ಬಹಳಷ್ಟು ಹೊಸತುಗಳಿಗೆ ಸಾಕ್ಷಿಯಾಗಲಿದೆ Year 2022! (ಹಣಕ್ಲಾಸು)

ಹಣಕ್ಲಾಸು-288-ರಂಗಸ್ವಾಮಿ ಮೂಕನಹಳ್ಳಿ
ಆರ್ಥಿಕ ಮುನ್ನೋಟ-2022 (ಸಾಂಕೇತಿಕ ಚಿತ್ರ)
ಆರ್ಥಿಕ ಮುನ್ನೋಟ-2022 (ಸಾಂಕೇತಿಕ ಚಿತ್ರ)

ಮುಂದೆ ಏನಾಗುತ್ತದೆ? ಎನ್ನುವ ಕುತೂಹಲ ಜಗತ್ತಿನ ಪ್ರತಿ ಜೀವಿಗೂ ಇದ್ದೇ ಇರುತ್ತದೆ. ಜೀವನದಲ್ಲಿ, ಭವಿಷ್ಯದಲ್ಲಿ ಆಗುವ ಬದಲಾವಣೆಯನ್ನ ತಿಳಿದುಕೊಳ್ಳಲು ಮನುಷ್ಯ ಮಾಡುವ ಕಸರತ್ತು ಕೂಡ ಒಂದೆರೆಡಲ್ಲ. ವ್ಯಕ್ತಿಗತ ಬದುಕುಗಳ ಕಥೆ ಬೇರೆಯದು, ಅದರ ಭವಿಷ್ಯದ ನಿಖರತೆ ಬಗ್ಗೆ ಹೇಳಲು ಆಗದು. ಆದರೆ ವಿತ್ತಲೋಕದ ಕಥೆ ಬೇರೆಯದು. ಪ್ರತಿ ಎರಡು ಮೂರು ವರ್ಷಕೊಮ್ಮೆ ಇದರ ಪಥ ಬದಲಾಗುತ್ತದೆ. ಇದು ನಡೆಯಬಹುದಾದ ದಾರಿಯನ್ನ ನಾವು ಸ್ವಲ್ಪ ಗಮನವಿಟ್ಟು ನೋಡಿದರೆ ತಿಳಿದುಕೊಳ್ಳುವುದು ಕಷ್ಟವೇನಲ್ಲ. ಹೀಗೆ ಮುಂದಿನ ಹನ್ನೆರೆಡು ತಿಂಗಳಲ್ಲಿ ಆಗಬಹುದಾದ ಸಂಭಾವ್ಯ ಬದಲಾವಣೆಗಳನ್ನ ತಿಳಿದುಕೊಳ್ಳುವುದರಿಂದ ನಮ್ಮ ಆರ್ಥಿಕ ಹೆಜ್ಜೆಯನ್ನ ಕೂಡ ನಾವು ಅದಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಅವಕಾಶ ಸಿಕ್ಕುತ್ತದೆ. ಹೀಗೆ ಸಿಕ್ಕ ಮಾಹಿತಿಯನ್ನ ಸರಿಯಾಗಿ ನಮ್ಮ ಉಪಯೋಗಕ್ಕೆ ಬಳಸಿಕೊಂಡರೆ ಒಂದಷ್ಟು ಆರ್ಥಿಕ ಲಾಭ ಕೂಡ ನಮ್ಮದಾಗಬಹುದು.  

ಮುಂದಿನ ವರ್ಷ ಅಂದರೆ 2022 ರಲ್ಲಿ ಏನೆಲ್ಲಾ ಬದಲವಾಣೆಗಳಿಗೆ ನಾವು ಸಾಕ್ಷಿಯಾಗಬಹುದು?

ಎಲ್ಲಕ್ಕೂ ಮೊದಲು ಹಣದುಬ್ಬರದ ಕಣ್ಣಾಮುಚ್ಚೆ ಆಟ 2022ರಲ್ಲಿ ಕೂಡ ಮುಂದುವರೆಯಲಿದೆ. ನಿಮಗೆಲ್ಲಾ ನೆನಪಿರಲಿ ಜಾಗತಿಕ ಮಟ್ಟದಲ್ಲಿ ಮತ್ತು ಭಾರತೀಯ ನೆಲದ ಮಟ್ಟದಲ್ಲಿ ಕೂಡ 2019ರಿಂದ 2021ರ ವರೆಗೆ ಹಣದುಬ್ಬರ ನಿರಾತಂಕವಾಗಿ ಹೆಚ್ಚಳವಾಗುತ್ತಲೇ ಬಂದಿದೆ. 2022ರಲ್ಲಿ ಹಣದುಬ್ಬರಕ್ಕೆ ಒಂದಷ್ಟು ತಡೆಯೊಡ್ಡುವ ಕಾರ್ಯವನ್ನ ಮಾಡಲಾಗುತ್ತದೆ. ಹೀಗಿದ್ದೂ ಇದು ಪೂರ್ಣ ನಿಯಂತ್ರಣಕ್ಕೆ ಬರುವುದಿಲ್ಲ. ಇದಕ್ಕೆ ಜಾಗತಿಕ ಮಟ್ಟದ ಅನೇಕ ಕಾರಣಗಳು ಅಡ್ಡ ಬರುತ್ತವೆ. ನಿಮಗೆಲ್ಲಾ ನೆನಪಿರಲಿ ಕಳೆದ ಮೂರು ವರ್ಷದಲ್ಲಿ ಹೆಚ್ಚು ಕಡಿಮೆ 89 ಪ್ರತಿಶತ ಸಾಮಾನ್ಯವಾಗಿ ಎಲ್ಲಾ ವಸ್ತುಗಳ ಬೆಲೆ ಮೇಲೆ ಆಗಿದೆ ಎಂದರೆ ಹಣದುಬ್ಬರ ನಮ್ಮ ಸಮಾಜದಲ್ಲಿ ಎಷ್ಟು ದೊಡ್ಡ ಪಿಡುಗು ಎನ್ನುವುದರ ಅರಿವು ನಿಮ್ಮದಾಗುತ್ತದೆ.

ಎರಡನೇದಾಗಿ ಬಡ್ಡಿ ದರದಲ್ಲಿ ಏರಿಕೆಯಾಗುವ ಲಕ್ಷಣಗಳಿವೆ: 2017ರಿಂದ 2021ರ ವರೆಗೆ ಬಡ್ಡಿ ದರಗಳು ದಕ್ಷಿಣಾಭಿಮುಖ ಮಾಡಿದ್ದವು. 2022ರಲ್ಲಿ ಇದಕ್ಕೆ ವಿರುದ್ಧವಾದ ಅಲೆಯನ್ನ ನಾವು ಕಾಣಬಹುದು. 2017 ರಿಂದ ಈಚೆಗೆ ಡೆಟ್ ಎನ್ನುವುದು ಬಹಳ ಚೀಪ್ ಆಗಿ ಹೋಗಿತ್ತು. ಇದರಿಂದ ಉಳ್ಳವರಿಗೆ ಅನುಕೂಲವಾಗಿದ್ದೇ ಹೆಚ್ಚು. ಉಳಿದಂತೆ ಸಣ್ಣ ಹಣವನ್ನ ಠೇವಣಿ ಇಟ್ಟವರ ಕಥೆಯದು ವ್ಯಥೆ. ಏರುತ್ತಿರುವ ಹಣದುಬ್ಬರವನ್ನ ಒಂದಷ್ಟು ನಿಯಂತ್ರಣಕ್ಕೆ ತರಲು ಬಡ್ಡಿಯನ್ನ ಹೆಚ್ಚಿಸುವ ಕೆಲಸ ವರ್ಷದ ಮುಂಚೆಯೇ ಆಗಬೇಕಿತ್ತು. ತಡವಾಗಿಯಾದರೂ ಸರಿ 2022ರಲ್ಲಿ ಹೂಡಿಕೆಯ ಮೇಲಿನ ಹಣಕ್ಕೆ ಒಂದಷ್ಟು ಹೆಚ್ಚಿನ ಬಡ್ಡಿ ಸಿಗಲಿದೆ. ಭಾರತದ ಬೆನ್ನೆಲುಬು ಸಣ್ಣ ಉಳಿತಾಯ, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ಕೇಂದ್ರ ಸರಕಾರದ ಆದ್ಯತೆಯಾಗಬೇಕು.

ತೈಲ ಬೆಲೆಯಲ್ಲಿ ತೂಗುಯ್ಯಾಲೆ: ಮೂರನೆಯದಾಗಿ 2020 ರಿಂದ 2021ರ ನಡುವಿನಲ್ಲಿ ತೈಲ ಬೆಲೆ ಹತ್ತಿರತ್ತಿರ ನೂರು ಪ್ರತಿಶತ ಏರಿಕೆಯನ್ನ ಕಂಡಿತ್ತು. ಕಳೆದೆರೆಡು ಮೂರು ತಿಂಗಳಿಂದ ಒಂದಷ್ಟು ಕುಸಿತ ಕಂಡು ಒಟ್ಟು ಬೆಲೆ ಏರಿಕೆಯನ್ನ 49 ಪ್ರತಿಶತಕ್ಕೆ ಇಳಿಸುವಲ್ಲಿ ಸಫಲವಾಗಿದೆ. ಹೀಗಿದ್ದೂ 49 ಪ್ರತಿಶತ ಏರಿಕೆ ಬಹಳ ದೊಡ್ಡದು. ತೈಲ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ತೈಲ ಉತ್ಪಾದಿಸುವ ದೇಶಗಳು ಬೇಡಿಕೆಯನ್ನ ಕುದುರಿಸಿಕೊಳ್ಳಲು ಉತ್ಪಾದನೆಯನ್ನ ಕಡಿಮೆ ಮಾಡಿರುವುದು. ಇನ್ನೊಂದು ಕಾರಣ ತೈಲದ ಬಳಕೆ ಹೆಚ್ಚಾಗಿರುವುದು. 2022ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಇದೆ ರೀತಿಯ ಅತ್ತಿತ್ತ ಓಡಾಟ ಇದ್ದೆ ಇರುತ್ತದೆ. ಆದರೆ ಭಾರತ ಸರಕಾರ ಮಾತ್ರ ತೈಲದ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಿಕೊಳ್ಳುವ ಶಪಥ ಮಾಡಿಯಾಗಿದೆ. ಹೀಗಾಗಿ ತೈಲದ ಮೇಲೆ ಹೆಚ್ಚು ಸಬ್ಸಿಡಿ ಇತ್ಯಾದಿಗಳನ್ನ ಸರಕಾರದಿಂದ ನಿರೀಕ್ಷಿಸುವತಿಲ್ಲ. ತೈಲದ ಮೇಲಿನ ಹೂಡಿಕೆ ತೈಲದ ಮೇಲೆ ಅವಲಂಬಿತ ವಾಹನಗಳ ಮೇಲೆ ಹೂಡಿಕೆ ಮಾಡುವ ಮುನ್ನ ಒಂದಷ್ಟು ಪರಿಶೀಲನೆ ಅಗತ್ಯವಿರುತ್ತದೆ.

ಚಿನ್ನ: ಜಗತ್ತಿನಲ್ಲಿ ಅಸ್ಥಿರತೆ ಹೆಚ್ಚಾದಂತೆಲ್ಲ ಚಿನ್ನದ ಮೇಲಿನ ಹೂಡಿಕೆಗೆ ಜನ ಹೆಚ್ಚು ಮಾರು ಹೋಗುತ್ತಾರೆ. 2022ನ್ನ ಪಾಂಡೆಮಿಕ್ ನಿಂದ ಎಂಡೆಮಿಕ್ ಎಂದು ಘೋಷಿಸಲು ಸರಕಾರಗಳು ತುದಿಕಾಲಿನಲ್ಲಿ ನಿಂತಿದ್ದವು. ಆದರೆ ಇದೀಗ ಮತ್ತೆ ಓಮಿಕ್ರಾನ್ ಎನ್ನುವ ಹೊಸ ರೂಪಾಂತರಿ ವೈರಸ್ ತನ್ನ ಹೊಸ ಆಟವನ್ನ ಶುರು ಮಾಡಿದೆ. ಭಾರತದ ಮಟ್ಟಿಗೆ ಈ ಲೇಖನವನ್ನ ಬರೆಯುವಾಗ ಇದು ಅಷ್ಟೊಂದು ನಷ್ಟವನ್ನ ಉಂಟು ಮಾಡಿಲ್ಲ. ಆದರೆ ಯೂರೋಪು ಮತ್ತು ಅಮೇರಿಕಾ ದೇಶಗಳನ್ನ ಈ ಹೊಸ ವೈರಸ್ ಕಾಡುತ್ತಿರುವುದು ಮಾತ್ರ ಸುಳ್ಳಲ್ಲ. ಹೀಗಾಗಿ ನಮಗೆ ಬಂದ ಅಂತಕ ಇನ್ನೂ ಪೂರ್ಣವಾಗಿ ಮುಗಿದಿಲ್ಲ. ಚಿನ್ನದ ಹೊಳಪು ಎಂದಿಗೂ ಮಾಸುವುದೂ ಇಲ್ಲ.

ಎಲೆಕ್ಟ್ರಿಕ್ ವೆಹಿಕಲ್ ಗಳ ಇರುವಿಕೆ ಕಾಣಲು ಶುರುವಾಗುತ್ತದೆ: ನಿಮಗೆಲ್ಲಾ ಗೊತ್ತಿರಲಿ ಜಪಾನ್ ದೇಶದ ದೈತ್ಯ ಕಾರ್ ಮೇಕರ್ ಟೊಯೋಟಾ ಈ ಕ್ಷೇತ್ರದಲ್ಲಿ 35 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ 2022 ರಿಂದ 2030 ಅಂದರೆ ಮುಂದಿನ 8 ವರ್ಷದಲ್ಲಿ ಹೂಡಿಕೆ ಮಾಡಲಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಟೆಸ್ಲಾ, ಜನರಲ್ ಮೋಟರ್ಸ್ ಇತ್ಯಾದಿ ಸಂಸ್ಥೆಗಳಿಗೆ ಇದರಿಂದ ಒಬ್ಬ ಬಲಾಢ್ಯ ಎದುರಾಳಿ ಸಿಕ್ಕಂತಾಯ್ತು. ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ, ಉತ್ತಮ ಪದಾರ್ಥ ಸಿಗುತ್ತದೆ. ಭಾರತದಲ್ಲಿ ಕೂಡ ಟಾಟಾ ಮೋಟಾರ್ಸ್ ನವರು ಈ ಕಾರ್ಯ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಇಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಈ ವಲಯಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯ ಕ್ಷೇತ್ರದಲ್ಲಿ ಹೂಡಿಕೆಯನ್ನ ಮಾಡಬಹುದು. 2022 ರಲ್ಲಿ ಈ ವಲಯದಲ್ಲಿ ಆಗುವ ಬದಲಾವಣೆಗಳು ಜನರಿಗೆ ಕಾಣುವಂತೆ ಇರುತ್ತದೆ.

ಪಾಂಡೆಮಿಕ್ ನ್ನು ಎಂಡೆಮಿಕ್ ಎಂದು ಘೋಷಿಸುವ ಸಾಧ್ಯತೆಯಿದೆ: ಪ್ರಥಮ ಮೂರು ತಿಂಗಳಲ್ಲಿ ಈ ಸಾಧ್ಯತೆ ಕಡಿಮೆ. 2022ರ ಮಧ್ಯದ ವೇಳೆಗೆ ಬೂಸ್ಟರ್ ಡೋಸ್ ಗಳನ್ನ ಕೂಡ ನೀಡಲಾಗುತ್ತದೆ. ಕೊರೋನ, ಓಮಿಕ್ರಾನ್ ಇತ್ಯಾದಿಗಳು ಕೇವಲ ಒಂದು ಸಣ್ಣ ನೆಗಡಿ, ಶೀತ ಎಂದು ಘೋಷಿಸುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬರುವುದಿಲ್ಲ. ನೋ ಒನ್ ಇಸ್ ಸೇಫ್ ಎಂದು ಜಗತ್ತಿನಾದ್ಯಂತ ಹುಯಿಲೆಬ್ಬಿಸಿದ್ದ ಈ ವೈರಸ್ ನಿಂದ ಎವೆರಿ ಒನ್ ಇಸ್ ಸೇಫ್ ಎಂದು, ಮತ್ತು ಇದು ಮ್ಯಾನೇಜಬಲ್ ಖಾಯಿಲೆ ಎಂದು ತೀರ್ಮಾನಕ್ಕೆ ಬರಲಾಗುತ್ತದೆ.

ಏರಿಕೆ ಕಾಣಲಿರುವ ಅಸಮಾನತೆಯ ಕೂಗು: ಕಳೆದ ಎರಡು ವರ್ಷ ಮನುಷ್ಯ ಮತ್ತು ಮನುಷ್ಯನ ನಡುವಿನ ಅಂತರವನ್ನ ಬಹಳ ಹಿಗ್ಗಿಸಿದೆ. ಹೆಣ್ಣು ಗಂಡಿನ ನಡುವಿನ ವೇತನ ತಾರತಮ್ಯ, ಕಪ್ಪು-ಬಿಳಿ-ಗೋಧಿ ಬಣ್ಣದ ಕಾದಾಟ ಕೂಡ ಹೆಚ್ಚಾಗಲಿದೆ. ಅಮೇರಿಕಾ ದೇಶದ ಒಂದು ನಗರದಲ್ಲಿ ಮಾಡಿದ ಒಂದು ಸರ್ವೆಯ ಪ್ರಕಾರ ಕರಿಯರು ವರ್ಕ್ ಫ್ರಮ್ ಹೋಂ ಅನ್ನು ಬೆಂಬಲಿಸುತ್ತಿದ್ದಾರೆ. ಅದಕ್ಕೆ ಇವರು ನೀಡುವ ಕಾರಣ ಆಫ್ ಲೈನ್ ನಲ್ಲಿ ಬಿಳಿಯ ಸೂಪ್ರವೈಸರ್ಗೆ ಉತ್ತರಿಸುವುದು ಇಷ್ಟವಿಲ್ಲ ಎನ್ನುವ ಹೇಳಿಕೆ ಬಯಲಾಗಿದೆ. ಇದು ಅಲ್ಲಿ ಮಾತ್ರವಲ್ಲ, ಭಾರತದಲ್ಲಿ ಸನ್ನಿವೇಶಗಳು ಬದಲಾಗಿವೆ ಆದರೂ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಮಾತ್ರ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಇದು ಕೂಡ 2022 ರಲ್ಲಿ ನಾವು ಉತ್ತರಿಸಬೇಕಾದ ಸಮಸ್ಯೆಯಾಗಿ ನಮ್ಮ ಮುಂದೆ ಬಂದು ನಿಲ್ಲಲಿದೆ.

ಕ್ರಿಪ್ಟೋ ಕರೆನ್ಸಿ ಗೆ ಮೂಗುದಾರ: ಜಗತ್ತಿನಾದ್ಯಂತ ಯುವ ಜನತೆ ಈ ಹಣದ ಬಗ್ಗೆ ತೋರುತ್ತಿರುವ ಮೋಹ, ಮತ್ತು ಗಳಿಗೆ ಗಳಿಗೆಗೂ ಬದಲಾಗುವ ಇದರ ಮೌಲ್ಯದ ವೇಗ ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳು ಇದನ್ನ ತಮ್ಮ ರೀತಿ ನೀತಿಗಳ ಅಡಿಯಲ್ಲಿ ತರಲು ಬಲವಾಗಿ ಚಿಂತಿಸುವಂತೆ ಮಾಡಿದೆ. 2022ರಲ್ಲಿ ಒಂದೊಂದೇ ದೇಶಗಳು ಇಂತಹ ಹಣದ ಮೇಲೆ ಒಂದಷ್ಟು ನಿರ್ಬಂಧನೆಗಳನ್ನ ಹೇರುವುದು ಅಥವಾ ತಮ್ಮದೇ ಆದ ಕ್ರಿಪ್ಟೋ ಹಣವನ್ನ ಜಾರಿಗೆ ತರುವ ಕೆಲಸಗಳು ಖಂಡಿತ ಆಗಲಿವೆ. ಮುಖ್ಯವಾಹಿನಿ ಹಣಕಾಸು ಸಂಸ್ಥೆಗಳು ಈ ಕೆಲಸವನ್ನ ಮಾಡದಿದ್ದರೆ ಫಿನ್ ಟೆಕ್ ಸಂಸ್ಥೆಗಳು ಇದನ್ನ ಭಾಗಾಂಶ ತಮ್ಮದು ಎನ್ನುವಂತೆ ಅಪಹರಿಸಿಬಿಡುವ ಸಾಧ್ಯತೆಗಳು ಕೂಡ ಇದೆ.

ಆಕಾಶದಲ್ಲಿನ ಆಟಕ್ಕೂ ಸ್ಪರ್ಧೆ: ಮನುಷ್ಯನಿಗೆ ಭೂಮಿಯನ್ನ ಸುತ್ತಿ ನೋಡಿ ಬೇಸರ ಬಂದಿದೆ ನೋಡಿ, ಅದಕ್ಕೆ ಈಗ ಅವನ ಕಣ್ಣು ಆಕಾಶದ ಮೇಲೆ ಬಿದ್ದಿದೆ. 2021ರಲ್ಲಿ ಅಮೆರಿಕಾದ ಮೂರು ಸ್ಪೇಸ್ ಸಂಬಂಧಿ ಸಂಸ್ಥೆಗಳು ಪ್ರವಾಸಿಗರನ್ನ ನಭಕ್ಕೆ ಕರೆದೊಯ್ಯುವ ಕಾಯಕದಲ್ಲಿ ಪೈಪೋಟಿಯನ್ನ ತೋರುತ್ತಿದ್ದವು. 2022ರ ಜನವರಿ ಅಥವಾ ಫೆಬ್ರವರಿಯಲ್ಲಿ ಸ್ಪೇಸ್ ಎಕ್ಸ್ ಸಂಸ್ಥೆ ತನ್ನ ಗ್ರಾಹಕರನ್ನ ಸ್ಪೇಸ್ ಗೆ ಕರೆದೊಯ್ಯಲಿದೆ. ಇದರಿಂದ ಕೇವಲ ಪ್ರವಾಸಿಗಳ ಖರ್ಚು ವೆಚ್ಚವಷ್ಟೇ ಅಲ್ಲ, ಸಂಸ್ಥೆಯ ಲಾಭ, ನಷ್ಟವನ್ನ ಮೀರಿ ಜಾಗತಿಕ ಮಟ್ಟದಲ್ಲಿ ಇದೊಂದು ಹೊಸ ಪ್ರವಾಸೋದ್ಯಮವನ್ನ ಜಗತ್ತಿಗೆ ಪರಿಚಯಲಿಸಲಿದೆ. 2022 ಇಂತಹ ಒಂದು ಹೊಸ ಚರಿತ್ರೆ ಸೃಷ್ಟಿಯಾಗುವುದಕ್ಕೆ ನಾವು ಸಾಕ್ಷಿಯಾಗಲಿದ್ದೇವೆ.

ಜಾಗತಿಕ ವಾತಾವರಣ ಬದಲಾವಣೆ: ಅಂತರಾಷ್ಟ್ರೀಯ ವಲಯದಲ್ಲಿ ಕ್ಲೈಮೆಟ್ ಚೇಂಜ್ ಎಂದು ಕುಪ್ರಸಿದ್ದಿ ಹೊಂದಿರುವ ಈ ವಿಷಯ ಪ್ರತಿ ವರ್ಷದಂತೆ ಈ ವರ್ಷವೂ ಮನು ಕುಲವನ್ನ ಕಾಡಲಿದೆ. ಆದರೆ ಇದರ ಬಲ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನ ನಾಶ ಮಾಡುತ್ತಾ ಬಂದಿದ್ದಾನೆ. ಇದರಿಂದ ಸಹಜವಾಗಿ ಕಾಲ ಕಾಲಕ್ಕೆ ಆಗಬೇಕಿದ್ದ ಚಳಿ, ಮಳೆ ಮತ್ತು ಗಾಳಿಯ ಸಮಯದಲ್ಲಿ ಏರುಪೇರಾಗಿದೆ. ಆ ಕಾಲದಲ್ಲಿ ಆಗುವ ಈ ಪ್ರಾಕೃತಿಕ ನಡೆಯಿಂದ ಸಮಾಜದಲ್ಲಿ ಭಾರಿ ವ್ಯತ್ಯಯ ಕಂಡು ಬರುತ್ತದೆ. ಸಾವಿರಾರು ಕೋಟಿ ಸಂಪಾದಿಸಿದ ಮನುಷ್ಯ ಲಕ್ಷಾಂತರ ಕೋಟಿ ವ್ಯಯಿಸಿದರೂ ವಾಸಿ ಮಾಡಲಾಗದ ಗಾಯವನ್ನ ಪ್ರಕೃತ್ತಿಗೆ ಮಾಡಿದ್ದಾನೆ. ಪ್ರಕೃತ್ತಿ ಖಂಡಿತ ಇದನ್ನ ಬಡ್ಡಿ ಸಮೇತ ವಸೂಲಿ ಮಾಡಿಯೇ ತಿರುತ್ತದೆ.

ಕೊನೆಮಾತು: ಜಗತ್ತಿನಾದ್ಯಂತ ಆರ್ಥಿಕ ತಜ್ಞರು ಮುಂದಿನ ಹನ್ನೆರೆಡು ತಿಂಗಳಲ್ಲಿ ಆಗಬಹುದಾದ ಬದಲಾವಣೆಗಳ ಸಂಭ್ಯಾವತೆಯನ್ನ ಪಟ್ಟಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಬದಲಾವಣೆ ಎನ್ನುವುದು ನಿರಂತರ, ಬದಲಾವಣೆಗೆ ನಾವು ಅಂಜಬೇಕಿಲ್ಲ. ನಾವಿರುವ ನೆಲ, ಜಲವನ್ನ ಸಂರಕ್ಷಿಸದೇ ಇದ್ದರೆ ಎಷ್ಟೇ ದೊಡ್ಡ ಮಟ್ಟದ ಅಭಿವೃದ್ಧಿ ಕೂಡ ನಿಷ್ಪ್ರಯೋಜಕ. ಇದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿಕೆಗೆ ಹಾನಿ ಮಾಡುವ ಯಾವುದೇ ಪ್ರಾಜೆಕ್ಟ್ ಇರಲಿ, ಅದೆಷ್ಟೇ ದೊಡ್ಡ ಮಟ್ಟದ ಲಾಭ ತಂದುಕೊಡಲಿ, ಅಲ್ಲಿ ಹೂಡಿಕೆ ಮಾಡುವುದಿಲ್ಲ ಎನ್ನುವ ದೀಕ್ಷೆ ಪ್ರತಿಯೊಬ್ಬ ಹೂಡಿಕೆದಾರನೂ ತೆಗೆದುಕೊಂಡರೆ ಅಲ್ಲಿಗೆ ಅರ್ಧ ಸಮಸ್ಯೆ ಮುಗಿದಂತೆ, ಉಳಿದಂತೆ ಬದಲಾವಣೆಗಳ ಮೇಲೆ ಒಂದು ದೃಷ್ಟಿ ಇಟ್ಟಿರುವುದು ಸದಾ ಒಳ್ಳೆಯದು.  

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com