ಮಾರುಕಟ್ಟೆಯನ್ನ ಮತ್ತೆ ಅನಿಶ್ಚಿತತೆ ಕಡೆಗೆ ನೂಕುತ್ತಿದೆ ಒಮಿಕ್ರಾನ್! (ಹಣಕ್ಲಾಸು)

ಹಣಕ್ಲಾಸು-286-ರಂಗಸ್ವಾಮಿ ಮೂಕನಹಳ್ಳಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಡಿಸೆಂಬರ್ ತಿಂಗಳು ಜಗತ್ತಿನಾದ್ಯಂತ ಅತ್ಯಂತ ದೊಡ್ಡ ತಿಂಗಳು. ಹೌದು ವ್ಯಾಪಾರ, ವಹಿವಾಟು ಲೆಕ್ಕದಲ್ಲಿ ಡಿಸೆಂಬರ್ ಪ್ರಮುಖ ತಿಂಗಳು. ವರ್ಷದ ಕೊನೆಯ ತ್ರೈಮಾಸಿಕ ಲೆಕ್ಕಾಚಾರದಲ್ಲಿ ಡಿಸೆಂಬರ್ ತಿಂಗಳದು ಸಿಂಹಪಾಲು. ಯೂರೋಪು , ಅಮೇರಿಕಾ ಮಾತ್ರವಲ್ಲ ಕ್ರಿಶ್ಚಿಯನ್ ದೇಶಗಳನ್ನ ಹೊರತು ಪಡಿಸಿ ಕೂಡ ಭಾರತದಂತಹ ದೇಶದಲ್ಲಿ ಕೂಡ ಈ ಸಮಯದಲ್ಲಿ ವ್ಯಾಪಾರ ದುಗುಣವಾಗುತ್ತದೆ. ನಿಮಗೆಲ್ಲಾ ಆಶ್ಚರ್ಯ ಎನ್ನಿಸಬಹುದು ಮುಸ್ಲಿಂ ದೇಶಗಳಲ್ಲಿ ಕೂಡ ದಶಕದಿಂದೀಚೆಗೆ ಕ್ರಿಸ್ತ್ಮಸ್ ಹಬ್ಬವನ್ನ ಬಹಳ ವೈಭವದಿಂದ ಆಚರಿಸುತ್ತಾರೆ. ಹೀಗಾಗಿ ಕ್ರಿಸ್ಮಸ್ ಹಬ್ಬವನ್ನ ಮತ್ತು ಡಿಸೆಂಬರ್ ತಿಂಗಳನ್ನ ಜಾಗತಿಕ ಮಟ್ಟದಲ್ಲಿ ದೂಡ್ಡ ಹಬ್ಬ, ದೊಡ್ಡ ತಿಂಗಳು ಎನ್ನಬಹದು.

ನಿಮಗೆಲ್ಲಾ ತಿಳಿದಿರಲಿ ಡಿಸೆಂಬರ್ ತಿಂಗಳ ಬಳಕೆಗಾಗಿ ಬೇಕಾಗುವ ಹೆಚ್ಚಿನ ಉತ್ಪನ್ನಗಳನ್ನ ತಿಂಗಳುಗಳ ಮುಂಚಿನಿಂದ ಉತ್ಪಾದಿಸಲು ಶುರು ಮಾಡುತ್ತಾರೆ. ಆದರೆ ಈ ಬಾರಿ ಡಿಸೆಂಬರ್ ಮಕಾಡೆ ಮಲಗುವ ಲಕ್ಷಣಗಳು ಜೋರಾಗಿದೆ. ಇನ್ನು ಕ್ರಿಸ್ಮಸ್ ಹಬ್ಬವನ್ನ ಆಚರಿಸಲು, ಜನ ಸೇರಲು ಅದೆಷ್ಟು ನಿಬಂಧನೆಗಳನ್ನ ಹೇರುತ್ತಾರೋ ಕಾದು ನೋಡಬೇಕಿದೆ. ಒಮಿಕ್ರಾನ್ ಎನ್ನುವ ಹೊಸ ರೂಪಾಂತರಿ ವೈರಸ್ ಮೊದಲ ಬಾರಿಗೆ ನವೆಂಬರ್ ೯ ರಂದು ಪತ್ತೆ ಹಚ್ಚಲಾಗಿದೆ. ಇದು ಹಳೆಯ ವೈರಸ್ ಗಿಂತ ವೇಗದಲ್ಲಿ ಹರಡಲಿದೆ ಎನ್ನುವುದು ತಜ್ಞರ ಅಂಬೋಣ. ಕರೋನ ವೈರಸ್ ಎನ್ನುವುದು ಜಗತ್ತಿನ ಮೇಲೆ ಚೀನಾ ಎನ್ನುವ ದೇಶ ಸಾರಿದ ಯುದ್ಧ ಎನ್ನುವ ಮಾತನ್ನ ಬಹಳಷ್ಟು ಜನ ಆಡಿದ್ದಾರೆ, ಜಗತ್ತಿನ ಬಹುತೇಕ ದೇಶಗಳು ಮತ್ತು ಜನರು ಈ ಥಿಯರಿಯನ್ನ ಒಪ್ಪಿಕೊಂಡಿದ್ದಾರೆ. ಇನ್ನೇನು ಕರೋನ ಮುಗಿಯಿತು ಎನ್ನುವ ವೇಳೆಯಲ್ಲಿ ಈ ಹೊಸ ವೈರಸ್ ಧುತ್ತೆಂದು ಮತ್ತೆ ಜಗತ್ತಿನ ಮುಂದೆ ಬಂದು ನಿಂತಿದೆ. ಈ ವೈರಸ್ ಕರೋನ ದಂತೆ ಮತ್ತೆ ಜಗತ್ತನ್ನ ಲಾಕ್ ಡೌನ್ ಗೆ ತಳ್ಳುವ ಶಕ್ತಿ ಉಳ್ಳದ್ದೇ? ಎನ್ನುವ ಸಂಶಯ ಕೂಡ ಎಲ್ಲರಲ್ಲಿ ಮನೆ ಮಾಡಿದೆ. ನೆನಪಿರಲಿ ಕರೋನ ನಂತರ 'ಇದು ಹೀಗಾಗಲು ಸಾಧ್ಯವಿಲ್ಲ, ಅದು ಎಕ್ಸ್ಟ್ರಿಮ್ ಸಂದರ್ಭದಲ್ಲಿ ಹಾಗುತ್ತದೆ' ಎಂದು ಸುಮ್ಮನಿರುವಂತಿಲ್ಲ. ಯೂರೋಪಿನಲ್ಲಿ ಈ ಹೊಸ ವೈರಸ್ ಕಾಟ ಹೆಚ್ಚಾಗಿದೆ. ಡಿಸೆಂಬರ್ ನಲ್ಲಿ ಇಂತಹ ಒಂದು ವೈರಸ್ ಮಾರುಕಟ್ಟೆಯಲ್ಲಿರುವ ವಿಶ್ವಾಸವನ್ನ ಮತ್ತೆ ಹಾಳುಗೆಡವುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಾಗಿ ಇದನ್ನ ಸೃಷ್ಟಿತ ವೈರಸ್ ಎಂದು ಅಷ್ಟು ಸುಲಭವಾಗಿ ಬ್ರಾಂಡ್ ಮಾಡಲು ಕೂಡ ಆಗುವುದಿಲ್ಲ. ಹಾಗೊಮ್ಮೆ ಇದು ಸೃಷ್ಟಿತವಾಗಿದ್ದರೆ, ಖಂಡಿತ ಡಿಸೆಂಬರ್ ತಿಂಗಳ ವ್ಯಾಪಾರ-ವಹಿವಾಟನ್ನ ಮೀರಿದ ಅಗೋಚರ ವಿಷಯವಿದೆ. ಈ ತಿಂಗಳಲ್ಲಿ ಆಗುವ ಲಾಭವನ್ನ ಕೂಡ ಅದು ಮೀರಿದ್ದು ಎನ್ನುವುದಾದರೆ ಅದು ಖಂಡಿತ ದೊಡ್ಡ ವಿಷಯವೇ ಆಗಿರುತ್ತದೆ.

ನಾವು ಇದನ್ನ ಜನ ಸಾಮಾನ್ಯನ ದೃಷ್ಟಿಯಿಂದ ನೋಡಿದಾಗ ಇದರ ಸಮಸ್ಯೆ ಬಹಳ ದೊಡ್ಡದು ಎನ್ನಿಸುತ್ತದೆ, ಅದರಂತೆ ಸರಕಾರದ ದೃಷ್ಟಿಯಿಂದ ನೋಡಿದಾಗ ಕೂಡ ಇದೇನು ಸಾಮಾನ್ಯ ಸಮಸ್ಯೆಯಲ್ಲ. ಒಮಿಕ್ರಾನ್ ವೈರಾಣು ನಿಜವೋ, ಸುಳ್ಳೋ ಅಥವಾ ಶಕ್ತಿಶಾಲಿಯೂ ಅಥವಾ ಅಲ್ಲವೋ ಅದೆಲ್ಲ ಒಂದು ಬದಿಗಿಟ್ಟು ಸರಕಾರ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಈ ಕ್ರಮಗಳು ಮಾರುಕಟ್ಟೆಯಲ್ಲಿನ ಜೋಷ್ ಕೊಲ್ಲಲು ಬಹಳಷ್ಟಾಯ್ತು.

ಈ ವೈರಸ್ ಕರೋನದಂತೆ ಜಾಗತಿಕ ಮಟ್ಟದಲ್ಲಿ ಹಬ್ಬಿದರೆ, ಆಗ ಪ್ರಮುಖವಾಗಿ ಭಾರತವೂ ಸೇರಿ ಜಾಗತಿಕ ಮಟ್ಟದಲ್ಲಿ ಉಂಟಾಗುವ ಸಮಸ್ಯೆಗಳನ್ನ ನೋಡೋಣ .

೧) ಎಲ್ಲಕ್ಕೂ ಮೊದಲಿಗೆ ಕುಗ್ಗುವ ಹೂಡಿಕೆದಾರನ ವಿಶ್ವಾಸ: ನಿಮಗೆಲ್ಲಾ ತಿಳಿದಿರುವಂತೆ ಒಂದು ಸಣ್ಣ ಗಾಳಿಮಾತು ಗೂಳಿ ಓಟಕ್ಕೆ ಕಡಿವಾಣ ಹಾಕಬಹುದು, ಅದು ಕರಡಿಯ ಬಿಗಿ ಹಿಡಿತಕ್ಕೂ ಕಾರಣವಾಗಬಹುದು. ಇವತ್ತು ಕೇಳಿ ಬರುತ್ತಿರುವುದು ಬರಿ ಗಾಳಿಮಾತಲ್ಲ , ಯೂರೋಪಿನ ಹಲವು ದೇಶಗಳಲ್ಲಿ ಈ ಸಮಸ್ಯೆ ಒಂದಷ್ಟು ತೀವ್ರತೆಯನ್ನ ಆಗಲೇ ಪಡೆದುಕೊಂಡಿದೆ. ಹೀಗಾಗಿ ಹೂಡಿಕೆದಾರನ ಮನಸ್ಸು ಕದಡಿ ಹೋಗುತ್ತದೆ. ನಾನು ಮಾಡುತ್ತಿರುವುದು ಸರಿಯೇ , ತಪ್ಪೇ ? ಎನ್ನುವ ದ್ವಂದ್ವ ಆತನನ್ನ ಕಾಡುತ್ತದೆ. ಷೇರು ಮಾರುಕಟ್ಟೆಯ ರೂಲ್ ಬುಕ್ ಪ್ರಕಾರ ವೆನ್ ಇನ್ ಡೌಟ್ , ವೇಟ್ ಎನ್ನುವುದನ್ನ ಆತ ಪಾಲಿಸುತ್ತಾನೆ. ಕಾಯ್ದು ನೋಡುವ ತಂತ್ರಕ್ಕೆ ಆತ ಬಂದು ನಿಲ್ಲುತ್ತಾನೆ. ಮಾರುಕಟ್ಟೆ ಕುಸಿತಕ್ಕೆ ಬೇರೆ ದೊಡ್ಡ ಕಾರಣವೇನು ಬೇಕು ?

೨) ಜಾಗತಿಕ ಮಟ್ಟದಲ್ಲಿ ಈಗಾಗಲೇ ಸಾಕಷ್ಟು ಏರುಪೇರಾಗಿರುವ ಸಪ್ಲೈ ಚೈನ್ ಇನ್ನಷ್ಟು ಹದಗೆಡುತ್ತದೆ: ನಿಮಗೆಲ್ಲ ತಿಳಿದಿರಲಿ , ಡಿಸೆಂಬರ್ ಅಂತ್ಯದ ವರೆಗೆ ಮೂಲಭೂತ ವಸ್ತುಗಳಿಗೂ ಪರದಾಡುವ ಸ್ಥಿತಿ ಇಂಗ್ಲಂಡ್ ದೇಶದಲ್ಲಿ ಆಗಲಿದೆ ಎನ್ನುವ ಮಾಹಿತಿ ಮೂರು ತಿಂಗಳ ಹಿಂದೆಯೇ ಗಿರಕಿ ಹೊಡೆಯುತ್ತಿತ್ತು. ಕರೋನ ಪರಿಸ್ಥಿತಿ ಸುಧಾರಣೆ ಕಂಡ ಮೇಲೂ ಹೀಗೆ ಅಂದರೆ ಈಗ ಹೊಸ ರೂಪಾಂತರಿ ತಳಿಯ ಆಗಮನವಾಗಿದೆ. ಹೀಗಾಗಿ ವಸ್ತುಗಳ ವಿತರಣೆಯಲ್ಲಿ ಮತ್ತಷ್ಟು ವ್ಯತ್ಯಯವಾಗುವುದು ಕೂಡ ಸಾಮಾನ್ಯ. ಜನ ಸಾಮಾನ್ಯ ತನಗೆ ಬೇಕಾದ ವಸ್ತುವನ್ನ ಕೊಳ್ಳುವ ಒಂದು ಕಾಲದ ಸಾಮಾನ್ಯ ಎನ್ನುವ ಸ್ಥಿತಿಯನ್ನ ಕಳೆದುಕೊಳ್ಳಲಿದ್ದಾನೆ. ಸಾಮಾನ್ಯ ಪರಿಸ್ಥಿತಿಯನ್ನ ನಾವು ಯಾವಾಗಲೂ ಹೀಗೆ ಇರುತ್ತದೆ ಎಂದು ನಂಬುವ ಕಾಲ ಮುಗಿದುಹೋಯಿತು.

೩) ಬೇಡಿಕೆ ಇದ್ದರೂ ಪೂರೈಸಲಾಗದ ಅತಂತ್ರ ಸ್ಥಿತಿಯಿಂದ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಕುಸಿತ ಉಂಟಾಗುತ್ತದೆ: ಇದು ವಿಚಿತ್ರ ಸನ್ನಿವೇಶ , ಜನರಿಗೆ ಕೊಳ್ಳುವ ಶಕ್ತಿಯಿದೆ , ವಸ್ತುಗಳ ಪೂರೈಕೆಗೆ ಬೇಡಿಕೆಯೂ ಇದೆ , ಆದರೆ ಅದನ್ನ ಗ್ರಾಹಕನಿಗೆ ತಲುಪಿಸಲು ಬೇಕಾದ ವ್ಯವಸ್ಥೆ ಕುಸಿದು ಬಿದ್ದಿದೆ. ಜೊತೆಗೆ ಉತ್ಪನ್ನಗಳಲ್ಲಿ ಕೂಡ ಒಂದಷ್ಟು ಕಡಿತವಾಗಿದೆ. ಒಟ್ಟಿನಲ್ಲಿ ವ್ಯಾಪಾರ -ವಹಿವಾಟು ಕುಗ್ಗುವುದು ತಪ್ಪಿಸಲಾಗುವುದಿಲ್ಲ.

೪) ಹಣದುಬ್ಬರದ ಸಮಸ್ಯೆ: ಯಾವಾಗ ಉತ್ಪನ್ನಗಳ ಕೊರತೆ ಮತ್ತು ಬೇಡಿಕೆಯನ್ನ ಪೂರೈಸಲಾಗದ ಸ್ಥಿತಿ ನಿರ್ಮಾಣವಾಗುತ್ತದೆ ,ಆಗ ಸಹಜವಾಗೇ ವಸ್ತುವಿನ ಬೆಲೆ ಏರುತ್ತ ಹೋಗುತ್ತದೆ. ಇದು ಮೊದಲ ಹಂತದಲ್ಲಿ ಅಷ್ಟೊಂದು ತೀವ್ರ ಎನ್ನಿಸುವುದಿಲ್ಲ , ಆದರೆ ನಿಧಾನವಾಗಿ ಇದು ಜನರ ಜೇಬನ್ನ ಸುಡುತ್ತಾ ಹೋಗುತ್ತದೆ. ಇಲ್ಲಿಯವರೆಗೆ ಜಾಗತಿಕ ಮಟ್ಟದಲ್ಲಿ ಎಲ್ಲಾ ವಸ್ತುಗಳ ಬೆಲೆ ೮೦ ಪ್ರತಿಶತದಷ್ಟು ಹೆಚ್ಚಾಗಿದೆ ಎಂದರೆ ಇದರ ತೀವ್ರತೆಯನ್ನ ನೀವು ಗಮನಿಸಬಹುದು.

೫) ಕೆಲಸದ ಸೃಷ್ಟಿಯಲ್ಲಿ ಇಳಿತ, ಕೆಲಸ ಕಡಿತ: ಕೆಲವೊಂದು ಕೆಲಸಗಳು ಕಡಿತವಾಗುತ್ತದೆ. ಇದರಿಂದ ಭಾರತದಂತಹ ದೇಶದಲ್ಲಿ ಲಕ್ಷಾಂತರ ಜನ ತಮ್ಮ ದೈನಂದಿನ ಬದುಕಿನಲ್ಲಿ ಇನ್ನಿಲ್ಲದ ಪಲ್ಲಟವನ್ನ ಅನುಭವಿಸಬೇಕಾಗುತ್ತದೆ. ಹೊಸ ಕೆಲಸಗಳ ಸೃಷ್ಟಿಯಾಗದೆ ಇರುವ ಕಾರಣದಿಂದ , ಹೊಸದಾಗಿ ಮಾರುಕಟ್ಟೆಗೆ ಬಂದ ಪದವೀಧರರ ಭವಿಷ್ಯ ಕೂಡ ಮಂಕಾಗಲಿದೆ.

೬) ವೈರಸ್ ಗಿಂತ ವೇಗವಾಗಿ ಹಬ್ಬಲಿದೆ ಅನಿಶ್ಚಿತತೆ: ಇವತ್ತು ಮಾರುಕಟ್ಟೆಯಲ್ಲಿ ಸ್ಥಿರತೆ ಎನ್ನುವುದು ಬಿಟ್ಟು ಮತ್ತೆಲ್ಲವೂ ಸಿಗುತ್ತದೆ ಎನ್ನುವ ಮಟ್ಟಕ್ಕೆ ಮಾರುಕಟ್ಟೆ ಬದಲಾಗಿದೆ. ಯಾವುದೇ ನಿರ್ಧಾರಗಳನ್ನ ತೆಗೆದುಕೊಳ್ಳಲು ಕೂಡ ನಿಖರತೆ ಇಲ್ಲದ ಕಾರಣ ನಿರ್ಧಾರವನ್ನ ಮುಂದೂಡುವುದು ನಡೆಯುತ್ತದೆ. ಬೆಳವಣಿಗೆಯಲ್ಲಿರುವ ಭಾರತದಂತಹ ದೇಶಕ್ಕೆ ಇದು ಮಾರಕ.

ಇದನ್ನೂ ಓದಿ: ಜಾಗತಿಕ ಸಮಸ್ಯೆಯಾಗಿ ಬೆಳೆದ ಹಣದುಬ್ಬರ!

ನೀವು ಗಮನಿಸಿ ನೋಡಿ, ಯಾವಾಗ ದೊಡ್ಡ ದೇಶದ ಹಣಕಾಸು ವ್ಯವಸ್ಥೆ ಹದೆಗೆಟ್ಟು, ಇದನ್ನ ಇನ್ನು ತಿದ್ದಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಹೋಗುತ್ತದೆ, ಆಗೆಲ್ಲಾ ಯುದ್ಧಗಳಾಗಿವೆ. ಅದು ಜಾಗತಿಕ ಮಟ್ಟದ ವರ್ಲ್ಡ್ ವಾರ್ ಆಗಬೇಕೆಂದಿಲ್ಲ. ಆದರೆ ಯುದ್ಧ ಕಟ್ಟಿಟ್ಟ ಬುತ್ತಿ. ಇಂದಿಗೆ ಕೂಡ ನಾವಿರುವುದು ಯುದ್ಧದ ಸಮಯದಲ್ಲಿ ಎನ್ನುವುದನ್ನ ನಾವು ಮರೆಯುವುದು ಬೇಡ. ಮುಂಬರುವ ದಿನದಲ್ಲಿ ಒಂದು ಸಣ್ಣ ಮಟ್ಟದ ಮದ್ದು ಗುಂಡು ಸಿಡಿಸಿ ಕೂಡ ಯುದ್ಧವಾಗುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬಾರದು.

ಈಗ ಜಗತ್ತಿನಲ್ಲಿ ಅಂತಹುದೇ ಸ್ಥಿತಿಯಿದೆ ಎನ್ನಲು ಒಂದಷ್ಟು ಕಾರಣಗಳನ್ನ ನೋಡೋಣ:

ಮೊದಲಿಗೆ ಅಮೆರಿಕಾ ಎನ್ನುವ ಒಂದು ಕಾಲದ ದೊಡ್ಡಣ್ಣನ ಕಿಸೆಯಲ್ಲಿ ಹೊಲಿಯಲು ಆಗದಷ್ಟು ದೊಡ್ಡ ತೂತಾಗಿದೆ. ಇದಕ್ಕೆ ಕಾರಣ ಅದು ಹೊರಡಿಸುವ ಡೆಟ್ ಬಾಂಡ್ಗಳು. ನಿಮಗೆ ಗೊತ್ತಿರಲಿ ಅಮೇರಿಕಾ ತನ್ನ ದೇಶಕ್ಕೆ ಬೇರೆ ದೇಶದಿಂದ ಎಷ್ಟು ವಸ್ತುಗಳನ್ನ ತರಿಸಿಕೊಳ್ಳುತ್ತದೆ ಅದಕ್ಕಿಂತ ಕಡಿಮೆ ವಸ್ತುಗಳನ್ನ ತನ್ನ ದೇಶದಿಂದ ಇತರ ದೇಶಕ್ಕೆ ಕಳಿಸುತ್ತದೆ. ಅಂದರೆ ಗಮನಿಸಿ ನೀವು ಬೇರೆಯವರಿಂದ ೧೦೦ ರೂಪಾಯಿ ಮೌಲ್ಯದ ವಸ್ತುವನ್ನ ತರಿಸಿಕೊಂಡಿರಿ, ಬದಲಿಗೆ ನೀವು ೬೦ ಅಥವಾ ೭೦ ರೂಪಾಯಿ ಮೌಲ್ಯದ ವಸ್ತುವನ್ನ ಅವರಿಗೆ ನೀಡಿದಿರಿ, ಹೀಗೆ ಸೃಷ್ಟಿಯಾದ ೪೦ ಅಥವಾ ೩೦ ರೂಪಾಯಿನ ಅಂತರವನ್ನ ಟ್ರೇಡ್ ಡೆಫಿಸಿಟ್ ಎನ್ನುತ್ತಾರೆ. ಈ ಹಣವನ್ನ ಕೊಡುವುದಾದರೂ ಹೇಗೆ? ಇದಕ್ಕೆ ಅಮೇರಿಕಾ ಕಂಡುಕೊಂಡ ಉತ್ತರವೇ ಡೆಟ್ ಬಾಂಡ್ಸ್ . ಕಳೆದ ಐವತ್ತು , ಅರವತ್ತು ವರ್ಷದಿಂದ ಇದೆ ಆಟವನ್ನ ಆಡಿಕೊಂಡು ಬಂದಿಂ, ವರ್ಷದಿಂದ ವರ್ಷಕ್ಕೆ ಸಾಲದ ಮೊತ್ತ ಹೆಚ್ಚುತ್ತಲೇ ಹೋಗುತ್ತಿದೆ. ಇವತ್ತು ಇದು ಬ್ರೇಕ್ ಡೌನ್ ಹಂತಕ್ಕೆ ಬಂದು ನಿಂತಿದೆ.

ಎರಡನೆಯದಾಗಿ ಇಂತಹ ಅಮೆರಿಕಾದ ಸಾಲ ಪತ್ರವನ್ನ ಹೆಚ್ಚು ಕೊಳ್ಳುವವರು ಯಾರು? ಚೀನಿಯರು ಮತ್ತು ಜಪಾನೀಯರು. ಅದರಲ್ಲೂ ಚೀನಿಯರು ತಮ್ಮ ವಸ್ತುಗಳನ್ನ ಅಮೇರಿಕಾ ಮಾರುಕಟ್ಟೆಗೆ ಸುರಿಯುತ್ತಿರಬೇಕು ಮತ್ತು ಅವರು ಕೊಡುವ ಬೆಲೆಯಿಲ್ಲದ ಡೆಟ್ ಬಾಂಡ್ ಗಳನ್ನ ಪಡೆದುಕೊಂಡು ಇಟ್ಟು ಕೊಳ್ಳಬೇಕು. ಇದರಿಂದ ತನ್ನ ಕಾರ್ಖಾನೆಯನ್ನ ಮುಚ್ಚದೆ ನಡೆಸಲು ಅದಕ್ಕೆ ಸಾಧ್ಯ. ಇದರ ಜೊತೆಗೆ ಇಲ್ಲದ ಡೊಮೆಸ್ಟಿಕ್ ಬೇಡಿಕೆಯನ್ನ ಸೃಷ್ಟಿಸಿ ಚೀನಾ ತಾನೇ ತೋಡಿದ ಹಳ್ಳದಲ್ಲಿ ಬಿದ್ದಿದೆ. ಚೀನಾದ ಹೌಸಿಂಗ್ ಮಾರುಕಟ್ಟೆ ತಳ ಮುಟ್ಟಿದೆ. ಅಲ್ಲಿ ಹೂಡಿಕೆಯಾಗಿದ್ದ ಸಾವಿರಾರು ಕೋಟಿ ಹಣ ಯಾವುದೇ ಉತ್ಪಾದನೆಯಿಲ್ಲದೆ ಸಿಕ್ಕಿಕೊಂಡಿದೆ. ಹೀಗಾಗಿ ಅಮೇರಿಕಾ ಮತ್ತು ಚೀನಾ ಎರಡೂ ಹೆಚ್ಚು ಕಡಿಮೆ ಜರ್ಜರಿತವಾಗಿವೆ.

ಇದನ್ನೂ ಓದಿ: 'ಪೆಟಿಎಂ' ಎನ್ನುವ ಹಣ ಸುಡುವ ಮಷೀನ್ ಕಥೆ ಇಲ್ಲಿದೆ!

ಮೂರನೆಯದಾಗಿ ಯೂರೋಪಿನಲ್ಲಿ ಜನರು ಸರಕಾರದ ವಿರುದ್ಧ ದಂಗೆ ಏಳದಂತೆ ತಡೆಯಲು ಇನ್ನಿಲ್ಲದ ಸಾಹಸಗಳು ಆಗುತ್ತಿವೆ. ಜಗತ್ತಿನಲ್ಲಿ ಎಲ್ಲಕ್ಕಿಂತ ಮುಂಚೆ ವ್ಯವಸ್ಥೆಯ ವಿರುದ್ಧ ದಂಗೆ ಏಳುವುದು ಯೂರೋಪಿಯನ್ನರು. ಹೀಗೆ ತನ್ನ ಬುದ್ದಿವಂತ ಜನತೆಯನ್ನ ನಿಜವಾದ ಸಮಸ್ಯೆಯಿಂದ ದೂರವಿರಿಸಿ, ಹೊಸ ಸಮಸ್ಯೆಯತ್ತ ಸೆಳೆಯುವುದು ಅದರ ಉದ್ದೇಶ.

ಕೊನೆಮಾತು: ಒಟ್ಟಿನಲ್ಲಿ ಜಗತ್ತು ಇಂದು ಅತ್ಯಂತ ಅನಿಶ್ಚಿತತೆಯಿಂದ ಕೂಡಿದೆ ಎಂದು ಧಾರಾಳವಾಗಿ ಹೇಳಬಹುದು. ಡಿಸೆಂಬರ್ ತಿಂಗಳಲ್ಲಿ ಕೂಡ ಇಂತಹ ಒಂದು ವೈರಸ್ ಸದ್ಧು ಮಾಡುತ್ತದೆ ಎಂದರೆ, ಲಾಭಕ್ಕಿಂತ ದೊಡ್ಡದಾದ ಕಾರಣವಿದೆ. ಅದೇನಿರಬಹದು? ಎನ್ನುವ ಕುತೊಹಲ, ತವಕ ಎಲ್ಲರಿಗೂ ಇದ್ದೆ ಇರುತ್ತದೆ. ಸದ್ಯದ ಮಟ್ಟಿಗೆ ಕಣ್ಣಿಗೆ ಕಾಣದ ಈ ಕಾರಣ ಅನಾವರಣವಾಗಲು ಕೂಡ ಹೆಚ್ಚು ಸಮಯ ಹಿಡಿಯದು. ಆದರೆ ಮುಂಬರುವ ದಿನಗಳು ಕೂಡ ಸಾಮಾನ್ಯವಾಗಿ, ಸರಳವಾಗಿ ಇರುವುದಿಲ್ಲ. ಅದಕ್ಕೆ ಬೇಕಾದ ಸಿದ್ದತೆಯಲ್ಲಿ ನಾವಿರುವುದು ಉತ್ತಮ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com