ಇಂದಿನ ದುರಿತ ಕಾಲದಲ್ಲಿ ಎಲ್ಲಿ ಹೂಡಿಕೆ ಮಾಡಿದರೆ ಸೇಫ್?

ಹಣಕ್ಲಾಸು-253

-ರಂಗಸ್ವಾಮಿ ಮೂಕನಹಳ್ಳಿ

Published: 08th April 2021 01:17 AM  |   Last Updated: 08th April 2021 01:17 AM   |  A+A-


Hanaclasu: where to Invest in Uncertain Times

ಇಂದಿನ ದುರಿತ ಕಾಲದಲ್ಲಿ ಎಲ್ಲಿ ಹೂಡಿಕೆ ಮಾಡಿದರೆ ಸೇಫ್?

Posted By : Srinivas Rao BV
Source : Online Desk

ಕೊರೋನ ದ್ವೀತಿಯ ಅಲೆ ಕೆಲವೊಂದು ದೇಶವನ್ನ, ತೃತೀಯ ಅಲೆ ಮತ್ತಷ್ಟು ದೇಶಗಳನ್ನ ಹೈರಾಣು ಮಾಡುತ್ತಿದೆ. ಭಾರತದ ಮಟ್ಟಿಗೆ ಎರಡನೇ ಅಲೆ ಬಹಳಷ್ಟು ಸದ್ದು ಮಾಡುತ್ತಿದೆ. ಹಲವಾರು ರಾಜ್ಯಗಳು ಮತ್ತೆ ಹಲವೊಂದು ರೀತಿಯ ನಿರ್ಬಂಧಗಳನ್ನ ಹಾಕುತ್ತಿದ್ದಾರೆ. ಇವೆಲ್ಲುವುಗಳ ನಡುವೆ ಬಹಳಷ್ಟು ವ್ಯಾಪಾರ, ವಹಿವಾಟುಗಳಲ್ಲಿ ಮತ್ತೆ ಅಡಚಣೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಕೂಡ ಇದೆ. ಕೊರೋನ ಸಮಯದಲ್ಲಿ ಕೂಡ ಹಲವಾರು ವಲಯಗಳು ಲಾಭವನ್ನ ಮಾಡಿವೆ. ಸಮಾಜದಲ್ಲಿ ಯಾವಾಗ ಅಸ್ಥಿರತೆ ಉಂಟಾಗುತ್ತದೆ ಆಗೆಲ್ಲಾ ಒಂದು ಸರಪಳಿ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಕೆಲವೊಂದು ವಲಯಗಳು ಪ್ರತಿಕೂಲ ಪರಿಸ್ಥಿತಿಯಲ್ಲಿ ಉತ್ತಮ ಕಾರ್ಯವನ್ನ ನಿರ್ವಹಿಸುತ್ತವೆ.

ಹೀಗಾಗಿ ಅಸ್ಥಿರ ಜಗತ್ತಿನಲ್ಲಿ ಎಲ್ಲಿ ಹಣವನ್ನ ತೊಡಗಿಸುವುದು ಎನ್ನುವುದು ಬಹಳ ಮುಖ್ಯ ಪ್ರಶ್ನೆಯಾಗುತ್ತದೆ. ಇಂದಿನ ಪರಿಸ್ಥಿತಿಯ ಜೊತೆಗೆ ಮುಂದಿನ ಹಲವಾರು ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗಳನ್ನ ಗಮನದಲ್ಲಿಟ್ಟುಕೊಂಡು ಕೆಳಗಿನ ವಲಯಗಳಲ್ಲಿ ಹೂಡಿಕೆ ಮಾಡಬಹುದು. ಕೆಳಗೆ ಕೊಟ್ಟಿರುವ ಕಾರಣಗಳ ಜೊತೆಗೆ ನೀವು ಕೂಡ ಇನ್ನಷ್ಟು ಇದರ ಬಗ್ಗೆ ಮಾಹಿತಿಯನ್ನ ಪಡೆದುಕೊಂಡು ಹೂಡಿಕೆ ಮಾಡಲು ಅಡ್ಡಿಯಿಲ್ಲ .

  1. ಚಿನ್ನ, ಸಾಮಾನ್ಯ ಮನುಷ್ಯನ ಭಾಷೆಯಲ್ಲಿ ಗೋಲ್ಡ್ ಅಥವಾ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಮಾಡಬಹುದು: ಅಸ್ಥಿರ ಮಾರುಕಟ್ಟೆಯಲ್ಲಿ ಹೂಡಿಕೆದಾರ ಸ್ಥಿರವಾದ ಹೂಡಿಕೆಯನ್ನ ಹುಡುಕುತ್ತಾನೆ. 2008ರ ಲೇಮನ್ ಬ್ರದರ್ ಕುಸಿತದ ನಂತರ ಇಲ್ಲಿಯವರೆಗೆ 45 ಪ್ರತಿಶತ ಚಿನ್ನದ ಬೆಲೆ ಏರಿಕೆ ಕಂಡಿದೆ. ಅನರ್ ಗಮನಿಸಿ ಕಂಪ್ಯೂಟರ್ ಪರದೆಯ ಮೇಲೆ ಎಲ್ಲಿಯ ತನಕ ತನಗೆ ಲಾಭವಾಗುತ್ತಿತ್ತು ಅಲ್ಲಿಯವರೆಗೆ ಹೂಡಿಕೆದಾರ ಅಲ್ಲಿರುತ್ತಾನೆ. ಯಾವಾಗ ಅಲ್ಲಿನ ಹಣಕ್ಕೆ ಭದ್ರತೆ ಇಲ್ಲ ಅನ್ನಿಸುತ್ತದೆ ಆಗೆಲ್ಲಾ ಅವನು ಬಹಳ ಹಿಂದಿನಿಂದ ನಂಬಿಕೊಂಡಿದ್ದ ತನ್ನ ಹಳೆಯ ಹೂಡಿಕೆಯ ಮೊರೆ ಹೋಗುತ್ತಾನೆ. ಅಂಕಿ ಸಂಖ್ಯೆಗಳನ್ನ ಗಮನಿಸಿದರೆ ಸಾಕು ಅವು ಹೇಳುವ ಕಥೆ ಕೂಡ ಸೇಮ್. ಯಾವಾಗೆಲ್ಲಾ ಆರ್ಥಿಕ ಕುಸಿತ ಉಂಟಾಗುತ್ತದೆ ಆಗೆಲ್ಲಾ ಜನ ಸಾಮಾನ್ಯನ ಜೊತೆ ಜೊತೆಗೆ ದೊಡ್ಡ ಹೂಡಿಕೆದಾರರು ಸಹ ಚಿನ್ನದ ಮೇಲೆ ಹೂಡಿಕೆ ಮಾಡಲು ಶುರು ಮಾಡುತ್ತಾರೆ. ಹಣದುಬ್ಬರದ ವಿರುದ್ಧ ಇದು ಅತ್ಯುತ್ತಮ ಹೂಡಿಕೆ. ಗಮನಿಸಿ ನೋಡಿ ನಾವು ಯಾವುದೇ ಹೂಡಿಕೆಯನ್ನ ಏಕೆ ಮಾಡುತ್ತೇವೆ? ಏಕೆಂದರೆ ಹಣದ ಮೌಲ್ಯ ವೇಳೆಯ ಜೊತೆಯಲ್ಲಿ ಕುಸಿತ ಕಾಣುತ್ತದೆ. ಅಂದರೆ ಇಂದು ನಲವತ್ತು ರುಪಾಯಿಗೆ ಕೇಜಿ ಅಕ್ಕಿ ಸಿಕ್ಕರೆ ಮುಂದಿನ ವರ್ಷ ಅದೇ ಅಕ್ಕಿಗೆ 45 ರೂಪಾಯಿ ಕೊಡಬೇಕಾಗುತ್ತದೆ. ಇದಕ್ಕೆ ಹಣದುಬ್ಬರ ಎನ್ನುತ್ತಾರೆ. ಹೀಗೆ ಹಣವನ್ನ ಎಲ್ಲಿಯೂ ಹೂಡಿಕೆ ಮಾಡದೆ ಇಟ್ಟುಕೊಂಡರೆ ಅದರ ಮೇಲಿನ ಮುದ್ರಿತ ಮೌಲ್ಯ ಕಡಿಮೆಯಾಗದಿದ್ದರೂ ಅದರ ಖರೀದಿ ಶಕ್ತಿ ಕುಸಿಯುತ್ತದೆ. ಹೀಗೆ ಖರೀದಿ ಶಕ್ತಿಯನ್ನ ಸಮವಾಗಿಡಲು ಅಥವಾ ಹೆಚ್ಚಿಸಿಕೊಳ್ಳಲು ಬಂಗಾರದ ಮೇಲಿನ ಹೂಡಿಕೆ ಸಹಕಾರಿ. ಬಂಗಾರವೆಂದರೆ ಅದು ಕೈಯಲ್ಲಿ ಹಣವಿದ್ದಂತೆ ಲೆಕ್ಕ. ಮೋಸ್ಟ್ ಲಿಕ್ವಿಡ್. ಬೇಕೆಂದಾಗ ಹಣದ ರೂಪಕ್ಕೆ ಇದನ್ನ ಪರಿವರ್ತಿಸಿಕೊಳ್ಳಬಹುದು. ಈ ಕಾರಣಗಳಿಗಾಗಿ ಬಂಗಾರ ದುರಿತ ಕಾಲದ ಡಾರ್ಲಿಂಗ್ ಎನ್ನಿಸಿಕೊಂಡಿದೆ.
  2. ರಿಯಲ್ ಎಸ್ಟೇಟ್:  ಈ ಭೂಮಿಯ ಮೇಲೆ ಅತ್ಯಂತ ಉತ್ತಮ ಹೂಡಿಕೆ ಎಂದರೆ ತುಂಡು ಭೂಮಿಯ ಮೇಲಿನ ಹೂಡಿಕೆ ಎನ್ನುವಷ್ಟರ ಮಟ್ಟಿಗೆ ಇಂದು ಜಗತ್ತು ಬದಲಾಗಿ ಹೋಗಿದೆ. ನಿಮಗೆಲ್ಲ ಒಂದು ವಿಷಯ ತಿಳಿದಿರಲಿ, ನೆಲ ಅಥವಾ ಮನೆಯ ಮೇಲಿನ ಡಿಮ್ಯಾಂಡ್ ಮತ್ತು ಅವುಗಳ ಬೆಲೆಯೇರಿಕೆ ಮತ್ತು ಅವುಗಳನ್ನ ಕೊಳ್ಳಲು ಹಿಂದೆ ಮುಂದೆ ನೋಡದೆ ನೀಡಿದ ನಿಂಜಾ ಸಾಲ ಅಮೆರಿಕಾದ ಆರ್ಥಿಕ ಕುಸಿತಕ್ಕೆ ಕಾರಣವಾಯಿತು. ಆ ನಂತರ ಏನಾಯ್ತು? ಮನೆಗಳ ಮೇಲಿನ ಬೇಡಿಕೆ ಕುಸಿತವಾಯ್ತು. ಇವತ್ತಿನ ದಿನದಲ್ಲಿ ಏನಾಗುತ್ತಿದೆ? ನೀವು ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ ಮತ್ತೆ ಅಮೇರಿಕಾ ದೇಶದಲ್ಲಿ ಮನೆಗಳ ಮೇಲಿನ ಬೇಡಿಕೆ ಹೆಚ್ಚಾಗುತ್ತಿದೆ. ಮತ್ತೆ ಹಿಂದಿನ ಹುಚ್ಚಾಟ ಮುಂದುವರೆಯದೆ ಹೋಗಬಹುದು. ಆದರೆ ಹೆಚ್ಚುತ್ತಿರುವ ಬೇಡಿಕೆಯಂತೂ ಸುಳ್ಳಲ್ಲ. ಇದು ಕೇವಲ ಅಮೇರಿಕಾ ಅಂತಲ್ಲ, ಜಗತ್ತಿನಾದ್ಯಂತ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಕುಸಿತ ಕಂಡರೂ ಅತ್ಯಂತ ವೇಗದಲ್ಲಿ ಕಳೆದುಕೊಂಡ ನೆಲವನ್ನ ಮರಳಿ ಪಡೆದುಕೊಂಡು ಬಿಡುತ್ತದೆ. ಹೀಗಾಗಿ ಹಣವಿದ್ದವರು ದುರಿತ ಕಾಲದಲ್ಲಿ ಒಂದಷ್ಟು ಜುಗ್ಗಾಟ ನಡೆಸಿ ನೆಲವನ್ನ ಕೊಳ್ಳುವುದು ಒಳಿತು.
  3. ಆಟೋಮೊಬೈಲ್ ವಲಯ: ಈ ವಲಯ ಮುಂದಿನ ಹತ್ತು ವರ್ಷದಲ್ಲಿ 44 ಪ್ರತಿಶತ ಬೆಳವಣಿಗೆಯನ್ನ ಕಾಣಲಿದೆ ಎನ್ನುವುದು ಅಂಕಿಅಂಶಗಳು ಹೇಳುವ ಕಥೆಯಾಗಿದೆ. ಹೀಗೆ ಹೇಳಲು ಪ್ರಮುಖ ಕಾರಣ ಎಲೆಕ್ಟ್ರಿಕ್ ವೆಹಿಕಲ್ಸ್. 2027ರ ವೇಳೆಗೆ ವಾರ್ಷಿಕ 70 ಲಕ್ಷ ಎಲೆಕ್ಟ್ರಿಕಲ್ ವೆಹಿಕಲ್ಸ್ ಮಾರಾಟವಾಗುವಷ್ಟು ಬೆಳವಣಿಗೆ ಕಾಣಲಿದೆ. ಭಾರತದ ಜಿಡಿಪಿಯ 7 ಪ್ರತಿಶತ ಈ ಕ್ಷೇತ್ರದಿಂದ ಬರುತ್ತಿದೆ ಎನ್ನವುದನ್ನ ಕೂಡ ಗಮನಿಸಬೇಕಾಗುತ್ತದೆ. ಮುಂದಿನ ಹತ್ತು ವರ್ಷದಲ್ಲಿ ಸರಿ ಸುಮಾರು ಐದು ಕೋಟಿ ಹೊಸ ಉದ್ಯೋಗಾವಕಾಶಗಳು ಕೂಡ ಇಲ್ಲಿ ಸೃಷ್ಟಿಯಾಗಲಿವೆ. ಇದರ ಜೊತೆ ಜೊತೆಗೆ ಈ ವಲಯದ ಸಹಭಾಗಿತ್ವ ಹೊಂದಿರುವ ಟೈರ್ ಸಂಸ್ಥೆಗಳು, ಬ್ಯಾಟರಿ ಕಂಪನಿಗಳು, ಇತರ ಸಂಬಂಧಿಸಿದ ಸೇವೆಗಳನ್ನ ನೀಡುವ ಸಂಸ್ಥೆಗಳ ಮೇಲಿನ ಹೂಡಿಕೆ ದ್ವಿಗುಣವಾಗುತ್ತದೆ. ಹೀಗಾಗಿ ಈ ವಲಯದಲ್ಲಿ ಕೂಡ ಒಂದಷ್ಟು ಹೆಚ್ಚಿನ ಅರಿವನ್ನ ಪಡೆದುಕೊಂಡು ಹೂಡಿಕೆ ಮಾಡಬಹುದಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ಕಾರು ಕೊಳ್ಳುವುದಕ್ಕಿಂತ, ಕಾರು ಮಾರುವ ಸಂಸ್ಥೆಯ ಷೇರು ಕೊಳ್ಳುವವನು ಜಾಣ!
  4. ಇನ್ಶೂರೆನ್ಸ್ ಸಂಸ್ಥೆಗಳ ಮೇಲಿನ ಹೂಡಿಕೆ: ನೆನಪಿರಲಿ, ಸಾಮಾನ್ಯ ಸಮಯದಲ್ಲಿ ಕೂಡ ಇನ್ಶೂರೆನ್ಸ್ ಬೇಕು. ಅದರಲ್ಲೂ ದುರಿತ ಕಾಲದಲ್ಲಿ ಮನುಷ್ಯನಲ್ಲಿ ಭಯ ಹೆಚ್ಚಾಗುತ್ತದೆ. ಭಯ ಎನ್ನುವ ಮನುಷ್ಯನ ಭಾವನೆ ಈ ವಲಯದ ಮೂಲ ಬಂಡವಾಳ. ಹೀಗಾಗಿ ಸಮಾಜದಲ್ಲಿ ಎಷ್ಟು ಹೆಚ್ಚು ಅಸ್ಥಿರತೆ ಹೆಚ್ಚಾಗುತ್ತದೆ ಅಷ್ಟೂ ಈ ವಲಯದಲ್ಲಿ ವಹಿವಾಟು ಹೆಚ್ಚಾಗುತ್ತದೆ. ಸಾಮಾನ್ಯ ಸಮಯದಲ್ಲಿ ಕೂಡ ಈ ವಲಯದಲ್ಲಿ ಹೂಡಿಕೆ ಮಾಡಬಹುದು. ಇನ್ನು ಇಂದಿನ ಸಮಯದಲ್ಲಿ ಇಲ್ಲಿ ಹೂಡಿಕೆ ಮಾಡದಿದ್ದರೆ ಹೇಗೆ? ಅಲ್ಲದೆ ಭಾರತ ಅತ್ಯಂತ ಯುವ ದೇಶ. ದೇಶದ ಜನಸಂಖ್ಯೆಗೆ ಹೋಲಿಸಿಕೊಂಡರೆ ಇನ್ಶೂರೆನ್ಸ್ ಪಾಲಿಸಿ ಹೊಂದಿರುವರ ಸಂಖ್ಯೆ ಬಹಳ ಕಡಿಮೆ. ಪರಿಸ್ಥಿತಿ ಹೀಗಿದ್ದೂ ಇಲ್ಲಿ ಕಟ್ಟಲಾಗುವ ಪ್ರೀಮಿಯಂ ಹಣ ನಮ್ಮ ದೇಶದ ಜಿಡಿಪಿಯ 4 ಪ್ರತಿಶತಕ್ಕೆ ಸಮ ಎನ್ನುವುದು, ಮತ್ತು ಉಳಿದ ಅಗಾಧ ಯುವ ಸಮೂಹ ಇಂದಲ್ಲ ನಾಳೆ ಇನ್ಶೂರೆನ್ಸ್ ವಲಯದಲ್ಲಿ ಸೇವೆಯನ್ನ ಪಡೆದೆ ಪಡೆಯುತ್ತಾರೆ ಎನ್ನುವುದು, ಈ ವಲಯಕ್ಕೆ ಇರುವ ಭವಿಷ್ಯವನ್ನ ಸೂಚಿಸುತ್ತದೆ. ನಿಜ ಹೇಳಬೇಕಂದರೆ ಕೋಟಿಗಟ್ಟಲೆ ಹಣ ಇನ್ಶೂರೆನ್ಸ್ ಪಡೆಯುವುದಕ್ಕಿಂತ, ಲಕ್ಷಾಂತರ ರೂಪಾಯಿ ವ್ಯಯಿಸಿ ಇಲ್ಲಿನ ಷೇರು ಖರೀದಿಸುವುದು ಜಾಣತನ.
  5. ಮೂಲಭೂತ ಸೌಕರ್ಯಗಳ ಬೆಳವಣಿಗೆಗೆ ಸರಕಾರ ಹೊರಡಿಸುವ ಬಾಂಡ್ ಗಳ ಮೇಲೆ ಹೂಡಿಕೆ: ಬಾಂಡ್ ಎಂದರೆ ಸಾಲಪತ್ರ. ಮೇಲೆ ಹೇಳಿದವು ಈಕ್ವಿಟಿ ಹೂಡಿಕೆ ಎನ್ನಿಸಿಕೊಳ್ಳುತ್ತವೆ. ಇದು ಸರಕಾರ ಬರೆದುಕೊಡುವ ಮುಚ್ಚಳಿಕೆ ಪತ್ರ. ಹೀಗಾಗಿ ಇವುಗಳನ್ನ ಒಂದು ಹಂತದವರೆಗೆ ಈಕ್ವಿಟಿಗಿಂತ ಹೆಚ್ಚು ಸುರಕ್ಷಿತ ಎಂದು ಹೇಳಬಹುದು. ಜೊತೆಗೆ ಭಾರತ ಇಂದು ಜಗತ್ತಿನ ಇತರ ದೇಶಗಳೊಂದಿಗೆ ವ್ಯಾಪಾರದಲ್ಲಿ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಆದರೆ ಚೀನಾ ದೇಶದಲ್ಲಿ ಇರುವಷ್ಟು ಮೂಲಭೂತ ಸೌಕರ್ಯಗಳು ಇಲ್ಲಿ ಇಲ್ಲ. ಹೀಗಾಗಿ ಕಳೆದ ಆರೇಳು ವರ್ಷದಿಂದ ಸರಕಾರ ಮೂಲಭೂತ ಸೌಕರ್ಯಗಳನ್ನ ಅಭಿವೃದ್ಧಿ ಪಡಿಸಲು ಹೆಚ್ಚಿನ ಹಣವನ್ನ ವ್ಯಯ ಮಾಡುತ್ತಿದೆ. ಹೀಗಾಗಿ ಇಂತಹ ಬಾಂಡ್ ಗಳ ಮೇಲಿನ ಹೂಡಿಕೆ ಕೂಡ ಲಾಭದಾಯವಾಗಿವೆ.
  6. ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ ಗಳ ಮೇಲಿನ ಹೂಡಿಕೆ 2021ರಲ್ಲಿ ಒಳ್ಳೆಯ ಫಸಲು ತಂದುಕೊಡಲಿದೆ. ಇಲ್ಲಿ ಕೂಡ ಮಿಡ್ ಟರ್ಮ್ ನಿಂದ ಲಾಂಗ್ ಟರ್ಮ್ ಹೂಡಿಕೆ ಹೆಚ್ಚಿನ ಲಾಭವನ್ನ ಖಂಡಿತ ತಂದು ಕೊಡುತ್ತದೆ. ಮಾರುಕಟ್ಟೆಯಲ್ಲಿ ಸಣ್ಣ ಪುಟ್ಟ ಏರಿಳಿತಗಳು ಸದಾ ಇದ್ದೆ ಇರುತ್ತದೆ. ಲಾಂಗ್ ಟರ್ಮ್ ನಲ್ಲಿ ಇಂತಹ ಸಣ್ಣ ಪುಟ್ಟ ಏರಿಳಿತಗಳ ಲಾಭ ನಷ್ಟ ಎಲ್ಲವೂ ಹೊಂದಾವಣಿಕೆಯಾಗಿ ನಮ್ಮ ನಿರೀಕ್ಷಿತ ಲಾಭವನ್ನ ತಂದು ಕೊಡುತ್ತದೆ. ಮಾರುಕಟ್ಟೆಯ ಏರಿಳಿತ ಹೇಗೆ ಇರಲಿ ನಿಮ್ಮ ಹೂಡಿಕೆ ಸದಾ ಸಮತೋಲಿತವಾಗಿರಲಿ ಆಗ ಮಾರುಕಟ್ಟೆ ಕುಸಿದರೂ ನಿಮಗೆ ಹೆಚ್ಚಿನ ನಷ್ಟ ಆಗುವುದಿಲ್ಲ. 2017/2018ರಲ್ಲಿ ರಿಲಯನ್ಸ್ ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ 70 ಪ್ರತಿಶತ ಲಾಭವನ್ನ ತಂದು ಕೊಟ್ಟಿದೆ. ಎಲ್ ಅಂಡ್ ಟಿ ಇನ್ಫ್ರಾ ಮ್ಯೂಚುಯಲ್ ಫಂಡ್ 60 ಪ್ರತಿಶತ ಲಾಭವನ್ನ ತಂದುಕೊಟ್ಟಿದೆ. ಉಳಿದಂತೆ ಮೆಜಾರಿಟಿ ಮ್ಯೂಚುಯಲ್ ಫಂಡ್ ಗಳು ನೆಲ ಕಚ್ಚಿವೆ. ಹೀಗಾಗಿ ನಮ್ಮ ಸಲಹೆ 'ವಿಷಯಾಧಾರಿತ ಅಥವಾ ನಿಗದಿತ ಹೆಸರಿಟ್ಟ ಯೋಜನೆಗಳ ಮೇಲಿನ ಹೂಡಿಕೆ' ಹೆಚ್ಚಿನ ಲಾಭ ತಂದು ಕೊಡುತ್ತದೆ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಕೂಡ ಉತ್ತಮ.
  7. ಫಾರ್ಮಾ ಕಂಪನಿಗಳ ಷೇರಿನ ಮೇಲೆ ಹೂಡಿಕೆ ಕೂಡ ಮಾಡಬಹುದು. ಕೊರೋನೋತ್ತರ ಈ ಸಂಸ್ಥೆಗಳಿಗೆ ಭವಿಷ್ಯವಿದೆ. ಎಂದಿನಂತೆ ಜಗತ್ತು ಹೆಚ್ಚು ಡೋಲಾಯಮಾನ ಸ್ಥಿತಿ ತಲುಪಿದಾಗ ಸಹಜವಾಗೇ ಮನುಷ್ಯನ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಹೀಗಾಗಿ ಇಲ್ಲಿನ ಹೂಡಿಕೆ ಕೂಡ ನಷ್ಟ ಮಾಡುವುದಿಲ್ಲ.

ಕೊನೆಮಾತು: ಯಾವುದರ ಮೇಲಿನ ಹೂಡಿಕೆಯಾದರೂ ಸರಿಯೇ ಅದರ ಪೂರ್ಣ ಜ್ಞಾನ ಮತ್ತು ಅರಿವಿಲ್ಲದೆ ಮಾಡುವ ಹೂಡಿಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಮಾಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವೃದ್ಧಿಸುವ ಕಾರ್ಯ ಮಾತ್ರ ನಿಲ್ಲದೆ ಸಾಗುತ್ತಿರಲಿ. ಭಯ ಮತ್ತು ಅಜ್ಞಾನ ಅಥವಾ ಮಾಹಿತಿ ಕೊರತೆ ಮನಸ್ಸಿನಲ್ಲಿ ಸಂಶಯ ಉಂಟುಮಾಡುತ್ತದೆ. ಸಂಶಯದೊಂದಿಗೆ ಹೂಡಿಕೆ ಮಾತ್ರ ಮಾಡುವುದು ಬೇಡ. ಅಪಾಯವಿಲ್ಲದ ಹೂಡಿಕೆ ಇಲ್ಲವೇ ಇಲ್ಲ! ಅಪಾಯವೆಂದು ಹೂಡಿಕೆ ಮಾಡದೆ ಇರುವುದು ಎಲ್ಲಕ್ಕಿಂತ ದೊಡ್ಡ ಅಪಾಯ ಎನ್ನುವುದು ಕೂಡ ನಿಮಗೆ ತಿಳಿದಿರಲಿ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


    Stay up to date on all the latest ಅಂಕಣಗಳು news
    Poll
    Amarinder-Sidhu

    ನವಜೋತ್ ಸಿಂಗ್ ಸಿಧುಗೆ ಅಮರೀಂದರ್ ಅವರ ಪ್ರಬಲ ವಿರೋಧವು ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಾನಿ ಮಾಡುತ್ತದೆಯೇ?


    Result
    ಹೌದು
    ಇಲ್ಲ

    Comments

    Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

    The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

    flipboard facebook twitter whatsapp