ಹೊಸ ಜಾಗತಿಕ ಆಟದಲ್ಲಿ 'ಸೌದಿ ಅರೇಬಿಯಾ' ಆಗಬಹುದಾಗಿದ್ದ ಅಫ್ಘಾನ್, ವೆನಿಜುಯೆಲಾ ಆಗಿದ್ದೇಕೆ? (ಹಣಕ್ಲಾಸು)

ಹಣಕ್ಲಾಸು-273

-ರಂಗಸ್ವಾಮಿ ಮೂಕನಹಳ್ಳಿ

Published: 19th August 2021 07:00 AM  |   Last Updated: 19th August 2021 07:18 AM   |  A+A-


representational image

ಯುಎಸ್ ಅಧ್ಯಕ್ಷ ಜೋ ಬೈಡನ್, ಅಫ್ಘಾನಿಸ್ತಾನದ ಅಧ್ಯಕ್ಷರ ಕಚೇರಿಯಲ್ಲಿ ತಾಲೀಬಾನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ (ಸಾಂಕೇತಿಕ ಚಿತ್ರ)

ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ಇಂದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಿಂದೆ ಅಂದರೆ 1996 ರಿಂದ 2001 ರ ಸಮಯದಲ್ಲಿ ಕೂಡ ಅಫ್ಘಾನ್ ದೇಶವನ್ನ ಇವರು ತಮ್ಮ ಆಡಳಿತದಲ್ಲಿ ಹಿನ್ನೆಡಿಸಿದ್ದರು. 

ಈಗ ಮತ್ತೆ ಈ ರೀತಿಯ ಒಂದು ವಿದ್ಯಮಾನ ಜಗತ್ತನ್ನು ಅಚ್ಚರಿಯ ಕೂಪಕ್ಕೆ ತಳ್ಳಿದೆ. ಆದರೆ ಇವೆಲ್ಲವೂ ಒಂದು ದಿನದಲ್ಲಿ ಆಗುವ ವಿಷಯವಲ್ಲ. ಗಮನಿಸಿ ನೋಡಿ ಭಾರತವೂ ಸೇರಿದಂತೆ ಬಹಳಷ್ಟು ದೇಶಗಳು ಅಫ್ಘಾನಿಸ್ಥಾನದಲ್ಲಿ ಹಣವನ್ನ ಹೂಡಿಕೆ ಮಾಡಿವೆ. ಭಾರತದ ಮಟ್ಟಿಗಂತೂ ಅಫ್ಘಾನ್ ಒಳ್ಳೆ ಮಿತ್ರ ದೇಶ. ಜಾಗತಿಕ ಮಟ್ಟದ ಕಾರ್ಯತಂತ್ರದಲ್ಲಿ ಅದರಲ್ಲೂ ಸೌತ್ ಏಷ್ಯಾದಲ್ಲಿ ಅಫ್ಘಾನ್ ದೇಶಕ್ಕೆ ಇನ್ನಿಲ್ಲದ ಮಹತ್ವವಿದೆ. ಚೀನಾ ಹೇಗಾದರೂ ಮಾಡಿ ಅಫ್ಘಾನ್ ಮೇಲೆ ತನ್ನ ನಿಯಂತ್ರಣವನ್ನ ಹೊಂದಲು ಹವಣಿಸುತ್ತಿರುವುದು ಕೂಡ ಹೊಸ ವಿಷಯವೇನಲ್ಲ. ಎಲ್ಲಾ ವಿಷಯದಲ್ಲೂ ಫೇಲ್ಡ್ ನೇಷನ್ ಎಂದು ಹೆಸರು ಪಡೆದಿರುವ ಪಾಕಿಸ್ತಾನವನ್ನ ಅದು ಈಗಾಗಲೇ ತನ್ನ ನಿಯಂತ್ರಣದಲ್ಲಿ ಇಟ್ಟು ಕೊಂಡಿದೆ. ಅಫ್ಘಾನ್ ದೇಶವನ್ನ ಕೂಡ ತನ್ನ ತೆಕ್ಕೆಗೆ ತೆಗೆದುಕೊಂಡರೆ ವ್ಯಾಪಾರ, ವಹಿವಾಟು ಜೊತೆಗೆ ಅಲ್ಲಿರುವ ಅಪಾರ ಲಿಥಿಯಂ ಸಂಗ್ರಹಣೆ ಕೂಡ ತನ್ನದಾಗುತ್ತದೆ ಎನ್ನುವುದು ಅದರ ದೂರಾಲೋಚನೆ.

ಅಮೇರಿಕಾ ದೇಶ ತನ್ನ ಒಳಿತಿಗೆ ಸದಾ ಇತರ ದೇಶಗಳ ಬಲಿ ನೀಡುವುದು ಕೂಡ ಇಂದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗೆ ಜಗತ್ತು ಇನ್ನೊಂದು ದಶಕದಲ್ಲಿ 'ಆಯಿಲ್ ಆಧಾರಿತ ಸಮಾಜದಿಂದ' ಹೊರಬರುತ್ತದೆ ಎನ್ನುವುದು ತಿಳಿದಿದೆ. ಇಂದು ನಮ್ಮ ಜಗತ್ತು ನಡೆಯುತ್ತಿರುವುದು ಕಚ್ಚಾ ತೈಲದ ಮೇಲೆ, ಸೌದಿ ಅರೇಬಿಯಾ ಇದರ ಅನಭಿಷಕ್ತ ರಾಜ, ವೆನಿಜುಯೆಲಾ ಅತ್ಯಂತ ಹೆಚ್ಚು ತೈಲ ಸಂಗ್ರಹಣೆಯನ್ನ ಹೊಂದಿದ್ದೂ ಕೂಡ ಇಂದು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ ಇದಕ್ಕೆ ಕಾರಣ ಅಲ್ಲಿನ ನಾಯಕರ ಹಣದಾಸೆ ಮತ್ತು ಅಮೆರಿಕಾದ ಅತಿಯಾಸೆ. ಮೊದಲೇ ಹೇಳಿದಂತೆ ಜಗತ್ತು ಮೆಲ್ಲಗೆ ವಿದ್ಯುತ್ ಚಾಲಿತ ಅಥವಾ ವಿದ್ಯುತ್ ಅವಲಂಬಿತ ಸಮಾಜವಾಗುವತ್ತ ವಾಲುತ್ತಿದೆ. ಅಂದರೆ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ವಿದ್ಯುತ್ ಅವಲಂಬಿತವಾಗಲು ಬೇಕಾಗುವ ಬ್ಯಾಟರಿಗಳನ್ನ ತಯಾರಿಸಲು ಲಿಥಿಯಂ ಎನ್ನುವ ಅತ್ಯಂತ ಮೃದು ಲೋಹವನ್ನ ಬಳಸಲಾಗುತ್ತದೆ. ಅಫ್ಘಾನಿಸ್ಥಾನ ಜಗತ್ತಿನ ಅತಿ ಹೆಚ್ಚು ಲಿಥಿಯಂ ಹೊಂದಿರುವ ದೇಶವಾಗಿದೆ. ಈ ಕಾರಣಕ್ಕಾಗಿಯೆ ಅಮೇರಿಕಾ ಬಹಳ ಹಿಂದೆಯೇ ಅಫ್ಘಾನ್ ದೇಶವನ್ನ ಹೊಸ ಜಾಗತಿಕ ಆಟದ ಸೌದಿ ಅರೇಬಿಯಾ ಎಂದು ಕರೆದಿತ್ತು.

ತಾಲಿಬಾನಿಗಳನ್ನ ಮತ್ತೆ ಅಧಿಕಾರಕ್ಕೆ ತರಲು ಅಮೆರಿಕಾ ಮೊದಲೇ ಸಿದ್ಧತೆ ಮಾಡಿಕೊಂಡಿತ್ತೆ?

ನಮಗೆಲ್ಲಾ ತಾಲಿಬಾನಿಗಳು ಇಂದು ಅಫ್ಘಾನ್ ದೇಶವನ್ನ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಅನ್ನಿಸುತ್ತದೆ ಆದರೆ ಅಮೇರಿಕಾ ಇದಕ್ಕೆ ವರ್ಷದ ಮುಂಚೆಯೇ ಒಂದು ಒಪ್ಪಂದ ಮಾಡಿಕೊಂಡು ಅದಕ್ಕೆ ಒಂದು ಕರಾರು ಸಹಿಯನ್ನ ಕೂಡ ಮಾಡಿತ್ತು! ಹೌದು 29ನೇ ಫೆಬ್ರವರಿ 2020ರಲ್ಲಿ ' ಅಫ್ಘಾನಿಸ್ಥಾನಕ್ಕೆ ಮರಳಿ ಶಾಂತಿ ತರುವ ಉದ್ದೇಶ' ಎನ್ನುವ ಒಂದು ಕರಾರು ಪತ್ರವನ್ನ ಅಫ್ಘಾನಿಸ್ಥಾನದ ಎಲ್ಲಾ ವಿಷಯಗಳ ಮೇಲುಸ್ತುವಾರಿ ಹೊಂದಿದ್ದ ಅಮೆರಿಕಾದ ರೆಪ್ರೆಸೆಂಟಿಟಿವ್ ಮತ್ತು ತಾಲಿಬಾನಿನ ಮುಖ್ಯ ನೆಗೋಷಿಯೇಟರ್ ನಡುವೆ ಕತಾರ್ ದೇಶದ ದೋಹಾದಲ್ಲಿ ಸಹಿ ಹಾಕಲಾಗಿತ್ತು. 

ಮೇಲ್ನೋಟಕ್ಕೆ ಇದು ಅಫ್ಘಾನ್ ದೇಶದಲ್ಲಿ ಶಾಂತಿ ತರುವ ಉದ್ದೇಶವಾಗಿ ಕಂಡರೂ ತಾಲಿಬಾನಿಗಳನ್ನ ಮತ್ತೆ ಅಧಿಕಾರಕ್ಕೆ ತರುವುದು ಇದರ ಮುಖ್ಯ ಉದ್ದೇಶ.

ಇದರಿಂದ ಅಮೆರಿಕಾ ದೇಶಕ್ಕೆ ಏನು ಪ್ರಯೋಜನ ?

  1. ಗಮನಿಸಿ ಅಮೇರಿಕಾ ಈ ಕೆಲಸವನ್ನ ಮಾಡದಿದ್ದರೆ ಚೀನಾ ಖಂಡಿತ ಈ ಕೆಲಸವನ್ನ ಮಾಡುತ್ತಿತ್ತು. ಚೀನಾ ನಿಯಂತ್ರಣ ಹೊಂದುವ ಮೊದಲೇ ಅಮೇರಿಕಾ ಇದರ ಮೇಲೆ ನಿಯಂತ್ರಣ ಪಡೆದುಕೊಂಡಿದೆ. ಹೀಗಾಗಿ ಇದು ಪರೋಕ್ಷವಾಗಿ ಚೀನಾದ ಮೇಲಿನ ಸಣ್ಣ ಗೆಲುವು ಕೂಡ ಹೌದು.
  2. ಅಪಾರವಾಗಿರುವ ಲಿಥಿಯಂ ಮೇಲಿನ ನಿಯಂತ್ರಣ ಕೂಡ ಪಡೆದುಕೊಂಡಿದೆ. ಹೀಗಾಗಿ ಮುಂಬರುವ ಹೊಸ ಜಾಗತಿಕ ಆಟದಲ್ಲಿ ಕೂಡ ಪಾರಮ್ಯ ಮೆರೆಯಲು ಸಹಾಯಕವಾಗುತ್ತದೆ.
  3. ಸೌತ್ ಏಷ್ಯಾದಲ್ಲಿ ಚೀನಾ ನಂತರ ಅತ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ಭಾರತವನ್ನ ಕೂಡ ನಿಯಂತ್ರಿಸುವುದು ಸುಲಭವಾಗುತ್ತದೆ. ಏಕೆಂದರೆ ಭಾರತ ಅಫ್ಘಾನ್ ನಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನ ಮಾಡಿ ಅಲ್ಲಿನ ಸರಕಾರದ ಮತ್ತು ಜನತೆಯ ಮನಸ್ಸನ್ನ ಗೆಲ್ಲುವ ಕಾರ್ಯ ಮಾಡಿತ್ತು.
  4. ಕೇವಲ ಸೌತ್ ಏಷ್ಯಾ ಎಂದಲ್ಲ, ಜಾಗತಿಕ ಕಾರ್ಯತಂತ್ರದಲ್ಲಿ ತನ್ನ ಪ್ರಸ್ತುತತೆ ಉಳಿಸಿಕೊಳ್ಳಲು ಮತ್ತು ಕುಸಿದಿರುವ ತನ್ನ ಆರ್ಥಿಕತೆಯನ್ನ ಮತ್ತೆ ಸರಿದಾರಿಗೆ ತರಲು ಇದು ಸಹಾಯಕವಾಗುತ್ತದೆ.

ನಿಮಗೆಲ್ಲಾ ಕುರ್ದಿಶ್ ಎನ್ನುವ ಜನಾಂಗದ ಬಗ್ಗೆ ತಿಳಿದಿರುತ್ತದೆ. ಸಿರಿಯಾ ದೇಶದಲ್ಲಿ ಕಲಹವಾದಾಗ ಅಮೇರಿಕಾ ಕುರ್ದಿಶ್ ಪರವಾಗಿ ನಿಂತು ಅವರಿಗೆ ಸಹಾಯ ನೀಡಿತ್ತು. ಎಲ್ಲವೂ ಸರಿಯಾಗಿತ್ತು, ಆದರೆ ಅಮೇರಿಕಾ ದೇಶಕ್ಕೆ ಯಾವಾಗ ತನ್ನ ಲಾಭ ಮುಕ್ತಾಯವಾಯಿತು ಎನ್ನಿಸಿತು ಆಗ ಅದು ತನ್ನ ಬೆಂಬಲವನ್ನ ವಾಪಸ್ಸು ಪಡೆಯಿತು. ಆ ನಂತರ ಟರ್ಕಿಶ್ ಸೇನೆ ಸಿರಿಯಾದಲ್ಲಿ ನಡೆಸಿದ ಮಾರಣಹೋಮವನ್ನ ಜಾಗತಿಕ ಮಟ್ಟದಲ್ಲಿ ಕಾರ್ಯಾಚರಣೆ ಎನ್ನುವ ಹೆಸರಲ್ಲಿ ಮುಚ್ಚಿ ಹಾಕಲಾಯಿತು. ಈಗ ಅಮೇರಿಕಾ ಮದ್ದು ಗುಂಡುಗಳ ಸಂಗ್ರಹವನ್ನ ತಾಲಿಬಾನಿಗಳ ಕೈಲಿಟ್ಟು, ತನ್ನೆಲ್ಲಾ ಸೈನಿಕರನ್ನ ವಾಪಸ್ಸು ಕರೆಸಿಕೊಂಡು, ಅಫ್ಘಾನ್ ಸರಕಾರವನ್ನ ಮಧ್ಯದಲ್ಲಿ ಕೈ ಬಿಟ್ಟಿದೆ. ಸಿರಿಯಾದಲ್ಲಿ ಕುರ್ದಿಷ್ಗಳಿಗಾದ ಗತಿ ಅಫ್ಘಾನ್ ನ ಜನ ಸಮಾನ್ಯರದ್ದು ಕೂಡ ಆಗಲಿದೆ. ಗಮನಿಸಿ ಇಷ್ಟೆಲ್ಲಾ ಆಗುತ್ತಿರುವುದು 'ಅಮೆರಿಕಾದ ಸ್ವಾತಂತ್ರ್ಯ ಮತ್ತು ಅಭಿವೃದ್ಧಿಗಾಗಿ' ಎನ್ನುವ ಘೋಷವಾಕ್ಯದಲ್ಲಿ. ಇದು ವಿಶ್ವದ ದೊಡ್ಡಣ್ಣ ಪಟ್ಟವನ್ನ ಉಳಿಕೊಳ್ಳಲು ಚೀನಾದ ಜೊತೆಗಿನ ಗುದ್ದಾಟದ ಮುಂದುವರಿದ ಭಾಗವೆಂದು ಕೂಡ ಹೇಳಬಹದು.

ಭಾರತದ ಪಾತ್ರವೇನು? ಅಫ್ಘಾನ್ ನಲ್ಲಿರುವ ಭಾರತದ ಹೂಡಿಕೆಯ ಗತಿಯೇನು?

ಅಫ್ಘಾನ್ ಭಾರತಕ್ಕೆ ಬಹಳ ಹತ್ತಿರವಿರುವ ಕಾರಣ ಬಹಳ ಹಿಂದಿನಿಂದಲೂ ವ್ಯಾಪಾರ ಮತ್ತು ವಹಿವಾಟು ಸಂಬಂಧವನ್ನ ಹೊಂದಿದೆ. 2001ರಲ್ಲಿ ಅಫ್ಘಾನ್ ತಾಲಿಬಾನಿಗಳಿಂದ ಮತ್ತೆ ಸ್ವತಂತ್ರ ಪಡೆದ ನಂತರ ಭಾರತ ಸರಕಾರ ಅಫ್ಘಾನ್ ಪುನರ್ ನಿರ್ಮಾಣದಲ್ಲಿ ಬಹಳಷ್ಟು ಆಸ್ಥೆಯನ್ನ ತೂರಿದೆ. 

ಅಫ್ಘಾನಿಸ್ಥಾನದ 34 ಪ್ರಾಂತ್ಯಗಳಲ್ಲಿ 400ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಲ್ಲಿ ಭಾರತ ಹಣವನ್ನ ಹೂಡಿದೆ. ಇಲ್ಲಿಯವರೆಗಿನ ಲೆಕ್ಕಾಚಾರದ ಪ್ರಕಾರ 3 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಭಾರತ ಅಫ್ಘಾನ್ ದೇಶದಲ್ಲಿ ಹೂಡಿಕೆಯನ್ನ ಮಾಡಿದೆ. ಬಹಳಷ್ಟು ಜನ ಭಾರತದಲ್ಲೇ ಇಷ್ಟೊಂದು ಬಡತನವಿದೆ ಇನ್ನು ಅಫ್ಘಾನ್ ದೇಶಕ್ಕೆ ಇಷ್ಟೊಂದು ಹಣವನ್ನ ಸುರಿಯುವ ಅಗತ್ಯವೇನಿತ್ತು? ಎನ್ನುವ ಪ್ರಶ್ನೆಯನ್ನ ಕೇಳುತ್ತೀರಿ. ಜಾಗತಿಕ ರಾಜಕೀಯ ಚದುರಂಗದಾಟದಲ್ಲಿ ಪ್ರಸ್ತುತತೆ ಉಳಿಕೊಳ್ಳಲು ಈ ಕಾರ್ಯಗಳನ್ನ ಮಾಡಬೇಕಾಗುತ್ತದೆ.

ಭಾರತ ಅಫ್ಘಾನ್ ನಲ್ಲಿ ತೊಡಗಿಸಿಕೊಂಡ ಕಾಮಗಾರಿಗಳು 4೦೦ ಕ್ಕೂ ಹೆಚ್ಚು ಅವುಗಳಲ್ಲಿ ಅತ್ಯಂತ ಪ್ರಮುಖವಾದವು:

ಸಲ್ಮಾ ಡ್ಯಾಮ್: ಇದನ್ನ ಇಂಡೋ-ಅಫ್ಘಾನ್ ಫ್ರೆಂಡ್ ಶಿಪ್ ಡ್ಯಾಮ್ ಅಂತಲೂ ಕರೆಯುತ್ತಾರೆ. ಹೈಡ್ರೊ ಪವರ್ ಮತ್ತು ನೀರಾವರಿ ಯೋಜನೆಗೆ ಎಂದು ಕಟ್ಟಲಾದ ಈ ಅಣೆಕಟ್ಟಿಗೆ ತಗುಲಿದ ಅಂದಾಜು ವೆಚ್ಚ 275 ಮಿಲಿಯನ್ ಅಮೆರಿಕನ್ ಡಾಲರ್. ತಾಲಿಬಾನಿಗಳ ನಿರಂತರ ಕಿರುಕುಳದ ಮಧ್ಯೆಯೂ ಭಾರತ ಇದನ್ನ ಯಶಸ್ವಿಯಾಗಿ ಮಗಿಸಿದೆ.

ಜರಾಂಜ್-ಡೆಲಾರಾಮ್ ಹೈವೇ: ಅಫ್ಘಾನ್ ಮತ್ತು ಇರಾನ್ ಸರಹದ್ದಿನಲ್ಲಿ 218 ಕಿಲೋಮೀಟರ್ ಉದ್ದದ ಈ ಹೈವೇ ನಿರ್ಮಾಣಕ್ಕೆ ಭಾರತ ಹೂಡಿರುವ ಹಣ 150 ಮಿಲಿಯನ್ ಅಮೆರಿಕನ್ ಡಾಲರ್. ಭಾರತವು ಅಫ್ಘಾನ್ ನೊಂದಿಗೆ ವ್ಯಾಪಾರ ಮಾಡಲು ಪಾಕಿಸ್ತಾನವನ್ನ ಆಶ್ರಯಿಸಬೇಕು. ಏಕೆಂದರೆ ಅಫ್ಘಾನ್ ಲ್ಯಾಂಡ್ ಲಾಕ್ ದೇಶವಾಗಿದೆ, ಪಾಕಿಸ್ತಾನ ಕೊಡುವ ಕಿರಿಕಿರಿ ತಪ್ಪಿಸಿಕೊಳ್ಳಲು ಮತ್ತು ವ್ಯಾಪಾರ ವಹಿವಾಟು ವೃದ್ಧಿಸಕೊಳ್ಳಲು ಭಾರತ ಈ ಹೈವೇಯನ್ನ ನಿರ್ಮಿಸಿದೆ. ಈ ವರ್ಷ ಒಂದೂವರೆ ಬಿಲಿಯನ್ ಅಮೆರಿಕನ್ ಡಾಲರ್ ವ್ಯಾಪಾರ ವಹಿವಾಟು ಭಾರತ ದಾಖಲಿಸಿದೆ. ಈ ಸಂಖ್ಯೆಯನ್ನ ಬಹಳಷ್ಟು ಹೆಚ್ಚಿಸಿಕೊಳ್ಳುವ ಅವಕಾಶ ಇಂದಿಗೆ ಮಸುಕಾಗಿದೆ.

ಪಾರ್ಲಿಮೆಂಟ್: ಅಫ್ಘಾನ್ ದೇಶದ ಪಾರ್ಲಿಮೆಂಟ್ ಭವನವನ್ನ ಕೂಡ ಕಟ್ಟಿರುವುದು ಭಾರತ. 90 ಮಿಲಿಯನ್ ಅಮೆರಿಕನ್ ಡಾಲರ್ ವ್ಯಯ ಮಾಡಿ ಈ ಭವನವನ್ನ ಕಟ್ಟಲಾಗಿದೆ. 2015 ರಲ್ಲಿ ಇದನ್ನ ಲೋಕಾರ್ಪಣೆ ಮಾಡಲಾಯಿತು. ಇದರ ಒಂದು ಭಾಗಕ್ಕೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನ ಇಟ್ಟಿರುವುದು ವಿಶೇಷವಾಗಿದೆ.

ಇದರ ಜೊತೆಗೆ ಟ್ರಾನ್ಸ್ಪೋರ್ಟಷನ್, ಹೆಲ್ತ್ ಹೀಗೆ ಅನೇಕ ಕ್ಷೇತ್ರಗಳಲ್ಲಿ ಭಾರತ ಅಫ್ಘಾನ್ ದೇಶದೊಂದಿಗೆ ಕೈ ಜೋಡಿಸಿದೆ. ಸದ್ಯದ ಮಟ್ಟಿಗೆ 80 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ 20 ಲಕ್ಷ ಜನರಿಗೆ ಕುಡಿಯುವ ನೀರಿನ ಯೋಜನೆ ಜೊತೆಗೆ ನೂರಕ್ಕೂ ಹೆಚ್ಚಿನ ಸಮುದಾಯದ ಒಳಿತಿಗೆ ಯೋಜನೆಗಳಲ್ಲಿ ಕಾರ್ಯ ನಡೆಸುತ್ತಿದೆ. 

ತಾಲಿಬಾನಿಗಳಿಂದ ದಾಳಿಗೆ ಒಳಗಾಗಿದ್ದ ಅನೇಕ ಹೆರಿಟೇಜ್ ಜಾಗಗಳ ಪುನರುಜ್ಜೀವನಕ್ಕೆ ಕೂಡ ಭಾರತ ಸರಕಾರ ಬಹಳಷ್ಟು ಸಹಾಯವನ್ನ ಮಾಡಿದೆ.

ಸದ್ಯದ ಮಟ್ಟಿಗೆ ಚೀನಾ ಬಹಿರಂಗವಾಗಿ ತಾಲಿಬಾನ್ ಸರಕಾರವನ್ನ ಮಾನ್ಯ ಮಾಡಿದೆ. ತಾಲಿಬಾನ್ ಸರಕಾರವನ್ನ ಒಪ್ಪಿಕೊಂಡಿದೆ. ಅದಕ್ಕೆ ಅದರ ಲಾಭದ ಚಿಂತೆಯಷ್ಟೆ. ಪಾಕಿಸ್ತಾನ ಮತ್ತು ಚೀನಾ ದೇಶಗಳು ತಾಲಿಬಾನ್ ಸರಕಾರದ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿವೆ. ಹೀಗಾಗಿ ಈ ಪ್ರದೇಶದಲ್ಲಿ ಇನ್ನಷ್ಟು ಹೆಚ್ಚಿನ ಅಸ್ಥಿರತೆ ಹೆಚ್ಚಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಹೂಡಿಕೆ ಅತಂತ್ರ ಎಂದು ಹೇಳಬಹುದು. ಆದರೆ ಮುಂಬರುವ ದಿನಗಳಲ್ಲಿ ಭಾರತದ ನಡೆ ಏನಿರಬಹುದು ಎನ್ನುವುದರ ಮೇಲೆ ಕೂಡ ಹೂಡಿಕೆಯ ಭವಿಷ್ಯದ ನಿಖರತೆ ಗೊತ್ತಾಗುತ್ತದೆ.

ಕೊನೆ ಮಾತು: ಇಂದಿನ ದಿನಗಳಲ್ಲಿ ಹೆಚ್ಚಿನ ನೈಸರ್ಗಿಕ ಸಂಪತ್ತು ಹೊಂದಿರುವುದು ಮತ್ತು ದೇಶದಲ್ಲಿ ರಾಜಕೀಯ ಅರಾಜಕತೆ ಇರುವುದು ಶಾಪ ಎನ್ನುವಂತಾಗಿದೆ. ವೆನಿಜುಯೆಲಾ ಇದಕ್ಕೊಂದು ತಾಜಾ ಉದಾಹರಣೆ. ಲಿಥಿಯಂ ಎನ್ನುವ ಲೋಹದ ಸಂಗ್ರಹಣೆ ಅತಿ ಹೆಚ್ಚಿರುವುದು ಅಫ್ಘಾನ್ ದೇಶದಲ್ಲಿ, ಇದರ ಮೇಲಿನ ನಿಯಂತ್ರಣಕ್ಕೆ ಚೀನಾ ಅಮೇರಿಕಾ-ಭಾರತ-ರಷ್ಯಾ ಮತ್ತು ಬ್ರಿಟನ್ ದೇಶಗಳು ಹೊಡೆದಾಟಕ್ಕೆ ಬಿದ್ದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅದರಲ್ಲೂ ಅಮೇರಿಕಾ ಮತ್ತು ಚೀನಾ ದೇಶಗಳು ಮುಂಚೂಣಿಯಲ್ಲಿವೆ. ಭಾರತ ಎಂದಿನಂತೆ ಅಷ್ಟೊಂದು ತೀವ್ರತೆಯನ್ನ ತೋರದಿದ್ದರೂ ಹೂಡಿಕೆ, ಸಹಾಯ ಇವೆಲ್ಲವೂ ಬೇರೆ ರೀತಿಯಲ್ಲಿ ಅಫ್ಘಾನ್ ಮೇಲೆ ನಿಯಂತ್ರಣ ಹೊಂದಲು ನಡೆಸಿದ ಕಸರತ್ತು ಎನ್ನುವುದು ಕೂಡ ಮುಚ್ಚಿಡುವ ವಿಷಯವೇನಲ್ಲ. ಇಷ್ಟೊಂದು ದೊಡ್ಡ ಮಟ್ಟದ ಜಾಗತಿಕ ರಾಜಕೀಯದಲ್ಲಿ ಹಣದ್ದೇ ಕಾರುಬಾರು. ಜಾಗತಿಕ ವಿತ್ತ ಜಗತ್ತಿನ ಮೇಲೆ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತಕ್ಕೆ ನಡೆಯುವ ಈ ಸಂಘರ್ಷಗಳಲ್ಲಿ ಹಿಂದಿನ ನಿಜವಾದ ಅಂಶಗಳು ಸಾಮಾನ್ಯ ಜನತೆಗೆ ಇಂದಿನ ಮಾಹಿತಿ ತಂತ್ರಜ್ಞಾನದ ಉಚ್ಛ್ರಾಯ ದಿನಗಳಲ್ಲೂ ತಲುಪುವುದಿಲ್ಲ. ಜನ ಸಾಮಾನ್ಯನ ಭಾವನೆಗೆ ಬೆಂಕಿ ಹಾಕಲು ಧರ್ಮದ ಆಸರೆ ಎಂದಿಗೂ ಇದ್ದೆ ಇರುತ್ತದೆ ಅಲ್ಲವೇ? ಜಾಗತಿಕ ರಾಜಕೀಯದಲ್ಲಿ ಹೊಸ ಸೌದಿ ಅರೇಬಿಯಾ ಆಗಬಹುದಾಗಿದ್ದ ಅಫ್ಘಾನ್ ಹಳೆಯ ದೈತ್ಯ ಶಕ್ತಿಗಳ ಚಂದುರಂಗದಾಟದಲ್ಲಿ ವೆನಿಜುಯೆಲಾ ಆಗಿ ಪರಿವರ್ತನೆ ಆಗುತ್ತಿರುವುದು ಮಾತ್ರ ನೋವು ತರಿಸುವ ಸಂಗತಿ. ತನ್ನಲ್ಲಿರುವ ನೈಸರ್ಗಿಕ ಸಂಪತ್ತು ಅದಕ್ಕೆ ಮುಳುವಾಗಿದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp