ಜಾಗತಿಕ ಮಟ್ಟದಲ್ಲೇಕೆ ಹೆಚ್ಚಾಗುತ್ತಿದೆ ಹಣದುಬ್ಬರದ ಅಬ್ಬರ!

ಹಣಕ್ಲಾಸು-266-ರಂಗಸ್ವಾಮಿ ಮೂಕನಹಳ್ಳಿ 
ಹಣದುಬ್ಬರ
ಹಣದುಬ್ಬರ

ಜಾಗತಿಕ ಹಣದುಬ್ಬರದಲ್ಲಿ ಏರುಪೇರಾಗಿದೆ. ಜಾಗತಿಕ ಹಣಕಾಸು ವ್ಯವಸ್ಥೆ ಕೂಡ ಸಾಕಷ್ಟು ಬದಲಾವಣೆಗಳಿಗೆ ತುತ್ತಾಗಿದೆ. ಜಗತ್ತು ಮಾದರಿ ಹಣದುಬ್ಬರ ವ್ಯವಸ್ಥೆಯನ್ನ ಹೆಣೆದುಕೊಂಡಿತ್ತು. ಪಾಂಡೆಮಿಕ್ ನಾವು ಕಟ್ಟಿಕೊಂಡಿದ್ದ ವ್ಯವಸ್ಥೆಯನ್ನ ಛಿದ್ರಗೊಳಿಸಿದೆ. 

ಜಾಗತಿಕ ಮಟ್ಟದಲ್ಲಿ ಸರಕುಗಳ ದರ ಏಪ್ರಿಲ್ 2020 ರಿಂದ ಇಲ್ಲಿಯವರೆಗೆ  80 ಪ್ರತಿಶತ ಏರಿಕೆಯನ್ನ ಕಂಡಿವೆ. ಜಾಗತಿಕ ಮಟ್ಟದಲ್ಲಿ ವಿತ್ತ ಪಂಡಿತರ ನಡುವೆ ಕೆಲವರು ಹೀಗೆ ಏರಿಕೆಯಾದ ಸರಕುಗಳ ಬೆಲೆ ತಾತ್ಕಾಲಿಕ, ಬಹುಬೇಗ ಅಂದರೆ ಲಸಿಕೆ ಅಭಿಯಾನ ಮುಗಿಯುತ್ತ ಬಂದಂತೆ ಬೆಲೆಗಳು ಕೂಡ ಇಳಿಯುತ್ತವೆ ಎನ್ನುತ್ತಾರೆ. ಇನ್ನು ಕೆಲವರು "ಇಲ್ಲ, ಈ ಬೆಲೆಗಳು ಒಮ್ಮೆ ಏರಿಕೆಯಾದವು, ಇಳಿಯುವ ಮಾತೇ ಇಲ್ಲ. ಈ ಬೆಲೆ ಏರಿಕೆಗಳು ಶಾಶ್ವತವಾಗಿ ಉಳಿದುಕೊಳ್ಳುವಂತಹವು ಎನ್ನುತ್ತಾರೆ . ಹೀಗಾಗಿ ವಿತ್ತ ಜಗತ್ತಿನಲ್ಲಿ ಹೊಸ ಚರ್ಚೆ ಶುರುವಾಗಿದೆ.

ಹೀಗೆ ಬೆಲೆ ಒಂದೇ ಸಮನೆ ಏರಲು ಕಾರಣಗಳೇನಿರಬಹುದು?

  1. ಎಲ್ಲಕ್ಕೂ ಪ್ರಥಮವಾಗಿ ನಮ್ಮ ವ್ಯವಸ್ಥೆಯಲ್ಲಿದ್ದ ಹಣದ ಹರಿವು ಹೆಚ್ಚಾಗಿದೆ:  ಅಮೇರಿಕಾ ದೇಶ ಕ್ವಾನ್ಟಿಟೆಟಿವ್ ಈಸಿಂಗ್ ಹೆಸರಿನಲ್ಲಿ 6 ಟ್ರಿಲಿಯನ್ ಅಮೆರಿಕನ್ ಡಾಲರ್, ಹೊಸ ಹಣವನ್ನ ಮಾರುಕಟ್ಟೆಗೆ ಬಿಟ್ಟಿದೆ. ಗಮನಿಸಿ ಅಮೇರಿಕಾ ದೇಶದಲ್ಲಿ ಚಾಲ್ತಿಯಲ್ಲಿದ್ದ ಹಣದ 27 ಪ್ರತಿಶತ ಹೊಸ ಹಣವನ್ನ ಮಾರುಕಟ್ಟೆಗೆ ಬಿಡಲಾಗಿದೆ. ಕೇವಲ 12 ತಿಂಗಳಲ್ಲಿ 27 ಪ್ರತಿಶತ ಹೆಚ್ಚಿನ ಹಣ ಮಾರುಕಟ್ಟೆಗೆ ಬಂದಿರುವುದು ಜಾಗತಿಕ ಸರಕು ಮಾರುಕಟ್ಟೆಯಲ್ಲಿ ಹಣದುಬ್ಬರವನ್ನ ಸೃಷ್ಟಿಸಿದೆ. ಇದನ್ನ ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನ ನೋಡೋಣ. ನಮಲ್ಲಿ ಇರುವ ಯಾವುದಾದರೂ ಒಂದು ನೈಸರ್ಗಿಕ ಸಂಪನ್ಮೂಲವನ್ನ ಉದಾಹರಣೆಗೆ ತೆಗೆದುಕೊಳ್ಳೋಣ, ತಾಮ್ರದ ಅದಿರು ಎಷ್ಟು ಸಿಗುತ್ತದೆ ಎನ್ನುವುದು ನಿಗದಿಯಾಗಿರುತ್ತದೆ. ಅಂದರೆ ಹೆಚ್ಚು ಗಣಿಗಾರಿಕೆ ಮಾಡುವುದರಿಂದ ಖರ್ಚು ಹೆಚ್ಚೇ ಹೊರತು ಹೆಚ್ಚಿನ ತಾಮ್ರ ಸಿಗುವುದಿಲ್ಲ. ಅಂದರೆ ನೈಸರ್ಗಿಕವಾಗಿ 100 ಕೇಜಿ ತಾಮ್ರ ಸಿಗುತ್ತದೆ ಎಂದುಕೊಳ್ಳೋಣ. ನಮ್ಮಲ್ಲಿ ಪಾಂಡೆಮಿಕ್ಗಿಂತ ಮುಂಚೆ ಇದ್ದ ಹಣಕ್ಕಿಂತ ಹೆಚ್ಚಿನ ಹಣ ಇದೀಗ ಮಾರುಕಟ್ಟೆಯಲ್ಲಿದೆ, ಹೀಗಾಗಿ ಖರೀದಿ ಶಕ್ತಿ ಹೆಚ್ಚಾಯಿತು. ಆದರೆ ಸರಕು ಉತ್ಪಾದನೆ ಹೆಚ್ಚಾಗಲಿಲ್ಲ. ಡಿಮ್ಯಾಂಡ್ ಹೆಚ್ಚಾಯ್ತು ಆದರೆ ಸಪ್ಪ್ಲೈ ಅಷ್ಟೇ ಇದೆ. ಹೀಗಾಗಿ ಹಣದುಬ್ಬರ ಉಂಟಾಗುತ್ತದೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ನಾವು ಹಣವನ್ನ ಹೆಚ್ಚು ಹೆಚ್ಚು  ಮುದ್ರಿಸಿ ಸಮಾಜದಲ್ಲಿ ಹರಿಯ ಬಿಡಬಹುದು, ಆದರೆ ನೈಸರ್ಗಿಕ ವಸ್ತುಗಳನ್ನ ಅಥವಾ ಪದಾರ್ಥಗಳನ್ನ ಹೇಗೆ ಸೃಷ್ಟಿಸುವುದು? ಅದು ಸಾಧ್ಯವಿಲ್ಲ. ಹೀಗಾಗಿ ಸರಕು ಇದ್ದಷ್ಟೇ ಇದ್ದು ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾದಾಗ ಬೆಲೆ ಹೆಚ್ಚಳವಾಗುತ್ತದೆ. ಇದೀಗ ಜಾಗತಿಕ ಮಟ್ಟದಲ್ಲಿ ಆಗಿರುವುದು ಇದೆ.

ಕ್ವಾನ್ಟಿಟೆಟಿವ್ ಈಸಿಂಗ್ ಎಂದರೇನು?

ಸರಕಾರ ಸಂಕಷ್ಟಕ್ಕೆ ಈಡಾದಾಗ, ಅಂದರೆ, ಗಮನಿಸಿ ಪಾಂಡೆಮಿಕ್ ಕಾರಣ ಜಾಗತಿಕ ಮಟ್ಟದಲ್ಲಿ ಸರಕಾರಗಳು ಜನರಿಗೆ ಪ್ಯಾಕೇಜ್ ಘೋಷಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ.  ಸರಕಾರಕ್ಕೆ ಬರಬೇಕಾದ ಆದಾಯ ಕೂಡ ಬರುತ್ತಿಲ್ಲ, ಆದರೆ ಹಿಂದಿಗಿಂತ ಹೆಚ್ಚಿನ ಖರ್ಚು ಬಂದು ಕೂತಿದೆ. ಇಂತಹ ಸಂದರ್ಭದಲ್ಲಿ ಸರಕಾರ ದೀರ್ಘಕಾಲೀನ ಬಾಂಡ್ ಗಳನ್ನ ಹೊರಡಿಸುತ್ತದೆ. ಬಾಂಡ್ ಎಂದರೆ ಸಾಲ ಪತ್ರ. ಇಂತಹ ಬಾಂಡ್ಗಳನ್ನ ದೇಶದ ಸೆಂಟ್ರಲ್ ಬ್ಯಾಂಕ್ ಕೊಂಡುಕೊಳ್ಳುತ್ತದೆ. ಹೀಗಾಗಿ ಸರಕಾರದ ಬಳಿ ಹಣ ಬರುತ್ತದೆ, ಮತ್ತು ಸರಕಾರ ಇದನ್ನ ವಿವಿಧ ವಲಯಗಳಿಗೆ ಸಹಾಯಧನದ ರೀತಿಯಲ್ಲಿ  ಪ್ಯಾಕೇಜ್ ಘೋಷಿಸುತ್ತದೆ. ಹೀಗೆ ಸಮಾಜದಲ್ಲಿ ಉಂಟಾಗಿರುವ ಹಣಕಾಸು ತೊಂದರೆಯನ್ನ ಕ್ಷಿಪ್ರ ಗತಿಯಲ್ಲಿ ಹೋಗಲಾಡಿಸಲು ಸರಕಾರ ತುಳಿಯುವ ಈ ದಾರಿಗೆ ಕ್ವಾನ್ಟಿಟೆಟಿವ್ ಈಸಿಂಗ್ ಎಂದು ಹೆಸರು. ಕೆಲವೊಮ್ಮೆ ಸೆಂಟ್ರಲ್ ಬ್ಯಾಂಕ್ ಅಥವಾ ರಿಸರ್ವ್ ಬ್ಯಾಂಕಿನ ಬಳಿ ಸರಕಾರ ಹೊರಡಿಸುವ ಇಂತಹ ಬಾಂಡ್ ಗಳನ್ನ ಕೊಳ್ಳಲು ಹಣವಿಲ್ಲದಿದ್ದರೆ ಅವರು ಇಂತಹ ಖರೀದಿಗೆ ಬೇಕಾದಷ್ಟು ಹಣವನ್ನ ಮುದ್ರಿಸುತ್ತಾರೆ.

ಹೀಗೆ ನಾವು ಹೊಸ ಹಣವನ್ನ ಮುದ್ರಿಸುವ ಮೂಲಕ ಸೃಷ್ಟಿಸಬಹುದು ಆದರೆ ಸರಕನ್ನ ಅಥವಾ ಸೇವೆಯನ್ನ ಹೇಗೆ ಸೃಷ್ಟಿಸುವುದು? ಹೀಗಾಗಿ ನಿಗದಿತ ಸೇವೆ ಮತ್ತು ಸರಕುಗಳ ಮೇಲಿನ ಬೆಲೆ ಹೆಚ್ಚಾಗುತ್ತದೆ. ಹೆಸರಿಗೆ ಹಣದ ಹರಿವು ಹೆಚ್ಚಾಗುತ್ತದೆ ಆದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಹೆಚ್ಚಿದ ಹಣವನ್ನ ಮೊದಲು ರುಪಾಯಿಗೆ ಸಿಗುತ್ತಿದ್ದ ವಸ್ತುವಿಗೆ ಇಂದು ಒಂದೂಕಾಲು ರೂಪಾಯಿ ನೀಡಿ ಪಡೆಯುತ್ತೇವೆ. ಸರಕಾರ ಪ್ಯಾಕೇಜ್ ಘೋಷಿಸಿದ ಕೀರ್ತಿ ಪಡೆದುಕೊಳ್ಳುತ್ತದೆ. ದೀರ್ಘಾವಧಿಯಲ್ಲಿ ಹೆಚ್ಚಿದ ಬೆಲೆಗೆಳು ಕುಸಿಯದೆ ಇದು ಗ್ರಾಹಕನಿಗೆ ಅಥವಾ ಜನ ಸಾಮಾನ್ಯನಿಗೆ ಹೆಚ್ಚಿನ ಹೊರೆಯಾಗುತ್ತದೆ.

  • ಜಾಗತಿಕ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ:  ಒಂದು ಪದಾರ್ಥ ತನ್ನ ಉಗಮ ಸ್ಥಾನದಿಂದ ಅದನ್ನ ಬಳಸುವ ಗ್ರಾಹಕನಿಗೆ ತಲುಪಲು ಒಂದಲ್ಲ ಕೆಲವೊಮ್ಮೆ ಹತ್ತಾರು ಕೈಗಳನ್ನ ದಾಟಿರುತ್ತದೆ . ಹೀಗೆ ವಸ್ತುವನ್ನ ತಯಾರಿಸಿದ ಸಂಸ್ಥೆ, ಪದಾರ್ಥವನ್ನ ಹಂಚುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಇವರನ್ನ ಡಿಸ್ಟ್ರುಬ್ಯೂಟರ್ಸ್ ಎನ್ನುತ್ತಾರೆ. ಇಲ್ಲಿ ವ್ಯಕ್ತಿಯಿಂದ ಸಂಸ್ಥೆಯವರೆಗೆ ಅನೇಕ ವಿಧದ ಮಧ್ಯವರ್ತಿಗಳು ಬರುತ್ತಾರೆ. ಸರಳವಾಗಿ ಹೇಳಬೇಕೆಂದರೆ ಪದಾರ್ಥ ತನ್ನ ಉಗಮದಿಂದ ಬಳಸುವ ಗ್ರಾಹಕನ ಮನೆಗೆ ತಲುಪುವ ನಡುವಿನ ಎಲ್ಲಾ ಪ್ರಕ್ರಿಯೆಗಳಿಗೆ ಸಪ್ಲೈ ಚೈನ್ ಎನ್ನುತ್ತಾರೆ. ಕೊರೋನ ವೈರಸ್ ಕಾರಣದಿಂದ ಮೊದಲ ಲಾಕ್ ಡೌನ್ ನಲ್ಲಿ ಸಾವಿರಾರು ಹಡಗುಗಳಲ್ಲಿ ಕೆಲಸ ಮಾಡುವ ಜನ ಬಹಳಷ್ಟು ತೊಂದರೆಗೆ ಒಳಗಾಗಿದ್ದಾರೆ. ಕುಡಿಯಲು ನೀರು ಇಲ್ಲದೆ ಪರದಾಡಿದ್ದಾರೆ. ಆರೆಂಟು ತಿಂಗಳು ಹಡಗನ್ನ ಬಿಟ್ಟು ಇಳಿಯಲಾಗದ ಭೀಕರ ಪರಿಸ್ಥಿತಿಯನ್ನ ಎದುರಿಸಿದ್ದಾರೆ. ಹೀಗೆ ಲಾಕ್ ಡೌನ್ ಉಂಟಾದಾಗ ಅವರ ಹಡಗು ಯಾವ ದೇಶದಲಿತ್ತು ಅಲ್ಲಿಯೇ ಇರಲು ಸೂಚನೆಯನ್ನ ನೀಡಲಾಗಿತ್ತು. ಆ ನಂತರ ಅವರಿಗೆ ಯಾವ ದೇಶದ ಕಾನೂನು ಸಹ ಸಹಾಯಕ್ಕೆ ಬರಲಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು ಎನ್ನುವ ನಿಖರವಾದ ಕಾನೂನು ರಚನೆಯಾಗದೆ ಇರುವ ಕಾರಣ ನೋವು ಅನುಭವಿಸುವುದು ಇಲ್ಲಿ ಪುಡಿಗಾಸಿಗೆ ಕೆಲಸ ಮಾಡುವರು ಮಾತ್ರ . ಹೀಗಾಗಿ ಇಲ್ಲಿ ಕೆಲಸ ಮಾಡಲು ಜನ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಸರಬರಾಜು ಸರಪಳಿಯಲ್ಲಿ ಒಂದಷ್ಟು ಏರುಪೇರಾಗಿರುವುದು ನಿಜ. ಇದು ಮತ್ತೆ ಮೊದಲಿನಂತಾಗಲು ಸಮಯ ಬೇಕು.
  • ನುರಿತ, ಅರೆ ನುರಿತ ಮತ್ತು ಸಾಮಾನ್ಯ ಕೆಲಸಗಾರರ ಕೊರತೆಯನ್ನ ಜಗತ್ತು ಎದುರಿಸುತ್ತಿದೆ: ನಿಮಗೆಲ್ಲಾ ತಿಳಿದಿರಲಿ ಅಮೇರಿಕಾದಲ್ಲಿ ಏಪ್ರಿಲ್ 2021ರಲ್ಲಿ 4 ಮಿಲಿಯನ್ ಅಂದರೆ 40 ಲಕ್ಷ ಜನ ಇದ್ದ ಕೆಲಸವನ್ನ ಬಿಟ್ಟಿದ್ದಾರೆ. ಅದರಲ್ಲಿ ಆರೂವರೆ ಲಕ್ಷ ಜನ ರಿಟೇಲ್ ಕ್ಷೇತ್ರದಲ್ಲಿ ದುಡಿಯುತ್ತಿದವರು. ಇನ್ನೊಂದು ವಿಷಯ ಕೂಡ ನಿಮಗೆ ಗೊತ್ತಿರಲಿ ಇದೆ ಸಮಯದಲ್ಲಿ ಅಂದರೆ ಏಪ್ರಿಲ್ 2021ರಲ್ಲಿ ಹತ್ತಿರಹತ್ತಿರ ಒಂಭತ್ತೂವರೆ ಮಿಲಿಯನ್ ಕೆಲಸಗಳು ಖಾಲಿಯಿವೆ ದಯಮಾಡಿ ಅರ್ಜಿಯನ್ನ ಹಾಕಿ ಎನ್ನುವ ಕೂಗಿಗೆ ಅಮೆರಿಕನ್ನರು ಕವಡೆ ಕಾಸಿನ ಬೆಲೆಯನ್ನ ನೀಡಿಲ್ಲ. ಅಂದರೆ ಅಷ್ಟೊಂದು ಕೆಲಸ ಖಾಲಿಯಿದ್ದೂ ಕೂಡ ಜನ ಕೆಲಸಕ್ಕೆ ಮರಳಲು ಇನ್ನೂ ಆಸಕ್ತಿಯನ್ನ ತೋರಿಸುತ್ತಿಲ್ಲ.  ಇಂಗ್ಲೆಂಡ್ ದೇಶದ ಕಥೆಯೂ ಸೇಮ್. ಭಾರತದಲ್ಲಿ ಕೂಡ ಹೆಚ್ಚು ಕಡಿಮೆ ಅದೇ ಕಥೆ. ಕಾರ್ಯ ಕ್ಷೇತ್ರ ಯಾವುದೇ ಇರಲಿ ಅಲ್ಲಿ ಕೆಲಸಗಾರರ ಕೊರತೆ ಬಹಳವಿದೆ. ಅದು ನುರಿತ, ಅರೆ ನುರಿತ ಮತ್ತು ಅತಿ ಸಾಮಾನ್ಯ ಕೆಲಸಗಾರರಾದಿಯಾಗಿ ಎಲ್ಲರ ಕೊರತೆಯಿದೆ. ಆಶ್ಚರ್ಯ ಎನ್ನಿಸುತ್ತದೆ ಅಲ್ಲವೇ? ಒಂದೆಡೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎನ್ನುವ ಬೊಬ್ಬೆಯ ನಡುವೆ ವಸ್ತುಸ್ಥಿತಿ ಅದೆಷ್ಟು ಭಿನ್ನವಾಗಿದೆ ಅಲ್ಲವೇ?
  • ಕೃತಕ ಕೊರತೆಯನ್ನ ಸೃಷ್ಟಿಸುವವರ ಕಾಟ ಕೂಡ ಜಾಸ್ತಿಯಾಗಿದೆ: ಸಮಾಜದಲ್ಲಿ ಇರುವ ಸರಕು ಮತ್ತು ಸೇವೆಯ ಪ್ರಮಾಣ ಇದ್ದಷ್ಟೇ ಇದ್ದು ಹಣದ ಹರಿವು ಹೆಚ್ಚಾಗುವುದರಿಂದ ಬೆಲೆ ಹೆಚ್ಚಳವಾಗುತ್ತದೆ. ಇದರ ಜಾಡು ಹಿಡಿದ ಕೆಲವು ಖದೀಮ ದಲ್ಲಾಳಿಗಳು ಕಮಾಡಿಟಿ ಮಾರುಕಟ್ಟೆಯಲ್ಲಿ ಇವುಗಳ ಬೆಲೆಯನ್ನ ಭವಿಷ್ಯ ಮಾರುಕಟ್ಟೆಯಲ್ಲಿ ಇನ್ನಿಲ್ಲದಂತೆ ಏರಿಸುತ್ತಾರೆ. ಫ್ಯೂಚರ್ ಮಾರ್ಕೆಟ್ ನಲ್ಲಿ ಇವುಗಳ ಬೆಲೆ ಹೆಚ್ಚಾದಷ್ಟೂ, ವರ್ತಮಾನದಲ್ಲಿ ಇದರ ಬೆಲೆ ಏರಲು ಕಾರಣವಾಗುತ್ತದೆ. ಇದನ್ನ ನಾವು ಸೃಷ್ಟಿತ ಕೊರತೆ ಅಥವಾ ಕೃತಕ ಕೊರತೆ ಎನ್ನಬಹುದು. ವಸ್ತುಗಳ ಲಭ್ಯತೆಯಲ್ಲಿ ತೊಂದರೆಯಾಗದಿದ್ದರೂ ಕಂಪ್ಯೂಟರ್ ಪರದೆಯ ಮೇಲೆ ಅವುಗಳ ಮೇಲಿನ ಡಿಮ್ಯಾಂಡ್ ಹೆಚ್ಚಿಸುವುದರಿಂದ ಕೂಡ ಬೆಲೆ ಹೆಚ್ಚಾಗುತ್ತದೆ.

ಭಾರತದಲ್ಲಿ ಹಣದುಬ್ಬರ ಎಷ್ಟಿದೆ? ಇದರ ಪರಿಣಾಮಗಳೇನು?

ಹಣದುಬ್ಬರ ನಮ್ಮ ದೇಶದಲ್ಲಿ ಎಷ್ಟಿದೆ ಎನ್ನುವುದು ನಮ್ಮ ದೇಶದ ನಿಖರ ಜನಸಂಖ್ಯೆ ಎಷ್ಟು? ಎಂದು ಕೇಳಿದಂತೆ! ಒಂದೊಂದು ಪತ್ರಿಕೆಯವರು ಒಂದೊಂದು ರೀತಿ ಬರೆಯುತ್ತಾರೆ. ಕೆಲವರು 130ಕೋಟಿ ಎಂದರೆ ಇನ್ನು ಕೆಲವರು 135, 140... ಹೀಗೆ ಕೋಟಿಗಳಿಗೆ ನಮ್ಮಲ್ಲಿ ಬೆಲೆಯೇ ಇಲ್ಲ. ಹಾಗೆ ಹಣದುಬ್ಬರ ಕೂಡ!! ಆರ್ಬಿಐ ಒಂದು ಸಂಖ್ಯೆಯನ್ನ ನೀಡುತ್ತದೆ. ಕನ್ಸೂಮರ್ ಪ್ರೈಸ್ ಇಂಡೆಕ್ಸ್ ಒಂದು ಹೇಳುತ್ತದೆ, ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಒಂದು ಹೇಳುತ್ತದೆ, ಇವೆಲ್ಲವ ಬಿಟ್ಟು ನಿಜವಾಗಿ ಮಾರುಕಟ್ಟೆಯಲ್ಲಿ ಇರುವ ಹಣದುಬ್ಬರದ ಸಂಖ್ಯೆ ಏನು ಎನ್ನುವುದು ಯಾರೂ ನಿಖರವಾಗಿ ಹೇಳುವುದಿಲ್ಲ. ಕೆಲವೊಂದು ಮಾಹಿತಿಯನ್ನ ಸರಕಾರ, ಆರ್ಬಿಐ ಕೂಡ ನಿಖರವಾಗಿ ನೀಡದೆ ಜಾಣ ಮೌನಕ್ಕೆ ಶರಣಾಗುತ್ತವೆ. ಇವತ್ತಿನ ದಿನದ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಮೂಲಗಳನ್ನ ಪರಿಶೀಲಿಸಿದರೆ ಹಣದುಬ್ಬರ ಸದ್ಯದ ಸಮಯದಲ್ಲಿ 11-12 ಪ್ರತಿಶತದ ಆಜುಬಾಜಿನಲ್ಲಿದೆ. ಇದರ ಪರಿಣಾಮದಿಂದ ಸಮಾಜ ನೆಗಟಿವ್ ಇಂಟರೆಸ್ಟ್ ರೇಟ್ ನಲ್ಲಿದೆ. ಅಂದರೆ ನಾವು ಹಣವನ್ನ ಬ್ಯಾಂಕಿನಲ್ಲಿಟ್ಟರೆ 5.5 ಪ್ರತಿಶತ ಬಡ್ಡಿಯನ್ನ ನೀಡುತ್ತಾರೆ. ಆದರೆ ಹಣದುಬ್ಬರ 11 ಪ್ರತಿಶತವಿದೆ. ಅರ್ಥ ಭಾರತೀಯ ಸಮಾಜ- 5.5 ಪ್ರತಿಶತ ಮೌಲ್ಯವೃದ್ಧಿವನ್ನ ಕಾಣಲಿದೆ.

ಕೊನೆಮಾತು: ಹಣದುಬ್ಬರ ಬೇಕೇಬೇಕು. ಹಣದುಬ್ಬರ ನಿಯಂತ್ರಣದಲ್ಲಿದ್ದರೆ ಅದು ಸಮಾಜಕ್ಕೆ ಪೂರಕ. ಇದರಲ್ಲಿ ಏರುಪೇರಾದರೆ ಅದು ಸಮಾಜಕ್ಕೆ ಮಾರಕ. ಅದರಲ್ಲೂ ಬೆಳವಣಿಗೆ ಕಾಣುತ್ತಿರುವ ನಮ್ಮಂತಹ ಸಮಾಜಕ್ಕೆ ಹಣದುಬ್ಬರ ಅತ್ಯವಶ್ಯಕವಾಗಿ ಬೇಕು. ಆದರೆ ಅದು ನಾವು ಬ್ಯಾಂಕಿನಲ್ಲಿ ಇಟ್ಟ ಹಣಕ್ಕೆ ಸಿಗುವ ಬಡ್ಡಿಗಿಂತ ಕಡಿಮೆಯಿರಬೇಕು. ಆದರೆ ಸದ್ಯದ ಸಮಯದಲ್ಲಿ ಭಾರತದಲ್ಲಿ ಹಣದುಬ್ಬರ ಬ್ಯಾಂಕಿನಲ್ಲಿಟ್ಟ ಹಣದ ಮೇಲಿನ ಬಡ್ಡಿಗಿಂತ ದುಪ್ಪಟ್ಟಾಗಿದೆ. ಇದು ಕಾಲ ಕ್ರಮೇಣ ಜನರಲ್ಲಿ ಸರಕಾರದ ಬಗ್ಗೆ ಇರುವ ನಂಬಿಕೆಯನ್ನ ಕಡಿಮೆಮಾಡುತ್ತದೆ. ಸದ್ಯದ ಸಮಯದಲ್ಲಿ ಆಹಾರ ಪದಾರ್ಥಗಳಿಂದ, ಅತ್ಯವಶ್ಯಕ ದಿನ ಬಳಕೆ ವಸ್ತುಗಳ ಮೇಲಿನ ಬೆಲೆಯಲ್ಲಿ ಕೂಡ ವ್ಯತ್ಯಯ ಉಂಟಾಗುತ್ತಿದೆ. ಇದನ್ನ ಸರಿಯಾದ ಸಮಯದಲ್ಲಿ ನಿಯಂತ್ರಿಸುವ ಅವಶ್ಯಕತೆ ಬಹಳ ಹೆಚ್ಚಾಗಿದೆ.  

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com