ಆರ್ಥಿಕ ಅಸಮಾನತೆಯ ಅಗ್ನಿಗೆ ತುಪ್ಪ ಸುರಿದ ಕೊರೋನ!

ಹಣಕ್ಲಾಸು-253

-ರಂಗಸ್ವಾಮಿ ಮೂಕನಹಳ್ಳಿ

Published: 01st April 2021 02:38 AM  |   Last Updated: 01st April 2021 02:38 AM   |  A+A-


representational image

ಆರ್ಥಿಕ ಅಸಮಾನತೆಯ ಅಗ್ನಿಗೆ ತುಪ್ಪ ಸುರಿದ ಕೊರೋನ!

Posted By : Srinivas Rao BV
Source : Online Desk

ಅಸಮಾನತೆ ಎನ್ನುವುದು ಬಹಳ ದೊಡ್ಡ ಪಿಡುಗು. ಅಸಮಾನತೆಯ ಹಲವು ವಿಧಗಳಿವೆ.

ಅವುಗಳಲ್ಲಿ ಪ್ರಮುಖವಾದದ್ದು ಲಿಂಗ ಬೇಧ ಅರ್ಥಾತ್ ಜೆಂಡರ್ ಇನ್ ಈಕ್ವಾಲಿಟಿ. ಹೆಣ್ಣು ಗಂಡಿನ ನಡುವಿನ ಅನುಪಾತದ ಅಸಮಾನತೆ ಒಂದು ಕಡೆಯಾದರೆ, ಹೆಣ್ಣು ಗಂಡಿನ ನಡುವಿನ ವೇತನ ತಾರತಮ್ಯ ಇನ್ನೊಂದು ಕಡೆ ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ. ಕೋವಿಡ್ ಪಾಂಡೆಮಿಕ್ ನಂತರ ವರ್ಲ್ಡ್ ಎಕನಾಮಿಕ್ ಫೋರಮ್ ಎನ್ನವ ಸಂಸ್ಥೆ ಈ ಅಸಮಾನತೆಯ ಬಗ್ಗೆ ತನ್ನ ಹೊಸ ಅಧ್ಯಯನವನ್ನ ಜಗತ್ತಿನ ಮುಂದೆ ಇಟ್ಟಿದೆ. ಇದರ ಪ್ರಕಾರ ಈ ಹಿಂದೆ ಹೆಣ್ಣು ಮತ್ತು ಗಂಡಿನ ನಡುವಿನ ಆರ್ಥಿಕ ಅಸಮಾನತೆಯನ್ನ ತೊಡೆದು ಹಾಕಲು 100 ವರ್ಷಗಳು ಬೇಕಾಗಿದ್ದವು. ಇದೀಗ ಹೊಸ ಅಧ್ಯಯನದ ಪ್ರಕಾರ ಈ ಅಸಮಾನತೆಯನ್ನ ನೀಗಿಸಲು 136 ವರ್ಷಗಳು ಬೇಕಂತೆ! ಅಂದರೆ ಕೊರೋನಾ ಎನ್ನುವ ವೈರಸ್ ಕೇವಲ ನಾವಂದುಕೊಂಡಷ್ಟು ಮಟ್ಟದ ನಷ್ಟವನ್ನ ಉಂಟು ಮಾಡಿಲ್ಲ. ಅದು ಮಾಡಿರುವ ನಷ್ಟದ ನಿಖರ ಲೆಕ್ಕವನ್ನ ತೆಗೆಯುವುದು ಕಷ್ಟದ ಕೆಲಸವೇ ಸರಿ. ಇದೆ ಎಕನಾಮಿಕ್ ಫೋರಮ್ ನಡೆಸಿರುವ ಇನ್ನೊಂದು ಸಮೀಕ್ಷೆಯ ಪ್ರಕಾರ ಅಸಮಾನತೆಯನ್ನ ಪೂರ್ಣವಾಗಿ ಇಲ್ಲವಾಗಿಸಲು ಇನ್ನೂ 268 ವರ್ಷಗಳು ಬೇಕು ಎನ್ನುವುದು ಇಡೀ ಭೂಮಂಡಲ ಪುರುಷ ಪ್ರಧಾನವಾಗಿದೆ ಎನ್ನುವುದನ್ನ ಸಾಬೀತು ಪಡಿಸುತ್ತಿದೆ.

ಹೆಣ್ಣನ್ನ ದೇವತೆ ಎನ್ನುವ ನಾವು, ಕ್ಷಮಯಾಧರಿತ್ರಿ ಎನ್ನುವ ನಾವು ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುವುದಿಲ್ಲ. ಇಂದಿಗೂ ಜಗತ್ತು ಪುರುಷ ಪ್ರಧಾನವೇ. ಇದು ಭಾರತದಲ್ಲಿ ಮಾತ್ರ ಅನ್ನುವ ತಪ್ಪು ತಿಳಿವಳಿಕೆಯಲ್ಲಿದ್ದರೆ ಸ್ವಲ್ಪ ಅದರಿಂದ ಹೊರಬನ್ನಿ  ಏಕೆಂದರೆ ಜಗತ್ತಿನಾದ್ಯಂತ ಹೆಣ್ಣನ್ನ 'ಅಬಲೆ' ಅಥವಾ ಶಕ್ತಿ ಹೀನಳು ಎನ್ನುವ ಭಾವನೆಯಿಂದ ನೋಡಲಾಗುತ್ತಿದೆ. ವಿಮೆನ್ ಎಂಪವರ್ಮೆಂಟ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಬಳಸುತ್ತಿರುವ ಪದಗಳಲ್ಲಿ ಒಂದು. ಆದರೇನು ಅದು ಬರಿ ಬಾಯಿ ಮಾತಿಗೆ ಸೀಮಿತವಾಗಿದೆ ಎನ್ನುವುದಕ್ಕೆ ಅನೇಕ ಕಾರಣಗಳಿವೆ. 

ಅವುಗಳಲ್ಲಿ ಕೆಲವನ್ನ ಇಲ್ಲಿ ದಾಖಲಿಸಿದ್ದೇನೆ. ಇದನ್ನ ಮೀರಿ ಕೂಡ ನೂರಾರು ಕಾರಣಗಳು ಇವೆ ಎನ್ನುವುದು ಬುದ್ಧಿವಂತ ಓದುಗರಿಗೆ ತಿಳಿದ ವಿಷಯವಾಗಿದೆ.

  1. ಅಮೆರಿಕಾದ 7 ರಾಜ್ಯಗಳಲ್ಲಿ ಇಂದಿಗೂ ರೇಪಿಸ್ಟ್ ವ್ಯಕ್ತಿ ಮಗುವಿನ ಕಸ್ಟಡಿ ಪಡೆಯಬಹುದು. ಅಂದರೆ ಆಕಸ್ಮಿಕವಾಗಿ ಇಂತಹ ಸಮಯದಲ್ಲಿ ವಿಕ್ಟಿಮ್ ಮಗುವಿಗೆ ಜನ್ಮವಿತ್ತರೆ ರೇಪಿಸ್ಟ್ ಆ ಮಗುವಿನ ಪೂರ್ಣ ಕಸ್ಟಡಿ ಅಥವಾ ಜಾಯಿಂಟ್ ಕಸ್ಟಡಿ ಪಡೆಯಬಹುದು
  2. ಸೌದಿ ಅರೇಬಿಯಾ ಹೆಂಗಸಿಗರಿಗೆ ಮತದಾನದ ಅವಕಾಶ ನೀಡಿದ್ದು 2015ರಲ್ಲಿ, ತೀರಾ ಇತ್ತೀಚಿನ ವರೆಗೆ ಹೆಂಗಸರು ಅಲ್ಲಿ ಡ್ರೈವ್ ಮಾಡುವಂತಿರಲಿಲ್ಲ!!.
  3. ಈಜಿಪ್ಟ್ ನಲ್ಲಿ ಮದುವೆಯಾದ ಹೆಂಗಸು ತರಕಾರಿ, ಹಾಲು ಹಣ್ಣು ಇತ್ಯಾದಿ ತರಲು ಮಾತ್ರ ಹೊರಗೆ ಹೋಗಬಹುದು. ಇದಲ್ಲದೆ ಮನೆಯಿಂದ ಹೊರಹೋಗಲು ಆಕೆಗೆ ಗಂಡನ ಅನುಮತಿ ಬೇಕು.
  4. ಇಂದಿಗೂ ಜಗತ್ತಿನ 30ಕ್ಕೂ ಹೆಚ್ಚು ದೇಶಗಳು ಹೆಂಗಸರು ಪಾಸ್ಪೋರ್ಟ್ ಪಡೆಯಲು ಗಂಡನ ಅನುಮತಿ ಪತ್ರ ಬೇಕು ಎನ್ನುತ್ತವೆ.
  5. ನೈಜಿರಿಯಾ ದೇಶದಲ್ಲಿ ಹೆಂಡತಿಯ ತಪ್ಪನ್ನ ತಿದ್ದಲು ಆಕೆಯನ್ನ ಹೊಡೆಯಬಹುದು ಎಂದು ಕಾನೂನು ಅನುಮತಿ ನೀಡಿದೆ!!.
  6. ಲಿಂಗ ತಾರತಮ್ಯದ ವಿರುದ್ಧ ಮಂಡಿಸಿದ ಮಸೂದೆ ರಷ್ಯಾ ದೇಶದಲ್ಲಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ!!.
  7. 1959ರಲ್ಲಿ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಮಹಿಳೆಯರಿಗೆ ವೋಟಿಂಗ್ ರೈಟ್ ಕೊಡುವುದನ್ನ 67ಪ್ರತಿಶತ ಗಂಡಸರು ವಿರೋಧಿಸಿ ವೋಟಿಂಗ್ ರೈಟ್ ಕೊಡುವುದನ್ನ ತಡೆದಿದ್ದರು. 1971 ರಿಂದ ಸ್ವಿಸ್ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು. ಅದೂ ಎಲ್ಲಾ ರಾಜ್ಯಗಳಲ್ಲಿ ಅಲ್ಲ. ಸ್ವಿಸ್ ನ ಕೊನೆಯ ರಾಜ್ಯ ಮತದಾನದ ಹಕ್ಕು ನೀಡಿದ್ದು 1991 ರಲ್ಲಿ!!

ಇನ್ನು ವೇತನ ಸಮಾನತೆ ಎನ್ನುವುದು ತೀರಾ ಅಸಹ್ಯ ಪದವಾಗಿ ಹೋಗಿದೆ. ಕಟ್ಟಡ ಕಟ್ಟುವ ಕೂಲಿ ಮಹಿಳೆಯಿಂದ ಕೋಡಿಂಗ್ ಬರೆಯುವ ಮಹಿಳೆಯವರೆಗೆ, ಭಾರತದಿಂದ, ಅಮೆರಿಕಾ, ಯೂರೋಪ್ ಎಲ್ಲೆಡೆ ವೇತನ ಅಸಮಾನತೆ ಇಂದಿಗೂ ಎದ್ದು ಕಾಣುವಷ್ಟಿದೆ. ಮಹಿಳೆಯರ ಕುರಿತು ಇರುವ ಈ ತಾರತಮ್ಯದಲ್ಲಿ ಪ್ರಮುಖವಾಗಿ ನಾಲ್ಕು ಭಾಗವಾಗಗಳಿವೆ.

  1. ಆರ್ಥಿಕ ಅಸಮಾನತೆ: ವೇತನ ತಾರತಮ್ಯದ ಜೊತೆಗೆ ಮನೆ ಮನೆಗಳಲ್ಲಿ ಹೆಣ್ಣನ್ನ ಆರ್ಥಿಕ ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ಬಿಡುವುದು ಕೂಡ ಕಡಿಮೆ. ಮನೆಯ ಹಣಕಾಸು ಮತ್ತಿತರ ವ್ಯವಹಾರಿಕ ನಿರ್ಧಾರಗಳನ್ನ ಮನೆಯ ಗಂಡಸು ತೆಗೆದುಕೊಳ್ಳುವುದು ಒಂದು ರೀತಿಯ ವಾಡಿಕೆ ಎನ್ನುವಂತಾಗಿದೆ. ಈ ವಿಷಯದಲ್ಲಿ ವಿನಾಯತಿ ಇಲ್ಲವೆಂದಲ್ಲ, ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ಅಸಮಾನತೆ ಎದ್ದು ಕಾಣುತ್ತದೆ.
  2. ಶಿಕ್ಷಣದಲ್ಲಿ ಅಸಮಾನತೆ: ಗಂಡು ಮಕ್ಕಳನ್ನ ಹೆಚ್ಚು ಓದಿಸುವ ನಮ್ಮ ಸಮಾಜ, ಇಂದಿಗೂ ಹೆಣ್ಣು ಮಕ್ಕಳನ್ನ ಹೆಚ್ಚು ಓದಿಸಲು ಹಿಂದೆ ಮುಂದೆ ನೋಡುತ್ತದೆ. ಹೆಚ್ಚು ಓದಿದರೆ ಅವಳ ಓದಿಗೆ ತಕ್ಕ ವರನನ್ನ ತರುವುದು ಕಷ್ಟವಾಗುತ್ತದೆ ಎನ್ನುವುದು ಇಂದಿಗೂ ನಮ್ಮ ಸಮಾಜದಲ್ಲಿ ಇರುವ ಕಾರಣ ಎನ್ನುವುದು ಸಮಾಜದ ಮನಸ್ಥಿತಿಯ ದೋತ್ಯಕವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಋತುಮತಿಯಾದ ನಂತರ ಶಾಲೆಯನ್ನ ಬಿಡಿಸುವ ಪರಿಪಾಠ ಇಂದಿಗೂ ಇದೆ ಎನ್ನುವುದು ಕೂಡ ಅಸಮಾನತೆ ಹೆಚ್ಚಲು ಕಾರಣವಾಗಿದೆ.
  3. ಆರೋಗ್ಯದಲ್ಲಿ ಅಸಮಾನತೆ: ನಮ್ಮ ಸಮಾಜದಲ್ಲಿ ಇಂದಿಗೂ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತಮ್ಮ ಆರೋಗ್ಯ ಬಹಳ ಮುಖ್ಯ ಎನ್ನುವುದರ ಅರಿವು ಕೂಡ ಇಲ್ಲ. ಮನೆಯ ಯಜಮಾನ ಮತ್ತು ಮಕ್ಕಳನ್ನ, ಅವರ ಬೇಕು ಬೇಡಗಳನ್ನ ಪೂರೈಸುವ ಒಂದು ಯಂತ್ರವಾಗಿ ಆಕೆಯನ್ನ ಬಳಸಿಕೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದರಲ್ಲಿ ಒಂದಷ್ಟು ಬದಲಾವಣೆಯಾಗಿರುವು ಸತ್ಯ ಆದರೂ ಮೊದಲ ಸಾಲಿನಲ್ಲಿ ಹೇಳಿದಂತೆ ಇನ್ನೊಂದೆರೆಡು ಶತಮಾನವಾದರೂ ಬೇಕು ಪೂರ್ಣ ಪ್ರಮಾಣದ ಸಮಾನತೆಯನ್ನ ಸಾಧಿಸಲು.
  4. ರಾಜಕೀಯ, ಉದ್ಯೋಗ ಕ್ಷೇತ್ರಗಳಲ್ಲಿ ಅಸಮಾನತೆ: ಗ್ರಾಮೀಣ ಪದೇಶದ ಮಹಿಳೆಯರಿಗೆ ಮಾತ್ರ ಅನ್ಯಾಯವಾಗುತ್ತಿದೆ, ಅವರಲ್ಲಿ ಅಸಮಾನತೆಯಿದೆ ಎನ್ನುವುದು ಕೂಡ ತಪ್ಪು ತಿಳುವಳಿಕೆ. ಹೆಚ್ಚಿನ ವ್ಯಾಸಂಗ, ಉನ್ನತ ಮಟ್ಟದ ತಿಳುವಳಿಕೆ ಹೊಂದಿದ್ದು ಕೂಡ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಅವಕಾಶ ಮತ್ತು ಹೆಸರು ಎರಡೂ ಸಿಗುತ್ತಿಲ್ಲ. ಭಾರತ ಎಂದಲ್ಲ ಜಗತ್ತಿನ 99 ಪ್ರತಿಶತ ದೇಶಗಳ ಕಥೆಯಿದು.

 

ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾಗಿ:

  1. ಕೋವಿಡ್ ಪ್ಯಾಂಡೆಮಿಕ್ ನಿಂದ ಕೆಲಸ ಕಳೆದುಕೊಂಡಿರುವವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಬಹಳ ಹೆಚ್ಚಾಗಿದೆ. ಇಂದಿಗೂ ಭಾರತ ಸೇರಿ ಬಹಳಷ್ಟು ದೇಶಗಳು ಮಹಿಳೆಯ ವೇತನವನ್ನ ಎರಡನೇ ಅಥವಾ ಪೂರಕ (ಸಪ್ಲಿಮೆಂಟರಿ) ವೇತನ ಎನ್ನುವಂತೆ ನೋಡಲಾಗುತ್ತಿದೆಯೇ ಹೊರತು ಅವರನ್ನ ಪ್ರೈಮರಿ ಬ್ರೆಡ್ ವಿನ್ನರ್ಸ್ ಎಂದು ಪರಿಗಣಿಸಲಾಗುತ್ತಿಲ್ಲ.
  2. ಕೆಲಸ ಕಳೆದುಕೊಂಡ ನಂತರ ಮರಳಿ ತಮ್ಮ ಉದ್ಯೋಗ ಮತ್ತು ಭವಿಷ್ಯವನ್ನ ಕಟ್ಟಿಕೊಳ್ಳುವಲ್ಲಿ ಮಹಿಳೆಯರಿಗೆ ಹೆಚ್ಚಿನ ಸಮಯ ತಗಲುತ್ತಿದೆ. ಪುರಷನಿಗೆ ಸಿಕ್ಕಷ್ಟು ವೇಗವಾಗಿ ಕೆಲಸ ಮಹಿಳೆಯರಿಗೆ ಸಿಗುತ್ತಿಲ್ಲ ಎನ್ನುವುದು ಕೂಡ ನಮ್ಮ ಸಮಾಜದ ಮನಸ್ಥಿತಿಯನ್ನ ಬಿಂಬಿಸುತ್ತಿದೆ.
  3. ಕೋವಿಡ್ ಕಾರಣದಿಂದ ವೇತನ ಕಡಿತದಂತಹ ಪ್ರಯೋಗಗಳಿಗೆ ಮೊದಲ ಬಲಿಪಶುವಾಗಿರುವುದು ಕೂಡ ಮಹಿಳೆ ಎನ್ನುವುದನ್ನ ಎಕನಾಮಿಕ್ ಫೋರಮ್ ನಡೆಸಿರುವ ಸಮೀಕ್ಷೆಗಳು ಸಾಬೀತು ಪಡಿಸಿವೆ.
  4. ಅತ್ಯಂತ ನುರಿತ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಕೆಲಸದ ಕೊರತೆಯಂತಹ ಸಮಸ್ಯೆ ಇಲ್ಲ, ಆದರೆ ಇವರ ನಡುವೆ ಕೂಡ ವೇತನ ತಾರತಮ್ಯವಿದೆ ಎನ್ನುವುದು ಕೂಡ ಸಮಸ್ಯೆಯ ಇನ್ನೊಂದು ಮುಖವನ್ನ ಪರಿಚಯಿಸುತ್ತಿದೆ.
  5. ಪ್ಯಾಂಡೆಮಿಕ್ ಕಾರಣದಿಂದ ಜಗತ್ತು ಆಟೋಮೈಸೇಷನ್ ಮತ್ತು ಡಿಜಿಟಲೈಸೇಶನ್ ಕಡೆಗೆ ವೇಗವಾಗಿ ಮುಖ ಮಾಡಿದೆ. ಇವುಗಳನ್ನ ಫಾಸ್ಟ್ ಗ್ರೋಯಿಂಗ್ ರೋಲ್ಸ್ ಎನ್ನಬಹುದು. ಮಹಿಳೆಯರು ಇಂತಹ ಫಾಸ್ಟ್ ಗ್ರೋಯಿಂಗ್ ರೋಲ್ ಗಳಿಗೆ ಕಡಿಮೆ ಒಡ್ಡಲಾಗಿದೆ. ಅಂದರೆ ಇಂತಹ ಕಾರ್ಯಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಕಡಿಮೆಯಿದೆ. ಹೀಗಾಗಿ ಪ್ಯಾಂಡೆಮಿಕ್ ನಂತರ ಅಸಮಾನತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

ನಾರ್ದಿಕ್ ದೇಶಗಳು ಎಂದು ಹೆಸರಾಗಿರುವ ಉತ್ತರ ಯೂರೋಪಿನ ದೇಶಗಳಾದ ನಾರ್ವೆ, ಸ್ವೀಡನ್, ಫಿನ್ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಡೆನ್ಮಾರ್ಕ್ ಗಳಲ್ಲಿ ಈ ರೀತಿಯ ಅಸಮಾನತೆ ಬಹಳ ಕಡಿಮೆಯಿದೆ. ಜಗತ್ತಿನ ಐದು ಅತಿ ಕಡಿಮೆ ಅಸಮಾನತೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ದೇಶಗಳು ಸೇರಿಕೊಂಡಿವೆ. ಅಮೇರಿಕಾ ದೇಶದಲ್ಲಿ ಕೂಡ ಈ ಅಸಮಾನತೆ ಬಹಳಷ್ಟಿದೆ. ಹೀಗಾಗಿ ಅಮೇರಿಕಾದಂತ ಅಮೇರಿಕಾ ಕೂಡ ಅಸಮಾನತೆಯ ಪಟ್ಟಿಯಲ್ಲಿ ಮೂವತ್ತನೇ ಸ್ಥಾನವನ್ನ ಪಡೆದಿದೆ.  

ಕೋವಿಡ್ ಕಾರಣದಿಂದ ಕೋಟ್ಯಂತರ ಜನರು ಬಡತನದ ರೇಖೆಗೆ ದೂಡಲ್ಪಟ್ಟಿದ್ದಾರೆ. ಅದರಲ್ಲಿ ನಾಲ್ಕು ಕೋಟಿ ಎಪ್ಪತ್ತು ಲಕ್ಷ ಜನ ಮಹಿಳೆಯರು ಎನ್ನುವುದು ಬಹಳ ಆಘಾತಕಾರಿ ವಿಷಯವಾಗಿದೆ. ಅಂದರೆ ಉದಾಹರೆಣೆಯಾಗಿ ನೋಡುವುದಾದರೆ ಇಡೀ ಸ್ಪೇನ್ ದೇಶದ ಜನತೆ ಬಡತನದ ರೇಖೆಗೆ ದೂಡಲ್ಪಟ್ಟಂತೆ ಅನ್ನಿಸುತ್ತದೆ.

ಕೊನೆಮಾತು: ಗಂಡು ಹೆಣ್ಣು ಎನ್ನುವವರು ಎರಡು ಚಕ್ರವಿದ್ದಂತೆ, ಒಂದು ಚಕ್ರದಲ್ಲಿ ಪ್ರಯಾಣ ಪ್ರಯಾಸವಾಗುತ್ತದೆ. ಬದುಕು ಸರಾಗವಾಗಿ ಸಾಗಬೇಕಿದ್ದರೆ ಬಂಡಿಯ ಎರಡೂ ಚಕ್ರಗಳೂ ಸರಾಗವಾಗಿ ಚಲಿಸಬೇಕು. ಹೀಗೆ ಎರಡೂ ಮುಖ್ಯವಾದವು. ಒಂದಿಲ್ಲದೆ ಇನ್ನೊಂದಕ್ಕೆ ಅಸ್ತಿತ್ವವಿಲ್ಲ. ಹೀಗಾಗಿ ಮೇಲು-ಕೀಳು ಅಥವಾ ನಿಕೃಷ್ಟ-ಉತ್ಕೃಷ್ಟ ಎನ್ನುವ ಮಾತುಗಳಿಗೆ ಅರ್ಥವಿಲ್ಲ. 

ಸಮಾಜದಲ್ಲಿ ಲಿಂಗ ಆಧಾರಿತ ವೇತನ ಅಥವಾ ಅವಕಾಶಗಳನ್ನ ನೀಡುವುದು ನಿಲ್ಲಿಸಬೇಕು. ವ್ಯಕ್ತಿಯ ಪ್ರತಿಭೆಯ ಮೇಲೆ ಅವಕಾಶ ನಿರ್ಧರವಾಗಬೇಕು. ಆಗ ಮಾಡುವ ಕೆಲಸದಲ್ಲಿ ದಕ್ಷತೆಯ ಜೊತೆಗೆ ವೇಗವೂ ಹೆಚ್ಚಾಗುತ್ತದೆ. 

ಇದರಿಂದ ಶ್ರಮ ಕಡಿಮೆಯಾಗುತ್ತದೆ ಮತ್ತು ಉತ್ಪಾದಕತೆ ಹೆಚ್ಚಾಗುತ್ತದೆ. ಇದು ಸಮಾಜದ ಅಭಿವೃದ್ಧಿಗೆ ದೇಣಿಗೆಯನ್ನ ನೀಡುತ್ತದೆ. ವರ್ಲ್ಡ್ ಎಕನಾಮಿಕ್ ಫೋರಮ್ ನ ಸಮೀಕ್ಷೆಯನ್ನ ಸುಳ್ಳು ಮಾಡುವುದು ನಮ್ಮ ಕೈಲಿದೆ. ಆದರೆ ನಾವು ಈ ಬಗ್ಗೆ ಯೋಚನೆ ಮಾಡುವ ಹಂತಕ್ಕೆ ಬೆಳೆಯುವುದೆಂದು? ನಮ್ಮದೇ ಕೂಸುಗಳ ನಡುವೆ ತಾರತಮ್ಯ ಮಾಡುವುದನ್ನ ನಾವು ನಿಲ್ಲಿಸುವುದು ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಲಿದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp