ಇಲೊನ್ ಮುಸ್ಕ್ ನ ಟೆಸ್ಲಾ ಎಬ್ಬಿಸಿದ ಧೂಳಿನಲ್ಲಿ ಮಸುಕಾದ ಆತ್ಮನಿರ್ಭರತೆ!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 14th January 2021 12:00 AM  |   Last Updated: 13th January 2021 11:57 PM   |  A+A-


tesla entry to india

ಇಲೊನ್ ಮುಸ್ಕ್ ನ ಟೆಸ್ಲಾ ಎಬ್ಬಿಸಿದ ಧೂಳಿನಲ್ಲಿ ಮಸುಕಾದ ಆತ್ಮನಿರ್ಭರತೆ!

Online Desk

ಜನವರಿ 8, 2021 ರಂದು ಇಲೊನ್ ಮುಸ್ಕ್ ಅವರ ಬಹು ಜನಪ್ರಿಯ ಮತ್ತು ಅಮೆರಿಕಾ ದೇಶದ ದೈತ್ಯ, ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆ ಕೊನೆಗೂ ಭಾರತದಲ್ಲಿ ಅದೂ ಕರ್ನಾಟಕದ ಬೆಂಗಳೂರಿನ ಲೆವೆಲ್ಲಿ ರೋಡ್ನಲ್ಲಿ ತನ್ನ ಕಾರ್ಪೊರೇಟ್ ಸಂಸ್ಥೆಯನ್ನ ನೋಂದಾಯಿಸಿಕೊಂಡಿದೆ. 

ಹಲವಾರು ವರ್ಷದಿಂದ ಟೆಸ್ಲಾ ಭಾರತಕ್ಕೆ ಕಾಲಿಡಲಿದೆ ಎನ್ನುವ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. 2020ರಲ್ಲಿ ಕೊರೋನಘಾತವಾಗದಿದ್ದರೆ ಈ ಸಂಸ್ಥೆ 2020ರಲ್ಲಿ ಭಾರತಕ್ಕೆ ಬರುವ ಸಾಧ್ಯತೆ ಹೆಚ್ಚಾಗಿತ್ತು. ರಿಜಿಸ್ಟ್ರಾರ್ ಆಫ್ ಕಂಪೆನಿಸ್ ಅವರು ನೀಡುವ ಮಾಹಿತಿ ಪ್ರಕಾರ ಸಂಸ್ಥೆಯನ್ನ ಟೆಸ್ಲಾ ಇಂಡಿಯಾ ಮೋಟಾರ್ಸ್ & ಎನರ್ಜಿ ಪ್ರೈವೇಟ್ ಲಿಮಿಟೆಡ್' ಎನ್ನುವ ಹೆಸರಿನಲ್ಲಿ ನೊಂದಾಯಿಸಿಕೊಂಡಿದೆ. ಇದು ಮೂಲ ಸಂಸ್ಥೆಯ ಅಂಗಸಂಸ್ಥೆಯಾಗಿರಲಿದೆ. ಬೆಂಗಳೂರಿನಲ್ಲಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಘಟಕವನ್ನ ತೆರೆಯುವ ಉದ್ದೇಶವನ್ನ ಇವರು ಹೊಂದಿದ್ದಾರೆ.

15 ಲಕ್ಷ ಆಥರೈಸ್ಡ್ ಕ್ಯಾಪಿಟಲ್ ಮತ್ತು ಒಂದು ಲಕ್ಷ ರೂಪಾಯಿ ಪೈಡ್ ಅಪ್ ಕ್ಯಾಪಿಟಲ್ ನೊಂದಿಗೆ ನೊಂದಾಯಿತವಾಗಿರುವ ಈ ಸಂಸ್ಥೆಗೆ ವೈಭವ್ ತನೇಜಾ, ವೆಂಕರಂಗಮ್ ಶ್ರೀರಾಂ ಮತ್ತು ಡೇವಿಡ್ ಜಾನ್, ಈ ಮೂವರು ನಿರ್ದೇಶಕ ಸ್ಥಾನವನ್ನ ಅಲಂಕರಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಸಹಿತ ಬಹುತೇಕ ಗಣ್ಯರು ಈ ಸಂಸ್ಥೆ ಭಾರತಕ್ಕೆ ಅದರಲ್ಲೂ ಕರ್ನಾಟಕದ ಬೆಂಗಳೂರಿಗೆ ಬಂದಿರುವುದಕ್ಕೆ ಬಹಳ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಇಂತಹ ಸಮಯದಲ್ಲಿ ಖುಷಿ ಸಹಜ. ಆದರೆ ನಿಮಗೆಲ್ಲಾ ತಿಳಿದಿರಲಿ ಇವರು ಮೂಲತಃ ವ್ಯಾಪಾರಸ್ಥರು, ಬಂಡವಾಳಗಾರರು, ಹೂಡಿಕೆ ಸೂಜಿಯಾಗಿದ್ದರೆ ಅದರಿಂದ ಅವರು ದಬ್ಬಳವನ್ನ ಅಪೇಕ್ಷೆ ಮಾಡುತ್ತಾರೆ. ಇನ್ನೊಂದು ವಿಷಯ ಕೂಡ ನಮ್ಮೆಲ್ಲರ ಗಮನದಲ್ಲಿ ಇದ್ದರೆ ಅದು ಒಳ್ಳೆಯದು. ಇಲೊನ್ ಮುಸ್ಕ್ ನ ಕಾರ್ಯಕಾರಿ ಸಮಿತಿ ಭಾರತದ ಇತರ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಜೊತೆಗೆ ಕೂಡ ಮಾತುಕತೆಯಲ್ಲಿ ತೊಡಗಿದ್ದಾರೆ. ಭಾರತದಲ್ಲಿ ಯಾವ ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿತವಾಗುತ್ತದೆ ಅಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತವೆ. ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವುದು ರಿಸೆರ್ಚ್ ಘಟಕ. ಹೀಗಾಗಿ ಇಲ್ಲಿ ಕೆಳಮಟ್ಟದ ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಈ ಸುದ್ದಿ ಸೃಷ್ಟಿಸಿರುವ ಸಂಚಲನ ನೋಡಿ ಮನಸ್ಸಿಗೆ ಬಹಳ ಖೇದವಾಗುತ್ತಿದೆ. ಒಬ್ಬ ವ್ಯಾಪಾರಿ, ಹೂಡಿಕೆದಾರ ನಮ್ಮ ಜಾಗದಲ್ಲಿ ಬಂದಿದ್ದಾನೆ ಅಂದರೆ ಅದು ಖುಷಿಯ ಜೊತೆಗೆ ಒಂದಷ್ಟು ಜಾಗ್ರತೆಯನ್ನ ಕೂಡ ಬಯಸುತ್ತದೆ. ನಮ್ಮಲ್ಲಿ ಮಾತ್ರ ಟೆಸ್ಲಾ ಬಂದದ್ದು ನಮ್ಮ ಪೂರ್ವ ಜನ್ಮದ ಪುಣ್ಯ ಎನ್ನುವ ರೀತಿಯ ಉನ್ಮಾದದಲ್ಲಿ ತೇಲುತ್ತಿದ್ದಾರೆ. ಅಮೆರಿಕಾದ ನಂತರ ಸದ್ಯದ ಮಟ್ಟಿಗೆ ಭಾರತ ಇವರಿಗೆ ಅತಿ ದೊಡ್ಡ ಮಾರುಕಟ್ಟೆ.

ಇವರೇನು ನಮಗೆ ಅನ್ನ, ನೀರು ಅಥವಾ ಬದುಕು ನೀಡಲು ಬಂದಿಲ್ಲ! ಅವರು ಬಂದಿರುವುದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು. ನಮ್ಮಲ್ಲಿ ಒಂದಷ್ಟು ಉದ್ಯೋಗವೇನೋ  ಸೃಷ್ಟಿಯಾಗುತ್ತದೆ ಆದರೆ ನಾವೆಲ್ಲಾ ಒಂದಷ್ಟು ಪ್ರಮುಖ ಅಂಶವನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

  1. ಎಲ್ಲಕ್ಕೂ ಮೊದಲಿಗೆ ಈ ಎಲೆಕ್ಟ್ರಿಕ್ ಕಾರುಗಳು ನಡೆಯುವುದು ಲಿಥಿಯಂ ಎನ್ನುವ ಬ್ಯಾಟರಿ ಸಹಾಯದಿಂದ ಇವುಗಳ ಆಯಸ್ಸು 5-7ವರ್ಷ. ಆನಂತರ ಈ ಬ್ಯಾಟರಿಗಳನ್ನ ಏನು ಮಾಡುವುದು? ಜಗತ್ತು ಈಗಾಗಲೇ ಹಳೆಯ ಮೊಬೈಲ್, ಕಂಪ್ಯೂಟರ್ ಇತ್ಯಾದಿ ಇ-ವೇಸ್ಟ್ ಗಳನ್ನ ಏನು ಮಾಡುವುದು ಎಂದು ತಿಳಿಯದೆ ಕಂಗಾಲಾಗಿದೆ.
  2. ಈ ಬ್ಯಾಟರಿಗಳು ಲಿಥಿಯಂ ನಿಂದ ತಯಾರಾಗುತ್ತವೆ. ಕಾರು ಎಷ್ಟು ದೊಡ್ಡದು ಎನ್ನುವುದರ ಮೇಲೆ ಬ್ಯಾಟರಿಯ ಗಾತ್ರ ಕೂಡ ನಿರ್ಧರಿತವಾಗುತ್ತದೆ. ಬಹಳಷ್ಟು ಅಧ್ಯಯನಗಳ ಪ್ರಕಾರ ಇಂತಹ ಬ್ಯಾಟರಿಗಳ ತಯಾರಿಕೆಯಲ್ಲಿ ಸಾಮಾನ್ಯಕ್ಕಿಂತ ದುಪ್ಪಟ್ಟು ಕಾರ್ಬನ್ ಬಿಡುಗಡೆಯಾಗುತ್ತದೆ. ಹೌದು ಸಾಮಾನ್ಯ ಕಾರಿನಂತೆ ಇದು ಹೊಗೆಯನ್ನ ಉಗುಳುವುದಿಲ್ಲ ಆದರೆ ಖಂಡಿತ ಇದು ಪರಿಸರ ಸ್ನೇಹಿ ಅಲ್ಲ.
  3. ಸಾಮಾನ್ಯ ಕಾರುಗಳಿಗಿಂತ ಇದರ ಬೆಲೆ ಬಹಳ ಹೆಚ್ಚಾಗಿರುತ್ತದೆ. ಪರಿಸರ ಸ್ನೇಹಿ ಕಾರುಗಳು ಎನ್ನುವ ಬುರುಡೆಯನ್ನ ಆಗಲೇ ಜನರು ನಂಬಿದ್ದಾರೆ. ಹೀಗಾಗಿ ಹಳೆಯ ಕಾರಿನ ಬದಲಿಗೆ ಇಂತಹ ಕಾರುಗಳನ್ನ ಕೊಂಡರೆ ಒಂದಷ್ಟು ಡಿಸ್ಕೌಂಟ್ ಕೊಡುತ್ತೇವೆ ಎನ್ನುತ್ತಾರೆ. ಸರಕಾರ ಅನುದಾನ ನೀಡುತ್ತದೆ. ಸದ್ದಿಲ್ಲದೇ ಕೋಟ್ಯಂತರ ರೂಪಾಯಿ ತೆರಿಗೆದಾರನ ಹಣ ಕರಗಿಹೋಗುತ್ತದೆ.
  4. ಮುಂದಿನ ದಿನಗಳಲ್ಲಿ ಇಂತಹ ವೇಸ್ಟ್ ಗಳನ್ನ ತಂದು ಸುರಿಯುವ ಸ್ಥಾನವಾಗಿ ಭಾರತ ಬದಲಾಗುವ ಸಾಧ್ಯತೆಯನ್ನ ಕೂಡ ತಳ್ಳಿಹಾಕುವಂತಿಲ್ಲ. ಬೆಂಗಳೂರಿನ ಕಸವೆಲ್ಲಾ ಪಕ್ಕದಲ್ಲಿರುವ ಊರಿನಲ್ಲಿ ಸುರಿಯುತ್ತಾರೆ. ಆ ಊರಿನ ಜನರ ಕಥೆ ಕೇಳಲಾಗದು. ಅಂತೆಯೇ ಮುಂದೊಂದು ದಿನ ಜಗತ್ತಿನ ಎಲ್ಲೆಡೆ ಕಸವಾಗಿ ಮಾರ್ಪಟ್ಟ ಬ್ಯಾಟರಿಗಳನ್ನ ತಂದು ಭಾರತದಲ್ಲಿ ಸುರಿಯುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಅದಕ್ಕೆ ಒಪ್ಪಂದವಾಗಿದೆಯೇ? ಇವರು ಭಾರತಕ್ಕೆ ಬಂದಿದ್ದೆ ಸೌಭಾಗ್ಯ ಎನ್ನುವಂತೆ ವರ್ತಿಸುವ ನಾವು ಬದಲಾಗುವುದೆಂದು? ಈ ಹಿಂದೆ ಕಂಟೈನರ್ ಗಟ್ಟಲೆ ಇ-ವೇಸ್ಟ್ ಅನ್ನು ಭಾರತದಲ್ಲಿ ತಂದು ಸುರಿದಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ.
  5. ನಿಮಗೆಲ್ಲಾ ಗೊತ್ತಿರಲಿ, ಭಾರತ ಅಮೆರಿಕವನ್ನ ಕೂಡ ಹಿಂದಿಕ್ಕಿ ಜಗತ್ತಿನ ಅತಿ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಬೇಡಿಕೆಯನ್ನ ಮುಂದಿಡುವ ದೇಶವಾಗಿ ಇನ್ನೈದು ವರ್ಷದಲ್ಲಿ ಬದಲಾಗಲಿದೆ. ಅಂದರೆ ಇದರರ್ಥ ಬಹಳ ಸರಳ. ಅವರಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಲಿದೆ. ಗ್ಲೋಬಲ್ ವಿಲೇಜ್ ಎನ್ನುವ ಮಟ್ಟಕ್ಕೆ ಜಗತ್ತು ಬದಲಾಗಿದೆ ಹೀಗಾಗಿ ಅವರು ಇಲ್ಲಿಗೆ ಬರುವುದು, ನಾವು ಅಲ್ಲಿಗೆ ಹೋಗುವುದು ಎಲ್ಲವೂ ಸಹಜ. ಅದು ಬೇಡವೆಂದಲ್ಲ, ತಪ್ಪು ಕೂಡ ಅಲ್ಲ. ಆದರೆ ಅವರು ಬಂದರು ಎನ್ನುವುದಕ್ಕೆ ನಾವು ನೀಡುತ್ತಿರುವ ಪ್ರಚಾರ, ಅವರು ಬಂದಿದ್ದರಿಂದ ನಮ್ಮ ದೇಶ ಉದ್ಧಾರವಾಗುತ್ತದೆ ಎನ್ನುವ ಮನಸ್ಥಿತಿಗೆ ಏನು ಹೇಳುವುದು? ಅವರಿಗೆ ಭಾರತ ಒಂದು ಹಸಿರಾದ ಮಾರುಕಟ್ಟೆ ಅಷ್ಟೇ.
  6. ಇವರು ಇಲ್ಲಿಗೆ ಬರುತ್ತಿರುವುದು ಲಾಭ ಮಾಡುವ ಉದ್ದೇಶದಿಂದ, ತಮ್ಮ ಪದಾರ್ಥವನ್ನ ಮಾರುವ ಉದ್ದೇಶದಿಂದ, ಸರಕಾರ ಇವರಿಗೆ ಇಲ್ಲದ ಸವಲತ್ತು ನೀಡುವ ಅವಶ್ಯಕತೆ ಖಂಡಿತ ಇಲ್ಲ. ಗಮನಿಸಿ ಟೆಸ್ಲಾ ಮಾಡೆಲ್ 3 ಅತಿ ಕಡಿಮೆ ಬೆಲೆಯುಳ್ಳ ಕಾರು. ಇದರ ಬೆಲೆ ಕೇವಲ 55ಲಕ್ಷ. ಹೀಗಾಗಿ ಸದ್ಯಕ್ಕೆ ಅಂದರೆ ಇದೆ ತಿಂಗಳು ಜನವರಿ 2021 ರಿಂದ ಈ ಮಾಡೆಲ್ 3 ರ ಬುಕಿಂಗ್ ಕೂಡ ಶುರುವಾಗಲಿದೆ.

ನಮ್ಮದು ಭಾವುಕ ಸಮಾಜ. ಅದರಲ್ಲೂ ವಿದೇಶದ ವಸ್ತು, ಪದಾರ್ಥ ಎಂದರೆ ನಾವು ಇನ್ನಷ್ಟು ಭಾವುಕರಾಗುತ್ತೇವೆ. ನಮ್ಮ ಅತಿಯಾದ ಭಾವುಕತೆ ನಮಗೆ ಮುಳ್ಳು. ಟೆಸ್ಲಾ ಭಾರತದ ಆಗಮನವನ್ನ ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡುವುದು ಉತ್ತಮ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಭಾವನೆಗೆ ಜಾಗವಿಲ್ಲ. ಆದರೇನು ನಮ್ಮ ಸರಕಾರದಿಂದ ಹಿಡಿದು ಕೊನೆಯ ನಾಗರಿಕನ ವರೆಗೆ ಭಾವುಕತೆಯನ್ನ ಬಂಡವಾಳ ಮಾಡಿಕೊಂಡು ಕುಳಿತ್ತಿದ್ದೇವೆ. ಇದನ್ನ ಕೇವಲ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಬಂಧನೆಗಳನ್ನ ವಿಧಿಸಿದರೆ ಉಂಟು, ಇಲ್ಲವಾದರೆ ಮುಂಬರುವ ವರ್ಷದಲ್ಲಿ ಭಾರತ 'ಕಸ ಬಿಸಾಡುವ ತಿಪ್ಪೆ' ಯಾಗಿ ಮಾರ್ಪಾಡಾಗುತ್ತದೆ.

ಎಲ್ಲವುದಕ್ಕಿಂತ ಮುಖ್ಯವಾಗಿ ಇದು ಪರಿಸರ ಪ್ರೇಮಿ ಕಾರು ಎನ್ನುವುದು ಶುದ್ಧ ಸುಳ್ಳು. ನಿಮಗೆ ಒಂದು ವಿಷಯ ತಿಳಿದಿರಲಿ, ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಆವಿಷ್ಕಾರವಾದ ಹೊಸತರಲ್ಲಿ ಇದರ ಬಗೆ ಬಗೆಯ ಉಪಯೋಗದ ಬಗ್ಗೆ ಎಲ್ಲರೂ ಹೊಗಳಿ ಬರೆದದ್ದೇ ಬರೆದದ್ದು, ಇದು ಬಹು ಉಪಯೋಗಿ ಸಾಧನ, ಶತಮಾನದ ಅತ್ಯುತ್ತಮ ಆವಿಷ್ಕಾರ ಎಂದೆಲ್ಲಾ ಹಾದಿ ಹೊಗಳಿದ ನಾಯಕರ ಸಂಖ್ಯೆ ಲೆಕ್ಕಕಿಲ್ಲ. ಅಂದಿಗೆ ಇದರ ಜನಕರಿಗೆ ಇದರಿಂದ ಆಗುವ ತೊಂದರೆಯೇ ಅರಿವಿರಲಿಲ್ಲವೇ? ಖಂಡಿತ ಇತ್ತು. ಆದರೆ ಸದ್ಯದ ಮಟ್ಟಿನ ಜಯ, ಜನಪ್ರಿಯತೆ, ಕಿಸೆ ತುಂಬಾ ಕಾಂಚಾಣ ಸಿಕ್ಕರೆ ಯಾರು ಬೇಡವೆನ್ನುತ್ತಾರೆ ಹೇಳಿ? ಇವತ್ತಿಗೆ ವಾಹ್ ಎನ್ನಿಸುವ ಈ ಎಲೆಕ್ಟ್ರಿಕ್ ಕಾರಿನ ಅವಾಂತರ ಎರಡು ದಶಕದ ನಂತರ ಜಗತ್ತಿಗೆ ತಿಳಿಯುತ್ತದೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎಲೆಕ್ರಿಕ್ ಕಾರುಗಳ ಬಳಕೆಯನ್ನ ಹೆಚ್ಚು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಟೆಸ್ಲಾ ಭಾರತವನ್ನ ಪ್ರವೇಶಿಸಿದೆ. 2016 ರಿಂದ ಭಾರತಕ್ಕೆ ಬರಬೇಕು ಎನ್ನುವ ಕೂಗಿಗೆ ಈಗ ಬೆಂಬಲ ಬಂದಿದೆ. ಮೇಲೆ ಆರು ಅಂಶಗಳನ್ನ ಒಂದಷ್ಟು ಸಮಯಕ್ಕೆ ಸುಳ್ಳು ಅಥವಾ ಅದ್ಯಾವುದೂ ಸರಿಯಾದ ಮಾಹಿತಿಯ ಬೆಂಬಲವಿಲ್ಲದೆ ಹೇಳಿದ ಅಂಶಗಳು ಎಂದುಕೊಳ್ಳೋಣ. ಅವುಗಳ ಮಾತನ್ನ ನಾವು ಆಡುವುದು ಬೇಡ. ಈಗ ನಾವು ಒಂದು ಪ್ರಶ್ನೆಯನ್ನ ನಮಗೆ ನಾವೇ ಕೇಳಿಕೊಳ್ಳೋಣ 'ಆತ್ಮನಿರ್ಭರ ಭಾರತ' ಕರೆ ಏನಾಯ್ತು? ಭಾರತದಲ್ಲಿ ಈ ಎಲೆಕ್ಟ್ರಿಕ್ ಕಾರುಗಳನ್ನ ತಯಾರಿಸುವ ತಾಕತ್ತು ನಮ್ಮ ಸಂಸ್ಥೆಗಳಿಗೆ ಇಲ್ಲವೇ? ನಮ್ಮದೇ ಮಹಿಂದ್ರಾ ಅಂದ ಮಹಿಂದ್ರಾ ಸಂಸ್ಥೆಯಿದೆ, ದೇಶದ ಹಿತಾಸಕ್ತಿಗೆ ಸದಾ ಬದ್ಧವಾಗಿರುವ ಟಾಟಾ ಮೋಟಾರ್ಸ್ ಇದೆ. ಇವುಗಳನ್ನ ಆತ್ಮನಿರ್ಭರ ಭಾರತದ ಹೆಸರಿನಲ್ಲಿ ಪ್ರೊಮೋಟ್ ಮಾಡಲು ಸಾಧ್ಯವಿಲ್ಲವೇ?

ಕೊನೆಮಾತು: ವಿಷಯ ಅಥವಾ ವಸ್ತು ಯಾವುದೇ ಇರಲಿ ಅಲ್ಲಿ ಪರ-ವಿರೋಧ ಶುರು ವಾಗುತ್ತದೆ. ಹೇಳಿಕೇಳಿ ನಮ್ಮದು ಪ್ರಜಾಪ್ರಭುತ್ವ! ಎಲ್ಲರೂ ಅವರವರ ದೃಷ್ಟಿಕೋನವನ್ನ ಹೇಳಿಕೊಳ್ಳಲು ಸ್ವಂತಂತ್ರರು. ಇತ್ತ ನಾವು ಸರಿ ತಪ್ಪುಗಳ ವಾದ ಮಾತನಾಡುತ್ತ ಕುಳಿತಾಗ ಅತ್ತ ಇಲೊನ್ ಮುಸ್ಕ್ ತನ್ನ ಜೋಳಿಗೆಯನ್ನ ಮತ್ತಷ್ಟು ತುಂಬಿಸಿಕೊಂಡು ನಗುತ್ತಿರುತ್ತಾನೆ. ವಿದೇಶಿ ಸಂಸ್ಥೆ ಭಾರತಕ್ಕೆ ಬೇಡ ಎನ್ನವ ಸಿನಿಕತೆ ಬಿಂಬಿಸುವುದು ಲೇಖನದ ಉದ್ದೇಶವಲ್ಲ.  ನಾವು ಒಂದು ಕಾರ್ಯತಂತ್ರವನ್ನ ಜಾರಿಗೆ ತರಬೇಕು ಎಂದು ಹೇಳಿಕೆ ಕೊಟ್ಟು ಅದಕ್ಕೆ ತದ್ವಿರುದ್ಧದ ದಾರಿ ತುಳಿಯುವುದು ಎಷ್ಟು ಸಾಧು? ಎಂದು ಪ್ರಶ್ನಿಸುವುದು ಲೇಖನದ ಉದ್ದೇಶ.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp