ಬಡತನ-ಸಿರಿತನಕ್ಕೆ ಕಾರಣವೇನು?

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 25th February 2021 12:00 AM  |   Last Updated: 25th March 2021 01:28 PM   |  A+A-


Hanaclasu

ಬಡತನ-ಸಿರಿತನಕ್ಕೆ ಕಾರಣವೇನು?

Online Desk

ಇವತ್ತು ಈ ಬರಹದ ಪ್ರಾರಂಭದಲ್ಲೇ ನಿಮ್ಮನ್ನ ಒಂದು ಪ್ರಶ್ನೆ ಕೇಳುತ್ತೇನೆ. ನಿಧಾನವಾಗಿ ಯೋಚಿಸಿ ಉತ್ತರವನ್ನ ಮನಸ್ಸಿನಲ್ಲಿಟ್ಟುಕೊಳ್ಳಿ. ಲೇಖನದ ಕೊನೆಯಲ್ಲಿ ನಿಮ್ಮ ಉತ್ತರಕ್ಕೂ ಮತ್ತು ಲೇಖನದಲ್ಲಿ ಬರೆದಿರುವ ಅಂಶಗಳಿಗೂ ತಾಳೆಯಾಗುತ್ತದೆಯೇ ಎಂದು ನೋಡಿ. ಇಲ್ಲವೆಂದರೆ, ಬೇಕೆನಿಸಿದರೆ ಬದಲಾವಣೆ  ಮಾಡಿಕೊಳ್ಳಬಹುದು. ಅಥವಾ ನಿಮ್ಮಿಚ್ಛೆಯಂತೆ ನಡೆಯಲು ನೀವು ಸ್ವತಂತ್ರರು. ಬಡತನ ಅಥವಾ ಸಿರಿತನಕ್ಕೆ ಕಾರಣವೇನು? ಎನ್ನುವುದು ಆ ಪ್ರಶ್ನೆ.

ಕಾರು ಕೊಳ್ಳಲು ನೀವು ತೆಗೆದುಕೊಳ್ಳುವ ನಿರ್ಧಾರ, ಅಥವಾ ಮನೆ ಕಟ್ಟಲು ಬಯಸಿದ್ದು... ಹೀಗೆ ಯಾವುದೇ ನಿರ್ಧಾರವಿರಲಿ ತಕ್ಷಣ ಆಯ್ತಾ? ಅದು ಮೊದಲು ನಿಮ್ಮ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ. ನಂತರ ಅದು ಕಾರ್ಯರೂಪಕ್ಕೆ ಬರುತ್ತದೆ. ಹೀಗೆ ಕಾರ್ಯರೂಪಕ್ಕೆ ಬರಲು ಒಂದಷ್ಟು ಸಮಯ ಹಿಡಿಯುತ್ತದೆ. ಹಾಗೆಯೇ ಬಡತನ-ಸಿರಿತನ ಕೂಡ ನಮ್ಮ ಮನಸ್ಸಿನಲ್ಲಿ ಮೊದಲಿಗೆ ರೂಪಗೊಳ್ಳುತ್ತದೆ. ನಾವೇನಾಗಬೇಕು ಎನ್ನುವ ಪರಿಕಲ್ಪನೆ ಅದನ್ನ ಸಾಕಾರರೂಪಕ್ಕೆ ತರುತ್ತಾ ಹೋಗುತ್ತದೆ. 

ನೀವು ನಮ್ಮ ಸುತ್ತಲಿನ ಜಗತ್ತನ್ನ ಗಮನಿಸುತ್ತಾ ಹೋಗಿ, ಕಡು ಬಡತನದಲ್ಲಿದ್ದ ಬಹಳಷ್ಟು ಜನ ಇಂದು ಯಶಸ್ವಿ ಉದ್ಯಮಿಗಳಾಗಿದ್ದಾರೆ, ಹಣವಂತರಾಗಿದ್ದಾರೆ. ಇದು ಸಾಧ್ಯವಾದದ್ದು ಅವರ ಬಗ್ಗೆ ಅವರಿಗಿದ್ದ ನಂಬಿಕೆ ಮತ್ತು ಮಾಡಬೇಕಾದ ಕೆಲಸದ ಬಗ್ಗೆ ಇದ್ದ ಪರಿಕಲ್ಪನೆಯಿಂದ, ಜೊತೆಗೆ ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದು ಕೂಡ ಗಣನೆಗೆ ತೆಗೆದುಕೊಳ್ಳಬೇಕು.

ಇವತ್ತಿನ ಬರಹದಲ್ಲಿ ಬಡತನದ ಮನಸ್ಥಿತಿ ಮತ್ತು ಸಿರಿತನದ ಮನಸ್ಥಿತಿಗಳ ನಡುವಿನ ವ್ಯತ್ಯಾಸವನ್ನ ಗಮನಿಸೋಣ. ನಮ್ಮ ಮನಸ್ಥಿತಿ ಎಂತಹುದು ಎನ್ನುವುದನ್ನ ಅವಲೋಕಿಸಿಕೊಂಡು, ಬೇಕಿದ್ದರೆ ಬದಲಾವಣೆಯ ಬಗ್ಗೆ ಕೂಡ ಗಮನವನ್ನ ಹರಿಸಬಹುದು.

  1. ಸಾಮಾನ್ಯ ಅಥವಾ ಮಧ್ಯಮ ವರ್ಗದ ಜನ ಖರ್ಚು ಮಾಡುತ್ತಾರೆ. ಅವರು ಉಳಿಕೆಯ ಬಗ್ಗೆಯೂ ಒಂದಷ್ಟು ಗಮನ ನೀಡುತ್ತಾರೆ. ಆದರೆ ಹೂಡಿಕೆಯ ಬಗ್ಗೆ ಅವರ ಗಮನ ಇರುವುದಿಲ್ಲ. ಸಿರಿವಂತರು ಹೂಡಿಕೆಯ ಬಗ್ಗೆ ಗಮನ ನೀಡುತ್ತಾರೆ. ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭದಾಯಕ ಎನ್ನುವುದನ್ನ ಅವರು ಸದಾ ಚಿಂತಿಸುತ್ತಿರುತ್ತಾರೆ.
  2. ಮಧ್ಯಮ ವರ್ಗದ ಮನಸ್ಥಿತಿ; ಬಂದ ಆದಾಯದಲ್ಲಿ ಖರ್ಚುಮಾಡಿ ಉಳಿದ ಹಣವನ್ನ ಉಳಿಕೆ ಎಂದು ಭಾವಿಸುತ್ತಾರೆ. ಇವರ ಖರ್ಚು 85/90 ಇದ್ದರೆ, ಉಳಿತಾಯ 15/10 ಪ್ರತಿಶತ ಮಾತ್ರ. ಜೊತೆಗೆ ಖರ್ಚು ಹೆಚ್ಚಿಸುವ ಕಾರನ್ನ ಇವರು ಖುಷಿಯಾಗಿ ಖರೀದಿಸುತ್ತಾರೆ. ಸಿರಿವಂತರು ಮೊದಲು ಇಷ್ಟು ಉಳಿಸಬೇಕು ಎನ್ನುಯೋಚನೆಯನ್ನ  ಮಾಡಿರುತ್ತಾರೆ. ಅಲ್ಲದೆ ಅವರು ಮನಸ್ಸಿಗೆ ಬಂದ ತಕ್ಷಣ ಕಾರನ್ನ ಕೊಳ್ಳುವುದಿಲ್ಲ. ಕಾರು ಖರ್ಚನ್ನ ಹೆಚ್ಚಿಸುತ್ತದೆ ಹೀಗಾಗಿ ಇದು ಲಯಬಿಲಿಟಿ ಎನ್ನುವುದು ಸಿರಿವಂತರ ನಿಲುವು. ಬಡ ಅಥವಾ ಮಾಧ್ಯಮವರ್ಗದ ಜನ ಕಾರನ್ನ ಆಸ್ತಿಯೆಂದು ಪರಿಗಣಿಸುತ್ತಾರೆ.
  3. ಮಧ್ಯಮ ವರ್ಗದವರು ಸ್ವಲ್ಪ ಹೆಚ್ಚು ಹಣ ಬಂದರೆ ಐಷಾರಾಮಿ ಕಾರನ್ನ ಸಾಲ ಮಾಡಿ ಕೊಳ್ಳುತ್ತಾರೆ. ಸಿರಿವಂತರು ಕಾರನ್ನ ಕೊಳ್ಳುವ ಬದಲು ಕಾರಿನ ಕಂಪನಿಯ ಷೇರನ್ನು ಕೊಳ್ಳುತ್ತಾರೆ. ಕಾರು ದೀರ್ಘಾವಧಿಯಲ್ಲಿ ಮೌಲ್ಯದಲ್ಲಿ ಕುಸಿತ ಕಾಣುತ್ತದೆ. ಷೇರು ಹೆಚ್ಚಳ ಕಾಣುತ್ತದೆ. ಉದಾಹರಣೆ ನೋಡಿ ಟಾಟಾ ಮೋಟರ್ಸ್ ನ ಷೇರಿನ ಬೆಲೆ, ಮೇ 2020ರಲ್ಲಿ 81 ರೂಪಾಯಿ ಫೆಬ್ರವರಿ 24, 2021 ರಲ್ಲಿ ಇದರ ಬೆಲೆ 318 ರೂಪಾಯಿಯಿದೆ. ಇದರರ್ಥ ನೀವು ಹತ್ತು ಲಕ್ಷ ವ್ಯಯಿಸಿ ಕಾರನ್ನ ಕೊಂಡಿದ್ದು ಇಂದು ಮಾರಲು ಹೋಗಿದ್ದರೆ ಅದಕ್ಕೆ ಏಳು ಅಥವಾ ಎಂಟು ಲಕ್ಷ ಮಾತ್ರ ಸಿಗುತ್ತಿತ್ತು. ಇದರ ಬದಲಿಗೆ ಕಾರನ್ನ ಮಾರುವ ಸಂಸ್ಥೆಯ ಷೇರನ್ನ ಕೊಂಡು ಇಂದು ಮಾರಿದ್ದರೆ 40 ಲಕ್ಷ ರೂಪಾಯಿ ಸಿಗುತ್ತಿತ್ತು. ಒಂದು ಸಣ್ಣ ಮನಸ್ಥಿತಿಯಲ್ಲಿನ ವ್ಯತ್ಯಾಸ ಗಮನಿಸಿ. ಅದು ನಿಮ್ಮನ್ನ ಬಡವ ಅಥವಾ ಸಿರಿವಂತ ಎನ್ನುವ ಹಣೆಪಟ್ಟಿಗೆ ದೂಡುವುದರಲ್ಲಿ ಅದೆಷ್ಟು ದೊಡ್ಡ ಪಾತ್ರವನ್ನ ವಹಿಸುತ್ತದೆ ಎನ್ನುವ ಅರಿವು ನಿಮ್ಮದಾಗುತ್ತದೆ.
  4. ಮಧ್ಯಮ ವರ್ಗ ಅಥವಾ ಬಡ ವರ್ಗದ ಜನ ಸಮಾಜವನ್ನ, ಪರಿಸ್ಥಿತಿಯನ್ನ ದೊಷಿಸುತ್ತ ಸಮಯ ಕಳೆಯುತ್ತಾರೆ. ಆತ್ಮಾವಲೋಕನ ಮಾಡಿಕೊಳ್ಳುವುದು ಕಡಿಮೆ. ಅಲ್ಲದೆ ಈ ವರ್ಗದ ಜನಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಸಮಯದ ಅಭಾವ ಕೂಡ ಇರುತ್ತದೆ. ತಾವೇ ಖುಷಿಯಿಂದ ಕಟ್ಟಿಕೊಂಡಿರುವ ಸಾಲದ ಬದುಕಿನಲ್ಲಿ ಅವರು ವ್ಯಸ್ತರಾಗಿರುತ್ತಾರೆ. ಯಾರು ತಮ್ಮ ತಪ್ಪನ್ನ ಗ್ರಹಿಸಿಕೊಂಡು ಅದರಿಂದ ಕಲಿಯುತ್ತಾರೆ ಅವರು ಸಿರಿವಂತರಾಗುತ್ತಾರೆ. ಸಿರಿವಂತರು ತಮ್ಮ ತಪ್ಪನ್ನ ಬಹುಬೇಗ ತಿದ್ದಿಕೊಳ್ಳುತ್ತಾರೆ.
  5. ಬಡ ಅಥವಾ ಮಧ್ಯಮ ವರ್ಗದ ಜನ ವಿದ್ಯಾರ್ಥಿ ವೇಳೆಯನ್ನ ಕಳೆದ ನಂತರ ಕಲಿಕೆಯನ್ನ ನಿಲ್ಲಿಸುತ್ತಾರೆ. ಗಮನಿಸಿ ನೋಡಿ ಹತ್ತಾರು ವರ್ಷಗಳ ಹಿಂದೆ ಕಲಿತ ಯಾವುದೋ ಒಂದಷ್ಟು ವಿಷಯ ಜೀವನ  ಪೂರ್ತಿ ನಿಮಗೆ ಹೇಗೆ ಅನ್ನ ಹಾಕಲು ಸಾಧ್ಯ? ಶ್ರೀಮಂತರನ್ನ ಗಮನಿಸಿ ಅವರಿಗೆ ಯಾವುದಾದರೂ ಒಂದು ವಿಷಯದ ಬಗ್ಗೆ ಅತೀವ ಆಸಕ್ತಿ ಇರುತ್ತದೆ. ಮತ್ತು ಅದರ ಬಗ್ಗೆ ಅವರ ಕಲಿಕೆ ನಿರಂತರವಾಗಿರುತ್ತದೆ. ಶ್ರೀಮಂತನಾಗಲು ಬಯಸುವನು ಸದಾ ಕಲಿಯುತ್ತಿರಬೇಕು.
  6. ಬಡ ಅಥವಾ ಮಧ್ಯಮವರ್ಗದ ಜನ ಬದಲಾವಣೆಗೆ ಬಹಳ ಅಂಜುತ್ತಾರೆ. ಸಿರಿವಂತರು ಬದಲಾವಣೆಗೆ ಹೊಸ ಸವಾಲಿಗೆ ಸದಾ ಸಿದ್ಧರಿರುತ್ತಾರೆ.
  7. ಬಡ ಅಥವಾ ಮಧ್ಯಮವರ್ಗದ ಜನ ಅಲ್ಪ ಸ್ವಲ್ಪ ಯಶಸ್ಸು ಸಿಕ್ಕ ನಂತರ ಅದನ್ನ ಆಸ್ವಾದಿಸಲು ಶುರು ಮಾಡುತ್ತಾರೆ. ಸಿರಿವಂತ ಆಸ್ವಾದನೆಯ ನಡುವೆಯೂ ಕೆಲಸ ಮಾಡುವುದನ್ನ ನಿಲ್ಲಿಸುವುದಿಲ್ಲ.
  8. ಬಡ ಅಥವಾ ಮಧ್ಯಮವರ್ಗದ ಜನ ಶನಿವಾರ, ಭಾನುವಾರ ರಜೆಯನ್ನ ಬಯಸುತ್ತಾರೆ. ಸಿರಿವಂತ ಬೇಕಾದಾಗ ರಜೆಯನ್ನ ತೆಗೆದುಕೊಳ್ಳುತ್ತಾನೆ. ಆತನಿಗೆ ಶನಿವಾರ ಅಥವಾ ಭಾನುವಾರ ಬೇಕು ಅಂತೇನಿಲ್ಲ. ಸೆಲ್ಫ್ ಮೇಡ್ ಮಿಲಿಯನೇರ್ ಗಳು ಗಡಿಯಾರದ ಮುಖ ನೋಡದೆ ದುಡಿಯುತ್ತಾರೆ. ಇವತ್ತು ಸ್ವ ಪ್ರಯತ್ನದಿಂದ ಶ್ರೀಮಂತರಾದ ಬಹಳಷ್ಟು ಜನರನ್ನ ನೋಡಿ.., ಅವರಿಗೆ ಕೆಲಸದ ಮೇಲೆ ನಿಗಾ ಇರುತ್ತದೆಯೇ ಹೊರತು ಸಮಯದ ಮೇಲಲ್ಲ. ಇದಕ್ಕೆ ಪೂರಕವಾಗಿ ಒಂದು ಸಣ್ಣ ಉದಾಹರಣೆಯನ್ನ ನೋಡೋಣ. ನಮಗೆಲ್ಲಾ ಇಲಾನ್ ಮಸ್ಕ್ ಗೊತ್ತು ಅಲ್ಲವೇ? ಹಾಗೆಯೇ ಸಂಸ್ಥೆಗಳನ್ನ ಮತ್ತು ಸಂಸ್ಥೆಯ ಅಧಿಕಾರಿ ವರ್ಗ, ಮಾಲೀಕರ ಬಗ್ಗೆ ರೇಟಿಂಗ್ ನೀಡುವ ಗ್ಲಾಸ್ದೂರ್ ಎನ್ನುವ ಒಂದು ವೆಬ್ ಸೈಟ್ ಕೂಡ ಇದೆ. ಅದರಲ್ಲಿ 69 ಪ್ರತಿಶತ ಕೆಲಸಗಾರರು ಮಾತ್ರ ಇಲಾನ್ ಮಸ್ಕ್ ನ ಜೊತೆಗೆ ಕೆಲಸ ಮಾಡಲು ಸಾಧ್ಯ ಎನ್ನುತ್ತಾರೆ. ಉಳಿದವರ ಕಥೆಯೇನು? ಇಲಾನ್ ಮಸ್ಕ್ ಗಡಿಯಾರದ ಮುಖ ನೋಡುವುದಿಲ್ಲ. ಇದು ಕೆಲಸಗಾರರಿಗೆ ಅವನೊಂದಿಗೆ ಕೆಲಸ ಮಾಡಲು ಆಗದ ಸ್ಥಿತಿಯನ್ನ ತಂದಿದೆ. ವಾರದಲ್ಲಿ 40 ಗಂಟೆ ದುಡಿದು ಜಗತ್ತಿನಲ್ಲಿ ಯಾರೂ ಬದಲಾವಣೆಯನ್ನ ಅಥವಾ ಅಚ್ಚರಿ ಎನ್ನುವಂತಹ ಯಾವುದೇ ವಸ್ತುವನ್ನ ಜಗತ್ತಿಗೆ ನೀಡಲಾಗಿಲ್ಲ ಎನ್ನುವುದು ಈತನ ಉವಾಚ.  
  9. ಬಡ ಅಥವಾ ಮಧ್ಯಮವರ್ಗದ ಜನ ತಾವು ದುಡಿದ ಹೆಚ್ಚಿನ ಹಣವನ್ನ ಮೋಜಿಗೆ ಸುರಿಯುತ್ತಾರೆ. ಸಿರಿವಂತರು ತಮ್ಮ ಕನಸಿನ ಪ್ರಾಜೆಕ್ಟ್ ಗಳಿಗೆ ಹಣವನ್ನ ಸುರಿಯುತ್ತಾರೆ.
  10. ಬಡವರು ಅಥವಾ ಮಧ್ಯಮವರ್ಗದ ಜನ ರಿಸ್ಕ್ ತೆಗೆದುಕೊಳ್ಳಲು ಹೆದರುತ್ತಾರೆ. ಸಿರಿವಂತರು ಹೆದರುವುದಿಲ್ಲ, ತಾವು ನಂಬಿದ ವಿಷಯದ ಮೇಲೆ ಅವರು ಹಣವನ್ನ ಸುರಿಯುತ್ತಾ ಹೋಗುತ್ತಾರೆ.

ಕೊನೆ ಮಾತು: ಮುಕೇಶ್ ಮತ್ತು ಅನಿಲ್ ಅಂಬಾನಿಯವರ ಉದಾಹರಣೆಯನ್ನ ನೋಡೋಣ. ಮುಖೇಶ್ ಶಿಸ್ತು ಬದ್ಧವಾಗಿ ಸಾಗುತ್ತ ಹೋದರು. ಅನಿಲ್ ಬಳಿ ಅಂದಿಗೆ ಟೆಲಿಕಾಂ ಇತ್ತು, ಪೆಟ್ರೋಲಿಯಂ ಇತ್ತು, ಜಗತ್ತನ್ನ ಬದಲಿಸಬಲ್ಲ ಎರಡು ಕ್ಷೇತ್ರಗಳನ್ನ ಇಟ್ಟು ಕೊಂಡು ಕೂಡ ಅವರು ಸೋತರು, ತಪ್ಪುಗಳಿಂದ ಕಲಿಯಲಿಲ್ಲ. ಮುಂದಿನ ವರ್ಷಗಳಲ್ಲಿ ಸಂಸ್ಥೆ ಹೇಗಿರಬೇಕು ಎನ್ನುವ ಕನಸು ನಾಯಕನಾದವನಿಗೆ ಇರಬೇಕು. ಅದಿಲ್ಲದಿದ್ದರೆ ಸೋಲು ಶತಸಿದ್ಧ .

ವಿಶ್ವವಿಖ್ಯಾತ ವಿಜ್ಞಾನಿಯಾಗಿದ್ದ ಐನ್ಸ್ಟೀನ್ 'ಇಮ್ಯಾಜಿನೇಷನ್ ಇಸ್ ಮೊರೆ ಪವರ್ಫುಲ್ ದಾನ್ ನಾಲೆಡ್ಜ್' ಎಂದಿದ್ದಾರೆ. ಅಂದರೆ ನಮ್ಮ ಬಗ್ಗೆ ನಾವು ಇಟ್ಟುಕೊಳ್ಳುವ ಪರಿಕಲ್ಪನೆ ನಮ್ಮ ಬುದ್ಧಿಗಿಂತ, ಜ್ಞಾನಕ್ಕಿಂತ ಹೆಚ್ಚು ಮೌಲ್ಯವುಳ್ಳದ್ದು ಎಂದು ಹೇಳಿದ್ದಾರೆ. ಹೀಗಾಗಿ ಬಡತನ ಮತ್ತು ಸಿರಿತನ ಎನ್ನುವುದು ನಮ್ಮ ಚಿಂತನೆಯ ಮೇಲೆ ನಿಂತಿದೆ.  ಯಾರ ಚಿಂತನೆ ಬಡವಾಗಿದೆ ಅವರು ಆರ್ಥಿಕವಾಗಿ ಬಡವರಾಗಿ ಉಳಿಯುತ್ತಾರೆ. ನಮ್ಮ ಚಿಂತನೆ ನಮ್ಮನ್ನ ಸಿರಿವಂತಿಕೆಯ ಕಡೆಗೆ ಒಯ್ಯವುತ್ತದೆ. ಈ ಮಾತುಗಳನ್ನ ಪುಷ್ಟೀಕರಿಸಲು ನಮ್ಮ ಸಮಾಜದಲ್ಲಿ  ಇರುವ ಸಾವಿರಾರು ಜನರನ್ನ ಕಾಣಬಹುದುದಾಗಿದೆ.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp