ಅಭಿವೃದ್ಧಿಯ ಅರ್ಥ ಸರಿಯಾಗಿ ತಿಳಿದುಕೊಳ್ಳದಿದ್ದರೆ ಕಾದಿದೆ ಸಂಕಷ್ಟ! (ಹಣಕ್ಲಾಸು)

ಹಣಕ್ಲಾಸು-272-ರಂಗಸ್ವಾಮಿ ಮೂಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಅಮೆರಿಕಾದ ಮನೆ ಮಾರುಕಟ್ಟೆ ಒಂದು ಕಡೆ ಏರುತ್ತಿದ್ದರೆ, ಇನ್ನೊಂದು ಕಡೆ ಲಕ್ಷಾಂತರ ಜನರು ಸಾಲದ ಮೇಲಿನ ಕಂತನ್ನ ಕಟ್ಟಲಾಗದೆ ಮನೆಯನ್ನ ಬಿಡುವ ಪರಿಸ್ಥಿತಿಯಲ್ಲಿದ್ದಾರೆ. ಕೊರೋನ ಪಿಡುಗಿನ ಕಾರಣ ಕೆಲಸವನ್ನ, ಆದಾಯವನ್ನ ಕಳೆದುಕೊಂಡ ಜನರು ವಿಧಿಯಿಲ್ಲದೆ ತಾವು ಇಚ್ಛೆ ಪಟ್ಟು ಕೊಂಡಿದ್ದ ಮನೆಯನ್ನ ಬಿಡುವಂತಾಗಿದೆ. 

ಬಹಳಷ್ಟು ಸಂದರ್ಭದಲ್ಲಿ ಫೊರ್ಸ್ಡ್ ಏವಾಕ್ವೇಷನ್ ಅಂದರೆ ಬಲ ಪ್ರಯೋಗಿಸಿ, ಕಾನೂನಿನ ಸಹಾಯದಿಂದ ಮನೆಯಿಂದ ಜನರನ್ನ ಹೊರ ದಬ್ಬುವ ಕೆಲಸಗಳು ಕೂಡ ನಡೆಯುತ್ತಿವೆ. ಸಮಾಜದಲ್ಲಿ ಆರ್ಥಿಕ ಅಂತರ ಬಹಳಷ್ಟು ಹೆಚ್ಚಾಗಿದೆ. ಅಪ್ ಜಾನ್ ಇನ್ಸಿಟಿಟ್ಯೂಟ್ ಫಾರ್ ಎಂಪ್ಲಾಯ್ಮೆಂಟ್ ರಿಸೆರ್ಚ್ ನಲ್ಲಿ ಸೀನಿಯರ್ ಎಕನಾಮಿಸ್ಟ್ ಆಗಿ ಕೆಲಸ ಮಾಡುವ ಟಿಮೋತಿ ಬರ್ತಿಕ್ ಅವರು ನಡೆಸಿದ ಸರ್ವೇ ಅಮೇರಿಕಾ ದೇಶದ ಒಟ್ಟು ಜನ ಸಂಖ್ಯೆಯ ಆರನೇ ಒಂದು ಭಾಗದಷ್ಟು ಜನರನ್ನ 'ಡಿಸ್ಸ್ಟ್ರೆಸ್ಸ್ಡ್ ಕಮ್ಯುನಿಟಿ' (distressed community) ಎಂದು ವಿಭಾಗಿಸಬಹುದು ಎನ್ನುವ ಆಘಾತಕಾರಿ ಅಂಶವನ್ನ ಬಹಿರಂಗ ಪಡಿಸಿದೆ.

ಅಂದರೆ ಅಮೇರಿಕಾ ಒಂದು ದೇಶದಲ್ಲೆ ಐದೂವರೆ ಕೋಟಿ ಜನರನ್ನ ಕೋವಿಡ್ ಪಿಡುಗು ಪ್ರಪಾತಕ್ಕೆ ದೂಡಿದೆ. ಡಿಸ್ಸ್ಟ್ರೆಸ್ ಅಂದರೆ ಯಾತನಾಮಯ ಜೀವನ ನಡೆಸುತ್ತಿರುವ ಸಮುದಾಯ ಎನ್ನುವ ಒಂದು ಹೊಸ ಹೆಸರಿನ ಸಮುದಾಯ ಸೃಷಿಯಾಗಿದೆ.

ವಿಪರ್ಯಾಸ ನೋಡಿ, ಜಗತ್ತಿಗೆ ಸಮಾನತೆಯ ಪಾಠವನ್ನ ಭೋದಿಸುತ್ತಿದ್ದ ದೇಶದಲ್ಲಿ ಅಸಮಾನತೆ ಮುಗಿಲು ಮುಟ್ಟುತ್ತಿದೆ. ಮೊದಲ ಸಾಲುಗಳಲ್ಲಿ ಹೇಳಿದಂತೆ ಇಲ್ಲಿನ ಮನೆಯನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ, ಹಾಗೆಯೆ ಬೆಲೆಗಳು ಕೂಡ ವರ್ಷದಿಂದ ವರ್ಷಕ್ಕೆ ಏರಿಕೆಯನ್ನ ಕಾಣುತ್ತಿದೆ. ತೀರಾ ಇತ್ತೀಚಿಗೆ ಅಮೆರಿಕನ್ ಸರಕಾರ ಮಾರುಕಟ್ಟೆಯಲ್ಲಿ ಹಣವನ್ನ ಅವಶ್ಯಕತೆಗಿಂತ ಹೆಚ್ಚು ಮುದ್ರಿಸಿ ಬಿಟ್ಟಿದ್ದರ ಕಾರಣ ಹಣದುಬ್ಬರ ಬಹಳಷ್ಟು ಹೆಚ್ಚಾಗಿದೆ. ಹೀಗಾಗಿ ಎಲ್ಲ ಬೆಲೆಗಳು ಏರಿದಂತೆ ಮನೆಗಳ ಬೆಲೆಯಲ್ಲೂ ಅತ್ಯಂತ ಹೆಚ್ಚಳವಾಗುತ್ತಿದೆ. ಒಂದು ವರ್ಗದ ಜನರ ಕೈಯಲ್ಲಿ ಹಣದ ಹರಿವು ಹೆಚ್ಚಾಗಿದೆ. ಅಸ್ಥಿರ ಮಾರುಕಟ್ಟೆಯಲ್ಲಿ ಸ್ಥಿರಾಸ್ಥಿಗಳ ಮೇಲಿನ ಹೂಡಿಕೆಗೆ ಮನುಷ್ಯ ಹೆಚ್ಚು ಆದ್ಯತೆಯನ್ನ ನೀಡುತ್ತಾನೆ. ಹೀಗಾಗಿ ಅಮೆರಿಕಾದ ಮನೆ ಮಾರುಕಟ್ಟೆಯಲ್ಲಿ ಕಾವು ಹೆಚ್ಚಾಗ ತೊಡಗಿದೆ. ಇದು ಇನ್ನೊಂದು ಕುಸಿತಕ್ಕೆ ಹೆಬ್ಬಾಗಿಲು ಆಗುವ ಎಲ್ಲಾ ಸಾಧ್ಯತೆಗಳು ಕೂಡ ಇದೆ.

ಅಮೇರಿಕಾ ದೇಶದಲ್ಲಿ ಇಂದು ಈ ಪರಿಸ್ಥಿತಿ ಬರಲು ಕಾರಣವೇನು? ಎನ್ನುವುದನ್ನ ಅವಲೋಕಿಸಿದಾಗ ತಿಳಿದು ಬರುವ ಅಂಶಗಳು ಹೀಗಿವೆ:

  1. ಈ ಮಾರುಕಟ್ಟೆ ಅಥವಾ ಸಮಾಜ ನಿಂತಿರುವುದು ಸಾಲದ ಮೇಲೆ, ಸಾಲದ ಮೇಲಿನ ಕಂತನ್ನ ಕಟ್ಟಲು ಕೆಲಸ ಮತ್ತು ಆದಾಯದ ಅವಶ್ಯಕತೆ ಇರುತ್ತದೆ. ಅಕಸ್ಮಾತ್ ಕೆಲಸವಿಲ್ಲದೇ ಹೋದರೆ ಆಗ ಕಂತು ಕಟ್ಟುವುದು ಹೇಗೆ? ಹೀಗಾಗಿ ಇದೊಂದು ಮಹಾ ಕುಸಿತಕ್ಕೆ ಕಾರಣವಾಗುತ್ತದೆ.
  2. ಮುಂದೆ ಹತ್ತಾರು ವರ್ಷ ದುಡಿಯಬಹುದಾದ ಸಂಭಾವ್ಯ ಹಣವನ್ನ ಇಂದು ಮುಂಗಡವಾಗಿ ತೆಗೆದುಕೊಂಡು ಖರ್ಚು ಮಾಡುವುದರಿಂದ ಇಲ್ಲದ ಮಾರುಕಟ್ಟೆಯನ್ನ ಸೃಷ್ಟಿ ಮಾಡಿದಂತಾಯ್ತು. ಅಂದರೆ ಮುಂದಿನ ಹತ್ತು ವರ್ಷದಲ್ಲಿ ಸೃಷ್ಟಿ ಆಗಬಹುದಾಗಿದ್ದ ಮಾರುಕಟ್ಟೆಯನ್ನ ಇಂದಿಗೆ ಸೃಷ್ಟಿಸಿಕೊಂಡರು, ಹತ್ತು ವರ್ಷದ ನಂತರ? ಹೀಗೆ ಮತ್ತೊಂದು ಭ್ರಾಮಕ ಮರುಕಟ್ಟೆಯನ್ನ ಸೃಷ್ಟಿಸದೆ ಬೇರೆ ದಾರಿ ಉಳಿದುಕೊಳ್ಳುವುದಿಲ್ಲ. ಈ ಮಧ್ಯೆ ಕೆಲಸಗಳು ಕಳೆದುಹೋದರೆ ಈ ಭ್ರಾಮಕ ಮಾರುಕಟ್ಟೆ ನಿಗದಿತ ವೇಳೆಗೆ ಮೊದಲೇ ಕುಸಿದು ಬೀಳುತ್ತದೆ. ಅಮೇರಿಕಾದಲ್ಲಿ ಈಗಾಗಿರುವುದು ಕೂಡ ಇದೆ.
  3. ಅಮೇರಿಕಾ ಸೇರಿದಂತೆ ಬಹುತೇಕ ಮುಂದುವರಿದ ದೇಶಗಳಲ್ಲಿ ಬಡ್ಡಿ ದರವನ್ನ ಬಹಳ ಕಡಿಮೆ ಇಟ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಜನರು ಹಣವನ್ನ ಸಂಗ್ರಹಿಸುವುದು ಶುರು ಮಾಡಿದರೆ ಆಗ ಖರ್ಚು ಕಡಿಮೆಯಾಗುತ್ತದೆ. ಇವರ ತತ್ವ, ಪದಾರ್ಥಗಳು ಉತ್ಪತ್ತಿಯಾಗುತ್ತಿರಬೇಕು ಮತ್ತು ಜನ ಅದನ್ನ ಕೊಳ್ಳುತ್ತಿರಬೇಕು. ಇದರಲ್ಲಿ ಒಂದು ವ್ಯತ್ಯಯವಾದರೂ ಅದು ಕುಸಿತಕ್ಕೆ ದಾರಿ ಮಾಡಿಕೊಡುತ್ತದೆ. ಬಡ್ಡಿ ದರ ಕಡಿಮೆ ಇದ್ದಾಗ ಹಣವಿದ್ದವರು ಅದನ್ನ ಉಳಿಸಿ ಏನು ಪ್ರಯೋಜನ? ಎನ್ನುವ ಮನಸ್ಥಿತಿಯಿಂದ ಖರ್ಚು ಮಾಡಲು ಶುರು ಮಾಡುತ್ತಾರೆ. ಹಣವಿಲ್ಲದವರು ಕಡಿಮೆ ಬಡ್ಡಿಯಿದೆ ಎಂದು ಖುಷಿಯಿಂದ ಸಾಲ ಮಾಡಿ ಖರ್ಚು ಮಾಡುತ್ತಾರೆ. ಇದೊಂದು ವಿಷ ವರ್ತುಲ.

ಹೀಗೆ ಇನ್ನು ಅನೇಕ ಕಾರಣಗಳನ್ನ ನಾವು ಪಟ್ಟಿ ಮಾಡಬಹುದು. ಇವೆಲ್ಲವುಗಳ ಅರ್ಥ, ಇದೊಂದು ಸೋತ ಅಥವಾ ದೀರ್ಘ ಕಾಲದಲ್ಲಿ ಸಮರ್ಥಿಸಿಕೊಳ್ಳಲು ಅಥವಾ ಉಳಿಸಿಕೊಳ್ಳಲು ಆಗದ ಸ್ವರೂಪವಾಗಿದೆ. ಇಂತಹ ಒಂದು ಆರ್ಥಿಕ ನೀತಿಯಿಂದ ತಕ್ಷಣದಲ್ಲಿ ಜಗಮಗಿಸುವ ಮನೆಯನ್ನ, ಕಾರನ್ನ ಸೃಷ್ಟಿಸಬಹುದು ಆದರೆ ಸ್ವಲ್ಪ ಏರುಪೇರಾದರೂ ಆ ಮನೆಯನ್ನ, ಕಾರನ್ನ ಉಳಿಸಿಕೊಳ್ಳಲು ಆಗುವುದಿಲ್ಲ. ಏನೂ ಇಲ್ಲದೆ ಬೀದಿ ಬದಿಗೆ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಇಂದಿಗೆ ಅಮೇರಿಕಾದಲ್ಲಿ ಹೋಂ ಲೆಸ್ ಗಳದ್ದು ಒಂದು ದೊಡ್ಡ ಸಮಸ್ಯೆಯಾಗಿದೆ.

ಗಮನಿಸಿ ನೋಡಿ ಪಾಶ್ಚಾತ್ಯ ಆರ್ಥಿಕತೆ ನಿಂತಿರುವುದು ಸಾಲದ ಮೇಲೆ, ತಾವು ಗಳಿಸಿದ, ಖರ್ಚು ಮಾಡಿದ ಪ್ರತಿಯೊಂದು ಹಣವನ್ನೂ ಲೆಕ್ಕ ಇಟ್ಟು ಅದರ ಆಧಾರದ ಮೇಲೆ ಸಮಾಜದ ಆರ್ಥಿಕತೆ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನ ಅಳತೆ ಮಾಡುವುದರ ಮೇಲೆ. ಇದನ್ನೇ ನಾವು ಜಿಡಿಪಿ ಎನ್ನುವುದು. ಭಾರತವೂ ಸೇರಿದಂತೆ ಬಹಳ ದೇಶಗಳಲ್ಲಿ ಹೀಗೆ ಎಲ್ಲವನ್ನೂ ನಾವು ಲೆಕ್ಕ ಇಡಲು ಹೋಗುವುದಿಲ್ಲ. ಅದು ನಮ್ಮ ಸಂಸ್ಕಾರವೂ ಅಲ್ಲ. ಉದಾಹಣೆಗೆ ಇಂಗ್ಲೆಂಡ್ ಮತ್ತು ಅಮೇರಿಕಾದಂತಹ ದೇಶಗಳಲ್ಲಿ ಫಂಡ್ ರೈಸಿಂಗ್ ಎನ್ನುವುದು ಒಂದು ದೊಡ್ಡ ಉದ್ಯಮ. ದಾನ ಧರ್ಮಕ್ಕೆ ಎಂದು ತೆರೆದ ಲಾಭಕ್ಕಲ್ಲದ ಸಂಸ್ಥೆಗಳಿಗೆ ಹಣವನ್ನ ದೇಣಿಗೆಯ ರೂಪದಲ್ಲಿ ತರಲು ಕೂಡ ಬಹಳಷ್ಟು ಜನರು, ಸಂಸ್ಥೆಗಳು ಇವೆ. ಆದರೆ ಭಾರತದಲ್ಲಿ ಅದು ಇಲ್ಲ. ಇದ್ದರೂ ಅಲ್ಲಿನಷ್ಟು ಭರಾಟೆಯಂತೂ ಖಂಡಿತ ಇಲ್ಲ. ಏಕೆಂದರೆ ನಮ್ಮದು ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ತಿಳಿಯಬಾರದು ಎನ್ನುವ ಸಂಪ್ರದಾಯ ಅಥವಾ ಮನಸ್ಥಿತಿ ಹೊಂದಿದ ದೇಶ.

ಕೇವಲ ದಾನ ಧರ್ಮದ ವಿಷಯದಲ್ಲಿ ಮಾತ್ರವಲ್ಲ ಬಹಳ ವಿಷಯದಲ್ಲಿ ನಮ್ಮ ಸಮಾಜ ಎಲ್ಲವನ್ನೂ ಸಮಸ್ಥಿತಿಯಲ್ಲಿ ಇಟ್ಟಿದ್ದ ಸಮಾಜ. ಉದಾಹರಣೆ ನೋಡೋಣ. ಹಿಂದೆ ನಮ್ಮ ಮನೆಯ ಹಿತ್ತಲಲ್ಲಿ ಒಂದೆರೆಡು ಆಕಳುಗಳು ಇರುತ್ತಿದ್ದವು, ಅವುಗಳಿಂದ ಹಾಲು, ಅದರಲ್ಲೂ ಕಲಬೆರಕೆಯಿಲ್ಲದ, ತಾಜಾ ಹಾಲು ಸಿಗುತ್ತಿತ್ತು, ಹಾಗೆಯೇ ತರಕಾರಿ, ಹೂವು, ಸೊಪ್ಪು ಇತ್ಯಾದಿಗಳು ಅಲ್ಲಿಯೇ ಸಿಗುತ್ತಿದ್ದವು. ಅವುಗಳನ್ನ ನಾವು ಕೊಂಡುಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಹೀಗೆ ನಾವು ಕೊಂಡುಕೊಳ್ಳದೆ ಅದರ ಉಪಭೋಗವನ್ನ ಮಾಡಿದರೆ ಅದು ಜಿಡಿಪಿ ಲೆಕ್ಕಕ್ಕೆ ಬರುವುದಿಲ್ಲ!! ಪಾಶ್ಚ್ಯಾತ್ಯರ ಪ್ರಕಾರ ನೀವು ಯಾವುದೇ ವಸ್ತುವನ್ನ ಅಥವಾ ಸೇವೆಯನ್ನ ಹಣವನ್ನ ನೀಡದೆ ಬಳಸಿಕೊಂಡರೆ ಅದು ಲೆಕ್ಕಕ್ಕೆ ಬರುವುದಿಲ್ಲ, ಹೀಗಾಗಿ ನಿಮ್ಮ ಸಮಾಜವೆಷ್ಟು ದೊಡ್ಡದು, ನಿಮ್ಮ ಆರ್ಥಿಕತೆಯೆಷ್ಟು ಸಬಲ ಎನ್ನುವ ಅವರ ಲೆಕ್ಕಾಚಾರದಲ್ಲಿ ತಪ್ಪಾಗುತ್ತದೆ.

ಅಲ್ಲದೆ ನಮ್ಮದು ಬಹಳ ಹಿಂದಿನಿಂದಲೂ ಉಳಿಕೆಯನ್ನ ಅದರಲ್ಲೂ ಸಣ್ಣ ಉಳಿತಾಯವನ್ನ ನಂಬಿ ಬದುಕುತ್ತಿರುವ ಸಮಾಜ. ಮನೆ ಖರ್ಚಿಗೆ ಎಂದು ನೀಡುವ ಹಣದಲ್ಲೂ ಒಂದಷ್ಟು ಉಳಿಕೆ ಮಾಡಿ ಅದೆಷ್ಟೊ ಸಂಸಾರಗಳನ್ನ ಕಷ್ಟಕಾಲದಲ್ಲಿ ಕಾಪಾಡಿದ ನಿದರ್ಶನಗಳು ನಮ್ಮ ಮುಂದಿದೆ. ಆದರೆ ಇತ್ತೀಚೆಗಂತೂ ಭಾರತದಲ್ಲಿ ಕೂಡ ಸಾಮಾನ್ಯ ಜನರು ಉಳಿತಾಯ ಮಾಡುವುದರಿಂದ ಏನು ಪ್ರಯೋಜನ ಎಂದು ಕೇಳುವ ಮಟ್ಟಕ್ಕೆ ಸರಕಾರ ಉಳಿತಾಯದ ಮೇಲಿನ ಬಡ್ಡಿಯನ್ನ ಕಡಿಮೆ ಮಾಡಿದೆ. ಎಲ್ಲಕ್ಕೂ ಪಾಶ್ಚಾತ್ಯ ಆರ್ಥಿಕತೆಯನ್ನ ಅನುಸರಿಸಿದರೆ ಅವರಿಗಾದ ಗತಿಯೇ ನಮ್ಮದು ಕೂಡ ಆಗಲಿದೆ. ಭಾರತದಲ್ಲಿ ಕೂಡ ಮುಂದಿನ ಹತ್ತಾರು ವರ್ಷದ ಹಣವನ್ನ ಮುಂಗಡವಾಗಿ ತೆಗೆದುಕೊಂಡು ಖರ್ಚು ಮಾಡುವ ಸಂಪ್ರದಾಯ ಬೆಳೆದು ಬಿಟ್ಟಿದೆ. ಇಂದು ಅಮೇರಿಕಾದಲ್ಲಿ ಆಗುತ್ತಿರುವ ಘಟನೆಗಳು ನಮಗೆ ಎಚ್ಚರಿಕೆಯ ಕರೆಘಂಟೆ! ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಿರುತ್ತದೆ, ಖರ್ಚು ಮಾಡದೆ ಮಿತವಾಗಿ ಬಳಸಿಕೊಂಡು ಸಾಲವನ್ನ ಮಾಡದೆ ಇದ್ದರೆ ದೇಶ ಅಭಿವೃದ್ಧಿ ಕಾಣುವುದು ಹೇಗೆ? ನಮ್ಮ ಕಾಲಘಟ್ಟದ ಅತ್ಯಂತ ದೊಡ್ಡ ದುರಂತವೆಂದರೆ ಸಾಲ ಮಾಡಿ ಸೃಷ್ಟಿಯಾದ ಸಂಪತ್ತನ್ನ ಅಭಿವೃದ್ಧಿ ಎನ್ನುವಂತೆ ಬಿಂಬಿಸುತ್ತಿರುವುದು. ಇಲ್ಲದ ಆಸ್ತಿಯನ್ನ ಸೃಷ್ಟಿಸಿ ಆನಂದ ಪಡುವುದು ಜಾಣತನವೇ? ನಿಮ್ಮನ್ನ ನೀವೇ ಪ್ರಶ್ನಿಸಿಕೊಳ್ಳಿ.

ಅಂದಮಾತ್ರಕ್ಕೆ ನಾವೇನೋ ಶಿಲಾಯುಗದ ಜೀವನವನ್ನ ಮರಳಿ ಅಪ್ಪಿಕೊಳ್ಳಬೇಕು ಎನ್ನುವ ಸಿನಿಕತೆಯಿಂದ ಇದನ್ನ ಬರೆಯುತ್ತಿಲ್ಲ. ಗಮನಿಸಿ ನೋಡಿ, ಇಂದು ನಾವಾಗೇ ಕಟ್ಟಿಕೊಂಡಿರುವ ಅಥವಾ ಪಾಶ್ಚಾತ್ಯ ಅಂಧಾನುಕರೆಣೆಯಿಂದ ಒಳಿತಾಗಿದೆಯೂ ಅಥವಾ ಕೆಡುಕಾಗಿದೆಯೋ? ಹಣದ ಹರಿವು ಇಂದಿನ ಮಟ್ಟದಲ್ಲಿ ಇರುತ್ತಿರಲಿಲ್ಲ ಎನ್ನುವುದನ್ನ ಒಪ್ಪೋಣ, ಹಾಗೆಯೆ ಇಂದು ನಮ್ಮ ಸಮಾಜದಲ್ಲಿ ಕಾಣುತ್ತಿರುವ ಕಡಿಮೆ ವಯಸ್ಸಿನ ಸಾವುಗಳು, ಹಲವಾರು ಜೀವ ಮಾರಕ, ಜೀವನ ಶೈಲಿ ರೋಗಗಳು ಕೂಡ ಇರುತ್ತಿರಲಿಲ್ಲ.

ಪಾಶ್ಚಾತ್ಯ ಅರ್ಥ ವ್ಯವಸ್ಥೆ ಪೂರ್ಣವಾಗಿ ನಿಂತಿರುವುದು ಸಾಲ ಅಥವಾ ಡೆಟ್ ಮೇಲೆ, ಮತ್ತು ಹಳೆ ಸಾಲ ತೀರಿಸಲು ಹೊಸ ಸಾಲ ಮಾಡಿ ಎನ್ನುವ ಮನಸ್ಥಿತಿಯ ಮೇಲೆ, ನಾವು ಭಾರತೀಯರು ಕೂಡ ಕಣ್ಣು ಮುಚ್ಚಿ ಇಂತಹ ಅರ್ಥ ವ್ಯವಸ್ಥೆಯನ್ನ ನಮ್ಮದಾಗಿಸಿ ಕೊಂಡಿದ್ದೇವೆ, ಇಂದು ಅಮೇರಿಕಾ ಸಮಾಜದ ಆರನೇ ಒಂದು ಭಾಗ ಯಾತನಾಮಯ ಜೀವನದಲ್ಲಿ ಕಳೆಯುತ್ತಿದೆ ಎನ್ನುವುದನ್ನ ಅಲ್ಲಿನ ಅಂಕಿ-ಅಂಶಗಳೇ ಹೇಳುತ್ತಿವೆ. ವಸ್ತುಸ್ಥಿತಿ ಹೀಗಿದ್ದೂ ನಾವು ಇನ್ನೂ ಅದೇ ತಪ್ಪು ಮಾಡೆಲ್ ಹಿಂದೆ ಓಡುತ್ತಿರುವುದು ಎಷ್ಟು ಸರಿ?

ಕೊನೆ ಮಾತು: ಅಭಿವೃದ್ಧಿ ಎನ್ನುವುದರ ಅರ್ಥವನ್ನ ನಾವು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ರಾಮ ಎನ್ನುವನಿಗೆ ಕಾರಿನ ಅವಶ್ಯಕೆತೆಯಿದೆ ಆತ ಸಾಲ ಮಾಡಿ  ಕಾರುಕೊಳ್ಳುತ್ತಾನೆ. ಜಗತ್ತಿನ ದೃಷಿಯಲ್ಲಿ ಅವನು ಅಭಿವೃದ್ಧಿ ಹೊಂದುತ್ತಿದ್ದಾನೆ. ಜಗತ್ತಿಗೆ ಅವನ ಸಾಲದ ಬಗ್ಗೆ ಗೊತ್ತಾಗುವುದಿಲ್ಲ, ಸಮಾಜದ ಕಣ್ಣಿಗೆ ಕಾಣುವುದು ಹೊಳೆಯುವ ಕಾರು ಮಾತ್ರ!  

ಲಕ್ಷ್ಮಣನಿಗೆ ಕಾರಿನ ಅವಶ್ಯಕೆತೆ ಇಲ್ಲದಿದ್ದರೂ ರಾಮ ಕೊಂಡ ಎಂದು ಆತನೂ ಸಾಲಮಾಡಿ ಕಾರು ಕೊಳ್ಳುತ್ತಾನೆ. ಹೀಗೆ ಸಮಾಜದಲ್ಲಿ ಒಬ್ಬರನ್ನ ನೋಡಿ ಒಬ್ಬರು ನಕಲು ಮಾಡುತ್ತಾರೆ. ನಮಗದರ ಅವಶ್ಯಕತೆ ಇದೆಯೇ? ಎನ್ನುವ ಸರಳ ಪ್ರಶ್ನೆಯನ್ನ ಕೇಳಿಕೊಳ್ಳುವುದು ಬಿಡುತ್ತಾರೆ. ಸಾಲ ಮಾಡುವಾಗ ಮುಂದಿನ ಹತ್ತು ಅಥವಾ ಹದಿನೈದು ವರ್ಷ ನನಗೆ ಕೆಲಸ ವಿರುತ್ತದೆಯೇ? ಎನ್ನುವ ಸಣ್ಣ ವಿವೇಚನಯುಕ್ತ ಪ್ರಶ್ನೆಯನ್ನ ಕೇಳಿಕೊಳ್ಳುವುದು ಮರೆಯುತ್ತಾನೆ. ಜಾಗತಿಕ ಮಟ್ಟದ ಸಂಸ್ಥೆಗಳಿಗೆ ಬೇಕಿರುವುದು ಹೀಗೆ ಪ್ರಶ್ನೆ ಕೇಳಿಕೊಳ್ಳದೆ ಸಾಲದ ಸುಳಿಯಲ್ಲಿ ಬೀಳುವ ಜನ. ಅವರಿಗೆ ಅವರ ಪದಾರ್ಥ ಮಾರಾಟವಾದರೆ ಸಾಕು. ಹಣದ ಇಂತಹ ಸಣ್ಣ-ಸಣ್ಣ ಸೂಕ್ಷ್ಮಗಳನ್ನ ತಿಳಿ ಹೇಳುವ ಕೆಲಸ ಜರೂರಾಗಿ ಆಗಬೇಕಿದೆ. ಎಲ್ಲಕ್ಕೂ ಮುಖ್ಯವಾಗಿ ಪಾಶ್ಚಾತ್ಯ ಆರ್ಥಿಕ ನೀತಿಯನ್ನ ನಾವು ಕಣ್ಣು ಮುಚ್ಚಿ ಅಪ್ಪಿಕೊಳ್ಳುವುದನ್ನ ನಿಲ್ಲಿಸಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com