ಭಾರತದಲ್ಲಿ ಮಾಸ್ಟರ್ ಕಾರ್ಡ್ ನಿಷೇಧವೇಕೆ?; ಡಿಜಿಟಲೀಕರಣದ ಕರಾಳ ಸತ್ಯ! (ಹಣಕ್ಲಾಸು)

ಹಣಕ್ಲಾಸು-273-ರಂಗಸ್ವಾಮಿ ಮೂಕನಹಳ್ಳಿ
ಭಾರತದಲ್ಲಿ ಮಾಸ್ಟರ್ ಕಾರ್ಡ್ ನಿಷೇಧ
ಭಾರತದಲ್ಲಿ ಮಾಸ್ಟರ್ ಕಾರ್ಡ್ ನಿಷೇಧ

ಇದೇ ಗುರುವಾರ (26 ರಿಂದ)ದಿಂದ ಮಾಸ್ಟರ್ ಕಾರ್ಡ್ ಭಾರತದಲ್ಲಿ ತನ್ನ ಹೊಸ ಗ್ರಾಹಕರನ್ನ ತೆಗೆದುಕೊಳ್ಳುವಂತಿಲ್ಲ ಎನ್ನುವ ಸುದ್ದಿ ಅರ್ಥ ಲೋಕದಲ್ಲಿ ಗಿರಕಿ ಹೊಡೆಯುತ್ತಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಮಾಸ್ಟರ್ ಕಾರ್ಡ್ ಗುರುವಾರದಿಂದ ಡೆಬಿಟ್, ಕ್ರೆಡಿಟ್ ಅಥವಾ ಯಾವುದೇ ರೀತಿಯ ಪ್ರಿಪೇಯ್ಡ್ ಕಾರ್ಡ್ ಗಳನ್ನ ವಿತರಿಸುವಂತಿಲ್ಲ. ಈ ರೀತಿಯ ರದ್ದತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ಪ್ರಕಟಣೆ ಹೊರಡಿಸಿ "ಬ್ಯಾನ್ ತೆಗೆದಿದ್ದೇವೆ" ಎಂದು ಹೇಳುವವರೆಗೆ ಮುಂದುವರಿಯಲಿದೆ. 

ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ "ಮಾಸ್ಟರ್ ಕಾರ್ಡ್ ಸಂಸ್ಥೆಗೆ 2018 ರಿಂದ ಇಲ್ಲಿಯವರೆಗೆ ಬದಲಾದ ರೀತಿ ನೀತಿಗಳಿಗೆ ಹೊಂದಿಕೊಳ್ಳಲು ಸಮಯ, ಅವಕಾಶವನ್ನ ನೀಡಿದ್ದೆವು, ಹೀಗಿದ್ದೂ ಅವರು ನಮ್ಮ ಹೊಸ ನಿಯಮಾವಳಿಗಳನ್ನ ಅಳವಡಿಸಿಕೊಳ್ಳಲು ತಡ ಮಾಡಿದ್ದರ ಫಲಿತಾಂಶವಿದು" ಎಂದು ಹೇಳಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಹೊಸ ನಿಯಮಾವಳಿ:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯದವರ ಹೊಸ ನಿಯಮಾವಳಿಗಳ ಪ್ರಕಾರ ಭಾರತೀಯ ಗ್ರಾಹಕರ ಮಾಹಿತಿಯನ್ನ ಭಾರತದಲ್ಲಿ ಇರುವ ಸರ್ವರ್ ನಲ್ಲಿ ಶೇಖರಿಸಿ ಇಡಬೇಕು. ಸದರಿ ಮಾಸ್ಟರ್ ಕಾರ್ಡ್ ಸಂಸ್ಥೆ ತನ್ನ ಎಲ್ಲಾ ಗ್ರಾಹಕರ ಮಾಹಿತಿಯನ್ನ ಭಾರತದ ಸರ್ವರ್ ನಲ್ಲಿ ಇಟ್ಟಿಲ್ಲ. ಎಲ್ಲಾ ಗ್ರಾಹಕರ ಜೊತೆಗೆ ವಿದೇಶಿ ನೆಲದಲ್ಲಿರುವ ಸರ್ವರ್ ನಲ್ಲಿ ಇದನ್ನ ಇಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದನ್ನ ಆರು ತಿಂಗಳ ಒಳಗೆ ಸರಿ ಪಡಿಸಿಕೊಳ್ಳಬೇಕು ಎನ್ನುವ ನಿಬಂಧನೆಯನ್ನ ಹಾಕಿತ್ತು. ಈ ರೀತಿ ಮಾಸ್ಟರ್ ಕಾರ್ಡ್ ಹೊಸ ವಿತರಣೆಯನ್ನ ನಿಲ್ಲಿಸುವುದರಿಂದ ಸದ್ಯಕ್ಕೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಆದರೆ ಹೊಸ ಗ್ರಾಹಕರಾಗಲು ಇಚ್ಛಿಸುವರಿಗೆ ಇದರಿಂದ ತೊಂದರೆಯಾಗುತ್ತದೆ. "ಭಾರತೀಯ ರಿಸರ್ವ್ ಬ್ಯಾಂಕಿನ ಈ ನಡೆಯಿಂದ ಖಂಡಿತ ನಮಗೆ ಬೇಸರವಾಗಿದೆ, ಆದರೆ ನಾವು ಅವರೊಂದಿಗೆ ಕೆಲಸ ಮಾಡಿ ತಪ್ಪನ್ನ ಸರಿಪಡಿಸಕೊಳ್ಳುತ್ತೇವೆ" ಎನ್ನುವ ಮಾತನ್ನ ಮಾಸ್ಟರ್ ಕಾರ್ಡ್ ಸಂಸ್ಥೆಯ ಸಂಬಂಧಿತ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ರದ್ದತಿಯಾಗುತ್ತಿರುವುದು ಭಾರತದಲ್ಲಿ ಇದೆ ಮೊದಲೇನಲ್ಲ ಇದೆ ವರ್ಷ ಅಂದರೆ ಏಪ್ರಿಲ್ 2021 ರಂದು ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಮೇಲೆ ಕೂಡ ಇದೆ ರೀತಿಯ ರದ್ದತಿಯನ್ನ ಹೇರಲಾಗಿತ್ತು. ಗ್ರಾಹಕರ ಮಾಹಿತಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಗ್ರಾಹಕರ ಮಾಹಿತಿಯನ್ನ ಇತರ ದೇಶದವರು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ಸಾಧ್ಯತೆಯನ್ನ ಅಲ್ಲಗಳೆಯಲು ಬರುವುದಿಲ್ಲ. ಹೀಗಾಗಿ ಇದು ಕೆಲವ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಎಚ್ಚರಿಕೆ ವಹಿಸಬೇಕಾದ ವಿಷಯವಾಗಿದೆ.

ನೆರೆಯ ರಾಷ್ಟ್ರ ಚೀನಾದಲ್ಲಿ ಟೆಸ್ಲಾ ಸಂಸ್ಥೆಯ ಮೇಲೆ ಇದೆ ರೀತಿಯ ಆರೋಪವನ್ನ ಹೊರಿಸಲಾಗಿತ್ತು. ಚೀನಾ ದೇಶದ ಗ್ರಾಹಕರ ಮಾಹಿತಿಯನ್ನ ಅಮೇರಿಕಾ ದೇಶವು ಟೆಸ್ಲಾ ಮೂಲಕ ಬೇಹುಗಾರಿಕೆಗೆ ಬಳಸಿಕೊಂಡಿದೆ ಎನ್ನುವ ಗುರುತರವಾದ ಆರೋಪವನ್ನ ಟೆಸ್ಲಾ ಸಂಸ್ಥೆ ಎದುರಿಸಬೇಕಾಯಿತು. ಈ ಕಾರಣವೂ ಸೇರಿ ಇನ್ನೂ ಅನೇಕ ಕಾರಣಗಳಿಂದ ಟೆಸ್ಲಾ ಕಾರು ಮಾರಾಟ ಚೀನಾದಲ್ಲಿ ಬಹಳ ಕುಸಿತ ಕಂಡಿರುವುದು ಇಂದಿಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದು ಕೇವಲ ಒಂದು ಉದಾಹರಣೆ, ಡಿಜಿಟಲೈಸೇಶನ್ ನ ಅಡ್ಡಪರಿಣಾಮಗಳು ಒಂದೆರಡಲ್ಲ, ಎಲ್ಲವನ್ನೂ ಡಿಜಿಟಲೈಸೇಶನ್ ಅಡಿಯಲ್ಲಿ ತರುವುದು ಭಾರತದಂತಹ ದೇಶಕ್ಕೆ ಅಗತ್ಯವೂ ಇಲ್ಲ ಮತ್ತು ಅದು ಸಾಧ್ಯವೂ ಇಲ್ಲ.

ಪೂರ್ಣ ಡಿಜಿಟಲೀಕರಣದ ಅಡ್ಡ ಪರಿಣಾಮಗಳನ್ನ ಹೀಗೆ ಪಟ್ಟಿ ಮಾಡಬಹದು:

  1. ಭದ್ರತೆಯ ಸಮಸ್ಯೆ: ಇಂದು ಜಗತ್ತು ಬದಲಾಗುತ್ತಿರುವ ವೇಗ ಎಂತಹವರನ್ನೂ ಅಚ್ಚರಿಗೆ ದೂಡುತ್ತಿದೆ. ಹ್ಯಾಕರ್ ಗಳು ಜಗತ್ತಿನ ಹತ್ತಾರು ದೇಶದ ಅಬೇಧ್ಯ ಎಂದು ಹೆಸರು ಮಾಡಿದ್ದ ಭದ್ರತೆಯನ್ನ ಮುರಿದು ಲಗ್ಗೆ ಇಡುತ್ತಿರುವ ವಿಷಯ ಮುಚ್ಚಿಡುವಂತಿಲ್ಲ, ಅದು ಇಂದಿಗೆ ಜಗಜ್ಜಾಹೀರಾತು. ಹೀಗಾಗಿ ಎಲ್ಲವನ್ನೂ ಡಿಜಿಟಲೀಕರಣ ಗೊಳಿಸುವುದರಿಂದ ಮುಂದೊಂದು ದಿನ ಸರ್ವರ್ ಗಳನ್ನ ಅಥವಾ ಸ್ಯಾಟಲೈಟ್ ಗಳನ್ನ ಆಕ್ರಮಿಸಿದರೆ ಸಾಕು ಆಯಾ ದೇಶಗಳ ಪೂರ್ಣವಾಗಿ ಹ್ಯಾಕರ್ ಗಳ ಹಿಡಿತಕ್ಕೆ ಸಿಗುತ್ತವೆ ಎನ್ನುವ ದಿನ ಬರುತ್ತದೆ. ಇನ್ನು ಮುಂದೆ ಯುದ್ಧವೆಂದರೆ ಅದು ಮದ್ದು ಗುಂಡುಗಳನ್ನ ಸಿಡಿಸಿ ಆಗುವುದಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ನಮ್ಮ ದೇಶದ ಪೂರ್ಣ ವ್ಯಾಪಾರ-ವಹಿವಾಟು ಸರ್ವರ್ ಗಳಲ್ಲಿ, ಸ್ಯಾಟಲೈಟ್ ನಲ್ಲಿ, ಕ್ಲೌಡ್ ನಲ್ಲಿ ಅಡಗಿ ಕುಳಿತಿರುತ್ತದೆ. ಅದು ಹ್ಯಾಕರ್ ಗಳ ಕೈಗೆ ಸಿಕ್ಕರೆ ಮತ್ತು ಅವರು ಮನಸ್ಸು ಮಾಡಿದರೆ ದೇಶದ ಈ ರೀತಿಯ ಡಿಜಿಟಲ್ ಫುಟ್ ಪ್ರಿಂಟ್ ಅಳಸಿ ಹಾಕಬಹುದು. ಇದರಿಂದ ದೇಶದಲ್ಲಿ ಆಗುವ ತಲ್ಲಣವನ್ನ ಕೇವಲ ಅಕ್ಷರಗಳಲ್ಲಿ ವರ್ಣಿಸುವುದು ಸಾಧ್ಯವಿಲ್ಲ. ಇದೊಂದು ರೀತಿಯಲ್ಲಿ ಆತ್ಮಹತ್ಯೆ.
  2. ಗ್ರಾಹಕರ ಮಾಹಿತಿ ಬಜಾರಿನಲ್ಲಿ ಮಾರಾಟಕ್ಕಿವೆ: ನಿಮಗೆಲ್ಲಾ ಒಂದಲ್ಲ ಒಂದು ದಿನ ಯಾವುದೊ ಬ್ಯಾಂಕಿನಿಂದ ಲೋನ್ ಬೇಕಾ? ಎನ್ನುವ ಕರೆ ಬಂದಿರುತ್ತದೆ. ಇಲ್ಲವೇ ಸಾರ್ ಮೈಸೂರಿನಲ್ಲಿ ಸೈಟ್ ಮಾರಾಟಕ್ಕಿದೆ ನಿಮಗೆ ಬೇಕಾಗಿತ್ತೇ? ಎನ್ನುವ ಪ್ರಶ್ನೆ ಕೇಳಿಕೊಂಡು ಬಂದಿರುತ್ತದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬೇಕಾ ಎಂದು ಕರೆ ಮಾಡುವವರ ಸಂಖ್ಯೆ ನಿಮಗೆ ಕಿರಿಕಿರಿ ತಂದಿರುತ್ತದೆ. ಇನ್ನು ಮೊಬೈಲ್ ಸರ್ವಿಸ್ ಪ್ರೊವೈಡರ್ಸ್ ಕಾಟವಂತೂ ಹೇಳಲಾಗದು. ಇವರಿಗೆಲ್ಲಾ ನಿಮ್ಮ ಫೋನ್ ನಂಬರ್ ಹೇಗೆ ಸಿಕ್ಕಿತು? ಎಂದು ಯೋಚಿಸಿದ್ದೀರಾ? ನೀವು ಒಂದು ಕಡೆ ನಿಮ್ಮ ಮೊಬೈಲ್ ನಂಬರ್ ಕೊಟ್ಟಿದ್ದರೆ ಸಾಕು!! ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅತ್ಯಂತ ಕಡಿಮೆ ಹಣಕ್ಕೆ ವರ್ಗಾವಣೆಯಾಗಿ ಬಿಡುತ್ತದೆ. ಗ್ರಾಹಕರ ಮಾಹಿತಿ ಅತ್ಯಂತ ಗೌಪ್ಯವಾಗಿ ಇರಿಸಿಕೊಳ್ಳಬೇಕಾದ ವಿಷಯ, ಆದರೆ ಅದು ವಿಶ್ವದಾದ್ಯಂತ ಅತ್ಯಂತ ಕಡಿಮೆ ಹಣಕ್ಕೆ ಬಿಕರಿಯಾಗಿ ಹೋಗುತ್ತದೆ. ಅಂದರೆ ಗಮನಿಸಿ ಕಡಿಮೆ ಹಣ ಎಂದ ತಕ್ಷಣ, ಈ ರೀತಿಯ ಮಾಹಿತಿ ಮಾರಾಟ ಮಾಡುವವರಿಗೆ ಕಡಿಮೆ ಹಣ ಸಿಗುತ್ತದೆ ಎಂದಲ್ಲ, ಒಬ್ಬ ವ್ಯಕ್ತಿಯ ಮಾಹಿತಿಯನ್ನ ಐದು ರುಪಾಯಿಗೆ ಮಾರಿಕೊಂಡರರೂ ಸಾಕು ಐವತ್ತು ಕೋಟಿ ಜನರ ಮಾಹಿತಿಯನ್ನ ಐದರಿಂದ ಗುಣಿಸಿ ಸಾಕು. ಇದು ಭಾರತದ ಸಮಸ್ಯೆ ಮಾತ್ರವಲ್ಲ , ಇದು ಜಾಗತಿಕ.
  3. ಇಬ್ಬರ ನಡುವಿನ ವ್ಯಾಪರ ಇಂದು ಜಗತ್ತಿಗಾಗಿದೆ ಆಹಾರ: ನೀವು ಹಣವನ್ನ ಬಳಸಿ ವ್ಯಾಪಾರ ಮಾಡಿದ್ದರೆ ಅದು ಕೇವಲ ಇಬ್ಬರ ನಡುವಿನ ವ್ಯಾಪಾರ ಅಥವಾ ವಹಿವಾಟು ಅಷ್ಟೇ, ಆದರೆ ನೀವು ಕಾರ್ಡ್ ಬಳಸಿ ಅಥವಾ ಡಿಜಿಟಲ್ ಮೂಲಕ ವ್ಯಾಪಾರ ಮಾಡಿದ್ದರೆ ಅದು ಜಗತ್ತಿಗೆ ಆಹಾರ. ಅದು ಹೇಗೆ ಅಂದಿರಾ? ನೀವು ಹೋಟೆಲ್ ನಲ್ಲಿ ಊಟ ತಿಂದು ಹಣವನ್ನ ಡಿಜಿಟಲ್ ಪಾವತಿ ಮಾಡಿದ್ದರೆ ಸಾಕು, ನೀವು ತಿಂದದ್ದು ವೆಜ್ ಅಥವಾ ನಾನ್ ವೆಜ್ ಅದರಲ್ಲೂ ನಿಮ್ಮ ಇಷ್ಟದ ತಿಂಡಿಯೇನು, ನೀವು ಖಾರ ಪ್ರಿಯರೂ ಅಲ್ಲವೋ ಎನ್ನುವ ಸಣ್ಣ ಸಣ್ಣ ಮಾಹಿತಿಯಿಂದ, ನೀವು ಕೊಂಡ ಉಡುಪಿನ ಬ್ರಾಂಡ್, ಸೈಜ್ ಎಲ್ಲವೂ ಡೇಟಾ ಕಲೆಕ್ಷನ್ ಅಡಿಯಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಇಂದಿನ ದಿನದಲ್ಲಿ ಖಾಸಗಿತನ ಎನ್ನುವುದು ನಗೆಪಾಟಲಿನ ವಿಷಯವಾಗಿದೆ. ನೀವು ಒಪ್ಪಿ ಅಥವಾ ಬಿಡಿ , ನಾವೆಲ್ಲರೂ ರಸ್ತೆಯ ಮಧ್ಯದಲ್ಲಿ ಬೆತ್ತಲೆ ನಿಂತು ಮರ್ಯಾದೆಯ ಬಗ್ಗೆ ಮಾತನಾಡುವ ಹಂತವನ್ನ ತಲುಪಿದ್ದೇವೆ.
  4. ಡಿಜಿಟಲೀಕರಣದಿಂದ ಭ್ರಷ್ಟಾಚಾರ ಕಡಿಯಾಗುತ್ತದೆ ಎನ್ನುವುದು ಹಸಿ ಸುಳ್ಳು: ಈ ಮಾತುಗಳು ಕೂಡ ಭಾರತ ಅಂತಲ್ಲ, ಜಾಗತಿಕ ಮಟ್ಟದಲ್ಲಿ ಕೂಡ ಇದು ಸತ್ಯ. ಅಂದರೆ ನಗದಿನ ಮೂಲಕ ವಹಿವಾಟು ನಡೆದಾಗ ಭ್ರಷ್ಟಾಚಾರ ಸುಲಬವಾಗುತ್ತದೆ, ಕಪ್ಪು ಹಣ ಶೇಖರಣೆಗೊಳ್ಳುತ್ತದೆ ಎನ್ನುವುದನ್ನ ಹೇಳಿ ನಮ್ಮನೆಲ್ಲ ಡಿಜಿಟಲ್ ಮಾಧ್ಯಮವನ್ನ ಒಪ್ಪಿಕೊಳ್ಳಲು ಪ್ರೇರೇಪಿಸಲಾಯಿತು. ನಾವು ಕೂಡ ಸರಿಯೆಂದು ತಲೆಯಾಡಿಸಿದೆವು. ಆದರೆ ಇಷ್ಟು ವರ್ಷದಲ್ಲಿ ಒಂದು ನಯಾಪೈಸೆ ಕೂಡ ಭ್ರಷ್ಟಾಚಾರ ಕಡಿಮೆಯಾದ ಉದಾಹರೆಯಿಲ್ಲ, ಇನ್ನು ಕಪ್ಪು ಹಣವನ್ನ ಸಂಗ್ರಹಿಸುವುದು ಮತ್ತು ವರ್ಗಾಯಿಸುವುದು ಇನ್ನಷ್ಟು ಸಲಭವಾಗಿದೆ.
  5. ಗ್ರಾಹಕನ ಖರೀದಿ ಮನಸ್ಥಿತಿಯನ್ನ ಅವನ ಮೇಲೆ ಪ್ರಯೋಗ ಮಾಡಲಾಗುತ್ತಿದೆ: ನೀವು ನಿಮ್ಮ ನೆಚ್ಚಿನ ಕಾರನ್ನ ಅಥವಾ ಸ್ಕೂಟರ್ ಕೊಂಡಿದ್ದೆ ಆಗಿದ್ದರೆ, ಇನ್ನೊಮ್ಮೆ ನಿಮ್ಮನ್ನ ನೀವೇ ಪ್ರಶ್ನಿಸಿಕೊಂಡು ನೋಡಿ, ಅದು ನಿಜವಾಗಲೂ ನಿಮ್ಮ ಆಯ್ಕೆಯೆ?? ಏಕೆಂದರೆ ನೀವು ಒಮ್ಮೆ ಯಾವುದೋ ಬ್ರಾಂಡಿನ ಕಾರನ್ನ ಅಥವಾ ಸ್ಕೂಟರ್ ಅನ್ನು ಇಂಟರ್ನೆಟ್ ನಲ್ಲಿ ವೀಕ್ಷಣೆ ಮಾಡಿದ್ದರೆ ಅಷ್ಟು ಸಾಕು, ನಂತರ ನೀವು ಯಾವುದೇ ಸೈಟ್ ಗೆ ಹೋಗಿ, ನೀವು ನ್ಯೂಸ್ ಪೇಪರ್ ಓದಿ, ಸೋಶಿಯಲ್ ಮೀಡಿಯಾದಲ್ಲಿ ಹೋಗಿ ಎಲ್ಲೆಡೆಯೂ ಆ ನಿಮ್ಮ ನೆಚ್ಚಿನ ಕಾರಿನ ಜಾಹಿರಾತು ಮಾತ್ರ ಕಾಣುತ್ತದೆ. ಹತ್ತಾರು ಬಾರಿ ಕಾಣುವ ವಿಷಯವನ್ನ ಮನಸ್ಸು ನಂಬಿ ಬಿಡುತ್ತದೆ. ಮತ್ತು ಅದನ್ನ ಕಾರ್ಯರೂಪಕ್ಕೆ ತರಲು ಕೂಡ ಹೊರಡುತ್ತದೆ. ಮನೆಯ ಮುಂದೆ ಬೆಚ್ಚಗೆ ಕವರ್ ಹೊದ್ದು ಕುಳಿತಿರುವ ಸಾವಿರಾರು ಕಾರುಗಳು ಹೇಳುವುದು ಇದೆ ಕತೆಯನ್ನ ಎಂದರೆ ನೀವು ನಂಬಬೇಕು.
  6. ಡಿಜಿಟಲ್ ಪಾವತಿಯಲ್ಲಿ ಮಾನಸಿಕ ನಂಟು ಇರುವುದಿಲ್ಲ ಹೀಗಾಗಿ ಖರ್ಚು ಹೆಚ್ಚು, ಸಾಲಕ್ಕೂ ದಾರಿ: ನೀವು ಗಮನಿಸಿ ನೋಡಿ , ಮುದ್ರಿತ ಹಣವನ್ನ ನೀಡುವಾಗ ಅದರ ಮೌಲ್ಯದ ಅರಿವಾಗುತ್ತದೆ. ಏಕೆಂದರೆ ಅದು ನಿಮ್ಮ ಕಣ್ಣಿಗೆ ಕಾಣುತ್ತದೆ. ಕಣ್ಣಿಗೆ ಕಾಣದ ವಸ್ತುವಿನ ಮೇಲೆ ಪ್ರೀತಿ ಹೇಗೆ ಬರಲು ಸಾಧ್ಯ? ಹೀಗಾಗಿ ಡಿಜಿಟಲ್ ಹಣವನ್ನ ಜನರು ಬಹಳ ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ, ಪರಿಣಾಮ ಹೆಚ್ಚು ಖರ್ಚು, ಆದಾಯ ಮೀರಿದ ಖರ್ಚು ಸಾಲಕ್ಕೂ ದಾರಿ ಮಾಡಿಕೊಡುತ್ತದೆ. ಹೀಗೆ ಇದು ಒಂದು ಹಂತವನ್ನ ಮಿರುವವರಿಗೆ ಅದು ಗೊತ್ತಾಗುವುದೇ ಇಲ್ಲ. ಆ ನಂತರ ಇದು ದೊಡ್ಡ ಕುಣಿಕೆಯಾಗಿ ಕುತ್ತಿಗೆಗೆ ಬಿಗಿದುಕೊಳ್ಳುತ್ತದೆ. ಹೀಗಾಗಿ ಡಿಜಿಟಲ್ ಹಣ ಕಣ್ಣಿಗೆ ಕಾಣದ ಕುಣಿಕೆ ಹುಷಾರು.
  7. ಹಣದ ಮುದ್ರಣದ ಖರ್ಚು ಇಲ್ಲದಿದ್ದರೂ, ಸೇವೆ ನೀಡುವ ಸಂಸ್ಥೆಗಳ ಲೂಟಿ ಮಾತ್ರ ತಪ್ಪಿಲ್ಲ: ಲೆಕ್ಕಾಚಾರದ ಪ್ರಕಾರ ಹಣವನ್ನ ಮುದ್ರಿಸಲು ತಗಲುವ ಖರ್ಚು ಉಳಿಯಬೇಕು, ಹೀಗಾಗಿ ಡಿಜಿಟಲ್ ಹಣ ಉಪಯೋಗಿಸುವುದರಿಂದ ಬೆಲೆ ಒಂದಷ್ಟು ಕಡಿಮೆಯಾಗಬೇಕು, ಬದಲಿಗೆ ಭಾರತದಂತಹ ದೇಶದಲ್ಲಿ ಇದು ಹೆಚ್ಚಾಗಿದೆ. ಇದಕ್ಕೆ ಕಾರಣ ಮಧ್ಯವರ್ತಿ ಸೇವೆ ನೀಡುವ ಸಂಸ್ಥೆಗಳು . ಇವರು ಮಾಡುತ್ತಿರುವ ಹಗಲು ದರೋಡೆಯನ್ನ ಭಾರತೀಯ ರಿಸರ್ವ್ ಬ್ಯಾಂಕ್ ಯಾವ ಕಾರಣಕ್ಕೆ ಇನ್ನೂ ತಡೆ ಹಿಡಿದಿಲ್ಲ ಎನ್ನವುದು ದೊಡ್ಡ ಪ್ರಶ್ನೆ.

ಕೊನೆಮಾತು: ಒಂದಲ್ಲ ಹಲವಾರು ಕಾರಣಗಳಿಂದ ಪೂರ್ಣ ಡಿಜಿಟಲೀಕರಣ ಭಾರತದಂತಹ ದೇಶಕ್ಕೆ ಬೇಕಾಗಿಲ್ಲ. ಡಿಜಿಟಲೀಕರಣದ ಹೆಸರಿನಲ್ಲಿ ಸಾಮಾನ್ಯ ಜನರ ಬದುಕನ್ನ ಮೂರಾಬಟ್ಟೆ ಮಾಡಲಾಗಿದೆ. ಅವನ ಮೂಲಭೂತ ಮಾಹಿತಿಯಿಂದ, ಗೌಪ್ಯ ಎಂದುಕೊಂಡ ಮಾಹಿತಿ ಕೂಡ ಇಂದು ಜಗತ್ತಿನಲ್ಲಿ ಬಿಕರಿಗೆ ಇಡಲಾಗಿದೆ. ಹೀಗೆ ಹಣ ಕೊಟ್ಟು ಪಡೆದ ಮಾಹಿತಿಯನ್ನ ಬಳಸಿಕೊಂಡು ಹೇಗೆ ಗ್ರಾಹಕನ ಹೆಡೆಮುರಿ ಕಟ್ಟಿ ಅವನ ಹಣವನ್ನ, ಅವನ ಅನುಮತಿಯಿಲ್ಲದೆ, ಅವನಿಗೆ ಬೇಕಾದ ಅಥವಾ ಬೇಡವಾದ ವಸ್ತುಗಳನ್ನ ಕೊಳ್ಳಲು ಬಳಸಿಕೊಳ್ಳಬಹದು ಎನ್ನುವುದಕ್ಕೆ ಡಿಜಿಟಲೀಕರಣ ಎಂದು ಹೆಸರು. ಪೂರ್ಣ ಡಿಜಿಟಲೀಕರಣ ಬೇಕೇ ಅಥವಾ ಬೇಡವೇ ? ಎನ್ನುವುದು ನಿಮ್ಮ ಯೋಚನೆಗೆ ಬಿಟ್ಟದ್ದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com