ಸಪ್ಲೈ ಚೈನ್ ಕುಸಿತ, ಆರ್ಥಿಕತೆಗೆ ಮಾರಕ!

ಹಣಕ್ಲಾಸು-256

-ರಂಗಸ್ವಾಮಿ ಮೂಕನಹಳ್ಳಿ 

Published: 22nd April 2021 09:25 AM  |   Last Updated: 22nd April 2021 09:25 AM   |  A+A-


File pic

ಸಪ್ಲೈ ಚೈನ್ ಕುಸಿತ, ಆರ್ಥಿಕತೆಗೆ ಮಾರಕ!

Posted By : Srinivas Rao BV
Source : Online Desk

ಭಾರತಕ್ಕೆ ಕೊರೋನದ ಎರಡನೇ ಅಲೆ ಸಾಕಷ್ಟು ತೊಂದರೆಯನ್ನ ನೀಡುತ್ತಿದೆ. ಏಪ್ರಿಲ್ 20, 2021ರಂದು ದೇಶವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು ಸದ್ಯದ ಮಟ್ಟಿಗೆ ದೇಶ ಪೂರ್ಣ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎನ್ನುವ ಮಾತನಾಡಿದ್ದಾರೆ. ಲಾಕ್ ಡೌನ್ ಕೊನೆಯ ಅಸ್ತ್ರವಾಗಲಿದೆ ಎನ್ನುವ ಮಾತನ್ನ ಕೂಡ ಅವರು ಉಲ್ಲೇಖಿಸಿದ್ದಾರೆ. ಲಾಕ್ ಡೌನ್ ಮಾಡುವುದು ನಾವು ಸಿದ್ಧತೆ ಮಾಡಿಕೊಂಡಿಲ್ಲ ಎನ್ನುವ ಕಾರಣಕ್ಕೆ. ಕಳೆದ ವರ್ಷ ಈ ದಿನಗಳಲ್ಲಿ ಅದು ಸರಿ. ಇಂದಿಗೂ ಅದೇ ರಾಗ ಹಾಡಿದರೆ ಗತಿ ಏನು? ಸದ್ಯ ಪೂರ್ಣ ಲಾಕ್ ಡೌನ್ ಇಲ್ಲ ಅದು ಒಂದಷ್ಟು ನೆಮ್ಮದಿ ತರುವ ವಿಷಯ. ಗಮನಿಸಿ ಲಾಕ್ ಡೌನ್ ಮಾಡಿದ ತಕ್ಷಣ ಏರುಪೇರಾಗುವುದು ಸಪ್ಲೈ ಚೈನ್. ಇದರಿಂದ ಪ್ರಥಮವಾಗಿ ಹೊಡೆತ ತಿನ್ನುವವರು ಸಣ್ಣ ಪುಟ್ಟ ವ್ಯಾಪಾರಿಗಳು. ಹೊಸ ಕೊರೋನ ಕೇಸುಗಳು ಜಾಸ್ತಿ ಆಗುತ್ತಿದೆ. ಯಾವ ಸುದ್ದಿ ಮಾಧ್ಯಮಗಳು ಜನರಲ್ಲಿ ವಿಶ್ವಾಸವನ್ನ ಬಿತ್ತಬೇಕಿತ್ತು ಅವುಗಳು ಬೆಂಗಳೂರಿನಲ್ಲಿ ಗಾಳಿಗೂ ಪರದಾಟ, ಕ್ಷಣ ಕ್ಷಣಕ್ಕೂ "ಸಾವಿನ ಕೂಪವಾಗಿದೆ ಬೆಂಗಳೂರು" ಎನ್ನುವ ತಲೆಬರಹವನ್ನ ನೀಡಿ ದೇಶವನ್ನ ಲಾಕ್ ಡೌನ್ ಸ್ಥಿತಿಗೆ ತಳ್ಳಲು ಹವಣಿಸುತ್ತಿದ್ದಾರೆ. ಜನರೆಲ್ಲಾ ಮನೆಯಲ್ಲಿ ಕುಳಿತರೆ ಅವರ ಟಿವಿಯನ್ನ ಹೆಚ್ಚು ವೀಕ್ಷಿಸುತ್ತಾರೆ. ಹೀಗಾಗಿ ಅವರಿಗೆ ಟಿಆರ್ಪಿ ಹೆಚ್ಚುತ್ತದ. ಹೆಚ್ಚು ಆದಾಯವನ್ನ ತಂದು ಕೊಡುತ್ತದೆ. ಆದರೆ ಅವರಿಗೆ ಅರಿವಿಲ್ಲದೆ ಸಪ್ಲೈ ಚೈನ್ ಕುಸಿತಕ್ಕೆ ಇವರು ಬೆಂಬಲವನ್ನ ನೀಡುತ್ತಿದ್ದಾರೆ.

ಸಪ್ಲೈ ಚೈನ್ ಎಂದರೇನು?

ಒಂದು ಪದಾರ್ಥ ತನ್ನ ಉಗಮ ಸ್ಥಾನದಿಂದ ಅದನ್ನ ಬಳಸುವ ಗ್ರಾಹಕನಿಗೆ ತಲುಪಲು ಒಂದಲ್ಲ ಕೆಲವೊಮ್ಮೆ ಹತ್ತಾರು ಕೈಗಳನ್ನ ದಾಟಿರುತ್ತದೆ. ಹೀಗೆ ವಸ್ತುವನ್ನ ತಯಾರಿಸಿದ ಸಂಸ್ಥೆ, ಪದಾರ್ಥವನ್ನ ಹಂಚುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಇವರನ್ನ ಡಿಸ್ಟ್ರಿಬ್ಯೂಟರ್ಸ್ (ವಿತರಕರು) ಎನ್ನುತ್ತಾರೆ. ಇಲ್ಲಿ ವ್ಯಕ್ತಿಯಿಂದ ಸಂಸ್ಥೆಯವರೆಗೆ ಅನೇಕ ವಿಧದ ಮಧ್ಯವರ್ತಿಗಳು ಬರುತ್ತಾರೆ. ಸರಳವಾಗಿ ಹೇಳಬೇಕೆಂದರೆ ಪದಾರ್ಥ ತನ್ನ ಉಗಮದಿಂದ ಬಳಸುವ ಗ್ರಾಹಕನ ಮನೆಗೆ ತಲುಪುವ ನಡುವಿನ ಎಲ್ಲಾ ಪ್ರಕ್ರಿಯೆಗಳಿಗೆ ಸಪ್ಲೈ ಚೈನ್ ಎನ್ನುತ್ತಾರೆ.

ಲಾಕ್ ಡೌನ್ ಆದರೆ ಸಪ್ಲೈ ಚೈನ್ ಕುಸಿಯುತ್ತದೆಯೇ?

ಇದಕ್ಕೆ ಉತ್ತರವನ್ನ ಸರಳವಾಗಿ ಹೌದು ಅಥವಾ ಇಲ್ಲ ಎಂದು ಹೇಳಲು ಬಾರದು. ಹೌದು ಎನ್ನಲು ಬಹಳಷ್ಟು ಕಾರಣಗಳಿವೆ. ಉದಾಹರಣೆಗೆ ನಮಗೆಲ್ಲಾ ತಿಳಿದಿರುವಂತೆ ಸೂಯೆಜ್ ಕಾಲುವೆಯ ಮೂಲಕ ಪ್ರತಿ ನಿತ್ಯ 10 ಬಿಲಿಯನ್ ಮೌಲ್ಯದ ಪದಾರ್ಥಗಳ ಸಾಗಾಣಿಕೆಯಾಗುತ್ತದೆ. ಜಗತ್ತಿನಲ್ಲಿ ಈ ರೀತಿ ಸಾಗಾಣಿಕೆಯಾಗುವ ಪದಾರ್ಥಗಳ 10 ಪ್ರತಿಶತ ಸೂಯೆಜ್ ಕಾಲುವೆಯ ಮೂಲಕ ಹಾದು ಹೋಗುತ್ತದೆ ಎನ್ನುವುದು ಈ ಕಾಲುವೆಯ ಪ್ರಾಮುಖ್ಯತೆಯನ್ನ ತೋರಿಸುತ್ತದೆ. ಆಫ್ರಿಕಾದ ದಕ್ಷಿಣ ಭಾಗದಲ್ಲಿ ಆಗುವ ಅನವಶ್ಯಕ ಸುತ್ತನ್ನ ತಪ್ಪಿಸಲು ಈ ಸೂಯೆಜ್ ಕಾಲುವೆಯ ಮಾರ್ಗವನ್ನ ಬಳಸಲಾಗುತ್ತದೆ. ಏಷ್ಯಾದಿಂದ ಯೂರೋಪಿಗೆ ಪದಾರ್ಥಗಳನ್ನ ಕಳಿಸಲು ಇದಕ್ಕಿಂತ ಉತ್ತಮ ಮಾರ್ಗ ಸದ್ಯದ ಮಟ್ಟಿಗೆ ಇಲ್ಲ. ಮೆಡಿಟೇರಿಯನ್ ಸಮುದ್ರವನ್ನ ಕೆಂಪು ಸಮುದ್ರದೊಂದಿಗೆ ಈ ಸೂಯೆಜ್ ಕಾಲುವೆ ಬೆಸೆಯುತ್ತದೆ. ಹೀಗಾಗಿ ಇದು ಏಷ್ಯಾ ಮತ್ತು ಯೂರೋಪನ್ನ ಬೆಸೆಯುವ ಅತಿ ಕಡಿಮೆ ದೂರದ ದಾರಿಯಾಗಿದೆ. ಮತ್ತು ನೆಲದ ಮೂಲಕ ಅಥವಾ ರೈಲ್ವೆ ಮೂಲಕ ನಾವಿನ್ನೂ ಅಲ್ಲಿಗೆ ತಲುಪಲಾಗದ ಸ್ಥಿತಯಲ್ಲಿದ್ದೇವೆ. ಹೀಗಾಗಿ ನೀರಿನ ಮೂಲಕ ಹೋಗುವುದು ಸದ್ಯಕ್ಕಿರುವ ಮಾರ್ಗ. ತೀರಾ ಇತ್ತೀಚಿಗೆ ಹೀಗೆ 10 ಬಿಲಿಯನ್ ಮೌಲ್ಯದ ಪದಾರ್ಥಗಳನ್ನ ಹೊತ್ತ ಹಡಗೊಂದು ಇದೆ ಕಾರಣಗಳಿಗಾಗಿ ಬ್ಲಾಕ್ ಆಗಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಭಾರತದಿಂದ ಯೂರೋಪಿಗೆ ಅವಶ್ಯಕವಾಗಿ ಬೇಕಾಗುವ ಪದಾರ್ಥಗಳು ದಿನಗಟ್ಟಲೆ ತಡವಾದವು. ಹಾಗೆಯೇ ಮಿಡೆಲ್ ಈಸ್ಟ್ ನಿಂದ ಬರಬೇಕಾದ ತೈಲ ಪದಾರ್ಥಗಳು ನಮಗೆ ತಲುಪಲು ತಡವಾಯಿತು. ಗಮನಿಸಿ ಇವೆಲ್ಲಾ ಸದಾ ಚಲಾವಣೆಯಲ್ಲಿರಬೇಕು. ಒಂದೆರೆಡು ದಿನ ನಿಂತರೂ ಪೂರ್ಣ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ.

ಈ ಪ್ಯಾಂಡಮಿಕ್ ಕಾರಣ ಉಂಟಾಗುವ ಈ ವಿಳಂಬ ಅಮೇರಿಕಾ ದೇಶಕ್ಕೆ ಹೆಚ್ಚು ತಟ್ಟುವುದಿಲ್ಲ. ಏಕೆಂದರೆ ಏಷ್ಯಾ ಖಂಡದ ಪಶ್ಚಿಮ ದ್ವಾರದ ಮೂಲಕ ಇಲ್ಲಿಗೆ ಶಿಪ್ಮೆಂಟ್ಗಳು ಹೋಗುತ್ತದೆ. ಯೂರೋಪಿಗೆ ಇದರಿಂದ ಭಾರಿ ತೊಂದರೆಯಾಗುತ್ತದೆ. ಇದಕ್ಕೆ ಕಾರಣ, ಬೇಕಾಗುವ ಎಲ್ಲಾ ಪದಾರ್ಥಗಳನ್ನ ತಿಂಗಳುಗಟ್ಟಲೆ ಸಂಗ್ರಹಿಸಲು ಬೇಕಾಗಿರುವ ಉಗ್ರಾಣಗಳ ಕೊರತೆಯಿದೆ. ಇಂಗ್ಲೆಂಡ್ ದೇಶವಂತೂ ಇದರಿಂದ ಹೆಚ್ಚಿನ ತೊಂದರೆಯನ್ನ ಅನುಭವಿಸುತ್ತದೆ.

ಗಮನಿಸಿ. ಚೀನಾದಿಂದ, ಯೂರೋಪಿನಿಂದ ಬರುವ ಪದಾರ್ಥಗಳ, ಬಿಡಿಭಾಗಗಳ ವ್ಯಾಪಾರಿಗಳು, ಆಟೋಮೊಬೈಲ್ ಬಿಡಿ ಭಾಗ ಮಾರಾಟಗಾರರು ಹೀಗೆ ಹಲವಾರು ವಲಯದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಇದರಿಂದ ಬಹಳ ಪೆಟ್ಟು ಬೀಳಲಿದೆ. ಇವರುಗಳ ಮೇಲೆ ಯಾವ ಮಟ್ಟದ ಹೊಡೆತ ಬೀಳಬಹುದು ಎನ್ನುವುದು ಯಾವ ಮಟ್ಟದಲ್ಲಿ ಲಾಕ್ ಡೌನ್ ಆಗತ್ತದೆ, ಎರಡನೇ ಅಲೆಯ ಜೋರು ಎಷ್ಟಿರುತ್ತದೆ ಎನ್ನುವುದನ್ನ ಅವಲಂಬಿಸುತ್ತದೆ. ಉಳಿದಂತೆ ಸ್ಥಳೀಯ ಸರಕಾರಗಳು ಮೂಲಭೂತ ವ್ಯವಸ್ಥೆಗೆ ಧಕ್ಕೆ ಬಾರದ ಹಾಗೆ ಆದೇಶ ಹೊರಡಿಸುವುದರಿಂದ, ತರಕಾರಿ, ಹಣ್ಣು, ಹಾಲು ಮಾರುವ ವ್ಯಾಪಾರಿಗಳಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ.

ಹಡಗುಗಳಿಂದ ಸಾಗಿಸಲ್ಪಡುವ ಪದಾರ್ಥಗಳ ಸಪ್ಲೈ ಚೈನ್ ಆತಂಕದಲ್ಲಿದೆಯೇ?

ಇದಕ್ಕೆ ಉತ್ತರವನ್ನ ಹೌದು ಎಂದು ಧೈರ್ಯವಾಗಿ ಹೇಳಬಹುದು. ಕೊರೋನ ವೈರಸ್ ಕಾರಣದಿಂದ ಮೊದಲ ಲಾಕ್ ಡೌನ್ ನಲ್ಲಿ ಸಾವಿರಾರು ಇಂತಹ ಹಡಗುಗಳಲ್ಲಿ ಕೆಲಸ ಮಾಡುವ ಜನ ಬಹಳಷ್ಟು ತೊಂದರೆಗೆ ಒಳಗಾಗಿದ್ದಾರೆ. ಕುಡಿಯಲು ನೀರು ಇಲ್ಲದೆ ಪರದಾಡಿದ್ದಾರೆ. ಆರೆಂಟು ತಿಂಗಳು ಹಡಗನ್ನ ಬಿಟ್ಟು ಇಳಿಯಲಾಗದ ಭೀಕರ ಪರಿಸ್ಥಿತಿಯನ್ನ ಎದುರಿಸಿದ್ದಾರೆ. ಹೀಗೆ ಲಾಕ್ ಡೌನ್ ಉಂಟಾದಾಗ ಅವರ ಹಡಗು ಯಾವ ದೇಶದಲಿತ್ತು ಅಲ್ಲಿಯೇ ಇರಲು ಸೂಚನೆಯನ್ನ ನೀಡಲಾಗಿತ್ತು. ಆ ನಂತರ ಅವರಿಗೆ ಯಾವ ದೇಶದ ಕಾನೂನು ಸಹ ಸಹಾಯಕ್ಕೆ ಬರಲಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು ಎನ್ನುವ ನಿಖರವಾದ ಕಾನೂನು ರಚನೆಯಾಗದೆ ಇರುವ ಕಾರಣ ನೋವು ಅನುಭವಿಸುವುದು ಇಲ್ಲಿ ಪುಡಿಗಾಸಿಗೆ ಕೆಲಸ ಮಾಡುವರು ಮಾತ್ರ. ಹೀಗಾಗಿ ಇಲ್ಲಿ ಕೆಲಸ ಮಾಡಲು ಜನ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ತೈಲೋತ್ಪನ್ನಗಳ ಕಥೆಯೇನು?

ಸಮುದ್ರದ ಮೂಲಕ ಸಾಗುವ ಒಟ್ಟು ತೈಲದ 7 ಪ್ರತಿಶತ ತೈಲೋತ್ಪನ್ನಗಳು ಈ ಮಾರ್ಗವಾಗಿ ಸರಬರಾಜಾಗುತ್ತದೆ. ಏಷ್ಯಾದಿಂದ ಯೂರೋಪಿನ ಕಡೆಗೆ ಹೊರಟ ಎಲ್ಲಾ ಹಡಗುಗಳು ನಿಧಾನವಾಗುತ್ತದೆ. ಹೀಗಾಗಿ ತೈಲ ಸರಬರಾಜು ಯೂರೋಪಿಗೆ ಕುಂಠಿತವಾಗುತ್ತದೆ. ಪ್ಯಾಂಡೆಮಿಕ್ ಕಾರಣ ತೈಲದ ಮೇಲಿನ ಬೇಡಿಕೆ ಮೊದಲಿನಷ್ಟು ಇಲ್ಲದ ಕಾರಣ ಈ ವಲಯದಲ್ಲಿ ಅಂತಹ ಆಹಾಕಾರ ಉಂಟಾಗುವ ಸಾಧ್ಯತೆ ಕಡಿಮೆ. ಆದರೆ ಅತಿ ಹೆಚ್ಚು ವಿಳಂಬವಾದರೆ ತೈಲ ಬೆಲೆ ಯೂರೋಪಿನಲ್ಲಿ ಮತ್ತಷ್ಟು ಏರುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.

ಭಾರತದ ಆಂತರಿಕ ಸಪ್ಲೈ ಚೈನ್ ಏನಾಗಬಹದು?

ಆರ್ಬಿಐ ಹೇಳುವ ಪ್ರಕಾರ ಭಾರತ ಆರ್ಥಿಕವಾಗಿ ಈ ವರ್ಷ 11 ಪ್ರತಿಶತ ಬೆಳವಣಿಗೆಯನ್ನ ಕಾಣುತ್ತದೆ. ಆದರೆ ಪರಿಸ್ಥಿತಿ ಬೇರೆ ರೀತಿಯಿದೆ. ಮಹಾರಾಷ್ಟ್ರ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ಬಹಳ ಹೆಚ್ಚಾಗಿದೆ. ಕೇಂದ್ರ ಸರಕಾರ ಲಾಕ್ ಡೌನ್ ಅಧಿಕಾರವನ್ನ ಆಯಾ ರಾಜ್ಯಗಳ ಅಧೀನಕ್ಕೆ ಬಿಟ್ಟು ಕೈ ತೊಳೆದುಕೊಂಡಿದೆ. ನಿಮಗೆ ಗೊತ್ತಿರಲಿ ಕೇವಲ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಜಿಡಿಪಿ ಭಾರತದ ಜಿಡಿಪಿಯ 22 ಪ್ರತಿಶತಕ್ಕೂ ಹೆಚ್ಚಿದೆ. ಈ ರಾಜ್ಯಗಳಿಂದ ದೇಶದ ಬೇರೆ ರಾಜ್ಯಗಳಿಗೆ ಸರಬರಾಜಾಗುವ ಪದಾರ್ಥಗಳಲ್ಲಿ ವ್ಯತ್ಯಯ ಉಂಟಾದರೆ ಪೂರ್ಣ ವ್ಯವಸ್ಥೆ ಮತ್ತೆ ಕುಸಿದು ಬೀಳುತ್ತದೆ. ಕಳೆದ 6 ರಿಂದ 8 ತಿಂಗಳಲ್ಲಿ ಸುಧಾರಿಸಿಕೊಂಡಿದ್ದ ಆರ್ಥಿಕತೆ ಮತ್ತೆ ಹಳ್ಳ ಹಿಡಿಯುತ್ತದೆ. ಇದೊಂದು ಸರಪಳಿ ಪರಿಣಾಮವನ್ನ ಉಂಟುಮಾಡುತ್ತದೆ. ಇಂದಿನ ದಿನದಲ್ಲಿ ಬದುಕೆಂದರೆ ಕೇವಲ ಊಟ, ಬಟ್ಟೆ ಮತ್ತು ನಿದ್ದೆ ಅಲ್ಲವೇ ಅಲ್ಲ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಮತ್ತೊಂದು ಆರ್ಥಿಕ ಹೊಡೆತಕ್ಕೆ ಬಲಿಯಾಗುವವರ ಸಂಖ್ಯೆ ದೊಡ್ಡದು. ಕೊರೋನಾಘಾತದಿಂದ ಜನರಿಗೆ ಹೆಚ್ಚು ನೋವಾಗುತ್ತದೆಯೋ ಇಲ್ಲವೋ ತಿಳಿಯದು ಆದರೆ ಅದರ ಈ ಬಾರಿಯ ಆರ್ಥಿಕ ಹೊಡೆತ ಬಹಳಷ್ಟು ಬಲಿಯನ್ನ ಬೇಡುತ್ತದೆ.

ನಾವು ಸಾಗುತ್ತಿರುವ ದಾರಿ ಸರಿಯಿದೆಯೇ?

ಅಭಿವೃದ್ಧಿ ಎನ್ನುವ ಪದಕ್ಕೆ ನಾವು ಇಂದು ಕೊಡುತ್ತಿರುವ ವ್ಯಾಖ್ಯಾನ ಅಥವಾ ಡೆಫಿನಿಶನ್ ತಪ್ಪಿದೆ. ಎಲ್ಲದಕ್ಕೂ ಜಿಡಿಪಿಯನ್ನ ಮೂಲವನ್ನಾಗಿಸಿ ಅಳೆಯುವ ರೀತಿ ಸರಿಯಿಲ್ಲ. ಭಾರತದಂತಹ ದೇಶದಲ್ಲಿ ಜಿಡಿಪಿಯನ್ನ ನಿಖರವಾಗಿ ಅಳೆಯಲು ಸಾಧ್ಯವಿಲ್ಲ. ಹೇಗಾದರೂ ಮಾಡಿ ಜಿಡಿಪಿಯನ್ನ ಹೆಚ್ಚಿಸಬೇಕು ಎನ್ನುವ ಕಾರಣಕ್ಕೆ ಹೆಚ್ಚೆಚ್ಚು ಡಿಜಿಟಲೈಸೇಶನ್ ಮಾಡಲಾಗುತ್ತಿದೆ. ಬ್ಯಾಂಕುಗಳು ದಳ್ಳಾಳಿಗಳಿಗಿಂತ ಹೆಚ್ಚಾಗಿ ಇದರ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳ ಗೋಳನ್ನ ಕೇಳುವರಿಲ್ಲ. ನಮ್ಮದಲ್ಲದ ಅಳತೆಗೋಲನ್ನ ಮಾಪನವನ್ನಾಗಿ ಬಳಸುವುದರ ಅರ್ಥವಾದರೂ ಏನು?

ಕೊನೆ ಮಾತು: ಎರಡನೇ ಅಲೆಯ ನಂತರ ಮೂರನೆಯ ಅಲೆ ಕೂಡ ಬರುತ್ತದೆ. ಇಂತಹ ಒಂದು ರೀತಿಯನ್ನ ನಾವೀಗಾಗಲೇ ನೋಡುತ್ತಿದ್ದೇವೆ. ಯೂರೋಪ್ ಎರಡನೆಯ ಅಲೆಯ ನಂತರ ಮೂರಕ್ಕೆ ಹೋಗಿದೆ. ಇದು ಇದೆ ರೀತಿ ಆಗುತ್ತದೆ ಎನ್ನುವುದು ತಿಳಿದಿದ್ದೂ, ಮೊದಲನೆಯ ಅಲೆಯ ನಂತರ ದೊಡ್ಡ ದೊಡ್ಡ ರಾಜಕೀಯ ರ್ಯಾಲಿಗಳನ್ನ ಏರ್ಪಡಿಸಿದ್ದು, ಮತ್ತೆ ಹವಾನಿಯಂತ್ರಿತ ಸೇವೆಗಳಿಗೆ ಅನುಮತಿ ನೀಡಿದ್ದು. ಕೊರೋನ ಇರಲೇ ಇಲ್ಲ ಎನ್ನುವಂತೆ ಜನತೆಯನ್ನ ಮತ್ತೆ ಜೀವನ ನಡೆಸಲು ಬಿಟ್ಟದ್ದು ಸರಕಾರ ಮಾಡಿದ ದೊಡ್ಡ ತಪ್ಪುಗಳು. ಜನ ಸಾಮಾನ್ಯನ್ನ ಅವನ ಇಚ್ಚೆಗೆ ಬಿಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಇಂದು ಭಾರತದಲ್ಲಿ ಆಗುತ್ತಿರುವ ಘಟನೆಗಳು ಸಾಕ್ಷಿಯಾಗಿವೆ. ಜನ ಸಾಮಾನ್ಯನಿಗೆ ಸದಾ ಒಂದಲ್ಲೊಂದು ರೀತಿಯ ಆದೇಶಗಳನ್ನ ನೀಡುತ್ತಿರಬೇಕು. ನೀಡಿದ ಆದೇಶ ಪಾಲನೆಯಾಗುತ್ತಿದೆಯೇ ಎನ್ನುವುದನ್ನ ಕೂಡ ಸರಕಾರ ಗಮನಿಸಬೇಕು. ರಾತ್ರಿ ಕರ್ಪ್ಯೂ ಮೊದಲೇ ನೆಲಕಚ್ಚಿ ನಿಂತಿರುವ ಹೋಟೆಲ್ ಉದ್ಯಮಕ್ಕೆ ಮತ್ತೊಂದು ಪೆಟ್ಟು ನೀಡಲಿದೆ. ವಾರಾಂತ್ಯದ ಲಾಕ್ ಡೌನ್ ಬಹಳ ಕಾಲ ಮುಂದುವರೆದರೆ ಹೋಟೆಲ್ ಉದ್ಯಮವನ್ನ ಸಂಪೂರ್ಣವಾಗಿ ನುಂಗಿ ನೀರು ಕುಡಿಯಲಿದೆ. ಇದರ ಜೊತೆಗೆ ಎಲ್ಲಾ ವಲಯಗಳೂ ಕೂಡ ನಿಧಾನವಾಗಿ ಇದರಿಂದ ತೊಂದರೆಗೀಡಾಗುತ್ತದೆ. ಮೂರನೇ ಅಲೆ ಮತ್ತೆ ನಮ್ಮನ್ನ ಕಾಡದಂತೆ ಎಚ್ಚರವನ್ನ ಸರಕಾರ ಮತ್ತು ನಾಗರೀಕರು ಜೊತೆಯಾಗಿ ಕಾರ್ಯ ನಿರ್ವಹಿಸಬೇಕಿದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

 

Stay up to date on all the latest ಅಂಕಣಗಳು news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp