ನಿಖರತೆಯೇ ಯಶಸ್ಸಿಗೆ ರಹದಾರಿ! ಚೀನಾದಲ್ಲಿ ಇದ್ಯಾವುದೂ ಲೆಕ್ಕಕಿಲ್ಲ ಕಣ್ರೀ!!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 07th January 2021 02:16 AM  |   Last Updated: 07th January 2021 01:57 PM   |  A+A-


otara gunewardene-jack ma

ಓಟಾರ ಗುಣೆವರ್ದೇನೆ-ಜಾಕ್ ಮಾ

Posted By : Srinivas Rao BV
Source : Online Desk

ಓಟಾರ ಗುಣೆವರ್ದೇನೆ ಶ್ರೀಲಂಕಾ ಮೂಲದ ಮಹಿಳಾ ಉದ್ಯಮಿ. ತನ್ನ ಸಂಸ್ಥೆಯನ್ನ ಪಬ್ಲಿಕ್ ಇಶ್ಯೂಗೆ ತೆರೆದಿಟ್ಟ ಪ್ರಥಮ ಶ್ರೀಲಂಕನ್ ಮಹಿಳೆ ಎನ್ನುವ ಹೆಗ್ಗಳಿಕೆ ಇವರದು.

30 ಆಗಸ್ಟ್ 1964 ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಜನಿಸಿದ ಇವರು ಅಮೆರಿಕಾದ ಓಹಿಯೋ ದಲ್ಲಿ ವೆಟರ್ನರಿ ಸೈನ್ಸ್ ನಲ್ಲಿ ಪದವಿಯನ್ನ ಪಡೆಯುತ್ತಾರೆ. ಇವರಿಗೆ ಪ್ರಾಣಿಗಳ ಸೇವೆಯನ್ನ ಮಾಡಿಕೊಂಡು ಜೀವನವನ್ನ ಕಳೆಯಬೇಕು ಎನ್ನುವ ಆಸೆ. ಆದರೆ ಬದುಕು ಇವರಿಗೆ ಬೇರೆಯ ದಾರಿಯನ್ನ ಆಯ್ದು ಕೊಂಡಿರುತ್ತದೆ. ಬಿಡುವಿನ ಸಮಯದಲ್ಲಿ ಅಮೇರಿಕಾದಲ್ಲಿ ಮಾಡೆಲ್ಲಿಂಗ್ ಮಾಡುತ್ತಾ, ಶ್ರೀಲಂಕಾಗೆ ಪ್ರವಾಸ ಮಾಡಿಕೊಂಡು ಸಮಯ ಕಳೆಯುತ್ತಾ ಇದ್ದವರಿಗೆ, ಅಮೆರಿಕಾದ ಫ್ಯಾಷನ್ ವರ್ಲ್ಡ್ ಅಪ್ಪಿಕೊಳ್ಳುತ್ತದೆ. ಪೂರ್ಣ ಪ್ರಮಾಣದ ಮಾಡೆಲ್ ಆಗಿ ಶ್ರೀಲಂಕಾ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಹೆಸರನ್ನ ಗಳಿಸುತ್ತಾರೆ. 1989ರಲ್ಲಿ ಶ್ರೀಲಂಕಾಗೆ ವಾಪಸ್ಸು ಹೋದಾಗ ಅಲ್ಲಿ ಗಾರ್ಮೆಂಟ್ ಉದ್ದಿಮೆಯಲ್ಲಿ ತೊಡಗಿಕೊಂಡಿರುವ ಗೆಳೆಯನ ಸಹಾಯದಿಂದ ತಮ್ಮ ಕಾರ್ ನಲ್ಲಿ ಬಟ್ಟೆಯನ್ನ ಮಾರುವ ಸಣ್ಣ ವ್ಯಾಪಾರವನ್ನ ಶುರು ಮಾಡುತ್ತಾರೆ. ಅದಕ್ಕೆ ಅವರು ಹೂಡಿದ್ದ ಬಂಡವಾಳ ಕೇವಲ ಐವತ್ತು ಡಾಲರ್! ಇವರ ಬಟ್ಟೆಗಳನ್ನ ಜನ ಇಷ್ಟ ಪಡುತ್ತಾರೆ, ಹತ್ತು ವರ್ಷದ ನಂತರ ಅಂದರೆ 1999ರಲ್ಲಿ ಪ್ರಥಮ ಮಳಿಗೆ 'ಓಡೆಲ್' ತೆರೆಯುತ್ತಾರೆ. ಇಂದಿಗೆ ಶ್ರೀಲಂಕಾದ ಉದ್ದಗಲಕ್ಕೂ 20ಕ್ಕೂ ಹೆಚ್ಚು ಮಳಿಗೆಗಳನ್ನ ಹೊಂದಿದ್ದಾರೆ. 2010ರಲ್ಲಿ ತಮ್ಮ ಸಂಸ್ಥೆಯನ್ನ ಐಪಿಒ ಮೂಲಕ ಇನ್ನೊಂದು ಉನ್ನತ ಮಟ್ಟಕ್ಕೆ ಒಯ್ದ ಪ್ರಥಮ ಶ್ರೀಲಂಕನ್ ಮಹಿಳೆ, ಶ್ರೀಲಂಕಾದ ರಿಚ್ ಲಿಸ್ಟ್ ನಲ್ಲಿ ಸ್ಥಾನ, ವಿಶ್ವದ ಬಲಿಷ್ಠ ಮಹಿಳೆಯರ ಸಾಲಿನಲ್ಲಿ ಜಾಗ, ಹೀಗೆ ಇವರ ಸಾಧನೆಯ ಪಟ್ಟಿ ದೊಡ್ಡದಿದೆ.

ಇವರ ಜೀವನದ ಪ್ರಥಮ ಉದ್ದೇಶ ಪ್ರಾಣಿಗಳ ಸೇವೆ ಮಾಡುವುದಾಗಿತ್ತು. 2005ರಲ್ಲಿ ಬೀದಿ ನಾಯಿಯನ್ನ ಕಂಡಾಗ ಇವರ ಜೀವನದ ಪಥ ಮತ್ತೊಮ್ಮೆ ಬದಲಾಗುತ್ತದೆ. ತಮ್ಮ ಸಂಸ್ಥೆಯ ಸಿಎಸ್ಆರ್ (CSR ) ಅಂದರೆ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಮೂಲಕ 'ಎಂಬಾರ್ಕ್' ಎನ್ನುವ ಬೀದಿ ನಾಯಿಗಳನ್ನ ರಕ್ಷಿಸುವ ಮತ್ತು ಸಲಹುವ ಸಂಸ್ಥೆಯನ್ನ  ತೆರೆಯುತ್ತಾರೆ. ಇಲ್ಲಿ ಇದರ ಜೊತೆಗೆ ಬಟ್ಟೆಗಳನ್ನ, ಆಟಿಗೆಗಳನ್ನ ಮಾರಲು ಶುರು ಮಾಡುತ್ತಾರೆ. ಇಲ್ಲಿ ಎಲ್ಲವೂ ನಾಯಿ ರಕ್ಷಣೆಯ ಥೀಮ್ ಹೊತ್ತ ಬಟ್ಟೆಗಳು, ಪ್ರಕೃತ್ತಿಯನ್ನ ಉಳಿಸುವ ಥಿಮ್ ಇರುವ ವಸ್ತುಗಳನ್ನ ಮಾರಾಟ ಮಾಡುತ್ತಿದ್ದಾರೆ. ಇದು ಕೂಡ ಅತ್ಯಂತ ಯಶಸ್ವಿಯಾಗಿದೆ.

ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಎಂದರೇನು?

ಒಂದು ಸಂಸ್ಥೆ ಬಹಳಷ್ಟು ಯಶಸ್ಸು ಪಡೆದರೆ ಅದಕ್ಕೆ ಸಮಾಜದ ಕೊಡುಗೆ ಬಹಳ ದೊಡ್ಡದು. ಹೀಗಾಗಿ ಇಂತಹ ಸಂಸ್ಥೆಗಳಿಗೆ ಕೂಡ ಸಮಾಜಕ್ಕೆ ಏನಾದರೂ ಹಿಂತಿರುಗಿಸುವ ಜವಾಬ್ದಾರಿ ಇರುತ್ತದೆ. ಇದು ಕಡ್ಡಾಯವಾಗಿ ಮಾಡಬೇಕಾದ ಕಾರ್ಯ. ಇದಕ್ಕೆ ಸಿಎಸ್ಆರ್ ಅಥವಾ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಎನ್ನುತ್ತೇವೆ. ಇದು ಯಾವ ರೂಪದಲ್ಲಿ ಬೇಕಾದರೂ ಇರಬಹುದು. ಉದಾಹರಣೆಗೆ ದೇವಸ್ಥಾನದ ಜೀರ್ಣೋದ್ಧಾರ, ಗ್ರಂಥಾಲಯ ಕಟ್ಟಿಸುವುದು, ಪ್ರಾಣಿ ಪಕ್ಷಿಗಳ ಒಳಿತಿಗಾಗಿ ಶ್ರಮಿಸುವುದು, ಗ್ಲೋಬಲ್ ವಾರ್ಮಿನ್ಗ್ ವಿರುದ್ಧ ಸೆಣಸುವುದು ಹೀಗೆ ಪಟ್ಟಿಯನ್ನ ಬೆಳಸಬಹುದು.

ಉದ್ದಿಮೆಗಳ ಯಶಸ್ಸಿಗೆ ಹಲವಾರು ಕಾರ್ಯತಂತ್ರಗಳಿವೆ ಅವುಗಳಲ್ಲಿ ಪ್ರಮುಖವಾಗಿ

  1. ನಿಖರತೆ ಇರಬೇಕು-ನಾವು ಮಾಡುವ ವ್ಯಾಪರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರಬೇಕು. ಅದರ ಲಾಭ ನಷ್ಟ, ಎಷ್ಟು ಸಮಯವನ್ನ ಬೇಡುತ್ತದೆ. ಮುಂದಿನ ವರ್ಷಗಳಲ್ಲಿ ವ್ಯಾಪಾರವನ್ನ ಹೇಗೆ ಮುಂದುವರಿಸಬೇಕು, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ಸಾಧಕ ಬಾಧಕಗಳ ಕುರಿತು ನಿಖರತೆ ಇರಬೇಕು. ಇವುಗಳಲ್ಲಿ ಯಾವುದೊಂದು ಕೂಡ ಲೆಕ್ಕಾಚಾರದಲ್ಲಿ ತಪ್ಪುವಂತಿಲ್ಲ. ಇಂದು ಜಗತ್ತು ಒಂದು ಪುಟ್ಟ ಹಳ್ಳಿ ಎನ್ನಿಸಿಕೊಂಡಿದೆ. ದೂರದ ಅಮೇರಿಕಾದಲ್ಲಿ, ಚೀನಾದಲ್ಲಿ ಅಥವಾ ಜಪಾನ್ ದೇಶಗಳಲ್ಲಿ ಆಗುವ ಬದಲಾವಣೆ ಜಯನಗರದಲ್ಲಿ ಅಂಗಡಿ ನಡೆಸುವನ ವ್ಯಾಪಾರದ ಮೇಲೆ ಆಗುತ್ತದೆ. ಸಾಲದಕ್ಕೆ ನಮ್ಮ ಮನೆ ಮುಂದಿನ ರೋಡ್ ನಲ್ಲಿ ಚಾಟ್ ಮಾಡುವ ವ್ಯಾಪಾರದ ಮೇಲೂ ಅದು ಪರಿಣಾಮ ಬೀರುತ್ತದೆ ಎಂದರೆ ಅಲ್ಲಿಗೆ ಗ್ಲೋಬಲೈಸಷನ್ ನ ನಿಜವಾದ ಅರ್ಥ ನಿಮಗೆ ಆಯ್ತು ಎಂದುಕೊಳ್ಳುವೆ. ಇಷ್ಟೊಂದು ಅನಿಶ್ಚಿತತೆ ಇಟ್ಟುಕೊಂಡು ನಿಖರತೆಯ ಹೇಗೆ ಪಡೆದುಕೊಳ್ಳುವುದು? ಎನ್ನುವ ಸಹಜ ಪ್ರಶ್ನೆ ಉದ್ಭವಿಸುವುದು ಸಹಜ. ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಬದಲಾವಣೆಗಳನ್ನ ಗಮನಿಸುತ್ತಾ ಇದ್ದರೆ ನಿಖರತೆ ಬರುತ್ತದೆ. ಅದರಲ್ಲಿ ಬದಲಾವಣೆಗಳೂ ಕೂಡ ಮಾಡಿಕೊಳ್ಳುತ್ತಿರಬೇಕು.  
  2. ನಾವು ಮಾಡುವ ವ್ಯಾಪಾರ ನಮ್ಮ ಗುಣಕ್ಕೆ ಒಗ್ಗಬೇಕು- ಹತ್ತಾರು ಜನರು ಮಾಡುತ್ತಿದ್ದಾರೆ ಒಳ್ಳೆಯ ಲಾಭ ಬರುತ್ತದೆ ಎಂದು ಮಾಡಬಾರದು. ನಮ್ಮಲಿ ಮುಕ್ಕಾಲು ಮೂರು ಪಾಲು ಜನ, ತಮ್ಮ ಪರಿಚಯಸ್ಥರು ಯಾವುದೋ ವ್ಯಾಪಾರ ಮಾಡಿದರು ಅದರಿಂದ ಅವರು ಲಾಭ ಗಳಿಸಿದರು ಎನ್ನುವ ಆಧಾರದ ಮೇಲೆ ವ್ಯಾಪಾರ ಮಾಡಬೇಕು ಎನ್ನುವ ಹಂಬಲ ಅಥವಾ ಜಿದ್ದಿಗೆ ಬಿದ್ದು ವ್ಯಾಪಾರ ಮಾಡಲು ಶುರು ಮಾಡುತ್ತಾರೆ. ಇದು ತಪ್ಪು. ಮಾಡುವ ವ್ಯಾಪಾರ ನಮ್ಮ ಮನಸ್ಥಿತಿಗೆ ಅಥವಾ ಗುಣಕ್ಕೆ ಒಗ್ಗುವಂತಿರಬೇಕು. ಆಗ ಸಣ್ಣ ಪುಟ್ಟ ತೊಂದರೆಗಳು ಎದುರಾದರೂ ಜಗ್ಗದೆ ಮುಂದುವರೆಯುವ ಮನೋಬಲವಿರುತ್ತದೆ. ಇಲ್ಲದಿದ್ದರೆ ಸಣ್ಣ ಪುಟ್ಟ ಕಷ್ಟಕ್ಕೆ ಪಲಾಯನ ಸೂತ್ರವನ್ನ ಪಠಿಸುವುದನ್ನ ನೋಡಬಹುದು.
  3. ಸಂಸ್ಥೆಗೆ ಸಮಯ ನೀಡಬೇಕು-ತಿಂದ ಅನ್ನ ಅರಗಲು ನಾಲ್ಕು ತಾಸು ಬೇಕು ಅಲ್ಲವೇ? ವರ್ಷದಲ್ಲಿ ಮಗು ಎದ್ದು ಓಡಾಡಲು ಸಾಧ್ಯವೇ? ವ್ಯಾಪಾರ ಕೂಡ ಮಗುವಿಗೆ ಮಾಡುವ  ಆರೈಕೆ ಬೇಡುತ್ತದೆ. ಮೇಲಿನ ಕಥೆಯಲ್ಲಿನ ಉದಾಹರಣೆಯನ್ನ ನೋಡಿ, ಓಟಾರ ಗುಣೆವರ್ದೇನೆ ವ್ಯಾಪಾರ ಪ್ರಾಂಭಿಸಿದ್ದು 1989ರಲ್ಲಿ ಪ್ರಥಮ ಮಳಿಗೆ ತೆಗೆದಾಗ 1999, ಐಪಿಒ ಗೆ ತೆರೆದುಕೊಂಡದ್ದು 2010ರಲ್ಲಿ ! ಅಂದರೆ ಎರಡು ದಶಕಕ್ಕೂ ಹೆಚ್ಚಿನ ಸಮಯವನ್ನ ಅವರು ತಮ್ಮ ಉದ್ದಿಮೆಯ ಏಳಿಗೆಗಾಗಿ ವ್ಯಯಿಸಿದ್ದಾರೆ. ತಕ್ಷಣ ಆಗುವುದು ಒಂದು ಕೆಲಸ ಮಾತ್ರ, ಕೈಲಾಗುವುದಿಲ್ಲ ಎಂದು ಬಿಟ್ಟೋಡುವುದು. ಮಿಕ್ಕೆಲ್ಲಾ ಕೆಲಸಗಳು ಸಮಯವನ್ನ ಬೇಡುತ್ತವೆ.
  4. ವೈಯಕ್ತಿಕ ಮತ್ತು ಸಂಸ್ಥೆಯ ಹಣವನ್ನ ಬೆರಸಬಾರದು: ಉದ್ದಿಮೆಯ ಪ್ರಾರಂಭದಿಂದ ಇದನ್ನ ಪಾಲಿಸಬೇಕು. ಸಾಮನ್ಯವಾಗಿ ಹೊಸ ಉದ್ದಿಮೆ ಪ್ರಾರಂಭಿಸಿದವರಲ್ಲಿ ಹಣವನ್ನ ಹೀಗೆ ಬೆರೆಸುವ ಚಾಳಿ ಇರುತ್ತದೆ. ಹೊಸತರಲ್ಲಿ ಸಂಸ್ಥೆಯಿಂದ ಹಣವನ್ನ ತೆಗೆದುಕೊಳ್ಳುವುದಕ್ಕಿಂತ ಹಾಕುವುದು ಹೆಚ್ಚಾಗಿರುತ್ತದೆ. ಎಷ್ಟಾದರೂ ಸರಿಯೇ ಹಾಕಿದ ಹಣದ ಲೆಕ್ಕವನ್ನ ಬೇರ್ಪಡಿಸಿಡಬೇಕು. ಸಂಸ್ಥೆ ನಿಮ್ಮದೇ ಇದ್ದರೂ ಪ್ರಾರಂಭದಿಂದ ಹಣಕಾಸು ವಿಷಯದಲ್ಲಿ ಪ್ರತ್ಯೇಕವಾದ ಖಾತೆಯನ್ನ ಬಳಸುವುದು ಉತ್ತಮ.
  5. ಪ್ರಾಮಾಣಿಕತೆ ಇರಬೇಕು-ಎಲ್ಲರೂ ಮಾಡುವುದು ಕೂಡ ಲಾಭಕ್ಕೆ ಅಲ್ಲವೇ? 'ವ್ಯಾಪಾರಮ್ ದ್ರೋಹ ಚಿಂತನಮ್ ಎನ್ನುತ್ತಾರೆ. ಆದರೆ ಇದ್ದುದರಲ್ಲಿ ನೈತಿಕತೆ ಉಳಿಸಿಕೊಂಡರೆ  ಗೆಲುವು ಶತಸಿದ್ಧ. ಸರಿಯಾಗಿ ತೆರಿಗೆಯನ್ನ ಕಟ್ಟಿದರೆ ಬ್ಯಾಂಕುಗಳು ಸಾಲವನ್ನ ಸುಲಭವಾಗಿ ನೀಡುತ್ತವೆ. ಅಂಗಡಿಗೆ ಕಾಲಿಡುವ ಗ್ರಾಹಕನಿಗೆ ವ್ಯಾಪಾರಸ್ಥ ಪ್ರಾಮಾಣಿಕನೋ ಅಲ್ಲವೋ ಎನ್ನುವ ಗ್ರಹಿಕೆ ಬಹಳ ಬೇಗ ಉಂಟಾಗುತ್ತದೆ. ಇಂದಿನ ದಿನದಲ್ಲಿ ಪ್ರಾಮಾಣಿಕತೆ ಮಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಂದಷ್ಟು ಪ್ರಾಮಾಣಿಕವಾಗಿ ವರ್ತಿಸಿದರೆ ಅದು ಸಂಸ್ಥೆಯ ಏಳಿಗೆಗೆ ಸಹಕಾರಿಯಾಗುತ್ತದೆ.
  6. ಸಂಸ್ಥೆ ಬೆಳೆದಂತೆ ಸಮಾಜಕ್ಕೆ ಮರಳಿ ನೀಡಬೇಕು: ನಾವು ಸಂಸ್ಥೆಯನ್ನ ಬೆಳೆಸಿದ್ದೇವೆ, ಒಂದಷ್ಟು ಕೆಲಸವನ್ನ ಸೃಷ್ಟಿಸಿದ್ದೇವೆ, ತೆರಿಗೆಯನ್ನ ಕಟ್ಟಿದ್ದೇವೆ ಇನ್ನೇನು ಎನ್ನುವ ಮಾತು ಬಹಳಷ್ಟು ಜನರ ಮನದಲ್ಲಿ ಇಂತಹ ಪ್ರಶ್ನೆ ಮೂಡುವುದು ಸಹಜ. ಆದರೆ ಗಮನಿಸಿ ಒಂದು ಸಂಸ್ಥೆಯ ಯಶಸ್ಸಿಗೆ ಸಮಾಜದ ಜನರ ದೇಣಿಗೆ ಬಹಳವಿರುತ್ತದೆ. ಹೀಗಾಗಿ ಸಂಸ್ಥೆ ಉನ್ನತ ಮಟ್ಟಕ್ಕೆ ತಲುಪಿದಾಗ ಸಮಾಜಕ್ಕೆ ಮರಳಿ ಮಾಡುವ ಸೇವೆ ಕೂಡ ಸಂಸ್ಥೆಯ ಉನ್ನತಿಗೆ ಕಾರಣವಾಗುತ್ತದೆ.

ಪುಟಾಣಿ ಶ್ರೀಲಂಕಾ ದೇಶದಲ್ಲಿ ಆಂತರಿಕ ಕಲಹ ಇತ್ಯಾದಿಗಳ ನಡುವೆ ಮಹಿಳೆಯೊಬ್ಬರು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ ದೊಡ್ಡ, ಬಲಿಷ್ಠ ದೇಶ ಚೀನಾದ ಕಥೆ ಬೇರೆಯಿದೆ.

ಮೂರು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 27 ರಂದು 34 ಬಿಲಿಯನ್ ಅಮೆರಿಕನ್ ಡಾಲರ್ ಗಳನ್ನ ಐಪಿಒ ಮೂಲಕ ಎತ್ತಲು ಬೇಕಾದ ಎಲ್ಲವನ್ನೂ ಜಾಕ್ ಮಾ ಮಾಡಿದ್ದರು, ಈ ಮೂಲಕ ಜಗತ್ತಿನ ಗ್ರೇಟ್ ಟೆಕ್ನಾಲಜಿ ಕಂಪೆನಿಗಳ ಜನಕನಲ್ಲಿ ಒಬ್ಬ ಎಂದು ತನ್ನ ಹೆಸರನ್ನ ದಾಖಲಿಸಿಕೊಳ್ಳಲಿದ್ದಾರೆ! ಇದು ಜಗತ್ತಿನ 99 ಪ್ರತಿಶತ ಆನ್ಲೈನ್, ಪ್ರಿಂಟ್ ಎಲ್ಲಾ ಮೀಡಿಯಾಗಳ ಸಾರವಾಗಿತ್ತು.

ಜಾಕ್ ಮಾ ಏಕಾಏಕಿ ಕಾಣೆಯಾಗಿದ್ದಾರೆ, ಅವರ ಸಾಮಾಜಿಕ ಜಾಲತಾಣಗಳ ಖಾತೆಗಳು ಸ್ತಬ್ಧಗೊಂಡಿವೆ. ಇದು ಚೀನಾದ ಅಧ್ಯಕ್ಷನ ವಿರುದ್ಧ ಮಾತನಾಡಿದುದರ ಫಲಿತಾಂಶ. ಜಾಕ್ಮಾ ಈ ರೀತಿ ಚೀನಾದ ಪಾಲಿಸಿಗಳ ವಿರುದ್ಧ ಮಾತನಾಡಿದ್ದು ಇದೆ ಮೊದಲಲ್ಲ. ಹಾಗಾದರೆ ಜಾಕ್ಮಾ  ಎಲ್ಲಿ ಮಾಯವಾದರು? ಎಲ್ಲಾ ಪತ್ರಿಕೆಗಳಲ್ಲಿ ಜಾಕ್ ಮಾ 'ಚೀನಾದ ನೀತಿಗಳು ವ್ಯಾಪಾರವನ್ನ ಉಸಿರುಗಟ್ಟಿಸುತ್ತವೆ' ಎನ್ನುವ ಹೇಳಿಕೆ ಕೊಟ್ಟರು ಅದಕ್ಕೆ ಅವರನ್ನ ಚೀನಿ ಕಮ್ಯುನಿಸ್ಟ್ ಸರಕಾರ ಕಿಡ್ನಾಪ್ ಮಾಡಿದೆ ಎನ್ನುವ ರೀತಿಯಲ್ಲಿ ಬರೆದಿದ್ದಾರೆ.  ಆದರೆ ನಿಜವಾದ ಕಾರಣ ಬೇರೆಯಿದೆ, ಜಾಕ್ ಮಾ ಸ್ಟೇಟ್ ರನ್ ಬ್ಯಾಂಕ್ಗಳ ವಿರುದ್ಧ ಮಾತನಾಡಿದ್ದು ನೇರವಾಗಿ ಜಿನ್ಪಿಂಗ್ ವಿರುದ್ಧ ಮಾತನಾಡಿದಂತೆ, ಅವರು ಇದೊಂದು ಬಿಟ್ಟು ಬೇರೇನೂ ಬೇಕಾದರೂ ಮಾಡಬಹುದಿತ್ತು, ಆದರೆ ಜಾಕ್ಮಾ ಆ ಎಡವಟ್ಟು ಮಾಡಿಕೊಂಡು ಬಿಟ್ಟರು. ಗಮನಿಸಿ 71 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತಿನ ಒಡೆಯ, ಶೋಮ್ಯಾನ್ ಆಫ್ ಚೀನಾ, ಹೊಸ ಚೀನಾದ ಮುಖ, ಪೋಸ್ಟರ್ ಬಾಯ್ ಆಫ್ ಚೀನಾ ಎಂದೆಲ್ಲಾ ಬಿಂಬಿತವಾಗಿದ್ದ ಜಾಕ್ಮಾ ರಾತ್ರೋರಾತ್ರಿ ಮಾಯವಾಗುತ್ತಾರೆ. ಇವರನ್ನ ಮುಖೇಶ್ ಅಂಬಾನಿ ಆಫ್ ಚೀನಾ ಎನ್ನಬಹದು. ಅಷ್ಟು ಪ್ರಸಿದ್ಧ, ಹಣವಂತ ಮನುಷ್ಯನನ್ನ ಚೀನಾ ಸರಕಾರ ತನ್ನ ವಿರುದ್ದ ಮಾತನಾಡಿದ ಎನ್ನುವ ಒಂದು ಸಣ್ಣ ಕಾರಣಕ್ಕೆ 'ಗಾಯಬ್' ಮಾಡಿ ಬಿಡುತ್ತದೆ. ಚೀನಾದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಉಸಿರೆತ್ತಿದವರೆಲ್ಲಾ ಹೀಗೆ ಅಗೋಚರ ರೀತಿಯಲ್ಲಿ ಮಾಯವಾಗುತ್ತಾರೆ. ಜಾಕ್ಮಾ  ಹೊಸ ಸೇರ್ಪಡೆ.

ದೇಶದ ಅತಿ ಯಶಸ್ವಿ ಮತ್ತು ಹಣವಂತನ ಕಥೆ ಹೀಗಾದರೆ , ಇನ್ನು ಸಾಮಾನ್ಯರ ಕಥೆ ಹೇಗಿರಬಹದು? 2021ರಲ್ಲಿ ಚೀನಾ ಇನ್ನಷ್ಟು ರಾಕ್ಷಸಿ ರೂಪವನ್ನ ಖಂಡಿತ ತೋರಿಸಲಿದೆ. ಜಾಕ್ ಮಾ ಚೀನಾ ಕಮ್ಯುನಿಸ್ಟ್ ಪಕ್ಷದ ಸದಸ್ಯ. ಅಲ್ಲಿನ ಸರಕಾರದ ಬೆಂಬಲವಿಲ್ಲದೆ ಆತ ಆ ಮಟ್ಟಿಗೆ ಬೆಳೆಯಲು ಅಸಾಧ್ಯವಾಗಿತ್ತು ಎನ್ನುವುದನ್ನ ಒಪ್ಪುವ ಮಾತು. ಆದರೆ ಒಬ್ಬ ವ್ಯಕ್ತಿಯನ್ನ ಒಂದರ ವಿರುದ್ಧ ಮಾತನಾಡಿದ ಎನ್ನುವ ಕಾರಣಕ್ಕೆ ಕಣ್ಮರೆ ಮಾಡುವುದು ಚೀನಾದಂತಹ ದೇಶದಲ್ಲಿ ಮಾತ್ರ ಸಾಧ್ಯ. ಅಲ್ಲಿಗೆ ಯಾವ ಮಟ್ಟದ ಯಶಸ್ಸಿಗೂ ಬೆಲೆಯಿಲ್ಲ ಎಂದಾಯ್ತು. ಇದಕ್ಕಿಂತ ಪುಟಾಣಿ ಶ್ರೀಲಂಕಾ ಸಾವಿರ ಪಾಲು ಲೇಸು.

ಕೊನೆ ಮಾತು: 2021ರಲ್ಲಿ 2020ರ ವಾಸನೆ ಪೂರ್ಣವಾಗಿ ಕರಗಿ ಹೋಗುತ್ತದೆ ಎನ್ನುವಂತಿಲ್ಲ. ಹೊಸ ವೈರಸ್ ಅಥವಾ ಕೊರೋನ ಮುಂದುವರಿದ ಭಾಗವನ್ನ ಕಾಣದೇ ಹೋದರೂ ಕೂಡ ರಿಕವರಿ ಎನ್ನುವುದು ಸುಲಭ ಸಾಧ್ಯವಲ್ಲ. ನೆನಪಿರಲಿ ಕೊರೋನಾ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ದೊಡ್ಡ ನಿರ್ಧಾರ, ಹೂಡಿಕೆಗೆ ಮುಂಚೆ ಸ್ವಲ್ಪ ಕಾಯುವುದು ಒಳ್ಳೆಯದು. ಅಂದಹಾಗೆ ನೆನಪಿರಲಿ ಚೀನಾದಲ್ಲಿ ಘಟಿಸುವ ವಿಷಯಗಳು ಜಗತ್ತಿಗೆ ತಿಳಿಯಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲೂ ಒಂದಷ್ಟು ಕಾಯ್ದು ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Modi-Subramanian ಏwamy

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.


Result
ಹೌದು, ಅದು ನಿಜ.
ಇಲ್ಲ, ಇದು ಒಂದು ಉತ್ಪ್ರೇಕ್ಷೆ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp