ಪೂರ್ಣ ಡಿಜಿಟಲೀಕರಣವೆಂದರೆ ಮತ್ತೇನಿಲ್ಲ 'ಹೆಚ್ಚಿನ ನಿಯಂತ್ರಣ'! (ಹಣಕ್ಲಾಸು)

ಹಣಕ್ಲಾಸು-289

-ರಂಗಸ್ವಾಮಿ ಮೂಕನಹಳ್ಳಿ

Published: 30th December 2021 01:21 AM  |   Last Updated: 30th December 2021 01:34 PM   |  A+A-


Digitalization of Banking Sector

ಬ್ಯಾಂಕಿಂಗ್ ಕ್ಷೇತ್ರದ ಡಿಜಿಟಲೀಕರಣ

ಇವತ್ತು ಜಗತ್ತು ಈ ಮಟ್ಟಿಗೆ ಬದಲಾಗಿರುವುದಕ್ಕೆ ಪ್ರಮುಖ ಕಾರಣ ನಾವು ಹಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆ. ಹಣವೆನ್ನುವುದು ನಮ್ಮ ಸೃಷ್ಟಿ. ಇಬ್ಬರಿಗಿಂತ ಹೆಚ್ಚು ಜನ ಈ ಕಾಗದದ ತುಂಡಿನಲ್ಲಿ ಇಟ್ಟ ನಂಬಿಕೆ, ಇಂದು ಜಗತ್ತನ್ನ ಇಲ್ಲಿಗೆ ತಂದು ನಿಲ್ಲಿಸಿದೆ. ಅವನು ನಂಬಿದ ಅಂದ ಮೇಲೆ ಅದರಲ್ಲಿ ಏನೋ ಇದೆ ಎಂದು ನಾನು, ನಾನು ನಂಬಿದ್ದೇನೆ ಎಂದು ನನ್ನ ನಂಬಿದ ಇನ್ನು ಹತ್ತು ಜನ, ಅವರು ನಂಬಿದರು ಎಂದು ಇನ್ನೊಂದಷ್ಟು ಜನ, ಹೀಗೆ ಮೌಲ್ಯವೇ ಇಲ್ಲದ ಪುಟಾಣಿ ಕಾಗದದ ತುಂಡಿಗೆ ಸೃಷ್ಟಿಕರ್ತನನ್ನೇ ಕುಣಿಸುವ ತಾಕತ್ತು ಕೊಟ್ಟಿದ್ದು ಮಾತ್ರ ನಮ್ಮ ಕಲೆಕ್ಟಿವ್ ನಂಬಿಕೆ ಅಥವಾ ಮನಸ್ಥಿತಿ. 

ನಮಗೆಲ್ಲಾ ತಿಳಿದಿರುವಂತೆ ಹಣ ಅಲ್ಲದಿದ್ದರೆ ಮತ್ತೇನೋ ಕೂಡು- ಕೊಳ್ಳುವಿಕೆಗೆ ಮಾಧ್ಯಮವಾಗಿ ವರ್ತಿಸಲು ಬೇಕೇ ಬೇಕು. ಹೀಗಾಗಿ ನೀವು ಅದನ್ನ ಹಣ, ಮನಿ, ಡಾಲರ್, ಪೌಂಡ್, ರೂಪಾಯಿ ಏನು ಬೇಕಾದರೂ ಅನ್ನಿ ಅಥವಾ ಅದಕ್ಕೊಂದು ಹೊಸ ಹೆಸರನ್ನ ನೀಡಿ, ಆದರೆ ಅದು ನಿರ್ವಹಿಸುವ ಕೆಲಸ ಮಾತ್ರ ಸೇಮ್. ಎಲ್ಲಿಯ ತನಕ ಈ ರೀತಿಯ ಹಣ ಅಥವಾ ನಗದು ವ್ಯವಹಾರ ನಡೆಯುತ್ತಿತ್ತು ಅಲ್ಲಿಯವರೆಗೆ ಜಗತ್ತು ಸಾಗುತ್ತಿದ್ದ ರೀತಿ ನೀತಿಗಳು ಬೇರೆ ಇದ್ದವು. ಇಂದಿಗೆ ಪೇಪರ್ ಹಣ ಸತ್ತು (ಮುಕ್ಕಾಲು ಪಾಲು), ಡಿಜಿಟಲ್ ಹಣದ ಉಗಮವಾಗಲೇ ಆಗಿ ಹೋಗಿದೆ. ಪೇಪರ್ ಹಣ ಸೃಷ್ಟಿಸಿದ ನೂರಾರು ಪಟ್ಟು ಅವಾಂತರವನ್ನ ಡಿಜಿಟಲ್ ಹಣ ಸೃಷ್ಟಿಸಲಿದೆ. ಈ ಗದ್ದಲದ ಜಗತ್ತಿನಲ್ಲಿ ಇದನ್ನ ಸಂಯಮದಿಂದ ಓದುವ, ಕೇಳುವ ವ್ಯವಧಾನ ಯಾರಿಗಿದೆ? ಈಗ ನೀವೊಂದು ಪ್ರಶ್ನೆಯನ್ನ ಕೇಳಬಹುದು, ಮನಸ್ಥಿತಿ ಬದಲಾಯಿಸಿಕೊಂಡರೆ ಹಣವನ್ನ ರಿಪ್ಲೇಸ್ ಮಾಡಬಹುದೇ? ಹಣವಿಲ್ಲದೆ ಬದುಕಬಹುದೇ? ವಿನಿಮಯಕ್ಕೆ ಏನಾದರೂ ವಸ್ತು ಬೇಕಲ್ಲವೇ? ಅಂತಹ ವಸ್ತು ಹಣದ ಜಾಗವನ್ನ ಆಕ್ರಮಿಸುವುದಿಲ್ಲ ಎನ್ನುವ ಗ್ಯಾರಂಟಿ ಏನು? ಹೀಗೆ ಒಂದು ಎಂದದ್ದು ಹತ್ತು ಪ್ರಶ್ನೆಗಳಾಗಬದುಹುದು. ಇದಕ್ಕೆಲ್ಲಾ ಉತ್ತರವಿದೆ, ಹಣಕ್ಕೆ ಪರ್ಯಾಯ ನಾವು ಸೃಷ್ಟಿಸಬಹುದು, ಹಣದ ಸಹಾಯವಿಲ್ಲದೆ ಬದುಕಬಹುದು.  ಸಣ್ಣ ಪೇಪರ್ ತುಂಡಿನ ಮೇಲಿಟ್ಟಿರುವ ನಂಬಿಕೆ ಪರ್ಯಾಯದಲ್ಲಿ ಕೂಡ ಇಟ್ಟರೆ ಇದು ಸಾಧ್ಯ.

ಬೆಂಕಿಯಿಂದ ಬಾಣಲೆಗೆ ಎನ್ನುವ ಒಂದು ಮಾತನ್ನ ನಾವೆಲ್ಲಾ ಕೇಳಿಯೇ ಇರುತ್ತೇವೆ. ಹಣದ ವಿಷಯದಲ್ಲಿ ಅದು ನಿಜವಾಗುವ ಲಕ್ಷಣಗಳು ಕಾಣುತ್ತಿವೆ. ನಗದು ಅಥವಾ ಕ್ಯಾಶ್ ಜಾಗದಲ್ಲಿ ಬರುತ್ತಿರುವ ಡಿಜಿಟಲ್ ಹಣ ಜನ ಸಾಮಾನ್ಯನನ್ನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಿವೆ. ಈ ಮಾತುಗಳನ್ನ ಬರೆಯಲು ಕಾರಣಗಳನ್ನ ಪಟ್ಟಿ ಮಾಡುವೆ. ಮುಕ್ಕಾಲು ಪಾಲು ಇಲ್ಲಿ ಪಟ್ಟಿ ಮಾಡುವ ಅಂಶಗಳು ನಿಮ್ಮದೇ ಮನಸ್ಸಿನ ಮಾತಾಗಿರುತ್ತದೆ, ಅವು ಇಲ್ಲಿ ಅಕ್ಷರ ರೂಪ ತಾಳಿವೆ.

1. ಇಬ್ಬರ ನಡುವಿನ ವಹಿವಾಟು ಮೂರನೆಯವರಿಗೆ ತಲುಪುತ್ತದೆ: ಎಲ್ಲಕ್ಕೂ ಮೊದಲಿಗೆ ನಾವು ಬೇಕಾದ್ದು ಕೊಳ್ಳಲಿ ಅದು ಖರೀದಿದಾರ ಮತ್ತು ಮಾರಾಟಗಾರನ ನಡುವೆ ಮಾತ್ರ ಉಳಿದುಕೊಳ್ಳುತ್ತಿದ್ದ ವಿಷಯವಾಗಿತ್ತು. ಒಟ್ಟು ಮಾರಾಟ ಎಷ್ಟು ಎನ್ನುವುದನ್ನ ಕಾಲಕಾಲಕ್ಕೆ ಮಾರಾಟಗಾರ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಗೆ ತಿಳಿಸಬೇಕಿತ್ತು, ಆದರೆ ಅದರಲ್ಲಿ ಚಿಲ್ಲರೆ ಖರೀದಿದಾರನ ಹೆಸರು ಹೇಳುವ ಅಗತ್ಯವಿರಲಿಲ್ಲ. ಇವತ್ತೇನಾಗಿದೆ..? ನಾವು ಕೊಳ್ಳುವ ಪಾದರಕ್ಷೆಯಿಂದ ಹಿಡಿದು ಒಳ ಉಡುಪಿನ ವರೆಗೆ ಎಲ್ಲವೂ ಡಿಜಿಟಲ್ ಪಾವತಿಯ ಮೂಲಕ ಜಗಜಾಹೀರಾತಾಗುತ್ತಿದೆ. ನಮ್ಮ ಇಷ್ಟ ಅನಿಷ್ಟಗಳ ಸುತ್ತ ನಮಗೆ ಗೊತ್ತಿಲ್ಲದ ನಮ್ಮದೇ ಪ್ರೊಫೈಲ್ ಸಿದ್ಧವಾಗಿರುತ್ತದೆ. ವರ್ಷದ ನಂತರ ನಾವು ಕೊಳ್ಳುವ ಕಾರು, ಸ್ಕೂಟರ್ ಅಥವಾ ಸೈಕಲ್ ನಮ್ಮದೇ ಆಯ್ಕೆ ಎಂದು ನಾವು ಬೀಗುತ್ತೇವೆ. ಅಂತರಾಳದಲ್ಲಿ ನೋಡಿದರೆ ನಿಮ್ಮನ್ನ ಅದೇ ಕಾರು, ಅಥವಾ ಸ್ಕೂಟರ್ ಅಥವಾ ಸೈಕಲ್ ಕೊಳ್ಳುವಂತೆ ಪ್ರೇರೇಪಿಸಲಾಗಿರುತ್ತದೆ. ಮಾರುಕಟ್ಟೆಯಲ್ಲಿ ಬೆತ್ತಲೆ ನಿಂತ ಸ್ಥಿತಿಯನ್ನ ಡಿಜಿಟಲ್ ಪಾವತಿಗಳು ಮಾಡಿವೆ.

2. ಖರೀದಿದಾರ ಮತ್ತು ಮಾರಾಟಗಾರ ನಡುವೆ ಹುಟ್ಟಿಕೊಂಡ ಏಜೆಂಟ್ ಸಂಸ್ಥೆಗಳು: ಮೇಲಿನ ಸಾಲಿನಲ್ಲಿ ಹೇಳಿದಂತೆ ಹಿಂದೆ ಇಬ್ಬರ ನಡುವೆ ನಡೆಯುವ ವ್ಯಾಪಾರ ಮೂರನೆಯವರಿಗೆ ತಿಳಿಯುತ್ತಿರಲಿಲ್ಲ. ಇವತ್ತು ಡಿಜಿಟಲ್ ಪೇಮೆಂಟ್ ಮಾಡಲು ಹಲವಾರು ಸೇವಾ ಸಂಸ್ಥೆಗಳು ಹುಟ್ಟಿಕೊಂಡಿವೆ. ಮೇಲ್ನೋಟಕ್ಕೆ ಪೇಮೆಂಟ್ ವಾಲ್ಲೆಟ್ಗಳು ನಮಗೆ ರಿಯಾಯತಿ ನೀಡುತ್ತಿವೆ ಎನ್ನಿಸುತ್ತದೆ. ಸದ್ಯದ ಮಟ್ಟಿಗೆ ಅದು ನಿಜ ಕೂಡ, ಆದರೆ ನಮ್ಮೆಲ್ಲ ಡೇಟಾ ಅವರ ಬಳಿ ಶೇಖರಣೆಯಾಗುತ್ತ ಹೋಗುತ್ತದೆ. ನಮಗೆಲ್ಲಾ ತಿಳಿಯದೆ ಇರುವ ಒಂದು ವಿಷಯವೇನು ಗೊತ್ತೇ? ನಮ್ಮ ಮಾಹಿತಿಯೇ ಹಣ. ಅದನ್ನ ನಾವು ಅವರಿಗೆ ಪುಕ್ಕಟೆ ನೀಡುತ್ತಿದ್ದೇವೆ. ನಮ್ಮ ಒಪ್ಪಿಗೆಯಿಲ್ಲದೆ ಅವರು ನಮ್ಮ ನಿರ್ಧಾರವನ್ನ ಬದಲಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನ ಅವರಿಗೆ ಧಾರೆ ಎರೆದುಕೊಟ್ಟಿದ್ದೇವೆ. ಇದು ಒಂದು ಅಂಶ ಇದರಲ್ಲಿ ಇನ್ನೊಂದು ಕರಾಳ ಮುಖವಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರು ಇದನ್ನ ಒಪ್ಪುತ್ತೀರಿ ಎನ್ನುವ ನಂಬಿಕೆ ನನ್ನದು. ಮುಕ್ಕಾಲು ಪಾಲು ಬ್ಯಾಂಕುಗಳು ಸ್ವವೈಪಿಂಗ್ ಮಷೀನ್ ಮತ್ತಿತರೇ ಸೇವೆಗಳನ್ನ ಮೂರನೆಯ ಸಂಸ್ಥೆಗಳಿಗೆ ಔಟ್ ಸೊರ್ಸ್ ಮಾಡಿಬಿಟ್ಟಿರುತ್ತವೆ. ಈ ಸಂಸ್ಥೆಗಳು ಹಗಲು ದರೋಡೆಗೆ ಇಳಿದಿವೆ. ನೀವು ನಂಬುವುದಿಲ್ಲ ಹಲವು ಬಾರಿ ಐದರಿಂದ ಆರು ಪ್ರತಿಶತ ಹಣವನ್ನ ಇವು ಇಲ್ಲ ಸಲ್ಲದ ಸೇವೆಯ ಹೆಸರಿನಲ್ಲಿ ಕಡಿತ ಮಾಡಿಕೊಳ್ಳುತ್ತವೆ. ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ಲಾಭದ ಲೆಕ್ಕಾಚಾರ ಹಾಕುವುದು ಹೇಗೆ? ನೀವು ಗಮನಿಸಿರಬಹುದು ಇದೆ ಕಾರಣಕ್ಕೆ ಹಲವಾರು ಅಂಗಡಿಗಳಲ್ಲಿ ಕ್ಯಾಶ್ ಅಥವಾ ಗೂಗೆಲ್ ಪೇ ಮಾಡಿ, ಕಾರ್ಡ್ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ. ಕೆಲವರು ಕಾರ್ಡ್ ಮೂಲಕ ಪಾವತಿ ಮಾಡುವುದಾದರೆ 2/3 ಪ್ರತಿಶತ ಹೆಚ್ಚಿನ ಹಣವನ್ನ ಕೂಡ ಕೇಳುತ್ತಾರೆ. ಡಿಜಿಟಲ್ ಪಾವತಿ ಇನ್ನೊಬ್ಬ ಲಾಭಕೋರ ದಳ್ಳಾಳಿಯನ್ನ ಹುಟ್ಟುಹಾಕಿದೆ.

3. ಹಿಂದೆ ಕಳ್ಳರಿಗೆ ಮನೆ ಅಥವಾ ಸಂಸ್ಥೆಗೆ ಕನ್ನ ಹಾಕಿ ಕಷ್ಟ ಪಡೆಬೇಕಿತ್ತು, ಇದೀಗ ಅವರೂ ಆನ್ಲೈನ್: ಭಾರತದಲ್ಲಿ 12 ಕೋಟಿ ಹಿರಿಯ ನಾಗರೀಕರಿದ್ದಾರೆ. ಅವರಲ್ಲಿ ಬಹುತೇಕರಿಗೆ ಈ ಡಿಜಿಟಲ್ ಜ್ಞಾನ ಅಷ್ಟಕಷ್ಟೇ, ಇಂತಹವರನ್ನ ಯಾಮಾರಿಸಿ ಕ್ಷಣ ಮಾತ್ರದಲ್ಲಿ ಅವರ ಬ್ಯಾಂಕ್ ಬ್ಯಾಲೆನ್ಸ್ ಗುಡಿಸಿಬಿಡುತ್ತಾರೆ. ಸಮಾಜದಲ್ಲಿನ ಸುಶಿಕ್ಷಿತ ಗಣ್ಯರೇ ಇಂತಹ ಖೆಡ್ಡಾಗಳಿಗೆ ಬೀಳುತ್ತಿದ್ದಾರೆ ಅಂದ ಮೇಲೆ ತಂತ್ರಜ್ಞಾನದ ಅರಿವಿಲ್ಲದ ಹಿರಿಯರ ಪಾಡೇನು? ದಿನದಿಂದ ದಿನಕ್ಕೆ ಭಾರತದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಇದಕ್ಕೆ ಉದಾಹರಣೆ. ಇದರಲ್ಲೂ ಹಲವು ವಿಧ. ನೇರವಾಗಿ ಬ್ಯಾಂಕ್ ನವರಂತೆ ಫೋನ್ ಮಾಡಿ ಮೋಸ ಮಾಡುವುದು, ಇನ್ನೊಂದು ನಮಗೆ ಗೊತ್ತಿಲ್ಲದಂತೆ ನಮ್ಮ ಖಾತೆಗೆ ಕನ್ನ ಹಾಕುವುದು. ಎರಡನೆಯ ವಿಷಯದಲ್ಲಿ ನಮ್ಮ ತಪ್ಪಿಲ್ಲದಿದ್ದರೂ ಹೊಡೆತವಂತೂ ನಮಗೆ ಅಲ್ಲವೇ?

4. ಸರ್ವರ್ ಡೌನ್ ಎನ್ನುವ ಸದಾ ಕೇಳುವ ಮಾತು: ನಾವು ಡಿಜಿಟಲೀಕರಣಗೊಳಿಸುವ ಉದ್ದೇಶವೇನು? ಎಲ್ಲವೂ ಸುಲಲಿತವಾಗಿ, ವೇಗವಾಗಿ ಗ್ರಾಹಕರಿಗೆ ಕಿರಿಕಿರಿ ಇಲ್ಲದಂತೆ ಸೇವೆ ನೀಡುವುದಕ್ಕೆ ಅಲ್ಲವೇ? ಇಂದು ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕಿಗೆ ಹೋಗಿ, ಸರ್ವರ್ ಡೌನ್ ಎನ್ನುವುದು ಪ್ರತಿ ನಿತ್ಯ ಕೇಳಿ ಬರುವ ಮಾತು. ಜನ ಹಿಂಡು ಹಿಂಡಾಗಿ ಬ್ಯಾಂಕಿನಲ್ಲಿ ತಮ್ಮ ಸರದಿಗೆ ಕಾಯುವುದನ್ನ ನೀವು ನೋಡಬಹುದು. ಬ್ಯಾಂಕಿನವರನ್ನ ಕೇಳಿ, ಅವರ ಬಳಿ ಸಾವಿರ ಸಮಸ್ಯೆಗಳ ಪಟ್ಟಿ ಇರುತ್ತದೆ. ಇಂದಿನ ಬ್ಯಾಂಕಿಂಗ್ ವ್ಯವಸ್ಥೆ, ಹಿಂದಿನ ಬ್ಯಾಂಕಿಂಗ್ ವ್ಯವಸ್ಥೆಗಿಂತ ಬಹಳ ಹದಗೆಟ್ಟಿದೆ. ಗ್ರಾಹಕನಿರಬಹುದು ಅಥವಾ ಸೇವೆ ನೀಡುವ ಬ್ಯಾಂಕ್ ಉದ್ಯೋಗಿಗಳು ಯಾರ ಮುಖದಲ್ಲೂ ನಗುವಿಲ್ಲ. ಆನ್ಲೈನ್ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲದ , ಅಥವಾ ಆನ್ಲೈನ್ ವಹಿವಾಟು ನಡೆಸಲು ಶಕ್ತರಲ್ಲದ ಕೋಟಿ ಕೋಟಿ ಜನ ಬ್ಯಾಂಕಿಗೆ ಎಡತಾಕುತ್ತಾರೆ. ಆದರೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನ ಪಾಶ್ಚ್ಯಾತ್ಯ ಶೈಲಿಯಲ್ಲಿ ಬದಲಿಸಲು ಹೋಗಿ ಅದನ್ನ ದುಃಸ್ವಪ್ನವಾಗಿ ಬದಲಿಸಿದ್ದಾರೆ. ಬ್ಯಾಂಕಿನ ಹೆಸರು ಬೇಡ ಮೊನ್ನೆ ಹೀಗೆ 64 ರ ಹಿರಿಯ ಜೀವ ಒಂದು ತಾಸು ಕಾದು ಬೇಸೆತ್ತು, ಐದು ಸಾವಿರ ಹಣ ಬೇಕು ಕೊಡಿಸಿಕೊಡಿ ಎಂದು ಮ್ಯಾನೇಜರ್ ಬಳಿ ಕೇಳಿದರು. ಎಲ್ಲರೂ ಕೇಳುತ್ತಾರೆ, ನಾವೇನು ಮಾಡಲು ಬರುವುದಿಲ್ಲ ಕಾಯಿರಿ ಎಂದು ಅವರು ಫರ್ಮಾನು ಹೊರಡಿಸಿದರು. ಇನ್ನೊಬ್ಬ ವ್ಯಕ್ತಿ ಪ್ರತಿ ದಿನ ತಾಸುಗಟ್ಟಲೆ ವೇಳೆಯನ್ನ ವ್ಯಯಿಸುತ್ತೇವೆ, ನಿಮ್ಮ ವ್ಯವಸ್ಥೆಯೇಕೆ ಇಷ್ಟು ಕೆಟ್ಟದಾಗಿದೆ ಎಂದು ಬೇಸರ ಮಾಡಿಕೊಂಡರು. ಇವೆಲ್ಲ ಕೆಲವು ಉದಾಹರಣೆಗಳು ಮಾತ್ರ. ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನ ಪೂರ್ಣವಾಗಿ ಹದಗೆಡಿಸಲಾಗಿದೆ. ಯಾವ ಡಿಜಿಟಲೈಸಷನ್ ಅನುಕೂಲ ಮಾಡಿಕೊಡಬೇಕಿತ್ತು ಅದು ಅವ್ಯವಸ್ಥೆಯ ಆಗರವಾಗಿದೆ.

5. ಡಿಜಿಟಲೀಕರಣದ ಹೆಸರಿನಲ್ಲಿ ಎಲ್ಲಾ ಕೆಲಸವನ್ನ ನಮ್ಮಿಂದಲೇ ಮಾಡಿಸುವ ಹುನ್ನಾರ, ಬ್ಯಾಂಕಿನ ಕೆಲಸಗಾರರಿಗೂ ತಟ್ಟಿದೆ ಅಸ್ಥಿರತೆಯ ಬೇಗೆ: ಹೌದು, ಒಂದು ಕಾಲದಲ್ಲಿ ಬ್ಯಾಂಕಿನ ಕೆಲಸವೆಂದರೆ ಅದಕ್ಕೊಂದು ಘನತೆಯಿತ್ತು. ಇವತ್ತು ಬ್ಯಾಂಕಿನ ನೌಕರರಿಗೆ ಪೆನ್ಷನ್ ಇಲ್ಲ, ಕೇವಲ ಟೆನ್ಶನ್. ಮ್ಯೂಚುಯಲ್ ಫಂಡ್ ನಿಂದ ಹಿಡಿದು ಪರ್ಸನಲ್ ಇನ್ಶೂರೆನ್ಸ್, ಕಾರ್ ಇನ್ಶೂರೆನ್ಸ್ ಎಲ್ಲವನ್ನೂ ಮಾರುವ ಏಜೆಂಟ್ ಆಗಿ ಅವರನ್ನ ಮಾರ್ಪಡಿಸಿದ್ದಾರೆ. ಇದು ಪೂರ್ಣ ಪಾಶ್ಚಾತ್ಯ ರೀತಿಯ ಬ್ಯಾಂಕಿಂಗ್ ಪದ್ಧತಿ, ನಮ್ಮದಲ್ಲ. ಲಾಭ, ಹೆಚ್ಚು ಲಾಭ ಮಾಡುವ ಕಠೋರತೆಗೆ ಸರಕಾರ ಬಿದ್ದಿದೆ. ಹೀಗಾಗಿ ಈ ವಲಯದಲ್ಲಿ ಕೂಡ ಅಸ್ಥಿರತೆಯನ್ನ ತುಂಬಲಾಗಿದೆ. ಮುಂಬರುವ ದಿನಗಳಲ್ಲಿ ಕೇವಲ ಎಸ್ಬಿಐ ಮತ್ತು ಕೆನರಾ ಬಿಟ್ಟು ಎಲ್ಲವೂ ವಿಲೀನಗೊಳ್ಳುವ ಸಾಧ್ಯತೆಯನ್ನ ಕೂಡ ತಳ್ಳಿಹಾಕಲು ಬರುವುದಿಲ್ಲ. ದಿನದಿಂದ ದಿನಕ್ಕೆ ಡಿಜಿಟಲ್ ಆಗಿರುವ ಕಾರಣ ಹೆಚ್ಚು ಜನದ ಅವಶ್ಯಕತೆಯಿಲ್ಲ ಎಂದು ನೌಕರರನ್ನ ಕಡಿತಗೊಳಿಸಲಾಗಿದೆ, ಶಾಖೆಗಳ ಸಂಖ್ಯೆಗಳು ಕೂಡ ಕುಸಿತ ಕಂಡಿದೆ, ಆದರೆ ಜನ ಬ್ಯಾಂಕಿಗೆ ಹೋಗುವುದು ಹೆಚ್ಚಾಗಿದೆ. ಆನ್ಲೈನ್ ಸಾಕ್ಷರತೆ ಇರುವ ಒಂದು ವರ್ಗ ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಲ್ಲುವ ಜನರನ್ನ ನೋಡಿ ನಗುತ್ತದೆ, ಒಂದು ವರ್ಗ ಬ್ಯಾಂಕಿನ ನೌಕರರನ್ನ ಇನಿಲ್ಲದೆ ಅವಮಾನಿಸುತ್ತದೆ. ಧ್ವನಿಯಿಲ್ಲದ ಜನ ಸಾಮಾನ್ಯ ನಿತ್ಯ ನರಕವನ್ನ ನೋಡುತ್ತಿದ್ದಾನೆ. ಡಿಜಿಟಲೀಕರಣ ಪ್ರಸಾದವನ್ನ ಸೇವಿಸುತ್ತಿದ್ದಾನೆ.

6. ಸುರಕ್ಷತೆ ಎನ್ನುವುದು ಮರೀಚಿಕೆ: ಇವೆಲ್ಲವುಗಳ ಮಧ್ಯೆ ಅಪ್ಪಿತಪ್ಪಿ ನಡೆಸಿದ ವಹಿವಾಟಿನಲ್ಲಿ ಎಡವಟ್ಟಾಗಿದ್ದರೆ, ಅಂದರೆ ಖಾತೆ ಸಂಖ್ಯೆ ತಪ್ಪು ನಮೂದಿಸುವುದು ಇತ್ಯಾದಿ. ಇಂತಹ ಸಮಯದಲ್ಲಿ ಅದನ್ನ ಮತ್ತೆ ತಿದ್ದಿಸಿಕೊಳ್ಳುವ ಕೆಲಸಕ್ಕೆ ಬೇಕಾಗುವ ವೇಳೆ ಮತ್ತು ಶಕ್ತಿ, ತಾಳ್ಮೆಯ ಲೆಕ್ಕಾಚಾರ ಹಾಕುವುದು ಹೇಗೆ? ಅವರಿಂದ ತಪ್ಪಾಗಿದ್ದರೆ ಕ್ಷಣ ಮಾತ್ರದಲ್ಲಿ ತಿದ್ದುಪಡಿಯಾಗುತ್ತದೆ. ನಮ್ಮಿಂದ ಆದ ತಪ್ಪನ್ನ ತಿದ್ದುವುದಕ್ಕೆ ಸಮಯವೇ ಇರುವುದಿಲ್ಲ. ಗಮನಿಸಿ ನೀವು ಡೆಬಿಟ್ ಕಾರ್ಡ್ ಬಳಸುತ್ತಿದ್ದರೆ ತಕ್ಷಣ ನಿಲ್ಲಿಸಿ. ಡೆಬಿಟ್ ಕಾರ್ಡ್ ಬಳಸಿ ಅದ ಹಣದ ನಷ್ಟವನ್ನ ಮತ್ತೆ ಮರಳಿ ಪಡೆದುಕೊಳ್ಳುವುದು ಬಹಳ ಕಷ್ಟದ ಕೆಲಸ. ಕ್ರೆಡಿಟ್ ಕಾರ್ಡ್ ನಲ್ಲಿ ಸುರಕ್ಷತೆ ಹೆಚ್ಚು ಜೋತೆಗೆ ಅದು ಇನ್ಸೂರ್ ಕೂಡ ಆಗಿರುತ್ತದೆ.

7. ಇಂದು ಬಯೋ ವಾರ್ ಆದಂತೆ ನಾಳೆ ಸೈಬರ್ ವಾರ್ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?: ಮುಂದಿನ ಐದರಿಂದ ಹತ್ತು ವರ್ಷದಲ್ಲಿ ನಮ್ಮ ಸ್ಯಾಟಲೈಟ್ ಹ್ಯಾಕ್ ಆಗುವುದಿಲ್ಲ ಎನ್ನುವ ಗ್ಯಾರಂಟಿ ಯಾರೂ ಕೊಡಲು ಸಾಧ್ಯವಿಲ್ಲ. ನಮ್ಮ ಬ್ಯಾಂಕಿನಲ್ಲಿರುವ ಹಣದಿಂದ ಹಿಡಿದು ನಮ್ಮೆಲ್ಲ ಸೂಕ್ಷ್ಮ ಐಡೆಂಟಿಟಿ, ಮಾಹಿತಿ ಎಲ್ಲವನ್ನೂ ಯಾವುದೋ ದೇಶ ಕದಿಯುವುದಿಲ್ಲ ಎಂದು ನಂಬುವುದು ಹೇಗೆ? ಇಂತಹ ಸಮಯದಲ್ಲಿ ಇಡೀ ದೇಶದ ಅರ್ಥ ವ್ಯವಸ್ಥೆ ಕ್ಷಣ ಮಾತ್ರದಲ್ಲಿ ಕುಸಿದು ಬೀಳುತ್ತದೆ.

ಕೊನೆಮಾತು: ಇಂದಿನ ಕಾಲಘಟ್ಟದಲ್ಲಿ ಇಂತಹ ವಿಷಯ ನಡೆಯಲು ಸಾಧ್ಯವಿಲ್ಲ ಎನ್ನುವಂತಿಲ್ಲ. ಸ್ಯಾಟಲೈಟ್ ಹ್ಯಾಕ್ ಆಗಬಹುದು, ವಿಶ್ವವೇ ಮತ್ತೆ ತಿಂಗಳುಗಳ ಕಾಲ ಹಾಲ್ಟ್ ಆಗಬಹುದು. ಯಾವುದೇ ಒಂದು ವಿಷಯದ  ಮೇಲೆ ಅತಿಯಾದ ಅವಲಂಬನೆ ಖಂಡಿತ ತಪ್ಪು. ಈ ಡಿಜಿಟಲೀಕರಣ ಮೂಲ ಉದ್ದೇಶವೇನು ಗೊತ್ತೇ? ಅದು ಖಂಡಿತ ಭ್ರಷ್ಟಾಚಾರ ಕಡಿಮೆ ಮಾಡುವುದಲ್ಲ , ಬದಲಿಗೆ ಜನ ಸಾಮಾನ್ಯ ಊಹಿಸಲು ಕೂಡ ಆಗದ ರೀತಿಯಲ್ಲಿ ಭ್ರಷ್ಟಾಚಾರ ಆಗುತ್ತದೆ. ಅಲ್ಲದೆ ಅವರಿಗೆ ಹಣದ ಸಂಗ್ರಹಣೆ ಇದೀಗ ಮತ್ತಷ್ಟು ಸುಲಭವಾಯ್ತು.

ಜನ ಸಾಮಾನ್ಯನ ಬದುಕನ್ನ ಇನ್ನಷ್ಟು ಸುಲಭಗೊಳಿಸುವುದು ಕೂಡ ಉದ್ದೇಶವಲ್ಲ. ಹಣವನ್ನ ಮುಗಿಸಿ ಪೂರ್ಣ ಡಿಜಿಟಲೀಕರಣಗೊಳಿಸವುದರ ಏಕೈಕ ಉದ್ದೇಶ ಕಂಟ್ರೋಲ್! ಹೌದು ಜನತೆಯ ಮೇಲೆ ಇನ್ನಷ್ಟು ಪ್ರಬಲ ನಿಯಂತ್ರಣ ಹೊಂದುವುದು ಕೇವಲ ಪೂರ್ಣ ಡಿಜಿಟಲೀಕರಣದಿಂದ ಮಾತ್ರ ಸಾಧ್ಯ. ಇದು ಯಾವುದೇ ಕೋನದಿಂದ ಜನತೆಗೆ ಪೂರಕವಲ್ಲ. ಜಿಡಿಪಿ , ಭ್ರಷ್ಟಾಚಾರ ಕಡಿಮೆಯಾಗುತ್ತದೆ ಇತ್ಯಾದಿ ಕಾರಣ ಹೇಳಿ ನಮ್ಮ ಒಪ್ಪಿಗೆ ಇಲ್ಲದೆ ಡಿಜಿಟಲೀಕರಣ ಹೇರಿಕೆಯಾಗುತ್ತಿದೆ. ಇದು ಜಾಗತಿಕ ಪಿಡುಗು, ಜಗತ್ತಿನ ಜನ ಸಾಮಾನ್ಯ ಮಾತ್ರ ಇದಕ್ಕೂ ಸ್ಪಂದಿಸುವುದಿಲ್ಲ ಎನ್ನುವುದು ಸತ್ಯ. ಅದು ಅವರಿಗೆ ಗೊತ್ತಿದೆ. ಹೀಗಾಗಿ ಜಗತ್ತು ಇವತ್ತು ಈ ಮಟ್ಟದಲ್ಲಿದೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp