ಮ್ಯೂಚುಯಲ್ ಫಂಡ್ಗಳ ಮೇಲಿನ ಹೂಡಿಕೆ ಅದೆಷ್ಟು ಸರಿ?

ಹಣಕ್ಲಾಸು-257-ರಂಗಸ್ವಾಮಿ ಮೂಕನಹಳ್ಳಿ 
ಮ್ಯೂಚುಯಲ್ ಫಂಡ್ಗಳ ಮೇಲಿನ ಹೂಡಿಕೆ ಅದೆಷ್ಟು ಸರಿ?
ಮ್ಯೂಚುಯಲ್ ಫಂಡ್ಗಳ ಮೇಲಿನ ಹೂಡಿಕೆ ಅದೆಷ್ಟು ಸರಿ?

ಇತ್ತೀಚಿಗೆ ಒಂದು ಜಾಹಿರಾತು ನೋಡಿದೆ. ಅದರಲ್ಲಿ ಒಬ್ಬಾತ ತನ್ನ ಸ್ನೇಹಿತನನ್ನ "ನನ್ನ ಬಳಿ ಹಣವಿದೆ ಎಲ್ಲಿ ಹೂಡಿಕೆ ಮಾಡಲಿ"? ಎಂದು ಕೇಳುತ್ತಾನೆ. ಆತನ ಮೇಧಾವಿ ಸ್ನೇಹಿತ ಮ್ಯೂಚುಯಲ್ ಫಂಡ್ ನಲ್ಲಿ ಮಾಡು ಎನ್ನುತ್ತಾನೆ. "ಮ್ಯೂಚುಯಲ್ ಫಂಡ್ ನಲ್ಲಾ"? ಎನ್ನುವ ಪ್ರಶ್ನೆ ಎತ್ತುತ್ತಾನೆ ಮೊದಲಿನವನು.  "ಹ್ಹಾ..., ಮ್ಯೂಚುಯಲ್ ಫಂಡ್ನಲ್ಲೆ, ಅದು ಬಿಟ್ಟು ಇನ್ನೆಲ್ಲಿ..."? ಎನ್ನುತ್ತಾನೆ ಮೇಧಾವಿ ಸ್ನೇಹಿತ. ಪ್ರಶ್ನೆ ಕೇಳಿದವನು' "ಮ್ಯೂಚುಯಲ್ ಫಂಡ್ ಸಹಿ ಹೈ ಯಾರ್"' ಎನ್ನುತ್ತಾನೆ.  ಜಾಹಿರಾತು ಮುಗಿಯುತ್ತೆ. ಮ್ಯೂಚುಯಲ್ ಫಂಡ್ ಸಹಿ ಹೈ ಎನ್ನುವ ಹೇಳಿಕೆಯೊಂದಿಗೆ. ಇಲ್ಲಿ ಜನರಿಗೆ ಯಾವ ಮಟ್ಟದಲ್ಲಿ ದಾರಿ ತಪ್ಪಿಸುತ್ತಾರೆ ನೋಡಿ. ಯಾರೋ ಒಬ್ಬ ವ್ಯಕ್ತಿ ತನ್ನ ಕಷ್ಟದಿಂದ ಗಳಿಸಿ ಉಳಿಸಿದ ಹಣವನ್ನ ತನ್ನ ಸ್ನೇಹಿತನೊಬ್ಬ ಹೇಳಿದ ಅನ್ನುವ ಮಾತ್ರಕ್ಕೆ 'ಸಹಿ ಹೈ' ಅನ್ನುತ್ತಾನೆ. ನೀವು ಕೂಡ ಹಾಗೆಯೇ ಅನ್ನಿ ಅನ್ನುವ ಪ್ರಲೋಭನೆ. ಇಲ್ಲಿ ಗ್ರಾಹಕನಿಗೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ನೀಡಿ ಆತನನ್ನ ವಿವೇಚನೆಗೆ ಹಚ್ಚುವ ಬದಲು ಯೋಚಿಸಬೇಡ ಎಲ್ಲರೂ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಅಂದರೆ 'ಸಹಿ ಹಿ ಹೈ' ಎನ್ನುವ ತೀರ್ಮಾನಕ್ಕೆ ದೂಡುತ್ತಾರೆ. ಇನ್ನು ತೆಂಡೂಲ್ಕರ್ ಕೂಡ ಈ ಮ್ಯೂಚುಯಲ್ ಫಂಡ್ ನಲ್ಲಿ ನಿಮ್ಮ ಹಣವನ್ನ ಹೂಡಿಕೆ ಮಾಡಿ ಎನ್ನುವ ಏಜೆಂಟ್. ರಿಸ್ಕ್ ಎಲ್ಲಿಲ್ಲ? ಅಂತ ಕೇಳುತ್ತ ನಯವಾಗಿ, ರಿಸ್ಕ್ ಎಲ್ಲ ಕಡೆ ಇದ್ದೇ ಇರುತ್ತೆ, ಸೊ ಇಲ್ಲಿ ಹೂಡಿಕೆ ಮಾಡಿ ಅನ್ನುತ್ತಾರೆ. ಇದರ ಬಗ್ಗೆ ಒಂದಷ್ಟು ಜ್ಞಾನ ಹೆಚ್ಚಿಸಿಕೊಂಡು ಹೂಡಿಕೆ ಮಾಡಿ ಎನ್ನುವ ಮಾತು ಮಾತ್ರ ಅವರ ಬಾಯಿಂದ ಬರುವುದಿಲ್ಲ! ಅವರಿಗೆ ಬೇಕಿರುವುದು ಪ್ರಶ್ನೆ ಕೇಳದೆ ಅವರು ಹೇಳಿದರಲ್ಲಿ ಹೂಡಿಕೆ ಮಾಡುವ ಬಕರಾಗಳು.

ಹೀಗೆ ತೆಂಡೂಲ್ಕರ್ ನಂತೆ ಸೆಲೆಬ್ರೆಟಿಗಳನ್ನ ಮುಂದೆ ಬಿಟ್ಟು ಇಂತಹ ಬಲೆ ಹೆಣೆದು ಕುಳಿತ ಕಂಪನಿಗಳೆಷ್ಟು ಗೊತ್ತೇ?? ಏಳು ಸಾವಿರ ಮ್ಯೂಚುಯಲ್ ಫಂಡ್ ಗಳಿವೆ ಎನ್ನುವ ವಿಷಯ ನಿಮಗೆ ಗೊತ್ತೇ?? ಪ್ರತಿ ಮ್ಯೂಚುಯಲ್ ಫಂಡ್ ಗಳ ಗುರಿ ಉದ್ದೇಶ ಬೇರೆಬೇರೆ. ಕೆಲವು ಬಾಂಡ್ ನಲ್ಲಿ ಹೂಡಿಕೆ ಮಾಡಿದರೆ ಕೆಲವು ಈಕ್ವಿಟಿ ಯಲ್ಲಿ, ಕೆಲವು ಬ್ಯಾಲೆನ್ಸ್ಡ್, ಕೆಲವು ತೀರಾ ಅಗ್ಗ್ರೆಸಿವ್. ಹೀಗೆ ಇವುಗಳ ಗುಣವನ್ನ ಪಟ್ಟಿ ಮಾಡುತ್ತಾ ಹೋಗಬಹುದು. ಇವುಗಳ ಆಳ-ಅಗಲ ತಿಳಿಯದೆ ಸರಿ ಅಂತ ಮಾತ್ರ ಅನ್ನಬೇಡಿ. ನಿಮ್ಮ ಹಣ ನಿಮ್ಮ ಉಳಿಕೆ ಎಷ್ಟು ಕಷ್ಟದಿಂದ ಜೋಡಿಸಿಟ್ಟಿದ್ದೀರಿ ಎನ್ನುವುದು ನಿಮಗಲ್ಲದೆ ಇನ್ನ್ಯಾರಿಗೆ ಗೊತ್ತು?

ಹಣಕಾಸು ವರ್ಷ 2020-21ರಲ್ಲಿ 81 ಲಕ್ಷ ಜನ ಹೊಸದಾಗಿ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ಅಂಕಿ-ಅಂಶ ತೀರಾ ಇತ್ತೀಚಿಗೆ ಬಿಡುಗಡೆಯಾಗಿದೆ. ಇದರೊಂದಿಗೆ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದವರ ಸಂಖ್ಯೆ ಹತ್ತಿರ ಹತ್ತಿರ 10 ಕೋಟಿ ಎನ್ನುವ ಅಂಶವನ್ನ ಕೂಡ ಈ ಅಂಕಿ-ಅಂಶ ತಿಳಿಸುತ್ತಿದೆ. 2021-2022ರಲ್ಲಿ ಕೂಡ ಇಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಲಿದೆ ಎನ್ನುವ ಆಶಾಭಾವ ಇಲ್ಲಿ ಕೇಳಿ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಹೂಡಿಕೆದಾರರು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಎನ್ನುವ ಮಾತನ್ನ ಆಡುತ್ತಿದ್ದಾರೆ.

ದೀರ್ಘ ಕಾಲದ ಹೂಡಿಕೆಯಲ್ಲಿ ಬಹಳಷ್ಟು ಲಾಭವಾಗುತ್ತದೆ. ಕಡಿಮೆ ಸಮಯಾವಧಿಯಲ್ಲಿ ಮಾರುಕಟ್ಟೆಯ ಏರಿಳಿತಗಳ ಮೇಲೆ ಲಾಭ ಅಥವಾ ನಷ್ಟ ನಿರ್ಧಾರವಾಗುತ್ತದೆ ಎನ್ನುವ ಸರಳ ಮಾತುಗಳನ್ನ ಕೂಡ ಫಂಡ್ ಮ್ಯಾನೇಜರ್ ಹೂಡಿಕೆ ಸಮಯದಲ್ಲಿ ಹೇಳುತ್ತಾರೆ. ಇದನ್ನ ಬಿಟ್ಟು ಹೆಚ್ಚಿನ ಜ್ಞಾನವನ್ನ ಹೂಡಿಕೆದಾರನಿಗೆ ಅವರು ನೀಡುವುದಿಲ್ಲ. ನೆನಪಿರಲಿ ಹೆಚ್ಚು ವಿಷಯ ಜ್ಞಾನ ಹೊಂದಿದ ಹೂಡಿಕೆದಾರನನ್ನ ಅವರು ಸುಲಭವಾಗಿ ಬೇಕಾದ ಕಡೆ ಹಣವನ್ನ ತೊಡಗಿಸುವಂತೆ ಉತ್ತೇಜಿಸಲು ಆಗುವುದಿಲ್ಲ. ಇಷ್ಟೆಲ್ಲ ಹೇಳುವುದರ ಉದ್ದೇಶ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಬೇಡ ಎಂದು ಹೇಳುವುದಕ್ಕಲ್ಲ. ಹೂಡಿಕೆಗೆ ಮುನ್ನ ಒಂದಷ್ಟು ಜ್ಞಾನ ನಿಮ್ಮದಾಗಿರಲಿ ಎನ್ನುವುದು ಉದ್ದೇಶ.

ನೆನಪಿರಲಿ ಮುಂಬರುವ ವರ್ಷಗಳಲ್ಲಿ ಇಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುತ್ತದೆ. ಬ್ಯಾಂಕುಗಳಲ್ಲಿ ನೀಡುತ್ತಿರುವ ಬಡ್ಡಿಯ ದರ ಕುಗ್ಗುತ್ತಾ ಹೋದಂತೆ ಜನ ಸಾಮಾನ್ಯರು ಕೂಡ ಹೆಚ್ಚಿನ ಮಾಹಿತಿಯನ್ನ ಪಡೆದುಕೊಂಡು ಇಲ್ಲಿ ಹೂಡಿಕೆ ಮಾಡದೆ ಬೇರೆ ದಾರಿಯಿಲ್ಲ. ನನಗೆ ತಿಳಿಯುವುದಿಲ್ಲ ಎಂದೂ ಅಥವಾ ಒಬ್ಬಿಬ್ಬರು ಏಜೆಂಟರನ್ನ ನಂಬಿ ಕೂರುವುದು ಕೂಡ ತಪ್ಪು. ಕಲಿಕೆಯ ಕಡೆಗೆ ಇರಲಿ ನಿಮ್ಮ ಒಲವು.

ಹೀಗೆ  ಹಣವನ್ನ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮೊದಲು ಕೆಳಗೆ ಪಟ್ಟಿ ಮಾಡಿರುವ ಬೇಸಿಕ್ ಪ್ರಶ್ನೆಗಳನ್ನ ನಿಮ್ಮನ್ನ ನೀವೇ ಕೇಳಿಕೊಳ್ಳಿ. ನಿಮ್ಮ ಫಂಡ್ ಮ್ಯಾನೇಜರ್ನನ್ನೂ ಕೇಳಿ. ಒಪ್ಪಿಗೆಯಾದರೆ ಮಾತ್ರ ಹೂಡಿಕೆ ಮಾಡಿ. ಇಲ್ಲದಿದ್ದರೆ ಮ್ಯೂಚುಯಲ್ ಫಂಡ್ ಮೋಸದ ಫಂಡ್ ಆದೀತು ಎಚ್ಚರ.

  1. ಮೇಲಿನ ಸಾಲಿನಲ್ಲಿ ಹೇಳಿದಂತೆ ಏಳು ಸಾವಿರ ರೀತಿಯ ಮ್ಯೂಚುಯಲ್ ಫಂಡ್ ಗಳಿವೆ. ಯಾವುದು ಎಲ್ಲಿ ಹೂಡಿಕೆ ಮಾಡುತ್ತದೆ. ಎನ್ನುವ ಪೂರ್ಣ ಅರಿವು ನಿಮ್ಮದಾಗಿರಬೇಕು. ಹೂಡಿಕೆಯನ್ನ ವಿವಿಧ ಕ್ಷೇತ್ರಗಳಲ್ಲಿ ಹಂಚಿದ್ದರೆ ಅದರ ಅನುಪಾತ ತಿಳಿದುಕೊಳ್ಳಿ. ಎಲ್ಲಕ್ಕೂ ಮೊದಲು ನಿಮಗೇನು ಬೇಕು? ನಿಮ್ಮ ಗುರಿ ಏನು? ಎನ್ನುವ ಸ್ಪಷ್ಟ ಅರಿವಿನೊಂದಿಗೆ ಹೂಡಿಕೆಗೆ ಮುಂದಾಗಿ  ಹಣವಿದೆ ಎಲ್ಲಿ ಹೂಡಿಕೆ ಮಾಡುವುದು ಎನ್ನುವ ಪ್ರಶ್ನೆಯೊಂದಿಗೆ ಹೋಗುವುದು ಬೇಡ. ಸ್ವಲ್ಪ ಹೋಂ ವರ್ಕ್ ಮಾಡಿಕೊಂಡು ಹೋದರೆ ಹೆಚ್ಚಿನ ಲಾಭ ನಿಮ್ಮದಾಗುತ್ತದೆ. ಹೂಡಿಕೆಯ ಅವಧಿ ಹೆಚ್ಚಿದಷ್ಟೂ ಲಾಭ ಹೆಚ್ಚು.
  2. ಮ್ಯೂಚುಯಲ್ ಫಂಡ್ ನ ಹೂಡಿಕೆಯಲ್ಲಿ ಗಳಿಸುವ ಆದಾಯವೆಲ್ಲ ಪೂರ್ಣ ನಿಮ್ಮದೇ ಅಲ್ಲ. ನಿಮ್ಮ ಹಣದಿಂದ ಗಳಿಸಿದ ಲಾಭದ ಒಂದಷ್ಟು ಅಂಶ ಫಂಡ್ ಮ್ಯಾನೇಜರ್ ಅಥವಾ ಪೋರ್ಟ್ಫೋಲಿಯೋ ಮ್ಯಾನೇಜರ್ ಫೀಸ್ ಅಂತಲೋ ಕಮಿಷನ್ ಹೆಸರಲ್ಲೂ ನಿಮ್ಮಿಂದ ವಸೂಲಿ ಮಾಡುತ್ತಾರೆ. ಹೂಡಿಕೆಗೆ ಮೊದಲೇ ಇಂತಹ ಖರ್ಚು ಎಷ್ಟು ಎನ್ನುವ ಬಗ್ಗೆ ಮಾಹಿತಿ ಪಡೆಯಿರಿ. ಹಿಡನ್ ಚಾರ್ಜಸ್ ಇದೆಯೇ? ಇಷ್ಟು ಖರ್ಚು ಮೀರಿ ಹೆಚ್ಚು ನೀಡಲು ನಾನು ಸಿದ್ಧನಿಲ್ಲ ಎನ್ನುವ ನಿಲುವನ್ನ ಫಂಡ್ ಮ್ಯಾನೇಜರ್ ಗೆ ಹೇಳಿ.
  3. ಹಲವಾರು ಕಂಪನಿಗಳು ಮ್ಯೂಚುಯಲ್ ಫಂಡ್ ಗಳ ವಹಿವಾಟು ಅವುಗಳ ಹಣಕಾಸಿನ ಆರೋಗ್ಯದ ಬಗ್ಗೆ ಮಾಹಿತಿಯನ್ನ ನೀಡುತ್ತವೆ. ನಿಮ್ಮ ಗುರಿ ಲಾಂಗ್ ಟರ್ಮ್ ಅಥವಾ ಶಾರ್ಟ್ ಟರ್ಮ್ ಎನ್ನುವುದನ್ನ ನಿರ್ಧರಿಸಿ ಇಂತಹ ಮಾಹಿತಿಯ ಸಹಾಯದಿಂದ ನಿಮಗೆ ಒಪ್ಪುವ ಉತ್ತಮ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಿಕೊಳ್ಳಬಹುದು.
  4. ಆಕ್ಟಿವ್ ಮತ್ತು ಪಾಸಿವ್ ಫಂಡ್ ಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ. ಆಕ್ಟಿವ್ ಫಂಡ್ ವಿಶಾಲವಾದದ್ದು. ಪಾಸಿವ್ ಆಯ್ದ ಕೆಲವು ಕಂಪನಿಗಳ ಸೆಕ್ಯುರಿಟೀಸ್ ನಲ್ಲಿ ಮಾತ್ರ ಹೂಡಿಕೆ ಮಾಡುವ ಫಂಡ್. ಕೆಲವರು ಆಕ್ಟಿವ್ ಫಂಡ್ ಉತ್ತಮ ಎಂದು ಹಲವು ಫಲಿತಾಂಶದ ಮಾಹಿತಿ ನಿಮ್ಮ ಮುಂದೆ ಇಟ್ಟರೆ. ಇನ್ನು ಹಲವು ಫಂಡ್ ಮ್ಯಾನೇಜರ್ ಗಳು ಪಾಸಿವ್ ಫಂಡ್ ಉತ್ತಮ ಎನ್ನುತ್ತಾರೆ. ಯಾವುದು ಉತ್ತಮ ಎನ್ನುವುದು ಮಾತ್ರ ನಮ್ಮ ವಿವೇಚನೆಗೆ ಬಿಟ್ಟದ್ದು. ಅದಕ್ಕೆ ಹೇಳಿದ್ದು ನಿಮ್ಮ ಫಂಡ್ ಮ್ಯಾನೇಜ್ ಮಾಡಬೇಕಿರುವುದು ನೀವು ಎಂದು. ಮ್ಯಾನೇಜರ್ ಗೆ ಬಿಟ್ಟರೆ ಆತನ ಇಷ್ಟದಂತೆ ನಿಮ್ಮ ಹಣ ಹೂಡಿಕೆಯಾಗುತ್ತದೆ. ಸೋಲು ಅಥವಾ ಗೆಲುವು ನಿರ್ಧಾರ ಮಾತ್ರ ನಿಮ್ಮದಾಗಿರಲಿ.
  5. ಹೂಡಿಕೆ ಮಾಡಿದ ಹಣವನ್ನ ಅದರ ಪೂರ್ಣ ಶಕ್ತಿಗೆ ತಕ್ಕಂತೆ ದುಡಿಸಬೇಕು. ಹೇಗೆ? ನಾನೇನು ಹೂಡಿಕೆ ತಜ್ಞನಲ್ಲ ಎನ್ನುವ ಪ್ರಶ್ನೆ ನಿಮ್ಮದು. ಹೂಡಿಕೆ ಮಾಡಲು ತಜ್ಞರೇ ಆಗಬೇಕೆಂದಿಲ್ಲ ನಿಮ್ಮ ಹಣ ಪೋಲಾದರೆ ಅಥವಾ ಮರಳಿ ಬರದೇ ಹೋದರೆ ಎನ್ನುವ ಸಣ್ಣ ಭಯ ನಿಮ್ಮಲಿದ್ದರೆ ಸಾಕು. ಆ ಭಯ ನಿಮ್ಮನ್ನ ವಿವಿಧ ಹೂಡಿಕೆಯ ಬೆರಕೆಯನ್ನ ತಿಳಿಯಲು ಪ್ರೇರೇಪಿಸುತ್ತೆ ಇಷ್ಟಾದರೆ ಸಾಕು ಮಿಕ್ಕ ಮಾಹಿತಿ ತಿಳಿಯಲು ಹಲವು ಮಾರ್ಗಗಳಿವೆ.
  6. ಹಲವಾರು ಮ್ಯೂಚುಯಲ್ ಫಂಡ್ ಗಳು ರಿಟೈರ್ಮೆಂಟ್ ಆದ ನಂತರ ನಿಮ್ಮನ್ನ ಒಂದು ರೆಸಾರ್ಟ್ ನಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿರುವಂತೆ ತೂರಿಸಿ ಇಂದು ನಿಮ್ಮ ಹಣವನ್ನ ಹೂಡಿಕೆ ಮಾಡಲು ಪ್ರೇರೇಪಿಸುತ್ತವೆ. ಇಂತಹ ರಿಟೈರ್ಮೆಂಟ್ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಹೆಚ್ಚು ಗಮನವಿರಲಿ. ವೇಗದಿಂದ ಬದಲಾಗುತ್ತಿರುವ ಜಾಗತಿಕ ಹಣಕಾಸು ನೀತಿ ನಿಯಮಗಳು ನಿಮ್ಮೆಲ್ಲಾ ರಿಟೈರ್ಮೆಂಟ್ ಪ್ಲಾನ್ಗಳನ್ನ ರಿಟೈರ್ ಮಾಡಿ ಬಿಡುತ್ತವೆ. ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ನಿಮ್ಮ ಪೋರ್ಟ್ಫೋಲಿಯೋ ಅವಲೋಕನ ಅತಿ ಅವಶ್ಯಕ.

ಕೊನೆ ಮಾತು: ಇದೆಲ್ಲಾ ಸರಿ, ನನಗೆ ಇದರಲ್ಲಿ ಹೆಚ್ಚಿನ ಇಂಟರೆಸ್ಟ್ ಇಲ್ಲ. ಓದಿದರೂ ಹೆಚ್ಚೇನೂ ಅರ್ಥವಾಗುವುದಿಲ್ಲ. ಒಂದೆರೆಡು ಸಾಲಿನಲ್ಲಿ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಸರಿಯೇ ತಪ್ಪೇ ತಿಳಿಸಿ ಬಿಡಿ ಎಂದು ಕೇಳುವರ ಸಂಖ್ಯೆ ಬಹಳ ಹೆಚ್ಚು. ಅಂತಹವರಿಗೆಲ್ಲ ಉತ್ತರ ನೇರ ಮತ್ತು ಸರಳ. ಟಿವಿ ಜಾಹಿರಾತು ನೋಡಿ 'ಸಹಿ ಹೈ' ಎಂದು ಹೂಡಿಕೆ ಮಾಡುವುದು ತಪ್ಪು. ನಿಮ್ಮ ಗುರಿ ನಿಮ್ಮ ಅವಶ್ಯಕತೆಗೆ ತಕ್ಕಂತೆ ರಿಸ್ಕ್ ಅನ್ನು ವಿಭಜಿಸಿ ಹೂಡಿಕೆ ಮಾಡಿದರೆ ಅದು ಸರಿ. ಹೂಡಿಕೆ ಮಾಡಿದ ಮೇಲೆ ಶಿವನ ಮೇಲೆ ಭಾರ ಹಾಕಿ ಕೂತರೆ ಅದು ಕೂಡ ತಪ್ಪು. ಮಾಡಿದ ಹೂಡಿಕೆಯನನ್ನ ಸದಾ ಹದ್ದಿನ ಕಣ್ಣಿಂದ ನೋಡುತ್ತಿರಬೇಕು ಮಾರುಕಟ್ಟೆ ಬದಲಾದ ಹಾಗೆ ನಮ್ಮ ಪೋರ್ಟ್ಫೋಲಿಯೋ ಬದಲಾಗುತ್ತಿರಬೇಕು. ಆಗ ಮಾತ್ರ ಧೈರ್ಯವಾಗಿ  'ಮ್ಯೂಚುಯಲ್ ಫಂಡ್ ಸಹಿ ಹೈ' ಅನ್ನಬಹುದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com