ಆನ್ ಲೈನ್ ಕೋಚಿಂಗ್ ಯೊಶೋಗಾಥೆಯ ಹಿಂದಿದೆ ನಮ್ಮೆಲ್ಲರ ದಿವ್ಯ ಮೌನ!

ಹಣಕ್ಲಾಸು-255

-ರಂಗಸ್ವಾಮಿ ಮೂಕನಹಳ್ಳಿ

Published: 15th April 2021 12:00 AM  |   Last Updated: 15th April 2021 01:46 PM   |  A+A-


Hanaclasu: Success secret of EdTech companies in India

ಆನ್ ಲೈನ್ ಕೋಚಿಂಗ್ ಯೊಶೋಗಾಥೆಯ ಹಿಂದಿದೆ ನಮ್ಮೆಲ್ಲರ ದಿವ್ಯ ಮೌನ!

Posted By : Srinivas Rao BV
Source : Online Desk

ಶಿಕ್ಷಣ ಕ್ಷೇತ್ರ ವ್ಯಾಪಾರವಾಗಿ ಬದಲಾಗಿ ದಶಕಗಳು ಕಳೆದಿವೆ ಎನ್ನುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಟೆಕ್ನಾಲಜಿ ಎನ್ನುವುದು ಈ ಶಿಕ್ಷಣ ಕ್ಷೇತ್ರಕ್ಕೆ ವರದಾನವಾಗಿ ಬಂದಿದೆ. ಇದರ ಜೊತೆಗೆ ಕೋವಿಡ್ ಡಿಸ್ಟೆನ್ಸ್ ಲರ್ನಿಂಗ್ ಅಥವಾ ಆನ್ಲೈನ್ ಲರ್ನಿಂಗ್ ಎನ್ನುವುದನ್ನ ಜಗತ್ತಿನ ಮೇಲೆ ಹೇರಿದೆ. 

ಹೀಗಾಗಿ ಆನ್ಲೈನ್ ಶಿಕ್ಷಣ ಒದಗಿಸುವ ಬಹುತೇಕ ವೇದಿಕೆಗಳಿಗೆ ಇದು ಸುಗ್ಗಿಯ ಸಮಯ. ಕೋವಿಡ್ ಸಮಯದಲ್ಲಿ ಹೆಚ್ಚಿನ ಲಾಭವನ್ನ ಮಾಡಿಕೊಂಡವರಲ್ಲಿ ಆನ್ಲೈನ್ ಶಿಕ್ಷಣ ನೀಡುವ ಸಂಸ್ಥೆಗಳು ಪ್ರಮುಖವಾಗಿವೆ.

ಬೈಜುಸ್, ವೇದಾಂತು,  ಅನ್ಅಕಾಡೆಮಿ, ಮುಂತಾದವು ಭಾರತದಲ್ಲಿ ಆನ್ಲೈನ್ ಶಿಕ್ಷಣ ನೀಡುವ ಅತ್ಯಂತ ದೊಡ್ಡ ಸಂಸ್ಥೆಗಳಲ್ಲಿ ಪ್ರಮುಖವಾಗಿವೆ. 

ಈ ಪೈಕಿ ಬೈಜುಸ್ ಎಜುಟೆಕ್ ದೈತ್ಯ ಎಂದು ಹೆಸರು ಮಾಡಿದೆ. ಕಳೆದ ವರ್ಷ ಈ ಸಂಸ್ಥೆ ಮಾರುಕಟ್ಟೆಯಿಂದ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಪಡೆದುಕೊಂಡಿತ್ತು . ಇದೀಗ ಮತ್ತೆ 600 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಮಾರುಕಟ್ಟೆಯಿಂದ ತೆಗೆದುಕೊಳ್ಳುವ ಹುನ್ನಾರದಲ್ಲಿದೆ.

ಗಮನಿಸಿ ಬೈಜುಸ್ ಈಗಾಗಲೇ ಭಾರತದ ದೊಡ್ಡ ಕೋಚಿಂಗ್ ಸೆಂಟರ್ ಸಂಸ್ಥೆಯಾಗಿದ್ದ 'ಆಕಾಶ್' ಹೆಸರಿನ ಸಂಸ್ಥೆಯನ್ನ ಹತ್ತಿರತ್ತಿರ 1 ಬಿಲಿಯನ್ ಅಮೆರಿಕನ್ ಡಾಲರ್ ನೀಡಿ ಖರೀದಿಸಿದೆ. ಭಾರತದಲ್ಲಿ ಕೋಚಿಂಗ್ ಅಥವಾ ಟ್ಯೂಷನ್ ಉದ್ಯಮ ಅತ್ಯಂತ ದೊಡ್ಡದು. ವಾರ್ಷಿಕ ಇದರ ಮೊತ್ತ 25 ಸಾವಿರ ಕೋಟಿಯನ್ನ ಮೀರುತ್ತದೆ ಎನ್ನುವ ಕಥೆಯನ್ನ ಅಂಕಿ-ಅಂಶಗಳು ಹೇಳುತ್ತವೆ. 

ಕಳೆದ 33 ವರ್ಷದಿಂದ 2೦೦ ಕ್ಕೂ ಹೆಚ್ಚು ಕೋಚಿಂಗ್ ಸೆಂಟರ್ಗಳನ್ನ ಹೊಂದಿದ್ದ ಆಕಾಶ್ ಸಂಸ್ಥೆ ಕೊರೋನ ನಂತರ ಆನ್ಲೈನ್ ಆರ್ಭಟಕ್ಕೆ ಮಣಿಯಿತು ಎನ್ನುವುದಕ್ಕಿಂತ, ಬೈಜುಸ್ ಆನ್ಲೈನ್ ಮಾರುಕಟ್ಟೆಯಲ್ಲಿ ಲೀಡರ್ಶಿಪ್ ಕಾಯ್ದುಕೊಳ್ಳಲು ಇಷ್ಟೊಂದು ದೊಡ್ಡ ಮೊತ್ತವನ್ನ ನೀಡಿ ಖರೀದಿಸಿದೆ ಎನ್ನುವುದು ಹೆಚ್ಚು ಸಮಂಜಸವಾದೀತು. ಹೀಗೆ ಹೇಳಲು ಪ್ರಮುಖ ಕಾರಣ, ಯಾವುದೇ ಇಂತಹ ಸ್ಟಾರ್ಟ್ ಅಪ್ ಗಳು ಮಾಡುವುದು ವ್ಯಾಲ್ಯೂವೇಶನ್ ಎನ್ನುವ ಪ್ರಹಸನವನ್ನ. ನೀವೇ ಗಮನಿಸಿ ನೋಡಿ ಜುಲೈ 2019 ರಲ್ಲಿ 5.75 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸಂಸ್ಥೆ ಇಂದು 15 ಬಿಲಿಯನ್ ಮೌಲ್ಯವುಳ್ಳದ್ದು ಎಂದು ಘೋಷಿಸಿ ಕೊಳ್ಳುತ್ತಿದೆ. ಹೊಸದಾಗಿ 600 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಪಡೆದುಕೊಳ್ಳುವ ಉದ್ದೇಶ ಕೂಡ ಸ್ಪಷ್ಟ! ಈ ಹೊಸ ಹಣದಿಂದ ಮತ್ತಷ್ಟು ಆನ್ಲೈನ್ ಶಿಕ್ಷಣ ನೀಡುವ ಸಂಸ್ಥೆಗಳನ್ನ ಖರೀದಿಸುವುದು. ಅಮೆರಿಕಾದಲ್ಲಿರುವ ಹಲವಾರು ಇಂತಹ ಸಂಸ್ಥೆಗಳ ಜೊತೆ ಮಾತುಕತೆ ಕೂಡ ಆಗುತ್ತಿದೆ ಎನ್ನುವ ಗುಸುಗುಸು ಕೂಡ ಕೇಳಿ ಬರುತ್ತಿದೆ. ನಿಮಗೆಲ್ಲಾ ತಿಳಿದಿರಲಿ ಪೇಟಿಎಂ ನಂತರದ ಅತಿ ಹೆಚ್ಚು ಮೌಲ್ಯ ಹೊಂದಿರುವ ನವೋದ್ದಿಮೆ ಎನ್ನುವ ಕಿರೀಟ ಬೈಜುಸ್ ಗೆ ಸೇರಿದೆ. ಕೊರೋನದ ಸಹಾಯದಿಂದ ಬೈಜುಸ್ ಸಂಸ್ಥೆಯ ವಾರ್ಷಿಕ ರೆವೆನ್ಯೂ 800 ಮಿಲಿಯನ್ ಗೆ ಜಿಗಿದಿದೆ. ಇನ್ನೊಂದು ವರ್ಷದಲ್ಲಿ ಇದು 1 ಬಿಲಿಯನ್ ಮುಟ್ಟುವ ಎಲ್ಲಾ ಸಾಧ್ಯತೆಗಳು ಇದೆ.

ಇದೊಂದು ಬೈಜುಸ್ ಎನ್ನುವ ನವೋದ್ದಿಮೆಯ ಕಥೆಯಂತೆ ಕೇಳಿಸುತ್ತದೆ ಅಲ್ಲವೇ? ಹೌದು 2011ರಲ್ಲಿ ಬೆಂಗಳೂರಿನಲ್ಲಿ ಈ ನವೋದ್ದಿಮೆಗೆ ಶಂಕು ಸ್ಥಾಪನೆಯಾಗುತ್ತದೆ. ಬೈಜು ರವೀಂದ್ರನ್ ಮತ್ತು ದಿವ್ಯ ಗೋಕುಲನಾಥ್ ಎನ್ನುವ ಇಬ್ಬರು ವ್ಯಕ್ತಿಗಳು ಇದರ ಸ್ಥಾಪಕರು. ಇಂದಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಅತಿ ಹೆಚ್ಚು ಮೌಲ್ಯವುಳ್ಳ ನವೋದ್ದಿಮೆ ಎನ್ನುವ ಹೆಗ್ಗಳಿಕೆಯನ್ನ ಪಡೆದುಕೊಂಡಿದೆ. ಇವೆಲ್ಲವೂ ಸರಿ. ಆದರೆ ಹೀಗೆ ಕೋಚಿಂಗ್ ಅಥವಾ ಟ್ಯೂಷನ್ ನೀಡುವ ಸಂಸ್ಥೆಯೊಂದು ಈ ಮಟ್ಟಕ್ಕೆ ಬೆಳೆದು ನಿಲ್ಲಬೇಕಾದರೆ ಅದರ ಹಿಂದೆ ನಮ್ಮ ಸಮಾಜದಲ್ಲಿ ಶಿಕ್ಷಣ ಕ್ಷೆತ್ರದಲ್ಲಿ ಇರುವ ಭಾರಿ ದೊಡ್ಡ ಹುಳಕನ್ನ ಎತ್ತಿ ತೋರಿಸುತ್ತದೆ. ನಮ್ಮ ಶಾಲೆ ಮತ್ತು ಕಾಲೇಜುಗಳು ಮಕ್ಕಳಿಗೆ ಕಲಿಸಬೇಕಾದ ವಿಷಯವನ್ನ ಸರಿಯಾಗಿ ಕಲಿಸದೇ ಹೋದ ಪರಿಣಾಮ 'ಲರ್ನಿಂಗ್ ಗ್ಯಾಪ್' ಸೃಷ್ಟಿಯಾಯ್ತು. ಸಮಾಜದಲ್ಲಿ ಇರುವ ಇಂತಹ ಲರ್ನಿಂಗ್ ಗ್ಯಾಪ್ ಬೈಜುಸ್ ಅಂತಹ ಅನೇಕ ಸಂಸ್ಥೆಗಳ ಬಂಡವಾಳ. ಈ ಲೇಖನದ ಉದ್ದೇಶ ಬೈಜುಸ್ ಅಥವಾ ಇನ್ನಿತರೇ ಆನ್ಲೈನ್ ಶಿಕ್ಷಣ ನೀಡುವ ಸಂಸ್ಥೆಗಳನ್ನ ದೂಷಿಸುವುದಲ್ಲ. ಬದಲಿಗೆ ನಮ್ಮ ಸಮಾಜದಲ್ಲಿರುವ ಹುಳುಕುಗಳ ಕಡೆಗೆ ಒಂದಷ್ಟು ಗಮನ ಹರಿಸುವುದು. ತನ್ಮೂಲಕ ನಮ್ಮ ಸಮಾಜದಲ್ಲಿ ಪ್ರತಿ ಮನೆಯಲ್ಲಿ ಆಗುತ್ತಿರುವ ಬಜೆಟ್ ಸೋರಿಕೆಯನ್ನ ತೋರಿಸುವುದು. ಸಮಾಜದ ಒಂದಷ್ಟು ಜನರಾದರೂ ಎಚ್ಚೆತ್ತು ಕೊಂಡು ತಮ್ಮ ಜೇಬಿಗೆ ಬೀಳುತ್ತಿರುವ ಕತ್ತರಿಯಿಂದ ಬಚಾವಾದರೆ ಅಲ್ಲಿಗೆ ಲೇಖನದ ಉದ್ದೇಶ ಸಫಲವಾದಂತೆ.

ನಾವು ನಮ್ಮ ಮಕ್ಕಳನ್ನ ಶಾಲೆಗೆ ಸೇರಿಸಿದ್ದೇವೆ. ಅಲ್ಲಿ ಆಗಲೇ ನಾವು ಟ್ಯೂಷನ್ ಫೀಸ್ ಸಹಿತ ಹತ್ತಾರು ಹೆಸರಿನಲ್ಲಿ ಆಗಲೇ ಹಣವನ್ನ ಕಟ್ಟಿದ್ದೇವೆ. ವಸ್ತು ಸ್ಥಿತಿ ಹೀಗಿದ್ದೂ ಬೈಜುಸ್ ಅಂತಹ ಸಂಸ್ಥೆಗಳು ವಾರ್ಷಿಕ 1 ಬಿಲಿಯನ್ ಡಾಲರ್ ರೆವೆನ್ಯೂ ಪಡೆಯಲು ಹೇಗೆ ಸಾಧ್ಯ? ನಿಮಗೆ ಗೊತ್ತಿರಲಿ ಕಿಂಡರ್ ಗಾರ್ಡನ್ ನಿಂದ ಶುರುವಾಗುವ ಈ ಖರ್ಚಿನ ಸರಮಾಲೆ ನಿಲ್ಲುವುದು ಯಾವಾಗ? ಅಂಕಿಅಂಶಗಳು ಹೇಳುವ ಪ್ರಕಾರ ವಾರ್ಷಿಕ ಸರಾಸರಿ 65 ಸಾವಿರ ರೂಪಾಯಿಗಳನ್ನ ನಾವು ನಮ್ಮ ಮಕ್ಕಳ ಶಾಲೆಗೆ ಕಟ್ಟುತ್ತಿದ್ದೇವೆ. ಈ ಮೊತ್ತ ಕೆಲವರಿಗೆ ಕಡಿಮೆ ಎನಿಸಬಹದು, ಕೆಲವರಿಗೆ ಜಾಸ್ತಿ. ಆದರೆ ಇದೊಂದು ಅವರೇಜ್ ಸಂಖ್ಯೆ. ಇಷ್ಟೊಂದು ಹಣವನ್ನ ತೆತ್ತು ಕೂಡ ಶಾಲೆಗಳು ಯಾವ ಕಾರಣಕ್ಕೆ ಇವೆ ಆ ಉದ್ದೇಶವನ್ನು ಈಡೇರಿಸುತ್ತಿಲ್ಲ. ಹೀಗಾಗಿ ಪೋಷಕರು ಮತ್ತೆ ಹತ್ತಿರತ್ತಿರ 50 ರಿಂದ 60 ಸಾವಿರ ಮತ್ತೆ ಕೋಚಿಂಗ್ ಸೆಂಟರ್ ಅಥವಾ ಟ್ಯೂಷನ್ ಸೆಂಟರ್ ಗಳಿಗೆ ನೀಡುತ್ತಿದ್ದಾರೆ. ಶಿಕ್ಷಣ ಎನ್ನುವುದು ಕೇವಲ ಉಳ್ಳವರ ವಸ್ತುವಾಗಿ ಮಾರ್ಪಾಡಾಗಿದೆ. ಇದಕ್ಕೆ ಪ್ರಮುಖ ಕಾರಣ ನಾವು ಪ್ರಶ್ನಿಸುವುದನ್ನ ಮರೆತಿರುವುದು. ನಾವು ಕೊಟ್ಟ ಹಣಕ್ಕೆ ಅಷ್ಟು ಮೌಲ್ಯ ಮರಳಿ ಸಿಕ್ಕಿತೇ ಎನ್ನುವುದನ್ನ ನಾವು ಪ್ರಶ್ನಿಸುತ್ತಿಲ್ಲ. ಹೀಗಾಗಿ ಎಲ್ಲರೂ ಟ್ಯೂಷನ್ ಸೆಂಟರ್ ಎನ್ನುವ  ಪರ್ಯಾಯ ಶಿಕ್ಷಣ ಪದ್ಧತಿಗೆ ಜೈ ಎಂದು ಬಿಟ್ಟಿದ್ದೇವೆ.

ನಮ್ಮ ಜೇಬಿಗೆ ಬೀಳುತ್ತಿರುವ ಈ ಕತ್ತರಿಯಿಂದ ಪಾರಾಗಲು ಹೆಣಗಬೇಕಾಗಿಲ್ಲ, ತಿಣುಕಬೇಕಾಗಿಲ್ಲ ಒಂದಷ್ಟು ಅಂಶಗಳನ್ನ ಪಾಲಿಸಬೇಕಾಗುತ್ತದೆ.

  1. ಎಲ್ಲಕ್ಕೂ ಮೊದಲು ಪೋಷಕರು ಒಂದಷ್ಟು ಸಂಘಟಿತರಾಗಿ: ಶಾಲೆಗೆ ಸೇರಿಸುವ ಮುನ್ನ ಶಾಲೆಯ ಪೂರ್ವಾಪರವನ್ನ ತೆಗೆದು ನೋಡಬೇಕು. ಶಾಲೆ ಎಷ್ಟು ವರ್ಷದಿಂದ ಸೇವೆ ನೀಡುತ್ತಾ ಬಂದಿದೆ. ಅವರ ಧ್ಯೇಯ ನಿಜಕ್ಕೂ ಶಿಕ್ಷಣವೇ ಅಥವಾ ಹಣ ಮಾಡುವುದೇ ಎನ್ನುವುದನ್ನ ತಿಳಿದುಕೊಳ್ಳಬೇಕು. ಇದೇನು ಕ್ಷಿಪಣಿ ವಿಜ್ಞಾನವಲ್ಲ. ಒಂದೆರೆಡು ಬಾರಿ ಗಮನವಿಟ್ಟು ನೋಡಿದರೆ ಅವರ ನೈಜ್ಯ ಉದ್ದೇಶ ಬಯಲಾಗುತ್ತದೆ. ಹಣ ಮಾಡುವ ಉದ್ದೇಶವಿರುವ ಸಂಸ್ಥೆಗಳು ಮಕ್ಕಳ ಕಲಿಕೆಯ ಕಡೆಗೆ ಅಷ್ಟೊಂದು ಗಮನವನ್ನ ನೀಡುವುದಿಲ್ಲ.
  2. ಶಾಲೆಗೆ ನಾವು ಹಣ ಕೊಟ್ಟ ಮೇಲೆ ಮಕ್ಕಳ ಕಲಿಕೆ ಅವರಿಗೆ ಸೇರಿದ್ದು: ಉತ್ತಮ ಗುಣಮಟ್ಟದ ಶಿಕ್ಷಕ/ಕಿಯರನ್ನ ನೇಮಿಸಿಕೊಳ್ಳುವುದು ಶಾಲೆಯ ಕರ್ತವ್ಯ. ಇವತ್ತಿಗೆ ಯಾವ ಕೆಲಸವೂ ಸಿಗದಿದ್ದರೆ ಶಿಕ್ಷಕ ವೃತ್ತಿಗೆ ಹೋದರಾಯ್ತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಶಿಕ್ಷರಿಗೆ ನೀಡುತ್ತಿರುವ ವೇತನವೂ ಬಹಳ ಕಡಿಮೆ. ಕೆಲವೊಮ್ಮೆ ಮಕ್ಕಳಿಗೆ ಹೇಳಿಕೊಡುವ ಸಾಮರ್ಥ್ಯ ಇಲ್ಲದವರು ಕೂಡ ಶಿಕ್ಷರಾಗಿ ಕೆಲಸ ಮಾಡುತ್ತಿರುವುದು ಕೂಡ ಪರ್ಯಾಯ ವ್ಯವಸ್ಥೆ ಉಗಮಕ್ಕೆ ಕಾರಣವಾಗಿದೆ. ಪೋಷಕರು ಇದನ್ನ ವಿರೋಧಿಸಬೇಕು. ಇಲ್ಲದಿದ್ದರೆ ಹೆಚ್ಚಿನ ಹಣವನ್ನ ಕೋಚಿಂಗ್ ಕ್ಲಾಸ್ ಹೆಸರಲ್ಲಿ ತೆರಲು ಸಿದ್ಧವಿರಬೇಕು.
  3. ಕಿಂಡರ್ ಗಾರ್ಡನ್ ನಿಂದ ಹಿಡಿದು ವೃತ್ತಿಪರ ಶಿಕ್ಷಣ ಪಡೆಯುವವರೆಗೆ ಹೆಚ್ಚುತ್ತಲೆ ಇದೆ ಟ್ಯೂಷನ್ ಆರ್ಭಟ: ಇದಕ್ಕೆ ಕಾರಣರಾರು? ಎನ್ನುವುದನ್ನ ನಾವು ಗಮನಿಸಬೇಕು. ಶಾಲೆ ಕಾಲೇಜುಗಳು ಮಕ್ಕಳು ಖುಷಿಯಿಂದ ಓಡಾಡಿಕೊಂಡು ಬರಲು ಮತ್ತು ಟ್ಯೂಷನ್ ಸೆಂಟರ್ ಕಲಿಕೆಗೆ ಎಂದು ನಾವು ಮಾನಸಿಕವಾಗಿ ಒಪ್ಪಿಕೊಂಡಿರುವುದು ಇಂದು ಬೈಜುಸ್ ಅಂತಹ ಸಂಸ್ಥೆಗಳು ದೈತ್ಯವಾಗಿ ಬೆಳೆದು ನಿಲ್ಲಲು ಸಹಾಯವಾಗಿದೆ. ನಮ್ಮ ಮನಸ್ಥಿತಿ ಬದಲಾಗದ ಹೊರತು ಇದರಿಂದ ಪೂರ್ಣ ಮುಕ್ತಿ ಇಲ್ಲ.

ಒಂದು ಸಣ್ಣ ಉದಾಹರಣೆ ನೋಡೋಣ ನೀವೊಂದು ಹೋಟೆಲ್ ಗೆ ಹೋಗುತ್ತೀರಿ ಎಂದುಕೊಳ್ಳೋಣ, ಅಲ್ಲಿ ಹೋಗಿ ನಿಮಗೆ ಬೇಕಾದ ತಿಂಡಿಯನ್ನ ಆರ್ಡರ್ ಮಾಡುತ್ತೀರಿ ಎನ್ನೋಣ. ನಿಮ್ಮ ತಿಂಡಿಯ ಗುಣಮಟ್ಟ ಕೆಟ್ಟದಾಗಿತ್ತು ಎಂದುಕೊಳ್ಳಿ. ನೀವು ಹಣತೆತ್ತು, ಬೇರೊಂದು ಹೋಟೆಲ್ ಗೆ ಹೋಗಿ ಮತ್ತೆ ಹಣ ನೀಡಿ ಆಹಾರ ಖರೀದಿಸುವಿರೂ? ಅಥವಾ ಮೊದಲ ಹೋಟೆಲ್ನವನಿಗೆ ತಿಂಡಿ ಸರಿಯಿಲ್ಲ, ಹಣ ನೀಡುವುದಿಲ್ಲ ಎನ್ನುವಿರೋ? ನೀವು ಹಣ ನೀಡುವುದು ನಿಮಗೆ ಬೇಕಾದ ಗುಣಮಟ್ಟದ ತಿಂಡಿ ಪಡೆಯಲು ಅಲ್ಲವೇ? ಅವನು ಹಳಸಿದ ಅಥವಾ ತಿನ್ನಲಾಗದ ತಿಂಡಿಯನ್ನ ನೀಡಿದರೆ ಹೇಗೆ? ಸಾಧಾರಣವಾಗೇ ನೀವು ಹೋಟೆಲ್ನವನ ಬಳಿ ಜಗಳವಾಡುತ್ತಿರಿ. ಹಣ ನೀಡುವುದಿಲ್ಲ ಎನ್ನುತ್ತೀರಿ ಖಂಡಿತ!. ಆದರೆ ಶಿಕ್ಷಣದ ವಿಷಯದಲ್ಲಿ ಅದೇಕೆ ಇಷ್ಟೊಂದು ಮೌನ?  ವಾರ್ಷಿಕ ಸರಾಸರಿ 65 ಸಾವಿರ ರೂಪಾಯಿ ವ್ಯಯಿಸುವ ಪೋಷಕರು ಬಾಯಿ ಬಿಡದೆ ಮತ್ತೆ ಅಷ್ಟೇ ಮೊತ್ತವನ್ನ ಮಕ್ಕಳ ಟ್ಯೂಷನ್ ಗೆ ಸುರಿಯುವುದು ನೋಡಿದಾಗ, ಪೋಷಕರ ನಿರ್ವೀರ್ಯತೆ ಬಗ್ಗೆ ಬೇಸರ ಬರುತ್ತದೆ. 

ಹೋಟೆಲ್ ಉದಾಹರಣೆಯನ್ನ ನೀವು ತರಕಾರಿ ಅಂಗಡಿಗೆ ಬಳಸಿ ಅಥವಾ ಬದುಕಿನ ಬೇರೆ ಯಾವುದೇ ಸ್ಥರದಲ್ಲಿ ಬಳಸಿನೋಡಿ. ಅಲ್ಲಿ ಇರುವ ಮನಸ್ಥಿತಿ ಶಿಕ್ಷಣದ ವಿಷಯದಲ್ಲಿ ಏಕಿಲ್ಲ? ಏಕೆ ನಾವೆಲ್ಲಾ ಕೊಟ್ಟ ಹಣಕ್ಕೆ ಸಿಗಬೇಕಾದ ಮೌಲ್ಯದ ಬಗ್ಗೆ ಮಾತನಾಡುತ್ತಿಲ್ಲ? ಏಕೆ ನಾವೆಲ್ಲಾ ಪರ್ಯಾಯ ವ್ಯವಸ್ಥೆಗೆ ಮತ್ತೆ ಹಣವನ್ನ ಮಾತನಾಡದೆ ನೀಡುತ್ತೇವೆ? ಇದಕ್ಕೆ ಉತ್ತರ ಕೂಡ ಮನಸ್ಥಿತಿ. ಹೌದು ಯಾರಿಗೂ ಅವರ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಲಿ ಎಂದು ಬಯಸುವುದಿಲ್ಲ. ಶಾಲೆಯಲ್ಲಿ ಹೇಳಿ ಕೊಡದ ವಿಷಯಗಳನ್ನ ಮತ್ತು ಮೂಲಭೂತವಾಗಿ ಮಕ್ಕಳನ್ನ ಪ್ರಬಲರನ್ನಾಗಿ ಮಾಡುತ್ತೇವೆ ಎನ್ನುವ ಜಾಹಿರಾತು ಒಂದು ಕಡೆಯಾದರೆ, ಮುಖ್ಯವಾಹಿನಿ ಶಿಕ್ಷಣ ಸಂಸ್ಥೆಗಳ ಉಡಾಫೆತನ ಮತ್ತು ಪೋಷಕರ ಬೇಜವಾಬ್ದಾರಿತನ ಎಲ್ಲವೂ ಸೇರಿ ಇಂದಿನ ಸ್ಥಿತಿ ಸೃಷಿಯಾಗಿದೆ.

ಕೊನೆ ಮಾತು: ವಾರ್ಷಿಕ ಐವತ್ತು ಸಾವಿರ, ಜೊತೆಗೆ ಟ್ಯೂಷನ್ ಗೆ ಹೋಗಿಬರುವ ಸಮಯ, ಖರ್ಚು ಎಲ್ಲವನ್ನೂ ಲೆಕ್ಕ ಹಾಕಿದರೆ ಅದನ್ನ ಹತ್ತಾರು ವರ್ಷ ಬೇರೆಡೆ ಹೂಡಿಕೆ ಮಾಡಿದ್ದರೆ, ಮಕ್ಕಳು ತಮ್ಮಿಚ್ಚೆಯ ಸಣ್ಣ ಪುಟ್ಟ ಉದ್ಯಮ ತೆರೆಯಲು ಹಣವಾಗುತ್ತಿತ್ತು. ಆದರೆ ನಾವು ಶಿಕ್ಷಣದ ವಿಷಯ ಬಂದಾಗ ಬಹಳ ಎಮೋಷನಲ್ ಆಗಿ ಬಿಡುತ್ತೇವೆ. ನಮಗಾದ ಅನುಭವ, ನಮ್ಮ ಬಾಳು ನಮ್ಮ ಮಕ್ಕಳಿಗೆ ಬೇಡ. ಅವರು ಬದುಕು ಉತ್ತಮವಾಗಿರಲಿ ಎನ್ನುವ ಮನಸ್ಥಿತಿಯನ್ನ ಬಂಡವಾಳ ಮಾಡಿಕೊಂಡು ಶಿಕ್ಷಣ, ಟ್ಯೂಷನ್ ಸಂಸ್ಥೆಗಳು ದೈತ್ಯವಾಗಿ ಬೆಳೆದು ನಿಂತಿವೆ. ಅವರನ್ನ ಪ್ರಶ್ನಿಸದ ಮಹಾಜನತೆ ಮೂಕರಂತೆ ಮತ್ತೆ ಬೈಜುಸ್ ಸಂಸ್ಥೆಯ ಲಾಜಿಕಲ್ ಅಲ್ಲದ ಮೌಲ್ಯವನ್ನ ನಂಬಿ ಅಲ್ಲಿ ಹೂಡಿಕೆ ಮಾಡಲು ಮುಗಿ ಬೀಳುತ್ತಾರೆ.

ಎಲ್ಲಿಯವರೆಗೆ ನಾವು ಪ್ರಶ್ನಿಸುವುದನ್ನ ಕಲಿಯುವುದಿಲ್ಲ, ನಮ್ಮ ಹಣಕ್ಕೆ ತಕ್ಕ ಮೌಲ್ಯ ಸಿಕ್ಕಿತೇ ಎಂದು ಪರಾಮರ್ಶಿಸಿಕೊಳ್ಳುವುದಿಲ್ಲ ಅಲ್ಲಿಯವರೆಗೆ ಇದು ಪುನರಾವರ್ತನೆ ಆಗುತ್ತಲೆ ಇರುತ್ತದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp