ಹೆಚ್ಚು ಹಣವಿಲ್ಲದೆ ಬದುಕಲು ಸಾಧ್ಯವಿಲ್ಲವೇ?

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 11th February 2021 01:11 AM  |   Last Updated: 11th February 2021 01:11 AM   |  A+A-


Hanaclasu: Here are some tips to how to live with less money

ಸಾಂಕೇತಿಕ ಚಿತ್ರ

Posted By : Srinivas Rao BV
Source : Online Desk

ನೂರಾರು ವರ್ಷಗಳ ಹಿಂದೆ ಹೋಗುವ ಪ್ರಮೇಯವಿಲ್ಲ. ಕೇವಲ ನಾಲ್ಕೈದು ದಶಕಗಳ ಹಿಂದೆ ಹೋದರೆ ಸಾಕು. ನಮ್ಮ ತಾತ ಯಾವ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ತಮ್ಮ ಬದುಕ ಕಳೆಯಲು ಅವರು ನಗರ ಪ್ರದೇಶಕ್ಕೆ ವಲಸೆ ಕೂಡ ಹೋಗಲಿಲ್ಲ. ವರ್ಷ ತುಂಬಿದರೂ ಅವರು ಹೇಳಿಕೊಳ್ಳುವಷ್ಟು ಹಣವನ್ನ ನೋಡುತ್ತಿರಲಿಲ್ಲ. ಆದರೆ ಅವರ ಬದುಕು ನಮ್ಮ ಇಂದಿನ ಬದುಕಿಗಿಂತ ಬಹಳ ಚೆನ್ನಾಗೇ ಇತ್ತು. ಹಿತ್ತಲಲ್ಲಿ ಬೆಳೆಯುವ ಕರಿಬೇವು, ಕೊತ್ತಂಬರಿಗೆ ಹಣ ನೀಡುವ ಅವಶ್ಯಕತೆಯಿರಲಿಲ್ಲ. ಅದೇ ಹಿತ್ತಲಲ್ಲಿ ಬೆಳೆದ ಕುಂಬಳ, ನುಗ್ಗೆ ಜೊತೆಗೆ ಇತರ ಸೊಪ್ಪು ಆಹಾರವಾಗುತ್ತಿತ್ತು. ಮನೆಯಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಕರೆಯುತ್ತಿದ್ದ ಹಾಲು ಫ್ರಿಡ್ಜ್ ನಲ್ಲಿಡುವ ಅವಶ್ಯಕತೆ ಇರುತ್ತಿರಲಿಲ್ಲ. ಕೆಡದಂತೆ ಹಾಲಿಗೆ ಹತ್ತಾರು ರೀತಿಯ ದ್ರಾವಣವನ್ನ ಬೆರೆಸುತ್ತಿರಲಿಲ್ಲ. ಒಟ್ಟಿನಲ್ಲಿ ಆರೋಗ್ಯ ಚೆನ್ನಾಗಿರುತಿತ್ತು. ಇವತ್ತಿಗೆ ಸೃಷ್ಟಿಯಾಗಿರುವ ಅನೇಕ ಖರ್ಚುಗಳು ಅಂದು ಇರಲೇ ಇಲ್ಲ.

ಹೌದು ಅಂದು ಹಣದ ಹರಿವು ಇರಲಿಲ್ಲ ನಿಜ, ಅದರ ಜೊತೆಗೆ ಖರ್ಚುಗಳು ಕೂಡ ಇರಲಿಲ್ಲ ಎನ್ನುವುದನ್ನ ನಾವು ಗಮನಿಸುವುದಿಲ್ಲ. ಇವತ್ತೇನಾಗಿದೆ ಮಾಸಿಕ ವೇತನ ಐದಾರು ಅಂಕಿಯಲ್ಲಿದೆ ನಿಜ, ಆದರೆ ಎರಡು ಎಸಳು ಕರಿಬೇವು, ಕೊತ್ತಂಬರಿಯಿಂದ ಎಲ್ಲಕ್ಕೂ ಹಣ ನೀಡಬೇಕಾಗಿದೆ. ನಾವು ಕುಡಿಯುವ ಹಾಲು ಎಷ್ಟು ಹಳೆಯದು ಎನ್ನುವುದು ಕೂಡ ನಮಗೆ ತಿಳಿದಿರುವುದಿಲ್ಲ. ಹೀಗೆ ಎಲ್ಲವನ್ನೂ ನಿಖರವಾಗಿ ಲೆಕ್ಕ ಹಾಕುತ್ತ ಹೋದರೆ ನಮ್ಮ ಕೈಯಲ್ಲಿ ಉಳಿತಾಯ ಎಂದು ಉಳಿದ ಹಣ ನಾವೇ ಬೇಕೆಂದು ಇಷ್ಟ ಪಟ್ಟು ಬದಲಿಸಕೊಂಡ ಜೀವನ ಶೈಲಿಗೆ ಸಮವೇ? ಎನ್ನುವ ಪ್ರಶ್ನೆಯನ್ನ ಹಾಕಿಕೊಳ್ಳಬೇಕಿದೆ. ಸದಾ ಹಪಹಪಿಕೆ, ಟಾರ್ಗೆಟ್ ಎಂದು ಓಡುವ ಮನುಷ್ಯ ಈ ಮಧ್ಯೆ ಕಳೆದುಕೊಂಡ ಸಮಯದ ಲೆಕ್ಕವನ್ನ ಹಾಕುವುದಿಲ್ಲ. ಹಾಗೊಮ್ಮೆ ಆ ಸಮಯದ ಲೆಕ್ಕಾಚಾರ ಹಾಕಿದರೆ ಇಷ್ಟೆಲ್ಲಾ ಮಾಡಿದ್ದು ಯಾವ ಪುರುಷಾರ್ಥ ಸಾಧನೆಗೆ? ಎನ್ನುವ ಪ್ರಶ್ನೆ ಖಂಡಿತ ಉಧ್ಭವವಾಗದೆ ಇರದು.

ಇವತ್ತಿನ ಸಮಾಜವನ್ನ ನಾವು ಈ ರೀತಿಯ ಹಣದ ಸುತ್ತಮುತ್ತ ಸುತ್ತುವ ಬದುಕಾಗಿ ಬದಲಿಸಿಕೊಂಡಿದ್ದೇವೆ. ಇವತ್ತು ಮನೆಯಿಂದ ಹೊರ ಬಂದರೆ ಹಣ ಬೇಕು ಎನ್ನುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಪೂರ್ಣವಾಗಿ ಹಣವೇ ಇಲ್ಲದೆ ಅಥವಾ ಹಣದ ಸಹಾಯವಿಲ್ಲದೆ ಬದುಕುತ್ತನೆ ಎನ್ನುವ ಮಾತು ಸಿನಿಕತೆ ಎನ್ನಿಸುವ ಮಟ್ಟಿಗೆ ನಾವು ನಮ್ಮ ಸಮಾಜವನ್ನ ಬದಲಾಯಿಸಿಬಿಟ್ಟಿದ್ದೇವೆ. ಆದರೆ ಹಣವೇ ಜೀವನ ಎನ್ನುವುದು ತಪ್ಪು. ಮೂಲಭೂತ ಬದುಕಿಗೆ ಬೇಕಾದ ಹಣವಂತೂ ಬೇಕಲ್ಲವೇ? ಹೀಗಾಗಿ ಸಾಧ್ಯವಾದಷ್ಟು ಕಡಿಮೆ ಹಣದಲ್ಲಿ ಬದುಕಲು ಸಾಧ್ಯವಿದೆ. ಅದೆಷ್ಟು ಎನ್ನುವುದು ಅವರವರ ಬದುಕಿನ ಮೇಲೆ, ಮನಸ್ಥಿತಿಯ ಮೇಲೆ ಅವಲಂಬಿತ. ಕಡಿಮೆ ಹಣದಲ್ಲಿ ಬದುಕಲು ಹಲವು ಮಾರ್ಗಸೂಚಿಗಳಿವೆ ಅವುಗಳಲ್ಲಿ ಮುಖವಾದವುಗಳ ಬಗ್ಗೆ ಒಂದಷ್ಟು ತಿಳಿದು ಕೊಳ್ಳೋಣ.

  1. ನಗರ ಪ್ರದೇಶದಲ್ಲಿ ವಾಸಿಸುವ ಮನೆಗೆ ವೇತನದ ಐವತ್ತರಿಂದ, ಅರವತ್ತು ಪ್ರತಿಶತ ಹಣವನ್ನ ವ್ಯಯಿಸಬೇಕಾಗುತ್ತದೆ. ಹೀಗಾಗಿ ನಗರ ಪ್ರದೇಶದಲ್ಲಿ ವಾಸಿಸುವ ಬದಲು ನಮ್ಮ ಊರುಗಳಲ್ಲಿ ವಾಸಿಸುವುದು ಬಹಳ ಉತ್ತಮ. ಆದರೆ ಊರಿನಲ್ಲಿ ವೇತನವೇ ಇರುವುದಿಲ್ಲವಲ್ಲ ಎನ್ನುವ ಪ್ರಶ್ನೆ ಉಧ್ಭವಾಗುತ್ತದೆ. ಇವತ್ತಿನ ದಿನದಲ್ಲಿ ತಂತ್ರಜ್ಞಾನದ ಸಹಾಯದಿಂದ ಸರಿಯಾಗಿ ಪ್ಲಾನ್ ಮಾಡಿದರೆ ನಾವು ಎಲ್ಲೇ ಇರಲಿ ಅಲ್ಲಿಂದ ಒಂದಷ್ಟು ಹಣವನ್ನ ದುಡಿಯುವುದು ಅಸಾಧ್ಯವೇನಲ್ಲ. ಮೊದಲೇ ಹೇಳಿದಂತೆ ಒಟ್ಟು ಆದಾಯ ಮತ್ತು ಖರ್ಚುಗಳನ್ನ ತೆಗೆದು ಉಳಿಯುವ ಹಣ, ಬದುಕುವ ರೀತಿಗೆ, ಜೀವನ ಮಟ್ಟಕ್ಕೆ ಸರಿ ಹೊಂದುತ್ತಿದೆಯೇ? ಎನ್ನುವ ಪ್ರಶ್ನೆ ಹಾಕಿಕೊಂಡು ಆಯ್ಕೆ ಮಾಡಿಕೊಳ್ಳಬೇಕು.
  2. ಕಡಿಮೆ ಹಣ ಇದೆ ಎಂದರೆ ಅಥವಾ ಹಣದ ಕೊರತೆಯಿದೆ ಎಂದರೆ ವೃಥಾ ಖರ್ಚು ಕಡಿಮೆ ಎಂದರ್ಥ. ನೀವೇ ನಿಮ್ಮ ಒಂದು ತಿಂಗಳ ಖರ್ಚಿನ ಅಭ್ಯಾಸವನ್ನ ಅಧ್ಯಯನ ಮಾಡಿ ನೋಡಿ. ಹೆಚ್ಚು ಹಣ, ಹೆಚ್ಚು ವೇತನ ಇರುವವರ ಖರ್ಚು ನೋಡಿ, ಅದರಲ್ಲಿ 50 ರಿಂದ 60 ಪ್ರತಿಶತ ಖರ್ಚು ಬೇಕಿಲ್ಲದ್ದು. ಆದರೆ ಸಮಾಜದ ಕಣ್ಣಿನಲ್ಲಿ ನಾವು ಯಶಸ್ವೀ, ಹಣವಂತರು ಎಂದು ತೋರಿಸಿಕೊಳ್ಳುವ ಉಮೇದಿಯಲ್ಲಿ ಇಂತಹ ಖರ್ಚುಗಳನ್ನ ಮಾಡುತ್ತಾರೆ. ಈ ಖರ್ಚುಗಳನ್ನ ಮಾಡದೆ ಕೂಡ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.
  3. ಕಡಿಮೆ ಹಣ ಸಂಪಾದನೆ ಎಂದರೆ, ನಿಮಗಾಗಿ ಹೆಚ್ಚು ವೇಳೆಯಿದೆ ಎಂದರ್ಥ. ಗಮನಿಸಿ ನೋಡಿ ನಾವು ಜಗತ್ತಿನ ಎಲ್ಲರೊಡನೆ ಸಂವಹನ ಮಾಡುತ್ತೇವೆ. ಆದರೆ ನಾವು ನಮ್ಮೊಡನೆ ಕುಳಿತು ಮಾತನಾಡಿಕೊಂಡು ಎಷ್ಟು ಸಮಯವಾಯ್ತು? ನಮ್ಮ ಬೇಕು ಬೇಡಗಳನ್ನ ನಾವು ನಮ್ಮೊಂದಿಗೆ ಚರ್ಚಿಸುವುದು ಬಿಟ್ಟಿದ್ದೇವೆ. ಸಮಾಜದಲ್ಲಿ ನಾವಾಗೇ ಸೃಷ್ಟಿಸಿಕೊಂಡ ಸುಳಿಯಲ್ಲಿ ಸಿಲುಕಿಸಿಕೊಂಡು, ಸಮಾಜದ ಕಣ್ಣಿನಲ್ಲಿ ನಾವೇನೋ ದೊಡ್ಡವರು ಎನ್ನಿಸಿಕೊಳ್ಳಲು ಸಮಯವನ್ನ ಕಳೆಯುತ್ತೆವೆ. ನಿಜಕ್ಕೂ ನಮಗೇನು ಬೇಕು ಎನ್ನುವುದು ಹಿಂಬದಿಯ ಸ್ಥಾನವನ್ನ ಪಡೆಯುತ್ತದೆ. ನಿಜಾರ್ಥದಲ್ಲಿ ನಮಗೇನು ಬೇಕು ಎನ್ನುವುದು ಪ್ರಥಮ ಸ್ಥಾನ ಪಡೆಯಬೇಕು.
  4. ಹೆಚ್ಚು ಸಂಪಾದನೆಯಿಲ್ಲ ಎಂದರೆ ಕಡಿಮೆ ತಿರುಗಾಟ ಎಂದರ್ಥ. ಕೊರೋನ ಎನ್ನುವ ವೈರಸ್ ಹೆಚ್ಚು ತಿರುಗಾಟವಿಲ್ಲದೆ ಬಹಳಷ್ಟು ಕೆಲಸವನ್ನ ಕುಳಿತ ಜಾಗದಿಂದ ಮಾಡಿ ಮುಗಿಸಬಹುದು ಎನ್ನುವುದನ್ನ ನಮಗೆ ಕಲಿಸಕೊಟ್ಟಿದೆ. ವೃಥಾ ಸುತ್ತುವುದರಿಂದ ಹಣದ ಜೊತೆಗೆ ಸಮಯವೂ ಪೋಲು. ಜೊತೆಗೆ ನಾವು ಸುಡುವ ತೈಲದ ಮೇಲಿನ ವಿದೇಶಿ ವಿನಿಮಯ ಕೂಡ ನಷ್ಟವಾಗುತ್ತದೆ.
  5. ನಗರ ಪ್ರದೇಶಗಳಲ್ಲಿ ನಾಯಿಕೊಡೆಯಂತೆ ತಲೆಯೆತ್ತಿರುವ ಜಿಮ್ ಗಳನ್ನ ನೋಡಿದಾಗ ಮನುಷ್ಯ ತಾನಾಗೇ ತಂದುಕೊಂಡಿರುವ ವಿಷಮತೆಯ ಅರಿವಾಗುತ್ತದೆ. ವ್ಯಾಯಾಮ ಎನ್ನುವುದು ದಿನದಲ್ಲಿ ಒಂದು ಅಥವಾ ಎರಡು ನಿರ್ದಿಷ್ಟ ತಾಸುಗಳಲ್ಲಿ ಮಾಡಿ ಮುಗಿಸುವ ವಿಷಯವಲ್ಲ. ಅದು ಜೀವನ ಶೈಲಿಯಾಗಬೇಕು. ನಮ್ಮದೇ ಮನೆಯ ಮುಂದೆ ನಮಗೆ ಬೇಕಾದ ಆಹಾರ ಬೆಳೆದುಕೊಳ್ಳುವುದು ಅಂತಹ ಒಂದು ಜೀವನ ಶೈಲಿ ಸೃಷ್ಟಿಸುತ್ತದೆ. ಪ್ರತ್ಯೇಕವಾಗಿ ವ್ಯಾಯಾಮಕ್ಕೆ ಎಂದು ನಾವು ವೇಳೆಯನ್ನ ಮೀಸಲಿಡುವುದು ತಪ್ಪುತ್ತದೆ. ಹೌದು ಇಂತಹ ಜೀವನ ಶೈಲಿ ಆರಿಸಿಕೊಳ್ಳುವುದರಿಂದ ಸಂಪಾದನೆ ಇರುವುದಿಲ್ಲ ಜೊತೆಗೆ ಖರ್ಚು ಕೂಡ ಇರುವುದಿಲ್ಲ. ಆದರೂ ಬದುಕಿಗೆ ಒಂದಷ್ಟು ಹಣವಂತೂ ಬೇಕೇ ಬೇಕು. ಅಷ್ಟು ಹಣ ಹೊಂದಿಸಿಕೊಳ್ಳುವ ಕೆಲಸ ಮಾಡಿದರೆ ಉಳಿದ ಸಮಯ ನಮ್ಮದು.
  6. ಹೆಚ್ಚು ಗಳಿಸುತ್ತಾ ಹೋದಂತೆ ಅದಕ್ಕೆ ತಕ್ಕಂತೆ ತೆರಿಗೆಯನ್ನ ಕಟ್ಟಬೇಕಾಗುತ್ತದೆ. ಗಳಿಕೆಯ 30 ಪ್ರತಿಶತ ತೆರಿಗೆಯನ್ನ ನೀಡಬೇಕು. ಉಳಿಸಿದ ಹಣವನ್ನ ಎಲ್ಲಾದರೂ ಹೂಡಿಕೆ ಮಾಡಬೇಕು. ಹೂಡಿಕೆಯ ಮೇಲಿನ ಮತ್ತು ಉಳಿಕೆಯ ಮೇಲಿನ ಹಣಕ್ಕೂ ಮತ್ತೆ ತೆರಿಗೆ ಕಟ್ಟಬೇಕಾಗುತ್ತದೆ. ಇದರರ್ಥ ನಾವು ಕೆಲಸದಿಂದ ವಿಮುಖರಾಗಬೇಕು ಎಂದಲ್ಲ. ಒಂದು ಹಂತದ ನಂತರ ಗಳಿಸುವ ಹಣ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಅದು ಬ್ಯಾಂಕಿನಲ್ಲಿ ಒಂದು ಸಂಖ್ಯೆ ಅಷ್ಟೇ, ನಾವು ನೆಲದ ಮೇಲೆ ಅಥವಾ ಷೇರಿನ ಮೇಲೆ ಮಾಡಿದ ಹೂಡಿಕೆ ಕೂಡ ನಿರ್ಜಿವ ವಸ್ತು. ಅದು ನಮಗೆ ಯಾವುದೇ ರೀತಿಯ ಸಂತೋಷವನ್ನ ನೀಡಲು ಸಾಧ್ಯವಿಲ್ಲ. ನಾವು ಗಳಿಸಿದ ಸಮಯದ ಸದ್ವಿನಿಯೋಗ, ಸಮಯವನ್ನ ಸರಿಯಾಗಿ ವ್ಯಯಿಸಿ ಗಳಿಸುವ ಜ್ಞಾನ ನಮಗೆ ಖುಷಿ ಮತ್ತು ಬದುಕಿಗೊಂದು ಅರ್ಥವನ್ನ ನೀಡುತ್ತದೆ.
  7. ವೃತ್ತಿಪರರು ಹೆಚ್ಚೆಚ್ಚು ಗ್ರಾಮೀಣ ಪ್ರದೇಶಗಳಿಗೆ ಮರಳಿ ಹೋಗುವುದು ಕೂಡ ಉತ್ತಮ ಆಯ್ಕೆ. ನಗರ ಪ್ರದೇಶದಲ್ಲಿ ಕೋಟಿಗಟ್ಟಲೆ ಸಂಪಾದನೆಯಿದೆ, ಅದಕ್ಕೆ ತಕ್ಕಂತೆ ನೆಲ, ಮನೆಗೂ ವ್ಯಯಿಸಬೇಕು. ಹಗಲು ರಾತ್ರಿಯೆನ್ನದೆ ದುಡಿಯಬೇಕು. ಇಷ್ಟಲ್ಲಾ ಮಾಡಿಕೊಂಡ ಏನೂ ಸಾಧಿಸಿದ ಭಾವನೆ ಕೂಡ ನಮ್ಮಲ್ಲಿ ಉತ್ಪನ್ನವಾಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಾಡುವ ಸೇವೆ ಮನಸ್ಸಿಗೆ ಮುದ ನೀಡುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬರುವುದಿಲ್ಲ.
  8. ಸರಳವಾಗಿ ಹೇಳಬೇಕೆಂದರೆ ಬಾಹ್ಯ ವಸ್ತುಗಳ, ಅಥವಾ ಹಣ ತೆತ್ತು ಕೊಳ್ಳುವ ವಸ್ತುಗಳ ಸಹಾಯದಿಂದ ಖುಷಿಯನ್ನ ಬಯಸುವುದು ನಿಂತರೆ ಅಲ್ಲಿಗೆ ಹಣದ ಅವಶ್ಯಕತೆ ಮುಕ್ಕಾಲು ಪಾಲು ಕಡಿಮೆಯಾಗುತ್ತದೆ. ಉದಾಹರಣೆಗೆ ನಮ್ಮ ತಾತನ ಕಾಲದಲ್ಲಿ ನೋಡಿ ಅವರ ಬಳಿ ಇಂದಿನ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್, ಮೊಬೈಲ್ ಯಾವುದೂ ಇರಲಿಲ್ಲ ಆದರೆ ಅವರು ಖುಷಿಯಾಗಿದ್ದರು. ಇಂಟರ್ನೆಟ್ ನಾವು ಬದುಕುವ ರೀತಿಯನ್ನ ಖಂಡಿತ ಬದಲಾಯಿಸಿದೆ. ಅದನ್ನ ಕೂಡ ನಮ್ಮ ಅನುಕೂಲಕ್ಕೆ ತಕ್ಕಷ್ಟು ಬಳಸಿಕೊಂಡರೆ ನಮಗೆ ಒಳಿತು. ಇಂದಿನ ಮಕ್ಕಳು ದಿನದಲ್ಲಿ ಎರಡು ತಾಸು ಇಂಟರ್ನೆಟ್ ಇಲ್ಲದಿದ್ದರೆ ಸಾಕು ನೀರಿನಿಂದ ಹೊರತೆಗೆದ ಮೀನಿನಂತೆ ಪರದಾಡುತ್ತಾರೆ. ಇದೊಂದು ಅಡ್ಡಿಕ್ಷನ್ ಇದರಿಂದ ಹೊರಬರಲು ಮತ್ತೆ ಹಣ ವ್ಯಯಿಸಬೇಕಾಗುತ್ತದೆ.

ಕೊನೆಮಾತು: ಸಮಾಜದಲ್ಲಿ ಹೆಚ್ಚುತ್ತಿರುವ ಅಸಮಾನತೆ ಹೋಗಲಾಡಿಸಲು ಒಂದೇ ಮದ್ದು. ಗ್ಲೋಬಲ್ ಲಾಬಿಯಿಸ್ಟ್ ಗಳು ಹಾಕುವ ಯಾವುದೇ ತಂತ್ರಕ್ಕೂ ನಾವು ಬಲಿಯಾಗದೆ ಇರುವುದು. ಅವರ ಸಾಮ್ರಾಜ್ಯ ನಿಂತಿರುವುದು ನಮ್ಮ ಮೇಲೆ. ನೀವು ಗಮನಿಸಿ ನೋಡಿ ಅವರ ಬಳಿ ಜಗತ್ತಿನ ಅತಿ ದೊಡ್ಡ ಉತ್ಪಾದನಾ ಘಟಕಗಳಿವೆ, ಅಲ್ಲಿ ಅವರು ನಿಮ್ಮ ಬದುಕಿಗೆ ಬೇಕಾದ ವಸ್ತುಗಳಿಗಿಂತ ಬೇಡವಾದ ವಸ್ತುಗಳನ್ನ ಉತ್ಪಾದಿಸುತ್ತಾರೆ. ಅದನ್ನ ನಿಮಗೆ ಮಾರಲು ಮಾರ್ಕೆಟಿಂಗ್ ತಂತ್ರವನ್ನ ಅನುಸರಿಸುತ್ತಾರೆ. ನಿಮ್ಮ ಬಳಿ ಹಣವಿಲ್ಲದಿದ್ದರೆ ನಿಮಗೆ ಸಾಲ ನೀಡುತ್ತಾರೆ. ಸಾಲ ನೀಡಿದ ಹಣದಲ್ಲಿ ನಿಮ್ಮಿಂದ ಖರ್ಚು ಮಾಡಿಸಿ ಅದೇ ಹಣವನ್ನ ಮತ್ತೆ ತಮ್ಮ ಬಳಿಗೆ ತರಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿಲ್ಲದೇ ನೀವು, ನಿಮಗೆ ಬೇಡವಾದ ವಸ್ತುವನ್ನ ಕೊಂಡು ಸಾಲಗಾರರಾಗುತ್ತೀರಿ. ಅದಕ್ಕೆ ಕಂತು ಕಟ್ಟುತ್ತೀರಿ, ಕಂತು ಕಟ್ಟಲು ವೇತನಕ್ಕೆ ಮತ್ತೆ ಅವರ ಬಳಿ ದುಡಿಯುತ್ತೀರಿ. ನಿಮ್ಮ ಸಮಯ ಎನ್ನುವುದನ್ನ ಅವರಿಗೆ ಒತ್ತೆ ಇಡುತ್ತೀರಿ. ಇಷ್ಟೆಲ್ಲಾ ಮಾಡಿ ಸುಸ್ತಾಗಿ ಬಂಡವಾಳಶಾಹಿಗಳು ಕಟ್ಟಿದ ರೆಸಾರ್ಟ್ ನಲ್ಲಿ ವಿಶ್ರಮಿಸುತ್ತಿರಿ. ಎಲ್ಲವನ್ನೂ ಮಾಡುತ್ತೀರಿ ಆದರೆ ನಿಮಗೆ ಬೇಕಾದ ಬದುಕನ್ನ ನೀವು ಬದುಕಿದಿರಾ? ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಗುವುದಿಲ್ಲ. ಏಕೆಂದರೆ ಇಂಟರ್ನೆಟ್, ಬದುಕು, ಯಶಸ್ಸು, ಹಣ ಇವುಗಳ ಹಿಂದಿನ ಓಟದಲ್ಲಿ ನಮ್ಮೊಂದಿಗೆ ನಾವು ಸಂವಹನ ನಡೆಸುವುದು ಬಿಟ್ಟು ದಶಕಗಳು ಮಾತ್ರ ಸದ್ದಿಲ್ಲದೇ ಕರಗಿ ಹೋಗಿದೆ. ಹೆಚ್ಚು ಹಣದ ಅವಶ್ಯಕತೆಯಿಲ್ಲದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ನಾವು ಅದರ ಬಗ್ಗೆ ಚಿಂತಿಸಬೇಕಿದೆ. ಕಾರ್ಯತತ್ಪರರಾಗಬೇಕಿದೆ.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp