎನ್ನುವ ವ್ಯಾಪಾರ ಮಾಡುತ್ತದೆ ಈ ವಲಯ. ಆದರೆ ಈ ವರ್ಷ 70 ಪ್ರತಿಶತ ಹೋಟೆಲ್ ಗಳು ಖಾಲಿಯಾಗಿವೆ. ಮುಂಗಡ ಬುಕಿಂಗ್ ಆಗಿದ್ದವೆಲ್ಲ ರದ್ದಾಗಿದೆ. ಈ ವರ್ಷ ಸ್ಪೇನ್ ನಲ್ಲಿ ಟೂರಿಸಂ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. ಮಯೋರ್ಕ ಎನ್ನುವ ನಗರದಲ್ಲಿ ಹೋಟೆಲ್ ನಡೆಸುವ ಉದ್ಯಮಿಯೊಬ್ಬರು ಇದು ಸಾಮಾನ್ಯ ಸಮಯವಲ್ಲ ಇದನ್ನ ನಿಸ್ಸಂಕೋಚವಾಗಿ 'ವಾರ್ ಎಕಾನಮಿ' ಎಂದು ಹೇಳಬಹುದು ಎಂದು ಹೇಳುತ್ತಾರೆ. ಹೋಟೆಲ್ ಮತ್ತು ರೆಸ್ಟುರಾಂಟ್ ಗಳು ತಮ್ಮ ವಹಿವಾಟಿನಲ್ಲಿ ಭಾರಿ ಇಳಿತವನ್ನ ದಾಖಲಿಸುತ್ತಿವೆ. ಹೀಗಾಗಿ ವೈನ್, ಹಂದಿ ಮಾಂಸದ ಬೇಡಿಕೆ ಕೂಡ ಕುಸಿದಿದೆ. ಯುದ್ಧ ಕಾಲದಲ್ಲಿ ಇರುವಂತಹ ಮಾರುಕಟ್ಟೆಯನ್ನ ನಾವು ಇಂದು ನೋಡುತ್ತಿದ್ದೇವೆ. ಯುದ್ಧ ಆಗಿಲ್ಲ ಎನ್ನುವುದನ್ನ ಬಿಟ್ಟರೆ ಪರಿಸ್ಥಿತಿ ಅದಕ್ಕಿಂತ ಕಡಿಮೆಯೇನಿಲ್ಲ ಎನ್ನುವುದು ಬಹಳಷ್ಟು ಉದ್ಯಮಿಗಳ ಮಾತು. ಅದನ್ನ ಪುಷ್ಟಿಕರಿಸುವಂತೆ ಸ್ಪೇನ್, ಇಂಗ್ಲೆಂಡ್ ನಂತರ ಜಗತ್ತಿನ ಪ್ರಮುಖ ಆರ್ಥಿಕತೆಯ ದೇಶಗಳಲ್ಲಿ ಹೀನಾಯ ಕುಸಿತ ಕಂಡ ಎರಡನೇ ದೇಶವಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಸ್ಪೇನ್ ಎಲ್ಲವೂ ಸರಿ ಹೋದರೂ ಮತ್ತೆ 2004/2005ರ ತನ್ನ ಉನ್ನತಿಯ ದಿನಗಳನ್ನ ಕಾಣಲು 8 ರಿಂದ 10 ವರ್ಷ ಕಾಯಬೇಕಾಗುತ್ತದೆ.

ಮತ್ತೆ ಲಾಕ್ ಡೌನ್ ನತ್ತ ನಡೆದಿದೆ ಇಸ್ರೇಲ್

ಇಸ್ರೇಲ್ ಶುಕ್ರವಾರ ಅಂದರೆ 18/೦9/2020 ರಿಂದ ಮತ್ತೆ ಲಾಕ್ ಡೌನ್ ಮಾಡಿದೆ. ಪ್ರತಿ ದಿನ ಐದು ಸಾವಿರಕ್ಕೂ ಮೀರಿದ ಕೋವಿಡ್ ಸೋಂಕನ್ನ ಕಾಣುತ್ತಿರುವ ಈ ಪುಟ್ಟ ದೇಶ ಮತ್ತೆ ಲಾಕ್ ಡೌನ್ಗೆ ಒಳಪಡಿಸಿಕೊಂಡಿದೆ. ಇದರಿಂದ ಕೆಲಸವಿಲ್ಲದವರ ಸಂಖ್ಯೆ 13.6 ಪ್ರತಿಶತಕ್ಕೆ ಏರುವ ಸಾಧ್ಯತೆಗಳಿವೆ. ಎರಡನೇ ಸುತ್ತಿನ ಲಾಕ್ ಡೌನ್ ನಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಸರಕಾರ ಖರ್ಚು ಮಾಡಬೇಕಾಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದು ಕೋವಿಡ್ ಅನ್ನು ಹಿಡಿತಕ್ಕೆ ತರಲು ಇಸ್ರೇಲ್ ಸರಕಾರ ವಿಫಲವಾದರೆ ಇಸ್ರೇಲ್ ಎಕಾನಮಿ ಬಹಳ ಕುಸಿತ ಕಾಣಲಿದೆ. ಉತ್ತಮವಾಗಿ ಎಲ್ಲವೂ ಹಿಡಿತಕ್ಕೆ ಬಂದರೆ ಪುಟಾಣಿ ಇಸ್ರೇಲ್ 2021 ಅಂತ್ಯಕ್ಕೆ ಮೊದಲಿನ ಅಭಿವೃದ್ಧಿ ದಾರಿಗೆ ಬರುತ್ತದೆ.

ಜಪಾನ್ ಹೇಗೆ ಸಾಗುತ್ತಿದೆ?

ಕೊರೋನ ವೈರಸ್ ಪರಿಸ್ಥಿತಿಗೆ ಮುಂಚೆ ಕೂಡ ಜಪಾನ್ ಡಿಫ್ಲೇಷನ್ ನಲ್ಲಿ ಸಾಗುತ್ತಿತ್ತು. ಹಣವಿದೆ, ಕೆಲಸವೂ ತಕ್ಕ ಮಟ್ಟಿಗಿದೆ ಆದರೆ ಬೇಡಿಕೆ ಕುಸಿತವಾಗಿತ್ತು. ಇದೊಂತರಹ ಸಮುದ್ರದಲ್ಲಿ ಇದ್ದ ಹಾಗೆ. ಕಣ್ಣಿಗೆ ಕಾಣುವಷ್ಟು ನೀರಿದೆ ಆದರೆ ಕುಡಿಯಲು ಬರುವುದಿಲ್ಲ. ಎಲ್ಲವೂ ಇದ್ದು ಏನೂ ಇಲ್ಲ ಎನ್ನುವ ಹಾಗೆ. ಈಗ ಕೇಳುವುದಿನ್ನೇನು? ಜಪಾನ್ ದೇಶದ ಜಿಡಿಪಿ ಬಹಳ ಕುಸಿತ ಕಂಡಿದೆ. ಏಪ್ರಿಲ್ ನಿಂದ ಜೂನ್ 2020ರ ವಹಿವಾಟು 1980ರ ಅಂಕಿ-ಅಂಶವನ್ನ ಹೋಲುತ್ತದೆ ಎನ್ನಲಾಗಿದೆ. ನಂತರದ್ದು ಇನ್ನು ಹೆಚ್ಚಿನ ಆತಂಕಕ್ಕೆ ದೂಡುವ ಅಂಕಿ ಅಂಶ. ಅದು 1955ರ ನಂತರ ಎಂದೂ ಕಾಣದ ಕುಸಿತವಿದು ಎನ್ನುತ್ತದೆ. ಎರಡನೇ ಸುತ್ತಿನ ಸೋಂಕು ಜಪಾನ್ ನಲ್ಲಿ ಆಗಲೇ ಶುರುವಾಗಿದೆ. ಇದನ್ನ ನಿಯಂತ್ರಿಸುವಲ್ಲಿ ಜಪಾನ್ ದೇಶ ಸಫಲವಾದರೆ ವರ್ಷದಲ್ಲಿ ತನ್ನ ಆರ್ಥಿಕತೆಯನ್ನ ಮತ್ತೆ ಹಳಿಗೆ ತರಿಸುವ ತಾಕತ್ತು ಅಲ್ಲಿನ ಜನರಿಗೆ ದೇಶಕ್ಕೆ ಇದೆ.

ಯೂರೋಪಿಯನ್ ಒಕ್ಕೂಟದ ಕಥೆಯೇನು?

ಜರ್ಮನಿ, ಫ್ರಾನ್ಸ್ ಯೂರೋಪಿಯನ್ ಒಕ್ಕೂಟದ ಪ್ರಮುಖ ದೇಶಗಳು. ಉಳಿದಂತೆ ಇಟಲಿ, ಸ್ಪೇನ್ ಹೀಗೆ ಪ್ರತಿಯೊಂದು ದೇಶವೂ ಇದೀಗ ಸಂಕಷ್ಟದಲ್ಲಿವೆ. ಈ ಎಲ್ಲಾ ದೇಶಗಳೂ ಸಹಾಯಕ್ಕಾಗಿ ಒಕ್ಕೂಟದ ಕಡೆಗೆ ನೋಡುತ್ತವೆ. ಸದ್ಯದ ಮಟ್ಟಿಗೆ ನಿರುದ್ಯೋಗ ಭತ್ಯೆ ನೀಡುತ್ತಾ ಬಂದಿರುವುದರಿಂದ ಕೆಲಸವಿಲ್ಲದಿದ್ದರೂ ಸಮಾಜದಲ್ಲಿ ಇನ್ನೂ ಅಸಮಾಧಾನದ ಹೋಗೆ ಎದ್ದಿಲ್ಲ. ಇಲ್ಲಿ ಕೂಡ ಕೋವಿಡ್ ಕಾರಣ ಮತ್ತೆ ಲಾಕ್ ಡೌನ್ ಆಗಬಹುದು ಎನ್ನುವ ಊಹೆಗಳು ಹೆಚ್ಚಾಗಿವೆ. ಎಲ್ಲಾ ಪ್ರಮುಖ ಯೂರೋಪಿಯನ್ ಮಾರುಕಟ್ಟೆಗಳು ಕೂಡ ಭಾರಿ ಕುಸಿತವನ್ನ ಕಂಡಿವೆ. ಇಲ್ಲಿ ಲಾಕ್ ಡೌನ್ ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚು ಶಿಸ್ತಿನಿಂದ ನಡೆಸಿದ ಸಲುವಾಗಿ ಇಲ್ಲಿನ ಆರ್ಥಿಕ ವಹಿವಾಟುಗಳು ಕೂಡ ಬಹಳವಾಗಿ ನೆಲ ಕಚ್ಚಿವೆ. ಒಕ್ಕೂಟ ಎಲ್ಲವೂ ಸರಿ ಹೋದರೂ ಮರಳಿ ತನ್ನ ಸಹಜ ಸ್ಥಿತಿಗೆ ಹೊರಳಲು 3/4 ವರ್ಷ ಬೇಕಾಗುತ್ತದೆ.

ಭಾರತ? ಭಾರತದ ಸ್ಥಿತಿಯೇನು?

ಸದ್ಯದ ಸ್ಥಿತಿಯ ಬಗ್ಗೆ ಬರೆಯುವುದಕ್ಕೆ ಏನೂ ಉಳಿದಿಲ್ಲ. ಅದು ಎಲ್ಲರಿಗೂ ತಿಳಿದಿರುವ ವಿಷಯ. ಆರ್ಥಿಕವಾಗಿ ದೇಶ ಬಹಳಷ್ಟು ಸಂಕಷ್ಟದಲ್ಲಿದೆ. ಗೋಲ್ಡ್ ಮನ್ ಸಾಚ್ಸ್ ಎನ್ನುವ ಸಂಸ್ಥೆಯ ವರದಿಯ ಪ್ರಕಾರ 2020ರಲ್ಲಿ ಕಳೆದುಕೊಂಡ ಉತ್ಪಾದನೆ ಮತ್ತು ಬೇಡಿಕೆಯ 70 ಪ್ರತಿಶತವನ್ನ ಭಾರತ 2021ರಲ್ಲಿ ಮರಳಿ ಪಡೆದುಕೊಳ್ಳಲಿದೆ. 2020ರ ವೇಳೆಗೆ ಪೂರ್ಣ ಪ್ರಮಾಣದ ಚೇತರಿಕೆಯನ್ನ ನಮ್ಮ ಸಮಾಜ ಕಾಣಲಿದೆ. ಇಂತಹ ಒಂದು ಧನಾತ್ಮಕ ವರದಿಯನ್ನ ಗೋಲ್ಡ್ ಮನ್ ಪ್ರಥಮವಾಗಿ ಭಾರತವನ್ನ ಉಲ್ಲೇಖಿಸಿ ನೀಡಿದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಅಮೆರಿಕಾ ಮತ್ತು ಯೂರೋಪು ಗಳಿಗಿಂತ ವೇಗವಾಗಿ ಭಾರತ ಚೇತರಿಕೆಯನ್ನ ಕಾಣಲಿದ್ದು. ಮುಂಬರುವ ವರ್ಷಗಳಲ್ಲಿ ಜಿಡಿಪಿ 12ರ ಆಜುಬಾಜು ದಾಖಲಾಗಲಿದೆ ಎನ್ನುತ್ತದೆ ಅಂಕಿ-ಅಂಶ. ಹೇಳಿ ಕೇಳಿ ಭಾರತದಲ್ಲಿ ಯುವ ಜನತೆಯ ಸಂಖ್ಯೆ ಹೆಚ್ಚು. ಸಹಜವಾಗೇ ಬದುಕಿನ ಬಗೆಗಿನ ಆಸಕ್ತಿ ಮತ್ತು ತುಡಿತ ಈ ದೇಶವನ್ನ ಚೇತರಿಕೆಯತ್ತ ವೇಗವಾಗಿ ಕರೆದೊಯ್ಯಲಿದೆ.

ಕೊನೆಮಾತು: ಕೋವಿಡ್ ಮುಗಿದು ಹೋಯ್ತು ಎನ್ನುವಂತಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಮತ್ತೆ ಲಾಕ್ ಡೌನ್ ಎನ್ನುವ ಕೂಗು ಕೇಳಿ ಬರುತ್ತಿದೆ. ಮತ್ತೆ ಲಾಕ್ ಡೌನ್ ಅಂದರೆ ಮತ್ತೆ ಆರ್ಥಿಕತೆಯ ಸ್ಥಗಿತ ಎಂದರ್ಥ. ಮಾರ್ಚ್ ನಿಂದ ಇಲ್ಲಿಯವರೆಗಿನ ಸನ್ನಿವೇಶವನ್ನ ನಾವು ಎರಡು ರೀತಿಯಲ್ಲಿ ನೋಡಬಹುದು. ಮೊದಲನೆಯದು ಧನಾತ್ಮಕ. ಮಾರ್ಚ್ ಏಪ್ರಿಲ್ಗೆ ಹೋಲಿಸಿದರೆ ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಎರಡನೆಯದು ಋಣಾತ್ಮಕ. ಅದೇನೆಂದರೆ ಕೋವಿಡ್ ಇನ್ನೂ ಮುಗಿದಿಲ್ಲ. ಇವೆರೆಡರ ಮಧ್ಯೆ ನಮ್ಮ ದೇಶ ಕೋವಿಡ್ ನಂತರ ಅತ್ಯಂತ ವೇಗವಾಗಿ ಸಹಜತೆಯತ್ತ ಮರಳುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ ಎನ್ನುವುದು ಅಶಭಾವ ಮೂಡಿಸುವ ಅಂಶ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com