ತಲೆಸುತ್ತು ಅನ್ನೋ ದೈಹಿಕ ಬಾಧೆ: ಏನಿದು ವರ್ಟಿಗೋ? (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

"ಡಾಕ್ಟ್ರೇ, ಇದ್ದಕ್ಕಿದ್ದಂತೆ ಬೆಳಗ್ಗೆ ಏಳುವಾಗ ತಲೆಸುತ್ತು ಬಂದು ಹಾಗೇ ಕುಳಿತುಕೊಂಡೆ. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಏನಾಗಿರಬಹುದು?" ಎಂದರು 45ರ ವಯೋಮಾನದ ಸರೋಜಾ.

Published: 14th August 2021 08:00 AM  |   Last Updated: 16th August 2021 03:08 PM   |  A+A-


vertigo (file pic)

ವರ್ಟಿಗೋ (ಸಾಂಕೇತಿಕ ಚಿತ್ರ)

Online Desk

"ಡಾಕ್ಟ್ರೇ, ಇದ್ದಕ್ಕಿದ್ದಂತೆ ಬೆಳಗ್ಗೆ ಏಳುವಾಗ ತಲೆಸುತ್ತು ಬಂದು ಹಾಗೇ ಕುಳಿತುಕೊಂಡೆ. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಏನಾಗಿರಬಹುದು?" ಎಂದರು 45ರ ವಯೋಮಾನದ ಸರೋಜಾ.

"ಮನೆಕೆಲಸದ ನಡುವೆ ಬೆಳಗ್ಗೆ ತಿಂಡಿ ತಿಂದಿರಲಿಲ್ಲ. ಹಾಗೇ ಸುಸ್ತಾದಂತಾಗಿ ತಲೆಸುತ್ತು ಬಂತು" ಎಂದರು 60 ವರ್ಷದ ಕಮಲಮ್ಮ.

"ಡಾಕ್ಟ್ರೇ, ಸಂಜೆ ದೇವಸ್ಥಾನಕ್ಕೆ ಹೋಗಿದ್ದೆವು. ಇವಳು ತಲೆಸುತ್ತು ಬಂದು ಬಿದ್ದೇಬಿಟ್ರು. ನೀರು ಚಿಮುಕಿಸಿ ಎಚ್ಚರಿಸಿದೆವು. ನಂತರ ವಾಂತಿಯಾಯಿತು. ಇದೇ ಮೊದಲ ಬಾರಿಗೆ ಹೀಗಾಗಿದ್ದು. ಏನಾಗಿದೆ ಹೇಳಿ? ಎಂದು ಲೋಕೇಶ್‌ ತಮ್ಮ ಪತ್ನಿ ಪೂಜಾಳ ಬಗ್ಗೆ ಹೇಳಿದರು. "ನನಗೆ ತುಂಬಾ ಸುಸ್ತು. ಆಗಾಗ ತಲೆ ತಿರುಗಿದಂತಾಗುತ್ತದೆ. ಇವತ್ತು ಕೆಲಸದ ವೇಳೆ ಹಾಗೆಯೇ ಬಿದ್ದುಬಿಟ್ಟೆ. ಎಲ್ಲರೂ ಗಾಬರಿಯಾಗಿದ್ದು" ಎಂದು ವಕೀಲ ರಾಜಾರಾಮ್‌ ನುಡಿದರು. ಇವರಷ್ಟೇ ಅಲ್ಲ, ಇನ್ನೂ ಅನೇಕ ಜನರು ತಲೆಸುತ್ತು ಎಂದು ಪರಿಹಾರ ಕೇಳಿಕೊಂಡು ಬರುತ್ತಲೇ ಇರುತ್ತಾರೆ. 

ಏನಿದು ವರ್ಟಿಗೋ?
ತಲೆಸುತ್ತು ಅನ್ವರ್ಥವಾದ ದೈಹಿಕ ಬಾಧೆ.  ತಲೆಸುತ್ತಿನಿಂದ ಬಳಲುವ ವ್ಯಕ್ತಿಗೆ ತಾನೇ ಅಥವಾ ತನ್ನ ಪರಿಸರ ತನ್ನ ಸುತ್ತ ಸುತ್ತುತ್ತಿರುಂತೆ ಅನುಭವ ಮುಖ್ಯ ಲಕ್ಷಣವಾಗಿರುವ ಸ್ಥಿತಿ.  ಅವರಿಗೆ ಏನಾಗುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ.

ತಲೆಸುತ್ತು ಅನಾರೋಗ್ಯದ ಲಕ್ಷಣವಾದರೂ ಕೆಲವೊಮ್ಮೆ ಅರೋಗ್ಯಕರ ಸ್ಥಿತಿಯಲ್ಲಿದ್ದಾಗಲೂ ತಲೆಸುತ್ತು ಬರಬಹುದು. ಇದನ್ನು ʼವರ್ಟಿಗೋʼ (Vertigo) ಎಂದು ಗುರುತಿಸುತ್ತಾರೆ. ತಲೆಯ ಸಮತೋಲನ ಸ್ಥಿತಿ ಒಳ್ಳೆಯ ಆರೋಗ್ಯವಂತ ವ್ಯಕ್ತಿಯ ಲಕ್ಷಣ. ಆದರೆ ಈ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ದೇಹದ ಮೂರು ಕೆಲಸಗಳು ಸರಿಯಾಗಿದ್ದರೆ ತಲೆಯ ಸಮತೋಲನ ಸ್ಥಿತಿ ಸರಿ ಇರುತ್ತದೆ. ಅವೆಂದರೆ ಉತ್ತಮ ದೃಷ್ಟಿ, ದೇಹದ ಸ್ಥಿತಿಯನ್ನು ಅರಿತುಕೊಳ್ಳುವಿಕೆ ಹಾಗೂ ಒಳಕಿವಿಯ ಭಾಗದಲ್ಲಿರುವ ಸೂಕ್ಷ್ಮವಾಹಕಗಳು. ಹಾಗಾಗಿ ಸಮಸ್ಥಿತಿಯ ಸಮಸ್ಯೆ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಅದು ತನ್ನಿಂದ ತಾನೇ ವಾಸಿಯಾಗಿ ಬಿಡುತ್ತದೆ. ಆದರೆ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಯಾಗಿಯೂ ಪರಿಣಮಿಸಲೂಬಹುದು.

ಪುರುಷರು ಮತ್ತು ಮಹಿಳೆಯರು ಯಾರಿಗಾದರೂ ತಲೆಸುತ್ತು ಬರಬಹುದು. ತಲೆ ಸುತ್ತು, ತಲೆ ತಿರುಗುವುದು, ತಲೆ ಚಕ್ಕರ್, ಇತ್ಯಾದಿ ಪದಗಳನ್ನು ಜನರು ತಮ್ಮ ಸಂಕಟ ಹೇಳಿಕೊಳ್ಳಲು ಬಳಸುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ತಲೆ ತಿರುಗುವಿಕೆಯ ಜೊತೆಗೆ ದೃಷ್ಟಿ ಮಂದವಾಗುವಿಕೆ, ಶ್ರವಣ ಶಕ್ತಿಯು ಕುಂಠಿತವಾಗುವಿಕೆ, ಮಾತನಾಡಲು ಕಷ್ಟವಾಗುವಿಕೆ ಮತ್ತು ಎದೆ ಬಡಿತ ಏರು ಪೇರಾಗುವುದು ಕಂಡು ಬರುತ್ತದೆ.  ಕೆಲವೊಂದು ಅಲರ್ಜಿಗಳು ಕಿವಿಯ ಒಳ ಭಾಗದಲ್ಲಿ ಏರು ಪೇರು ಮಾಡಿ ಸಮತೋಲನವನ್ನು ತಪ್ಪಿಸಿ, ತಲೆ ಸುತ್ತುವಿಕೆಯನ್ನುಂಟುಮಾಡುತ್ತವೆ.

ತಲೆಸುತ್ತು ಬರಲು ಕಾರಣಗಳು
ತಲೆಸುತ್ತು ಅನೇಕ ಕಾರಣಗಳಿಂದ ಬರಬಹುದು. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚು ಇಲ್ಲವೇ ಕಡಿಮೆ ಆಗುವುದರಿಂದ, ರಕ್ತದ ಒತ್ತಡ (ಬಿಪಿ) ಕಡಿಮೆ ಆಗುವುದರಿಂದ, ಮೈಗ್ರೇನ್‌ ಇದ್ದಲ್ಲಿ, ಬಿಸಿಲಿನಲ್ಲಿ ಹೆಚ್ಚು ತಿರುಗಾಡಿದಾಗ, ಉಪವಾಸವಿದ್ದಾಗ, ಮೆದುಳಿನಲ್ಲಿ ಗಡ್ಡೆ ಇದ್ದಲ್ಲಿ, ದೇಹದಲ್ಲಿ ನಿರ್ಜಲೀಕರಣವಾದಾಗ, ಕಿವಿಯಲ್ಲಿ ತೊಂದರೆಯಿದ್ದಲ್ಲಿ ಹೀಗೆ ಹಲವಾರು ಕಾರಣಗಳಿಂದ ʼತಲೆಸುತ್ತುʼ ಬರುತ್ತದೆ. ತಲೆಸುತ್ತು ಸ್ವತಃ ಒಂದು ರೋಗವಾಗಿರದೆ ಇತರ ರೋಗಸ್ಥಿತಿಗಳಲ್ಲಿ ಅನುಷಂಗಿಕವಾಗಿಯೋ ಪ್ರಾಸಂಗಿಕವಾಗಿಯೋ ಕಂಡುಬರುವ ಒಂದು ಲಕ್ಷಣವಾಗಿರುವುದೇ ಸಾಮಾನ್ಯ. 

ಕಿವಿ ರೋಗಗಳಲ್ಲಿ ತಲೆಸುತ್ತು: ಒಳಕಿವಿಯ ಉರಿಯೂತ ತಲೆಸುತ್ತಿನ ಒಂದು ಸಾಮಾನ್ಯ ಕಾರಣ. ಕೆಲವು  ಔಷಧಗಳ ಸೇವನೆಯಿಂದ ಮತ್ತು ನಡುಕಿವಿಯ ಹಾಗೂ ದೀರ್ಘಕಾಲಿಕ ಉರಿಯೂತಗಳಿಂದ ಒಳಕಿವಿಯ ಉರಿಯೂತ ಉಂಟಾಗಬಹುದು. ತಲೆಗೆ ತೀವ್ರ ಪೆಟ್ಟು ಬಿದ್ದರೆ ಒಳಕಿವಿಯೊಳಗೆ ರಕ್ತಸ್ರಾವ ಕಡಿಮೆಯಾಗಿಯೊ ಹೆಚ್ಚಾಗಿಯೋ ಉಂಟಾಗಿ ಅದರಿಂದ ತಲೆಸುತ್ತು ಕಂಡುಬರಬಹುದು. ಯೂಸ್ಟೇಚಿಯನ್ ನಾಳ  ಅಥವಾ ಹೊರಗಿವಿನಾಳ ಇವುಗಳಲ್ಲಿ ಏನಾದರೂ ಅಡಚಣೆ ಉಂಟಾಗಿದ್ದರೂ ತಲೆಸುತ್ತಬಹುದು. ಹಾಗೆಯೇ ಮೂಗಿಗೆ ಸಂಬಂಧಿಸಿದ (ನೇಸಲ್ ಸೈನಸಸ್) ಮತ್ತು ಮೂಗಿನ ಧಮನಿಗಳ ರೋಗ ಸ್ಥಿತಿಗಳೂ ತಲೆಸುತ್ತಿಗೆ ಕಾರಣವಾಗಬಹುದು. ಮೆನಿಯೆರನ ರೋಗ ಎಂಬುದು ಒಳಕಿವಿಗೆ ಸಂಬಂಧಿಸಿದಂತೆ ತಲೆಸುತ್ತನ್ನು  ಉಂಟುಮಾಡುವ ಒಂದು ವಿಶೇಷ ಪರಿಸ್ಥಿತಿ. ಇದರಲ್ಲಿ ಪದೇ ಪದೇ ತಲೆಸುತ್ತು ಕಿವಿ ಗುಂಯ್‌ಗುಡುವುದು ಮತ್ತು ಕಿವಿ ಕೇಳಿಸದೆ ಇರುವುದು ವಿಶಿಷ್ಟ ಲಕ್ಷಣಗಳು.

ಕಣ್ಣಿನ ರೋಗಗಳಲ್ಲಿ ತಲೆಸುತ್ತು : ಕಣ್ಣಿನ ರೋಗಗಳಲ್ಲಿ ತಲೆಸುತ್ತು ಸ್ವಲ್ಪ ತೊಂದರೆಯನ್ನು ಉಂಟುಮಾಡುತ್ತದೆ. ಕನ್ನಡಕವನ್ನು ಅದರಲ್ಲಿಯೂ ಪ್ರಬಲ ಪೀನಮಸೂರವಿರುವ ಕನ್ನಡಕವನ್ನು ಮೊದಲ ಬಾರಿಗೆ ಉಪಯೋಗಿಸುವವರಲ್ಲಿ ತಲೆಸುತ್ತು ಬರುವುದು ಸಾಮಾನ್ಯ. ರೈಲು ಬಸ್ಸುಗಳಲ್ಲಿ ಸಂಚಾರ ಮಾಡುವಾಗ ಅನೇಕರಿಗೆ ತಲೆಸುತ್ತುವುದು ತಿಳಿದ ವಿಷಯವೇ.

ಮಿದುಳಿನ ಅನಾರೋಗ್ಯ ಸ್ಥಿತಿಗಳಲ್ಲಿ ತಲೆಸುತ್ತು: ಧಮನಿಗಳ ಅನಾರೋಗ್ಯ, ಅಪಸ್ಮಾರದ ಮುನ್ಸೂಚನೆಯಾಗಿ ಇಲ್ಲವೇ ಮೈಗ್ರೇನ್  ಎಂದು ಒಂದು ವಿಶಿಷ್ಟ ತಲೆನೋವಿನಲ್ಲಿ ಹಿರಿಮಸ್ತಿಷ್ಕಕ್ಕೆ ಸಂಬಂಧಪಟ್ಟಂತೆ ತಲೆಸುತ್ತು ಕಂಡುಬರುತ್ತದೆ. ಕಿರಿಮಸ್ತಿಷ್ಕ (ಸೆರಿಬೆಲ್ಲಮ್)ಕ್ಕೆ ಪೂರೈಕೆ ಆಗುವ ಅಪಧಮನಿಯಲ್ಲಿ ಅಡಚಣೆ ಉಂಟಾದಾಗ ತಲೆಸುತ್ತು ಉಂಟಾಗಬಹುದು. ಸಿಫಿಲಿಸ್ ಮುಂತಾದವುಗಳಿಂದ ಶಿರೋನರದ ಬಾಧೆಯಾದಾಗಲೂ ಮಿದುಳಿನಲ್ಲಿ  ಅದರ ಉಗಮಸ್ಥಾನದಲ್ಲಿ ಹಾಗೂ ಅದರ ನೆರೆಯಲ್ಲಿ ಧಮನಿಗಳು ಅನಾರೋಗ್ಯವಾಗಿದ್ದಾಗಲೂ ತಲೆಸುತ್ತು ಸಾಮಾನ್ಯ.

ನಿರ್ಜಲೀಕರಣ: ನಿರ್ಜಲೀಕರಣ ಸಹ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಅಂದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವುದು. ನಮ್ಮ ದೇಹದಲ್ಲಿ ಬಹುಪಾಲು ನೀರಿದೆ. ನೀರಿನ ಪ್ರಮಾಣ ಕಡಿಮೆ ಆದರೆ ತೊಂದರೆ. ಆದ್ದರಿಂದ ಬಿಸಿಲಿನಲ್ಲಿ ಎಲ್ಲೇ ಹೋಗುವುದಿದ್ದರೂ ಒಂದು ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗುವುದು ಒಳಿತು. ಯಾವಾಗಲೂ ಅಗತ್ಯ ಪ್ರಮಾಣದಷ್ಟು ನೀರನ್ನು ಸೇವಿಸುತ್ತಾ ಇರಬೇಕು. ಕೆಲಸ ಮಾಡುವಾಗ ಬಿಡುವು ಮಾಡಿಕೊಂಡು ನೀರು ಕುಡಿಯಿರಿ. ಜೊತೆಗೆ ಆರೋಗ್ಯಕರವಾದ ಜೀವನ ಶೈಲಿಯನ್ನು ಅನುಸರಿಸಿ.

ತಲೆಸುತ್ತು ಬರಲು ನಿಖರವಾದ ಕಾರಣಗಳು ಏನು ಎಂಬುದನ್ನು ತಿಳಿದುಕೊಳ್ಳಲು ವೈದ್ಯರನ್ನು ಕಾಣುವುದು ಮುಖ್ಯ. ಅದು ಸಾಮಾನ್ಯ ತಲೆಸುತ್ತೇ ಇರಲಿ ಅಥವಾ ಇನ್ಯಾವುದೇ ಇರಲಿ ಸ್ವಂತ ಔಷಧೋಪಚಾರ ಸಲ್ಲದು. 

ಆರೈಕೆ 
⦁ತಲೆಸುತ್ತು ಬಂದಾಗ ವಿಶ್ರಾಂತಿ ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕ. 
⦁ಸಕ್ಕಲೆ ಕಾಯಿಲೆ ಇದ್ದವರಿಗೆ ತಲೆಸುತ್ತು ಬಂದರೆ ಬೆಲ್ಲದ ಒಂದು ತುಂಡು, ಕಲ್ಲುಸಕ್ಕರೆ ಇಲ್ಲವೇ ಚಾಕೋಲೇಟ್‌ ಕೊಟ್ಟಲ್ಲಿ ಸರಿಯಾಗುತ್ತದೆ. 
⦁ ರಕ್ತದ ಒತ್ತಡ (ಬಿಪಿ) ಕಡಿಮೆ ಇರುವವರಲ್ಲಿ ತಲೆಸುತ್ತು ಬಂದರೆ ಚಿಟಕಿ ಉಪ್ಪನ್ನು ನೀರಿನೊಡನೆ ಬೆರೆಸಿ ಸೇವಿಸಬೇಕು. 
⦁ ಕಿವಿಯ ತೊಂದರೆಯಿದ್ದು, ತಲೆಸುತ್ತು ಬಂದಲ್ಲಿ ಕವಿ, ಮೂಗು, ಗಂಡಲು ತಜ್ಞರ ಬಳಿ ಹೋಗಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು. 
⦁ವಾಂತಿ ಬೇಧಿಯಾಗಿ ನಿರ್ಜಲೀಕರಣದಂದ ತಲೆಸುತ್ತು ಬಂದಲ್ಲಿ ಓಆರ್‌ಎಸ್‌, ಎಳನೀರು, ಹಣ್ಣಿನ ರಸ ಮತ್ತು ಗಂಜಿ ಕೊಟ್ಟರೆ ಸರಿಹೋಗುತ್ತದೆ. ಆದರೆ ತಲೆಸುತ್ತು ಮತ್ತು ತಲೆನೋವು ಇದ್ದು ವಾಂತಿಯಾಗುತ್ತಿದ್ದರೆ ನಿರ್ಲಕ್ಷ್ಯ ಮಾಡದೇ ಸ್ಕ್ಯಾನ್‌ ಮಾಡಿಸಿ ಗಡ್ಡೆ ಇದೆಯೇ ಎಂಬುದನ್ನು ಅರಿತುಕೊಳ್ಳುವುದು ಸೂಕ್ತ. ನರರೋಗತಜ್ಞರನ್ನು (ನ್ಯೂರಾಲಜಿಸ್ಟ್)‌ಕಂಡು ತಪಾಸಣೆ ಮಾಡಿಸಿಕೊಳ್ಳಬೇಕು. 
⦁ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದೇ ಇರುವುದು, ನೀರನ್ನು ಸರಿಯಾಗಿ ಕುಡಿಯದೇ ಇರುವುದು ಮತ್ತು ಊಟದ ಸಮಯದಲ್ಲಿ ಊಟವನ್ನು ಏನೇನೋ ಕಾರಣಗಳಿಗಾಗಿ ಮಾಡದೇ ಹಾಗೆಯೇ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. ಜೊತೆಗೆ ರಕ್ತ ಪರಿಚಲನೆ ನಿಧಾನವಾಗುತ್ತದೆ. ಇದರಿಂದಲೂ ತಲೆಸುತ್ತು ಬರಬಹುದು. 
⦁ಮದ್ಯಸೇವನೆ, ಉಪ್ಪು, ಕಾಫಿ ಮತ್ತು ತಂಬಾಕು ಸೇವನೆ ಆದಷ್ಟು ಕಡಿಮೆ ಮಾಡುವುದು. ತಾಪಮಾನದ ವೈಪರೀತ್ಯದಿಂದ ಅಥವಾ ನೀರು ಕಡಿಮೆಯಾದ ಕಾರಣದಿಂದ ಈ ಲಕ್ಷಣ ಉಂಟಾಗಿದ್ದರೆ ಸೂಕ್ತವಾಗಿ ನೀರು ಸೇವನೆ ಅಥವಾ ದ್ರವ ಸೇವನೆ ಮಾಡಬೇಕು. ಚಲಿಸುತ್ತಿರುವ ಬಸ್‌ಅಥವಾ ರೈಲಿನಲ್ಲಿ ಪುಸ್ತಕಗಳನ್ನು ಓದುವುದು ಅಥವಾ ಕಂಪ್ಯೂಟರ್ (ಲ್ಯಾಪ್‌ಟಾಪ್)‌ಬಳಸುವುದನ್ನು ಮಾಡಬಾರದು. ಕೆಲವು ರೀತಿಯ ವ್ಯಾಯಾಮ ಮಾಡುವುದರಿಂದ ದೈಹಿಕ ಸಮತೋಲನ ಕಾಪಾಡಿಕೊಳ್ಳಬಹುದು ಮತ್ತು ತಲೆನೋವು ಬರದಂತೆ ನೋಡಿಕೊಳ್ಳಬಹುದು. ಡಾ. ವಸುಂಧರಾ ಭೂಪತಿ

bhupathivasundhara@gmail.com


Stay up to date on all the latest ಅಂಕಣಗಳು news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp