ಪಿತ್ತಕೋಶದ ಹರಳುಗಳು: ಶಸ್ತ್ರಚಿಕಿತ್ಸೆ ಬಳಿಕ ಕೈಗೊಳ್ಳಬೇಕಾದ ಎಚ್ಚರಿಕೆಗಳು...(ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಪಿತ್ತಕೋಶದ ಹರಳು ಗಳ (Gallbladder stone) ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುರಾತನ ಈಜಿಪ್ಪಿನ ‘ಮಮ್ಮಿ’ ಗಳಲ್ಲೂ ಪಿತ್ತಕೋಶದ ಹರಳನ್ನು ಗುರುತಿಸಲಾಗಿದೆ.
ಪಿತ್ತಕೋಶದ ಹರಳು (ಸಾಂಕೇತಿಕ ಚಿತ್ರ)
ಪಿತ್ತಕೋಶದ ಹರಳು (ಸಾಂಕೇತಿಕ ಚಿತ್ರ)

ಪಿತ್ತಕೋಶದ ಹರಳುಗಳ (Gallbladder stone) ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುರಾತನ ಈಜಿಪ್ಪಿನ ‘ಮಮ್ಮಿ’ ಗಳಲ್ಲೂ ಪಿತ್ತಕೋಶದ ಹರಳನ್ನು ಗುರುತಿಸಲಾಗಿದೆ. ಆದರೆ 1989ರ ತರುವಾಯ ಪಿತ್ತಕೋಶ ಶಸ್ತ್ರಕ್ರಿಯೆಗಳು ಹೆಚ್ಚಳವಾಗಿವೆ. ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ಈ ತೊಂದರೆ ಅಧಿಕವಾಗಿದೆ. ದೆಹಲಿಯಲ್ಲಿ ಪ್ರತಿ 1,00,000 ಮಹಿಳೆಯರಲ್ಲಿ 21 ಮಂದಿ ಪಿತ್ತಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಪಿತ್ತಕೋಶದ ಕಲ್ಲುಗಳು ಕ್ಯಾನ್ಸರ್ ಗೆ ದಾರಿ ಮಾಡಿಕೊಡಬಹುದಾದ ಅಂಶಗಳಲ್ಲೊಂದಾಗಿವೆ. 

ಪಿತ್ತಕೋಶದ ಸಮಸ್ಯೆ ಹೆಚ್ಚಲು ನಮ್ಮ ಪಾಶ್ಚಾತ್ಯ ಜೀವನಶೈಲಿ, ಆಹಾರ ಸೇವನೆಯಲ್ಲಾದ ಬದಲಾವಣೆಯೂ ಸೇರಿದೆ. ಗಂಗಾ ನದಿ ತೀರದ ಸುತ್ತಮುತ್ತಲಿನ ನಗರದಲ್ಲಿ ನಡೆದ ವೈದ್ಯಕೀಯ ಸರ್ವೇಕ್ಷಣೆ ಲೋಹ ಹಾಗೂ ರಾಸಾಯನಿಕಗಳಿಂದ ಉಂಟಾಗುವ ಮಾಲಿನ್ಯದ ಪಾತ್ರವೂ ಪಿತ್ತಕೋಶದ ಹರಳು-ಕ್ಯಾನ್ಸರ್ ಹೆಚ್ಚುವಲ್ಲಿ ಇರಬಹುದೆಂಬ ಸಂದೇಹಕ್ಕೆ ಕಾರಣವಾಗಿದೆ. 

ಪಿತ್ತಕೋಶ ಕುರಿತು...
ಪಿತ್ತಕೋಶ ಪಿಯರ್ ಹಣ್ಣಿನ ಆಕಾರದ ಅಂಗಾಂಗ. ಇದು ನಮ್ಮ ದೇಹದಲ್ಲಿ ಯಕೃತ್ತಿನ ಕೆಳಭಾಗದಲ್ಲಿದೆ. 7.2 ರಿಂದ 12.5 ಸೆಂಟಿಮೀಟರ್‍ನ ದೇಹದಲ್ಲಿ ಉತ್ಪತ್ತಿಯಾದ ಪಿತ್ತರಸದಿಂದ ನೀರು ಹಾಗೂ ಇತರೆ ಅವಶ್ಯ ಲವಣಾಂಶ ಹೀರಿಕೊಳ್ಳಲು ಇದು ಸಹಕಾರಿ. ಪಿತ್ತಕೋಶದ ಸರಾಸರಿ ಸಾಮರ್ಥ್ಯ 30 ರಿಂದ 50 ಮಿ.ಲೀ. ಆಗಿದೆ.

ಈ ಪುಟ್ಟ ಚೀಲದಂತಹ ಅಂಗಾಂಗ 300 ಮಿ.ಲೀ. ನಷ್ಟು ಪಿತ್ತರಸವನ್ನು ಸಂಗ್ರಹವಾಗುವಷ್ಟು ಹಿಗ್ಗಬಹುದಾದ ಸಾಮರ್ಥ್ಯ ಹೊಂದಿದೆ. ನಮ್ಮ ದೇಹದಲ್ಲಿ ಪ್ರತಿ ಗಂಟೆಗೆ ಸುಮಾರು 40 ಮಿ.ಲೀ ಪಿತ್ತರಸ ಉತ್ಪತ್ತಿಯಾಗುತ್ತದೆ. ಯಕೃತ್ತಿನಿಂದ ದಿನನಿತ್ಯ 500 ರಿಂದ 1000 ಮಿ.ಲೀ ಪಿತ್ತರಸ ಉತ್ಪತ್ತಿಯಾಗುತ್ತದೆ. ಪಿತ್ತರಸದ ರಾಸಾಯನಿಕ ಪ್ರಕ್ರಿಯೆಯಲ್ಲಿ ಉಂಟಾಗುವ ಏರುಪೇರು ಹರಳುಗಳುಂಟಾಗಲು ಕಾರಣವಾಗುತ್ತದೆ. ಪಿತ್ತರಸ ಶೇ. 97 ರಷ್ಟು ನೀರು, ಶೇ. 1 ರಿಂದ 2 ರಷ್ಟು ಉಪ್ಪಿನಂಶ, ಶೇ 1 ರಷ್ಟು ಕೊಬ್ಬು, ಕೊಲೆಸ್ಟರಾಲ್ ಹಾಗೂ ವಿದ್ಯುದ್ವಿಚ್ಛೇದ್ಯಗಳಿಂದ ಕೂಡಿದೆ. ಈ ಅಂಶಗಳಲ್ಲಿ ಉಂಟಾಗುವ ವ್ಯತ್ಯಾಸಗಳೇ ಹರಳುಗಳಿಗೆ ನೇರ ಕಾರಣವೆಂದರೆ ತಪ್ಪಲ್ಲ.

ಪಿತ್ತಕೋಶದ ಹರಳುಗಳು ಚಿಕ್ಕ ಮಕ್ಕಳಿಗಿಂತ ವಯಸ್ಕರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು, ಮಹಿಳೆಯರಲ್ಲಿ ಪರುಷರಿಗಿಂತ 2 ಪಟ್ಟು ಹೆಚ್ಚು ಪಿತ್ತಕೋಶ ಹರಳುಗಳು ಹುಟ್ಟಿಕೊಳ್ಳುವ ಅಪಾಯವಿರುತ್ತದೆ. ಪಿತ್ತಕೋಶದ ಹರಳಿನ ಸಮಸ್ಯೆಯನ್ನು ರೋಗಿಗಳ ಹತ್ತಿರದ ಸಂಬಂಧಿಗಳಲ್ಲೂ ಇದೇ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಯಸ್ಸು, ಲಿಂಗ, ಜನಾಂಗ, ಕುಟುಂಬ-ಇವೆಲ್ಲ ನಾವು ನಿಯಂತ್ರಿಸಲಾಗದ ಅಂಶಗಳು. ಆದರೆ ನಾವು ಜೀವನಶೈಲಿ ಹಾಗೂ ಆಹಾರ ಸಂಬಂಧಿ ಅಪಾಯಕಾರಿ ಅಂಶಗಳನ್ನು ನಿಗ್ರಹಿಸಬಹುದು. ಅಧಿಕ ಕ್ಯಾಲೋರಿಯುಳ್ಳ, ನಾರಿನಂಶ ರಹಿತ, ಕಾರ್ಬೋಹೈಡ್ರೆಟ್ ಹಾಗೂ ಕೊಬ್ಬಿನಂಶ ಅಧಿಕವುಳ್ಳ ಆಹಾರ ಸೇವನೆ ಪಿತ್ತಕೋಶದ ಹರಳಿಗೆ ಪೂರಕವಾಗಿದೆ. ಇವುಗಳ ಅಧಿಕ ಸೇವನೆಯನ್ನು ನಾವು ನಿಯಂತ್ರಿಸಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಬಹುಕಾಲದವರೆಗೆ ಕಾರ್ಯನಿಮಿತ್ತ ಉಪವಾಸವಿರುವುದು ಪಿತ್ತಕೋಶದ ಕಲ್ಲು ಹುಟ್ಟಲು ಕಾರಣವಾಗಬಲ್ಲದು. ಒಂದೇ ಸಮನೆ ತೂಕ ಇಳಿಸಲು ಪ್ರಯತ್ನಿಸುವವರಲ್ಲೂ ಈ ಹರಳಿನ ಸಮಸ್ಯೆಯುಂಟಾಗುವ ಭೀತಿ ಇದೆ. ಪಿತ್ತಕೋಶದ ಹರಳುಗಳಿಗೂ ಅಧಿಕ ಗರ್ಭಧಾರಣೆ ಹಾಗೂ ಸಂತಾನ ನಿಯಂತ್ರಣಕ್ಕೆ ಬಳಸುವ ಹಾರ್ಮೋನುಗಳಿಗೂ ಸಂಬಂಧವಿದೆ ಎಂದು ವೈಜ್ಞಾನಿಕ ವರದಿಗಳಿವೆ.

ಸ್ಥೂಲಕಾಯ, ಹಾರ್ಮೋನು ಥೆರಪಿ, ಕರುಳಿನ ಶಸ್ತ್ರಕ್ರಿಯೆ, ಕೆಲ ಸೋಂಕುಗಳು, ರಕ್ತ ಸಂಬಂಧಿ ಕಾಯಿಲೆಗಳಾದ ಥೆಲಸ್ಸೇಮಿಯಾ- ಇತ್ಯಾದಿಗಳು ಕೂಡಾ ಪಿತ್ತಕೋಶದ ಹರಳುಗಳಿಗೆ ನೇರ ಕಾರಣವಾಗಬಲ್ಲವು.

ಪಿತ್ತಕೋಶದ ಕಲ್ಲುಗಳೆಂದರೇನು? 

ಪಿತ್ತವು ಅಧಿಕ ಕಾಲದವರೆಗೆ ಪಿತ್ತಕೋಶದಲ್ಲಿ ಶೇಖರಣೆಗೊಂಡಾಗ ಅದರಲ್ಲಿರುವ ಜಿಡ್ಡಿನ ಪದಾರ್ಥ ಅಥವಾ ಗಾಢ ದ್ರವ್ಯ ಅಂಶವೂ ಹರಳುಗಳಂತೆ ಸಂಗ್ರಹಗೊಳ್ಳಲಾರಂಭಿಸುತ್ತವೆ. ಕೊಲೆಸ್ಟರಾಲ್ ಅಂಶ ಅಧಿಕಗೊಂಡಾಗ ಅಥವಾ ಪಿತ್ತರಸದಲ್ಲಿ ಉಪ್ಪಿನಂಶ ಹಾಗೂ ಲೆಸಿಥಿನ್ (Lecithin) ಅಂಶ ಕಡಿಮೆಯಾದಾಗ ಹರಳುಗಳ ಸಂಭವ ಹೆಚ್ಚು.

ಪಿತ್ತರಸದೊಂದಿಗೆ ಲೋಳೆ ಪದಾರ್ಥವೂ ಸೇರಿರುತ್ತದೆ. ಲೋಳೆ ಪದಾರ್ಥದಲ್ಲಿರುವ ಪ್ರೋಟೀನುಗಳು ಗಾಢ ದ್ರವ್ಯಗಳ Nucleation (ಜೀವಿಕರಣ)ಗೆ ಪೂರಕವೆನಿಸಿ ಕಲ್ಲುಗಳುಂಟಾಗಲು ಸಹಕಾರಿಯಾಗುತ್ತವೆ. ಪಿತ್ತಕೋಶ ಲೋಳೆ ಪದಾರ್ಥವನ್ನು ಸ್ರವಿಸುತ್ತದೆ. ದಿನಕ್ಕೆ ಸುಮಾರು 20 ಮಿ.ಲೀ ಲೋಳೆ ಉತ್ಪತ್ತಿಯಾಗುತ್ತದೆ. ಮೊದ-ಮೊದಲು ಚಿಕ್ಕ ಚಿಕ್ಕ ಹರಳುಗಳಾಗಿ ಕಾಣಿಸಿ ಕೊಳ್ಳುವ ಕೊಲೆಸ್ಟರಾಲ್ ಅಥವಾ ಇತರೆ ದ್ರವ್ಯಾಂಶ ನಿಧಾನವಾಗಿ ದೊಡ್ಡ ಕಲ್ಲು ಅಥವಾ ಹರಳುಗಳಾಗುತ್ತವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೊಲೆಸ್ಟರಾಲ್ ಕಲ್ಲುಗಳು ಸಾಮಾನ್ಯವಾಗಿದೆ. ಏಷ್ಯಾ ಖಂಡದಲ್ಲಿ ಕಪ್ಪು ಅಥವಾ ಕಂದು ಬಣ್ಣದ ವರ್ಣದ್ರವ್ಯದ (Pigment) ಕಲ್ಲುಗಳು ಹೆಚ್ಚಾಗಿವೆ ಎಂದು ವರದಿಗಳಿವೆ. ಬದಲಾಗುತ್ತಿರುವ ಸನ್ನಿವೇಶಗಳಲ್ಲಿ, ಪಾಶ್ಚಾತ್ಯ ಜೀವನಶೈಲಿಯಿಂದ ಏಷ್ಯಾ ಖಂಡದಲ್ಲಿ ಕೊಲೆಸ್ಟರಾಲ್ ಹಾಗೂ ವರ್ಣದ್ರವ್ಯ ಮಿಶ್ರಿತ (Mixed) ಕಲ್ಲುಗಳ ಸಾಧ್ಯತೆ ಹೆಚ್ಚಾಗಿದೆ. ಕೊಲೆಸ್ಟರಾಲ್ ಕಲ್ಲುಗಳು ಹಳದಿ ಬಣ್ಣ ಹೊಂದಿರುತ್ತವೆ.

ಪಿತ್ತಕೋಶದ ಹರಳುಗಳ ಪತ್ತೆ ಹೇಗೆ?

ಪಿತ್ತಕೋಶದ ಹರಳುಳ್ಳವರಲ್ಲಿ ಕೇವಲ ಶೇ.20 ರಷ್ಟು ಮಂದಿ ಮಾತ್ರ ತೊಂದರೆಗೊಳಗಾಗುತ್ತಾರೆ. ಅನೇಕ ಬಾರಿ ಬೇರಾವುದೋ ಸಮಸ್ಯೆಗೆಂದೇ ಸ್ಕ್ಯಾನ್ ಮಾಡಿದಾಗ ಇಲ್ಲವೇ ಹೆಚ್ಚುತ್ತಿರುವ ರೆಗ್ಯೂಲರ್ ಚೆಕ್‍ಅಪ್‍ಗಳಿಂದಾಗಿ ಇವು ಬೆಳಕಿಗೆ ಬರುತ್ತವೆ. ಪಿತ್ತಕೋಶದ ಹರಳುಗಳಿಂದಾಗಿ ಹೊಟ್ಟೆಯ ಬಲಭಾಗ, ಬೆನ್ನಹಿಂದೆ ಅಥವಾ ಬಲಭುಜದಲ್ಲಿ ಚುಚ್ಚಿದಂತಹ ತೀವ್ರ ನೋವಿನ ಸಮಸ್ಯೆಯಿರುತ್ತದೆ. ವಾಂತಿ, ಅಜೀರ್ಣವೂ ಸಾಮಾನ್ಯವಾಗಿರುತ್ತದೆ. ಪಿತ್ತನಾಳಕ್ಕೆ ಈ ಹರಳುಗಳು ತಡೆಯುಂಟು ಮಾಡಿದಾಗ ಕಾಮಾಲೆ ಕಾಣಿಸಿಕೊಳ್ಳುತ್ತದೆ. ಪಿತ್ತರಸದ ಹರಿಯುವಿಕೆ ತಡೆಯುಂಟಾಗುವುದು ಈ ವಿಕಾರಕ್ಕೆ ಕಾರಣ. ಅಲ್ಟ್ರಾ ಸೋನಾ ಗ್ರಾಫಿ ಈ ಹರಳುಗಳನ್ನು ಪತ್ತೆ ಹಚ್ಚಲು ಉತ್ತಮ ವಿಧಾನ. ಕ್ಷ-ಕಿರಣ (x-Ray) ಗಳಲ್ಲಿ ಇವು ಕಾಣಿಸುವುದಿಲ್ಲ. ಆಧುನಿಕ (Tests) ಗಳೂ ಲಭ್ಯವಿಲ್ಲದ್ದಲ್ಲಿ ಪಿತ್ತಕೋಶದ ಹರಳಿನ ನೋವನ್ನು ಅಪೆಂಡಿಕ್ಸ್‍ನ ಊರಿಯೂತ (Appendicitis) ಜಠರದ ಅಲ್ಸರ್, ಕಿಡ್ನಿಯ ಊರಿಯೂತ ಅಥವಾ ಮೇದೋಜಿರಕದ ಊರಿಯೂತವೆಂದು ವ್ಯೆದ್ಯರು ಗೊಂದಲಕ್ಕೀಡಾಗುವ ಸಾಧ್ಯತೆಯಿರುತ್ತದೆ. 
ಪಿತ್ತಕೋಶದ ಹರಳುಗಳು ದೀರ್ಘವಾಗಿದ್ದಾಗ ಊರಿಯೂತ ಅಥವಾ ಕ್ಯಾನ್ಸರ್‍ ಗೂ ಕಾರಣವಾಗಬಹುದು.

ವ್ಯೆದ್ಯರಿಗೆ ಶಸ್ತ್ರಕ್ರಿಯೆ ತಜ್ಞರಿಗೆ ಸಂಶಯ ವಿದ್ದಾಗ ಅವರು ದುಬಾರಿಯಾದ ಸಿ.ಟಿ. ಸ್ಕ್ಯಾನ್ ಮಾಡಬಹುದು. ಪಿತ್ತಕೋಶ ಕ್ಯಾನ್ಸರ್ ಪತ್ತೆಯಾದರೆ ಸುತ್ತಮುತ್ತಲಿನ ದುಗ್ಧರಸದ ಗ್ರಂಥಿ (Lymph node)ಹಾಗೂ ಯಕೃತ್ತಿನ ಭಾಗವನ್ನು ತೆಗೆಯಬೇಕಾದೀತು. ಸಾಮಾನ್ಯವಾಗಿ ಹರಳುಗಳ ತೊಂದರೆಯುಂಟು ಮಾಡುತ್ತಿದ್ದಲ್ಲಿ ಇಲ್ಲವೆ ರೋಗಿ ಹೊಟ್ಟೆಯ ಬೇರಾವುದೋ ಅಪರೇಶನ್‍ಗೆ ಒಳಗಾಗುತ್ತಿದ್ದರೆ ಮಾತ್ರ ಪಿತ್ತಕೋಶವನ್ನು ತೆಗೆಯವ (Cholecystectomy) ಶಸ್ತ್ರಕಿಯೆ ಮಾಡಲಾಗುತ್ತದೆ. ನಮ್ಮೆಲ್ಲರಿಗೆ ಶಸ್ತ್ರಕ್ರಿಯೆ ಎಂದರೆ ಭಯವಿದೆ. ಶಸ್ತ್ರಕ್ರಿಯೆಯೆ ಹೆಚ್ಚು ಪರಿಣಾಮಕಾರಿಯೆನಿಸಿದೆ. ಇದು Laparoscopic (ಲ್ಯಾಪರೊಸ್ಕೋಪಿಕ್) ಶಸ್ತ್ರಕ್ರಿಯೆಯ ಯುಗ. ಇದರಲ್ಲಿ ಕನಿಷ್ಟ ಛೇದವನ್ನು ಹೊಟ್ಟೆಯಲ್ಲಿ ಕೊರೆಯಲಾಗುವುದರಿಂದ ರೋಗಿ ಬೇಗನೆ ಚೇತರಿಸಿಕೊಳ್ಳುತ್ತಾನೆ.

ಪಿತ್ತಕೋಶದ ಶಸ್ತ್ರಕ್ರಿಯೆಯ ನಂತರ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು

ಪಿತ್ತಕೋಶದ ಶಸ್ತ್ರಕ್ರಿಯೆಯ ನಂತರ ವ್ಯಕ್ತಿ ಮೈ ತೂಕದ ಮೇಲೆ ನಿಗಾ ಇರಿಸಬೇಕು. ಕೊಬ್ಬಿನಾಂಶ ಅಧಿಕವುಳ್ಳ ಆಹಾರ ಪದಾರ್ಥ ಸೇವನೆಗೆ ಕಡಿವಾಣ ಹಾಕಬೇಕು. ಪಿತ್ತಕೋಶವನ್ನೇ ಸಂಪೂರ್ಣವಾಗಿ ತೆಗೆಯುವುದರಿಂದ ದೇಹದ ಮೇಲೆ ಅಹಿತಕರ ಪರಿಣಾಮ ಉಂಟಾಗದೆ ಎಂಬ ಸಂಶಯ ನಮ್ಮೆಲ್ಲರನ್ನೂ ಕಾಡಬಹದು. ಈ ಶಸ್ತ್ರಕ್ರಿಯೆ ನಾವು ನಮ್ಮ ಆಹಾರ ಸೇವನೆಯಲ್ಲಿ ಕೊಬ್ಬಿನಂಶ ನಿಯಂತ್ರಿಸಿದರೆ ಹೆಚ್ಚು ತೊಂದರೆ ಮಾಡದು ಎನ್ನಬಹುದು. ಏಕೆಂದರೆ ಪಿತ್ತರಸದಲ್ಲಿರುವ ಕೆಲ ಉಪ್ಪಿನಂಶ ಕೊಬ್ಬು ಕರಗಿಸಿ ದೇಹ ಅರಗಿಸಿಕೊಳ್ಳಲು ಅವಶ್ಯ. ಪಿತ್ತಕೋಶ ಈ ಪಿತ್ತವನ್ನು ಶೇಖರಿಸಿಡುವ ಚೀಲ. ಪಿತ್ತಕೋಶ ತೆಗೆಯುವುದರಿಂದ ಪಿತ್ತರಸದ ಉತ್ಪತ್ತಿಯಲ್ಲಿ ಹೆಚ್ಚು ವ್ಯತ್ಯಾಸವಾಗದು. ಆದರೆ ಇದು ಶೇಖರಣೆಗೊಳ್ಳದಿರುವುದರಿಂದ ಕೊಬ್ಬಿನಂಶ ಹೀರಿಕೊಳ್ಳುವ ಪ್ರಕ್ರಿಯೆಯಲ್ಲಿ ಸ್ವಲ್ಪ ಹಿನ್ನಡೆಯಾಗುತ್ತದೆ. ಹಾಗಾಗಿ ಪಿತ್ತಕೋಶದ ಶಸ್ತ್ರಕ್ರಿಯೆಗೆ ಒಳಗಾದವರು ಕಡಿಮೆ ಕೊಬ್ಬಿನಾಂಶ ಹಾಗೂ ಹೆಚ್ಚು ನಾರಿನಂಶವುಳ್ಳ ಆಹಾರ ಸೇವಿಸಬೇಕು.

ಕೊನೇಮಾತು: ಪಿತ್ತಕೋಶದ ಹರಳುಗಳಿಗೆ ಹೆಚ್ಚು ಕಾಲ ಆಹಾರ ಸೇವಿಸದೆ ಇರುವುದು ಕೂಡ ಕಾರಣವಾಗಬಹುದು. ಏಕೆಂದರೆ ಪಿತ್ತರಸ ಅಧಿಕ ಕಾಲ ಶೇಖರಣೆ ಗೊಂಡರೂ ಆರೋಗ್ಯಕ್ಕೆ ಅದು ಹಿತಕರವಲ್ಲ. ಕೆಲ ರೋಗಗಳಾದ ಥೆಲಸ್ಸೇಮಿಯಾ, ಸಿಕಲ್ ಸೆಲ್ ಅನೇಮಿಯಾ (ಕುಡಗೋಲು ಆಕಾರದ ರಕ್ತಕಣಗಳ ಸಮಸ್ಯೆ) ಇತ್ಯಾದಿಗಳಲ್ಲಿ ಕೆಂಪು ರಕ್ತ ಕಣಗಳು ಬೇಗನೇ ನಾಶವಾಗಿ ಹಲವು ವರ್ಣದ್ರವ್ಯ (Pigments) ಉತ್ಪತ್ತಿಗೆ ಕಾರಣವಾಗುತ್ತವೆ. ಈಗಾಗಲೇ ವಿವರಿಸಿದಂತೆ ವರ್ಣದ್ರವ್ಯಗಳು ಹರಳುಗಳಿಗೆ ಕಾರಣವಾಗಿದೆ. ಈ ಸಮಸ್ಯೆ ಏಷ್ಯಾ ಖಂಡದಲ್ಲಿ ಅಧಿಕವಾಗಿದೆ. ಇಂತಹ ಸಂದರ್ಭದಲ್ಲಿ ಪಿತ್ತಕೋಶದ ಶಸ್ತ್ರಕ್ರಿಯೆಗೆ ದೊಡ್ಡ ಛೇದನ ಅನಿವಾರ್ಯವೆನಿಸುತ್ತದೆ. ಸಣ್ಣ ರಂಧ್ರದ ಸರ್ಜರಿಯನ್ನೇ ನಾವೆಲ್ಲ ಬಯಸುತ್ತೇವೆ. ಪಿತ್ತಕೋಶದ ಹರಳಿನ ಸಮಸ್ಯೆ ಯಾವುದೇ ತೊಂದರೆಯುಂಟು ಮಾಡದೇ ಇರಬಹುದು. ಆದರೆ ತೊಂದರೆದಾಯಕವೆನಿಸಿದಾಗ ಪಿತ್ತ ಕೋಶವನ್ನು ತೆಗೆಯುವುದರಲ್ಲಿ ತಪ್ಪಿಲ್ಲ. ಈ ಸಮಸ್ಯೆ ಹೆಚ್ಚುತ್ತಿರುವುದು ಖೇದನೀಯ. ಆಹಾರ-ಜೀವನಶೈಲಿಯ ಮಾರ್ಪಾಡುಗಳು ಇದನ್ನು ತಡೆಯಲು ಸಹಕಾರಿಯಾಗಬಲ್ಲವು ಸಹಕಾರಿಯಾಗಬಲ್ಲದು.


ಡಾ. ವಸುಂಧರಾ ಭೂಪತಿ
bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com