ಇ-ರುಪಿ: ಇದು ಯಾರಿಗಾಗಿ? ಇದನ್ನು ಬಳಸುವ ಉದ್ದೇಶ, ವಿಧಾನಗಳೇನು?

ಹಣಕ್ಲಾಸು-271-ರಂಗಸ್ವಾಮಿ ಮೂಕನಹಳ್ಳಿ
ಇ-ರುಪಿ (ಸಂಗ್ರಹ ಚಿತ್ರ)
ಇ-ರುಪಿ (ಸಂಗ್ರಹ ಚಿತ್ರ)

ತೀರಾ ಇತ್ತೀಚಿಗೆ ಕೇಂದ್ರ ಸರಕಾರ ಇ-ರುಪಿ ಎನ್ನುವ ಒಂದು ಹೊಸ ಪಾವತಿ ವಿಧಾನವನ್ನ ಪರಿಚಯಿಸಿದೆ. ಅಂದ ಮಾತ್ರಕ್ಕೆ ಇದನ್ನ ಭಾರತದ ಕ್ರಿಪ್ಟೋ ಕರೆನ್ಸಿ ಅಂದುಕೊಂಡರೆ ಅದು ತಪ್ಪಾಗುತ್ತದೆ. ಜೊತೆಗೆ ಇದು ನಮ್ಮ ಪೆಟಿಎಂ ಅಥವಾ ಗೂಗೆಲ್ ಪೇ, ಭೀಮ್ ಪೇ ರೀತಿಯಲ್ಲಿ ಕೂಡ ಕಾರ್ಯವನ್ನ ನಿರ್ವಹಿಸುವುದಿಲ್ಲ. ಬಹಳಷ್ಟು ಜನರಲ್ಲಿ ಈ ಗೊಂದಲವಿದೆ. 

ಇ-ವೋಚರ್ ಎಂದರೇನು?:

ಇದು ಕೇವಲ ಇ-ವೋಚರ್ ಆಗಿರಲಿದೆ. ಅಂದರೆ ಗಮನಿಸಿ ನೀವು ನಿಮ್ಮ ಪಕ್ಕದಲ್ಲಿರುವ ನಂದಿನಿ ಹಾಲಿನ ಕೇಂದ್ರದಲ್ಲಿ ಮುಂಚಿತವಾಗಿ ಹಣವನ್ನ ನೀಡಿ ಕೂಪನ್ ಖರೀದಿಸುತ್ತೀರಿ ಮತ್ತು ದಿನ ನಿತ್ಯ ನೀವು ಹಣಕ್ಕಾಗಿ ಅಥವಾ ಚಿಲ್ಲರೆಗಾಗಿ ತಡಕಾಡುವ ಸಂದರ್ಭ ಬರುವುದಿಲ್ಲ. ಆ ನಿಗದಿತ ಕೂಪನ್ ನೀಡಿದರೆ ಸಾಕು ಅಂಗಡಿಯಲ್ಲಿ ಯಾರೇ ಇರಲಿ, ನಿಗದಿತ ಹಾಲನ್ನ ನೀಡುತ್ತಾರೆ ಅಲ್ಲವೇ? ಇದು ಕೂಡ ಹಾಲಿನ ಕೂಪನ್ ನಂತೆ ಒಂದು ಕೂಪನ್ ಅಥವಾ ವೋಚರ್ ಎನ್ನಬಹುದು.

ಇದನ್ನ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ. ಕೇಂದ್ರ ಸರಕಾರ ಬಹಳಷ್ಟು ಯೋಜನೆಗಳನ್ನ ಸಮಾಜದ ಅತ್ಯಂತ ಕೆಳವರ್ಗದ ಜನರಿಗೆ ಎಂದು ಜಾರಿಗೆ ತಂದಿದೆ. ಆದರೆ ಬಹಳಷ್ಟು ಬಾರಿ ಹೀಗೆ ಅವರಿಗಾಗಿ ಕಳುಹಿಸಿದ ಹಣ ಅವರನ್ನ ತಲುಪದೇ ಇರುವ ಸಾಧ್ಯತೆಗಳು ಕೂಡ ಬಹಳ ಜಾಸ್ತಿ. ಈ ಕಾರಣದಿಂದ ಬಹಳ ಹಿಂದಿನಿಂದ ನಮ್ಮ ಸಮಾಜದಲ್ಲಿ ಇರುವ ವೋಚರ್ ಅಥವಾ ಕೂಪನ್ ವ್ಯವಸ್ಥೆಯನ್ನ ಸರಕಾರ ತನ್ನದಾಗಿಸಿ ಕೊಂಡಿದೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನ ಇ-ವೋಚರ್ ಅಂದರೆ ಡಿಜಿಟಲ್ ರೂಪದಲ್ಲಿ ಹೊರ ತಂದಿದೆ.

ಇ-ವೋಚರ್ ಹೇಗೆ ಕಾರ್ಯನಿರ್ವಹಿಸಲಿದೆ?

ಸರಕಾರ ನಿಗದಿತ ಮೊತ್ತದ ಕೂಪನ್ ಅಥವಾ ವೋಚರ್ ಮುದ್ರಣ ಮಾಡುತ್ತದೆ, ಮತ್ತು ಅದನ್ನ ನಿಖರ ಫಲಾನುಭವಿಗಳಿಗೆ ಮೊಬೈಲ್ ಮೂಲಕ ಕಳುಹಿಸಿ ಕೊಡುತ್ತದೆ. ಹೀಗೆ ವೋಚರ್ ಪಡೆದ ಫಲಾನುಭವಿ ಅದನ್ನ ಯಾವ ಕಾರ್ಯಕ್ಕೆ ಪಡೆದಿದ್ದಾರೆ ಅದಕ್ಕೆ ಮಾತ್ರ ಅದನ್ನ ಬಳಸಬಹುದು. ಹೀಗೆ ನಿಗದಿತ ಸೇವೆಯನ್ನ ಪಡೆದ ನಂತರ ಹಣವನ್ನ ನೀಡುವ ಬದಲು ಸರಕಾರ ನೀಡಿರುವ ಇ-ವೋಚರ್ ನೀಡುವುದರ ಮೂಲಕ ಶುಲ್ಕವನ್ನ ಸಂದಾಯ ಮಾಡಬಹುದು. ಇದರಲ್ಲಿ ಗಮನಿಸ ಬೇಕಾದ ಅಂಶವೆಂದರೆ, ಹೀಗೆ ಸೇವೆಯನ್ನ ಪಡೆದವರು ಹಣ ಸಿಗುತ್ತದೆಯೇ ಎನ್ನುವ ಖಾತ್ರಿ ಮಾಡಿಕೊಳ್ಳುವ ಅಥವಾ ಸಂಶಯ ಪಟ್ಟುಕೊಳ್ಳುವ ಪ್ರಮೇಯ ಬರುವುದಿಲ್ಲ, ಕಾರಣ ಇದೊಂದು ಮೊದಲೇ ಹಣವನ್ನ ತುಂಬಿದ ಸೇವೆಯಾಗಿದೆ. ಅಂದರೆ ಇದು ಪ್ರಿ ಪೇಯ್ಡ್ ಕೂಪನ್, ಹಾಲಿನ ಉದಾಹರಣೆಯನ್ನ ನೆನಪಿಸಿಕೊಳ್ಳಿ. ಸರಕಾರ ಮುಂಗಡವಾಗಿ ಹಣವನ್ನ ಕಟ್ಟಿರುತ್ತದೆ. ಹೀಗೆ ಸೇವೆ ಪಡೆದುಕೊಳ್ಳುವವರಿಗೆ ಇಂತಹ ಕೂಪನ್ ಅದನ್ನ ಪಡೆದವರ ಹೆಸರಿನಲ್ಲಿ ಇರುತ್ತದೆ. ಆಧಾರ್ ಅಥವಾ ಮೊಬೈಲ್ ಲಿಂಕ್ ಆಗಿರುತ್ತದೆ. ಹೀಗಾಗಿ ಇಂತಹ ಕೂಪನ್ ಗಳನ್ನ ಬೇರೆಯವರು ಇತರ ಕಾರ್ಯಗಳಿಗೆ ಬಳಸಲು ಬರುವುದಿಲ್ಲ. ಹಣದ ರೂಪದಲ್ಲಿದ್ದರೆ ಅದನ್ನ ಬೇರೆಯವರು ಬಳಸಿಕೊಳ್ಳುವ ಅವಕಾಶವಿತ್ತು. ಇದೀಗ ಹೀಗೆ ದುರಪಯೋಗ ಮಾಡಿಕೊಳ್ಳುವುದಕ್ಕೆ ಕೇಂದ್ರ ಸರಕಾರ ಕಡಿವಾಣ ಹಾಕಿದೆ.

ಈ ಹಿಂದೆ ಅಂದರೆ ಎರಡು ದಶಕಕ್ಕೂ ಹಿಂದಿನಿಂದಲೇ ನಾವು ಕಾರ್ಪೊರೇಟ್ ಸಂಸ್ಥೆಗಳು ಇಂತಹ ಕೂಪನ್ ಅಥವಾ ವೋಚರ್ ಗಳನ್ನ ನೀಡುವುದನ್ನ ಕಂಡಿದ್ದೇವೆ. ಟಿಕೆಟ್ ರೆಸ್ಟುರಾಂಟ್, ಸೊಡೆಕ್ಸೋ ಇತ್ಯಾದಿಗಳು ಇದಕ್ಕೆ ಉತ್ತಮ ಉದಾಹರಣೆ. ಅಂದರೆ ಈ ರೀತಿಯ ವ್ಯವಸ್ಥೆಯನ್ನ ಸರಕಾರ ಇದೀಗ ಅಳವಡಿಸಿಕೊಂಡಿರಿವುದರಿಂದ ತಂತ್ರಜ್ಞಾನದ ಹೆಚ್ಚಿನ ಅರಿವಿಲ್ಲದ ಸಾಮಾನ್ಯ ನಾಗರೀಕ ಕೂಡ ಇದನ್ನ ಬಳಸಿಕೊಳ್ಳಬಹುದು. ಜೊತೆಗೆ ಇದಕ್ಕಾಗಿ ಆತ/ಆಕೆ ಯಾವುದೇ ಆಪ್ ಅಥವಾ ಇನ್ನಿತರೇ ತಂತ್ರಾಂಶಗಳನ್ನ ತಮ್ಮ ಮೊಬೈಲ್ ನಲ್ಲಿ ಅಳವಡಿಸಕೊಳ್ಳುವ ಅವಶ್ಯಕತೆಯಿಲ್ಲ. ಮತ್ತು ಹೊಸದಾಗಿ ಇದಕ್ಕೆಂದು ಹೆಚ್ಚಿನ ಇಂಟರ್ನೆಟ್ ಅಥವಾ ಡೇಟಾ ಖರ್ಚು ಮಾಡಬೇಕಾಗಿಲ್ಲ. ಇದೊಂದು ಸಾಮಾನ್ಯ ಹಾಳೆಯಂತಿದ್ದು ಅದರ ಮೇಲೆ ಫಲಾನುಭವಿಯ ಆಧಾರ್ ಅಥವಾ ಮೊಬೈಲ್ ಸಂಖ್ಯೆಯಯನ್ನ ನಮೂದಿಸಿರಲಾಗುತ್ತದೆ. ಜೊತೆಗೆ ಹಣವನ್ನ ಸೇವೆ ನೀಡಿದವರು ಪಡೆದುಕೊಳ್ಳಲು ಬೇಕಾಗುವ ಕ್ಯೂಆರ್ ಕೋಡ್ ಕೂಡ ಇರುತ್ತದೆ. ಹೀಗಾಗಿ ಫಲಾನುಭವಿ ನಿರಕ್ಷರ ಕುಕ್ಷಿಯಾಗಿದ್ದರು ಸಹ ಇದರ ಅನುಕೂಲವನ್ನ ಪಡೆದುಕೊಳ್ಳಬಹುದು. ಸೇವೆ ನೀಡುವವರು ಒಮ್ಮೆ ಸೇವೆ ನೀಡಿದ ನಂತರ ಕ್ಯೂಆರ್ ಕೋಡ್ನನ್ನ ಸ್ಕ್ಯಾನ್ ಮಾಡಿದರೆ ಸಾಕು ಆ ತಕ್ಷಣ ಅವರಿಗೆ ನಿಗದಿತ ಹಣ ಸಂದಾಯವಾಗುತ್ತದೆ.

ಸರ್ಕಾರದ ಯಾವೆಲ್ಲಾ ಯೋಜನೆಗಳಿಗೆ ಇ-ವೋಚರ್ ಬಳಕೆ ಸಾಧ್ಯ?
 
ಸದ್ಯದ ಮಟ್ಟಿಗೆ ಇದನ್ನ ಸರಕಾರ ಅಯುಷ್ಮಾನ್ ಭಾರತ, ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾ, ಚೈಲ್ಡ್ ವೆಲ್ಫೇರ್, ಟ್ಯುಬರ್ಕುಲಸಿಸ್ ನಿರ್ಮೊಲನೆಗಾಗಿ, ಪೌಷ್ಟಿಕಾಂಶಗಳ ಖರೀದಿಗೆ ಮಾತ್ರ ಬಳಸಿಕೊಳ್ಳುವ ಅವಕಾಶವನ್ನ ನೀಡಿದೆ. ಇನ್ನೊಂದು ಉದಾಹರಣೆಯನ್ನ ನೋಡೋಣ. ಗರ್ಭಿಣಿ ಸ್ತ್ರಿಯೊಬ್ಬಳಿಗೆ ಉತ್ತಮ ಪೌಷ್ಟಿಕಾಂಶದ ಅವಶ್ಯಕತೆ ಇರುತ್ತದೆ, ಹೀಗಾಗಿ ಆಕೆಗೆ ಸರಕಾರ ಬದಲಿ ಮಾತ್ರೆ, ಅಥವಾ ವಿಟಮಿನ್, ಪ್ರೊಟೀನ್ ಪೌಡರ್ ಖರೀದಿಗೆ ಎಂದು ಕೂಪನ್ ನೀಡಿದ್ದರೆ ಅದನ್ನ ಕೊಂಡಾಗ ಮಾತ್ರ ಈ ವೋಚರ್ ಕೆಲಸ ಮಾಡುತ್ತದೆ. ನಮಗೆ ಬೇಕಾದ ಹಾಸಿಗೆ ಅಥವಾ ತಲೆದಿಂಬು ಕೊಂಡರೆ ಈ ವೋಚರ್ ಹಣವಾಗಿ ಪರಿವರ್ತನೆ ಹೊಂದುವುದಿಲ್ಲ.

ಇದಕ್ಕೆ ಪೂರಕವಾಗಿ ಇನ್ನೊಂದು ಉದಾಹರಣೆಯನ್ನ ಕೂಡ ನೀವು ಗಮನಿಸಬಹುದು. ನೀವು ಯಾವುದಾದರೂ ದೊಡ್ಡ ಬಟ್ಟೆ ಅಂಗಡಿಗೆ ಹೋದಾಗ ಒಂದಷ್ಟು ಮೊತ್ತದ ಖರೀದಿಯನ್ನ ಮಾಡಿದ ನಂತರ ಅವರು ಗಿಫ್ಟ್ ವೋಚರ್ ನೀಡುತ್ತಾರೆ. ಮುಂದಿನ ಖರೀದಿಯಲ್ಲಿ ನೀವು ಅದನ್ನ ಬಳಸಿಕೊಳ್ಳಬಹುದು. ಇಂತಹ ಕೂಪನ್ ನೀವು ಅದೇ ಅಂಗಡಿಯಲ್ಲಿ ಅಥವಾ ಅದೇ ಬ್ರಾಂಡ್ ನ ಇತರ ಅಂಗಡಿಯಲ್ಲಿ (ಉದಾಹರಣೆಗೆ ರಿಲಯನ್ಸ್ ಟ್ರೆಂಡ್) ಬಳಸಬಹುದು. ಪಕ್ಕದಲ್ಲಿರುವ ಹೋಟೆಲ್ನಲ್ಲಿ ಕೊಟ್ಟರೆ ಅದೊಂದು ಕೇವಲ ಪೇಪರ್ ತುಂಡು ಅಷ್ಟೇ, ಹೀಗೆ ಇಲ್ಲಿಯೂ ಅಷ್ಟೇ, ನಿಗದಿತ ಸೇವೆಯನ್ನ, ಪದಾರ್ಥವನ್ನ ಪಡೆಯಲು ಸರಕಾರ ನೇರವಾಗಿ ಫಲಾನುಭವಿಗಳಿಗೆ ನೀಡುವ ಗಿಫ್ಟ್ ಕೂಪನ್ನ ಇನ್ನೊಂದು ಹೆಸರು ಇ-ರುಪಿ. ಇದೊಂದು ಒಂದು ಬಾರಿ ಪಾವತಿಗಾಗಿ ಬಳಸಬಹುದಾಗಿದೆ.

ಹೀಗಾಗಿ ಇದನ್ನ ನಾವು ಪೂರ್ಣ ಪ್ರಮಾಣದ ಪಾವತಿ ವ್ಯವಸ್ಥೆ ಎಂದು ಹೇಳಲು ಬರುವುದಿಲ್ಲ. ಇದು ನಿಗದಿತ ಸೇವೆ ಮತ್ತು ಸರಕು ಕೊಂಡು ಅದರ ಪಾವತಿಗೆ ಮಾತ್ರ ಬಳಸಬಹುದಾದ ವೋಚರ್ ಅಥವಾ ಕೂಪನ್ ಆಗಿದೆ. ಇದನ್ನ ಸರಳವಾಗಿ ನಿರ್ದಿಷ್ಟ ವ್ಯಕ್ತಿ, ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಬಳಸಬಹುದು ಎಂದು ಹೇಳಲು ಅಡ್ಡಿಯಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಇದನ್ನ ಇತರ ಸೇವೆ ಮತ್ತು ಸರಕು ಕೊಳ್ಳಲು ಕೂಡ ಪಾವತಿ ವ್ಯವಸ್ಥೆಯಂತೆ ಬಳಸಿಕೊಳ್ಳುವ ಸಾಧ್ಯತೆಯನ್ನ ಅಲ್ಲಗೆಳೆಯಲು ಸಾಧ್ಯವಿಲ್ಲ. ಏಕೆಂದರೆ ಇದು ಅತ್ಯಂತ ಸುರಕ್ಷಿತ ಪಾವತಿ ವಿಧಾನವಾಗಿದೆ. ಬೇರೆ ರೀತಿಯ ಪಾವತಿ ವ್ಯವಸ್ಥೆಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ತಪ್ಪಾಗುವ ಸಾಧ್ಯತೆ ಇರುತ್ತದೆ. ಆದರೆ ಇಂತಹ ಕೂಪನ್ ಅಥವಾ ವೋಚರ್ ಸೇವೆಯಲ್ಲಿ ಬೇರೆಯವರು ಲಪಟಾಯಿಸುವ, ತಪ್ಪಾಗುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಇದೊಂದು ಅತ್ಯಂತ ಸುರಕ್ಷಿತ ಪಾವತಿ ವಿಧಾನ ಎನ್ನುವ ಹಣೆಪಟ್ಟಿಯನ್ನ ಹೊತ್ತು ಇದು ಜನ್ಮ ತಾಳಿದೆ.

ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಇಂತಹ ಒಂದು ವ್ಯವಸ್ಥೆಯನ್ನ ಸೃಷ್ಟಿಸಿದೆ. ಡಿಜಿಟಲ್ ಪೇಮೆಂಟ್ ಬಹಳ ಸರಳ ಮತ್ತು ಸುರಕ್ಷಿತವಾಗಿರಬೇಕು ಎನ್ನುವುದು ಇ-ರುಪಿ  ಹಿಂದಿರುವ ಉದ್ದೇಶ. ಫಲಾನುಭವಿಗಳಿಗೆ ಕ್ಯೂಆರ್ ಕೋಡ್ ಅಥವಾ sms ಸ್ಟ್ರಿಂಗ್ ಅನ್ನು ಮೊಬೈಲ್ ಗೆ ಕಳುಹಿಸಲಾಗುತ್ತದೆ. ಇಂತಹ ವೋಚರ್ಗಳು ಬಹಳಷ್ಟು ಬ್ಯಾಂಕ್ ನೊಂದಿಗೆ ಒಪ್ಪಂದವನ್ನ ಕೂಡ ಹೊಂದಿರುತ್ತವೆ. ಸರಕಾರ ಹೀಗೆ ನಿಗದಿಯಾದ ಬ್ಯಾಂಕುಗಳಿಗೆ ನೇರವಾಗಿ ಹಣವನ್ನ ಸಂದಾಯ ಮಾಡಿ ಆ ನಂತರ ಕೂಪನ್ ಗಳನ್ನ ವಿತರಣೆ ಮಾಡುತ್ತದೆ.

ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಯಾವುದೇ ಒಂದು ಕಾರ್ಯಗಳು ತಳಮಟ್ಟದ ಫಲಾನುಭವಿಗಳನ್ನ ತಲುಪುವುದರಲ್ಲಿ ಬಹಳಷ್ಟು ತಡವಾಗುತ್ತಿತ್ತು. ಜೊತೆಗೆ ಮಧ್ಯದಲ್ಲಿ ಆ ಹಣ ಪೋಲಾಗುತ್ತಿತ್ತು, ಇತರರು ಅದನ್ನ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಕೂಡ ಇತ್ತು. ಇವೆಲ್ಲವುಗಳ ನಡುವೆ ಇಂತಹ ಒಂದು ಸೇವೆ ಬಹಳಷ್ಟು ದುರ್ಬಳಕೆಯನ್ನ ತಡೆಯುತ್ತದೆ ಎನ್ನುವ ಹೊಸ ವಿಶ್ವಾಸದ ಮಾತುಗಳು ಕೇಳಿ ಬರುತ್ತಿವೆ.

ದುರ್ಬಳಕೆ ಎಂದ ತಕ್ಷಣ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವುದು, ಅಧಿಕಾರಿ ವರ್ಗ ಅಥವಾ ಸರಕಾರದ ಇತರ ಆಯಕಟ್ಟಿನಲ್ಲಿ ಕುಳಿತವರು ಮಾಡುವ ಕಾರ್ಯ ಎನ್ನುವುದಾಗಿದೆ. ಆದರೆ ಫಲಾನುಭವಿಗಳು ಕೂಡ ತಮಗೆ ಸಂದಾಯವಾದ ಹಣವನ್ನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯನ್ನ ಮಾತ್ರ ಮರೆತು ಬಿಡುತ್ತವೆ. ಉದಾಹರಣೆಗೆ ರಾಸಾಯನಿಕ ಗೊಬ್ಬರವನ್ನ ಖರೀದಿ ಮಾಡಲು ನೇರವಾಗಿ ಖಾತೆಗೆ ಹಾಕಿದ ಹಣವನ್ನ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಕಾಂಪನ್ಸೇಷನ್ ಹಣವನ್ನ ಯಾವುದಕ್ಕೆ ಬಂದಿತು ಅದಕ್ಕೆ ಉಪಯೋಗಿಸದೆ ಬೇರೆಯ ಕೆಲಸಕ್ಕೆ ಬಳಸುವುದು ಕೂಡ ದುರ್ಬಳಕೆಯಾಗುತ್ತದೆ. ಈ ಎಲ್ಲಾ ನಿಟ್ಟಿನಲ್ಲಿ ನೋಡಿದಾಗ ಇ-ವೋಚರ್ ಪಾವತಿ ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಕೊನೆ ಮಾತು: ಭಾರತದಲ್ಲಿ ಕೊರತೆ ಎನ್ನುವುದು ಬಹಳಷ್ಟಿದೆ. ಕೊರತೆ ಹೆಚ್ಚಾದಾಗ ಜನ ವ್ಯವಸ್ಥೆಯನ್ನ ಹೇಗೆ ಸಡಿಲಗೊಳಿಸಿಕೊಂಡು ಬದುಕಬಹದು ಎನ್ನುವುದನ್ನ ಹುಡುಕಲು ಶುರು ಮಾಡುತ್ತಾರೆ. ಹೀಗಾಗಿ ಯಾವುದೇ ವ್ಯವಸ್ಥೆ ಸರಳ ಮತ್ತು ಸುರಕ್ಷಿತ ಎನ್ನುವಂತೆ ಇಲ್ಲ ಎನ್ನುವುದು ಇಂದಿನ ವರೆಗಿನ ಕಥೆಯಾಗಿತ್ತು. ಇದೀಗ ಸರಳ ಮತ್ತು ಹೆಚ್ಚು ಸುರಕ್ಷಿತ ವಿಧಾನ ಎನ್ನುವಂತೆ ನಿರ್ದಿಷ್ಟ ವ್ಯಕ್ತಿಗಾಗಿ, ನಿರ್ದಿಷ್ಟ ಉದ್ದೇಶಕ್ಕಾಗಿ ಇ-ವೋಚರ್ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. 

ಸರಕಾರ ತಂದಿರುವ ಈ ಹೊಸ ವ್ಯವಸ್ಥೆಯನ್ನ, ಉದ್ದೇಶವನ್ನ ಸಾರ್ಥಕ ಗೊಳಿಸುವುದು ಜನತೆಯ ಕೈಯಲ್ಲಿದೆ. ಕೊನೆಗೂ ಯಾವುದೇ ವ್ಯವಸ್ಥೆ ಯಶಸ್ಸು ಕಾಣಬೇಕಿದ್ದರೆ ತಳಮಟ್ಟದ ಸಹಕಾರದ ಅವಶ್ಯಕತೆ ಇರುತ್ತದೆ. ಈ ಹೊಸ ಪಾವತಿ ವ್ಯವಸ್ಥೆ ಕೂಡ ಇದಕ್ಕೆ ಹೊರತಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com