ಸ್ಕಿಲ್ ಇಂಡಿಯ; ಭಾರತ ಜಗತ್ತಿನ ಮಾನವ ಸಂಪನ್ಮೂಲ ಹಬ್ ಆಗಬಹುದು!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 04th February 2021 12:25 AM  |   Last Updated: 04th February 2021 12:25 AM   |  A+A-


Skill India can make India a global human resource hub; here is how

ಸ್ಕಿಲ್ ಇಂಡಿಯ; ಭಾರತ ಜಗತ್ತಿನ ಮಾನವ ಸಂಪನ್ಮೂಲ ಹಬ್ ಆಗಬಹುದು!

Online Desk

ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಏಳೂವರೆ ಬಿಲಿಯನ್ ಜನರಿದ್ದೇವೆ. ಅಂದರೆ 750 ಕೋಟಿ ಜನ. ಇದರಲ್ಲಿ ಎಲ್ಲರೂ ಬದುಕಿಗಾಗಿ ಒಂದಲ್ಲ ಒಂದು ಕೆಲಸ ಮಾಡುತ್ತಿರಲೇಬೇಕಲ್ಲವೇ? ಕೆಲವೊಮ್ಮೆ ಅವರು ಮಾಡುತ್ತಿರುವ ಕೆಲಸವನ್ನ ಕೆಲಸ ಎಂದು ಗುರುತಿಸದೇ ಹೋಗಿರಬಹುದು. ಅವರಿಗೆ ವೇತನ, ಟ್ರಾವೆಲ್ ಅಲೋವೆನ್ಸ್ ಸಿಗದಿರಬಹುದು ಆದರೆ ಬದುಕಿನ ಬಂಡಿ ಎಳೆಯಲು ಏನಾದರು ಒಂದು ಕಾಯಕವಂತೂ ಬೇಕಲ್ಲವೇ? ಕೆಲವು ಕೆಲಸಗಳು ನಿಪುಣತೆ ಬೇಡುತ್ತವೆ ಇನ್ನು ಕೆಲವು ದೈಹಿಕ ಶಕ್ತಿ ಬೇಡುತ್ತವೆ. ಜಗತ್ತಿನಾದ್ಯಂತ ಇಂದಿಗೆ ಐದು ಕೋಟಿಗೂ ಹೆಚ್ಚಿನ ನಿಪುಣ ಕೆಲಸಗಾರರ ಕೊರತೆಯಿದೆ ಎಂದರೆ ನಂಬುವಿರಾ? ನಮ್ಮ ರಾಷ್ಟೀಯ ವಾಹಿನಿಗಳಿರಬಹುದು ಅಥವಾ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳಿರಬಹುದು ಅವುಗಳೆಲ್ಲವ ವರಾತ ಒಂದೇ 'ಕೆಲಸದ ಸೃಷ್ಟಿ' ಅಂದರೆ ಜಾಬ್ ಕ್ರಿಯೇಷನ್ ಆಗುತ್ತಿಲ್ಲ ಎನ್ನುವುದು. ಅವರು ಬಿತ್ತರಿಸಿದ್ದು ನೋಡುವ ಮತ್ತು ಅದನ್ನ ನಂಬುವ ನಾವು ಹೆಚ್ಚಿನ ಮಾಹಿತಿಯ ಬಗ್ಗೆ ಯೋಚಿಸುವುದೇ ಇಲ್ಲ. ವಸ್ತುಸ್ಥಿತಿ ಬೇರೆಯದೇ ಇದೆ.

ಜಪಾನ್, ಯೂರೋಪಿನ ಬಹುತೇಕ ದೇಶಗಳು, ಸೌತ್ ಕೊರಿಯಾ ಸೇರಿದಂತೆ ಬಹಳ ದೇಶಗಳು ವೇಗವಾಗಿ ವೃದ್ಧಾಪ್ಯದ ಕಡೆಗೆ ಸಾಗುತ್ತಿವೆ. ಭಾರತದ ಜನಸಂಖ್ಯೆ 130 ಕೋಟಿ!! ಅದರಲ್ಲಿ ಶೇ.50 ಕ್ಕೂ ಹೆಚ್ಚಿನ ಜನರ ವಯಸ್ಸು 25 ಕ್ಕೂ ಕಡಿಮೆ!! ಇದನ್ನ 35 ರ ವರೆಗೆ ಏರಿಸಿದರೆ ನಮ್ಮ ಜನಸಂಖ್ಯೆಯ 65 ಪ್ರತಿಶತ ಜನರು ಇದರಡಿಯಲ್ಲಿ ಬರುತ್ತಾರೆ. ಅಂದರೆ ಹತ್ತಿರಹತ್ತಿರ 85 ಕೋಟಿ ಜನರು 35ರ ವಯೋಮಾನ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಎಂದಾಯ್ತು. ಇದನ್ನ ನಾವು ಆಸ್ತಿ ಎಂದು ಪರಿಗಣಿಸಬೇಕು ಏಕೆಂದರೆ ಜಗತ್ತಿನ ಹಲವು ದೇಶಗಳು ವೇಗವಾಗಿ ವೃದ್ಧಾಪ್ಯದತ್ತ ಸಾಗುತ್ತಿದೆ. ಇದರ ಜೊತೆಗೆ ಗ್ಲೋಬಲ್ ಸ್ಕಿಲ್ ಡೆಫಿಸಿಟ್ ಸೇರಿಕೊಂಡು ಜಗತ್ತಿಗೆ ಕೆಲಸಗಾರರ ಕೊರತೆ ಹೆಚ್ಚಾಗಿದೆ. ನಿಪುಣ ಕೆಲಸಗಾರರ ಜೊತೆಗೆ ಇತರ ಕೆಲಸಗಾರರ ಕೊರತೆ ಕೂಡ ಕಾಡುತ್ತಿದೆ. ಆಶ್ಚರ್ಯ ಅನ್ನಿಸುತ್ತದೆಯಲ್ಲವೇ? ಸುದ್ದಿ ಮಾಧ್ಯಮಗಳು ಕೆಲಸದ ಸೃಷ್ಟಿಯಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತವೆ ಆದರೆ ಅಂಕಿ-ಅಂಶ ಮತ್ತು ಗ್ರೌಂಡ್ ರಿಯಾಲಿಟಿ ಬೇರೆಯದೇ ಕಥೆ ಹೇಳುತ್ತದೆ. ಇಂತಹ ಸೂಕ್ಷ್ಮ ವಿಷಯವನ್ನ ದೇಶದ ನಾಯಕ ಮನಗಂಡರೆ ಏನಾಗಬಹುದು? ಖಂಡಿತ ಆತ ತನ್ನ ದೇಶದ ಯುವ ಜನತೆಯ ಸ್ಕಿಲ್ ಅಥವಾ ಕೌಶಲ್ಯ ವೃದ್ಧಿಗೆ ಶ್ರಮಿಸಲು ಮುಂದಾಗುತ್ತಾರೆ. ಚೀನಾ ದೇಶ ಜಗತ್ತಿನ ಕಾರ್ಖಾನೆಯಂತೆ ದುಡಿಯುತ್ತಿದೆ.

ಇವತ್ತು ಚೀನಾ ತನ್ನ ವಸ್ತುವನ್ನ ಉತ್ಪಾದಿಸದೆ ಹೋದರೆ ಜಗತ್ತು ತಲ್ಲಣಗೊಳ್ಳುತ್ತದೆ. ಆ ಮಟ್ಟಿಗೆ ಚೀನಾ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸಿದೆ. ಭಾರತ ಇದೇ ಕೆಲಸವನ್ನ ಜಗತ್ತಿಗೆ ತನ್ನ ಕೌಶಲ್ಯ/ನುರಿತ ಯುವ ಜನತೆಯನ್ನ ನೀಡುವುದರ ಮೂಲಕ ಮಾಡಬಹುದು. ಚೀನಿಯರಿಗೂ ಮತ್ತು ಭಾರತೀಯರಿಗೂ ಇರುವ ವ್ಯತ್ಯಾಸ ಇದೇ... ಭಾರತೀಯರು ಇಂಗ್ಲಿಷ್ ಅಲ್ಲದೆ ಬೇರೆ ಯಾವ ಭಾಷೆಯೇ ಆಗಿರಲಿ ಬಹಳ ಸುಲಭವಾಗಿ ಕಲಿಯುತ್ತಾರೆ. 2014ರ ಅಂಕಿ-ಅಂಶ ಬೆಚ್ಚಿ ಬೀಳಿಸುತ್ತದೆ ಏಕೆಂದರೆ ಜಗತ್ತಿನ ಅತ್ಯಂತ ಹೆಚ್ಚಿನ ಕೌಶಲ್ಯ ಕೊರತೆಯಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಜಪಾನ್ ಅಲಂಕರಿಸಿದರೆ ಭಾರತ ಎರಡನೇ ಸ್ಥಾನದಲ್ಲಿದೆ. ಅನಂತರ ಬ್ರೆಜಿಲ್, ಟರ್ಕಿ, ಮೆಕ್ಸಿಕೋ, ಆಸ್ಟ್ರೇಲಿಯಾ, ಕೆನಡಾ ಹೀಗೆ ಪಟ್ಟಿ ಸಾಗುತ್ತದೆ. ಎಂತಹ ವಿಚಿತ್ರ ಸ್ಥಿತಿ ನೋಡಿ 130 ಕೋಟಿ ಜನಸಂಖ್ಯೆ ಇದ್ದರೂ ನಮ್ಮಲ್ಲಿ ಕೆಲವು ಕೆಲಸ ಮಾಡಲು ತಯಾರಾದ ಅಥವಾ ಸಿದ್ಧತೆ ಹೊಂದಿದ ಜನರ ಕೊರತೆಯಿದೆ! ಈ ಎಲ್ಲಾ ವಿಷಯಗಳನ್ನ ಅರಿತು ತನ್ನ ದೇಶದ ಭವಿಷ್ಯ ಬದಲಾಯಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 2015ರಲ್ಲಿ (Pradhan Mantri Kaushal Vikas Yojana (PMKVY) ) ಪ್ರಧಾನಮಂತ್ರಿ ಕೌಶಲ್ಯ ವೃದ್ಧಿ ಯೋಜನೆಯನ್ನ ಜಾರಿಗೆ ತಂದಿತು. 2016 ರಿಂದ 2020ರ ವರೆಗಿನ ಅವಧಿಗೆ 12 ಸಾವಿರ ಕೋಟಿ ರೂಪಾಯಿಯನ್ನ ಈ ಯೋಜನೆಗಾಗಿ ಮೀಸಲಿಡಲಾಗಿತ್ತು. ಈ ವರ್ಷ ಅಂದರೆ 2021ರ ಬಜೆಟ್ನಲ್ಲಿ ಇದಕ್ಕೆ 3 ಸಾವಿರ ಕೋಟಿ ರೂಪಾಯಿಯನ್ನ ತೆಗೆದಿರಿಸಲಾಗಿದೆ.  ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನ ನೋಡೋಣ.

  1. ಅಲ್ಪಾವಧಿ ತರಬೇತಿ: ಶಾಲೆ ಅಥವಾ ಕಾಲೇಜು ಬಿಟ್ಟು ಅರೆಕಾಲಿಕ ಕೆಲಸ ಮಾಡಿಕೊಂಡು ಪೂರ್ಣ ಪ್ರಮಾಣದಲ್ಲಿ ಯಾವುದೇ ವಿಷಯದಲ್ಲಿ ನಿಪುಣತೆ ಇರದ ಯುವ ಜನತೆ ಇಲ್ಲಿ ನೊಂದಾಯಿಸಿ ಕೊಳ್ಳುವ ಅವಕಾಶವಿದೆ. ಹಣಕಾಸು, ಡಿಜಿಟಲ್ ಲಿಟ್ರೇಸಿ, ಡೇಟಾ ಎಂಟ್ರಿ ಯಿಂದ ಹಲವಾರು ವಿಷಯಗಳಲ್ಲಿ ನಿಪುಣತೆ ಹೊಂದಲು ಅವಕಾಶವಿದೆ. ಇಲ್ಲಿ ಬರುವ ಅಭ್ಯರ್ಥಿಗಳ ನಿಪುಣತೆ ಆಧಾರದ ಮೇಲೆ 150 ರಿಂದ 300 ಗಂಟೆಗಳ ಕಾಲದ ತರಬೇತಿಯನ್ನ ನೀಡಲಾಗುತ್ತದೆ. ಒಮ್ಮೆ ತರಬೇತಿ ಮುಗಿದು ಅವರು ನಿಗದಿತ ವಿಷಯದಲ್ಲಿ ನಿಪುಣತೆ ಪಡೆದಿದ್ದರೆ ಅಂತವರಿಗೆ ಕೆಲಸದ ಅವಕಾಶವನ್ನ ಕೂಡ ಮಾಡಿಕೊಡಲಾಗತ್ತದೆ. ಗಮನಿಸಿ ಇದೆಲ್ಲವೂ ಕೇಂದ್ರ ಸರಕಾರ ಅಭ್ಯರ್ಥಿಗಳ ಬಳಿ ಒಂದು ನಯಾ ಪೈಸೆ ತೆಗೆದುಕೊಳ್ಳದೆ ನೀಡುತ್ತಿರುವ ಸೇವೆ.
  2. ನಿಗದಿತ ವಿಷಯದ ಕಲಿಕೆಯನ್ನ ಗುರುತಿಸುವಿಕೆ: ಇದನ್ನ RPL ಎನ್ನುತ್ತೇವೆ. Recognition of Prior Learning ಎಂದರ್ಥ. ಅಂದರೆ ಅಭ್ಯರ್ಥಿಗಳಲ್ಲಿ ಈ ಮೊದಲೇ ಇರುವ ಅನುಭವ, ವೃತ್ತಿ ಜೊತೆಗೆ ಶೈಕ್ಷಣಿಕ ಮಟ್ಟವನ್ನ ಅಳೆದು ಅವರಿಗೆ ನಿಖರವಾಗಿ ಯಾವ ವಿಷಯದಲ್ಲಿ ನಿಪುಣತೆ ಬೇಕು ಎಂದು ಗುರುತಿಸಿ ಅದರಲ್ಲಿ ತರಬೇತಿ ನೀಡಿ ಅನಂತರ ಅವರು ಅಂತಹ ಕೆಲಸವನ್ನ ಮಾಡಲು ಅರ್ಹರು ಎಂದು ಪ್ರಮಾಣಪತ್ರ ನೀಡುವ ಕ್ರಿಯೆ. ಗಮನಿಸಿ ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಾಕಷ್ಟು ಅನುಭವ ಮತ್ತು ಶಿಕ್ಷಣವಿರುತ್ತದೆ ಆದರೆ ಬದಲಾದ ಸನ್ನಿವೇಶದಲ್ಲಿ ಹೆಚ್ಚಿನ ಅರಿವಿನ ಅಗತ್ಯವಿರುತ್ತದೆ ಹೀಗಾಗಿ ಇಂತಹವರಿಗೆ ಬ್ರಿಡ್ಜ್ ಕೋರ್ಸ್ ಅಥವಾ ಜ್ಞಾನದ ಕೊರತೆ ನೀಗುವ (ನಾಲೆಡ್ಜ್  ಗ್ಯಾಪ್) ಕಾರ್ಯವನ್ನ ಇಲ್ಲಿ ಮಾಡಲಾಗುತ್ತದೆ. ಹೀಗೆ ಇದರಲ್ಲಿ ಜಯಶೀಲರಾದವರು ತಮ್ಮ ಕೆಲಸದಲ್ಲಿ ಮುಂದುವರಿಯಬಹುದು ಅಥವಾ ಸರಕಾರ ಅಥವಾ ಸರಕಾರೇತರ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಯನ್ನ ತುಂಬಬಹುದು.
  3. ವಿಶೇಷ ಯೋಜನೆಗಳು: ಸರಕಾರಿ ಸಂಸ್ಥೆಗಳಿಗೆ ಅಥವಾ ಬೇರೆ ಯಾವುದೇ ಕಾರ್ಪೊರೇಟ್ ಸಂಸ್ಥೆಗಳಿಗೆ ಬೇಕಾಗುವ ವಿಶೇಷ ನಿಪುಣತೆ ಬೇಡುವ ಕೆಲಸಗಾರರ ಕೊರತೆಯನ್ನ ತುಂಬುವುದು ಇಲ್ಲಿನ ಉದ್ದೇಶ. ಅಂದರೆ ಸರಕಾರ ದೇಶದ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳಿಗೆ ಯಾವ ವಲಯದಲ್ಲಿ ನಿಪುಣ ಕೆಲಸಗಾರರ ಕೊರತೆಯಿದೆ ಎಂದು ತಿಳಿದುಕೊಳ್ಳುತ್ತದೆ ಅಲ್ಲದೆ ತನಗೆ ಕೊರತೆಯಿರುವ ವಲಯವನ್ನ ಕೂಡ ಗುರುತಿಸುತ್ತದೆ ಮತ್ತು ವಿಶೇಷವಾಗಿ ಅಂತಹ ನಿಪುಣತೆ ಬೇಡುವ ಕೆಲಸಗಳನ್ನ ತುಂಬಲು ಅಭ್ಯರ್ಥಿಗಳನ್ನ ಆಯ್ಕೆಮಾಡಿ ಅಂತವರಿಗೆ ತರಬೇತಿಯನ್ನ ನೀಡುತ್ತದೆ. ನಂತರ ಅವರಿಗೆ ಕೆಲಸವನ್ನ ಕೂಡ ನೀಡುತ್ತದೆ.

ಮೇಲಿನ ಮೂರು ಹಂತದ ಕೆಲಸಗಳು ಸರಾಗವಾಗಿ ನಡೆಯಲು ಆಗಾಗ್ಗೆ ಕೌಶಲ್ಯ ಮತ್ತು ಕೆಲಸದ ಮೇಳವನ್ನ ಆಯೋಜಿಸುತ್ತದೆ. ಜೊತೆಗೆ ತರಬೇತಿ ಹೊಂದಿದ ಜನರನ್ನ ಸರಿಯಾದ ಹುದ್ದೆಗೆ ಸೇರಿಸಲು ಪ್ಲೇಸ್ಮೆಂಟ್ ಸರ್ವಿಸ್ ಅನ್ನು ಕೂಡ ನೀಡುತ್ತಿದೆ. ಒಟ್ಟು ಈ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆದುಕೊಂಡು ಹೋಗಲು ಮಾರ್ಗ ಸೂಚಿಯನ್ನ ಕೂಡ ಬಿಡುಗಡೆ ಮಾಡಿದೆ.

ಇಂತಹ ಯೋಜನೆ ಹಿಂದೆ ಇರಲಿಲ್ಲವೇ? ಎನ್ನುವ ಪ್ರಶ್ನೆ ಹಲವರನ್ನ ಕಾಡಬಹುದು. ಉತ್ತರ ಇತ್ತು ಆದರೆ ಅದಕ್ಕೆ ಕೊಡಬೇಕಾದ ಗಮನ ಮತ್ತು ಆದ್ಯತೆ ನೀಡುತ್ತಿರಲಿಲ್ಲ. ಎಲ್ಲವೂ ಕಾಗದದಲ್ಲಿತ್ತು ಆದರೆ ಇದೀಗ ಅವೆಲ್ಲವೂ ಕಾರ್ಯ ರೂಪಕ್ಕೆ ಬರುತ್ತಿವೆ. ಹಿಂದೆ ಇದಕ್ಕೆ ಎಂದು ಪ್ರತ್ಯೇಕ ಮಂತ್ರಾಲಯವಿರಲಿಲ್ಲ ಆದರೆ ಈಗ ಇದಕ್ಕೆಂದು ಪ್ರತ್ಯೇಕ ಮಂತ್ರಾಲಯವಿದೆ.

ಕೊನೆ ಮಾತು: ಭಾರತ ನಿಪುಣ ಕೆಲಸಗಾರರ ಜಗತ್ತಿಗೆ ಸರಬರಾಜು ಮಾಡುವ ಮಾನವ ಸಂಪನ್ಮೂಲ ಹಬ್ ಆಗಬೇಕೆಂಬ ಕೇಂದ್ರ ಸರಕಾರದ ಕನಸಿನೆಡೆಗೆ ಈ ಯೋಜನೆ ಮೊದಲ ಹೆಜ್ಜೆಗಳನ್ನ ದೃಢವಾಗಿ ಊರಿತ್ತು. ಈಗ ಹೊಸ ಹುಮ್ಮಸ್ಸಿನಿಂದ ಹೆಜ್ಜೆ ಇಡಲು ಹೊರಟಿದೆ ಎಂದು ಹೇಳಲು ಅಡ್ಡಿಯಿಲ್ಲ. ಈ ಯೋಜನೆ ಹತ್ತು ಕೋಟಿಗೂ ಮೀರಿದ ಜನರಿಗೆ ತಲುಪುತ್ತಿದೆ ಎನ್ನುವುದನ್ನ ಇಲ್ಲಿ ಸ್ಮರಿಸೋಣ. ನಿಮಗೆಲ್ಲ ತಿಳಿದಿರಲಿ ಜಗತ್ತಿನಾದ್ಯಂತ ಶಿಕ್ಷಕ ವೃತ್ತಿಗೆ, ಪ್ಯಾರಾ ಮೆಡಿಕಲ್ ಸರ್ವಿಸಸ್ ನೀಡುವರಿಗೆ, ವೃದ್ಧಾಪ್ಯದ ಗೃಹಗಳಲ್ಲಿ ಸೇವೆ ಸಲ್ಲಿಸುವ ಕೆಲಸಗಳಿಗೆ, ಇಂಜಿನಿಯರ್ ಗಳಿಗೆ ಬಹಳ ಬೇಡಿಕೆಯಿದೆ. ಚೀನಾ ಜಗತ್ತಿಗೆ ಪದಾರ್ಥಗಳನ್ನ ಮಾರುವ ಮಾರುಕಟ್ಟೆಯಾಗಿ ಹೇಗೆ ಮಾರ್ಪಾಡುಗೊಂಡಿತು, ಹಾಗೆ ಭಾರತ ಜಗತ್ತಿನ ಎಲ್ಲಾ ದೇಶಗಳಿಗೆ ತನ್ನ ನುರಿತ ವೃತ್ತಿಪರ ಜನರನ್ನ ಕಳಿಸುವ ಯೋಚನೆಯನ್ನ ಹೊಂದಿದೆ. ಆ ನಿಟ್ಟಿನಲ್ಲಿ ಸರಕಾರ ಇದನ್ನ ಕಾರ್ಯರೂಪಕ್ಕೆ ತರಲು ತೆಗೆದಿಟ್ಟಿರುವ ಮೊತ್ತ ಬಹಳ ದೊಡ್ಡದು. ನಾವು ಯಾವುದೇ ಪಕ್ಷದ ಪರ ವಿರೋಧ ಮಾಡುತ್ತಾ, ನಮಗೆ ತಿಳಿಯದ ಕ್ಷೇತ್ರದ ಬಗ್ಗೆ ಮಾತನಾಡುತ್ತ ವೇಳೆ ಕಳೆಯುವುದಕ್ಕಿಂತ, ನಮ್ಮಲ್ಲಿ ಇರುವ ಕೊರತೆಯನ್ನ ತುಂಬಿಕೊಳ್ಳುವ, ಹೊಸ ಕೌಶಲ್ಯವನ್ನ ವೃದ್ಧಿಸಿಕೊಳ್ಳುವ ಕಡೆಗೆ ಗಮನ ಹರಿಸಿದ್ದೇ ಆದರೆ, ಅವಕಾಶಗಳು ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನೆಲ್ಲೆಡೆ ನಮಗೆ ಅಂದರೆ ಭಾರತೀಯರಿಗೆ ಸಿಗಲಿದೆ. ಜರ್ಮನಿ ಮತ್ತು ಜಪಾನ್ ಭಾರತೀಯರಿಗೆ ಹೇಳಿ ಮಾಡಿಸಿದ ದೇಶಗಳು. ಅಮೆರಿಕನ್ ಡ್ರೀಮ್ ಕೂಡ ಪೂರ್ಣ ಮುಸುಕಾಗಿಲ್ಲದಿದ್ದರೂ ಮೊದಲಿನ ಛಾಪು ಕಳೆದುಕೊಂಡಿದೆ. 20 ರಿಂದ 30 ವಯಯೋಮಾನದ ಹುಡುಗರಿಗೆ ಇದು ನಿಜವಾಗಿ ಅಚ್ಚೇದಿನಗಳು. 30 ಮೇಲ್ಪಟ್ಟವರಿಗೂ 'ಸ್ಟಾರ್ಟ್ ಅಪ್' ಮೂಲಕ ಬಹಳಷ್ಟು ಅವಕಾಶಗಳಿವೆ. ನಿರ್ಧಾರ ಮಾಡಬೇಕಿರುವುದು, ಕೆಲಸಕ್ಕೆ ತೊಡಗಿಕೊಳ್ಳಬೇಕಿರುವುದು ನಾವು-ನೀವು.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp