ಬೊಮ್ಮಾಯಿ ನಿಭಾಯಿಸಬಹುದು, ಆದರೆ... (ನೇರ ನೋಟ)

-ಕೂಡ್ಲಿ ಗುರುರಾಜತಮಗೆ ಕೊಟ್ಟ ಖಾತೆ ಬಗ್ಗೆ ಸಚಿವ ಆನಂದ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಅವಕಾಶ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ನಡೆ ಕುತೂಹಲಕಾರಿಯಾಗಿದೆ. 
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ-ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ-ಸಿಎಂ ಬಸವರಾಜ ಬೊಮ್ಮಾಯಿ

ಆ ಬೆಳವಣಿಗೆಗಳು ನಿರೀಕ್ಷಿತ. ಆದರೆ, ಆ ಮೂರು ಸಂದರ್ಭಗಳು ಕರ್ನಾಟಕ ರಾಜಕಾರಣವನ್ನು ಹತ್ತಿರದಿಂದ ಬಲ್ಲವರಿಗೆ ಹುಬ್ಬೇರಿಸುವಂತೆ ಮಾಡಿದ್ದು ಮಾತ್ರ ಅನಿರೀಕ್ಷಿತ!

  • ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ್ದು ನಿರೀಕ್ಷಿತ. ಆದರೆ, ಬಸವರಾಜ ಬೊಮ್ಮಾಯಿ ಸಿಎಂ ಪಟ್ಟ ಏರಿದ್ದು ಅನಿರೀಕ್ಷಿತ. ಇದಕ್ಕೆ ಕಾರಣ ಯಡಿಯೂರಪ್ಪ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದ ನಂತರ ಅದೇ ಸಮಾಜದವರನ್ನು ಸಿಎಂ ಸ್ಥಾನದಲ್ಲಿ ಪ್ರತಿಷ್ಠಾಪಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ಹೈಕಮಾಂಡ್ ಸಿಲುಕಿದ್ದು. ಆಗ ಯಡಿಯೂರಪ್ಪ ಹಾಗೂ ಹೈಕಮಾಂಡ್ ಗೆ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಯಡಿಯೂರಪ್ಪ ಅವರ ನೀಲಗಣ್ಣಿನ ಹುಡುಗ ಬಸವರಾಜ ಬೊಮ್ಮಾಯಿ.
  •  ಬಸವರಾಜ ಬೊಮ್ಮಾಯಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಂಪುಟ ರಚನೆ ಕುರಿತು ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚಿಸಿದರು. ಆಗ ಮಾಧ್ಯಮದವರ ಮುಂದೆ ಅವರಾಡಿದ ಮಾತುಗಳು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತೀರಾ ಅಪರೂಪವಾಗಿತ್ತು. ಬೊಮ್ಮಾಯಿ ಹೇಳಿದ್ದು ಹೀಗಿತ್ತು "ಸಚಿವರ ನೇಮಕ ಕುರಿತು ಪಕ್ಷದ ವರಿಷ್ಠರಿಗೆ 2-3 ಪಟ್ಟಿ ಕೊಟ್ಟಿದ್ದೇನೆ. ವರಿಷ್ಠರು ಸಚಿವರ ಪಟ್ಟಿಯನ್ನು ಕೊಡುತ್ತಾರೆ. ಅದಕ್ಕಾಗಿ ಕಾಯುತ್ತಿದ್ದೇನೆ. ಅಂತಿಮ ಪ್ರಕಟಣೆಯನ್ನು ಹೈಕಮಾಂಡ್ ಮಾಡುತ್ತದೆ".  ನಿಜ, ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಸಂಪುಟ ರಚನೆ ಎಂಬುದು ಹೈಕಮಾಂಡ್ ಮೂಗಿನ ನೇರಕ್ಕೆ ಆಗಬೇಕಾಗುತ್ತದೆ. ಹೈಕಮಾಂಡ್ ಒಪ್ಪಿಗೆ ಪಡೆದೇ ಸಂಪುಟ ರಚನೆಯಾಗುತ್ತದೆ. ಸಂಪುಟ ರಚನೆ ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ ಆಗಿದ್ದರೂ ಹೈಕಮಾಂಡ್ ಆಣತಿ ಬೇಕೇ ಬೇಕು. ಆದರೆ, ರಾಷ್ಟ್ರೀಯ ಪಕ್ಷವೊಂದರ ಮುಖ್ಯಮಂತ್ರಿ ತಮ್ಮ ಸಂಪುಟದಲ್ಲಿ ಯಾರು ಇರಬೇಕು ಹಾಗೂ ಸಚಿವರ ಹೆಸರಿನ ಪಟ್ಟಿಯನ್ನು ಹೈಕಮಾಂಡ್ ಪ್ರಕಟಿಸುತ್ತದೆ ಎಂದು ಬಹಿರಂಗವಾಗಿ ಹೇಳಿದ್ದು ಇದೇ ಮೊದಲಿರಬೇಕು. ಇದು ಅನಿರೀಕ್ಷಿತ.
  • ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬೆಂಗಳೂರಿಗೆ ವಾಪಸಾದ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರು. ಈ ಭೇಟಿ ನಿರೀಕ್ಷಿತ. ಬೊಮ್ಮಾಯಿ ಭೇಟಿ ಬೆನ್ನಲ್ಲೇ ದೇವೇಗೌಡರು, ಬಸವರಾಜ ಬೊಮ್ಮಾಯಿ ಸರಕಾರ ಸಂಕಷ್ಟಕ್ಕೆ ಸಿಲುಕಿದರೆ ನಮ್ಮ ಬೆಂಬಲವಿದೆ ಎಂದಿದ್ದು ಅಚ್ಚರಿ ಮೂಡಿಸಿತ್ತು. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ, ಸಂಪುಟ ರಚನೆ, ದೇವೇಗೌಡರ ಹೇಳಿಕೆ- ಈ ಮೂರು ರಾಜ್ಯ ರಾಜಕಾರಣದ ಮುಂದಿನ ದಿಕ್ಕೂಚಿಯನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಾಗಿದೆ.

ಮುಂದಿವೆ ಸವಾಲುಗಳು:

ಇನ್ನು ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಅನೇಕ ಸವಾಲುಗಳಿವೆ. ಸ್ವಪಕ್ಷೀಯರು ಹಾಗೂ ಪ್ರತಿಪಕ್ಷ ಇಬ್ಬರಿಂದಲೂ ಅವರಿಗೆ ಸವಾಲಿದೆ. ಜೊತೆಯಲ್ಲಿ ಆಡಳಿತ ನಡೆಸುವ ಸವಾಲು ಬಹುದೊಡ್ಡದು.

ಸ್ವಪಕ್ಷದಲ್ಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಸಬೇಕು ಎಂದು ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಆಹಾರ ಸೇವಿಸುವಾಗ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಕನ್ನಡಿಗರು ನೆನಪಿಸಿಕೊಳ್ಳಬೇಕಾದ ಯಾವುದೇ ಕಾರಣ ಇಲ್ಲ ಎಂಬ ರವಿ ಅವರ ಟ್ವೀಟ್ಗೆ ಮುಖ್ಯಮಂತ್ರಿ ಹೇಗೆ ಪ್ರತಿಕ್ರಿಯಿಸುತ್ತಾರೆಯೋ ನೋಡಬೇಕು. 

ಇನ್ನು ತಮಗೆ ಕೊಟ್ಟ ಖಾತೆ ಬಗ್ಗೆ ಸಚಿವ ಆನಂದ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಅವಕಾಶ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ನಡೆ ಕುತೂಹಲಕಾರಿಯಾಗಿದೆ. ಇಂತಹ ಸವಾಲನ್ನು ಬೊಮ್ಮಾಯಿ ಎದುರಿಸಬೇಕಾಗುತ್ತದೆ.

ಹಿಂದುತ್ವದ ಮುಖವಲ್ಲ: ಬಸವರಾಜ ಬೊಮ್ಮಾಯಿ ಹಿಂದುತ್ವದ ಮುಖವಲ್ಲ. ಸಂಘ ಪರಿವಾರದ ಹಿಂದುತ್ವದ ಅಜೆಂಡಾ ಜಾರಿಯಲ್ಲಿ ಅವರಿಗೆ ವೈಯಕ್ತಿಕವಾಗಿ ಭಿನ್ನಾಭಿಪ್ರಾಯಗಳಿದ್ದರೂ ಆಯ್ಕೆ ಸ್ವಾತಂತ್ರ್ಯ ಇಲ್ಲ. ಬೊಮ್ಮಾಯಿ ಮಾಸ್ ಲೀಡರ್ ಅಲ್ಲ. ಬಹಿರಂಗ ಸಭೆಗಳಲ್ಲಿ ಜನರ ಮನಸೆಳೆಯುವ ಭಾಷಣಕಾರರಲ್ಲ. ವೀರಾವೇಶದ ಮಾತುಗಳಿಗೆ ಫೇಮಸ್ಸಲ್ಲ. ಬೊಮ್ಮಾಯಿ ಅಳೆದು ತೂಗಿ ಹತ್ತು ಸಲ ಯೋಚಿಸಿ ಮಾತಾಡುವ ಜಾಯಮಾನದವರು. ಅವರ ಮಾತಿನಲ್ಲಿ ವಿಷಯಗಳಿರುತ್ತವೆ, ವಿಚಾರ ಇರುತ್ತವೆ.

ಸ್ವಾತಂತ್ರ್ಯ ಸಿಗಲಿದೆಯೇ...

ಬೊಮ್ಮಾಯಿ ಚಾಣಾಕ್ಷ್ಯ ರಾಜಕಾರಣಿ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಕಷ್ಟ ಪರಿಸ್ಥಿತಿಗಳನ್ನು ಸದನದ ಒಳಗೆ ಹಾಗೂ ಹೊರಗೆ ನಿಭಾಯಿಸುವ ಜಾಣ್ಮೆ ಅವರಿಗಿದೆ. ಅವರು ತೀಕ್ಷ್ಣಮತಿಗಳು. ಅಧ್ಯಯನಶೀಲತೆ ಅವರ ವ್ಯಕ್ತಿತ್ವಕ್ಕೆ ಮೆರುಗು ತಂದುಕೊಟ್ಟಿದೆ. ಉತ್ತಮ ಆಡಳಿತ ನೀಡುವ ದೂರದೃಷ್ಟಿ, ಬದ್ಧತೆ ಅವರಿಗೆ ಇದೆ. ಆದರೆ, ಆಡಳಿತದ ನೊಗ ಹೊತ್ತ ಅವರಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಇದೆ ಎಂಬುದನ್ನು ಇದು ಅವಲಂಬಿಸಿದೆ. 

ಡಿಸೆಂಬರ್ ನಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಬೊಮ್ಮಾಯಿ ಸರಕಾರಕ್ಕೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಗ್ನಿ ಪರೀಕ್ಷೆ. 2023ರ ಅಸೆಂಬ್ಲಿ ಚುನಾವಣೆ ಎದುರಿಸಬೇಕಿದ್ದರೆ ಸರಕಾರಕ್ಕೆ ಕ್ಲೀನ್ ಇಮೇಜು ತಂದುಕೊಡಬೇಕಿದೆ. ಈ ಎಲ್ಲ ಸವಾಲುಗಳು ಬೊಮ್ಮಾಯಿ ಮುಂದಿದೆ.

ಮೂಡಿಸುತ್ತಾರೆಯೇ ಛಾಪು? 

ಬೊಮ್ಮಾಯಿ ಬಿಜೆಪಿ ಸೇರಿದಾಗಿನಿಂದಲೂ ಯಡಿಯೂರಪ್ಪ ಅವರಿಗೆ ನಿಷ್ಠರು. ಆದರೆ, ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಬಿಜೆಪಿಯಲ್ಲೇ ಉಳಿದುಕೊಂಡು ಯಡಿಯೂರಪ್ಪ ಅವರ ಕೆಂಗೆಣ್ಣಿಗೆ ಗುರಿಯಾಗಿದ್ದೂ ಉಂಟು. ಯಡಿಯೂರಪ್ಪ ಅವರ ನೆರಳಿನಂತೆ ಕೆಲಸ ಮಾಡಿದ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಈ ನೆರಳಿನಿಂದ ಹೊರ ಬರುತ್ತಾರೆಯೇ? ಆಡಳಿತದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಾರೆಯೇ? ಕಾಲ ಉತ್ತರಿಸಬೇಕು. ಬೊಮ್ಮಾಯಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ ಇಲ್ಲದಿರಬಹುದು. ಆದರೆ, ಮುಂಬರುವ ದಿನಗಳಲ್ಲಿ ಅವರು ಉತ್ತಮ ಆಡಳಿತ ನೀಡಿದರೆ ಈ ಎರಡು ಸಂಗತಿಗಳು ಅವರನ್ನು ಹೆಚ್ಚು ಕಾಡುವುದಿಲ್ಲ ಎಂಬುದು ಮಾತ್ರ ನಿಜ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com