ಹಣ ನೀಡಿ ವಿದೇಶಿ ಪೌರತ್ವ ಕೊಳ್ಳಬಹುದು!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 28th January 2021 01:03 AM  |   Last Updated: 28th January 2021 01:04 AM   |  A+A-


Hanaclasu: Know about Countries offering Residency and Citizenship by Investment

ಹಣ ನೀಡಿ ವಿದೇಶಿ ಪೌರತ್ವ ಕೊಳ್ಳಬಹುದು!

Posted By : Srinivas Rao BV
Source : Online Desk

ಕೋವಿಡ್ ಗೆ ಮುಂಚೆ ಈ ರೀತಿಯ ವಿದೇಶಿ ಪೌರತ್ವವನ್ನ ಪಡೆಯುವ ಸವಲತ್ತು ಇತ್ತು. ಕೋವಿಡ್ ನಂತರ ಇದು ಒಂದಷ್ಟು ಚುರುಕು ಪಡೆದುಕೊಂಡಿದೆ. ಜಗತ್ತಿನಲ್ಲಿ ಹಲವಾರು ದೇಶಗಳು ಲಕ್ಷ ಅಮೆರಿಕನ್ ಡಾಲರ್ ನಿಂದ ಮಿಲಿಯನ್ ಅಥವಾ ಅದಕ್ಕೂ ಹೆಚ್ಚು ಡಾಲರ್ ಗಳನ್ನ ಪಡೆದು ತಮ್ಮ ದೇಶದ ಪೌರತ್ವವನ್ನ ಬಿಕರಿಗೆ ಇಟ್ಟಿವೆ. ಹೀಗೆ ಮಾಡಲು ಪ್ರಮುಖ ಕಾರಣ ಆಯಾ ದೇಶಗಳು ಹಣದ ಹರಿವನ್ನ ಹೆಚ್ಚಿಸಿಕೊಳ್ಳುವುದು, ಮತ್ತು ವ್ಯಾಪಾರ ಅಭಿವೃದ್ಧಿ ಮಾಡಿಕೊಳ್ಳುವುದರ ಜೊತೆಗೆ ತನ್ನ ನೆಲದಲ್ಲಿ ಒಂದಷ್ಟು ಕೆಲಸದ ಸೃಷ್ಟಿ ಮಾಡಿಕೊಳ್ಳುವುದು. ಹೀಗೆ ಹೂಡಿಕೆ ಮಾಡಿದ ವ್ಯಕ್ತಿ ಅಥವಾ ಕುಟುಂಬಕ್ಕೆ ಕೂಡ ಆ ದೇಶದಲ್ಲಿರುವ ಸವಲತ್ತುಗಳು ಅನುಭವಿಸಲು ಸಿಗುತ್ತದೆ. ಈ ರೀತಿಯ ಪೌರತ್ವವನ್ನ ಮೂರು ರೀತಿಯಲ್ಲಿ ಪಡೆಯಬಹುದಾಗಿದೆ. ಮೊದಲನೆಯದಾಗಿ ಸಿಟಿಜನ್ ಶಿಪ್ ಬೈ ಇನ್ವೆಸ್ಟ್ಮೆಂಟ್ ಪ್ರೋಗ್ರಾಮ್, ಎರಡನೆಯದಾಗಿ ರೆಸಿಡೆನ್ಸಿ ಬೈ ಇನ್ವೆಸ್ಟ್ಮೆಂಟ್ ಪ್ರೋಗ್ರಾಮ್ ಮತ್ತು ಮೂರನೆಯದಾಗಿ ಡೊನೇಶನ್ ಅಥವಾ ದೇಣಿಗೆ ನೀಡುವುದರ ಮೂಲಕ ಪೌರತ್ವ ಅಥವಾ ರೆಸಿಡೆನ್ಸಿ ಪಡೆಯಬಹುದಾಗಿದೆ.

ಮೇಲ್ನೋಟಕ್ಕೆ ಇದು ಅತ್ಯಂತ ಸರಳ ಎನ್ನಿಸುವಂತೆ ಕಾಣುತ್ತದೆ. ಹಣದ ಜೊತೆಗೆ ಆಯಾ ದೇಶಗಳು ವಿಧಿಸುವ ಒಂದಷ್ಟು ಷರತ್ತುಗಳನ್ನ ಕೂಡ ಪಾಲಿಸಬೇಕಾಗುತ್ತದೆ. ಇಂದಿನ ದಿನದಲ್ಲಿ ಈ ರೀತಿ ತಮ್ಮ ದೇಶವನ್ನ ಬಿಟ್ಟು ಬೇರೆ ಸಮೃದ್ಧ ದೇಶಗಳಿಗೆ ಹಣ ಉಳ್ಳವರು ವಲಸೆ ಹೋಗುವುದು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣಗಳಗಳಲ್ಲಿ ಹಲವು ಇಲ್ಲಿವೆ.

 1. ಯೂರೋಪಿಯನ್ ದೇಶದ ಪೌರತ್ವ ಪಡೆದುಕೊಂಡರೆ ಅಲ್ಲಿನ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಉಚಿತವಾಗಿ ಸಿಗುತ್ತದೆ.
 2. ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಅಸ್ಥಿರವಾಗಿದೆ. ಈ ರೀತಿಯ ಅಸ್ಥಿರ ಸಮಾಜದ ಅಥವಾ ಭಯ ಮುಂದುವರಿಯುತ್ತಿರುವ ಅಥವಾ ಹಿಂದುಳಿದ ದೇಶದಲ್ಲಿ ವಾಸಿಸುತ್ತಿರುವ ಹಣವಂತರಲ್ಲಿ ನೈಜ್ಯವಾಗಿ ತಲ್ಲಣವನ್ನ ಸೃಷ್ಟಿ ಮಾಡುತ್ತದೆ.
 3. ತೃತೀಯ ಜಗತ್ತಿನ ದೇಶಗಳಲ್ಲಿ ಈ ರೀತಿ ವಿದೇಶಿ ಪೌರತ್ವ ಹೊಂದುವುದು ಇಂದಿಗೂ 'ಘನತೆ' ಎನ್ನುವ ನಂಬಿಕೆಯಿರುವುದು ಕೂಡ ಅಲ್ಲಗಳೆಯಲು ಬರುವುದಿಲ್ಲ.
 4. ಅಭಿವೃದ್ಧಿ ಹೊಂದಿದ ದೇಶಗಳ ಪೌರತ್ವ ಹೊಂದುವುದರಿಂದ ಜಗತ್ತಿನ ಮುಕ್ಕಾಲು ಪಾಲು ದೇಶಗಳಿಗೆ ವೀಸಾ ಬೇಕಾಗುವುದಿಲ್ಲ. ಹೀಗಾಗಿ ಉದ್ಯಮಿಗಳಿಗೆ ಮತ್ತು ಬೇರೆ ದೇಶಗಳಲ್ಲಿ ವ್ಯಾಪಾರ ಮಾಡಲು ಬಯಸುವರಿಗೆ ಇದೊಂದು ವರದಾನವಾಗುತ್ತದೆ.
 5. ಈ ರೀತಿ ಪೌರತ್ವ ನೀಡುವ ದೇಶಗಳು ಒಂದಷ್ಟು ವರ್ಷದ ನಂತರ ಹೂಡಿಕೆ ಮಾಡಿದ್ದ ಹಣವನ್ನ ವಾಪಸ್ಸು ಪಡೆಯುವ ಅವಕಾಶವನ್ನ ಕೂಡ ನೀಡಿವೆ. ಇದು ಸಹಜವಾಗೇ ಸ್ಥಿತಿವಂತರಲ್ಲಿ ಆಸಕ್ತಿ ಉಂಟು ಮಾಡಿದೆ.

ಯಾವ ದೇಶಗಳು ಇಂತಹ ಒಂದು ಆಯ್ಕೆಯನ್ನ ನೀಡುತ್ತಿವೆ. ಎಷ್ಟು ಹಣ ಬೇಕಾಗುತ್ತದೆ ಇತ್ಯಾದಿಗಳನ್ನ ಗಮನಿಸೋಣ.
 

 1. ಪೋರ್ಚುಗಲ್: ಈ ದೇಶದಲ್ಲಿ 3 ಲಕ್ಷ 5೦ ಸಾವಿರ ಯೂರೋಗಳನ್ನ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದರೆ. ಪತಿ ಪತ್ನಿ ಹಾಗೂ ಅವಲಂಬಿತ ಮಕ್ಕಳಿಗೆ ಇಲ್ಲಿಯ ರೆಸಿಡೆನ್ಸಿ ನೀಡಲಾಗುತ್ತದೆ. ಪ್ರತಿ ಎರಡು ವರ್ಷಕೊಮ್ಮೆ ಇದನ್ನ ನವೀಕರಿಸುವ ಅವಶ್ಯಕತೆಯಿದೆ. ಈ ಎರಡು ವರ್ಷದಲ್ಲಿ ಕನಿಷ್ಠ ಎರಡು ವಾರ ಪೋರ್ಚುಗಲ್ ನೆಲದಲ್ಲಿ ವಾಸಿಸಬೇಕಾಗುತ್ತದೆ. ಉಳಿದಂತೆ ಇಲ್ಲಿರಲೇ ಬೇಕು ಎನ್ನುವ ಕಡ್ಡಾಯವಿಲ್ಲ. ಇದ್ದರೆ ಇಲ್ಲಿನ ಸ್ಥಳೀಯರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನೂ ಬಳಸಿಕೊಳ್ಳಬಹುದು.
 2. ಜರ್ಮನಿ: ಇಲ್ಲಿ 3 ಲಕ್ಷ 6೦ ಸಾವಿರ ಯೂರೋಗಳನ್ನ ಹೂಡಿಕೆ ಮಾಡುವುದರ ಮೂಲಕ 3 ವರ್ಷದ ರೆಸಿಡೆನ್ಸಿ ಪರ್ಮಿಟ್ ಪಡೆಯಬಹುದು. ಮೂರು ವರ್ಷದ ನಂತರ ಪರ್ಮನೆಂಟ್ ರೆಸಿಡೆನ್ಸಿ ನೀಡಲಾಗುತ್ತದೆ. 8 ವರ್ಷಗಳ ನಂತರ ಈ ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿ ಇಲ್ಲಿನ ನಾಗರಿಕರಿಗೆ ಸಿಗುವ ಎಲ್ಲಾ ಸವಲತ್ತುಗಳು ಇಂತಹ ಹೂಡಿಕೆದಾರರಿಗೂ ಸಿಗುತ್ತದೆ. ಜರ್ಮನಿ ಯೂರೋಪಿನ ಪವರ್ ಹೌಸ್. ಇಲ್ಲಿ ಶಾಲೆ ಮತ್ತು ಕಾಲೇಜು ಶಿಕ್ಷಣ ಉಚಿತ. ವ್ಯಾಸಂಗದ ನಂತರ ಕೆಲಸಗಳೂ ಕೂಡ ಸಿಗುತ್ತದೆ. ಹೀಗಾಗಿ ಇಲ್ಲಿ ಹಣವನ್ನ ತೊಡಗಿಸುವುದು ಉತ್ತಮ.
 3. ವಾನೂಅಟು: ಆಸ್ಟ್ರೇಲಿಯಾ ಬಳಿಯಿರುವ ಪುಟಾಣಿ ದ್ವೀಪ ದೇಶವಿದು. 1 ಲಕ್ಷ 30 ಸಾವಿರ ಒಬ್ಬ ಅಭ್ಯರ್ಥಿಗೆ, ನಾಲ್ಕು ಜನರ ಕುಟುಂಬಕ್ಕೆ 1 ಲಕ್ಷ 80 ಸಾವಿರ ಅಮೆರಿಕನ್ ಡಾಲರ್ ಹಣ ಬೇಕಾಗುತ್ತದೆ. ನೇರವಾಗಿ ಪೌರತ್ವ ನೀಡುತ್ತಾರೆ. ಈ ದೇಶದ ಪಾಸ್ಪೋರ್ಟ್ ಪಡೆದು ಜಗತ್ತಿನಲ್ಲಿರುವ 196 ದೇಶದಲ್ಲಿ 148 ದೇಶಕ್ಕೆ ವೀಸಾ ಇಲ್ಲದೆ ಪ್ರಯಾಣಿಸುವ ಅವಕಾಶವಿದೆ.
 4. ಸ್ಪೇನ್: ಈ ದೇಶದಲ್ಲಿ 5 ಲಕ್ಷ ಯುರೋ ಹಣವನ್ನ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದರೆ ಯೂರೋಪಿಯನ್ ರೆಸಿಡೆನ್ಸಿ ಸಿಗುತ್ತದೆ. ಪ್ರತಿ ಎರಡು ವರ್ಷಕೊಮ್ಮೆ ಇದನ್ನ ನವೀಕರಿಸಬೇಕು. ಐದು ವರ್ಷದ ನಂತರ ಪರ್ಮನೆಂಟ್ ರೆಸಿಡೆನ್ಸಿ ನೀಡುತ್ತಾರೆ. 10 ವರ್ಷದ ನಂತರ ಇಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. ಸ್ಪೇನ್, ರಿಟೈರ್ಮೆಂಟ್ ನಂತರ ಸಮಯ ಕಳೆಯಲು ಜಗತ್ತಿನಲ್ಲಿ ಇರುವ ಉತ್ತಮ ದೇಶಗಳಲ್ಲಿ ಒಂದು ಎಂದು ಖ್ಯಾತಿ ಗಳಿಸಿದೆ. ಭಾರತದ ಸ್ಥಿತಿವಂತರು ಇಲ್ಲಿ ಹೂಡಿಕೆ ಮಾಡಲು ಯೋಚಿಸಬಹುದು. 5 ಲಕ್ಷ ಯುರೋ ಅಂದರೆ 4 ಕೋಟಿಗೂ ಸ್ವಲ್ಪ ಹೆಚ್ಚು ರೂಪಾಯಿಯಲ್ಲಿ, ಬೆಂಗಳೂರಿನ ಮನೆಗಳ ಬೆಲೆ ಮತ್ತು ಇಲ್ಲಿರುವ ಸವಲತ್ತು ಗಮನಿಸಿದಾಗ ಇದು ಹೆಚ್ಚು ಅನ್ನಿಸುವುದಿಲ್ಲ.
 5. ಅಂತಿಗುವ ಮತ್ತು ಬಾರ್ಬುಡ: ಕೆರಿಬಿಯನ್ ದೇಶವಾಗಿರುವ ಇಲ್ಲಿ ಅಂತಿಗುವಾ ನ್ಯಾಷನಲ್ ಫಂಡ್ ಗೆ 1 ಲಕ್ಷ ಡಾಲರ್ ದೇಣಿಗೆ ನೀಡುವ ಮೂಲಕ ಅಥವಾ ಸರಕಾರ ಹೇಳುವ ರಿಯಲ್ ಎಸ್ಟೇಟ್ ನಲ್ಲಿ 4 ಲಕ್ಷ ಡಾಲರ್ ಹೂಡಿಕೆ ಮಾಡುವುದರ ಮೂಲಕ ಅಥವಾ 15 ಲಕ್ಷ ಡಾಲರ್ ಹೂಡಿಕೆ ಮಾಡಿ ವ್ಯಾಪಾರ ಶುರು ಮಾಡುವುದರ ಮೂಲಕ ಪೌರತ್ವ ಗಳಿಸಬಹುದಾಗಿದೆ. ಇಲ್ಲಿನ ಪಾಸ್ಪೋರ್ಟ್ ಬಳಸಿ 160 ದೇಶಗಳಿಗೆ ವೀಸಾ ಅವಶ್ಯಕತೆ ಇಲ್ಲದೆ ಪ್ರಯಾಣ ಮಾಡುವ ಅವಕಾಶವಿದೆ.
 6. ಸಂತ ಕಿಟ್ಸ್ ಮತ್ತು ನೆವಿಸ್: ಇದು ಕೂಡ ಕೆರಿಬಿಯನ್ ದ್ವೀಪ ದೇಶ. ಇಲ್ಲಿನ ಸಸ್ಟೈನಬಲ್ ಗ್ರೋಥ್ ಫಂಡ್ ಗೆ 1 ಲಕ್ಷ 5೦ ಸಾವಿರ ಡಾಲರ್ ದೇಣಿಗೆ ನೀಡುವುದರ ಮೂಲಕ ಪೌರತ್ವ ಗಳಿಸಬಹುದು. ಅಥವಾ ಸರಕಾರ ಹೇಳುವ ರಿಯಲ್ ಎಸ್ಟೇಟ್ ನಲ್ಲಿ 4 ಲಕ್ಷ ಡಾಲರ್ ಹೂಡಿಕೆ ಮಾಡುವುದರ ಮೂಲಕ ಕೂಡ ಪೌರತ್ವ ಗಳಿಸಬಹುದು. 165 ದೇಶಗಳಿಗೆ ವೀಸಾ ಅವಶ್ಯಕತೆ ಇರುವುದಿಲ್ಲ.
 7. ಸಂತ ಲೂಸಿಯಾ: ಇದು ಕೂಡ ಕೆರೆಬಿಯನ್ ದ್ವೀಪ ದೇಶವಾಗಿದೆ. ಸಂತ ಲೂಸಿಯಾ ನ್ಯಾಷನಲ್ ಎಕನಾಮಿಕ್ ಫಂಡ್ ಗೆ 1 ಲಕ್ಷ ಡಾಲರ್ ಹಣವನ್ನ ಸಂದಾಯ ಮಾಡುವುದರಿಂದ ಅಥವಾ ಒಬ್ಬ ವ್ಯಕ್ತಿ 1 ಲಕ್ಷ 65 ಸಾವಿರ ಡಾಲರ್ ಹಣವನ್ನ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರಿಂದ, ನಾಲ್ಕು ಜನರ ಕುಟುಂಬಕ್ಕೆ 1 ಲಕ್ಷ 65 ಸಾವಿರ ಡಾಲರ್ ಹಣವನ್ನ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರ ಮೂಲಕ ಇಲ್ಲಿನ ಪೌರತ್ವವನ್ನ ಪಡೆಯಬಹುದು. ಇದರ ಜೊತೆಗೆ ಬಾಂಡ್ ಕೊಳ್ಳುವ ಮೂಲಕ ಕೂಡ ಇಲ್ಲಿನ ಪೌರತ್ವವ್ವನ್ನ ಗಳಿಸಿಕೊಳ್ಳಬಹುದಾಗಿದೆ. ಇಂಗ್ಲೆಂಡ್ ಸಹಿತ 157 ದೇಶಗಳಿಗೆ ವೀಸಾ ಅವಶ್ಯಕತೆ ಇಲ್ಲ.
 8. ಗ್ರೀಸ್: ಯೂರೋಪ್ ನ ಅತಿ ಸುಂದರ ದೇಶಗಳಲ್ಲಿ ಇದು ಕೂಡ ಒಂದು. ಇಲ್ಲಿ ಜೀವನ ನಡೆಸಲು ಹೆಚ್ಚು ಹಣದ ಅಗತ್ಯವಿಲ್ಲ. ಜೀವನ ಶೈಲಿ ದುಬಾರಿಯಲ್ಲ. ಇಲ್ಲಿ 2 ಲಕ್ಷ 5೦ ಸಾವಿರ ಯುರೋ ಹಣವನ್ನ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರ ಮೂಲಕ ರೆಸಿಡೆನ್ಸಿ ಪಡೆಯಬಹುದಾಗಿದೆ. 21 ರ ಒಳಗಿನ ಅವಲಂಬಿತ ಮಕ್ಕಳಿಗೆ ಕೂಡ ರೆಸಿಡೆನ್ಸಿ ನೀಡಲಾಗುತ್ತದೆ. ಐದು ವರ್ಷದ ನಂತರ ಇದನ್ನ ನವೀಕರಿಸಬೇಕಾಗುತ್ತದೆ. 7 ವರ್ಷದ ನಂತರ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
 9. ಟರ್ಕಿ: ಮಧ್ಯಪ್ರಾಚ್ಯದ ಸ್ಥಿತಿವಂತ ಮುಸ್ಲಿಮರು ಇಲ್ಲಿ ಹೆಚ್ಚಾಗಿ ಹೂಡಿಕೆಯನ್ನ ಮಾಡುತ್ತಿದ್ದಾರೆ. 2 ಲಕ್ಷ 50 ಸಾವಿರ ಯುರೋ ಹಣವನ್ನ ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಬೇಕಾಗುತ್ತದೆ. ಪೂರ್ಣ ಕುಟುಂಬಕ್ಕೆ ಪೌರತ್ವವನ್ನ ನೀಡಲಾಗುತ್ತದೆ. ಟರ್ಕಿ ಪಾಸ್ಪೋರ್ಟ್ ಸಹಾಯದಿಂದ 125 ದೇಶಗಳಿಗೆ ವೀಸಾ ರಹಿತ ಪ್ರಯಾಣ ಸಾಧ್ಯ. ಇದರ ಜೊತೆಗೆ ಟರ್ಕಿ ನಾಗರಿಕರು E-2 ವೀಸಾ ಪ್ರೋಗ್ರಾಮ್ ಅಡಿಯಲ್ಲಿ ಅಮೆರಿಕನ್ ರೆಸಿಡೆನ್ಸಿ ಗೆ ಕೂಡ ಅರ್ಜಿ ಹಾಕಲು ಅರ್ಹತೆಯನ್ನ ಪಡೆದುಕೊಳ್ಳುತ್ತಾರೆ.
 10. ದೊಮಿನಿಕಾ ರಿಪಬ್ಲಿಕ್: ಇದು ಕೂಡ ಕೆರೇಬಿಯನ್ ದೇಶವಾಗಿದೆ. ಈ ದೇಶದ ಸರಕಾರಕ್ಕೆ 1 ಲಕ್ಷ ಡಾಲರ್ ಹಣವನ್ನ ದೇಣಿಗೆ ನೀಡುವುದರ ಮೂಲಕ ಪೂರ್ಣ ಕುಟುಂಬ ಪೌರತವನ್ನ ಪಡೆಯಬಹುದಾಗಿದೆ. ಇದರಿಂದ ಜಗತ್ತಿನ ೧೫೨ ದೇಶಗಳಿಗೆ , ಇಂಗ್ಲೆಂಡ್ ಮತ್ತು ಯೂರೋಪಿನ ಶೇಂಗನ್ ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ. ಈ ರೀತಿ ದೇಣಿಗೆ ನೀಡಿ ಇಲ್ಲಿನ ಪೌರತ್ವ ಪಡೆದ ನಂತರ ಇಲ್ಲಿ ವಾಸಿಸಬೇಕು ಎನ್ನುವ ಯಾವ ನಿಯಮವೂ ಇಲ್ಲಿಲ್ಲ.

ಕೊನೆ ಮಾತು: ಜಗತ್ತು ಅತ್ಯಂತ ವೇಗವಾಗಿ ಬದಲಾವಣೆಯನ್ನ ಕಾಣುತ್ತಿದೆ. ಜೊತೆಗೆ ಅಸ್ಥಿರತೆ ಎನ್ನುವುದು ಇಲ್ಲಿ ಇರಲಿಕ್ಕೆ ಎಂದು ಬಂದಿರುವಂತೆ ಕಾಣುತ್ತಿದೆ. ಇಂತಹ ಸಮಯದಲ್ಲಿ ಎರಡನೇ ಪೌರತ್ವವನ್ನ ಹೊಂದಿರುವುದು ಎಲ್ಲಾ ರೀತಿಯಲ್ಲೂ ಉತ್ತಮ. ಅದರಲ್ಲೂ ಭಾರತೀಯ ಮೆಟ್ರೋ ನಗರಗಗಲ್ಲಿ ಮನೆಗಳ ಬೆಲೆ ಗಗನವನ್ನ ಸೀಳಿ ಮೇಲಕ್ಕೆ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಮತ್ತೆ ಒಂದೇ ಊರಿನಲ್ಲಿ ಅಥವಾ ಒಂದೇ ಜಾಗದಲ್ಲಿ ಹೂಡಿಕೆ ಮಾಡುವುದು ಅಪಾಯಕ್ಕೆ ದಾರಿ. ಮೇಲೆ ಹೇಳಿದ ಹತ್ತು ದೇಶಗಳು ಹೂಡಿಕೆಯ ದೃಷ್ಟಿಯಿಂದ ನೋಡಿದರೆ ಅಷ್ಟೇನೂ ದೊಡ್ಡ ಮೊತ್ತವಲ್ಲ, ಜೊತೆಗೆ ಇವುಗಳು ಎರಡನೇ ಪೌರತ್ವವನ್ನ ಕೂಡ ನೀಡುತ್ತವೆ. ಹೀಗಾಗಿ ಉಳ್ಳವರು ತಮ್ಮ ಹೂಡಿಕೆಯ ಪರಿಧಿಯನ್ನ ಹೆಚ್ಚಿಸುವ ಸಲುವಾಗಿ ಇತ್ತ ಚಿತ್ತ ಹರಿಸಬಹುದು. ಉಳಿದಂತೆ ಇಂಗ್ಲೆಂಡ್, ಅಮೇರಿಕಾ ಕೂಡ ಇಂತಹ ಆಯ್ಕೆಗಳನ್ನ ನೀಡಿವೆ. ಅಲ್ಲಿನ ಹೂಡಿಕೆ ಹೆಚ್ಚು ಹಣವನ್ನ ಬಯಸುತ್ತದೆ. ಇನ್ನಷ್ಟು ಹೆಚ್ಚಿನ ಹಣ ಉಳ್ಳವರು ಅಮೇರಿಕಾ, ಇಂಗ್ಲೆಂಡ್, ಸೈಪ್ರಸ್ ದೇಶಗಳನ್ನ ಕೂಡ ಗಣನೆಗೆ ತೆಗೆದುಕೊಳ್ಳಬಹುದು.


ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp