ದೇವರಲ್ಲಿ ನಂಬಿಕೆ ಎಷ್ಟಿರಬೇಕು ಹೇಗಿರಬೇಕು? (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ಮಂತ್ರಿ ಪದವಿ ಸಿಗದ ಎಂ ಎಲ್ ಎ, ಎಂ ಪಿ ಗಳು, ಪ್ರತಿ ಪಕ್ಷದಲ್ಲಿರುವ ರಾಜಕೀಯ ಧುರೀಣರು, ಪ್ರಾಣಾಂತಿಕ ಕಾಯಿಲೆಯಿಂದ ಬಳಲುವ ರೋಗಿಗಳು, ಹತ್ತಾರು ಪೂಜಾ ಸ್ಥಳಗಳಿಗೆ ಲಗ್ಗೆ ಹಾಕುತ್ತಾರೆ. ಈ ಪೂಜಾ ಸ್ಥಳ ಮಂದಿರಗಳಿಗೆ ಯಥೋಚಿತ್ ಕಾಣಿಕೆಗಳನ್ನು ಸಲ್ಲಿಸುತ್ತಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಆಸ್ತಿಕರ ಬೋಧನೆ

"ದೇವರನ್ನು ಅಖಂಡವಾಗಿ ನಂಬಿ, ದೇವರು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ, ಸುಖ ಸಂತೋಷಗಳನ್ನು ಕೊಡುತ್ತಾನೆ, ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾನೆ, ಅಪಾಯಗಳಿಂದ ನಿಮ್ಮನ್ನು ರಕ್ಷಿಸುತಾನೆಂದು" ಎಲ್ಲಾ ದೇವಸ್ಥಾನ -ಚರ್ಚು -ಮಸೀದಿಗಳ ಧರ್ಮಾಧಿಕಾರಿಗಳು ಬೋಧಿಸುತ್ತಾರೆ. ದೇವರನ್ನು ಭಕ್ತಿ ಶ್ರದ್ಧೆಗಳಿಂದ ಪ್ರಾರ್ಥಿಸಿ, ಪೂಜಿಸಿ, ಹರಕೆ ಕಾಣಿಕೆಗಳನ್ನು ಸಲ್ಲಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ನೀವು ಮಾಡಿದ ತಪ್ಪುಗಳನ್ನು, ಪಾಪಗಳನ್ನು ದೇವರು ಕ್ಷಮಿಸುತ್ತಾನೆ. ಆತ ದಯಾಮಯಿ, ನಂಬದಿದ್ದರೆ ಪೂಜೆ, ಪ್ರಾರ್ಥನೆ, ಹರಕೆ ಕಾಣಿಕೆಗಳನ್ನು ಸಲ್ಲಿಸದಿದ್ದರೆ, ದೇವರು ನಿಮಗೆ ಕಠಿಣ - ಕಠಿಣ ಶಿಕ್ಷೆಯನ್ನು ನೀಡುತ್ತಾನೆ, ಸತ್ತ ಮೇಲೆ ನಿಮ್ಮನ್ನು ನೇರವಾಗಿ ನರಕಕ್ಕೆ ತಳತ್ತಾನೆ ಎಂದು ಎಚ್ಚರಿಸುತ್ತಾರೆ. ಇದನ್ನು ನಂಬಿದ ಜನಸಾಮಾನ್ಯರು ಎಲ್ಲಾ ಪೂಜಾ ಸ್ಥಳಗಳಿಗೆ ಶ್ರದ್ಧಾ ಭಕ್ತಿಗಳಿಂದ ಹೋಗುತ್ತಾರೆ, ತಮ್ಮ ಆಸೆ, ಬಯಕೆಗಳನ್ನು ಹೇಳಿಕೊಂಡು, ಅವು ಈಡೇರುತ್ತವೆ ಎಂದು ನಂಬುತ್ತಾರೆ, ತಮಗುಂಟಾಗಿರುವ ಕಷ್ಟನಷ್ಟಗಳನ್ನು ಕಾಡುವ ರೋಗರುಜಿನಗಳನ್ನು ದೂರ ಮಾಡು ಎಂದು ಮೊರೆ ಇಡುತ್ತಾರೆ. ಮಕ್ಕಳಾಗದ ದಂಪತಿಗಳು, ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗ ಬೇಟೆಯಲ್ಲಿರುವ ನಿರುದ್ಯೋಗಿಗಳು, ನಷ್ಟದಲ್ಲಿರುವ ವ್ಯಾಪಾರಿಗಳು, ಚುನಾವಣೆಗೆ ನಿಂತಿರುವ ಹುರಿಯಾಳುಗಳು, ಮಂತ್ರಿ ಪದವಿ ಸಿಗದ ಎಂ ಎಲ್ ಎ, ಎಂ ಪಿ ಗಳು, ಪ್ರತಿ ಪಕ್ಷದಲ್ಲಿರುವ ರಾಜಕೀಯ ಧುರೀಣರು, ಪ್ರಾಣಾಂತಿಕ ಕಾಯಿಲೆಯಿಂದ ಬಳಲುವ ರೋಗಿಗಳು, ಹತ್ತಾರು ಪೂಜಾ ಸ್ಥಳಗಳಿಗೆ ಲಗ್ಗೆ ಹಾಕುತ್ತಾರೆ. ಈ ಪೂಜಾ ಸ್ಥಳ ಮಂದಿರಗಳಿಗೆ ಯಥೋಚಿತ್ ಕಾಣಿಕೆಗಳನ್ನು ಸಲ್ಲಿಸುತ್ತಾರೆ.

ನಾಸ್ತಿಕರ ವಾದ
ದೇವರು ಇಲ್ಲ, ದೇವಸ್ಥಾನಗಳ ಧರ್ಮಾಧಿಕಾರಿಗಳು, ಪೂಜಾರಿಗಳು, ಹೇಳುವುದೆಲ್ಲ ಬರೀ ಬುರುಡೆ. ದೇವಸ್ಥಾನಗಳಿಗೆ ಹೋಗಿ ದೇವರಿಗೆ ಪ್ರಾರ್ಥನೆ ಪೂಜೆ ಸಲ್ಲಿಸಿ ಬಿಟ್ಟರೆ ನಿಮ್ಮ ಕಷ್ಟ - ಸಂಕಟಗಳು, ರೋಗರುಜಿನಗಳು, ಅಕಾಲಿಕ- ಅಸಹಜ ಸಾವುಗಳು ನಿವಾರಣೆ ಆಗುವುದಿಲ್ಲ ಎಂದು ಚರ್ವಾಕರು, ಲೋಕಾಯುತರು, ಸಾಂಖ್ಯರು, ಬೌದ್ಧರು ಸಾರಿ ಹೇಳಿದರು. ಅವರನ್ನು ನಾಸ್ತಿಕರೆಂದು ಕರೆಯಲಾಯಿತು.

ಬುದ್ಧನ ಬೋಧನೆ
ಮನುಷ್ಯನಾಗಿ ಹುಟ್ಟಿದ ಮೇಲೆ ರೋಗ-ರುಜಿನ, ಮುಪ್ಪು, ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ದುಃಖವನ್ನು, ನೋವನ್ನು ತಗ್ಗಿಸಬಹುದು ಆಸೆ ಅತಿ ಆಸೆಗಳೇ ದುಃಖಕ್ಕೆ ಕಾರಣ, ಅದನ್ನು ಬಿಡಿ, ತಗ್ಗಿಸಿ, ಸರಳ ಜೀವನ ಮಾಡಿ. ಇಂದ್ರಿಯ ಲಾಲನೆ ಗಳಿಗೆ ಕಡಿವಾಣ ಹಾಕಿ, ಸಂಪತ್ತಿನ ಸಂಗ್ರಹ ಮಾಡಲು ಹೋಗಬೇಡಿ ಎಂದು ಗೌತಮ ಬುದ್ಧ ಬೋಧಿಸಿದ. ಸ್ತ್ರೀಯರು ಭೋಗ ವಸ್ತುಗಳಲ್ಲ ಅವರಿಗೂ ಗೌರವ ಕೊಡಿ ಎಲ್ಲರಿಗೂ ಪ್ರೀತಿ - ದಯೆ ತೋರಿ ಎಂದ.

ಪ್ರಕೃತಿಯಲ್ಲಿ ದೇವರು
ಪ್ರಾರಂಭದಲ್ಲಿ ಮನುಷ್ಯ ಕಣ್ಣಿಗೆ ಕಾಣುವ ಪ್ರಕೃತಿಯನ್ನು ಪೂಜಿಸಿದ ಬೆಂಕಿ, ಗಾಳಿ, ನೀರು, ಭೂಮಿ, ಸೂರ್ಯ, ಚಂದ್ರರೇ ದೇವರಾದರು ಅನಂತರ ನಿರಾಕಾರ ಶಕ್ತಿಯನ್ನು ಆರಾಧಿಸಿದ, ನಿರಾಕಾರಕ್ಕೆ ಆಕಾರ ವಿರುವ ದೇವರು ಹೆಚ್ಚು ಆಕರ್ಷಣೀಯ ಎಂದು ಊಹಿಸಿ ದೇವರನ್ನು ಮನುಷ್ಯರೂಪದಲ್ಲೇ ನೋಡಬಯಸಿದ. ಅನಂತ ಶಕ್ತಿಯ ದೇವರಿಗೆ ನಮ್ಮ ಹಾಗೆ ಒಂದು ತಲೆ ಎರಡೇ ಕಣ್ಣು ಎರಡೇ ಕೈಗಳಿದ್ದರೆ ಹೇಗೆಂದು ಚಿಂತಿಸಿ, ತಲೆ ಕೈಗಳು ಇರಲಿ ಎಂದು ಕಲ್ಪನೆ ಮಾಡಿದ. ಸೃಷ್ಟಿಮಾಡಲು ಒಬ್ಬ ದೇವರು, ಪೋಷಿಸಿ ರಕ್ಷಿಸಲು ಒಬ್ಬ ದೇವರು, ಲಯ ನಾಶಕ್ಕೆ ಒಬ್ಬ ದೇವರು ಮೂಡಿಬಂದರು, ಅವರ ಪತ್ನಿಯರು, ಮಕ್ಕಳು, ವಾಹನಗಳು, ದೇವರಾದರು. ದೇವರನ್ನು ಪ್ರಸನ್ನಗೊಳಿಸಲು ತಾನು ಸೇವಿಸುವ ಆಹಾರ, ತೊಡುವ ವಸ್ತ್ರ, ಚಿನ್ನ-ಬೆಳ್ಳಿ, ಒಡವೆಗಳನ್ನು, ಪ್ರಾಣಿಗಳನ್ನು ದೇವರಿಗೆ ಕೊಟ್ಟು ಪ್ರಾರ್ಥಿಸತೊಡಗಿದೆ, ಮಣ್ಣು, ಮರ ಕಲ್ಲಿನಲ್ಲಿ ಮೂರ್ತಿ ಮಾಡಿ ಪೂಜಿಸಿದ, 

ದೇವಸ್ಥಾನ
ಆ ಮೂರ್ತಿಗಳಿಗೆ ದೇವಾಲಯಗಳನ್ನು ಕಟ್ಟಿದ, ಮೇಲ್ವರ್ಗದವರು ಕಟ್ಟಿದ ದೇವಸ್ಥಾನಗಳಿಗೆ ಕೆಳವರ್ಗದವರ ಪ್ರವೇಶವನ್ನು ನಿರಾಕರಿಸಲಾಯಿತು, ದೇವರಿಗೆ ಪೂಜೆ ಮಾಡಿ ಹೋಮ-ಹವನಗಳನ್ನು ಮಾಡಿ ಅವರನ್ನು ಸಂತೃಪ್ತಿ ಗೊಳಿಸುವ ವೃತ್ತಿಯನ್ನು ಒಂದು ವರ್ಗ ವಹಿಸಿಕೊಂಡಿತ್ತು. ದೇವಸ್ಥಾನಗಳು ಸಂಪತ್ತಿನ ಖಜಾನೆ ಗಳಾದವು, ಕಲೆ ಸಂಸ್ಕೃತಿಯ ನೆಲೆಯಾದವು. ಈ ದೇವಾಲಯಗಳಿಗೆ ಪ್ರವೇಶ ಸಿಗದ ಸೂತ್ರ ಮತ್ತು ಪಂಚಮರು ಸಿಕ್ಕ ಸಿಕ್ಕ ವಸ್ತುಗಳನ್ನು ದೇವರೆಂದು ಪೂಜಿಸಿ, ಪ್ರಾರ್ಥಿಸತೊಡಗಿದರು. ತಾವು ಸೇವಿಸುವ ಮಾಂಸ, ಮದ್ಯವನ್ನೇ ಈ ದೇವರುಗಳಿಗೆ ಅರ್ಪಿಸಿದರು.

ದೇವರು ಮತ್ತು ಅಂಧ ಶ್ರದ್ಧೆ
ದೇವರ ಮೇಲಿನ ಶ್ರದ್ಧೆ ಅಂಧ ಶ್ರದ್ಧೆಯಾಯಿತು, ದೇವರಲ್ಲಿ ಭಕ್ತಿಯ ಜೊತೆಗೆ ಭಯ ಸೇರಿಕೊಂಡಿತು. ಮುನಿದ ದೇವರು ಅಪಾಯಕಾರಿ ಎಂಬ ಕಲ್ಪನೆ ಹುಟ್ಟಿಕೊಂಡಿತ್ತು ಮುನಿದ ದೇವರನ್ನು ತಣಿಸಲು ಪ್ರಾಣಿಬಲಿ, ನರಬಲಿ ಕೊಡುವುದು ಪ್ರಾರಂಭವಾಯಿತು. ಮೂಢನಂಬಿಕೆ ಕಂದಾಚಾರಗಳು ದೇವರ ಸುತ್ತ ಕಳೆ ಬೆಳೆದ ಹಾಗೆ ಬೆಳೆದುಕೊಂಡವು, ನಮ್ಮ ದೇವರೇ ಶ್ರೇಷ್ಠ, ಬೇರೆ ದೇವರು ಕನಿಷ್ಠ ಎಂದು ಜನ ಗುಂಪುಗಳಲ್ಲಿ ಬಡಿದಾಡ ತೊಡಗಿದರು, ದೇವರ ಮಹಿಮೆಯನ್ನು, ಶಕ್ತಿಯನ್ನು ಬಣ್ಣಿಸುವ ಕಥೆ, ಪುರಾಣಗಳನ್ನು ಬರೆದರು‌ಪವಾಡಗಳನ್ನು ಮಾಡುವ ದೇವರು ಹೆಚೂ ಜನ ಮನ್ನಣೆ ಗಳಿಸುತ್ತಾನೆಂದು ತಿಳಿದು, ಪ್ರತಿಯೊಂದು ದೇವರು ಪವಾಡ ಮಾಡುವ ಕಥೆಗಳನ್ನು ಸೃಷ್ಟಿಸಿದರು. ತಮ್ಮ ದೇವರು ವಾಸಿಯಾಗದ ಕಾಯಿಲೆಗಳನ್ನು ವಾಸಿ ಮಾಡುತ್ತಾನೆ. ಅಂಗವೈಕಲ್ಯ ವಿದ್ದರೆ ನಿವಾರಿಸುತ್ತಾನೆ, ಕುಚೇಲನನ್ನು ಕುಬೇರ ನನ್ನಾಗಿ ಮಾಡುತ್ತಾನೆ, ಸತ್ತವರನ್ನು ಬದುಕಿಸುತ್ತಾನೆಂದು ಕಥೆ ಕಟ್ಟಿದರು, ದೇವರುಗಳ ಮೇಲಾಟ/ ಹೊಡೆದಾಟಗಳು ನಡೆದು ಹೋದವು.

ಸಮಾಜ ಸುಧಾರಕ ಬಸವಣ್ಣನವರ ಇದರ ವಿರುದ್ಧ ದನಿಯೆತ್ತಿದರು...
"ಮಡಕ್ಕೆ ದೈವ, ಮೊರೆ ದೈವ, ಬೀದಿಯ ಕಲ್ಲು ದೈವ, 
ಹಣಿಗೆ ದೈವ, ಬಿಲ್ಲ ನಾರಿ ದೈವ ಕಾಣಿರೋ, ಕೊಳಗ ದೈವ, ಗಿಣ್ಣಿಲು ದೈವ ಕಾಣಿರೋ
ದೈವ ದೈವವೆಂದು ಕಾಲಿಡಲಿಂಬಿಲ್ಲ, 
ನೀರ ಕಂಡರೆ ಮುಳುಗುವರಯ್ಯ
ಮರವ ಕಂಡಲ್ಲಿ ಸುತ್ತುವರಯ್ಯ, 
ಬಿತ್ತುವ ಜಲವ, ಒಣಗುವ ಮರನ ಮೆಚ್ಚಿದವರು, ನಿಮ್ಮನೆತ್ತ ಬಲ್ಲರು ಸಂಗಯ್ಯಾ.
ದೇವಾಲಯದಲ್ಲಿ ದೇವರನ್ನೂ ಕಾಣುವುದನ್ನು ಬಿಡಿ, ನಿಮ್ಮೊಳಗೇ ದೇವರಿದ್ದಾನೆಂದರು.

ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ಎನ್ನ ಹೃದಯವೇ ಗರ್ಭಗುಡಿ 
ಶಿರವೇ ಹೊನ್ನ ಕಳಶವಯ್ಯ ಎಂದರು. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು ಸಾರಿದರು.

ದಾರ್ಶನಿಕ ಡಿ ವಿ ಗುಂಡಪ್ಪನವರು ಇದೇ ಅರ್ಥದಲ್ಲಿ ಹೇಳಿದ್ದಾರೆ.
ದೇವ ನೀತಿಶತಕ ಮಾನವನೆ ಭೋಗಕ್ಕೆ? 
ಹೂವುಣಿಸು ಮುಡುಪೂಡವೆಯವನಿಗಂ ಬೇಕೆ? 
ಆವು ದೊಳಿತೊ ತನಗೆ ನರನದನು ಪರ ಮಂಗೆ 
ನೈವೀದಿಪುದು ಸಾಜ ಮಂಕುತಿಮ್ಮ.

ಅರ್ಥ ದೇವರಿಗೆ ಭೋಗ, ವೈಭೋಗಗಳು, ಹೂವು, ನೈವೇದ್ಯ, ಮುಡುಪು, ಒಡವೆಗಳು ಬೇಕೇ? ತಮಗೆ ಇಷ್ಟವಾದದ್ದನ್ನು ಮನುಷ್ಯರು ದೇವರಿಗೆ ಅರ್ಪಿಸುತ್ತಾರೆ?

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?|
ನಾವರಿಯಲಾರದೆಲ್ಲದರೊಟ್ಟು ಹೆಸರೆ?||
ಕಾವಿನೋರ್ವ್ನಿರಲ್ಕೆ ಜಗದ ಕಥೆಯೇಕಿಂತು?||
ಸಾವು ಹುಟ್ಟುಗಳೇನು? 
(ದೇವರು+ಎಂಬುದು+ಅದು+ಏನು) (ನಾವು+ಅರಿಯಲಾರದ+ಎಲ್ಲದರ+ಒಟ್ಟು)
(ಕಾವಂ+ಓರ್ವನ್+ಇರಲ್ಕೆ) (ಜಗದ+ಕಥೆ+ಏಕೆ+ಇಂತು)
ಆದರಿಂದ ದೇವರಿದ್ದಾನೆಂದು ನಂಬುವರು. 

ಕೊನೆ ಮಾತು: ದೇವರು - ದೇವಸ್ಥಾನಗಳ ಸುತ್ತ ಬೆಳೆದಿರುವ ಹುಸಿನಂಬಿಕೆ-ಅಂಧಾಚರಣೆಗಳ ಹುತ್ತವನ್ನು ಒಡೆದು ಹಾಕಬೇಕು. ನಿರ್ಮಲ ಶ್ರದ್ಧೆಯಿಂದ ಮೌನ -ಧ್ಯಾನದಿಂದ ದೇವರನ್ನು ಪ್ರಾರ್ಥಿಸಿದರೆ ಸಾಕು. ನಮಗೆ ಅದನ್ನು ಕೊಡು, ಇದನ್ನು ಕೊಡು, ಎಂದು ಕೇಳುವ ಬದಲು, ಬಂದ ಕಷ್ಟ-ನಷ್ಟ ಸುಖಗಳನ್ನು ಅವನಿಗೆ ಅರ್ಪಿಸಬೇಕು, ಪ್ರೀತಿ ಪ್ರಾಮಾಣಿಕತೆಯಲ್ಲಿ, ಕೆಲಸ-ಕರ್ತವ್ಯಗಳಲ್ಲಿ ಸೇವೆಯ ಮುಖಾಂತರ ದೇವರನ್ನು ಕಾಣಬೇಕು.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com