
ಇಲಾನ್ ಮುಸ್ಕ್
ಇಲಾನ್ ಮುಸ್ಕ್ ಜನವರಿ 8, 2021 ರಂದು ಅಮೆಜಾನ್ ಸ್ಥಾಪಕ ಜೆಫ್ ಬೇಸೂಸ್ ಅವರನ್ನ ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತ ಎನ್ನುವ ಪಟ್ಟವನ್ನ ಪಡೆದುಕೊಂಡಿದ್ದಾರೆ. ತಮ್ಮ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮಾಡುವ ಸಂಸ್ಥೆ ಟೆಸ್ಲಾ ಷೇರುಗಳು ಏರಿಕೆಯನ್ನ ಕಂಡದ್ದು ಇದಕ್ಕೆ ಕಾರಣ. ವರ್ಷದ ಹಿಂದೆ ಮುಸ್ಕ್ ಅವರು ಬೇಸೂಸ್ ಅವರನ್ನ ಈ ಹಣದಾಟದಲ್ಲಿ ಹಿಂದಿಕ್ಕುತ್ತಾರೆ ಎನ್ನುವುದನ್ನ ಯಾರೂ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಇಂದಿಗೆ ಇಲಾನ್ ಒಂಭತ್ತೂವರೆ ಬಿಲಿಯನ್ ಅಮೆರಿಕನ್ ಡಾಲರ್ ನೊಂದಿಗೆ ಬೇಸೂಸ್ ಅವರಿಗಿಂತ ಹೆಚ್ಚು ಆಸ್ತಿಯನ್ನ ಹೊಂದಿ ಪ್ರಥಮ ಸ್ಥಾನವನ್ನ ಅಲಂಕರಿಸಿದ್ದಾರೆ.
ಇದು ಒಂದು ದಿನದಲ್ಲಿ ಆದದ್ದಲ್ಲ. ಇಲಾನ್ ಮುಸ್ಕ್ ಅವರ ಬಾಲ್ಯ ಸುಖದ ಸುಪ್ಪತ್ತಿಗೆ ಆಗಿರಲಿಲ್ಲ. ಅಪ್ಪ ಸೌತ್ ಆಫ್ರಿಕನ್, ಅಮ್ಮ ಕೆನಡಾ ಮೂಲದವರು. ಚಿಕ್ಕಂದಿನಲ್ಲಿ ಶಾಲೆಯಲ್ಲಿ ಬೇರೆ ವಿದ್ಯಾರ್ಥಿಗಳಿಂದ ಬಹಳಷ್ಟು ಕೀಟಲೆ ಮತ್ತು ಹಿಂಸೆಗೆ ಒಳಗಾಗುತ್ತಾರೆ. ಅಪ್ಪ ಅಮ್ಮನ ದಾಂಪತ್ಯ ಜೀವನ ವಿಚ್ಚೇದನದಲ್ಲಿ ಅಂತ್ಯ ಕಾಣುತ್ತದೆ. ಬಾಲಕ ಇಲಾನ್ ಅಪ್ಪನ ಜೊತೆ ಸೌತ್ ಆಫ್ರಿಕಾದಲ್ಲಿ ಬಹಳ ಸಮಯ ಕಳೆಯುತ್ತಾನೆ. ಬಹಳಷ್ಟು ಮಾನಸಿಕ ಕಿರಿಕಿರಿಗಳ ನಡುವೆ ಟೆಕ್ನಾಲಜಿ ಈತನ ಎಲ್ಲಾ ನೋವುಗಳನ್ನ ಮರೆಸುತ್ತದೆ. ಚಿಕ್ಕಂದಿನಿಂದ ಈತ ಪುಸಕ್ತದ ಹುಳು. ಹೀಗಾಗಿ ತನ್ನ 10ನೇ ವಯಸ್ಸಿನಲ್ಲಿ ಪ್ರೋಗ್ರಾಮಿಂಗ್ ಕಲಿತು ವಿಡಿಯೋ ಗೇಮ್ ಒಂದನ್ನ ತಯಾರಿಸಿ ಅದನ್ನ ಮ್ಯಾಗಜಿನ್ ಒಂದಕ್ಕೆ 5೦೦ ಡಾಲರ್ಗೆ ಮಾರಿಕೊಂಡ ಭೂಪ ಇವರು. ತನ್ನ 17ನೇ ವಯಸ್ಸಿನಲ್ಲಿ ಸೌತ್ ಆಫ್ರಿಕಾ ತೊರೆದು ಕೆನಡಾ ಸೇರುತ್ತಾರೆ. ಆ ನಂತರ 19ನೇ ವಯಸ್ಸಿಗೆ ಅಮೇರಿಕಾ ಪ್ರವೇಶಿಸುತ್ತಾರೆ. ವಿಜ್ಞಾನ ಮತ್ತು ಎಕನಾಮಿಕ್ಸ್ ಒಟ್ಟಿಗೆ ಸೇರಿದರೆ ಏನಾಗಬಹುದು ಎನ್ನುವುದಕ್ಕೆ ಇಲಾನ್ ಮುಸ್ಕ್ ಉತ್ತಮ ಉದಾಹರಣೆ. ಭೌತಶಾಸ್ತ್ರ ಮತ್ತು ಎಕನಾಮಿಕ್ಸ್ ಎರಡೂ ವಿಷಯದಲ್ಲಿ ಪದವಿಯನ್ನ ಇವರು ಪಡೆದಿದ್ದಾರೆ.
ಭೌತಶಾಸ್ತ್ರ ಎಂದರೆ ಇವರಿಗೆ ಪಂಚಪ್ರಾಣ. 'ವಿಷಯ ಯಾವುದೇ ಇರಲಿ ಅದರ ತಳಕ್ಕೆ ಅಂದರೆ ಮೂಲಭೂತ ಸತ್ಯಕ್ಕೆ ಕೈ ಹಾಕಬೇಕು, ಆ ನಂತರ ಸರಿ ತಪ್ಪುಗಳ, ಮಾಡಬೇಕಾದ ಕಾರ್ಯದ ಬಗ್ಗೆ ವಿಚಾರಣೆ, ಕಾರಣಗಳನ್ನ ಹುಡುಕುತ್ತಾ ಹೋಗಬಹುದು' ಎನ್ನವುದು ಇಲಾನ್ ಉವಾಚ. ಭೌತಶಾಸ್ತ್ರ ಇವರ ಜೀವನದ ಮೇಲೆ ಅತೀವ ಪರಿಣಾಮ ಬಿರಿದ ವಿಷಯ. ಅರ್ಥಶಾಸ್ತ್ರ, ಭೌತಶಾಸ್ತ್ರದಲ್ಲಿ ಕಲಿತ್ತದ್ದನ್ನ 'ಎನ್ ಕ್ಯಾಶ್' ಮಾಡಿಸಿಕೊಳ್ಳುವ ಕಲೆಯನ್ನ ಕಲಿಸಿಕೊಡುತ್ತದೆ. ಭೌತಶಾಸ್ತ್ರದಲ್ಲಿ ಪಿಎಚ್ಡಿ ಪದವಿಯನ್ನ ಕೂಡ ಪಡೆಯುತ್ತಾರೆ. 1995ರಲ್ಲಿ 28 ಸಾವಿರ ಡಾಲರ್ ಮತ್ತು ತನ್ನ ತಮ್ಮ ಕಿಂಬಲ್ ಮುಸ್ಕ್ ನ ಸಹಾಯದಿಂದ ಜಿಪ್ 2 ಎನ್ನುವ ಸಂಸ್ಥೆಯನ್ನ ಸ್ಥಾಪಿಸುತ್ತಾರೆ. ಆನ್ಲೈನ್ ಸಿಟಿ ಗೈಡ್ ತಯಾರಿಸಲು ಸಹಾಯ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಇಲ್ಲಿ ಗಳಿಸಿದ ಹಣವನ್ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ ತರಲು ಬಳಸುತ್ತಾರೆ. ಹಣವನ್ನ ಸಂದಾಯ ಮಾಡುವ ಹೊಸ ಮಾರ್ಗ ಸೃಷ್ಟಿಸುತ್ತಾರೆ. ಪೆಪಾಲ್ (pay pal ) ಇಂದು ಯಾರಿಗೆ ಗೊತ್ತಿಲ್ಲ ಹೇಳಿ? ಇಂತಹ ಪೆಪಾಲ್ ನನ್ನ ಈ-ಬೇ (e bay) ಕೊಂಡುಕೊಳ್ಳುತ್ತದೆ. ಹೀಗೆ ಬಂದ ಹಣ ಮತ್ತು ಮತ್ತಷ್ಟು ಹಣಕಾಸು ನೆರವು ಪಡೆದು 'ಟೆಸ್ಲಾ' ಸಂಸ್ಥೆಯ ಜನಕರಾಗುತ್ತಾರೆ. ಉಳಿದದ್ದು ಇಂದಿಗೆ ಚರಿತ್ರೆ. ಇಂತಿಪ್ಪ ಇಲಾನ್ ಮುಸ್ಕ್ ಅವರಿಗೆ ತಮ್ಮ ಒಟ್ಟು ಆಸ್ತಿಯ ಮೊತ್ತವೆಷ್ಟು ಎಂದು ಕೇಳಿದರೆ ಅದು ಅವರಿಗೆ ಗೊತ್ತಿಲ್ಲ!! ಕೆಲಸ ಮಾಡುತ್ತಾ ಹೋದರೆ ಸಾಕು ಹಣ ಬಂದೆ ಬರುತ್ತದೆ ಎನ್ನುವುದು ಇವರ ನಂಬಿಕೆ. ಇಷ್ಟೊಂದು ಯಶಸ್ಸು ಪಡೆದಿರುವ ಇವರು ಒಂದಷ್ಟು ನಂಬಿಕೆಗಳು ಅಥವಾ ಸೂತ್ರಗಳನ್ನ ಅಳವಡಿಸಿಕೊಂಡ ಕಾರಣ ಇಂತಹ ಯಶಸ್ಸು ಪಡೆಯಲು ಸಾಧ್ಯವಾಗಿರುತ್ತದೆ ಅಲ್ಲವೇ? ಅವರೇ ಹೇಳುವ ಪ್ರಕಾರ ಅವರ ಸಪ್ತ ಸೂತ್ರಗಳು ಏನು? ಎನ್ನುವುದನ್ನ ತಿಳಿದುಕೊಳ್ಳೋಣ.
- ಹಣ ಮುಖ್ಯ ಅಲ್ಲವೇ ಅಲ್ಲ: ಕನಸು ಅಥವಾ ಐಡಿಯಾ ಅಂತ ನಾವೇನು ಹೇಳುತ್ತೇವೆ ಅದು ಮುಖ್ಯ. ಸ್ಪೇಸ್ ಎಕ್ಸ್, ಟೆಸ್ಲಾ, ಸೋಲಾರ್ ಸಿಟಿ ಯಾವುದೇ ಪ್ರಾಜೆಕ್ಟ್ ಇರಲಿ ಅವುಗಳಿಗೆ ನನಗೆ ಹಣ ಬೇಕಾಗುತ್ತದೆ. ನನ್ನ ನಂಬಿ ಒಂದಷ್ಟು ಜನ ಹೂಡಿಕೆ ಮಾಡುತ್ತಾರೆ. ಅವರ ಹೂಡಿಕೆಯ ಮೊತ್ತದ ಮೌಲ್ಯ ಕಡಿಮೆಯಾಗಬಾರದು ಅದು ಒಂದಷ್ಟು ಹೆಚ್ಚಾಗುತ್ತಿರಬೇಕು. ಇದು ಅವರಿಗೆ ಬೇಕಾಗಿರುವುದು. ಅದನ್ನ ಅವರಿಗೆ ಕೊಡುವಂತೆ ಕೆಲಸ ಮಾಡಬೇಕು ಅಷ್ಟೇ, ಅವರು ಹೂಡಿದ ಹಣದ ಮೌಲ್ಯ ಕಡಿಮೆಯಾದರೆ ನನ್ನ ಪ್ರಾಜೆಕ್ಟ್ ಗಳು ಕುಸಿಯುತ್ತವೆ. ಹೀಗಾಗಿ ನನಗೆ ಹಣ ಮುಖ್ಯವಲ್ಲ, ನನ್ನ ಪ್ರಾಜೆಕ್ಟ್ ಮುಖ್ಯ. ಪ್ರಾಜೆಕ್ಟ್ ಗೆಲ್ಲಲು ಏನು ಬೇಕು ನಾನು ಅದನ್ನ ಮಾಡುತ್ತೇನೆ. ಅದು ಅವರ ಹಣದ ಮೌಲ್ಯವನ್ನ ವೃದ್ಧಿಸುತ್ತದೆ. ಹಣ ಎಂದಿಗೂ ಮುಖ್ಯವಲ್ಲ, ಎನ್ನುವುದು ಇವರ ನಿಖರ ಮಾತು. ಅದು ಅವರ ಎಲ್ಲಾ ಉದ್ದಿಮೆಗಳ ಪ್ರಥಮ ಮಂತ್ರ.
- ಮಾಡುವ ಕೆಲಸದಲ್ಲಿ ಶ್ರದ್ಧೆ, ಉತ್ಸಾಹ, ಅಥವಾ ಪ್ಯಾಶನ್ ಇರಬೇಕು: ಮಾಡುವ ಕೆಲಸ ನಮ್ಮ ಅಭಿರುಚಿಕೆ ತಕ್ಕಂತೆ ಇರಬೇಕು. ಕೇವಲ ಹಣ ಅಥವಾ ಯಶಸ್ಸು ಗಳಿಸಲು ಮಾಡುವ ಯಾವ ಕೆಲಸವೂ ಗೆಲ್ಲುವುದಿಲ್ಲ. ಉತ್ಸಾಹದಿಂದ, ಖುಷಿಯಿಂದ, ಸ್ವ-ಇಚ್ಛೆಯಿಂದ ಮಾಡಿದ ಯಾವ ಕೆಲಸವೂ ಸೋಲುವುದಿಲ್ಲ. ಖಂಡಿತ ಒಂದಲ್ಲ ಹತ್ತಾರು ಅಡೆತಡೆಗಳು ಎದುರಾಗುತ್ತವೆ. ಉತ್ಸಾಹದ ಮಟ್ಟ ಹೆಚ್ಚಾಗಿದ್ದಾಗ ಇಂತಹ ಅಡೆತಡೆಗಳು ಗೌಣ ಎನ್ನಿಸುತ್ತವೆ.
- ದೊಡ್ಡ ಯೋಚನೆಗೆ ಕಡಿವಾಣ ಬೇಡ: ಆಕಾಶಕ್ಕೆ ಏಣಿ ಹಾಕುತ್ತೇನೆ ಎಂದರೆ ನಗುವರ ಸಂಖ್ಯೆ ಬಹಳ. ಸಾಧ್ಯವಾಗುವುದಿಲ್ಲ ಎಂದು ದೊಡ್ಡ ಯೋಚನೆಗಳನ್ನ ಮಾಡುವುದು ಬಹಳಷ್ಟು ಜನ ಬಿಟ್ಟು ಬಿಡುತ್ತಾರೆ. ಒಂದಷ್ಟು ಯಶಸ್ಸು ಸಿಕ್ಕ ನಂತರ ಇಲ್ಲದ ರಿಸ್ಕ್ ಏಕೆ ಎಂದು ಮುಕ್ಕಾಲು ಪಾಲು ಜನ ಸುಮ್ಮನಾಗುತ್ತಾರೆ. ಆದರೆ ಯಾರೂ ಯೋಚಿಸದ, ಯಾರೂ ಕಾಣದ ಕನಸನ್ನ ಕಂಡರೆ ಮಾತ್ರ ನಾವು ಜಗತ್ತಿನಿಂದ ಬೇರ್ಪಟ್ಟು ನಿಲ್ಲಬಹುದು, ಎನ್ನುವುದು ಇವರ ಇನ್ನೊಂದು ಅಚಲ ನಂಬಿಕೆ. ಇವರ ನಂಬಿಕೆ ಕೆಲಸ ಮಾಡುತ್ತಿದೆ.
- ರಿಸ್ಕ್ ವ್ಯಾಪಾರದ ಮೂಲ ಭಾಗ, ರಿಸ್ಕ್ ತೆಗೆದುಕೊಳ್ಳಲು ಹೆದರಬಾರದು: ಇಲಾನ್ ಮುಸ್ಕ್ ಮಿಡ್ 30ರ ಹರೆಯದಲ್ಲಿದ್ದಾಗ ಅವರ ಬಳಿ 200 ಮಿಲಿಯನ್ ಅಮೆರಿಕನ್ ಡಾಲರ್ ಹಣ ಖಾತೆಯಲ್ಲಿರುತ್ತದೆ. ಅವರ ಸ್ಪೇಸ್ ಎಕ್ಸ್ ಮೂರು ಉಡಾವಣೆ ಸೋತಿರುತ್ತದೆ, ಟೆಸ್ಲಾದಲ್ಲಿ ಸಪ್ಲೈ ಚೈನ್ ಕುಸಿತ ಕಂಡಿರುತ್ತದೆ, ಡಿಸೈನ್ ಸರಿಯಿರುವುದಿಲ್ಲ, ಹೀಗೆ ಒಂದಲ್ಲ ಒಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾರೆ. ಇವರ ಮುಂದೆ ಎರಡು ಆಯ್ಕೆಯಿರುತ್ತದೆ. ಹಣವನ್ನ ಸಂಸ್ಥೆಗೆ ಸುರಿಯುತ್ತ ಹೋಗುವುದು, ಇಲ್ಲ ನಿಲ್ಲಿಸುವುದು. ನಿಲ್ಲಿಸದರೆ ಸಂಸ್ಥೆಗಳು ಸಾಯುತ್ತವೆ. ಹಣವನ್ನ ಹಾಕಿದರೆ ಗೆಲ್ಲುವ ಅವಕಾಶ ತೆರೆದುಕೊಳ್ಳುತ್ತದೆ. ಇಲಾನ್ ಹಣವನ್ನ ಸಂಸ್ಥೆಗೆ ಹಾಕುತ್ತ ಹೋಗುತ್ತಾರೆ. ಕೊನೆಗೆ ದಿನ ನಿತ್ಯದ ಖರ್ಚಿಗೆ ಸ್ನೇಹಿತರನ್ನ ಕೇಳುವ ಮಟ್ಟಕೆ ಇವರ ಹಣಕಾಸು ಪರಿಸ್ಥಿತಿ ಬಿಗಡಾಯಿಸುತ್ತದೆ. ನಾವು ಮಾಡುವ ಕೆಲಸದಲ್ಲಿ ಅಪಾರ ನಂಬಿಕೆಯಿದ್ದರೆ ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಅರ್ಥವಿದೆ, ಎನ್ನುವುದು ಕೂಡ ಇವರ ಸಿದ್ಧಾಂತ.
- ವಿಶ್ಲೇಷಕರ ಮಾತಿಗೆ ಕಿವುಡರಾಗಿ: ಕ್ರಿಟಿಕ್ಸ್ ಅಂದರೆ ಇದು ಸರಿ, ಇದು ತಪ್ಪು ಎಂದು ವಿಶ್ಲೇಷಣೆ ಮಾಡುವ ವ್ಯಕ್ತಿಗಳು. ಇವರು ಒಂದು ಕಡೆಯಾದರೆ, ಗೆಳೆಯರು, ಬಂಧುಗಳು ಇತರರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ನಾವು ಮಾಡುತ್ತಿರುವುದು ಸರಿ ಎಂದು ಅಂತರಾತ್ಮ ಹೇಳಿದರೆ ಸರಿ, ಬೇರೆಯವರ ಮಾತನ್ನ ನಿರ್ಲಕ್ಷ್ಯ ಮಾಡುವುದು ಒಳ್ಳೆಯದು.
- ಕೆಲಸದ ಮಧ್ಯೆ ಆನಂದಿಸುವುದು, ಜೀವನವನ್ನ ಪ್ರೀತಿಸುವುದು ಮರೆಯುವುದು ಬೇಡ: ಇಂಗ್ಲಿಷ್ ನಲ್ಲಿ ಒಂದು ಗಾದೆಯಿದೆ , ಅದು ಟ್ರೀಟ್ ಯುವರ್ ಸೆಲ್ಫ್ ಎನ್ನುತ್ತದೆ. ಅಂದರೆ ವ್ಯಕ್ತಿ ತನಗೆ ತಾನು ಸುಖವಾಗಿ, ಖುಷಿಯಾಗಿ ಇಟ್ಟುಕೊಳ್ಳಬೇಕು. ನಾವು ಖುಷಿಯಾಗಿರದೆ ಇತರರನ್ನ ಖುಷಿಯಾಗಿಡಲು ಹೇಗೆ ಸಾಧ್ಯ? ಉದ್ಯಮದಲ್ಲಿ ಒಂದಲ್ಲ ಹತ್ತಾರು ಸಮಸ್ಯೆಗಳು ಸಹಜ. ಅದು ನಮ್ಮ ಖುಷಿಯನ್ನ, ಆತ್ಮಶಾಂತಿಯನ್ನ ಕದಡಲು ಬಿಡಬಾರದು. ಅದು ಕೂಡ ಜೀವನದ ಒಂದು ಭಾಗ ಎಂದು ಸೋಲನ್ನ, ಅಡೆತಡೆಗಳನ್ನ ಕೂಡ ಎಂಜಾಯ್ ಮಾಡುವುದು ಕಲಿಯಬೇಕು.
- ಆಗೋಲ್ಲ ಎಂದು ಕೈಚಲ್ಲುವುದು ಸುಲಭ ಆಯ್ಕೆ, ಹೀಗಾಗಿ ಯಾವಾಗಲೂ ಕಷ್ಟದ ಆಯ್ಕೆಯನ್ನ ಮಾಡಿಕೊಳ್ಳಿ: ದೊಡ್ಡ ಕನಸು, ದೊಡ್ಡ ಯೋಜನೆಗಳು ಅತಿ ದೊಡ್ಡ ಸಮಸ್ಯೆಯನ್ನ ಕೂಡ ಹೊತ್ತು ತರುತ್ತವೆ. ನಗುವವರು, ಕಾಲೆಳೆಯುವರ ಜೊತೆಗೆ ಮುಂದೇನು? ಎಂದು ಪ್ರಶ್ನೆ ಹಾಕುವ ನೈಜವಾದ ಹಣಕಾಸು ಸಮಸ್ಯೆ, ತಂತ್ರಜ್ಞಾನದ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳು ಎದುರಾಗುತ್ತದೆ. ಅವೆಲ್ಲವನ್ನ ಎದುರಿಸಿ ನಿಂತರೆ ಮಾತ್ರ ಒಂದು ಸಂಸ್ಥೆ ಜನತೆಗೆ ಗೊತ್ತಾಗುವ ಮಟ್ಟಕ್ಕೆ ಬೆಳೆಯಲು ಸಾಧ್ಯ. ಸಂಸ್ಥಾಪಕರ ಬಳಿ ಒಂದಷ್ಟು ಹಣವಂತೂ ಶೇಖರಣೆಯಾಗಿರುತ್ತದೆ. ಸಮಸ್ಯೆಗಳಿಗೆ ಹೆದರಿ ಸಾಕು ಎಂದರೆ ಅಲ್ಲಿಗೆ ಅದು ಮುಕ್ತಾಯ. ಹೀಗಾಗಿ ಸಾಧ್ಯತೆಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಕೈ ಚಲ್ಲುವುದು, ಆಗುವುದಿಲ್ಲ ಎನ್ನುವುದು 99 ಜನ ಆಯ್ದುಕೊಳ್ಳುವ ಮಾರ್ಗ. ನೀವು 1 ಪ್ರತಿಶತದಲ್ಲಿರಬೇಕು ಎನ್ನುವ ಆಯ್ಕೆ ನೀವೇ ಮಾಡಬೇಕು.
ಕೊನೆ ಮಾತು: ಇಲಾನ್ ಮುಸ್ಕ್ ಇಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಇರಬಹುದು. ಆದರೆ ಈ ಪಟ್ಟ ಶಾಶ್ವತವಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಶಾಶ್ವತವಾಗಿ ಉಳಿಯುವುದು ನಾವು ಮಾಡುವ ಕೆಲಸ ಮಾತ್ರ. ಅದು ಸರಿಯಾಗಿದ್ದರೆ ಉಳಿದದ್ದು ನೆರಳಿನಂತೆ ಹಿಂಬಾಲಿಸುತ್ತದೆ. ಮಾಡುವ ಕೆಲಸದಲ್ಲಿ ನಂಬಿಕೆ , ಶ್ರದ್ಧೆ, ಶ್ರಮದ ಜೊತೆಗೆ ಒಂದಷ್ಟು ಅದೃಷ್ಟವೂ ಸಾಥ್ ನೀಡಿದರೆ ಯಶಸ್ಸು ನಮ್ಮದೆ.
ರಂಗಸ್ವಾಮಿ ಮೂಕನಹಳ್ಳಿ
muraram@yahoo.com